ಕಾಬುಲ್/ಬೀಜಿಂಗ್:ಅಫ್ಘನ್​ನಲ್ಲಿ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದೆ. ಇದೇ ವೇಳೆ, ಜನರ ಸ್ಥಳಾಂತರ ಕಾರ್ಯಾಚರಣೆಯ ಗಡುವು ವಿಸ್ತರಿಸಬೇಕೆಂಬ ಆಗ್ರಹದೊಂದಿಗೆ ಬ್ರಿಟನ್ ಜಿ-7 ಶೃಂಗ ಆಯೋಜಿಸಿದೆ. ಈ ಶೃಂಗ ಶುರುವಾಗುವುದಕ್ಕೆ ಮೊದಲೇ ಚೀನಾ, ತಾಲಿಬಾನ್ ಪರ ಬ್ಯಾಟಿಂಗ್ ಶುರುಮಾಡಿದೆ. ತಾಲಿಬಾನಿಗಳ ವಿರುದ್ಧ ಯಾವುದೇ ದೇಶ ನಿರ್ಬಂಧಗಳನ್ನು ಹೇರಿದರೆ ಅದು ಪರಿಣಾಮಕಾರಿ ನಡೆ ಆಗದು ಎಂದು ಎಚ್ಚರಿಸಿದೆ. ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕ ಸೇರಿ ಜಿ7 ನಾಯಕರು ವರ್ಚುವಲ್ ಶೃಂಗದಲ್ಲಿ ಮಾತುಕತೆ ನಡೆಸಲಿದ್ದಾರೆ. ಅಫ್ಘನ್​ನಲ್ಲಿ ಮಾನವ ಹಕ್ಕುಗಳ ರಕ್ಷಣೆ ಮತ್ತು ಇತರೆ ಭದ್ರತಾ ವಿಚಾರ ರ್ಚಚಿಸುವುದು ಕೂಡ ಅಜೆಂಡಾದಲ್ಲಿ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹನ್ನೆರಡು ಸದಸ್ಯರ ಸಮಿತಿಗೆ:ಸರ್ಕಾರ ರಚನೆಯ ಉನ್ನತ ಮಟ್ಟದ ಸಮಿತಿಗೆ ಅಫ್ಘನ್​ನ ಮಾಜಿ ಅಧ್ಯಕ್ಷ ಹಮೀದ್ ಕರ್ಜೆ, ಹೈ ಕನ್ಸಿಲ್ ಫಾರ್ ನ್ಯಾಷನಲ್ ರಿಕಾನ್ಸಿಲೇಷನ್ ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ ಮತ್ತು ತಾಲಿಬಾನ್ ಸಹಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಸೇರಿ 12 ಸದಸ್ಯರನ್ನು ನೇಮಕ ಮಾಡಲಾಗಿದೆ. ಈ ಪೈಕಿ ಈಗಾಗಲೇ ಏಳು ಸದಸ್ಯರನ್ನು ಈ ಮೊದಲೇ ನಿರ್ಧರಿಸಲಾಗಿತ್ತು ಎಂದು ತಾಲಿಬಾನ್ ಮೂಲಗಳು ತಿಳಿಸಿವೆ.
ಸರ್ಕಾರ ರಚನೆಯ ಸನಿಹ ತಾಲಿಬಾನ್:ತಾಲಿಬಾನ್ ಔಪಚಾರಿಕವಾಗಿ ಸರ್ಕಾರ ರಚನೆಯ ಪ್ರಕ್ರಿಯೆ ಶುರುಮಾಡಿದೆ. ಈಗಾಗಲೇ ಹೊಸ ಹಣಕಾಸು ಸಚಿವ, ಗುಪ್ತಚರ ಮುಖ್ಯಸ್ಥ, ಹಂಗಾಮಿ ಗೃಹ ಸಚಿವರ ನೇಮಕ ಮಾಡಿರುವುದಾಗಿ ಪಜ್​ಹವೋಕ್ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ. ಇದರಂತೆ, ಗುಲ್ ಅಘಾ ಹಣಕಾಸು ಸಚಿವ, ಸಾದ್ರ್ ಇಬ್ರಾಹಿಂ ಹಂಗಾಮಿ ಗೃಹ ಸಚಿವ, ನಜೀಬುಲ್ಲಾ ಗುಪ್ತಚರ ಮುಖ್ಯಸ್ಥ, ಮುಲ್ಲಾ ಶಿರಿನ್ ಕಾಬುಲ್​ನ ಗವರ್ನರ್ ಮತ್ತು ಹಮದುಲ್ಲಾ ನೊಮಾನಿ ಕಾಬುಲ್​ನ ಮೇಯರ್ ಆಗಿರಲಿದ್ದಾರೆ. ತಾಲಿಬಾನ್ ಹಿಡಿತದಲ್ಲಿರುವ ಅಫ್ಘನ್​ನಲ್ಲಿ ಸ್ಥಿರತೆ ಮತ್ತು ಶಾಂತಿ ನೆಲೆಸುವಂತೆ ಮಾಡುವುದಕ್ಕೆ ಎಲ್ಲರನ್ನೂ ಒಳಗೊಂಡ ರಾಜಕೀಯ ಆಡಳಿತ ರೂಪಿಸುವಂತೆ ಪಾಕಿಸ್ತಾನ ಆಗ್ರಹಿಸಿದೆ. ಈ ಸಂಬಂಧ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮುಹಮ್ಮದ್ ಖುರೇಶಿ ತಾಲಿಬಾನ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಬ್ಯಾಂಕಿಂಗ್ ವಹಿವಾಟು ಸರಾಗ:ಅಫ್ಘನ್ ಸೆಂಟ್ರಲ್ ಬ್ಯಾಂಕ್​ನ ಹಂಗಾಮಿ ಗರ್ವನರ್ ಅನ್ನು ನೇಮಕ ಮಾಡಲಾಗಿದ್ದು, ತಾಲಿಬಾನ್​ನ ಆರ್ಥಿಕ ಆಯೋಗದ ಮುಖ್ಯಸ್ಥ ಮೊಹಮ್ಮದ್ ಇದ್ರಿಸ್ ಈ ಹೊಣೆಗಾರಿಕೆ ಹೊರಲಿದ್ದಾರೆ. ಬ್ಯಾಂಕಿಂಗ್ ಮತ್ತು ಇತರೆ ಅಗತ್ಯ ವಸ್ತುಗಳ ಕ್ಷೇತ್ರ ಇನ್ನು ಸರಾಗ ಕೆಲಸ ಮಾಡಲಿದೆ. ಎಟಿಎಂಗಳು, ಬ್ಯಾಂಕುಗಳು ಎಂದಿನಂತೆ ಕೆಲಸ ಮಾಡಲಿವೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ತಿಳಿಸಿದ್ದಾನೆ.
ಗಡುವು ವಿಸ್ತರಣೆ ಇಲ್ಲ:ಅಮೆರಿಕನ್ನರ ಸ್ಥಳಾಂತರ ಕಾರ್ಯಚಟುವಟಿಕೆಗಳು ಆ.31ರ ಒಳಗೆ ಪೂರ್ಣಗೊಳ್ಳಬೇಕು. ಈ ಗಡುವಿನ ವಿಸ್ತರಣೆಗೆ ಸಂಬಂಧಿಸಿದ ಯಾವುದೇ ಮನವಿಯನ್ನು ತನ್ನ ಗುಂಪು ಮಾನ್ಯ ಮಾಡುವುದಿಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಮಂಗಳವಾರ ಸ್ಪಷ್ಟಪಡಿಸಿದ್ದಾನೆ. ಏರ್​ಪೋರ್ಟ್​ನಲ್ಲಿ ಒಂದಷ್ಟು ಗೊಂದಲಗಳಿವೆ. ತಾಲಿಬಾನ್ ವಶಕ್ಕೆ ದೇಶ ಬಂದ ಬಳಿಕ ಬಹಳಷ್ಟು ಅಫ್ಘನ್ನರು ಹತಾಶರಾಗಿರುವುದು ಅದಕ್ಕೆ ಕಾರಣ ಎಂದು ಮುಜಾಹಿದ್ ಹೇಳಿದ್ದಾನೆ.
ಆಪರೇಷನ್ ದೇವಿ ಶಕ್ತಿ:ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ಕರೆತರುವ ಕಾರ್ಯಾಚರಣೆಗೆ ‘ಆಪರೇಷನ್ ದೇವಿ ಶಕ್ತಿ’ ಎಂದು ಹೆಸರಿಸಲಾಗಿದೆ. 800 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಮಂಗಳವಾರ ಭಾರತಕ್ಕೆ 78 ಜನ ಬಂದಿಳಿದಿದ್ದಾರೆ. ಈ ಪೈಕಿ 25 ಭಾರತೀಯರು, ಇನ್ನುಳಿದವರು ಅಫ್ಘನ್ ಸಿಖ್ಖರು ಮತ್ತು ಹಿಂದುಗಳು. ಇದುವರೆಗೆ ಒಟ್ಟು 626 ಜನರನ್ನು ಭಾರತಕ್ಕೆ ಕರೆತರಲಾಗಿದ್ದು, ಈ ಪೈಕಿ 228 ಭಾರತೀಯರು. ಉಳಿದವರ ಪೈಕಿ 77 ಜನ ಅಫ್ಘನ್ ಸಿಖ್ಖರು ಎಂದು ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಪುತಿನ್ ಜತೆಗೆ ಮೋದಿ ಮಾತುಕತೆ:ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜತೆಗೆ ಪ್ರಧಾನಿ ನರೇಂದ್ರ ಮೋದಿ 45 ನಿಮಿಷ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದರು. ಜಗತ್ತಿನ ಮೇಲೆ ಅಫ್ಘನ್ ವಿದ್ಯಮಾನಗಳ ಪರಿಣಾಮ, ಅಲ್ಲಿನ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿದರು. ಬಳಿಕ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಜತೆಗೂ ಇದೇ ವಿಚಾರವಾಗಿ ಸಂವಾದ ನಡೆಸಿದರು.
ಅಫ್ಘನ್ ರಿಟರ್ನಿಗಳಿಗೆ 14 ದಿನ ಕ್ವಾರಂಟೈನ್:ಅಫ್ಘಾನಿಸ್ತಾನದಿಂದ ಭಾರತಕ್ಕೆ ಆಗಮಿಸಿರುವವರನ್ನು ಕೋವಿಡ್ ಟೆಸ್ಟ್​ಗೆ ಒಳಗಾದ ಬಳಿಕ ಪಾಸಿಟಿವ್ ಬಂದರೆ ಅಥವಾ ಕೋವಿಡ್ ಗುಣಲಕ್ಷಣ ಗಳು ಕಂಡುಬಂದರೆ ಅಂಥವರು ದೆಹಲಿಯ ಐಟಿಬಿಪಿ ಕ್ಯಾಂಪ್​ನಲ್ಲಿ 14 ದಿನ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಗಾಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ.
ಭಾರತೀಯರನ್ನು ಅಫ್ಘನ್​ನಿಂದ ವಾಪಸ್ ಕರೆತರಲು ಅಮೆರಿಕ, ಬ್ರಿಟನ್, ಸಂಯುಕ್ತ ಅರಬ್ ಎಮಿರೇಟ್ಸ್, ಫ್ರಾನ್ಸ್, ಜರ್ಮನಿ ಮತ್ತು ಕತಾರ್ ನೆರವು ನೀಡಲು ಒಪ್ಪಿಕೊಂಡಿವೆ. ಇದರಂತೆ ಈಗಾಗಲೇ ಭಾರತೀಯರನ್ನು ತಮ್ಮ ದೇಶಕ್ಕೆ ಕರೆದೊಯ್ದು ಅಲ್ಲಿಂದ ಭಾರತಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಅಫ್ಘಾನಿಸ್ತಾನದ ಬಿಕ್ಕಟ್ಟು ಸಂಬಂಧ ಜಿನೀವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ವಿಶೇಷ ಸಭೆ ಪ್ರಗತಿಯಲ್ಲಿದೆ. ಮಾನವ ಹಕ್ಕುಗಳ ವ್ಯವಸ್ಥೆಯನ್ನು ‘ಕಾದು ನೋಡು’ವ ತಂತ್ರಕ್ಕೆ ಒಳಪಡಿಸಲಾಗದು ಮತ್ತು ಒಳಪಡಿಸಬಾರದು. ಈ ಬಗ್ಗೆ ಗಮನ ಹರಿಸಬೇಕು ಮತ್ತು ಕ್ರಮ ತೆಗೆದುಕೊಳ್ಳಬೇಕು. ಇದು ನಮ್ಮ ತುರ್ತು ಅಗತ್ಯವಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯಲ್ಲಿ ಅಫ್ಘನ್ ರಾಯಭಾರಿ ನಾಸಿರ್ ಅಹ್ಮದ್ ಅನ್ದಿಶಾ ಪ್ರತಿಪಾದಿಸಿದ್ದಾರೆ. ಅಫ್ಘಾನಿಸ್ತಾನದ ನೆಲವು ಲಷ್ಕರ್-ಎ-ತೊಯ್ಬಾ (ಎಲ್​ಇಟಿ), ಜೈಷ್-ಎ-ಮೊಹಮ್ಮದ್ (ಜೆಇಎಂ) ಮುಂತಾದ ಉಗ್ರ ಸಂಘಟನೆಗಳ ನೆಲೆವೀಡಾಗದೇ ಇರಲಿ. ಉಗ್ರ ಕೃತ್ಯಗಳಿಗೆ ಸಂಚು ರೂಪಿಸಲು ಆ ನೆಲ ಬಳಕೆಯಾಗದೇ ಇರಲಿ. ಅಲ್ಲಿ ಮಾನವ ಹಕ್ಕುಗಳು ಸಂಪೂರ್ಣ ಕಡೆಗಣಿಸಲ್ಪಟ್ಟಿವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಸಭೆಯಲ್ಲಿ ಭಾರತದ ಪ್ರತಿನಿಧಿ ಇಂದ್ರಾ ಮಣಿ ಪಾಂಡೆ ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + seven =
Remember me
