ನವದೆಹಲಿ:2022ನೇ ಇಸ್ವಿಯಲ್ಲಿ ಭಾರತದೊಂದಿಗಿನ ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಚೀನಾ ತನ್ನ ಮಿಲಿಟರಿ ಉಪಸ್ಥಿತಿ ಮತ್ತು ಮೂಲಸೌಕರ್ಯ ನಿರ್ವಣವನ್ನು ಭಾರತ-ಚೀನಾ ನಡುವಿನ ಗಡಿಯಲ್ಲಿ ವಾಸ್ತವ ನಿಯಂತ್ರಣ ರೇಖೆಗುಂಟ (ಎಲ್​ಎಸಿ) ಹೆಚ್ಚಿಸಿದೆ ಎಂದು ಪೆಂಟಗನ್ ವರದಿ ಮಾಡಿದೆ.
’ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಮಿಲಿಟರಿ ಮತ್ತು ಭದ್ರತೆ ಬೆಳವಣಿಗೆಗಳು’ ಎಂಬ ಈ ವರದಿ ಪ್ರಕಾರ, ಭೂಗತ ಶೇಖರಣಾ ಸೌಲಭ್ಯಗಳು, ಹೊಸ ರಸ್ತೆಗಳು, ಉಭಯ ಉದ್ದೇಶದ ವಿಮಾನ ನಿಲ್ದಾಣ ಮತ್ತು ಹೆಲಿಪ್ಯಾಡ್ ಮುಂತಾದ ಸೌಲಭ್ಯಗಳನ್ನು ಎಲ್​ಎಸಿ ಉದ್ದಕ್ಕೂ ಚೀನಾ ಹೆಚ್ಚಿಸಿದೆ. 2020ರ ಮೇ ಆರಂಭದಿಂದಲೂ, ಭಾರತ-ಚೀನಾ ಗಡಿಯಲ್ಲಿ ನಿರಂತರ ಉದ್ವಿಗ್ನತೆ ಕಂಡುಬಂದಿದೆ. ಎಲ್​ಎಸಿ ಉದ್ದಕ್ಕೂ ಗಡಿ ಗುರುತಿಸುವಿಕೆಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವಿನ ವಿಭಿನ್ನ ಗ್ರಹಿಕೆಗಳು ಹಾಗೂ ಎರಡೂ ಕಡೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮೂಲಸೌಕರ್ಯ ನಿರ್ಮಾಣ ಹೆಚ್ಚಳವು ಅನೇಕ ಘರ್ಷಣೆಗಳಿಗೆ ಕಾರಣವಾಗಿದೆ. ಅಲ್ಲದೆ, ಗಡಿಯ ಉದ್ದಕ್ಕೂ ಮಿಲಿಟರಿ ಉಪಸ್ಥಿತಿ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ.
20 ಭಾರತೀಯ ಸೈನಿಕರ ಪ್ರಾಣವನ್ನು ಬಲಿ ತೆಗೆದುಕೊಂಡ ಗಾಲ್ವಾನ್ ಕಣಿವೆ ಘರ್ಷಣೆ ಹಿನ್ನೆಲೆಯಲ್ಲಿ ಎಲ್​ಎಸಿ ಉದ್ದಕ್ಕೂ ದೊಡ್ಡ ಪ್ರಮಾಣದ ಸೇನಾ ನಿಯೋಜನೆಯನ್ನು ಚೀನಾದ ವೆಸ್ಟರ್ನ್ ಥಿಯೇಟರ್ ಕಮಾಂಡ್ ಮಾಡಿದೆ. ಈ ಜಮಾವಣೆಯು ಈ ವರ್ಷವೂ ಮುಂದುವರಿಯುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
2022ರಿಂದ ಎಲ್​ಎಸಿ ಉದ್ದಕ್ಕೂ ಮಿಲಿಟರಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದನ್ನು ಚೀನಾ ಮುಂದುವರಿಸಿದೆ. ಈ ಸುಧಾರಣೆಗಳಲ್ಲಿ ಡೋಕ್ಲಾಮ್ ಬಳಿ ಭೂಗತ ಶೇಖರಣಾ ಸೌಲಭ್ಯಗಳು, ಎಲ್​ಎಸಿಯ ಎಲ್ಲ ಮೂರು ವಲಯಗಳಲ್ಲಿ ಹಾಗೂ ನೆರೆಯ ಭೂತಾನ್​ನ ಪ್ರದೇಶದಲ್ಲಿನ ವಿವಾದಿತ ಗ್ರಾಮಗಳಲ್ಲಿ ಹೊಸ ರಸ್ತೆಗಳು ಸೇರಿವೆ. ಪ್ಯಾಂಗೊಂಗ್ ಸರೋವರದ ಮೇಲೆ ಎರಡನೇ ಸೇತುವೆ, ಕೇಂದ್ರ ವಲಯದ ಬಳಿ ಉಭಯ ಉದ್ದೇಶದ ವಿಮಾನ ನಿಲ್ದಾಣ ಮತ್ತು ಹೆಲಿಪ್ಯಾಡ್​ಗಳನ್ನು ಕೂಡ ನಿರ್ವಿುಸುತ್ತಿದೆ ಎಂದು ವರದಿ ಹೇಳಿದೆ.
ಈ ವರ್ಷದ ಜೂನ್​ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಮಸ್ಯೆಗಳ ಪರಿಹಾರಕ್ಕೆ ಭಾರತವು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಚೀನಾದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದರು. ಭಾರತದ ಗಡಿಗಳ ಪಾವಿತ್ರ್ಯತೆಯನ್ನು ಉಲ್ಲಂಘಿಸಲು ಸರ್ಕಾರ ಎಂದಿಗೂ ಬಿಡುವುದಿಲ್ಲ ಎಂದು ಅವರು ಹೇಳಿದ್ದರು.
ಚೀನಾ 500ಕ್ಕೂ ಹೆಚ್ಚು ಪರಮಾಣು ಸಿಡಿತಲೆಗಳನ್ನು ಹೊಂದಿದ್ದು, ಬಹುಶಃ ಇವುಗಳ ಸಂಖ್ಯೆ 2030ರ ವೇಳೆಗೆ ಸಾವಿರಕ್ಕಿಂತ ಹೆಚ್ಚು ಆಗಬಹುದು. ಈಗಾಗಲೇ ವಿಶ್ವದಲ್ಲೇ ಅತಿ ದೊಡ್ಡದಾಗಿರುವ ಚೀನಾದ ನೌಕಾಪಡೆಯು ಮತ್ತಷ್ಟು ಬೆಳೆಯುತ್ತಿದೆ ಎಂದೂ ವರದಿ ಹೇಳಿದೆ.
ಅರುಣಾಚಲ ಫ್ರಾಂಟಿಯರ್ ಹೆದ್ದಾರಿ: ಈ ಯೋಜನೆಗೆ ಈ ಹಿಂದೆ ಚೀನಾದಿಂದ ಆಕ್ಷೇಪ ವ್ಯಕ್ತಪಡಿಸಿದೆ. ಇದು ಅರುಣಾಚಲ ಪ್ರದೇಶದ ಉತ್ತರದ ಗಡಿಯಲ್ಲಿ ಮೆಕ್ ಮಹೋನ್ ರೇಖೆಯನ್ನು (ಎಲ್​ಎಸಿ) ಅನುಸರಿಸುವ 2,000-ಕಿಮೀ ಉದ್ದದ ರಸ್ತೆಯಾಗಿದೆ. ಭೂತಾನ್ ಪಕ್ಕದಲ್ಲಿರುವ ಅರುಣಾಚಲ ಪ್ರದೇಶದ ಮಾಗೊದಿಂದ ರಸ್ತೆ ಆರಂಭವಾಗಿ ಮ್ಯಾನ್ಮಾರ್ ಗಡಿ ಬಳಿಯ ವಿಜಯನಗರದಲ್ಲಿ ಕೊನೆಗೊಳ್ಳುತ್ತದೆ. ಅರುಣಾಚಲ ಪ್ರದೇಶದ ಪಕ್ಕದಲ್ಲಿರುವ ಸಂಪೂರ್ಣ ಎಲ್​ಎಸಿ ಒಳಗೊಂಡಿರುವ ಈ ಯೋಜನೆಗೆ 40,000 ಕೋಟಿ ರೂಪಾಯಿ ವ್ಯಯಿಸಲಾಗುತ್ತದೆ.
ಭಾರತಕ್ಕೆ ಸವಾಲು: ಗಡಿಯಲ್ಲಿ ಚೀನಾ ಪ್ರದೇಶಕ್ಕೆ ಹೋಲಿಸಿದರೆ ಭಾರತದ ಪ್ರದೇಶವು ಹೆಚ್ಚು ಕಡಿದಾಗಿದ್ದು, ದುರ್ಗಮವಾಗಿದೆ. ಹೀಗಾಗಿ, ಮೂಲಸೌಕರ್ಯ ನಿರ್ವಿುಸುವುದು ಸವಾಲಾಗಿದೆ. ಚೀನಿಯರು ತಮ್ಮ ಬದಿಯಲ್ಲಿ ಮೂಲ ಸೌಕರ್ಯಗಳನ್ನು ನಿರ್ವಿುಸುವ ವೇಗಕ್ಕೆ ಸರಿಸಮನಾಗಿರುವಂತೆ ಪ್ರಯತ್ನಗಳನ್ನು ಭಾರತ ಕೂಡ ಮಾಡುತ್ತಿದೆ. ‘ಎಲ್​ಎಸಿಯ ನಮ್ಮ ಬದಿಯಲ್ಲಿರುವ ಸಮಸ್ಯೆಯೆಂದರೆ, ಚೀನಾ ಬದಿಯಲ್ಲಿರುವಂತೆ ಸಮ ತಟ್ಟಾದ ಭೂಪ್ರದೇಶವಿಲ್ಲ. ಹಲವು ಸ್ಥಳಗಳಿಗೆ ಸುರಂಗ ಮಾರ್ಗದ ಅಗತ್ಯ ವಿರುವ ಭೂಪ್ರದೇಶವು ದುರ್ಗಮವಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.
ಗಡಿಯಲ್ಲಿ ಮೂಲಸೌಕರ್ಯ ನಿರ್ವಿುಸಲು ಭಾರತ ಆದ್ಯತೆ: ಭಾರತ ಸರ್ಕಾರವು ಕಳೆದ 10 ರಿಂದ 15 ವರ್ಷಗಳಲ್ಲಿ ಎಲ್​ಎಸಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಜಾಲಗಳನ್ನು ವಿಸ್ತರಿಸಲು ಸಾಕಷ್ಟು ಯಶಸ್ವಿಯಾಗಿದೆ. ಈ ಭಾಗದಲ್ಲಿ ರಸ್ತೆಗಳ ಜಾಲ ಸುಧಾರಿಸಲು ಒತ್ತು ನೀಡಲಾಗಿದೆ. ಈ ಹಿಂದೆ ಗಡಿಯಲ್ಲಿ ಚೀನಾ ಭಾಗದಲ್ಲಿನ ಮೂಲಸೌಕರ್ಯಗಳಿಗೆ ಹೋಲಿಸಿದರೆ ಭಾರತದ ಪ್ರದೇಶವು ಅಂದಾಜು 20 ವರ್ಷಗಳ ಹಿಂದೆ ಇತ್ತು. ಈಗ ಮೂಲಸೌಕರ್ಯದ ದೃಷ್ಟಿಯಿಂದ ಹೇಳುವುದಾದರೆ ಭಾರತ ಕೂಡ ಉತ್ತಮ ಸ್ಥಿತಿಯಲ್ಲಿದೆ. ಅರುಣಾಚಲ ಪ್ರದೇಶದಲ್ಲಿನ ಪ್ರಮುಖ ಯೋಜನೆಯೆಂದರೆ ಸೆಲಾ ಸುರಂಗ ರಸ್ತೆ. ಇದು ತವಾಂಗ್​ನಿಂದ ಗುವಾಹಟಿ ಮತ್ತು ಮಹತ್ವಾಕಾಂಕ್ಷೆಯ ಅರುಣಾಚಲ ಫ್ರಾಂಟಿಯರ್ ಹೆದ್ದಾರಿಯನ್ನು ಸಂರ್ಪಸಲು ನಿರ್ವಿುಸಲಾದ ಯೋಜನೆಯಾಗಿದೆ. 13,000 ಅಡಿ ಎತ್ತರದಲ್ಲಿರುವ ವಿಶ್ವದ ಅತಿ ಉದ್ದದ ದ್ವಿ-ಪಥದ ಸುರಂಗ ಹೆದ್ದಾರಿ ಇದಾಗಿದೆ.
ಸೇನೆಗೆ ಹೆಚ್ಚಿನ ಸಾಮರ್ಥ್ಯ: ಅರುಣಾಚಲ ಫ್ರಾಂಟಿಯರ್ ಹೆದ್ದಾರಿಯು ಸೇನೆಗೆ ಬೃಹತ್ ಸಾಮರ್ಥ್ಯವನ್ನು ತಂದು ಕೊಡಲಿದೆ ಎಂದು ಮೂಲಗಳು ತಿಳಿಸಿವೆ. ಏಕೆಂದರೆ, ಅಗತ್ಯವಿರುವಾಗ ಗಡಿಗೆ ಸೈನಿಕರನ್ನು ಮತ್ತು ಉಪಕರಣಗಳನ್ನು ಯಾವುದೇ ಅಡತಡೆ ಇಲ್ಲದೆಯೇ ಮತ್ತು ವೇಗವಾಗಿ ಸಾಗಿಸಲು ಇದು ಅನುವು ಮಾಡಿಕೊಡಲಿದೆ. ಟ್ಯಾಂಕ್​ಗಳು, ವಜ್ರ ಹೊವಿಟ್ಜರ್​ಗಳು ಸೇರಿದಂತೆ ಸೇನೆಯ ಎಲ್ಲ ಉಪಕರಣಗಳು ಹಾದುಹೋಗುವ ರೀತಿಯಲ್ಲಿ ಸುರಂಗಗಳನ್ನು ವಿನ್ಯಾಸಗೊಳಿಸಲಾಗಿದೆ. ವರ್ಷವಿಡೀ ಸಂಚರಿಸಲು ಸಾಧ್ಯವಾಗುವುದರೊಂದಿಗೆ ಪ್ರಯಾಣದ ಸಮಯವೂ ಕಡಿತವಾಗುತ್ತದೆ. ಬಹುಮುಖ್ಯವಾಗಿ ಚೀನಿಯರ ಗೂಢಚಾರಿಕೆಯ ಕಣ್ಣುಗಳಿಗೆ ಕಾಣಿಸದಂತೆ ಈ ಸುರಂಗಗಳು ಮರೆಮಾಚುವುದು ವಿಶೇಷವಾಗಿದೆ.
ಎಲ್​ಎಸಿ ಗುಂಟ 3,488 ಕಿಮೀ ಉದ್ದದ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಈ ಪೈಕಿ 11,000 ಕೋಟಿ ರೂಪಾಯಿ ಮೌಲ್ಯದ 295 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಹೀಗಾಗಿ, ಮುಂದಿನ 2-3 ವರ್ಷಗಳಲ್ಲಿ ಭಾರತವು ಚೀನಾವನ್ನು ಈ ವಿಷಯದಲ್ಲಿ ಸೋಲಿಸಲಿದೆ.
| ರಾಜೀವ್ ಚೌಧರಿ, ಲೆಫ್ಟಿನೆಂಟ್ ಜನರಲ್ ಗಡಿ ರಸ್ತೆಗಳ ಸಂಸ್ಥೆ (ಬಿಆರ್​ಒ) ಮುಖ್ಯಸ್ಥ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 11 =
Remember me
