|ರಾಘವ ಶರ್ಮ ನಿಡ್ಲೆನವದೆಹಲಿ
ನ್ಯಾ. ಯು.ಯು. ಲಲಿತ್ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುವ ಅವಧಿ ಕೇವಲ 74 ದಿನಗಳಷ್ಟೇ ಇದ್ದರೂ, ದೇಶದ ಉನ್ನತ ನ್ಯಾಯಾಲಯದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಬೇಕೆಂಬ ಸದುದ್ದೇಶದಿಂದ ಕೈಗೊಂಡಿರುವ ಕ್ರಮಗಳು ವಕೀಲರ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿವೆ.
ಎಷ್ಟೋ ವರ್ಷಗಳಿಂದ ಧೂಳು ಹಿಡಿದಿದ್ದ ಪ್ರಕರಣಗಳೆಲ್ಲಾ ವಿಚಾರಣೆಗೆ ಪಟ್ಟಿಯಾಗುತ್ತಿವೆ ಮತ್ತು ಅವುಗಳನ್ನು ಅಷ್ಟೇ ವೇಗದಲ್ಲಿ ಇತ್ಯರ್ಥಪಡಿಸಲಾಗುತ್ತಿದೆ. ಸುಪ್ರೀಂ ಕೋರ್ಟ್​ನ ಹಿರಿಯ ವಕೀಲರಾಗಿದ್ದ ಯು.ಯು. ಲಲಿತ್ ಅವರು ಅಲ್ಲಿಂದ ನೇರವಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಬಡ್ತಿ ಪಡೆದವರು. ಹಲವು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದ ಅವರಿಗೆ ಸುಪ್ರೀಂ ಕೋರ್ಟ್​ನ ನೈಜ ಸಮಸ್ಯೆಯ ಸ್ಪಷ್ಟ ಅರಿವಿದ್ದಂತಿದೆ. ಹೀಗಾಗಿ, ಪ್ರಕರಣಗಳ ಪಟ್ಟಿ ಮಾಡುವ ಪ್ರಕ್ರಿಯೆಯಲ್ಲೇ ಬದಲಾವಣೆ ತಂದು ಸಂಚಲನ ಸೃಷ್ಟಿಸಿದ್ದಾರೆ. ಕಳೆದ 14 ದಿನಗಳಲ್ಲಿ ಬರೋಬ್ಬರಿ 5200ಕ್ಕಿಂತಲೂ ಹೆಚ್ಚು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿರುವುದೇ ನಿದರ್ಶನ.
ಅಂತಿಮ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಮಂಗಳವಾರ, ಬುಧವಾರ ಮತ್ತು ಗುರುವಾರದಂದು ವಿಚಾರಣಾ ಕಲಾಪದ ಕ್ರಮದಲ್ಲಿ ಬದಲಾವಣೆ ತಂದಿರುವ ಅವರು, ಸುದೀರ್ಘ ವಿಚಾರಣೆಗೊಳಪಡುವ ರೆಗ್ಯುಲರ್ ಕೇಸುಗಳನ್ನು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಿಗದಿ ಮಾಡಿ, ಮಧ್ಯಾಹ್ನದಿಂದ ಸಂಜೆವರೆಗೆ ನೋಟಿಸ್ ಜಾರಿಯಾದ, ಪ್ರಾಥಮಿಕ ಹಂತದಲ್ಲಿರುವ ಪ್ರಕರಣಗಳ (miscellaneous matters) ವಿಚಾರಣೆ ನಡೆಸಲು ಅವರು ತೀರ್ವನಿಸಿದ್ದಾರೆ. ಇದರಿಂದಾಗಿ ಎಷ್ಟೋ ವರ್ಷಗಳಿಂದ ಸುಪ್ರೀಂ ಕೋರ್ಟ್​ನಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳು ಇತ್ಯರ್ಥಗೊಳ್ಳಲು ನೆರವಾಗುತ್ತಿದೆ.
ಇದುವರೆಗೆ ಸೋಮವಾರ ಮತ್ತು ಶುಕ್ರವಾರದಂದು ಹೊಸ ಅರ್ಜಿಗಳನ್ನು (ಫ್ರೆಶ್ ಮ್ಯಾಟರ್ಸ್) ಮಾತ್ರ ವಿಚಾರಣೆಗೆ ಪಟ್ಟಿ ಮಾಡಲಾಗುತ್ತಿತ್ತು. ಮಂಗಳವಾರ, ಬುಧವಾರ ಮತ್ತು ಗುರುವಾರ ಅಂತಿಮ ವಿಚಾರಣೆಯ ಕೇಸುಗಳನ್ನು ಕೈಗೆತ್ತಿಕೊಳ್ಳಲಾಗುತ್ತಿತ್ತು. ಆದರೆ, ಈ ಮೂರು ದಿನಗಳಲ್ಲಿ ಹಲವು ಹೊಸ ಕೇಸುಗಳನ್ನೂ ವಿಚಾರಣೆಗೆ ಪಟ್ಟಿ ಮಾಡುತ್ತಿದ್ದುದರಿಂದ ರೆಗ್ಯುಲರ್ ಕೇಸುಗಳ ವಿಚಾರಣೆ ಮುಂದಕ್ಕೆ ಹೋಗುತ್ತಲೇ ಇದ್ದವು. ಇದು ವಕೀಲರಿಗೆ ಮುಖ್ಯವಾಗಿ ಕಕ್ಷಿದಾರರಿಗೆ ತಲೆನೋವಾಗಿ ಪರಿಣಮಿಸಿತ್ತು.
ಪ್ರಾಥಮಿಕ ಹಂತದ ಪ್ರಕರಣಗಳಿಗೆ ಮೊದಲ ಆದ್ಯತೆ, ನಂತರ ಅಂತಿಮ ಹಂತದ ಪ್ರಕರಣಗಳನ್ನು ನೋಡೋಣ ಎಂಬ ಸಂಪ್ರದಾಯ ಈ ಹಿಂದೆ ಚಾಲ್ತಿಯಲ್ಲಿತ್ತು. ಆದರೆ ಇದನ್ನು ಬದಲಿಸಿರುವ ಸಿಜೆಐ ಯು.ಯು. ಲಲಿತ್, ಮಂಗಳವಾರ, ಬುಧವಾರ ಮತ್ತು ಗುರುವಾರ ಬೆಳಗ್ಗಿನ ಕಲಾಪದಲ್ಲಿ ರೆಗ್ಯುಲರ್ ಕೇಸುಗಳನ್ನು ಪರಿಗಣಿಸಿ ಮಧ್ಯಾಹ್ನದ ಬಳಿಕ ಹೊಸ ಕೇಸುಗಳ ವಿಚಾರಣೆ ನಡೆಸಬೇಕು ಎಂದು ನಿರ್ದೇಶಿಸಿದ್ದಾರೆ. ಬಹುಪಾಲು ವಕೀಲರು ಈ ಸುಧಾರಣೆಯನ್ನು ಸ್ವಾಗತಿಸಿದ್ದಾರೆ. ಈ ಬದಲಾವಣೆಯಿಂದಾಗಿ ರೆಗ್ಯುಲರ್ ಕೇಸುಗಳು ಹಾಗೂ ಫ್ರೆಶ್ ಕೇಸುಗಳ ವಿಚಾರಣೆ ಜತೆಜತೆಯಾಗಿ ನಡೆಯಲು ಸಾಧ್ಯವಾಗಿದೆ. ಮೊದಲೆಲ್ಲಾ ವಿಚಾರಣೆಗೆ ಈಗ ಬರುತ್ತೆ, ಮತ್ತೆ ಬರುತ್ತೆ ಎಂದು ಕಾದು ಸುಸ್ತಾಗುತ್ತಿದ್ದೆವು. ಆದರೆ, ಹೊಸ ಬದಲಾವಣೆಯಿಂದ ಅನುಕೂಲವಾಗಿದೆ ಎನ್ನುತ್ತಾರೆ ವಕೀಲ ಅನಂತ ನಾರಾಯಣ ಭಟ್.
ಆರು ತ್ರಿಸದಸ್ಯ ಪೀಠಗಳು:ಹಿಂದೆಲ್ಲಾ 2 ಅಥವಾ ಹೆಚ್ಚೆಂದರೆ 3 ತ್ರಿಸದಸ್ಯ ಪೀಠ ಅಸ್ತಿತ್ವದಲ್ಲಿರುತ್ತಿತ್ತು. ಆದರೆ, ತ್ವರಿತಗತಿ ವಿಚಾರಣೆ ಹಾಗೂ ಪ್ರಕರಣಗಳ ಹಂಚಿಕೆ ಸುಲಭಗೊಳಿಸುವ ಸಲುವಾಗಿ 6 ತ್ರಿಸದಸ್ಯ ಪೀಠಗಳನ್ನು ಸಿಜೆಐ ಯು.ಯು. ಲಲಿತ್ ರಚನೆ ಮಾಡಿದ್ದಾರೆ. ಅದೇ ರೀತಿಯಾಗಿ, ಮೂರು ಸಾಂವಿಧಾನಿಕ ನ್ಯಾಯಪೀಠಗಳನ್ನೂ ರಚನೆ ಮಾಡಲಾಗಿದ್ದು, ಮಹತ್ವದ ಕೇಸುಗಳ ವಿಚಾರಣೆಯೂ ಆರಂಭಗೊಂಡಿವೆ. ಕಳೆದ ಕೆಲ ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ವಿಚಾರಣೆ ನಡೆಸಲೆಂದೇ ಈ ಪೀಠಗಳನ್ನು ರಚನೆ ಮಾಡಲಾಗಿದ್ದು, ಮುಂದಿನ ಕೆಲ ತಿಂಗಳುಗಳಲ್ಲಿ ಹಲವು ಐತಿಹಾಸಿಕ ಕೇಸುಗಳ ಬಗ್ಗೆ ತೀರ್ಪು ಹೊರಬೀಳುವ ಸಾಧ್ಯತೆಗಳಿವೆ.
ದಿನಕ್ಕೆ 60-65 ಪ್ರಕರಣಗಳು:ಸೋಮವಾರ ಮತ್ತು ಶುಕ್ರವಾರದಂದು ಸುಪ್ರೀಂ ಕೋರ್ಟ್​ನ 16 ಕೋರ್ಟ್​ಗಳು ಕ್ರಮವಾಗಿ ಪ್ರಾಥಮಿಕ ಹಂತದ, ನೋಟಿಸ್ ಜಾರಿಯಾದ ಸುಮಾರು 60-65 ಕೇಸುಗಳನ್ನು ವಿಚಾರಣೆ ನಡೆಸುತ್ತಿವೆ. ಅಂದರೆ, ಈ 2 ದಿನಗಳಲ್ಲಿ ಅಂದಾಜು 2000 ಕೇಸುಗಳ ವಿಚಾರಣೆ ನಡೆಯುತ್ತದೆ ಎಂದಾಯಿತು. ಹಿಂದೆ, ಸೋಮವಾರ ಮತ್ತು ಶುಕ್ರವಾರದಂದು ಕ್ರಮವಾಗಿ 30-35 ಕೇಸುಗಳು ಪಟ್ಟಿಯಾದರೆ ಹೆಚ್ಚು. ಅವುಗಳ ವಿಚಾರಣೆ ಮುಗಿಯುತ್ತಿದ್ದಂತೆಯೇ (ಸಮಯವಿದ್ದರೂ) ಕೋರ್ಟ್ ಕಲಾಪ ಅಂತ್ಯಗೊಳಿಸಲಾಗುತ್ತಿತ್ತು ಎನ್ನುತ್ತಾರೆ ವಕೀಲ ರಾಘವೇಂದ್ರ ಶ್ರೀವತ್ಸ. ಸಿಜೆಐ ಲಲಿತ್ ಕಾರ್ಯಾರಂಭ ದಿನದಿಂದ (29 ಆಗಸ್ಟ್- ಸೆ.14) ಇಲ್ಲಿಯವರೆಗೆ ವಿಲೇವಾರಿ ಮಾಡಲಾದ 5113 ಪ್ರಕರಣಗಳಲ್ಲಿ ಪ್ರಾಥಮಿಕ ಹಂತದ 3618, ರೆಗ್ಯುಲರ್ ಕೇಸುಗಳು 283, ವರ್ಗಾವಣೆಗೊಂಡ 1212 ಒಳಗೊಂಡಿವೆ.
ಹೊಸ ಅರ್ಜಿಗಳಲ್ಲೂ ವಿಳಂಬವಿಲ್ಲ:ಸುಪ್ರೀಂ ಕೋರ್ಟ್​ಗೆ ಸಲ್ಲಿಕೆಯಾಗುವ ಯಾವುದೇ ಹೊಸ ಅರ್ಜಿ ವಾರದೊಳಗೆ ವಿಚಾರಣೆಗೆ ಪಟ್ಟಿಯಾಗಬೇಕು ಎಂದೂ ಆದೇಶ ಮಾಡಲಾಗಿದೆ. ಹಿಂದೆಲ್ಲಾ ಅರ್ಜಿದಾರರು ತಿಂಗಳು ಅಥವಾ ವರ್ಷಗಟ್ಟಲೆ ತಮ್ಮ ಅರ್ಜಿ ಪಟ್ಟಿಯಾಗುವುದಕ್ಕಾಗಿ ಕಾಯಬೇಕಿತ್ತು. ಆದರೆ, ಹೊಸ ಆದೇಶದ ಅನ್ವಯ – ಶನಿವಾರ, ಸೋಮವಾರ ಮತ್ತು ಮಂಗಳವಾರ ಪರಿಶೀಲನೆಗೊಳಪಟ್ಟ ಹೊಸ ಅರ್ಜಿಗಳು ನಂತರದ ಸೋಮವಾರಕ್ಕೆ ಮತ್ತೆ ಪಟ್ಟಿಯಾಗಬೇಕು. ಅದೇ ರೀತಿ, ಬುಧವಾರ, ಗುರುವಾರ ಮತ್ತು ಶುಕ್ರವಾರದಂದು ಪರಿಶೀಲನೆಗೊಳಪಟ್ಟ ಹೊಸ ಅರ್ಜಿಗಳು ಮುಂದಿನ ಶುಕ್ರವಾರಕ್ಕೆ ಪಟ್ಟಿಯಾಗಬೇಕು ಎಂದು ಸುಪ್ರೀಂ ಕೋರ್ಟ್​ನ ರಿಜಿಸ್ಟ್ರಿಗೆ ಸಿಜೆಐ ಲಲಿತ್ ಸೂಚಿಸಿದ್ದಾರೆ.
ಅಪಸ್ವರಕ್ಕೆ ಸಕಾರಾತ್ಮಕ ಸ್ಪಂದನೆ:ಪ್ರಕರಣಗಳ ಪಟ್ಟಿ ಮಾಡುವ ಹೊಸ ಕ್ರಮಕ್ಕೆ ನ್ಯಾ. ಸಂಜಯ್ ಕಿಶನ್ ಕೌಲ್ ಅಪಸ್ವರ ತೆಗೆದು, ಈ ಬಗ್ಗೆ ಆದೇಶ ಪ್ರತಿಯಲ್ಲೇ ಅದನ್ನು ದಾಖಲಿಸಿದ್ದಾರೆ. ಪಟ್ಟಿ ಮಾಡುವ ಹೊಸ ಕ್ರಮದಿಂದಾಗಿ ಅಂತಿಮ ವಿಚಾರಣೆಗೆ ನಿಗದಿ ಮಾಡಿದ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಈ ಪ್ರಕರಣವನ್ನು ನಾವು ಮುಂದೂಡುತ್ತಿದ್ದೇವೆ ಎಂದು ನ್ಯಾ.ಎಸ್.ಕೆ. ಕೌಲ್ ಮತ್ತು ನ್ಯಾ.ಅಭಯ್ ಓಕಾ ದ್ವಿಸದಸ್ಯ ಪೀಠ ತನ್ನ ಆದೇಶದಲ್ಲಿ ಬರೆದಿತ್ತು. ಇದು ಸಿಜೆಐ ಮತ್ತು ಇತರೆ ನ್ಯಾಯಮೂರ್ತಿಗಳ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂಬ ಚರ್ಚೆಗೂ ಗ್ರಾಸವಾಗಿತ್ತು. ಗುರುವಾರದಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಿನ್ನಾಭಿಪ್ರಾಯ ಅಲ್ಲಗಳೆದ ಸಿಜೆಐ ಲಲಿತ್, ಪ್ರಕರಣಗಳ ತ್ವರಿತ ವಿಲೇವಾರಿಗೆ ಸಹ ನ್ಯಾಯಮೂರ್ತಿಗಳ ಸಹಕಾರವೂ ಕಾರಣ. ಕೊನೆಕ್ಷಣದಲ್ಲಿ ಕೇಸುಗಳನ್ನು ವಿಚಾರಣೆಗೆ ಹಂಚಿಕೆ ಮಾಡುತ್ತಿರುವುದು ಕೆಲಸದ ಹೊರೆ ಹೆಚ್ಚಿಸಿರುವುದು ನಿಜ. ಆದರೆ, ನಗುಮುಖದಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಅವರಿಗೆ ನಾನು ಋಣಿಯಾಗಿದ್ದೇನೆ. ಎಷ್ಟೋ ಕೇಸುಗಳು ಬಾಕಿ ಇವೆ, ಅವುಗಳನ್ನು ಪಟ್ಟಿ ಮಾಡುವುದು ಅನಿವಾರ್ಯ ಎಂದು ಪ್ರತಿಕ್ರಿಯಿಸಿದ್ದಾರೆ.
ತ್ವರಿತಗತಿಯಲ್ಲಿ ಸ್ಪಂದನೆ…:ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾ. ಹೇಮಂತ್ ಗುಪ್ತಾ ಮತ್ತು ನ್ಯಾ. ಸುಧಾಂಶು ಧುಲಿಯಾ, ತಮ್ಮ ಮಧ್ಯೆ ಭಿನ್ನ ಅಭಿಪ್ರಾಯಗಳಿದ್ದ ಕಾರಣ ಸಿಜೆಐ ನೇತೃತ್ವದ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದ್ದರು. ಪ್ರಕರಣದ ಮಹತ್ವ ಅರಿತಿದ್ದ ಸಿಜೆಐ 15 ನಿಮಿಷದಲ್ಲಿ ತ್ರಿಸದಸ್ಯ ಪೀಠ ರಚನೆ ಮಾಡಿ, ಕೆಲವೇ ನಿಮಿಷಗಳಲ್ಲಿ ಅದೇ ದಿನ ಸಂಜೆ ವಿಚಾರಣೆ ಆರಂಭಗೊಂಡು, ಪ್ರಕರಣ ಇತ್ಯರ್ಥವಾಗುವಂತೆ ನೋಡಿಕೊಂಡಿದ್ದರು. ಇದು ಅವರ ತ್ವರಿತ ಸ್ಪಂದನೆಗೆ ಸಾಕ್ಷಿ ಎಂದು ಸುಪ್ರೀಂ ಕೋರ್ಟ್ ವಕೀಲರೊಬ್ಬರು ಹೇಳುತ್ತಾರೆ.
ಲಾಟರಿಯಲ್ಲಿ ಆಟೋ ಚಾಲಕನಿಗೆ 25 ಕೋಟಿ ರೂ. ಬಂಪರ್​ ಪ್ರೈಜ್!

ಸ್ನೇಹಿತೆಯ ಮನೆಯಲ್ಲಿ ಬಟ್ಟೆ ಬದಲಿಸುವ ನೆಪದಲ್ಲಿ ಬಾಗಿಲು ಹಾಕಿಕೊಂಡ ಈಕೆ ಮಾಡಿದ್ದೇ ಬೇರೆ!

ಯೂಟ್ಯೂಬ್​ನಲ್ಲಿ ಉಪ್ಪಿ ಹವಾ: ‘ಕಬ್ಜ’ ಟೀಸರ್​ ನಂ. 1 ಟ್ರೆಂಡಿಂಗ್​; 24 ಗಂಟೆಗಳಲ್ಲಿ 1 ಕೋಟಿಗೂ ಅಧಿಕ ವ್ಯೂಸ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
