ಡೆಹ್ರಾಡೂನ್:ಉತ್ತರಾಖಂಡದ ಜೋಶಿಮಠದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಹೊಸದಾಗಿ ಹಲವು ಪ್ರದೇಶಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈಗಾಗಲೇ ಇರುವ ಬಿರುಕು ಇನ್ನಷ್ಟು ದೊಡ್ಡದಾಗುತ್ತಿದೆ. ಇದುವರೆಗೆ ಒಟ್ಟು 131 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಒಟ್ಟು 700 ಮನೆಗಳನ್ನು ಗುರುತು ಮಾಡಲಾಗಿದ್ದು, ತೆರವು ಪ್ರಕ್ರಿಯೆ ಮುಂದುವರಿದಿದೆ. ಹಾನಿಗೊಳಗಾಗಿರುವ ಹೋಟೆಲ್​ಗಳನ್ನು ಗುರುವಾರದಿಂದ ತೆರವು ಮಾಡಲಾಗುತ್ತಿದೆ ಎಂದು ಎಸ್​ಡಿಆರ್​ಎಫ್ ಕಮಾಂಡೆಂಟ್ ನೀಲ್ ಕಾಂತ್​ವಿುಶ್ರಾ ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಉತ್ತರಾಖಂಡ ಸರ್ಕಾರ 45 ಕೋಟಿ ರೂ. ಗಳ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಸದ್ಯಕ್ಕೆ ಮಧ್ಯಂತರ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ. ನೀಡಲಾಗುವುದು. ಸುಮಾರು 3 ಸಾವಿರ ಕುಟುಂಬಗಳಿಗೆ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ. ಸಂತ್ರಸ್ತರ ತುರ್ತು ಅಗತ್ಯಗಳಿಗಾಗಿ ರಾಜ್ಯ ವಿಪತ್ತು ಪ್ರಾಧಿಕಾರ ವಿಶೇಷ ಅನುದಾನವಾಗಿ 50 ಸಾವಿರ ರೂ. ನೀಡಲಿದೆ ಎಂದು ಮುಖ್ಯಮಂತ್ರಿ ಧಾಮಿ ಪ್ರಕಟಿಸಿದ್ದಾರೆ. ಸಂತ್ರಸ್ತ ಜನರಿಗೆ ಮಧ್ಯಂತರ ನೆರವನ್ನು ಪಾರದರ್ಶಕವಾಗಿ ವಿತರಿಸಲು ಮತ್ತು ಪುನರ್ವಸತಿ ಪ್ಯಾಕೇಜ್ ದರ ನಿರ್ಧರಿಸಲು 11 ಸದಸ್ಯರ ಸಮಿತಿ ರಚಿಸಿದೆ.
ಸಿಎಂ ಧಾಮಿ ಬುಧವಾರ ಜೋಶಿಮಠಕ್ಕೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ ನಡೆಸಿದರು. ನಂತರ ಪರಿಹಾರ ಶಿಬಿರಗಳಲ್ಲಿ ತಂಗಿರುವ ಸಂತ್ರಸ್ತರನ್ನು ಭೇಟಿ ಮಾಡಿದರು. ಗುರುವಾರ ಬೆಳಗ್ಗೆ ಜೋಶಿಮಠದ ನರಸಿಂಗ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇಡೀ ಉತ್ತರಾಖಂಡವೇ ಅಪಾಯದಲ್ಲಿದೆ ಎಂಬ ಭಾವನೆ ಮೂಡಿಸುತ್ತಿರುವುದು ಸರಿಯಲ್ಲ. ಫೆಬ್ರವರಿಯಲ್ಲಿ ಔಲಿಯಲ್ಲಿ ಅಂತಾರಾಷ್ಟ್ರೀಯ ಚಳಿಗಾಲದ ಪಂದ್ಯಗಳನ್ನು ನಡೆಸಲಿದ್ದೇವೆ. ಚಾರ್ ದಾಮ್ ಯಾತ್ರೆಯೂ ಕೆಲವೇ ತಿಂಗಳಲ್ಲಿ ಪ್ರಾರಂಭವಾಗಲಿದೆ. ಈ ರೀತಿಯ ತಪು್ಪ ಅಭಿಪ್ರಾಯಗಳನ್ನು ಸೃಷ್ಟಿಸಬಾರದು ಎಂದು ಹೇಳಿದರು.
ಅಮಿತ್ ಷಾ ನೇತೃತ್ವದಲ್ಲಿ ಸಭೆ
ಕೇಂದ್ರ ಗೃಹ ಸಚಿವ ಅಮಿತ್ ಷಾ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿ, ಜೋಶಿಮಠದ ರಸ್ತೆಗಳು, ವಿದ್ಯುತ್ ಸರಬರಾಜು, ನೀರಿನ ಕೊರತೆ, ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಿದರು. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಆರ್.ಕೆ. ಸಿಂಗ್, ಭೂಪೇಂದ್ರ ಯಾದವ್ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಅಮಿತ್ ಷಾ ಅವರು ಬುಧವಾರ ಸಿಎಂ ಧಾಮಿ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಜೋಶಿಮಠ ಪರಿಸ್ಥಿತಿಯ ವಿವರ ಪಡೆದುಕೊಂಡು, ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದರು.
ದುರಸ್ತಿ ಅಸಾಧ್ಯ ಎಂದ ಪರಿಸರ ತಜ್ಞ
ಜೋಶಿಮಠದಲ್ಲಿ ಮನೆಗಳ ದುರಸ್ತಿ ಅಸಾಧ್ಯ. ಪ್ರಸ್ತುತ ಪರಿಸ್ಥಿತಿಯನ್ನು ರಿವರ್ಸ್ ಗೇರ್ ಮಾಡಲು ಸಾಧ್ಯವಿಲ್ಲ ಎಂದು ಪರಿಸರ ತಜ್ಞ ವಿಮಲೇಂದು ಝಾ ಹೇಳಿದ್ದಾರೆ. ಎನ್​ಟಿಪಿಸಿ ಅಧಿಕಾರಿಗಳು ಜಲ ವಿದ್ಯುತ್ ಯೋಜನೆಗಾಗಿ ಕೊರೆಯುತ್ತಿರುವ ಸುರಂಗ ದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಎಲ್ಲ ಮಣ್ಣು ಅಗೆಯಲು, ಸ್ಪೋಟಿಸಲು ಸೂಕ್ತವಾಗಿಲ್ಲ. ನಮ್ಮ ಇಂಜಿನಿಯರಿಂಗ್ ಕಾಲೇಜುಗಳು ವಿದ್ಯಾರ್ಥಿಗಳಿಗೆ ಮೆಕ್ಕಲು, ಲ್ಯಾಟ್​ರೈಟ್, ಮರುಭೂಮಿ, ಕಪು್ಪ, ಹತ್ತಿ ಸೇರಿದಂತೆ ಮಣ್ಣಿನ ಪ್ರಕಾರವನ್ನು ಕಲಿಸಬೇಕೆಂದು ಹೇಳಿದ್ದಾರೆ.
ವಿಜ್ಞಾನಿಗಳ ತಂಡ ಆಗಮನ
ಸಿಎಸ್​ಐಆರ್-ನ್ಯಾಷನಲ್ ಜಿಯೋಪಿಸಿಕಲ್ ರಿಸರ್ಚ್ ಇನ್​ಸ್ಟಿಟ್ಯೂಟ್​ನ(ಎನ್​ಜಿಆರ್​ಐ) ಹಿರಿಯ ವಿಜ್ಞಾನಿ ಆನಂದ್ ಕೆ. ಪಾಂಡೆ ನೇತೃತ್ವದ 10 ಸದಸ್ಯರ ತಂಡವು ಶುಕ್ರವಾರ ಜೋಶಿಮಠಕ್ಕೆ ಆಗಮಿಸಲಿದೆ. ‘ಜನವರಿ 13ರಂದು ಇಡೀ ತಂಡ ಜೋಶಿಮಠಕ್ಕೆ ತೆರಳಲಿದೆ. ಜ.14ರಿಂದ 2 ವಾರಗಳ ಕಾಲ ಆ ಪ್ರದೇಶದ ಸಮೀಕ್ಷೆ ಮಾಡಲಿದ್ದೇವೆ. ನೀರಿನ ಶುದ್ಧತ್ವ ಮತ್ತು ಮಣ್ಣಿನ ಗುಣಲಕ್ಷಣಗಳನ್ನು ಕಂಡು ಹಿಡಿಯಲು ಸಬ್​ಸರ್ಫೆಸ್ ಫಿಸಿಕಲ್ ಮ್ಯಾಪಿಂಗ್ ನಡೆಸಲಿದ್ದೇವೆ’ ಎಂದು ಪಾಂಡೆ ತಿಳಿಸಿದ್ದಾರೆ.
ಸೇನಾ ನೆಲೆ ಸ್ಥಳಾಂತರ
ಜೋಶಿಮಠಕ್ಕೆ ಹೊಂದಿಕೊಂಡಂತಿರುವ, ಚೀನಾದೊಂದಿಗಿನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಬಳಿಯ ಸೇನಾ ನೆಲೆಗಳನ್ನು ಸ್ಥಳಾಂತರಿಸಲು ಭಾರತೀಯ ಭೂಸೇನೆ ನಿರ್ಧರಿಸಿದೆ. ಜೋಶಿಮಠದ ಸುತ್ತಲಿನ 20ಕ್ಕೂ ಹೆಚ್ಚು ಸೇನಾ ನೆಲೆಗಳು ಭೂಕುಸಿತದಿಂದ ಹಾನಿಗೊಳಗಾಗಿವೆ. ಆದರೆ ಎಷ್ಟು ತುಕಡಿಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂಬ ಬಗ್ಗೆ ಭಾರತೀಯ ಭೂ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಯಾವುದೇ ಮಾಹಿತಿ ನೀಡಿಲ್ಲ.
ಸ್ಥಳೀಯರ ಪ್ರತಿಭಟನೆ
ಜೋಶಿಮಠದ ತಹಸಿಲ್ ಆವರಣದಲ್ಲಿ ಕೊರೆಯುವ ಚಳಿಯಲ್ಲಿ ಜಮಾಯಿಸಿದ್ದ ನೂರಾರು ಜನರು ಕಲಾವಿದ ಜಗಬೀರ್ ಸಿಂಗ್ ರಚಿಸಿದ ಗರ್ವಾಲಿ ಗೀತೆ ಹಾಡುತ್ತ, ತಮ್ಮನ್ನು ಜನ್ಮಸ್ಥಳದಿಂದ ತೊರೆಯದಂತೆ, ಈ ಸಂಕಷ್ಟದಿಂದ ಪಾರು ಮಾಡುವಂತೆ ಬದರಿನಾಥ ದೇವರನ್ನು ಪ್ರಾರ್ಥಿಸಿದರು. ಜೋಶಿಮಠದ ನಿವಾಸಿಗಳು ಸ್ಥಳಾಂತರಗೊಳ್ಳಲು ಬಯಸುವುದಿಲ್ಲ. ಸರ್ಕಾರ ತಮ್ಮ ಸಮಸ್ಯೆ ಬಗ್ಗೆ ಗಂಭೀರವಾಗಿದ್ದರೆ ಅದು ಶಾಶ್ವತ ಪರಿಹಾರವನ್ನು ಕಂಡು ಹಿಡಿಯಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತರಿಗೆ ಪುನರ್ವಸತಿ
ಸಂತ್ರಸ್ತ ಕುಟುಂಬಗಳಿಗೆ ಅಧಿಕಾರಿಗಳು ಪುನರ್ವಸತಿ ಕಲ್ಪಿಸುತ್ತಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರ, ದೆಹಲಿ ಹೈಕೋರ್ಟ್​ಗೆ ತಿಳಿಸಿದೆ. ಜೋಶಿಮಠ ಮುಳುಗಡೆ ವಿಚಾರ ಪರಿಶೀಲಿಸಲು ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಪೀಠಕ್ಕೆ ಈ ಹೇಳಿಕೆ ಸಲ್ಲಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 18 =
Remember me
