ನವದೆಹಲಿ:‘ಡಬಲ್ ಇಂಜಿನ್’ ಸರ್ಕಾರದ ಮೇಲಿನ ನಿರೀಕ್ಷೆಯನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಲು ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರದ ಮೂವರು ಪ್ರಭಾವಿ ಸಚಿವರನ್ನು ಭೇಟಿ ಮಾಡಿ, ರಾಜ್ಯದ ಅಪೇಕ್ಷೆಯನ್ನು ಪ್ರಸ್ತಾಪಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಪಾಲಿನ ಟ್ರಬಲ್ ಶೂಟರ್ ಎನಿಸಿಕೊಂಡ ಭೂಪೇಂದ್ರ ಯಾದವ್ ಹಾಗೂ ಚುನಾವಣಾ ನಿಪುಣ ಪಿಯೂಷ್ ಗೋಯಲ್ ಅವರನ್ನು ಭೇಟಿಯಾದ ಸಿಎಂ, ವಿವಿಧ ಇಲಾಖೆಗೆ ಸಂಬಂಧಪಟ್ಟ ವಿಚಾರ ಪ್ರಸ್ತಾಪಿಸಿದ್ದಾರೆ. ಇದರೊಟ್ಟಿಗೆ ಚುನಾವಣೆ ಪೂರ್ವ ಸಿದ್ಧತೆ ಕುರಿತು ಪ್ರಾಥಮಿಕ ಚರ್ಚೆ ಕೂಡ ನಡೆದಿದೆ.
ರಾಜಕೀಯ ವಿಚಾರಗಳ ಬಗ್ಗೆ ಅನೌಪಚಾರಿಕ ಚರ್ಚೆ ನಡೆದಿದೆ. ಕೇಂದ್ರದಿಂದ ಯಾವ ರೀತಿಯ ನೆರವಿನ ಅವಶ್ಯಕತೆ ಇದೆ, ಅದರ ಪರಿಣಾಗಳೇನು ಎಂಬುದನ್ನು ಸಚಿವರ ಮುಂದೆ ಸಿಎಂ ಭಿನ್ನವಿಸಿಕೊಂಡಿದ್ದಾರೆ. ಚುನಾವಣೆಗೆ ಇನ್ನು ಹೆಚ್ಚು ಕಾಲಾವಕಾಶ ಇಲ್ಲದಿರುವ ಕಾರಣ, ಕೇಂದ್ರದಿಂದ ಆಗಬೇಕಾದ ಅನೇಕ ತೀರ್ವನಗಳು ಆದ್ಯತೆ ಮೇಲೆ ಆಗಬೇಕಾಗಿದೆ. ಇದರಿಂದ ರಾಜ್ಯಕ್ಕೂ ಅನುಕೂಲ, ಪಕ್ಷಕ್ಕೂ ಅನುಕೂಲ ಎಂಬ ಸಂಗತಿಯನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಬೊಮ್ಮಾಯಿ ಬುಧವಾರ ಬೆಳಗ್ಗೆ ಜೆಪಿ ನಡ್ಡಾ ಭೇಟಿಗೆ ಸಮಯ ಕೇಳಿದ್ದರು. ಆದರೆ, 11 ಗಂಟೆಗೆ ಅಹ್ಮದಾಬಾದ್​ನಲ್ಲಿ ನಡ್ಡಾ ರೋಡ್ ಶೋ ಇರುವ ಕಾರಣ ಸಮಯಾವಕಾಶ ಸಿಗುವುದು ಅನುಮಾನವಾಗಿದೆ. ಒಂದು ವೇಳೆ ಭೇಟಿ ನಡೆದರೂ ಅದು ಔಪಚಾರಿಕ ಉಭಯ ಕುಶಲೋಪರಿಗೆ ಸೀಮಿತವಾಗಲಿದೆ.
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣೆ ಫಲಿತಾಂಶ ಡಿ.8ರಂದು ಪ್ರಕಟಗೊಳ್ಳಲಿದ್ದು, ಇದಾದ ಬಳಿಕ ಅಲ್ಲಿನ ರಾಜಕೀಯ ಬೆಳವಣಿಗೆ ಸ್ಪಷ್ಟವಾಗುತ್ತಿದ್ದಂತೆ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೇರಿ ಚುನಾವಣಾ ತಂತ್ರಗಾರಿಕಾ ತಂಡ ಕರ್ನಾಟಕದತ್ತ ಗಮನ ನೀಡಲಿದೆ ಎಂಬುದು ಈ ಭೇಟಿ ಸಂದರ್ಭದಲ್ಲಿ ಖಚಿತವಾಗಿದೆ.
ಮುಖ್ಯಮಂತ್ರಿ ದೆಹಲಿ ಭೇಟಿ ವೇಳೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಸೂಕ್ಷ್ಮ ವಲಯ ಘೊಷಣೆಗೆ ಮನವಿ:ಗುಡೆಕೋಟೆ ಕರಡಿಧಾಮ ಹಾಗೂ ಭೀಮಾಗಡ್ ಅಭಯಾರಣ್ಯಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೊಷಿಸುವಂತೆ ಕೇಂದ್ರ ಅರಣ್ಯ ಸಚಿವರನ್ನು ಸಿಎಂ ಮನವಿ ಸಲ್ಲಿಸಿದರು. ಈಗಾಗಲೆ ಕರಡು ಅಧಿಸೂಚನೆಯನ್ನು ರಾಜ್ಯ ಸಚಿವ ಸಂಪುಟ ಸಭೆ ಅನುಮೋದಿಸಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಶಿಫಾರಸ್ಸು ಮಾಡಿ ಸಲ್ಲಿಸಿರುವುದಾಗಿ ತಿಳಿಸಿದರು.
ಜವಳಿ ಪಾರ್ಕ್​ಗೆ ಅನುದಾನ:ಕೇಂದ್ರ ಸರ್ಕಾರದ ಮಿತ್ರಾ ಯೋಜನೆಯಡಿ ಕಲಬುರಗಿ, ತುಮಕೂರು, ವಿಜಯಪುರ ಜಿಲ್ಲೆಗಳನ್ನು ಸೇರ್ಪಡೆಗೊಳಿಸಿ ವಿಶ್ವಮಟ್ಟದ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಿಎಂ ಬೊಮ್ಮಾಯಿ ಮನವಿ ಮಾಡಿದರು. ಈ ಮೂರು ಜಿಲ್ಲೆಗಳು ಜವಳಿ ಉದ್ಯಮಕ್ಕೆ ಕೌಶಲ್ಯವುಳ್ಳ ಮಾನವ ಸಂಪನ್ಮೂಲ ಒದಗಿಸಲು ಶಕ್ತವಾಗಿವೆ. ಅಲ್ಲದೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಿಗೆ ಸಮೀಪದಲ್ಲಿದ್ದು, ಎಲ್ಲ ಪ್ರಮುಖ ನಗರಗಳಿಗೆ ಹಾಗೂ ಬಂದರುಗಳಿಗೆ ಕೂಡ ಸಂಪರ್ಕವಿದೆ. ಇಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪನೆಯಿಂದಾಗಿ ಜವಳಿ ಕೇಂದ್ರವಾಗಿ ಪರಿವರ್ತಿಸಲು ಸಾಧ್ಯವಾಗಲಿದೆ ಎಂಬುದನ್ನು ಸಿಎಂ ಪ್ರತಿಪಾದಿಸಿದ್ದಾರೆ.
2 ಲಕ್ಷ ಮೆಟ್ರಿಕ್ ಟನ್ ಅಕ್ಕಿಗೆ ಮನವಿ:ರಾಜ್ಯಕ್ಕೆ ಹತ್ತು ಸಾವಿರ ಮೆಟ್ರಿಕ್ ಟನ್​ಗಳ ಅಕ್ಕಿ ಸರಬರಾಜನ್ನು ಸೀಮಿತಗೊಳಿಸಿರುವ ನೀತಿಯನ್ನು ಮರು ಪರಿಶೀಲಿಸುವಂತೆ ಸಿಎಂ ಮನವಿ ಸಲ್ಲಿಸಿದ್ದಾರೆ. ಭಾರತೀಯ ಆಹಾರ ನಿಗಮದಿಂದ ಮಾ.23ರವರೆಗೆ ತೆರೆದ ಮಾರುಕಟ್ಟೆ ಮಾರಾಟ ಯೋಜನೆಯಡಿ 2 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಬಿಡುಗಡೆ ಮಾಡುವಂತೆ ಹಾಗೂ ತಕ್ಷಣವೇ 50 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಬಿಡುಗಡೆ ಮಾಡುವಂತೆಯೂ ಮುಖ್ಯಮಂತ್ರಿ ಕೇಂದ್ರ ಸಚಿವರನ್ನು ಕೋರಿದರು.
732.24 ಎಕರೆ ಹಸ್ತಾಂತರಿಸಿ:ಬೆಳಗಾವಿಯಲ್ಲಿ ರಕ್ಷಣಾ ಇಲಾಖೆ ಸುಪರ್ದಿಯಲ್ಲಿರುವ ರಾಜ್ಯ ಸರ್ಕಾರಕ್ಕೆ ಸೇರಿದ ಜಾಗವನ್ನು ಹಸ್ತಾಂತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು. ಬೆಳಗಾವಿ ಜಿಲ್ಲೆ ತುಕಮಟ್ಟಿ ಗ್ರಾಮದ 732.24 ಎಕರೆ ಪ್ರದೇಶವು ರಕ್ಷಣಾ ಪ್ರಾಧಿಕಾರದ ವಶದಲ್ಲಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಈ ಭೂ ಪ್ರದೇಶವನ್ನು ಬೆಳಗಾವಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲು ರಕ್ಷಣಾ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಕ್ಷಣಾ ಸಚಿವರನ್ನು ಸಿಎಂ ಕೋರಿದರು.
ಹೆಂಡ್ತಿ ಜತೆ ಜಗಳವಾಡಿ ಬಂದವನ ಕಂಡು ನಾಯಿ ಬೊಗಳಿತು; ಸಿಟ್ಟಾದ ಆತ ಅದರ ಒಡತಿಯನ್ನೇ ಕೊಂದ!

ನಾಡಿದ್ದೇ ಚಲಾವಣೆಗೆ ಬರಲಿದೆ ಡಿಜಿಟಲ್ ಕರೆನ್ಸಿ; ಪ್ರಾಯೋಗಿಕವಾಗಿ ಎಲ್ಲೆಲ್ಲಿ ಜಾರಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 3 =
Remember me
