ನವದೆಹಲಿ:ಪಂಜಾಬ್ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನೀಡುವ ಉತ್ತರವೇನು ಎಂಬುದನ್ನು ರಾಜ್ಯದ ಎಲ್ಲಾ ಪಕ್ಷಗಳು ಕುತೂಹಲದಿಂದ ಎದುರು ನೋಡುತ್ತಿವೆ. ಕಾಂಗ್ರೆಸ್ ನಾಯಕರ ಮಾತು, ನಡವಳಿಕೆಗಳೆಲ್ಲವೂ ಹಾಲಿ ಸಿಎಂ, ದಲಿತ ಸಿಖ್ ಸಮುದಾಯದ ಚರಣ್​ಜಿತ್ ಚನ್ನಿ ಪರವಾಗಿಯೇ ಇದ್ದರೂ, ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಸಮಾಧಾನ ಮಾಡುವುದು ಹೇಗೆ ಎಂಬ ಆತಂಕವೂ ಇದೆ.
ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಬಂಡೆದ್ದು ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಅಭಿಯಾನದಲ್ಲಿ ಗೆದ್ದು ಬೀಗಿದ ಸಿಧುವಿಗೆ ಹೈಕಮಾಂಡ್ ಚರಣ್​ಜಿತ್ ಚನ್ನಿಯವರನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಿದ್ದು ನುಂಗಲಾರದ ತುತ್ತಾಗಿತ್ತು. ದಲಿತ ವೋಟ್​ಬ್ಯಾಂಕ್ ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ಸಿಧು ವಿರೋಧಿಸಲಿಲ್ಲ. ಆದರೆ, ಚನ್ನಿ ಬದಲಾವಣೆಗೆ ಸಿಧು ಬೆಂಬಲಿಗರು ಬಿಟ್ಟರೆ ರಾಜ್ಯ ಕಾಂಗ್ರೆಸ್​ನ ಪ್ರಮುಖ ನಾಯಕರು, ದಿಲ್ಲಿ ಮುಖಂಡರು ಮನಸ್ಸು ಮಾಡುತ್ತಿಲ್ಲ. ಹಾಗಂತ ಸಿಧುರನ್ನೂ ಕಡೆಗಣಿಸುವಂತಿಲ್ಲ. ಸಿಎಂ ಅಭ್ಯರ್ಥಿ ಯಾರೆಂದು ಘೊಷಿಸಲಿದ್ದೇವೆ ಎಂದು ರಾಹುಲ್ ಗಾಂಧಿ ತಿಳಿಸಿರುವುದರಿಂದ ಎಲ್ಲರ ದೃಷ್ಟಿ ದಿಲ್ಲಿಯತ್ತ ನೆಟ್ಟಿದೆ.
ಪಂಜಾಬ್​ನಲ್ಲಿ ಶೇ.35ರಷ್ಟು ದಲಿತ ಜನಸಂಖ್ಯೆಯಿದೆ. ಸದ್ಯದ ಮಟ್ಟಿಗೆ ಚನ್ನಿ ಏಕೈಕ ಪ್ಲಸ್ ಪಾಯಿಂಟ್ ಕೂಡ ಇದೇ ಆಗಿದೆ. ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ದಲಿತ ಸಿಖ್ ವ್ಯಕ್ತಿ ಸಿಎಂ ಕುರ್ಚಿಯೇರಿದ್ದಾರೆ. ಅವರನ್ನು ಬದಲಿಸಿದಲ್ಲಿ ಅದು ರಾಷ್ಟ್ರವ್ಯಾಪ್ತಿ ಪಕ್ಷದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಪತ್ರಕರ್ತರೊಂದಿಗೆ, ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ವೇಳೆ ತನ್ನ ಹಿನ್ನೆಲೆ ಪ್ರಸ್ತಾಪಿಸುವ ಚನ್ನಿ, ಟೆಂಟ್ ಬಾಯ್ ಆಗಿ ಮದುವೆ ಪಾರ್ಟಿಗಳಲ್ಲಿ ಟೇಬಲ್​ಗಳನ್ನು ಸೆಟ್ ಮಾಡುವುದು, ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದುದನ್ನೆಲ್ಲಾ ಹೇಳುತ್ತಾರೆ. ತಾನೊಬ್ಬ ‘ಆಮ್ ಆದ್ಮಿ ಸಿಎಂ’ ಎನ್ನುವುದನ್ನು ಜನರಿಗೆ ಮನದಟ್ಟು ಮಾಡುವ ಜತೆಗೆ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷಕ್ಕೆ ಸವಾಲೊಡ್ಡುವ ಕಾರ್ಯತಂತ್ರ ಅನುಸರಿಸುತ್ತಿದ್ದಾರೆ. ಜನರ ಮಧ್ಯೆಯೇ ಓಡಾಡುತ್ತಾ, ಕೊಳೆಗೇರಿ ನಿವಾಸಿಗರೊಂದಿಗೆ ಊಟ ಮಾಡುತ್ತಾ ಚನ್ನಿ ವರ್ಚಸ್ಸು ವೃದ್ಧಿಸಿಕೊಳ್ಳುತ್ತಿದ್ದಾರೆ. ಹಾಗಂತ, ಲಿಕ್ಕರ್, ಡ್ರಗ್ ಮಾಫಿಯಾ, ಮರಳು ಅಕ್ರಮ ತಡೆಯುವ ಬಗ್ಗೆ ಚನ್ನಿ ಮಾತನಾಡಿದ್ದು ಕಡಿಮೆ. ಚನ್ನಿ ಸರ್ವಸಮ್ಮತದ ನಾಯಕನಲ್ಲ ಎಂಬುದು ಗೊತ್ತಿದ್ದರೂ, ದಲಿತ ಮತಗಳು ಕಾಂಗ್ರೆಸ್​ನ್ನು ಅಧಿಕಾರದ ದಡ ಸೇರಿಸಬಲ್ಲದು. ಹೀಗಾಗಿ, ಚನ್ನಿ ನಾಯಕತ್ವ ಪಕ್ಷಕ್ಕೆ ನಿರ್ಣಾಯಕ ಆಗಬಲ್ಲದು. ಈ ನಡುವೆ, ಶಿರೋಮಣಿ ಅಕಾಲಿದಳ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ದಲಿತ ಮತಗಳನ್ನು ಸೆಳೆಯಲು ಯತ್ನಿಸಿದೆ. ಅಲ್ಲದೆ, ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ದಲಿತ ಸಮುದಾಯದ ವ್ಯಕ್ತಿಗೆ ಡಿಸಿಎಂ ಸ್ಥಾನದ ಮಾನ್ಯತೆ ಸಿಗಲಿದೆ ಎಂದೂ ಘೊಷಿಸಿದೆ.
ಕೆಲವು ದಿನಗಳ ಹಿಂದೆ ಚನ್ನಿ ಸೋದರಳಿಯ ಭೂಪಿಂದರ್ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೂಕ್ತ ಲೆಕ್ಕಪತ್ರಗಳಿಲ್ಲದ 10 ಕೋಟಿ ರೂ. ಮತ್ತು ಅಪಾರ ಆಸ್ತಿಪತ್ರಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇದರಿಂದ ಸಿಎಂ ಚನ್ನಿ ಕಂಗಾಲಾಗಿದ್ದರೆ, ತಾನು ಶುದ್ಧ ರಾಜಕೀಯದ ಪ್ರತಿಪಾದಕ ಎಂದೇ ಹೇಳಿಕೊಂಡಿರುವ ನವಜೋತ್ ಸಿಂಗ್ ಸಿಧು ಇದೇ ವಿವಾದ ಮುಂದಿಟ್ಟು ತನ್ನನ್ನು ಸಿಎಂ ಅಭ್ಯರ್ಥಿ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಸಿಎಂ ಚನ್ನಿಯನ್ನೂ ಸಿಧು ಬಿಟ್ಟಿಲ್ಲ. ಚನ್ನಿ ಜನಪ್ರಿಯ, ಸಾಂಪ್ರದಾಯಿಕ, ಹಳೆಯ ಶೈಲಿಯ ರಾಜಕಾರಣ ಮಾಡುತ್ತಾರೆ ಎಂದೂ ದೂಷಿಸಿದ್ದಾರೆ. ವಂಚಕರು, ಮಾಫಿಯಾಗಳಿಗೆ ತಮ್ಮದೇ ಸರ್ಕಾರ ರಕ್ಷಣೆ ನೀಡಿದ್ದನ್ನೂ ನೇರವಾಗಿ ಹೇಳಿದ್ದಾರೆ. ಈ ನಡುವೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್-ಸಿಧು ಆಪ್ತತೆಯನ್ನೇ ಚುನಾವಣಾ ಅಸ್ತ್ರವನ್ನಾಗಿ ಪ್ರಯೋಗಿಸುತ್ತಿರುವ ಬಿಜೆಪಿ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಂಜಾಬಿನ ಹಿಂದು ಮತಗಳು ಕಾಂಗ್ರೆಸ್​ಗೆ ಹೋಗುವುದನ್ನು ತಡೆಯವ ಯತ್ನ ಮಾಡುತ್ತಿದ್ದಾರೆ.
ಭಾರೀ ಸ್ಪರ್ಧೆಯೊಡ್ಡಿರುವ ಆಮ್ ಆದ್ಮಿ ಪಕ್ಷದ ವಿರುದ್ಧ ಗೆಲ್ಲಬೇಕೆಂದರೆ ಕಾಂಗ್ರೆಸ್​ಗೆ ಸಿಧು-ಚನ್ನಿ ಇಬ್ಬರೂ ಮುಖ್ಯ. ಸಿಎಂ ಗಾದಿ ಮೇಲೆ ಸಿಧು ಕಣ್ಣಿದೆ. ಹಾಗಂತ, ಚನ್ನಿ ಕೈಬಿಡಲೂ ಸಾಧ್ಯವಿಲ್ಲ. ಅಂತಿಮವಾಗಿ, ಚನ್ನಿಯನ್ನೇ ದಿಲ್ಲಿ ನಾಯಕರು ನೆಚ್ಚಿಕೊಂಡಲ್ಲಿ ಸಿಧು ಸುಮ್ಮನೆ ಕೂರಬಹುದೇ?
ಆದಿತ್ಯನಾಥ ಆಸ್ತಿ 1.5 ಕೋಟಿ ರೂ.:ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಾವು ಒಟ್ಟು 1,54,94,054 ರೂ. ಆಸ್ತಿ ಹೊಂದಿರುವುದಾಗಿ ಅಫಿಡವಿಟ್​ನಲ್ಲಿ ಘೋಷಿಸಿದ್ದಾರೆ. 12 ಸಾವಿರ ರೂ. ಮೌಲ್ಯದ ಒಂದು ಮೊಬೈಲ್ ಫೋನ್ ಹಾಗೂ 20 ಸಾವಿರ ರೂಪಾಯಿಯ ರುದ್ರಾಕ್ಷಿ ಹಾರ ಅವುಗಳಲ್ಲಿ ಸೇರಿದೆ ಎಂದು ಸಿಎಂ ವಿವರಿಸಿದ್ದಾರೆ. ಗೋರಖಪುರ ಲೋಕಸಭಾ ಕ್ಷೇತ್ರದಿಂದ ಐದು ಸಲ ಸ್ಪರ್ಧಿಸಿದ್ದ ಯೋಗಿ, ಇದೇ ಮೊದಲ ಬಾರಿಗೆ ಗೋರಖ್​ಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಮಾರ್ಚ್ 3ರ ಆರನೇ ಹಂತದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲೂ ಮತದಾನ ನಡೆಯಲಿದೆ.
ಝುಡ್ ಭದ್ರತೆ ತಿರಸ್ಕರಿಸಿದ ಒವೈಸಿ:ಪಶ್ಚಿಮ ಉತ್ತರ ಪ್ರದೇಶದಲ್ಲಿ ಲೋಕಸಭಾ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಹನದ ಮೇಲೆ ಗುಂಡು ಹಾರಿಸಿದ ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಅವರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಝುಡ್ ಕೆಟಗರಿ ಭದ್ರತೆಯನ್ನು ನೀಡಿದೆ. ಒವೈಸಿ ಅವರ ನಿವಾಸದಲ್ಲಿ ಭದ್ರತೆಯ ಹೊರತಾಗಿ ಪ್ರಯಾಣಿಸುವಾಗ 6-8 ಸಶಸ್ತ್ರ ಕಮಾಂಡೋಗಳು ಇರಲಿದ್ದಾರೆ. ಆದರೆ ಈ ಭದ್ರತೆಯನ್ನು ಅವರು ತಿರಸ್ಕರಿಸಿದ್ದಾರೆ.
ಸಿಎಂ ಯೋಗಿ ನಾಮಪತ್ರ:ಉತ್ತರ ಪ್ರದೇಶ ಚುನಾವಣೆಗೆ ಗೋರಖಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿಎಂ ಯೋಗಿ ಆದಿತ್ಯನಾಥ ಶುಕ್ರವಾರ ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಲೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಿಎಂ ಯೋಗಿಗೆ ಸಾಥ್ ನೀಡಿದ್ದರು. ನಾಮಪತ್ರ ಸಲ್ಲಿಕೆಗೆ ಮುನ್ನ ಯೋಗಿ ಗೋರಖ್​ನಾಥ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಪೂಜೆ ನೆರವೇರಿಸಿದರು. ಅಮಿತ್ ಷಾ ಜತೆಗೆ ಬಿಜೆಪಿಯ ಹಲವು ನಾಯಕರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು, ಪಕ್ಷದ ಬಲಪ್ರದರ್ಶನಕ್ಕೆ ಸಾಕ್ಷಿಯಾದರು. ಗೋರಖ್​ಪುರದಲ್ಲಿ ಭೀಮ್ ಆರ್ವಿುಯ ಚಂದ್ರಶೇಖರ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದು, ಸಮಾಜವಾದಿ ಪಕ್ಷ ಇನ್ನೂ ತನ್ನ ಅಭ್ಯರ್ಥಿಯನ್ನು ಘೊಷಿಸಿಲ್ಲ.
ಮೋದಿ ಆನ್​ಲೈನ್ ಭಾಷಣ:ಪಶ್ಚಿಮ ಉತ್ತರ ಪ್ರದೇಶ ಚುನಾವಣೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯಕ್ಕೆ ಯೋಗಿ ಆದಿತ್ಯನಾಥ ಅವರಂತಹ ದೃಢ ನಾಯಕರ ಅಗತ್ಯವಿದೆಯೇ ಹೊರತು ‘ನಕಲಿ ಸಮಾಜವಾದಿ’ಗಳಲ್ಲ ಎಂದಿದ್ದಾರೆ. ದೆಹಲಿ-ಮೀರತ್ ಎಕ್ಸ್​ಪ್ರೆಸ್​ವೇಗೆ ಅಡಿಪಾಯ ಹಾಕುವ ಭಾಗ್ಯವನ್ನು ಜನರು ನನಗೆ ಒದಗಿಸಿದ್ದಾರೆ. ಬಿಜೆಪಿ ಸರ್ಕಾರ ಹೇಳಿದ್ದನ್ನು ಮಾಡುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ರಾಜ್ಯದಲ್ಲಿ ಅಪರಾಧಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಯೋಗಿ ಅವರು ಕಾನೂನುಬದ್ಧ ಆಳ್ವಿಕೆಗೆ ನಾಂದಿ ಹಾಡಿದ್ದಾರೆ. 21ನೇ ಶತಮಾನದಲ್ಲಿ ಡಬಲ್-ಸ್ಪೀಡ್​ನಲ್ಲಿ ಕಾರ್ಯನಿರ್ವಹಿಸುವ ಡಬಲ್ ಎಂಜಿನ್ ಸರ್ಕಾರವೇ ಬೇಕು ಎಂದು ಮೋದಿ ಹೇಳಿದ್ದಾರೆ.
ಚನ್ನಿ ಸೋದರಳಿಯ ಬಂಧನ:ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಸೋದರಳಿಯ ಭೂಪೇಂದ್ರ ಸಿಂಗ್ ಹನಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಹಣಕಾಸು ಅವ್ಯವಹಾರ ತಡೆ ಕಾಯ್ದೆ (ಪಿಎಂಎಲ್​ಎ) ಅಡಿಯಲ್ಲಿ ಭೂಪಿಂದರ್ ಬಂಧನಕ್ಕೀಡಾಗಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಈ ಬೆಳವಣಿಗೆ ಸಂಭವಿಸಿರುವುದು ಚನ್ನಿ ವರ್ಚಸ್ಸಿಗೆ ಹಾನಿ ಮಾಡುವ ಚರ್ಚೆಗಳು ಶುರುವಾಗಿದೆ. ಕಳೆದ ತಿಂಗಳು ಹನಿ ನಿವಾಸಕ್ಕೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು -ಠಿ; 8 ಕೋಟಿ ವಶಪಡಿಸಿಕೊಂಡಿದ್ದರು. ಅಕ್ರಮ ಮರಳು ಗಣಿಗಾರಿಕೆ, ಆಸ್ತಿ ವಹಿವಾಟಿಗೆ ಸಂಬಂಧಿಸಿದ ದೋಷಪೂರಿತ ದಾಖಲೆಗಳು, ಮೊಬೈಲ್ ಫೋನ್​ಗಳು, -ಠಿ; 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು -ಠಿ; 12 ಲಕ್ಷ ಮೌಲ್ಯದ ರೋಲಕ್ಸ್ ವಾಚ್​ನ್ನೂ ವಶಪಡಿಸಿಕೊಳ್ಳಲಾಗಿತ್ತು. ಈ ಮಧ್ಯೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು, ಪಕ್ಷದ ಉನ್ನತ ನಾಯಕರಿಗೆ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬಲ್ಲ ದುರ್ಬಲ ಮುಖ್ಯಮಂತ್ರಿ ಬೇಕಿದೆ ಎಂದು ಕೆಂಡ ಕಾರಿದ್ದಾರೆ. ಹೊಸ ಪಂಜಾಬ್ ನಿರ್ವಣವಾಗಬೇಕಾದರೆ ಅದು ಮುಖ್ಯಮಂತ್ರಿಯ ಕೈಯಲ್ಲಿದೆ. ಈ ಬಾರಿ ಮುಖ್ಯಮಂತ್ರಿಯನ್ನು ನೀವೇ ಆರಿಸಬೇಕು. ನಿಮಗೆ ಮೇಲ್ಮಟ್ಟದ ನಾಯಕರ ತಾಳಕ್ಕೆ ಕುಣಿಯುವ ನಾಯಕ ಬೇಕಾ ಎಂದು ಸಿಧು ಪ್ರಶ್ನಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 1 =
Remember me
