ನವದೆಹಲಿ:ತೀವ್ರ ಮಳೆ ಮತ್ತು ಪ್ರವಾಹದ ಕಾರಣ ದೇಶದ ಕಲ್ಲಿದ್ದಲು ಗಣಿಗಳ ಚಟುವಟಿಕೆ ಕುಂಠಿತವಾಗಿದ್ದು, ಕಲ್ಲಿದ್ದಲು ಸಾಗಣೆಯ ರೈಲು ಸಂಚಾರಕ್ಕೂ ಅಡಚಣೆ ಆಗಿದೆ. ಗಣಿಗಳಲ್ಲಿ ರಾಶಿ ಮಾಡಿರುವ ಕಲ್ಲಿದ್ದಲು ತೋಯ್ದು ಹೋಗಿರುವುದರಿಂದ ಅವುಗಳನ್ನು ತಕ್ಷಣಕ್ಕೆ ಬಳಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪ್ರತಿ ದಿನ 60 ಸಾವಿರದಿಂದ 80 ಸಾವಿರ ಟನ್ ಕಲ್ಲಿದ್ದಲು ಪೂರೈಕೆ ಕೊರತೆ ಆಗಿದೆ. ಪರಿಣಾಮ ಶಾಖೋತ್ಪನ್ನ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕುಸಿತವಾಗಿದ್ದು, ದೇಶಾದ್ಯಂತ ವಿದ್ಯುತ್ ಸಮಸ್ಯೆ ಬಿಗಡಾಯಿಸುವ ಆತಂಕ ಎದುರಾಗಿದೆ. 65ಕ್ಕೂ ಹೆಚ್ಚು ಶಾಖೋತ್ಪನ್ನ ಸ್ಥಾವರಗಳಲ್ಲಿ ಎರಡು ದಿನಕ್ಕೆ ಆಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ ಎಂದು ಹೇಳಲಾಗಿದ್ದು, ಅನೇಕ ರಾಜ್ಯಗಳು ಕೇಂದ್ರ ಸರ್ಕಾರದ ಮೊರೆ ಹೋಗಿವೆ.
ಈ ಮಧ್ಯೆ, ಕೆಲವು ರಾಜ್ಯಗಳ ಇಂಧನ ಸಚಿವರು ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳ ಜತೆ ಭಾನುವಾರ ಸಭೆ ನಡೆಸಿರುವ ಕೇಂದ್ರ ವಿದ್ಯುತ್ ಸಚಿವ ಆರ್.ಕೆ.ಸಿಂಗ್, ಅನಗತ್ಯವಾಗಿ ಆತಂಕಗೊಳ್ಳುವುದು ಬೇಡ. ಪರಿಸ್ಥಿತಿಯ ಮೇಲೆ ಖುದ್ದು ನಿಗಾ ಇರಿಸಿದ್ದು, ಸಮಸ್ಯೆಯನ್ನು ನಿಭಾಯಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೇಂದ್ರಕ್ಕೆ ರಾಜ್ಯಗಳ ಅಹವಾಲು:ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ, ಆಂಧ್ರ ಪ್ರದೇಶಗಳು ಕಲ್ಲಿದ್ದಲಿನ ಸಮಸ್ಯೆ ಪರಿಹರಿಸುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕಲ್ಲಿದ್ದಲು ಕೊರತೆ ಹೊಗಲಾಡಿಸಲು ಪ್ರಧಾನಿ ಮೋದಿ ಕೂಡಲೆ ಮಧ್ಯಪ್ರವೇಶ ಮಾಡಬೇಕು ಎಂದು ಆಂಧ್ರ ಪ್ರದೇಶದ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಆಗ್ರಹಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ವಿದ್ಯುತ್ ಸ್ಥಾವರಗಳಿಗೆ ಗ್ಯಾಸ್ ಪೂರೖಕೆ ಮಾಡಲಾಗುವುದು ಎಂದು ಪೆಟೊ್ರೕಲಿಯಂ ಸಚಿವಾಲಯ ತಿಳಿಸಿದೆ. ಪಂಜಾಬ್, ಉತ್ತರ ಪ್ರದೇಶಗಳಲ್ಲಿ ಈಗಾಗಲೇ ಲೋಡ್ ಶೆಡ್ಡಿಂಗ್ ಘೋಷಣೆ ಮಾಡಲಾಗಿದೆ. ರಾಜಸ್ಥಾನ ಒಂದು ತಾಸು ವಿದ್ಯುತ್ ಕಡಿತ ಆರಂಭಿಸಿದೆ.
ಜಾಗತಿಕವಾಗಿ ಬೆಲೆ ಹೆಚ್ಚಳ:ಜಾಗತಿಕವಾಗಿ ಕಲ್ಲಿದ್ದಲು ದರ ಕೂಡ ಏರಿಕೆ ಆಗಿದೆ. ಮಾರ್ಚ್​ನಲ್ಲಿ ಟನ್​ಗೆ 60 ಡಾಲರ್ (4,507 ರೂ.) ಇದ್ದ ದರ ಸೆಪ್ಟೆಂಬರ್​ನಲ್ಲಿ 200 ಡಾಲರ್​ಗೆ (15 ಸಾವಿರ ರೂ.) ಹೆಚ್ಚಳ ಕಂಡಿದೆ. ಹೀಗಾಗಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದು ವೆಚ್ಚದಾಯಕವಾಗಿದೆ. ಭಾರತಕ್ಕೆ ಇಂಡೋನೇಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಆಮದಾಗುತ್ತದೆ. ಚೀನಾದಲ್ಲಿ ತಲೆದೋರಿರುವ ವಿದ್ಯುತ್ ಬಿಕ್ಕಟ್ಟು ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಕಲ್ಲಿದ್ದಲು ಆಮದು ದುಬಾರಿಯಾದ ಕಾರಣ ಶಾಖೋತ್ಪನ್ನ ಸ್ಥಾವರಗಳ ಉತ್ಪಾದನೆಯಲ್ಲಿ ಶೇ. 43 ಇಳಿಕೆ ಆಗಿದೆ. ಇದರಿಂದಾಗಿ ದೇಶೀಯ ಕಲ್ಲಿದ್ದಲು ಗಣಿಗಳ ಮೇಲೆ ಹೆಚ್ಚು ಒತ್ತಡ ಬಿದ್ದಿದೆ. ಏಪ್ರಿಲ್​ನಿಂದ ಸೆಪ್ಟೆಂಬರ್ ವೇಳೆಯಲ್ಲಿ 31.50 ಕೋಟಿ ಟನ್ ಕಲ್ಲಿದ್ದಲು ತೆಗೆಯಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಲ್ಲಿದ್ದಲು ಉತ್ಪಾದನೆ 28.20 ಕೋಟಿ ಟನ್ ಇತ್ತು. ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಕಲ್ಲಿದ್ದಲು ಗಣಿಗಳಲ್ಲಿ ಉತ್ಪಾದನೆ ಕುಂಠಿತವಾಗುತ್ತದೆ. ಆದರೆ, ಈ ಸಾರಿ ಇದು ತೀವ್ರವಾಗಿದೆ. ಆದರೆ ಬೇಡಿಕೆ ಹೆಚ್ಚಿದೆ. ದೇಶೀಯ ಒಟ್ಟು ಬೇಡಿಕೆಯಲ್ಲಿ ಶೇ.80ರಷ್ಟನ್ನು ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಪೂರೈಕೆ ಮಾಡುತ್ತದೆ. 2020-21ರಲ್ಲಿ 71.60 ಕೋಟಿ ಟನ್ ಕಲ್ಲಿದ್ದಲು ಉತ್ಪಾದನೆ ಆಗಿದ್ದು, ಇದರಲ್ಲಿ 59.60 ಕೋಟಿ ಟನ್ ಸಿಐಎಲ್​ನಿಂದ ಪೂರೈಕೆ ಆಗಿದೆ. ಅಕ್ಟೋಬರ್ 7ರಂದು ಸಿಐಎಲ್ ನಿತ್ಯದ ಉತ್ಪಾದನೆ 1,501 ಟನ್​ಗೆ ಏರಿದೆ.
ಬೆಂಗಳೂರು:ರಾಜ್ಯದ ಅಪೇಕ್ಷೆಯಂತೆ ಮಹಾರಾಷ್ಟ್ರದ ಚಂದ್ರಾಪುರ, ಒಡಿಶಾದ ಮಹಾನದಿ ಕಲ್ಲಿದ್ದಲು ಪ್ರದೇಶದ ಎರಡು ಗಣಿಗಳು ಸಿಗುವ ದಿನಗಳು ಹತ್ತಿರವಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಚಂದ್ರಾಪುರ ಗಣಿ ರಾಜ್ಯಕ್ಕೆ ದೊರೆತಿದ್ದು, ಅರಣ್ಯ ಇಲಾಖೆ ಒಪ್ಪಿಗೆ ಬಾಕಿಯಿರುವ ಕಾರಣ ಮಹಾರಾಷ್ಟ್ರ ಸರ್ಕಾರದ ಜತೆಗೆ ಮಾತುಕತೆ ಪ್ರಗತಿಯಲ್ಲಿದೆ. ಒಡಿಶಾದ ಮಹಾನದಿ ಕೋಲ್ ಫೀಲ್ಡ್್ಸಲ್ಲಿ ಬೇರೆ ಕಂಪನಿಯೊಂದು ಗುತ್ತಿಗೆ ಪಡೆದಿದ್ದ ಗಣಿ ರಾಜ್ಯಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಗಣಿಗಳು ಲಭಿಸಿದರೆ ಮೂರು ಥರ್ಮಲ್ ವಿದ್ಯುತ್ ಸ್ಥಾವರಗಳ ಕಲ್ಲಿದ್ದಲು ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದರು. ದೆಹಲಿ ಭೇಟಿಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಭೂಪೇಂದ್ರ ಯಾದವ್ ಮುಂದೆ ವಿಷಯ ಪ್ರಸ್ತಾಪಿಸಿದ್ದು, ತ್ವರಿತ ಅನುಮೋದನೆ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಲ್ಲಿದ್ದಲು ಸಾಗಿಸುವ ರೈಲು ರೇಕ್​ಗಳ ಸಂಖ್ಯೆ ಹೆಚ್ಚಿಸುವುದಕ್ಕೂ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಬೊಮ್ಮಾಯಿ ವಿವರಿಸಿದರು.
ದೇಶದಲ್ಲಿ 24 ದಿನಗಳಿಗೆ ಬೇಕಾಗುವಷ್ಟು 43 ದಶಲಕ್ಷ ಟನ್ ಕಲ್ಲಿದ್ದಲು ದಾಸ್ತಾನಿದೆ. ಪ್ರಸಕ್ತ ಹಣಕಾಸಿನ ಅರ್ಧ ವರ್ಷದಲ್ಲಿ ಕೋಲ್ ಇಂಡಿಯಾ ಕಂಪನಿ ಶೇ.6.3ರಷ್ಟು ಹೆಚ್ಚಿನ ಕಲ್ಲಿದ್ದಲು ಪೂರೈಸಿದೆ. 323 ದಶಲಕ್ಷ ಮೆಟ್ರಿಕ್ ಕಲ್ಲಿದ್ದಲು ಸರಬರಾಜು ಮಾಡಿದೆ. ಕೊರತೆ ಸರಿದೂಗಿಸಲು ಮುಂದಿನ 3 ದಿನ 1.60 ಟನ್ ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತದೆ.
|ಪ್ರಲ್ಹಾದ ಜೋಶಿಕೇಂದ್ರ ಕಲ್ಲಿದ್ದಲು ಸಚಿವ
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:13 − 9 =
Remember me
