ಬೆಂಗಳೂರು:ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಮತದಾನ ಮುನ್ನಾ ದಿನ ನಡೆಯಬಹುದಾದ ‘ಕತ್ತಲುರಾತ್ರಿ’ ಮಸಲತ್ತುಗಳು ಫಲಿತಾಂಶದ ಹಣೆಬರಹ ನಿರ್ಧರಿಸುವ ಸಾಧ್ಯತೆಗಳಿವೆ. ಮೂವರು ಬಿಟ್ಟರೆ ಗೆಲ್ಲುವ ಮತ್ತೊಬ್ಬ ಅಭ್ಯರ್ಥಿ ಯಾರು? ಎಂಬ ಪ್ರಶ್ನೆಯೇ ರಾಜಕೀಯ ರಂಗದಲ್ಲಿ ಸಾಧ್ಯಾಸಾಧ್ಯತೆಗಳ ತರ್ಕ, ಕುತೂಹಲ ಹುಟ್ಟಿಹಾಕಿದ್ದು, ಸಂಶಯವೂ ಹಾಸುಹೊಕ್ಕಾಗಿದೆ. ಟೀಮ್ ಬಿ, ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಲೆಕ್ಕಾಚಾರಗಳೆಲ್ಲ ಮೇಲ್ನೋಟಕ್ಕೆ ಕಂಡುಬರುತ್ತಿವೆ. ಇವೆಲ್ಲವುಗಳ ಹೊರತಾದ ಪ್ರಭಾವ ಮತ್ತು ಸಂಬಂಧಗಳು ನಿರ್ಣಾಯಕವಾಗಲಿವೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಕಾಂಗ್ರೆಸ್​ನ ಜೈರಾಮ ರಮೇಶ್ ಗೆಲುವಿನ ಹಾದಿ ಸುಗಮವಾಗಿದೆ. ಮತ್ತೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸಲು ಬೇಕಾದ ಮತಗಳ ಬಲ ಮೂರು ಪಕ್ಷಗಳಲ್ಲಿ ಇಲ್ಲದಿರುವುದು ಅಖಾಡಕ್ಕೆ ರಂಗೇರಿಸಿದೆ. ಬಿಜೆಪಿಯ ಲೆಹರ್ ಸಿಂಗ್ ಸಿರೋಯಿ, ಕಾಂಗ್ರೆಸ್​ನ ಮನ್ಸೂರ್ ಅಲಿಖಾನ್, ಜೆಡಿಎಸ್​ನ ಕುಪೇಂದ್ರ ರೆಡ್ಡಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮೂರು ಪಕ್ಷಗಳ ನಾಯಕರು ಆಯಾ ಉಮೇದುವಾರರ ಪರ ಗಟ್ಟಿಯಾದ ವಕಾಲತ್ತುವಹಿಸಿದ್ದಾರೆ. ಜೆಡಿಎಸ್ ಮನ ವೊಲಿಕೆ ಪ್ರಯತ್ನ, ಆಫರ್ ಮಾತುಗಳು ಈ ಕ್ಷಣದವರೆಗೂ ಫಲ ನೀಡಿಲ್ಲ. ಕೈಪಕ್ಷ ಪ್ರತಿಯಾಗಿ ‘ಋಣಭಾರ’ ನೆನಪಿಸಿ ನಮಗೆ ಬೆಂಬಲಿಸಲಿ ಎಂದು ಪಟ್ಟು ಹಿಡಿದಿವೆ.
ಮೂವರು ಹುರಿಯಾಳುಗಳು ತಮ್ಮ ತಮ್ಮ ‘ಶಕ್ತ್ಯಾನುಸಾರ’ 3 ಪಕ್ಷಗಳ ಶಾಸಕರ ಓಲೈಕೆಗೆ ಇಳಿದಿದ್ದರೆ, ಕಾಂಗ್ರೆಸ್-ಜೆಡಿಎಸ್ ನಾಯಕರು ಗೆರೆ ಕೊರೆದು ಕುಸ್ತಿಗೆ ಇಳಿದಿದ್ದಾರೆ. ತ್ರಿಕೋನ ಪೈಪೋಟಿಯು ಮಾತಿನ ಜಟಾಪಟಿ, ತಂತ್ರ-ಪ್ರತಿತಂತ್ರ ಹೆಣೆಯುವುದಕ್ಕೆ ವೇದಿಕೆ ಕಲ್ಪಿಸಿದ್ದು, ಎರಡೂ ಪಕ್ಷಗಳು ತಮ್ಮ ತಮ್ಮ ನಿಲುವಿಗೆ ಕಟಿ ಬದ್ಧವಾಗಿ ನಿಂತರೆ ಇಬ್ಬರ ಜಗಳ ಮೂರನೇ ಅಭ್ಯರ್ಥಿಗೆ ಲಾಭವಾಗಬಹುದೆಂದು ಕಮಲಪಡೆ ಕಾದು ನೋಡುತ್ತಿದೆ.
ಕುಸ್ತಿ-ದೋಸ್ತಿ ಅನುಮಾನ:ಬಹಿರಂಗ ಕುಸ್ತಿಯು ಕೊನೆ ಘಟ್ಟದಲ್ಲಿ ದೋಸ್ತಿಯಾಗಿಯೂ ಮಾರ್ಪಡಬಹುದು ಎಂಬ ಅನುಮಾನ ಬಿಜೆಪಿ ಪಾಳೆಯವನ್ನು ಬಲವಾಗಿ ಕಾಡುತ್ತಿದೆ. ಸೋನಿಯಾ ಗಾಂಧಿ ಮತ್ತು ದೇವೇಗೌಡರು ಮತ್ತೊಂದು ಸುತ್ತಿನ ರಾಜಿ ಸಂಧಾನಕ್ಕೆ ಇಳಿದು, ರಾಜಿ ಸಂಧಾನ ಮಾಡಿಕೊಂಡರೆ ಕಮಲಪಡೆಯ ಮೂರನೇ ಸ್ಥಾನದ ಕನಸು ಭಗ್ನವಾಗಲಿದೆ. ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನೆಲೆಯಲ್ಲಿ ಭವಿಷ್ಯದ ರಾಜಕೀಯ ನಡೆಯ ಬಗ್ಗೆ ಈ ಚುನಾವಣೆ ಮೂಲಕ ಕೆಲವು ಶಾಸಕರು ನಿರ್ಧರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಯೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಒಟ್ಟಾರೆ ಬಹಿರಂಗ ಮಾತುಗಳು ಹಾಗೂ ಆಂತರಿಕ ಕಸರತ್ತುಗಳ ಮಧ್ಯೆ ಅಜಗಜಾಂತರ ವ್ಯತ್ಯಾಸ ವಿದ್ದು, ಪರಸ್ಪರ ಸಂಶಯದಿಂದ ನೋಡುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲೆಂದು ಬಿಜೆಪಿ, ಕಾಂಗ್ರೆಸ್ ‘ವ್ಹಿಪ್’ ಜಾರಿ ಮಾಡಿದ್ದರೆ, ಜೆಡಿಎಸ್ ತನ್ನ ಶಾಸಕರನ್ನು ರೆಸಾರ್ಟ್​ವೊಂದಕ್ಕೆ ಬುಧವಾರ ಕರೆದೊಯ್ದಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ರಟ್ಟಾಗದ ಒಳ ವ್ಯವಹಾರದ ಗುಟ್ಟು:ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹರ ಸಾಹಸ ಮಾಡುತ್ತಿರುವ ಮೂರು ಪಕ್ಷಗಳ ನಾಯಕರು ರೆಸಾರ್ಟ್ ರಾಜಕಾರಣದ ಮೊರೆ ಹೋಗಿದ್ದಾರೆ. ಈ ನಡುವೆ ಆಯಾ ಪಕ್ಷದ ಶಾಸಕರು ಕೇಳುತ್ತಿರುವ ಡಿಮ್ಯಾಂಡ್ ಕೇಳಿ ಪಕ್ಷದ ಮುಖಂಡರೇ ಹೌಹಾರಿ ಹೋಗಿದ್ದಾರೆ. ಈ ವರ್ಷ ನಮಗೂ ಚುನಾವಣೆ ವರ್ಷ. ಇಷ್ಟು ವರ್ಷ ನಾವು ಏನೂ ಮಾಡಿಕೊಂಡಿಲ್ಲ. ಹಣವಿಲ್ಲದೆ ಚುನಾವಣೆ ಎದುರಿಸುವುದು ಎಷ್ಟು ಕಷ್ಟ ಇದೆ ಎನ್ನುವುದು ನಿಮಗೆ ಗೊತ್ತಿದೆ. ಆದ್ದರಿಂದ ನೀವು ವೈಯಕ್ತಿಕವಾಗಿ ಸಹಾಯ ಮಾಡಿದರೆ ನಿಮಗೆ ನಮ್ಮ ಓಟು ಖಚಿತಪಡಿಸುತ್ತೇವೆ ಎನ್ನುವ ಬೇಡಿಕೆಗಳು ಕೆಲ ಶಾಸಕರಿಂದಲೇ ಬರುತ್ತಿರುವುದನ್ನು ಅಭ್ಯರ್ಥಿಗಳಿಗೆ ಪೀಕಲಾಟ ಶುರುವಾಗಿದೆ. ಪಕ್ಷ ಮತ್ತು ಮುಖಂಡರು ತೆಗೆದುಕೊಳ್ಳುವ ತೀರ್ವನಕ್ಕೆ ಆಯಾ ಪಕ್ಷದ ಕೆಲ ಶಾಸಕರೇ ಬೆನ್ನು ತೋರಿಸಿ, ಹಣದಾಸೆಗೆ ಓಗೊಟ್ಟಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಮೂರು ಪಕ್ಷಗಳಲ್ಲಿ ಒಂದು ರೀತಿಯ ಆತಂಕದ ಕಾಮೋಡ ಕವಿದಿದೆ.
ತಮ್ಮ ಮತವನ್ನು ನಿಮಗೆ ಖಚಿತಪಡಿಸಬೇಕಾದರೆ, ವೈಯಕ್ತಿಕವಾಗಿ ಸಹಾಯ ಮಾಡಲೇಕು ಎಂದು ಶಾಸಕರು ಬಯಸುತ್ತಿರುವುದು ಪಕ್ಷಕ್ಕೂ ಇರುಸು ಮುರುಸು ತಂದಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಎಲ್ಲಿ ಕೈ ಕೊಡುತ್ತಾರೊ ಎನ್ನುವ ಅನುಮಾನವೂ ಕಾಡುತ್ತಿದೆ. ನೀವು ಪಕ್ಷಕ್ಕೆ ದೇಣಿಗೆಯಾಗಿ ಹಣ ಪಡೆದುಕೊಂಡರೆ, ಅದು ನಮಗೆ ಮುಟ್ಟುವುದಿಲ್ಲ. ನೀವು ಬೇಕಿದ್ದರೆ ಪಕ್ಷಕ್ಕೂ ಪ್ರತ್ಯೇಕ ಕೊಡಿ. ನಮಗೂ ಕೊಡಿ ಎಂದು ಎನ್ನುವ ಬೇಡಿಕೆಗಳು ಬಂದಿರುವುದು ಆಯಾ ಪಕ್ಷಕ್ಕೂ ಅರಗಿಸಿಕೊಳ್ಳಲಾರದ ಸಂಗತಿಯಾಗಿದೆ.
ಅಭ್ಯರ್ಥಿ ವಾಪಸ್ ಪ್ರಶ್ನೆಯೇ ಇಲ್ಲವೆಂದ ಎಚ್​ಡಿಕೆ:ರಾಜ್ಯಸಭೆ ಚುನಾವಣಾ ಕಣದಿಂದ ತಮ್ಮ ಪಕ್ಷದ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಕಾಂಗ್ರೆಸ್​ನವರು ಹೇಳಿದಕ್ಕೆಲ್ಲಾ ಒಪ್ಪಿಕೊಳ್ಳಬೇಕಾ?. ನಾವು 32 ಮಂದಿ ಶಾಸಕರಿದ್ದೇವೆ. ಕಾಂಗ್ರೆಸ್ 25 ಶಾಸಕರಿದ್ದಾರೆ. ಯಾರ ಬಳಿ ಹೆಚ್ಚು ಮತಗಳು ಇವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇವರ ದಬ್ಬಾಳಿಕೆಗೆಲ್ಲ ನಾವು ಬಗ್ಗಲು ಆಗುತ್ತಾ? ಎಂದು ಕೇಳಿದರು. ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಸಿದ್ದರಾಮಯ್ಯ ಕಾಟಾಚಾರದ ಅಧ್ಯಕ್ಷರೆಂದು ಕುಹಕವಾಡಿದ್ದಾರೆ. ನಮ್ಮ ಅಧ್ಯಕ್ಷರ ಬಗ್ಗೆ ಲಘು ವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ತಾಕೀತು ಮಾಡಿದರು. ಸಿದ್ದರಾಮಯ್ಯ ಎಷ್ಟು ಜನ ಅಲ್ಪಸಂಖ್ಯಾತರ ಕುತ್ತಿಗೆ ಕೊಯ್ದಿಲ್ಲ ಹೇಳಿ? ಎಂದು ಪ್ರಶ್ನಿಸಿದರು.
ಅಂತಿಮವಾಗಿ ಕಾಂಗ್ರೆಸ್ ಕೈ ಮೇಲಾಗಬಹುದು:ಪಕ್ಷದ ಎಲ್ಲ 32 ಶಾಸಕರ ಮತಗಳು ಅಧಿಕೃತ ಅಭ್ಯರ್ಥಿಗೆ ದೊರೆಯುವಂತೆ ಮಾಡಲು ನಿರಂತರ ಪ್ರಯತ್ನವನ್ನು ಕೂಡ ಜೆಡಿಎಸ್ ನಡೆಸಿದೆ. ಈ ನಿಟ್ಟಿನಲ್ಲಿ ಅತೃಪ್ತ ಶಾಸಕರ ಮನವೊಲಿಸುವ ಕೆಲಸವೂ ಸಾಗಿದೆ. ಸಾಧ್ಯವಾದರೆ ಇತರೆ ಶಾಸಕರ ಬೆಂಬಲ ಪಡೆಯುವ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ. ಜಾತ್ಯತೀತ ಮತಗಳು ವಿಭಜನೆಯಾಗಿ ಬಿಜೆಪಿ ಅನುಕೂಲವಾಗಬಾರದು ಎಂಬ ಉದ್ದೇಶ ಮುಂದಿಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ಕೈಜೋಡಿಸಿ, ಕೊನೆಯ ಗಳಿಗೆಯಲ್ಲಿ ಕಾಂಗ್ರೆಸ್ ಕೈಮೇಲಾದರೂ ಅಚ್ಚರಿ ಪಡಬೇಕಿಲ್ಲ.
ದೇವೇಗೌಡರಿಂದ ನಿರಂತರ ಮಾತುಕತೆ:ನಾಮಪತ್ರ ಸಲ್ಲಿಕೆಗೂ ಮುನ್ನ ದೇವೇಗೌಡರು ಕಾಂಗ್ರೆಸ್ ದೆಹಲಿ ವರಿಷ್ಠರ ಜತೆ ರ್ಚಚಿಸಿದ್ದಾರೆ. ನಾನೂ ಕೂಡ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ ಜತೆ ಮಾತನಾಡಿದ್ದೇನೆ. ಅವರು ತಮ್ಮ ಪಕ್ಷದ ಪ್ರತಿನಿಧಿಗಳನ್ನು ಚರ್ಚೆಗೆ ಕಳುಹಿಸುವುದಾಗಿ ಹೇಳಿದ್ದಾರೆ ಎನ್ನುವ ಮೂಲಕ ಮಾತುಕತೆ ಮುರಿದು ಬಿದ್ದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ದಾಳ ಉರುಳಿಸಿದ ಜೆಡಿಎಸ್:ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಮುರಿದು ಬಿದ್ದಿದೆ. ಆದರೆ ಕೋಮುವಾದಿ ಬಿಜೆಪಿಯನ್ನು ದೂರವಿಡಬೇಕೆಂಬ, ಜಾತ್ಯತೀತ ನಿಲುವು ಸಮರ್ಥನೆಯೊಂದಿಗೆ ಬೆಂಬಲದ ಮಾತುಗಳು ಮುಂದುವರಿದಿವೆ. ಕಾಂಗ್ರೆಸ್-ಜೆಡಿಎಸ್ ಮಧ್ಯ ಆರೋಪ-ಪ್ರತ್ಯಾರೋಪಗಳ ಜಟಾಪಟಿ ನಡೆದರೂ ಸಂಧಾನ ಪ್ರಯತ್ನಗಳು ನಿಂತಿಲ್ಲ. ಕಾಂಗ್ರೆಸ್ ಅಭ್ಯರ್ಥಿಗೆ ದ್ವಿತೀಯ ಪ್ರಾಶಸ್ತ್ಯ ಮತ ನೀಡುವುದಾಗಿ ಕುಮಾರಸ್ವಾಮಿ ಹೇಳುವ ಮೂಲಕ ಮೈತ್ರಿ ಪ್ರಸ್ತಾಪವನ್ನು ಜೀವಂತವಾಗಿರಿಸಿದ್ದಾರೆ. ಅಲ್ಲದೆ, ಬಿಜೆಪಿ ಸೋಲಿಸಲು ಎಲ್ಲದ್ದಕ್ಕೂ ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಓಪನ್ ಆಫರ್ ಕೊಟ್ಟಿದ್ದಾರೆ. ಕಾಂಗ್ರೆಸ್ 2ನೇ ಅಭ್ಯರ್ಥಿಗೆ ದೊರೆಯುವ ಮತಗಳಿಗಿಂತ ನಮ್ಮ ಪಕ್ಷದ ಮತ ಬಲ ಹೆಚ್ಚಿದೆ. ಹಾಗಾಗಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಅನ್ನು ಬೆಂಬಲಿಸಬೇಕು. ನಮ್ಮ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್​ಗೆ ಡಿಕೆಶಿ ಟಾಂಗ್:ಜಾತ್ಯತೀತ ತತ್ವ ಉಳಿಸಿಕೊಳ್ಳಲು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಮನವಿ ಮಾಡಿದ್ದು, ಅದು ಹೈಕಮಾಂಡ್ ತೀರ್ವನವಾಗಿರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನೀವೇ ಸ್ಪರ್ಧೆಯಿಂದ ಹಿಂದೆ ಸರಿದು ಜೆಡಿಎಸ್ ಮತಗಳನ್ನು ನಮ್ಮ ಅಭ್ಯರ್ಥಿಗೆ ಹಾಕಿ ಎಂದು ಕಾಂಗ್ರೆಸ್ ಸ್ಪಷ್ಟ ಸಂದೇಶ ಕಳಿಸಿದೆ. ಎರಡನೇ ಆದ್ಯತೆಯ ಮತಗಳ ಬೆಂಬಲ ನೀಡುವ ಕುರಿತು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆಶಿ, ಈ ಹಿಂದೆ ನಮ್ಮಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ಹಿತದೃಷ್ಟಿಯಿಂದ ಸಾಕಷ್ಟು ಬಾರಿ ಜೆಡಿಎಸ್ ಬೆಂಬಲಕ್ಕೆ ನಿಂತಿದ್ದೆವು, ಹೀಗಾಗಿ ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಲಿ ಎಂದರು. ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವಾಗ ಕಾಂಗ್ರೆಸ್ ಜತೆ ಚರ್ಚೆ ಮಾಡದ ಜೆಡಿಎಸ್​ಗೆ ಈಗ ಸ್ವಾಭಿಮಾನ ಕಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಕೆಣಕಿದರು.
ಧಾರವಾಡ:ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ನಮ್ಮೊಂದಿಗೆ ಕೈ ಜೋಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು. ರಾಜ್ಯಸಭೆ ಚುನಾವಣೆಗೆ ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ಬಳಿಕ ಜೆಡಿಎಸ್​ನವರು ಅಭ್ಯರ್ಥಿ ಹಾಕಿದ್ದಾರೆ. ಕೋಮುವಾದಿ ಅಭ್ಯರ್ಥಿ ಸೋಲಿಸುವ ಉದ್ದೇಶ ಇದ್ದರೆ ಅಭ್ಯರ್ಥಿ ಹಾಕಬಾರದಿತ್ತು. ನಾವು ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದೇವೆ. ಅವರನ್ನು ಗೆಲ್ಲಿಸಬೇಕಿದ್ದರೆ ಜೆಡಿಎಸ್​ನವರು ತಮ್ಮ ಅಭ್ಯರ್ಥಿ ನಿವೃತ್ತಿ ಘೊಷಿಸುವಂತೆ ಮಾಡಲಿ ಎಂದು ಅವರು ಹೇಳಿದರು. ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸಿದ್ದಾಗ ನಾವು ಅಭ್ಯರ್ಥಿ ಹಾಕಿರಲಿಲ್ಲ. ಈಗ ಅವರು ನಮಗೆ ಮತ ನೀಡಲಿ. ಬಿಜೆಪಿಯವರು ಸಿಎಂ ಆಗದಿರಲಿ ಎಂಬ ಕಾರಣಕ್ಕೆ ನಾವು 80 ಜನರಿದ್ದರೂ 37 ಜನರಿದ್ದ ಪಕ್ಷದ ಕುಮಾರಸ್ವಾಮಿಯವರನ್ನು ಸಿಎಂ ಮಾಡಿದೆವು. ಈಗ ಅವರು ಕೋಮುವಾದಿ ಪಕ್ಷ ಸೋಲಿಸಲು ನಮಗೆ ಬೆಂಬಲಿಸಲಿ ಎಂದು ಹೇಳುವ ಮೂಲಕ ಎಚ್​ಡಿಕೆ ಕೆಡಿಸುವ ಆಟ ಆಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಹಿಜಾಬ್​ ಬಳಿಕ ಮಂಗಳೂರಿನ ಕಾಲೇಜಲ್ಲಿ ಮತ್ತೊಂದು ವಿವಾದ; ತರಗತಿಯಲ್ಲಿ ಸಾವರ್ಕರ್ ಫೋಟೋ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
