|ರಂಗಸ್ವಾಮಿ ಎಂ.ಮಾದಾಪುರ
ಕೂನ್ನೂರು:ಮದ್ರಾಸ್ ರೆಜಿಮೆಂಟ್ ಸೆಂಟರ್ ಶುರುವಾಗಿದ್ದು 1758ರಲ್ಲಿ. ಬಹುಶಃ ಹಿಂದೆಂದೂ ರೆಜಿಮೆಂಟ್​ನಲ್ಲಿ ಇಂತಹ ಸೂತಕ ಆವರಿಸಿರಲಿಲ್ಲ. ಎಲ್ಲರ ಮುಖದಲ್ಲೂ ದುಃಖ ಮಡುಗಟ್ಟಿತ್ತು, ಮೌನ ಆವರಿಸಿತ್ತು. ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾಧಿಕಾರಿಗಳ ಪಾರ್ಥಿವ ಶರೀರಗಳನ್ನು ಗುರುವಾರ ಬೆಳಗ್ಗೆ ಕೂನೂರು ತರಬೇತಿ ಕೇಂದ್ರಕ್ಕೆ ತರಲಾಯಿತು. ಸೇನಾಧಿಕಾರಿಗಳು ಮತ್ತು ಸಿಬ್ಬಂದಿ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ಸಹಿಸಿಕೊಂಡು ಕರ್ತವ್ಯ ನಿರ್ವಹಿಸಿದರು.
ತೆರೆದ ವಾಹನದಲ್ಲಿ ಮೆರವಣಿಗೆ:ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಾವತ್ ದಂಪತಿ ಮತ್ತು 11 ಜನರ ಪಾರ್ಥಿವ ಶರೀರಗಳನ್ನು ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಗುರುವಾರ ಮುಂಜಾನೆ ತೆರೆದ ವಾಹನದಲ್ಲಿ ಮದ್ರಾಸ್ ರೆಜಿಮೆಂಟ್ ಸೆಂಟರ್​ಗೆ ಮೆರವಣಿಗೆಯಲ್ಲಿ ತರಲಾಯಿತು. ಈ ವೇಳೆ ಸೇನಾ ಸಿಬ್ಬಂದಿ ದಾರಿಯುದ್ದಕ್ಕೂ ಗೌರವ ನಮನ ಸಲ್ಲಿಸಿದರು. ಗೌರವ ವಂದನೆ ಸಲ್ಲಿಸಿದ ಬಳಿಕ 13 ಪ್ರತ್ಯೇಕ ಆಂಬುಲೆನ್ಸ್​ಗಳ ಮೂಲಕ ಪಾರ್ಥಿವ ಶರೀರಗಳನ್ನು ಸುಲೂರು ಏರ್​ಬೇಸ್​ನತ್ತ ಸಾಗಿಸಲಾಯಿತು.
ಬ್ಲ್ಯಾಕ್​​ಬಾಕ್ಸ್ ಪತ್ತೆ:ಬುಧವಾರ ಅಪಘಾತಕ್ಕೀಡಾಡ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ನ ಫ್ಲೈಟ್ ರೆಕಾರ್ಡರ್- ಬ್ಲಾ್ಯಕ್​ಬಾಕ್ಸ್ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ರಕ್ಷಣಾ ಅಧಿಕಾರಿಗಳು ಅಪಘಾತ ಸ್ಥಳದಿಂದ 300 ಮೀಟರ್​ನಿಂದ ಒಂದು ಕಿ.ಮೀ.ವರೆಗೆ ಶೋಧಕಾರ್ಯ ಕೈಗೊಂಡಿದ್ದರು. ಕಾಪ್ಟರ್​ನ ಅಂತಿಮ ಕ್ಷಣಗಳ ಸ್ಥಿತಿಗತಿ ಮತ್ತು ಇತರ ಮಾಹಿತಿಗಳನ್ನು ಬ್ಲಾ್ಯಕ್​ಬಾಕ್ಸ್ ಒಳಗೊಂಡಿರುತ್ತದೆ.
ಕುನ್ನೂರಿನ ನಿವಾಸಿ ಶಿವಕುಮಾರ್ ನೀಲಗಿರಿ ಪ್ರದೇಶದ ಚಹಾ ತೋಟದಲ್ಲಿ ಕೆಲಸ ಮಾಡುವ ಸಹೋದರನನ್ನು ಭೇಟಿ ಮಾಡಲು ಬಂದಿದ್ದರು. ಅದೇ ವೇಳೆ ಸಂಭವಿಸಿದ ಅಪಘಾತಕ್ಕೆ ಅವರು ಪ್ರತ್ಯಕ್ಷದರ್ಶಿಯಾದರು. ಆ ಕ್ಷಣಗಳನ್ನು ಶಿವಕುಮಾರ್ ವಿವರಿಸಿದ್ದು ಹೀಗೆ: ‘ಬೆಂಕಿ ಹೊತ್ತಿಕೊಂಡ ಹೆಲಿಕಾಪ್ಟರ್ ಕೆಳಗೆ ಬೀಳುತ್ತಿರುವುದನ್ನು ಕಣ್ಣಾರೆ ಕಂಡೆ. ದಟ್ಟ ಹೊಗೆ ಆವರಿಸಿದ್ದರಿಂದ ಮತ್ತು ಅಪಘಾತ ಸ್ಥಳ ಇಕ್ಕಟ್ಟಾಗಿದ್ದ ಕಾರಣ ಕಷ್ಟಪಟ್ಟು ತಲುಪುವಂತಾಯಿತು. ಬೆಂಕಿ ಹೊತ್ತಿಕೊಂಡ ಮೂರು ಶರೀರಗಳು ಕಾಪ್ಟರ್​ನಿಂದ ಕೆಳಗೆ ಬೀಳುತ್ತಿದ್ದವು. ಅಲ್ಲಿ ತಲುಪುವಷ್ಟರಲ್ಲಿ ಎರಡು ದೇಹಗಳು ಕಾಪ್ಟರ್​ನಿಂದ ಕೆಳಗೆ ಬಿದ್ದಿದ್ದವು ಮತ್ತು ಗುರುತು ಹಿಡಿಯಲಾಗದಷ್ಟು ಬೆಂದು ಹೋಗಿದ್ದವು. ಒಬ್ಬ ವ್ಯಕ್ತಿ ಬದುಕಿದ್ದರು. ಅವರು ‘ನೀರು ಬೇಕು’ ಎಂದು ಕೇಳಿದರು. ಆಗ ನನ್ನ ಬಳಿ ಅಥವಾ ಸುತ್ತಲಿನಲ್ಲಿ ನೀರು ಇರಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ರಕ್ಷಣಾ ತಂಡದ ಸದಸ್ಯರು ಸ್ಥಳಕ್ಕೆ ಧಾವಿಸಿ, ಬದುಕಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ದರು. ಮೂರು ಗಂಟೆಗಳ ಬಳಿಕ ನನ್ನ ಪರಿಚಿತರೊಬ್ಬರು ಒಂದು ಫೋಟೋ ತೋರಿಸಿ, ‘ನೀನು ಮಾತನಾಡಿದ್ದು ಜನರಲ್ ಬಿಪಿನ್ ರಾವತ್ ಅವರ ಬಳಿ’ ಎಂದರು. ದೇಶಕ್ಕಾಗಿ ಇಷ್ಟೆಲ್ಲ ಕೆಲಸ ಮಾಡಿದ ಆ ಮಹಾನ್ ವ್ಯಕ್ತಿಗೆ ಕೊನೆಯ ಕ್ಷಣದಲ್ಲಿ ನೀರು ಕೂಡ ಕೊಡಲಾಗಲಿಲ್ಲವಲ್ಲ ಎಂಬ ಕೊರಗು ಕಾಡುತ್ತಿದೆ. ಇಡೀ ರಾತ್ರಿಯೆಲ್ಲ ನಿದ್ದೆಯಿಲ್ಲದೆ ಕಳೆದೆ…, ತುಂಬ ದುಃಖವಾಗುತ್ತಿದೆ.’
ಮನೆಗಳಲ್ಲಿ ಯಾರೂ ಇರಲಿಲ್ಲ:ಇನ್ನೋರ್ವ ಪ್ರತ್ಯಕ್ಷದರ್ಶಿ ಶಂಕರ್ ಘಟನೆಯನ್ನು ವಿವರಿಸಿದ್ದು ಹೀಗೆ. ‘ನೀಲಗಿರಿ ಪ್ರದೇಶದಲ್ಲಿರುವ ನನ್ನ ಮನೆಯ ಕೆಲವೇ ಮೀಟರ್​ಗಳ ಅಂತರದಲ್ಲಿ ಹೆಲಿಕಾಪ್ಟರ್ ಪತನಗೊಂಡಿತು. ಅದೃಷ್ಟವಶಾತ್ ಮನೆಯಲ್ಲಿ ನಾನು, ಮಕ್ಕಳು ಇರಲಿಲ್ಲ. ಘಟನಾಸ್ಥಳದ ಸಮೀಪವೇ ಹಲವಾರು ಮನೆಗಳಿವೆ. ಆದರೆ, ಆ ಹೊತ್ತಿಗೆ ಬಹುತೇಕರು ಕೆಲಸಕ್ಕೆ ಹೋಗಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಇಲ್ಲದಿದ್ದರೆ ಈ ಅನಾಹುತ ಇನ್ನಷ್ಟು ಜೀವಗಳನ್ನು ಬಲಿ ಪಡೆಯುತ್ತಿತ್ತು’
ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ:ಬಿಪಿನ್ ರಾವತ್, ಅವರ ಪತ್ನಿ ಮಧುಲಿತಾ ಮತ್ತು ಇತರ 11 ಜನರ ಪಾರ್ಥಿವ ಶರೀರಗಳನ್ನು ಸಂಜೆ 8.15ಕ್ಕೆ ದೆಹಲಿಯ ಪಾಲಂ ವಿಮಾನನಿಲ್ದಾಣಕ್ಕೆ ತರಲಾಯಿತು. ಅಗಲಿದ ಸೇನಾಧಿಕಾರಿಗಳ ಕುಟುಂಬಗಳ ದುಃಖದ ಕಟ್ಟೆ ಒಡೆದಿತ್ತು. ರಾವತ್ ದಂಪತಿಯ ಇಬ್ಬರು ಪುತ್ರಿಯರು ಬಿಕ್ಕಿ-ಬಿಕ್ಕಿ ಅಳುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾತ್ರಿ 9ಕ್ಕೆ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ, ಅಗಲಿದ ಸೇನಾಧಿಕಾರಿಗಳ ಕುಟುಂಬವರ್ಗದವರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಕೂಡ ಕುಟುಂಬವರ್ಗದವರಿಗೆ ಧೈರ್ಯ ತುಂಬಿದರು.
ಅಪಘಾತಕ್ಕೀಡಾದ ಆಂಬುಲೆನ್ಸ್:ಯೋಧರ ಪಾರ್ಥಿವ ಶರೀರಗಳನ್ನು ಸೂಲೂರು ವಾಯುನೆಲೆಗೆ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಗುರುವಾರ ತ.ನಾಡಿನ ಮೆಟ್ಟುಪಾಳ್ಯಂ ಸಮೀಪ ಅಪಘಾತಕ್ಕೆ ಈಡಾಯಿತು.ಮತ್ತೊಂದು ಆಂಬುಲೆನ್ಸ್​ನೊಂದಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದ್ದು, ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಾರ್ಥಿವ ಶರೀರಗಳನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರಿಸಿ, ಸೂಲೂರು ವಾಯುನೆಲೆಗೆ ಕೊಂಡೊಯ್ಯಲಾಯಿತು.
ಸೇನಾ ಕುಟುಂಬದ ಕುಲದೀಪ್:ಬುಧವಾರ ಪತನಗೊಂಡ ಹೆಲಿಕಾಪ್ಟರನ್ನು ಪಿಎಸ್ ಚೌಹಾನ್ ಮತ್ತು ಕೋ-ಪೈಲಟ್ ಕುಲದೀಪ್ ಸಿಂಗ್ ಚಲಾಯಿಸುತ್ತಿದ್ದರು. ಸಿಂಗ್ ರಾಜಸ್ಥಾನದ ಝುುಂಝುನು ಬಳಿಯ ಘರಡಾನಾ ಖುರ್ದ್ ಗ್ರಾಮದವರು. ಇವರದ್ದು ಸೇನಾಕುಟುಂಬ. ತಂದೆ ರಣಧೀರ್ ಸಿಂಗ್ ರಾವ್ ನೌಕಾಪಡೆಯ ನಿವೃತ್ತ ಅಧಿಕಾರಿ. ತಾಯಿ ಕಮಲಾದೇವಿ ಗೃಹಿಣಿ. ಕುಲದೀಪ್ ಸೋದರಿ ಕೂಡ ನೌಕಾಪಡೆಯಲ್ಲಿದ್ದಾರೆ. ಎರಡು ವರ್ಷದ ಹಿಂದಷ್ಟೇ (2019 ನವೆಂಬರ್ 19) ಸಿಂಗ್ ಮದುವೆ ಮೇರಠ್​ನ ಯಶಸ್ವಿನಿ ಅವರೊಂದಿಗೆ ನಡೆದಿತ್ತು. ಮುಂಬೈಯಲ್ಲಿ ಬಿಎಸ್​ಸಿ ವ್ಯಾಸಂಗ ಪೂರ್ಣಗೊಳಿಸಿದ ಇವರು 2013ರಲ್ಲಿ ವಾಯುಪಡೆಗೆ ಸೇರ್ಪಡೆಯಾಗಿದ್ದರು. ಕುಲದೀಪ್ ಪಾರ್ಥಿವ ಶರೀರ ಗುರುವಾರ ಸಂಜೆ ಘರಡಾನಾ ಖುರ್ದ್ ಗ್ರಾಮಕ್ಕೆ ತಲುಪಿದ್ದು, ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ.
ಇಂದು ಅಂತಿಮ ದರ್ಶನಕ್ಕೆ ಅವಕಾಶ:ಸಿಡಿಎಸ್ ಜನರಲ್ ಬಿ.ಪಿ.ರಾವತ್ ಮತ್ತು ಪತ್ನಿ ಮಧುಲಿಕಾ ಅವರ ಅಂತ್ಯ ಸಂಸ್ಕಾರ ಶುಕ್ರವಾರ ಸಂಜೆ ದೆಹಲಿಯ ಲೋಧಿ ಚಿತಾಗಾರದಲ್ಲಿ ನಡೆಯಲಿದೆ. ಕಾಮರಾಜ್ ಮಾರ್ಗದಲ್ಲಿರುವ ರಾವತ್ ನಿವಾಸದಲ್ಲಿ ಮಧ್ಯಾಹ್ನ 12ರಿಂದ 2ರವರೆಗೆ ಪಾರ್ಥಿವ ಶರೀರಗಳ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗುರುತು ಪತ್ತೆಗೆ ಡಿಎನ್​ಎ ಪರೀಕ್ಷೆ:ಅಪಘಾತದಲ್ಲಿ ಮಡಿದ 13 ಜನರ ಪೈಕಿ ಒಂಬತ್ತು ಶವಗಳ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಡಿಎನ್​ಎ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಡಿಎನ್​ಎ ಪರೀಕ್ಷೆ ಬಳಿಕ ಗುರುತು ಪತ್ತೆ ಹಚ್ಚಿ, ಪಾರ್ಥಿವ ಶರೀರಗಳನ್ನು ಕುಟುಂಬವರ್ಗದವರಿಗೆ ಹಸ್ತಾಂತರಿಸಲಾಗುತ್ತದೆ.
ವರುಣ್ ಸಿಂಗ್ ಬೆಂಗಳೂರಿಗೆ:ಅಪಘಾತದಲ್ಲಿ ಬದುಕಿ ಉಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಆರಂಭಿಕ ಚಿಕಿತ್ಸೆ ಒದಗಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರ ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಗ್ಯ ವಿಚಾರಣೆ:ವರುಣ್ ಸಿಂಗ್ ಅವರ ಆರೋಗ್ಯವನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ವಿಚಾರಿಸಿದರು. ಗುರುವಾರ ಸಂಜೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ಇವರಿಬ್ಬರೂ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚೆ ನಡೆಸಿ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡರು.
ಸುಲೂರ್ ವಾಯುನೆಲೆಯಲ್ಲಿ ಜನಸಾಗರ:ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಸೇರಿದಂತೆ 13 ಜನರ ಪಾರ್ಥಿವ ಶರೀರಗಳು ಗುರುವಾರ ಮಧ್ಯಾಹ್ನ ಸುಲೂರ್ ವಾಯುನೆಲೆಗೆ ಆಗಮಿಸುತ್ತಿದ್ದಂತೆ ಅಂತಿಮ ದರ್ಶನ ಪಡೆಯಲು ಜನರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ‘ವಂದೇಮಾತರಂ’, ‘ಭಾರತ ಮಾತಾ ಕೀ ಜೈ’ ಘೋಷಣೆಗಳನ್ನು ಹಾಕುತ್ತ ಶ್ರದ್ಧಾಂಜಲಿ ಅರ್ಪಿಸಿದರು. ಪಾರ್ಥಿವ ಶರೀರ ಇರಿಸಿದ ಆಂಬುಲೆನ್ಸ್​ಗಳಿಗೆ ಹೂಮಳೆ ಸುರಿಸಿದರು. ಆಂಬುಲೆನ್ಸ್ ಸಮೀಪದಿಂದ ಸಾಗುತ್ತಿದ್ದಂತೆ, ಎರಡೂ ಕೈ ಮುಗಿದು ನಮಿಸಿದರು. ಈ ವೇಳೆ ಬಹುತೇಕರ ಕಣ್ಣಾಲಿಗಳು ತೇವಗೊಂಡಿದ್ದವು.
ರಾಷ್ಟ್ರಪತಿಗೆ ವಿವರ ಸಲ್ಲಿಕೆ:ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಕುನ್ನೂರು ಕಾಪ್ಟರ್ ದುರಂತದ ವಿವರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿದರು. ರಾಷ್ಟ್ರಪತಿಯವರು ಸೇನೆಯ ಸುಪ್ರೀಂ ಕಮಾಂಡರ್ ಆಗಿದ್ದು, ದುರಂತದ ಬಗ್ಗೆ ಬುಧವಾರವೇ ಕಳವಳ ವ್ಯಕ್ತಪಡಿಸಿದ್ದರು.
ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾಧಿಕಾರಿಗಳ ಪೈಕಿ ಲೆ.ಕ. ಹರ್ಜಿಂದರ್ ಸಿಂಗ್ ಉಡುಪಿ ಜಿಲ್ಲೆಯ ಕಾರ್ಕಳದ ಅಳಿಯ. ಅವರು ಕಾರ್ಕಳ ಪುರಸಭೆ ಮಾಜಿ ಉಪಾಧ್ಯಕ್ಷ ದಿ.ಫಿಲಿಪ್ಸ್ ಮಿನೇಜಸ್-ಮೇರಿ ಮಿನೇಜಸ್ ಅವರ ಪುತ್ರಿ ಕ್ಯಾ.ಪ್ರಫುಲ್ಲಾ ಮಿನೇಜಸ್ ಅವರ ಪತಿ. ಪ್ರಫುಲ್ಲಾ ಮಿನೇಜಸ್ -ಹರ್ಜಿಂದರ್ ಸಿಂಗ್ ಪ್ರೀತಿಸಿ ವಿವಾಹವಾಗಿದ್ದರು. ಲೆ.ಕ. ಸಿಂಗ್ ಕಾರ್ಕಳದ ಸಾಲ್ಮರದಲ್ಲಿರುವ ಮಾವನ ಮನೆಗೂ ಬರುತ್ತಿದ್ದರು ಎಂದು ಪ್ರಫುಲ್ಲಾ ಮಿನೇಜಸ್ ಅವರ ಸಹೋದರ ಪುಷ್ಪಾ ಮಿನೇಜಸ್ ವಿವರಿಸಿದ್ದಾರೆ. ಹರ್ಜಿಂದರ್ ಸಿಂಗ್ ಅವರ ಅಂತಿಮದರ್ಶನಕ್ಕೆ ಕುಟುಂಬದ ಸದಸ್ಯರು ದೆಹಲಿಗೆ ತೆರಳಿದ್ದಾರೆ. ಸೇನೆಯಲ್ಲಿದ್ದ ಕ್ಯಾ.ಪ್ರಫುಲ್ಲಾ ಮಿನೇಜಸ್ ಇತ್ತೀಚೆಗೆ ಸ್ವಯಂನಿವೃತ್ತಿ ಪಡೆದು ಸೇನಾ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. 4 ವರ್ಷಗಳ ಹಿಂದೆ ಕಾರ್ಕಳಕ್ಕೆ ಬಂದಿದ್ದ ದಂಪತಿ, ಹಲವು ಸಮಯ ಇಲ್ಲಿ ಕಾಲ ಕಳೆದಿದ್ದರು.
ವಿನಾಯಕ ಚೌತಿಗೆ ಊರಿಗೆ ಬಂದಿದ್ದ ವೇಳೆ ಮತ್ತೆ ಸಂಕ್ರಾಂತಿ ಹಬ್ಬಕ್ಕೆ ಬರುವುದಾಗಿ ಹೇಳಿ ಹೋಗಿದ್ದ ಚಿಂತಾಮಣಿ ತಾಲೂಕಿಗೆ ಹೊಂದಿಕೊಂಡಿರುವ ಅಂಧ್ರದ ಮದನಪಲ್ಲಿಯ ಲ್ಯಾನ್ಸ್ ನಾಯ್್ಕ ಸಾಯಿತೇಜ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ತಮಿಳುನಾಡಿನಲ್ಲಿ ಬುಧವಾರ ಸಂಭವಿಸಿದ ವಾಯುಪಡೆಯ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿ ಹುತಾತ್ಮರಾದ 13 ಮಂದಿಯಲ್ಲಿ ಲ್ಯಾನ್ಸ್ ನಾಯ್್ಕ ಸಾಯಿತೇಜ್ (27) ಸಹ ಒಬ್ಬರಾಗಿದ್ದು, ಕುಟುಂಬದ ರೋದನ ಮುಗಿಲುಮುಟ್ಟಿದೆ. ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಯಿತೇಜ್ ಮೂಲತಃ ಆಂಧ್ರಪ್ರದೇಶದ ಬಿ.ಕೊತ್ತಕೊಟ ಬಳಿಯ ಕುರಬಲಕೋಟ ಮಂಡಲದ ಏಗುವ-ರೇಗಡ ಗ್ರಾಮದವರು. 2012ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್​ಗೆ ಸೇರಿದ್ದರು. ಅಪ್ರೆಂಟಿಸ್ಟ್ ಅವಧಿ ನಂತರ ಕೆಲ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿ ನಂತರ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಸಾಯಿತೇಜ್ ಸಾಮಾನ್ಯ ರೈತಕುಟುಂಬದ ಬೊಗ್ಗುಲ ಮೋಹನ್-ಭುವನೇಶ್ವರಿ ದಂಪತಿಯ ಹಿರಿಯ ಮಗನಾಗಿ 1994ರಲ್ಲಿ ಜನಿಸಿದ್ದು ಪದವಿ ಶಿಕ್ಷಣದ ನಂತರ ಸೇನೆಗೆ ಸೇರಿದ್ದರು. ಆಂಧ್ರದ ಸಿದ್ದಾರೆಡ್ಡಿಗಾರಿಪಲ್ಲಿಯ ಶ್ಯಾಮಲಾ ಅವರೊಂದಿಗೆ 2016ರಲ್ಲಿ ವಿವಾಹವಾಗಿದ್ದು, ಮೋಕ್ಷಜ್ಞ (4), ದರ್ಶಿನಿ (2) ಮಕ್ಕಳಿದ್ದಾರೆ. ಏಗುವ-ರೇಗಡ ಗ್ರಾಮದಲ್ಲಿಯೇ ಕುಟುಂಬ ವಾಸವಿದ್ದು ಮಕ್ಕಳ ವಿದ್ಯಾಭ್ಯಾಸದ ನಿಮಿತ್ತ ಆರು ತಿಂಗಳ ಹಿಂದೆಯಷ್ಟೇ ಮದನಪಲ್ಲಿ ಎಸ್​ಬಿಐ ಕಾಲನಿಯಲ್ಲಿ ಮನೆ ಮಾಡಿದ್ದರು. ಸಾಯಿತೇಜ್ ಅವರ ಸಹೋದರ ಮಹೇಶ್ ಬಾಬು ಕೂಡ ಭಾರತೀಯ ಸೇನೆಯಲ್ಲಿದ್ದು, ಹಿಮಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನವದೆಹಲಿ:ತಮಿಳುನಾಡಿನ ಕುನ್ನೂರು ಸಮೀಪ ಸಂಭವಿಸಿದ ಸೇನಾ ಕಾಪ್ಟರ್ ದುರಂತಕ್ಕೆ ಸಂಬಂಧಿಸಿ ಏರ್​ವಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದಲ್ಲಿ ‘ಟ್ರೖೆಸರ್ವೀಸಸ್ ಇನ್​ಕ್ವೆ ೖರಿ’ ಆರಂಭವಾಗಿದೆ. ಸೇನಾ ಕಾಪ್ಟರ್ ದುರಂತದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಇತರ 11 ಜನರು ಪ್ರಾಣಕಳೆದುಕೊಂಡಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಸಂಸತ್ತಿಗೆ ತಿಳಿಸಿದರು. ಸಂಸತ್ತಿನ ಉಭಯ ಸದನಗಳು ಅಗಲಿದ ಸೇನಾ ಗಣ್ಯರಿಗೆ ಗೌರವ ನಮನ ಸಲ್ಲಿಸಿದವು.
ದುರಂತದ ಬಗ್ಗೆ ಸಚಿವರು ಹೇಳಿದ್ದು:ವೆಲ್ಲಿಂಗ್ಟನ್ ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನ ವಿದ್ಯಾರ್ಥಿ, ಅಧಿಕಾರಿಗಳೊಂದಿಗೆ ಸಿಡಿಎಸ್ ಜನರಲ್ ರಾವತ್ ಅವರು ಸಂವಾದ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು. ಇದರಲ್ಲಿ ಭಾಗವಹಿಸುವುದಕ್ಕಾಗಿ ಭಾರತೀಯ ವಾಯುಪಡೆಯ ‘Mಜಿ175’ ಕಾಪ್ಟರ್​ನಲ್ಲಿ ಸುಲೂರು ವಾಯುನೆಲೆಯಿಂದ ಬುಧವಾರ ಪೂರ್ವಾಹ್ನ 11.48ಕ್ಕೆ ಹೊರಟಿದ್ದು, ಮಧ್ಯಾಹ್ನ 12.15ಕ್ಕೆ ವೆಲ್ಲಿಂಗ್ಟನ್​ನಲ್ಲಿ ಲ್ಯಾಂಡ್ ಆಗಬೇಕಾಗಿತ್ತು. 12.08ರ ತನಕವೂ ಕಾಪ್ಟರ್ ಸುಲೂರ್ ವಾಯುನೆಲೆಯ ಏರ್ ಟ್ರಾಫಿಕ್ ಕಂಟ್ರೋಲ್ ಜತೆಗೆ ಸಂಪರ್ಕದಲ್ಲಿತ್ತು. ನಂತರ ಅದರ ಸಂಪರ್ಕ ಕಡಿತವಾಗಿತ್ತು. ಘಟನಾ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕೆಲಸ ಮಾಡಿದ ಬಳಿಕ ಕಾಪ್ಟರ್ ಪತನದ ವಿಚಾರ ಸ್ಥಳೀಯರ ಅರಿವಿಗೆ ಬಂದಿದೆ. ರಕ್ಷಣಾ ಕಾರ್ಯವನ್ನು ಸ್ಥಳೀಯರು ಮತ್ತು ಸ್ಥಳೀಯಾಡಳಿತದ ಜತೆಗೆ ಮಾಡಲಾಗಿದ್ದು, ಬದುಕಿ ಉಳಿದವರನ್ನು ರಕ್ಷಿಸುವ ಕೆಲಸ ಕ್ಷಿಪ್ರವಾಗಿ ನಡೆದಿತ್ತು. ಆದಾಗ್ಯೂ ಸಿಡಿಎಸ್ ಜನರಲ್ ರಾವತ್ ಸೇರಿ 13 ಜನರನ್ನು ಉಳಿಸಲು ಸಾಧ್ಯವಾಗಿಲ್ಲ.
ಪೊಲೀಸ್ ಕೇಸ್ ದಾಖಲು:ಕುನ್ನೂರು ಕಾಪ್ಟರ್ ದುರಂತಕ್ಕೆ ಸಂಬಂಧಿಸಿ ತಮಿಳುನಾಡು ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದರು. ತನಿಖೆಯನ್ನು ಶುರುಮಾಡಿದ್ದಾರೆ. ನೀಲಗಿರಿ ಜಿಲ್ಲಾ ಪೊಲೀಸರು ಈ ಕೇಸ್ ದಾಖಲಿಸಿದ್ದು, ಸಿಆರ್​ಪಿಸಿ ಸೆಕ್ಷನ್ 174ರ ಪ್ರಕಾರ ಎಫ್​ಐಆರ್ ನಮೂದಾಗಿದೆ. ಎಡಿಎಸ್​ಪಿ ಮುತ್ತುಮಾಣಿಕಮ್ ನೇತೃತ್ವದಲ್ಲಿ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ವರುಣ್ ಸಿಂಗ್​ಗೆ ಶೌರ್ಯ ಚಕ್ರ:ಕಳೆದ ಆಗಸ್ಟ್ ತಿಂಗಳಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಶೌರ್ಯಚಕ್ರದಿಂದ ಗೌರವಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್ 12ರಂದು ತೇಜಸ್ ಲೈಟ್ ಕಾಂಬಾಟ್ ಏರ್​ಕ್ರಾಫ್ಟ್​ನಲ್ಲಿ ದೊಡ್ಡ ತಾಂತ್ರಿಕ ಸಮಸ್ಯೆ ಎದುರಾದಾಗ ಆಗಸ ಮಧ್ಯೆ ಅಪಘಾತಕ್ಕೆ ಈಡಾಗುವುದನ್ನು ಅವರು ತಪ್ಪಿಸಿದ್ದರು. ಇದಕ್ಕಾಗಿ ಈ ಪ್ರಶಸ್ತಿ ಅವರನ್ನು ಅರಸಿಬಂದಿತ್ತು.
ಎಂಎಂ ನರವಣೆ ಮುಂದಿನ ಸಿಡಿಎಸ್?:ಮುಂದಿನ ಚೀಫ್ ಆಫ್ ಆರ್ವಿು ಸ್ಟಾಫ್ ಆಗಿ ಜನರಲ್ ಮನೋಜ್ ಮುಕುಂದ ನರವಣೆ ಅಧಿಕಾರ ಸ್ವೀಕರಿಸಬಹುದು ಎಂದು ಮೂಲಗಳು ಹೇಳುತ್ತಿವೆ. ಆದರೆ ಇದು ಇನ್ನೂ ಖಾತರಿ ಆಗಿಲ್ಲ.
ಮೋಕ್ಷದೀಪ ಸೇವೆ:ಕುನ್ನೂರು ಸಮೀಪ ಸಂಭವಿಸಿದ ಸೇನಾ ಕಾಪ್ಟರ್ ದುರಂತದಲ್ಲಿ ಪ್ರಾಣ ಕಳೆದುಕೊಂಡ ಸಿಡಿಎಸ್ ಜನರಲ್ ರಾವತ್ ಮತ್ತು ಇತರರ ಪರವಾಗಿ ಕಾಂಚೀಪುರಂ ಶ್ರೀ ಕಾಮಾಕ್ಷಿ ಅಮ್ಮನ್ ದೇವಸ್ಥಾನದಲ್ಲಿ ಸ್ಥಳೀಯರು ಮೋಕ್ಷ ದೀಪಂ ಬೆಳಗಿ ಸೇವೆ ಸಲ್ಲಿಸಿದರು. ಕಂಚಿ ಕಾಮಕೋಟಿ ಪೀಠ ಈ ಸೇವೆಯನ್ನು ಆಯೋಜಿಸಿತ್ತು.
ಕೊನೆಯ ಕ್ಷಣದ ವೀಡಿಯೊ:ಸಿಡಿಎಸ್ ರಾವತ್ ಮತ್ತು ಇತರರು ಪಯಣಿಸುತ್ತಿದ್ದ ಕಾಪ್ಟರ್ ನೀಲಗಿರಿ ಅರಣ್ಯ ಪ್ರದೇಶದ ನಡುವೆ ಹೋಗುತ್ತಿರುವಾಗ ಸ್ಥಳೀಯರು ತೆಗೆದ ವೀಡಿಯೊ ಪತ್ತೆಯಾಗಿದೆ. ಈ ವೀಡಿಯೊದಲ್ಲಿ ಕಾಪ್ಟರ್ ದಟ್ಟ ಮಂಜಿನ ಒಳಗೆ ಹೋಗುತ್ತಿರುವುದು ಕಂಡುಬಂದಿದೆ. ದುರಂತ ನಡೆದ ಸ್ಥಳಕ್ಕೆ ಸಮೀಪವೇ, ದುರಂತಕ್ಕೆ ಕೆಲವೇ ನಿಮಿಷ ಮೊದಲು ಈ ವೀಡಿಯೊವನ್ನು ಸ್ಥಳೀಯರು ಚಿತ್ರೀಕರಿಸಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 9 =
Remember me
