ದಿವಾಳಿ ಎಂದು ಘೋಷಿಸಿಕೊಂಡ ಅನಿಲ್ ಅಂಬಾನಿ ಸೇರಿ ಅನೇಕ ಅತಿಶ್ರೀಮಂತರ ಸಂಪತ್ತಿನ ರಹಸ್ಯವನ್ನು ಐಸಿಐಜೆ ತಂಡ ಬಹಿರಂಗಪಡಿಸಿದೆ. ಇದಕ್ಕೆ ಸಂಬಂಧಿಸಿ 14 ಜಾಗತಿಕ ಕಾರ್ಪೆರೇಟ್ ಸೇವಾ ಸಂಸ್ಥೆಗಳ 11.9 ದಶಲಕ್ಷ ದಾಖಲೆಗಳನ್ನು ಇದೇ ತಂಡ ಬಹಿರಂಗಪಡಿಸಿದೆ. ಈ ಜಾಗತಿಕ ಕಾರ್ಪೆರೇಟ್ ಸೇವಾ ಸಂಸ್ಥೆಗಳು ಅಂದಾಜು 29,000ದಷ್ಟು ಸಾಗರೋತ್ತರ ಕಂಪನಿಗಳನ್ನು ಮತ್ತು ಖಾಸಗಿ ಟ್ರಸ್ಟ್​ಗಳನ್ನು ಸಿಂಗಾಪುರ, ನ್ಯೂಜಿಲ್ಯಾಂಡ್, ಅಮೆರಿಕ ಸೇರಿ ತೆರಿಗೆ ಸ್ವರ್ಗ ರಾಷ್ಟ್ರಗಳಲ್ಲಿ ಸ್ಥಾಪಿಸುವ ಕಾರ್ಯದಲ್ಲಿ ಈ ಅತಿಶ್ರೀಮಂತರಿಗೆ ನೆರವಾಗಿವೆ ಎಂಬ ಅಂಶ ಇದರ ಮೂಲಕ ಬಹಿರಂಗವಾಗಿದೆ. ಶ್ರೀಮಂತರು, ಪ್ರಖ್ಯಾತರು, ಕುಖ್ಯಾತರು ಮತ್ತು ತನಿಖಾ ಸಂಸ್ಥೆಗಳ ನಿಗಾದಲ್ಲಿರುವ ಪ್ರಭಾವಿಗಳು ವೈಯಕ್ತಿಕ ಸಂಪತ್ತು ಕಾಪಾಡಲು ಹಲವು ಸ್ತರಗಳ ಸಂಕೀರ್ಣ ಟ್ರಸ್ಟ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ತೆರಿಗೆ ವಂಚನೆ ಸೇರಿ ಹಲವು ರೀತಿಯ ಅಕ್ರಮ ಇದರಲ್ಲಿ ಅಡಗಿದೆ ಎಂಬ ವಿವರ ಪಂಡೋರಾ ಪೇಪರ್ಸ್ ಮೂಲಕ ಬಹಿರಂಗವಾಗಿದೆ.
ಹಲವು ಟ್ರಸ್ಟ್​ಗಳ ರಚನೆಯಾಗಿದೆ, ಇವುಗಳಲ್ಲಿ ಕೆಲವು ದೃಢೀಕರಿಸಲ್ಪಟ್ಟವು, ಇನ್ನು ಹಲವು ನಿಷ್ಕ್ರಿಯವಾಗಿವೆ. ಈ ರೀತಿ ಅಕ್ರಮದ ಹಿಂದೆ ಎರಡು ಉದ್ದೇಶಗಳು ಅಡಗಿವೆ- ನೈಜ ಗುರುತು ಮರೆಮಾಚಿ ತೆರಿಗೆ ಅಧಿಕಾರಿಗಳಿಗೆ ಸುಳಿವೂ ಸಿಗದಂತೆ ವಿದೇಶಿ ಸಂಸ್ಥೆಗಳ ಹೆಸರಿನಲ್ಲಿ ಸಂಪತ್ತು ರಕ್ಷಿಸುವುದು, ಇನ್ನೊಂದು ಹೂಡಿಕೆ, ನಗದು ಮತ್ತು ಷೇರುಗಳು, ರಿಯಲ್​ಎಸ್ಟೇಟ್, ಆರ್ಟ್, ಏರ್​ಕ್ರಾಫ್ಟ್, ಯಾಚ್ ಮುಂತಾದವುಗಳನ್ನು ಸುರಕ್ಷಿತವಾಗಿರಿಸುವುದು.
ಅನಿಲ್ ಅಂಬಾನಿ ದಿವಾಳಿ ಅಲ್ಲ!:ಮೂರು ಚೀನಿ ಬ್ಯಾಂಕುಗಳ ಜತೆಗಿನ ಬಿಕ್ಕಟ್ಟಿನ ಕಾರಣ ಉದ್ಯಮಿ ಅನಿಲ್ ಅಂಬಾನಿ 2020ರ ಫೆಬ್ರವರಿಯಲ್ಲಿ ಲಂಡನ್ ಕೋರ್ಟ್​ನಲ್ಲಿ ದಿವಾಳಿ ಘೋಷಣೆ ಮಾಡಿದ್ದರು. ಬ್ಯಾಂಕುಗಳಿಗೆ 716 ದಶಲಕ್ಷ ಡಾಲರ್ ಪಾವತಿಸಬೇಕು ಎಂದು ಕೋರ್ಟ್ ಇದಕ್ಕೂ ಮುನ್ನ ಆದೇಶ ನೀಡಿತ್ತು. ಆದರೆ, ಅನಿಲ್ ಅಂಬಾನಿ ಎಲ್ಲಿಯೂ ತಮ್ಮ ಸಾಗರೋತ್ತರ ಸಂಪತ್ತಿನ ರಹಸ್ಯ ಬಿಟ್ಟುಕೊಟ್ಟಿರಲಿಲ್ಲ. ಇದರ ಮೌಲ್ಯ 1.3 ಕೋಟಿ ಡಾಲರ್ ಎಂಬುದು ಪಂಡೋರಾ ಮೂಲಕ ಬಹಿರಂಗವಾಗಿದೆ.
ರಹಸ್ಯ ಹೂಡಿಕೆಗಳು:ಐಸಿಐಜೆ ಪ್ರಕಾರ, ತೆರಿಗೆ ಇರದ ‘ಸ್ವರ್ಗ’ಗಳಾಗಿರುವ ಹೊರ ರಾಷ್ಟ್ರಗಳಲ್ಲಿ ಸಾವಿರ ಕಂಪನಿಗಳ ಮೂಲಕ ನೂರಾರು ಜನರು ಹೂಡಿಕೆ ಮಾಡಿದ್ದಾರೆ. ಜಗತ್ತಿನ 330ಕ್ಕೂ ಹೆಚ್ಚು ಹಾಲಿ, ಮಾಜಿ ರಾಜಕಾರಣಿಗಳು, ಗಣ್ಯರ ರಹಸ್ಯ ಖಾತೆಗಳ ದಾಖಲೆಗಳು ಸೋರಿಕೆಯಾಗಿವೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್​ರೊಂದಿಗೆ ಹಲವು ವರ್ಷಗಳ ರಹಸ್ಯ ಸಂಬಂಧ ಹೊಂದಿದ್ದ ಸ್ವೆಟ್ಲಾನಾ ಕ್ರಿವೊನೋಗಿಖ್ ಅಂದಾಜು 100 ಮಿಲಿಯನ್ ಡಾಲರ್ (744 ಕೋಟಿ ರೂ.) ಮೌಲ್ಯದ ಆಸ್ತಿ ಹೊಂದಿರುವುದನ್ನು ಪಂಡೋರಾ ಪೇರ್ಪರ್ಸ್ ಬಹಿರಂಗ ಪಡಿಸಿದೆ. ಅಲ್ಲದೆ, ಜೋರ್ಡನ್​ನ ರಾಜ ಎರಡನೇ ಅಬ್ದುಲ್ಲಾ, ಇಂಗ್ಲೆಂಡ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ಜೆಕ್ ರಿಪಬ್ಲಿಕನ್ ಪ್ರಧಾನಿ ಆಂಡ್ರೆಜ್ ಬಾಬಿಸ್, ಕೀನ್ಯಾ ಅಧ್ಯಕ್ಷ ಉಹುರು ಕೀನ್ಯಾಟಾ, ಈಕ್ವೆಡಾರ್ ಅಧ್ಯಕ್ಷ ಗಿಲೆರ್ವೆ ಲಾಸೊ ಅವರ ತೆರಿಗೆ ಕಳ್ಳತನ ಮತ್ತು ರಹಸ್ಯ ಹೂಡಿಕೆಗಳ ದಾಖಲೆಗಳೂ ಬಹಿರಂಗವಾಗಿವೆ.
ಪನಾಮಾ, ಪ್ಯಾರಡೈಸ್​ಗಿಂತ ಭಿನ್ನ ಪನಾಮಾ ಮತ್ತು ಪ್ಯಾರಡೈಸ್ ಪೇಪರ್ಸ್ ಮೂಲಕ ವ್ಯಕ್ತಿಗಳು ಮತ್ತು ಕಾರ್ಪೆರೇಟ್ ಸಂಸ್ಥೆಗಳು ಬೇನಾಮಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದನ್ನು ಬಹಿರಂಗಪಡಿಸಿದ್ದವು. ಟ್ರಸ್ಟ್ ಮೂಲಕ ವಂಚನೆ ಎಸಗುತ್ತಿರುವುದನ್ನು ಪಂಡೋರಾ ಪೇಪರ್ಸ್ ಬಹಿರಂಗಪಡಿಸಿದೆ.
ಬ್ಯಾಂಕುಗಳಿಗೆ 13,600 ಕೋಟಿ ರೂಪಾಯಿಗೂ ಅಧಿಕ ವಂಚಿಸಿದ ನೀರವ್ ಮೋದಿ ವಿದೇಶಕ್ಕೆ ಪಲಾಯನ ಮಾಡಿದ ವೇಳೆ ಸಂಪತ್ತು ರಕ್ಷಣೆಗೆ ಆತನ ಸಹೋದರಿ ಪೂರ್ವಿ ಮೋದಿ ಸಿಂಗಾಪುರದ ಟ್ರೖೆಡೆಂಟ್ ಟ್ರಸ್ಟ್ ಕಂಪನಿ ಮೂಲಕ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ (ಬಿವಿಐ)ನಲ್ಲಿ ದ ಡೆಪಾಸಿಟ್ ಟ್ರಸ್ಟ್ ಸ್ಥಾಪಿಸಿ ಪ್ರೊಟೆಕ್ಟರ್ ಆಗಿ ಬ್ರೂಕ್ಟನ್ ಮ್ಯಾನೇಜ್​ವೆುಂಟ್ ಲಿಮಿಟೆಡ್ ಅನ್ನು ನೇಮಕ ಮಾಡಿದ್ದು ಬಹಿರಂಗವಾಗಿದೆ. ಬೆಂಗಳೂರು ಮೂಲದ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಅವರ ಪತಿ ಜಾನ್ ಮೆಕಲಮ್ ಮಾರ್ಷಲ್ ಷಾ (ಬ್ರಿಟಿಷ್ ಪ್ರಜೆ) ಸಂಪತ್ತಿನ ವಿವರ ಪಂಡೋರಾ ಮೂಲಕ ಬಹಿರಂಗವಾಗಿದೆ. ಈ ವರ್ಷ ಜುಲೈ 8ರಂದು ಅಲೆಗ್ರೊ ಕ್ಯಾಪಿಟಲ್ ಪ್ರೖೆವೇಟ್ ಲಿಮಿಟೆಡ್ ಮತ್ತು ಅದರ ಬಹುದೊಡ್ಡ ಪಾಲುದಾರ ಬೆಂಗಳೂರಿನ ಕುನಾಲ್ ಅಶೋಕ್ ಕಶ್ಯಪ್ ಇನ್​ಸೈಡರ್ ಟ್ರೇಡಿಂಗ್​ನಲ್ಲಿ ಭಾಗವಹಿಸಿ ಗಳಿಸಿದ 24.68 ಲಕ್ಷವನ್ನು ಮೂರೂವರೆ ವರ್ಷದ ಅವಧಿಗೆ 12 % ಬಡ್ಡಿದರದಲ್ಲಿ ಮರುಪಾವತಿಸುವಂತೆ ಸೆಬಿ ಸೂಚಿಸಿತ್ತು. ಅಲ್ಲದೆ, ತಲಾ 10 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಬಯೋಕಾನ್ ಲಿಮಿಟೆಡ್​ನ 8.5 ಕೋಟಿ ಡಾಲರ್ ಷೇರುಗಳು ಜಾನ್ ಬಳಿ ಇವೆ. ದ ಡೀನ್​ಸ್ಟನ್ ಟ್ರಸ್ಟ್​ನ ಪ್ರೊಟೆಕ್ಟರ್ ಕುನಾಲ್ ಅಶೋಕ್ ಕಶ್ಯಪ್ ಎಂಬ ಅಂಶ ಈಗ ಬಹಿರಂಗವಾಗಿದೆ.
700 ಪಾಕಿಸ್ತಾನೀಯರು:ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತರು, ಪಕ್ಷಕ್ಕೆ ದೇಣಿಗೆ ಕೊಡುವವರು ಸೇರಿ 700 ಪಾಕಿಸ್ತಾನೀಯರ ಸಂಪತ್ತು ಟ್ರಸ್ಟ್ ಗಳ ರಕ್ಷಣೆಯಲ್ಲಿ ಭದ್ರವಾಗಿದೆ ಎಂಬ ಅಂಶ ಪಂಡೋರಾ ಮೂಲಕ ಬಹಿರಂಗವಾಗಿದೆ. ಪಾಕ್​ನ ಜಲ ಸಂಪನ್ಮೂಲ ಸಚಿವ ಮೂನಿಸ್ ಎಲಾಹಿ ಮತ್ತು ಹಣಕಾಸು ಸಚಿವ ಶೌಕತ್ ತಾರಿನ್ ಹೆಸರು ಕೂಡ ಈ ಪಟ್ಟಿಯಲ್ಲಿದೆ.
ಟ್ರಸ್ಟ್ ಎಂದರೆ…:ಸೆಟ್ಲರ್, ಟ್ರಸ್ಟೀ ಮತ್ತು ಬೆನಿಫಿಶಿಯರಿ ಎಂಬ ಮೂವರನ್ನು ಒಳಗೊಂಡ ಸಾಂಸ್ಥಿಕ ರಚನೆ ಇದು. ಸೆಟ್ಲರ್ ಇಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಬೆನಿಫಿಶಿಯರಿ ಅಥವಾ ಫಲಾನುಭವಿಯ ಸಂಪತ್ತು ರಕ್ಷಣೆಗೆ ಪ್ರೊಟೆಕ್ಟರ್ ಒಬ್ಬನನ್ನು ನೇಮಿಸುತ್ತಾನೆ. ಟ್ರಸ್ಟಿಯನ್ನು ಬದಲಾಯಿಸುವ ಅಧಿಕಾರ ಈತನಿಗೆ ಇರುತ್ತದೆ. ಭಾರತದಲ್ಲಾಗಲೀ, ವಿದೇಶಗಳಲ್ಲಾಗಲೀ ಟ್ರಸ್ಟ್ ರಚನೆ ಅಕ್ರಮ ವಲ್ಲ. ವಿದೇಶಗಳಲ್ಲಿ ಟ್ರಸ್ಟ್ ರಚಿಸಿ ಅದರ ಮೂಲಕ ಅಕ್ರಮ ಎಸಗುತ್ತಿರುವುದು ಈ ದಾಖಲೆಗಳ ಮೂಲಕ ಬಹಿರಂಗವಾಗಿದೆ.
ಪಂಡೋರಾ ಕೇಸ್​ಗಳ ತನಿಖೆ?:ಪಂಡೋರಾ ಪೇಪರ್ಸ್ ಲೀಕ್ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಸಿಬಿಡಿಟಿ ಚೇರ್ಮನ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು ನಿಗಾವಹಿಸಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಸೋಮವಾರ ತಿಳಿಸಿದೆ.
ತೆಂಡುಲ್ಕರ್​ಗೂ ಬಿವಿಐ ಕಂಪನಿ:ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ಅವರ ಪತ್ನಿ ಅಂಜಲಿ, ಮಾವ ಆನಂದ್ ಮೆಹ್ತಾ ಕೂಡ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ಕಂಪನಿ ಫಲಾನುಭವಿಗಳು. ಸಾಸ್ ಇಂಟರ್​ನ್ಯಾಷನಲ್ ಲಿಮಿಟೆಡ್​ನ ಷೇರುಗಳನ್ನು ರಕ್ಷಿಸಲು ಅವರು ಅಲ್ಕೋಗಾಲ್ ಸಂಸ್ಥೆಯ ನೆರವನ್ನು ಪಡೆದಿದ್ದರು. ಸಚಿನ್ ತೆಂಡುಲ್ಕರ್ (9 ಷೇರುಗಳು)- 8,56,702 ಡಾಲರ್, ಅಂಜಲಿ ತೆಂಡುಲ್ಕರ್ (14 ಷೇರುಗಳು) 13,75,714 ಡಾಲರ್, ಆನಂದ ಮೆಹ್ತಾ (5 ಷೇರುಗಳು) – 4,53,082 ಡಾಲರ್.
ಜಾಕಿಶ್ರಾಫ್​ಗೂ ಬಿವಿಐ ನಂಟು:ಬಾಲಿವುಡ್ ನಟ ಜಾಕಿಶ್ರಾಫ್ ಕೂಡ ಬಿವಿಐ ಕಂಪನಿ ನಂಟುಹೊಂದಿದ್ದಾರೆ ಎನ್ನಲಾಗಿದೆ. ಅವರು ಏಷ್ಯಾಸಿಟಿ ಟ್ರಸ್ಟ್ ನ್ಯೂಜಿಲೆಂಡ್ ಲಿಮಿಟೆಡ್​ನ ನೆರವು ಪಡೆದು ಮಿಲಿಯನ್​ಸ್ಟಾಕ್ ಹೋಲ್ಡಿಂಗ್ಸ್ ಲಿಮೆಟೆಡ್ ಕಂಪನಿಯನ್ನು ಹೊಂದಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + eight =
Remember me
