ಹಲವು ರಂಗಗಳಲ್ಲಿ ಜಾಗತಿಕವಾಗಿ ಗಮನ ಸೆಳೆದಿರುವ ಭಾರತ, ಕೃಷಿ ಮತ್ತು ವಿಜ್ಞಾನ-ತಂತ್ರಜ್ಞಾನದಲ್ಲೂ ಈ ವರ್ಷ ಹಲವು ಮೈಲಿಗಲ್ಲುಗಳನ್ನು ದಾಖಲಿಸಿದ್ದು ವಿಶೇಷ. ಕರೊನಾ ಸೃಷ್ಟಿಸಿದ್ದ ಹಿನ್ನಡೆಯನ್ನು ನಿವಾರಿಸಿಕೊಂಡು, ಮುಂದಡಿ ಇಟ್ಟಿದ್ದಲ್ಲದೆ, ಹೊಸ ವಿಕ್ರಮಗಳನ್ನು ಸಾಕಾರಗೊಳಿಸಿದ್ದು ಹೆಮ್ಮೆಯ ಸಂಗತಿ. ಭಾರತ ಚಂದ್ರಯಾನದಲ್ಲಿ ಸಾಧಿಸಿದ ಯಶಸ್ಸನ್ನು ಜಗತ್ತಿನ ಬಹುತೇಕ ದೇಶಗಳು ಕೊಂಡಾಡಿದವು.
ಆರ್. ತುಳಸಿಕುಮಾರ್ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ನೌಕೆಯನ್ನು ಇಳಿಸಿದ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿತು. ಆಗಸ್ಟ್ 23ರಂದು ಈ ಐತಿಹಾಸಿಕ ಸಾಧನೆ ಮೂಲಕ ಭಾರತ ಗಣ್ಯರಾಷ್ಟ್ರಗಳ ಪಟ್ಟಿಗೆ ಸೇರಿತು. ಕಡಿಮೆ ವೆಚ್ಚದಲ್ಲಿ ಹಿರಿದಾದ ವಿಕ್ರಮ ಸಾಧಿಸಿದ ಇಸ್ರೋ ಸಂಸ್ಥೆಯನ್ನು ವಿಶ್ವದ ಮುಂದುವರಿದ ರಾಷ್ಟ್ರಗಳು ಮುಕ್ತಕಂಠದಿಂದ ಶ್ಲಾಘಿಸಿದವು. ಈ ಮಹತ್ಸಾಧನೆ ಬೆನ್ನಲ್ಲೇ ಸೆಪ್ಟೆಂಬರ್ 2ರಂದು ಸೂರ್ಯನ ಅಧ್ಯಯನಕ್ಕಾಗಿ ‘ಆದಿತ್ಯ ಎಲ್-1’ ಉಪಗ್ರಹದ ಉಡಾವಣೆ ಯಶಸ್ವಿಯಾಯಿತು. ಈ ಸಾಧನೆಯ ನೇತೃತ್ವ ವಹಿಸಿರುವ ಇಸ್ರೋದ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರಿಗೆ ಕರ್ನಾಟಕ ಸರ್ಕಾರ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ.
ಇ-ವಾಹನಗಳಿಗೆ ಶುಕ್ರದೆಸೆ:ಹಸಿರು ಇಂಧನ ಬಳಕೆ ಹಿನ್ನೆಲೆಯಲ್ಲಿ ಇ-ವಾಹನಗಳ ಬಳಕೆ ಈ ವರ್ಷ ದುಪ್ಪಟ್ಟುಗೊಂಡಿದೆ. ಬಸ್, ಕಾರ್, ಲಾರಿ, ಟ್ಯಾಕ್ಟರ್ ಎಲ್ಲವೂ ವಿದ್ಯುತ್​ಚಾಲಿತ ವಾಗುತ್ತಿವೆ. ಬೆಂಗಳೂರಿನಲ್ಲಿ ನವೆಂಬರ್​ನಲ್ಲಿ ನಡೆದ ಎಕ್ಸಾನ್ ಏಷ್ಯಾ ಮಟ್ಟದ ಸಮ್ಮೇಳನದಲ್ಲಿ ಭಾರತೀಯ ಕಂಪನಿಯೊಂದು ಇಲೆಕ್ಟ್ರಿಕ್​ಚಾಲಿತ ಎಕ್ಸ್​ಕವೇಟರ್ (ಜೆಸಿಬಿ ಮಾದರಿ) ಬಿಡುಗಡೆ ಮಾಡಿದೆ. ಬ್ರಿಟನ್ ಮೂಲದ ಸ್ಯಾಕ್ಸನ್​ಏರ್ ಕಂಪನಿ ವಿಶ್ವದ ಮೊದಲ ಪ್ರಮಾಣೀಕೃತ ಇಲೆಕ್ಟ್ರಿಕ್ ವಿಮಾನ ಹಾರಾಟ ನಡೆಸಿ ಸಫಲತೆ ಹೊಂದಿತು.
ಎಐ ಕ್ರಾಂತಿ:ಈ ವರ್ಷ ಕೃತಕ ಬುದ್ಧಿಮತ್ತೆ (ಎಐ) ಮತ್ತಷ್ಟು ಮುನ್ನೆಲೆಗೆ ಬಂದಿದೆ. ವಿಶ್ವದೆಲ್ಲೆಡೆ ಇದರ ಉಪಯೋಗಗಳನ್ನು ಹಲವು ಖಾಸಗಿ ಕಂಪನಿಗಳು ಹಾಗೂ ವಿಶ್ವವಿದ್ಯಾಲಯಗಳು ಪಡೆದುಕೊಂಡಿವೆ. ಭಾರತದಲ್ಲಿ ಮೊದಲ ಎಐ ನ್ಯೂಸ್ ಆಂಕರ್ ‘ಸನಾ’ (ಲೀಸಾ ಎಐ ಪ್ರಾದೇಶಿಕ ಮೊದಲ ಆಂಕರ್) ಟಿವಿ ಪರದೆಗೆ ಲಗ್ಗೆಯಿಟ್ಟಳು. ಇದರ ಬೆನ್ನಲ್ಲೇ ಕನ್ನಡ ಸಹಿತ ಕೆಲ ಪ್ರಾದೇಶಿಕ ಭಾಷೆಗಳ ವಾಹಿನಿಗಳು ಇದನ್ನು ಅನುಸರಿಸಿದವು. ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಿದ ಪರಿಣಾಮ ಉದ್ಯೋಗ ನಷ್ಟವೂ ಆರಂಭವಾಯಿತು. ಪೇಟಿಎಂ ಸಂಸ್ಥೆ ಒಂದು ಸಾವಿರ ಉದ್ಯೋಗಿಗಳನ್ನು ಕೈಬಿಟ್ಟಿದ್ದು ಇದಕ್ಕೊಂದು ಉದಾಹರಣೆ.
ಮನೆಗಳಲ್ಲೂ ರೋಬಾಟ್ ಬಳಕೆ:ಕೈಗಾರಿಕೆಗಳಿಗೆ ಸೀಮಿತವಾಗಿದ್ದ ರೋಬಾಟ್​ಗಳು ಈಗ ಗಣಿ, ಪ್ರಯೋಗಾಲಯ, ಆಸ್ಪತ್ರೆಗಳಿಗೂ ಕಾಲಿರಿಸಿವೆ. ಮನೆಗಳಲ್ಲಿ ಕೆಲಸಕ್ಕೆ ಸಹಾಯ ಮಾಡುವ ಸ್ಮಾರ್ಟ್ ರೋಬಾಟ್​ಗಳನ್ನು ಬರುವ 3-4 ವರ್ಷಗಳಲ್ಲಿ ಹೊಸ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಜನರಿಗೆ ಒದಗಿಸುವ ಭರವಸೆಯನ್ನು ಟೆಕ್ ದೈತ್ಯ ಎಲಾನ್ ಮಸ್ಕ್ ಪ್ರಕಟಿಸಿದ್ದಾರೆ. ಇದು ಇನ್ನಷ್ಟು ಕ್ಷೇತ್ರಗಳಲ್ಲಿ ಬಳಕೆಗೂ ಬಾಗಿಲು ತೆರೆಯಲು ಅವಕಾಶ ಮಾಡಿಕೊಟ್ಟಿದೆ.
ಚಾಲಕರಹಿತ ಕಾರು!:ಎಐ ತಂತ್ರಜ್ಞಾನ ಆಧಾರಿತ ಚಾಲಕರಹಿತ ಕಾರುಗಳ ತಯಾರಿಕೆ ಈ ವರ್ಷವೂ ಗಮನ ಸೆಳೆದಿದೆ. ಪ್ರಸಿದ್ಧ ಮರ್ಸಿಡಿಸ್ ಬೆನ್ಜ್ ಕಂಪನಿ ದೊಡ್ಡ ಗಾತ್ರದ ಕಾರನ್ನು ತಯಾರಿಸಿದ್ದು, ವರ್ಷಾಂತ್ಯಕ್ಕೆ ಬಿಡುಗಡೆ ಮಾಡಲಿದೆ. ಜನರಲ್ ಮೋಟಾರ್ಸ್ ಸಹಿತ ಕೆಲ ಕಂಪನಿಗಳು ಡ್ರೖೆವರ್​ಲೆಸ್ ಕಾರುಗಳನ್ನು ಲೋಕಾರ್ಪಣೆ ಮಾಡಲು ಸಜ್ಜಾಗಿವೆ. ಬೆಂಗಳೂರು ಮೂಲದ ಸ್ಟಾರ್ಟಪ್ ಕಂಪನಿ ‘ಮೈನಸ್ ಝೀರೊ’ ದೇಶದ ಮೊದಲ ಚಾಲಕರಹಿತ ಕಾರು ಮಾದರಿಯನ್ನು ಬಿಡುಗಡೆ ಮಾಡಿತು. ಮುಂದಿನ 2 ವರ್ಷದಲ್ಲಿ ಸಾರ್ವಜನಿಕ ಬಳಕೆಗೆ ತಯಾರಿಸಿ ಮಾರಾಟ ಮಾಡುವ ಘೋಷಣೆಯನ್ನು ಹೊರಡಿಸಿತು.
ಬದಲಾದ ಟ್ವಿಟರ್:ಸಾಮಾಜಿಕ ಜಾಲತಾಣದ ಮುಂಚೂಣಿ ವೇದಿಕೆ ಟ್ವಿಟರ್ ತನ್ನ ಲೋಗೋ ಬದಲಿಸಿ ಭಾರಿ ಸುದ್ದಿ ಮಾಡಿತು. ನೀಲಿವರ್ಣದ ಹಕ್ಕಿಯ ಬದಲು ಕಪು್ಪವರ್ಣದ ‘ಎಕ್ಸ್’ ಮಾದರಿಗೆ ರೂಪಾಂತರ ಗೊಂಡಿರುವುದನ್ನು ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಪ್ರಕಟಿಸಿದರು. ಇದು ಪರ-ವಿರೋಧದ ಚರ್ಚೆಗೆ ಗ್ರಾಸ ಒದಗಿಸಿದರೂ, ಬಳಕೆದಾರರು ಎಕ್ಸ್ ನೊಂದಿಗೆ ಹೊಸ ಸಂಬಂಧವನ್ನು ಮುಂದುವರಿಸಲು ಸಾಥ್ ನೀಡಿದ್ದಾರೆ.
ಶೂನ್ಯ ಇಂಗಾಲಕ್ಕಾಗಿ ಒಮ್ಮತ:ಹವಾಮಾನ ಬದಲಾವಣೆಯಿಂದಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿವೆ. ಇದಕ್ಕೆ ಇಂಗಾಲದಿಂದಾಗುತ್ತಿರುವ ಮಾಲಿನ್ಯ ನೇರ ಕಾರಣವಾಗಿದೆ. ಪ್ಯಾರಿಸ್ ಶೃಂಗದಲ್ಲಾಗಿರುವ ಒಪ್ಪಂದವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ವಾಗ್ದಾನವನ್ನು ಮುಂದುವರಿದ ದೇಶಗಳು ನೀಡಿವೆ. ಭಾರತ ಕೂಡ 2050ಕ್ಕೆ ಶೇಕಡ 50 ಹಾಗೂ 2070ರ ವೇಳೆಗೆ ಶೂನ್ಯ ಇಂಗಾಲ ಘೋಷಣೆಯನ್ನು ಸಾಕಾರಗೊಳಿಸುವತ್ತ ಲಕ್ಷ್ಯ ಹರಿಸಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದೆ.
ಮುಖಚಹರೆ ಗುರುತು ನೀಡಿ ಬೋರ್ಡಿಂಗ್:ಯುಎಇಯಲ್ಲಿ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ಮುಖಚಹರೆ ಆಧರಿಸಿ ಪ್ರಯಾಣಿಕರಿಗೆ ಬೋರ್ಡಿಂಗ್​ಗೆ ಅವಕಾಶ ನೀಡುವ ಸೌಲಭ್ಯವನ್ನು ನವೆಂಬರ್​ನಿಂದ ಪರಿಚಯಿಸಿದೆ. ಇದಕ್ಕಾಗಿ ಎಐ ತಂತ್ರಜ್ಞಾನವನ್ನು ಬಳಸಲಾಗಿದೆ. ಹೆಚ್ಚು ಸಮಯ ತಪಾಸಣೆ ಸ್ಥಳದಲ್ಲಿ ನಿಲ್ಲುವ ಪ್ರಮೇಯ ಇರದು. ಪ್ರಯಾಣಿಕನೊಬ್ಬ ನಡೆದುಕೊಂಡು ಬರುತ್ತಿದ್ದಂತೆ ಆತನ ಮುಖಚಹರೆ ಸೆರೆಹಿಡಿದು ಮಾಹಿತಿ ಹೆಕ್ಕಿ ಒಳಪ್ರವೇಶಿಸಲು ಅವಕಾಶ ಮಾಡಿಕೊಡಲಿದೆ.
ಸಿರಿಧಾನ್ಯ ಬಳಕೆಗೆ ಉತ್ತೇಜನ:ಜಾಗತಿಕ ಸಿರಿಧಾನ್ಯ ವರ್ಷವನ್ನು ಭಾರತ ಸೇರಿ ವಿಶ್ವದ 73 ರಾಷ್ಟ್ರಗಳಲ್ಲಿ ಆಚರಿಸಲಾಯಿತು. ವರ್ಷದುದ್ದಕ್ಕೂ ಮಿಲೆಟ್ ಕುರಿತು ಸಮ್ಮೇಳನ, ಶೃಂಗಸಭೆ, ಸಂವಾದ, ಚರ್ಚಾಗೋಷ್ಠಿ ನಡೆದವು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಿರಿಧಾನ್ಯ ಉತ್ಪನ್ನಗಳ ಬೆಳೆಗಳಿಗೆ ಹೆಚ್ಚಿನ ಅನುದಾನ ನಿಗದಿ ಮಾಡಿ ರೈತರ ಬೆಂಬಲಕ್ಕೆ ನಿಂತಿವೆ. ಪೌಷ್ಟಿಕಾಂಶಗಳ ಆಗರವಾಗಿರುವ ಸಿರಿಧಾನ್ಯವನ್ನು ಪಡಿತರದ ಮೂಲಕ ಜನರಿಗೆ ಒದಗಿಸಲು ಕೇಂದ್ರ ಸರ್ಕಾರದಿಂದ ಆಯಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.
ಬಡವರಿಗೆ ಅಕ್ಕಿ ವಿತರಣೆ:ದೇಶದಲ್ಲಿ ಆಹಾರ ಭದ್ರತೆ ಅಡಿಯಲ್ಲಿ ಬಡವರಿಗೆ ವಿತರಿಸಲಾಗುತ್ತಿರುವ ಉಚಿತ ಅಕ್ಕಿಯನ್ನು ಇನ್ನೂ 5 ವರ್ಷ ಮುಂದುವರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ವ್ಯಕ್ತಿಗಳಿಗೆ ತಲಾ ಐದು ಕೆಜಿ ಅಕ್ಕಿ ನೀಡಲಾಗುತ್ತಿದೆ. ಇದರಿಂದ 81.35 ಕೋಟಿ ಜನರಿಗೆ ಅನುಕೂಲವಾಗಲಿದೆ. ಕೃಷಿಕರಿಗೂ ಭತ್ತವನ್ನು ಹೆಚ್ಚಾಗಿ ಬೆಳೆದು ಆದಾಯವೃದ್ಧಿಗೂ ಅವಕಾಶ ಕಲ್ಪಿಸಿದೆ.
10 ರಾಜ್ಯಗಳಲ್ಲಿ ಬರದ ಛಾಯೆ:ದೇಶದಲ್ಲಿ ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದ ಕಾರಣ ಜಲಸಂಕಷ್ಟ ಎದುರಾಗಿದೆ. ಕರ್ನಾಟಕ ಸೇರಿ ದಕ್ಷಿಣ ಹಾಗೂ ಉತ್ತರ ಭಾರತದ 10 ರಾಜ್ಯಗಳು ಅನಾವೃಷ್ಟಿ ಎದುರಿಸುತ್ತಿವೆ. ಕೇಂದ್ರ ಸರ್ಕಾರ ಭತ್ತ, ಕಬ್ಬು ಸೇರಿ ಹಲವು ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿ ರೈತರ ಕೈಹಿಡಿದಿದೆ. ಆದರೂ ಇನ್ನಷ್ಟು ಪರಿಹಾರ ಒದಗಿಸಬೇಕು ಎಂಬುದಾಗಿ ಆಯಾ ರಾಜ್ಯ ಸರ್ಕಾರಗಳು ಹಾಗೂ ಕೃಷಿಕರು ಒತ್ತಾಯಿಸಿದ್ದಾರೆ. ಕರ್ನಾಟಕದಲ್ಲಂತೂ 236 ತಾಲೂಕುಗಳ ಪೈಕಿ 223ರಲ್ಲಿ ಬರ ಆವರಿಸಿದೆ. ಇದರಿಂದ ಒಟ್ಟು 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಕೃಷಿ ಹಾಗೂ ಕೃಷಿ ಸಂಬಂಧಿತ ವಲಯಕ್ಕೆ ಹೊಡೆತ ಬಿದ್ದಿದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ, ಅಕ್ಕಿ ಸೇರಿದಂತೆ ವಿವಿಧ ಬೇಳೆಕಾಳುಗಳ ದರ ಗಗನಕ್ಕೇರಿದೆ. ರೈತರಿಗೆ ಮಧ್ಯಂತರ ವಿಮೆ ಪರಿಹಾರಕ್ಕೆ ರಾಜ್ಯ ಸರ್ಕಾರ 6.5 ಲಕ್ಷ ರೈತರಿಗೆ 460 ಕೋಟಿ ರೂ. ಹಾಗೂ ಕುಡಿಯುವ ನೀರು/ಮೇವು ಸರಬರಾಜಿಗೆ 327 ಕೋಟಿ ರೂ. ಬಿಡುಗಡೆ ಮಾಡಿದೆ. ಜತೆಗೆ ರೈತರಿಗೆ ತಲಾ 2,000 ರೂ. ಬೆಳೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭವಾಗಿದೆ.
ಔಷಧ ಸಿಂಪಡಣೆಗೆ ಡ್ರೋನ್:ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಡ್ರೋನ್ ಬಳಕೆ ಹೆಚ್ಚುತ್ತಿದೆ. ಭಾರತೀಯರು ಕೂಡ ಇಂತಹ ತಂತ್ರಜ್ಞಾನ ಆಧಾರಿತ ಚಟುವಟಿಕೆ ಕೈಗೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಬೆಳೆಗಳಿಗೆ ಡ್ರೋನ್ ಮೌಲಕ ಔಷಧ ಸಿಂಪಡಣೆ ಮಾಡಬಹುದಾಗಿದೆ. ದ್ರವ ರೂಪದ ನ್ಯಾನೋ ಯೂರಿಯಾ ಬಳಕೆಗೂ ಉತ್ತೇಜನ ದೊರೆತಿದೆ. ಬೀಜಗಳ ಗುಣಮಟ್ಟ ಪರೀಕ್ಷೆ, ಗ್ರೇಡಿಂಗ್​ಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸುವ ಪ್ರಯೋಗಕ್ಕೆ ಚಾಲನೆ ದೊರೆತಿದೆ.
ಭಾರತದಾಚೆಗೂ ಯುಪಿಐ ಲಗ್ಗೆ:ನಗದು ರಹಿತ ವಹಿವಾಟು ಈಗ ಸಾಮಾನ್ಯವಾಗಿದ್ದು, ವಿವಿಧ ದೇಶಗಳಲ್ಲಿ ಜನಪ್ರಿಯವಾಗಿದೆ. ಭಾರತದಲ್ಲಿ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಅಡಿಯಿಟ್ಟ ಬಳಿಕ ಯೂನಿಫೈಡ್ ಪೇಮೆಂಟ್ ಇಂಟರ್​ಫೇಸ್ (ಯುಪಿಐ) ಭಾರೀ ಸದ್ದು ಮಾಡಿದೆ. ಕಳೆದ ಆಗಸ್ಟ್​ನಲ್ಲಿ 10 ಶತಕೋಟಿ ವಹಿವಾಟಿಗೆ ಸಾಕ್ಷಿಯಾಯಿತು. 2023ರಲ್ಲಿ ವಾರ್ಷಿಕ 1.7 ಟ್ರಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ. ಈ ಸೌಲಭ್ಯವನ್ನು ಭಾರತವು ಆಸ್ಟ್ರೇಲಿಯಾ, ಫ್ರಾನ್ಸ್, ಸಿಂಗಾಪುರ, ಸೌದಿ ಅರೇಬಿಯಾ, ಓಮನ್, ನೇಪಾಳ ಹಾಗೂ ಇತರ ದೇಶಗಳೊಂದಿಗೆ ಹಂಚಿಕೊಂಡಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 5 =
Remember me
