ರಾಜ್ಯ ಕಾಂಗ್ರೆಸ್ ನಾಯಕರು ನಿರೀಕ್ಷೆಯ ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಒಟ್ಟು 39 ಅಭ್ಯರ್ಥಿಗಳನ್ನೊಳಗೊಂಡ ಪಟ್ಟಿಯಲ್ಲಿ ಕರ್ನಾಟಕದ ಏಳು ಕ್ಷೇತ್ರಗಳಿಗೆ ಹೆಸರು ಅಖೈರುಗೊಳಿಸಲಾಗಿದೆ.
ಹಾಲಿ ಲೋಕಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್​ನ ಏಕೈಕ ಸಂಸದ ಡಿ.ಕೆ. ಸುರೇಶ್​ಗೆ ಬೆಂಗಳೂರು ಗ್ರಾಮಾಂತರದಿಂದ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಇತ್ತೀಚೆಗಷ್ಟೇ ಬಿಜೆಪಿಯಿಂದ ಕಾಂಗ್ರೆಸ್​ಗೆ ಮರಳಿದ್ದ ಮಾಜಿ ಸಂಸದ ಮುದ್ದಹನುಮೇಗೌಡರಿಗೆ ತುಮಕೂರು ಟಿಕೆಟ್ ಕೊಡಲಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದ ಮುದ್ದಹನುಮೇಗೌಡ, 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ದೇವೇಗೌಡರಿಗಾಗಿ ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಇದೀಗ ಕಾಂಗ್ರೆಸ್​ಗೆ ಸೂಕ್ತ ಅಭ್ಯರ್ಥಿ ಸಿಗದ ಪರಿಣಾಮ ಮುದ್ದಹನುಮೇಗೌಡರಿಗೆ ಟಿಕೆಟ್ ಸಿಕ್ಕಿದೆ.
ವಿಜಯಪುರ ಮೀಸಲು ಕ್ಷೇತ್ರದಲ್ಲಿ ಎಚ್.ಆರ್. ರಾಜು ಅಲಗೂರು ಟಿಕೆಟ್ ಪಡೆದಿದ್ದಾರೆ. ಅಲಗೂರು 2013ರ ವಿಧಾನಸಭೆ ಚುನಾವಣೆಯಲ್ಲಿ ನಾಗಠಾಣ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಹಾವೇರಿ ಕ್ಷೇತ್ರದಿಂದ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಟಿಕೆಟ್ ನೀಡಲಾಗಿದೆ.
ಕಣದಿಂದ ದೂರ?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಚುನಾವಣೆ ಸ್ಪರ್ಧೆ ಅನುಮಾನ ಎನ್ನಲಾಗಿದೆ. ಈಗಾಗಲೇ ರಾಜ್ಯಸಭೆ ಸದಸ್ಯರಾಗಿರುವ ಅವರು ಚುನಾವಣೆಗೆ ಸಂಬಂಧಿಸಿ ಪಕ್ಷದ ಪ್ರಚಾರ ಹಾಗೂ ಇತರೆ ಜವಾಬ್ದಾರಿ ನೋಡಿಕೊಳ್ಳ ಬೇಕಿರುವುದರಿಂದ ಚುನಾವಣಾ ಕಣದಿಂದ ದೂರವುಳಿಯುವ ಸಾಧ್ಯತೆಗಳಿವೆ. ಹೀಗಿದ್ದರೂ, ರಾಜ್ಯ ಕಾಂಗ್ರೆಸ್ ಘಟಕ ಕಲಬುರಗಿ ಕ್ಷೇತ್ರಕ್ಕೆ ಖರ್ಗೆಯವರ ಹೆಸರನ್ನೇ ಕಳುಹಿಸಿಕೊಟ್ಟಿದೆ. ಚುನಾವಣೆಗೆ ಅವರು ದೇಶಾದ್ಯಂತ ಪ್ರವಾಸ ಮಾಡಬೇಕಾ ಗುತ್ತದೆ. ಹಾಗಾಗಿ ತಮ್ಮ ಸ್ಪರ್ಧೆ ಬಗ್ಗೆ ಖರ್ಗೆಯ ವರೇ ತೀರ್ಮಾನ ಮಾಡಬೇಕು ಎಂದು ಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳು
ಬೆಂಗಳೂರು ಗ್ರಾಮಾಂತರ- ಡಿ.ಕೆ ಸುರೇಶ್
ತುಮಕೂರು- ಎಸ್.ಪಿ. ಮುದ್ದಹನುಮೇಗೌಡ
ಶಿವಮೊಗ್ಗ- ಗೀತಾ
ಶಿವರಾಜ್​ಕುಮಾರ್
ಹಾಸನ- ಶ್ರೇಯಸ್ ಪಟೇಲ್
ಮಂಡ್ಯ- ವೆಂಕಟರಮಣೇಗೌಡ (ಸ್ಟಾರ್ ಚಂದ್ರು)
ವಿಜಯಪುರ (ಮೀಸಲು)- ರಾಜು ಅಲಗೂರು
ಹಾವೇರಿ- ಆನಂದಸ್ವಾಮಿ ಗಡ್ಡದೇವರಮಠ
ರಾಹುಲ್ ಅಮೇಠಿ ಸ್ಪರ್ಧೆ ಸಸ್ಪೆನ್ಸ್
ಕರ್ನಾಟಕದ ಏಳು ಅಭ್ಯರ್ಥಿಗಳ ಜತೆಗೆ ಕೇರಳ, ಛತ್ತೀಸ್​ಗಢ, ತೆಲಂಗಾಣ, ಲಕ್ಷದ್ವೀಪ, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾದ 39 ಅಭ್ಯರ್ಥಿಗಳನ್ನ ಅಖೈರುಗೊಳಿಸಲಾಗಿದೆ. ರಾಹುಲ್ ಗಾಂಧಿಗೆ ವಯನಾಡು ಟಿಕೆಟ್ ಘೋಷಣೆ ಆಗಿರುವುದರಿಂದ ಅಮೇಠಿಯಲ್ಲಿ ಸ್ಪರ್ಧಿಸುವರೋ ಇಲ್ಲವೋ ಎಂಬ ಕುತೂಹಲವಿದೆ.
ಕಾಂಗ್ರೆಸ್ ವರಿಷ್ಠರ ಕೈನಲ್ಲಿ ಸಚಿವರ ಭವಿಷ್ಯ
ಹಲವು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿ ಸಿಗದೆ ಸಚಿವರನ್ನೇ ಕಣಕ್ಕಿಳಿಸಬೇಕೆಂಬ ಪ್ರಯತ್ನ ಕಾಂಗ್ರೆಸ್​ನಲ್ಲಿ ಮುಂದುವರಿದಿದೆ. ಇದೇ ವೇಳೆ, ನಾವು ಕಣಕ್ಕಿಳಿಯಲು ಸಿದ್ಧರಿಲ್ಲ, ನಾವು ಹೇಳಿದವರಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುತ್ತೇವೆಂದು ಸಚಿವರು ಸಹ ಹೈಕಮಾಂಡ್​ಗೆ
ಸಂದೇಶ ರವಾನಿಸಿದ್ದಾರೆ. ಮುಖ್ಯವಾಗಿ ಚಾಮರಾಜನಗರದಲ್ಲಿ ಎಚ್.ಸಿ ಮಹದೇವಪ್ಪ, ಬೀದರ್​ನಿಂದ ಈಶ್ವರಖಂಡ್ರೆ, ಬಳ್ಳಾರಿಯಿಂದ ನಾಗೇಂದ್ರ, ಕೋಲಾರದಲ್ಲಿ ಕೆ.ಎಚ್. ಮುನಿಯಪ್ಪ ಸ್ಪರ್ಧಿಸಬೇಕೆಂಬ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ. ಅದೇ ರೀತಿ ಬೆಳಗಾವಿ ಹಾಗೂ ದಾವಣಗೆರೆ ಕ್ಷೇತ್ರದ ವಿಷಯದಲ್ಲೂ ಸ್ಪಷ್ಟತೆ ಮೂಡದೆ ಕಗ್ಗಂಟಾಗಿದೆ. ಚಾಮರಾಜನಗರದಲ್ಲಿ ಪುತ್ರನಿಗೆ ಅವಕಾಶ ನೀಡುವಂತೆ ಸಚಿವ ಮಹದೇವಪ್ಪ ಪಟ್ಟು ಹಿಡಿದಿದ್ದರೆ, ಮುನಿಯಪ್ಪ ಕೋಲಾರದಿಂದ ಸ್ಪರ್ಧಿಸಲು ಅರೆಮನಸ್ಸಿನಿಂದ ಒಪ್ಪಿದ್ದಾರೆಂದು ತಿಳಿದು ಬಂದಿದೆ.
ಶಿವಮೊಗ್ಗದಲ್ಲಿ ಗೀತಾ ಮತ್ತೊಮ್ಮೆ ಅದೃಷ್ಟ ಪರೀಕ್ಷೆ | ಹಾಸನಕ್ಕೆ ಶ್ರೇಯಸ್​ಗೆ ಟಿಕೆಟ್
ಇವರು ಶಿರಹಟ್ಟಿ ಮಾಜಿ ಶಾಸಕ ಜಿ.ಎಸ್.ಗಡ್ಡದೇವರ ಮಠ ಅವರ ಪುತ್ರ. 2008ರಲ್ಲಿ ಕ್ಷೇತ್ರ ಮರುವಿಂಗಣೆ ಬಳಿಕ ರಚನೆಯಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮೂರು ಬಾರಿ ಮುಗ್ಗರಿಸಿದೆ. ಈ ಬಾರಿ ತಂತ್ರ ಬದಲಿಸಿದ್ದು, ಜಾತಿ ಸಮೀಕರಣ ಲೆಕ್ಕಾಚಾರದಲ್ಲಿ ಅಭ್ಯರ್ಥಿ ಹೂಡಿದೆ.
ಶಿವಮೊಗ್ಗ ಕ್ಷೇತ್ರದಿಂದ ಮಾಜಿ ಸಿಎಂ ಬಂಗಾರಪ್ಪ ಪುತ್ರಿ, ವರನಟ ಡಾ. ರಾಜ್​ಕುಮಾರ್ ಸೊಸೆ ಗೀತಾ ಶಿವರಾಜ್​ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಬಂಗಾರಪ್ಪ ಪ್ರತಿನಿಧಿಸಿದ್ದ ಕ್ಷೇತ್ರವದು. ಕಳೆದ ಐದು ಚುನಾವಣೆಗಳಲ್ಲೂ ಸಹ ಬಂಗಾರಪ್ಪ ಕುಟುಂಬದ ಒಬ್ಬರಲ್ಲ ಒಬ್ಬರು ಸ್ಪರ್ಧಿಸಿದ್ದಾರೆಂಬುದು ವಿಶೇಷ. ಮಧು ಬಂಗಾರಪ್ಪ 2 ಚುನಾವಣೆಯಲ್ಲಿ ಸೋತಿದ್ದರೆ, 2014ರಲ್ಲಿ ಗೀತಾ ಶಿವರಾಜ್​ಕುಮಾರ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಈಗ ಸಹೋದರನ ಬೆಂಬಲದೊಂದಿಗೆ ಪರೀಕ್ಷೆಗೊಡ್ಡಿಕೊಂಡಿದ್ದಾರೆ.
ಹಾಸನದಲ್ಲಿ ಶ್ರೇಯಸ್ ಪಟೇಲ್ ಅವರೇ ಅಭ್ಯರ್ಥಿ ಎಂಬುದು ಅಧಿಕೃತವಾಗಿದೆ. ಮಾಜಿ ಸಂಸದ ಪುಟ್ಟಸ್ವಾಮಿ ಗೌಡರ ಮೊಮ್ಮಗ ಶ್ರೇಯಸ್, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರದಿಂದ ಕಣಕ್ಕೆ ಇಳಿದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು. ಈಗ ಲೋಕಸಭೆ ಚುನಾವಣೆಗೆ ಶ್ರೇಯಸ್ ಪಟೇಲ್ ಅವರೇ ಸೂಕ್ತ ಎನಿಸಿ ಮಣೆ ಹಾಕಿದೆ.
ಮಂಡ್ಯ ಲೋಕಸಭೆ ಕ್ಷೇತ್ರದಿಂದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರಿಗೆ ಸ್ಪರ್ಧಿಸಲು ಅವಕಾಶ ದೊರೆತಿದೆ. ಅವರು ಗೌರಿಬಿದನೂರು ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡರ ಸಹೋದರ.
ವರಿಷ್ಠರ ಕೈನಲ್ಲಿದೆ ಸಚಿವರ ಭವಿಷ್ಯ
ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ವಿರುದ್ಧ ಹೋಗಿ ಅಭ್ಯರ್ಥಿ ಆಯ್ಕೆ ಮಾಡಿದರೆ ಇತರೆ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತದೆ ಎಂಬ ಅಳುಕಿನಲ್ಲಿ ಕೈ ನಾಯಕರಿದ್ದಾರೆ. ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಗ್ಗೆಯೂ ಸ್ಪಷ್ಟತೆ ತಂದುಕೊಳ್ಳಲು ಸಾಧ್ಯವಾಗಿಲ್ಲ ಎಂಬ ಮಾತುಗಳು ಕೇಳಿಬಂದಿದೆ. ಅಂತಿಮವಾಗಿ ಸಚಿವರ ಅಥವಾ ಅವರ ಕುಟುಂಬದವರ ಸ್ಪರ್ಧೆ ವಿಷಯದಲ್ಲಿ ಹೈಕಮಾಂಡ್ ತೀರ್ಮಾನ ಅಂತಿಮವಾಗಲಿದೆ, ಶನಿವಾರ ಅಥವಾ ಭಾನುವಾರ ಈ ಸಂಬಂಧ ಒಂದು ಸುತ್ತಿನ ಸಭೆಯೂ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಶಿಫಾರಸಾಗಿದ್ದು 17, ಒಕೆ ಆಗಿದ್ದು ಕೇವಲ 7!
ಕಾಂಗ್ರೆಸ್ ಕೇಂದ್ರ ಚುನಾವಣೆ ಸಮಿತಿ ಸಭೆಗೆ ರಾಜ್ಯದ 17 ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿತ್ತು. ಸಿಎಂ, ಡಿಸಿಎಂ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಒಟ್ಟಾಗಿ ಚರ್ಚೆ ನಡೆಸಿ 17 ಕ್ಷೇತ್ರಕ್ಕೆ ಒಂಟಿ ಹೆಸರನ್ನು ಶಿಫಾರಸು ಮಾಡಿದ್ದರು. ಆದರೆ, ಹೈಕಮಾಂಡ್ ಅರ್ಧಕ್ಕಿಂತ ಹೆಚ್ಚು ಕ್ಷೇತ್ರದ ಶಿಫಾರಸನ್ನು ಒಪ್ಪಿಲ್ಲ. ಇನ್ನೊಮ್ಮೆ ಪರಿಶೀಲನೆ ನಡೆಸುವುದು ಹಾಗೂ ಬಿಜೆಪಿ ನಡೆ ನೋಡಿಕೊಂಡು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಜಯಪ್ರಕಾಶ್ ಹೆಗ್ಡೆ ಇನ್ನೂ ಪಕ್ಷಕ್ಕೇ ಸೇರ್ಪಡೆ ಆಗದ ಕಾರಣ ಅವರ ಹೆಸರನ್ನು ಪ್ರಕಟಿಸುವ ಪಟ್ಟಿಯಿಂದ ಹೊರಗಿಡಲಾಯಿತು ಎಂದು ತಿಳಿದುಬಂದಿದೆ. ಆದರೆ, ಚಿತ್ರದುರ್ಗ ಕ್ಷೇತ್ರದಿಂದ ಚಂದ್ರಪ್ಪ ಹೆಸರು ಪ್ರಕಟಿಸದೇ ಇರುವುದು ಪಕ್ಷದ ನಾಯಕರಲ್ಲಿ ಅಚ್ಚರಿ ಮೂಡಿಸಿದೆ. ಬಿಜೆಪಿ ಅಭ್ಯರ್ಥಿಯನ್ನು ನೋಡಿ ಅಂತಿಮಗೊಳಿಸಲು ನಿರ್ಧರಿಸಿದ್ದಾರೆ ಎಂದು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ ಕಲಬುರಗಿಯಿಂದ ರಾಧಾಕೃಷ್ಣ, ಬೀದರ್​ನಿಂದ ರಾಜಶೇಖರ್ ಪಾಟೀಲ್, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯರನ್ನು ಕಣಕ್ಕಿಳಿಸಲು ಭಾಗಶಃ ಸಹಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜಧಾನಿಯ 3 ಕಡೆಯೂ ತೊಳಲಾಟ
ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಾಂಗ್ರೆಸ್ ಹೈಕಮಾಂಡ್​ಗೆ ಸವಾಲಾಗಿ ಪರಿಣಮಿಸಿದೆ. ಬೆಂ. ದಕ್ಷಿಣ ಕ್ಷೇತ್ರದಿಂದ ಸೌಮ್ಯಾ ರೆಡ್ಡಿ ಅವರನ್ನು ಕಣಕ್ಕಿಳಿಸಲು ಪಕ್ಷ ಸಿದ್ಧವಿದ್ದರೂ, ಸೌಮ್ಯ ರೆಡ್ಡಿಯವರೇ ಆಸಕ್ತಿ ತೋರಿಸಿಲ್ಲ ಎನ್ನಲಾಗಿದೆ. ಬೆಂ. ಉತ್ತರದಲ್ಲಿ ಸಮರ್ಥ ಅಭ್ಯರ್ಥಿ ಕೊರತೆ ಎದುರಾಗಿದೆ. ಬೆಂಗಳೂರು ಕೇಂದ್ರದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಎಂದು ಪಕ್ಷ ನಿರ್ಧರಿಸಿದೆ. ಆಕಾಂಕ್ಷಿಗಳು ಎದುರಾಳಿ ಎದುರಿಸಲು ಸಮರ್ಥರಿಲ್ಲ ಎಂದು ಶಾಸಕ ಹ್ಯಾರಿಸ್ ಹೆಸರನ್ನು ಚರ್ಚೆಗೆ ಬಿಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + sixteen =
Remember me
