ಬೆಂಗಳೂರು:ದೆಹಲಿ ಹಾಗೂ ಹಿಮಾಚಲಪ್ರದೇಶಗಳಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ಮುಗಿದಿದೆ. ಸೋಮವಾರ ಆರಂಭವಾಗಲಿರುವ ರಾಜ್ಯ ವಿಧಾನಮಂಡಲ ಅಧಿವೇಶನದ ನಂತರ ಎರಡೂ ಪಕ್ಷದ ಮುಖಂಡರು ರಾಜ್ಯದತ್ತ ಮುಖ ಮಾಡಲಿದ್ದಾರೆ.
ಮೋದಿ, ಷಾರತ್ತ ಬಿಜೆಪಿ ಕಣ್ಣು:ರಾಜ್ಯದಲ್ಲಿ ಬಿಜೆಪಿಯ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ತೆಗೆದುಕೊಳ್ಳಲಿದ್ದಾರೆ. ಅವರು ರಾಜ್ಯಕ್ಕೆ ಹೆಚ್ಚೆಚ್ಚು ಪ್ರವಾಸ ಮಾಡುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
ಆಯುಷ್ಮಾನ್ ಕಾರ್ಡ್ ವಿತರಣೆ, ಹಾಡಿ ಮತ್ತು ಹಟ್ಟಿಗಳ ವಾಸಿಗಳಿಗೆ ಹಕ್ಕುಪತ್ರ ವಿತರಣೆ, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಉದ್ಘಾಟನೆ, ಮೈಸೂರು-ಬೆಂಗಳೂರು ಹೆದ್ದಾರಿ ಅನಾವರಣ… ಹೀಗೆ ವಿವಿಧ ಕಾರ್ಯಕ್ರಮಗಳನ್ನು ಮೋದಿ ಚುನಾವಣೆ ಘೋಷಣೆಗೆ ಮುನ್ನ ಪೂರ್ಣಗೊಳಿಸಲಿದ್ದಾರೆ. ಕಾರ್ಯಕ್ರಮಗಳ ಉದ್ಘಾಟನೆಗಳಿಗಾಗಿ ಮೋದಿ ಪ್ರತಿ ಹದಿನೈದು ದಿನಕ್ಕೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಷಾ ಪ್ರತಿ ವಾರ ರಾಜ್ಯಕ್ಕೆ ಬಂದು ವಿವಿಧ ಕಾರ್ಯಕ್ರಮಗಳ ಜತೆಗೆ ಸಂಘಟನೆಗೂ ಆದ್ಯತೆ ನೀಡಲಿದ್ದಾರೆ.
ಬಂಡಾಯ ನಿಯಂತ್ರಣಕ್ಕೆ ಒತ್ತು:ರಾಜ್ಯದಲ್ಲಿ ಬಂಡಾಯ ಕಾಣಿಸದಂತೆ ಎಚ್ಚರವಹಿಸಲು ಈಗಾಗಲೇ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಹಿಮಾಚಲಪ್ರದೇಶದಲ್ಲಿ ಹದಿನಾಲ್ಕು ಜನ ಬಂಡಾಯವಾಗಿ ಸ್ಪರ್ಧಿಸಿದ್ದರು. ಅದರಲ್ಲಿ ನಾಲ್ಕು ಜನ ಕಾಂಗ್ರೆಸ್​ನಿಂದ ಗೆದ್ದಿದ್ದಾರೆ. ರಾಜ್ಯದಲ್ಲಿ ಆ ರೀತಿಯ ಪರಿಸ್ಥಿತಿ ಉದ್ಭವಿಸದಂತೆ ಎಚ್ಚರಿಕೆ ತೆಗೆದುಕೊಳ್ಳಲು ಚರ್ಚೆ ನಡೆಸಲಾಗಿದೆ.
ನವದೆಹಲಿ:ರಾಜ್ಯ ಬಿಜೆಪಿ ಆಡಳಿತದ ವಿರುದ್ಧ ಪರಿಣಾಮಕಾರಿ ಅಭಿಯಾನ ನಡೆಸುವ ಜತೆಗೆ, ಆಡಳಿತ ವಿಷಯದಲ್ಲಿ ಸಾರ್ವಜನಿಕರಲ್ಲಿರುವ ಅಸಮಾಧಾನ, ಆಕ್ರೋಶವನ್ನು ಸರಿಯಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿರುವ ಕಾಂಗ್ರೆಸ್, ಮುಂಬರುವ ವಿಧಾನಸಭೆ ಚುನಾವಣೆ ಗೆಲ್ಲಲು ಜಲ-ಜಾತಿಯ ಭಾವನಾತ್ಮಕ ತಂತ್ರ ಅನುಸರಿಸಲು ಸಜ್ಜಾಗಿದೆ. ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯ ಚುನಾವಣೆಯ ಪೂರ್ವ ತಯಾರಿಗೆ ಮುಂದಿನ 75 ದಿನಗಳ ರೂಪುರೇಷೆ ಸಿದ್ಧಪಡಿಸಿರುವ ಕಾಂಗ್ರೆಸ್ ನಾಯಕರು, ವಿಜಯಪುರ, ಹುಬ್ಬಳ್ಳಿ ಮತ್ತು ಚಿತ್ರದುರ್ಗದಲ್ಲಿ ಜಲ-ಜಾತಿಗೆ ಸಂಬಂಧಿಸಿ ಬೃಹತ್ ಸಮಾವೇಶಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಪ್ರತಿ ಸಮಾವೇಶಕ್ಕೂ ಭಾರಿ ಪ್ರಮಾಣದಲ್ಲಿ ಜನ ಸೇರಿಸಿ, ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪುಗೊಂಡಿದೆ ಎಂಬ ರಾಜಕೀಯ ನಿರೂಪಣೆ ಗಟ್ಟಿಗೊಳಿಸುವುದು ಕಾಂಗ್ರೆಸ್ ಉದ್ದೇಶ. ಪ್ರಧಾನಿ ಮೋದಿ ಜನಪ್ರಿಯತೆಯನ್ನೇ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಳ್ಳುವ ಜತೆಗೆ ಬಿಗಿ ಸಂಪನ್ಮೂಲ ಕ್ರೋಡೀಕರಣ ಮೂಲಕ ಚುನಾವಣೆ ಗೆಲ್ಲಲು ಬಿಜೆಪಿ ಶಕ್ತಿಮೀರಿ ಯತ್ನಿಸಲಿದೆ. ಅವರಿಗೆ ಪ್ರಬಲ ಪೈಪೋಟಿ ನೀಡಬೇಕೆಂದರೆ, ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು, ಜನರಿಗೆ ನಮ್ಮ ಪಕ್ಷದ ಬಗ್ಗೆ ಭರವಸೆ ಹುಟ್ಟುವಂತೆ ಪ್ರಚಾರ ಮಾಡಬೇಕು. ಈ ನಿಟ್ಟಿನಲ್ಲಿ ಒಂದು ಕಡೆ ನೀರಾವರಿ ಮತ್ತೊಂದು ಕಡೆ ಎಸ್ಸಿ/ಎಸ್ಟಿ, ಒಬಿಸಿ ಸಮುದಾಯದ ಜನರನ್ನು ಸೇರಿಸಿ ಬೃಹತ್ ಸಮಾವೇಶಗಳನ್ನು ನಡೆಸಬೇಕು ಎಂದು ರ್ಚಚಿಸಿದ ಬಳಿಕ ಈ ನಿರ್ಧಾರ ಹೊರಬಿದ್ದಿದೆ. ಕೃಷ್ಣಾ ನದಿ ನೀರನ್ನು ಅವಲಂಬಿಸಿರುವ ರಾಜ್ಯದ ಕೃಷ್ಣಾ ಕಣಿವೆಯ ಜನರಿಗೆ ನ್ಯಾಯ ಒದಗಿಸಲು ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಕೃಷ್ಣಾ ನ್ಯಾಯಾಧಿಕರಣ ಐತೀರ್ಪ ಬಂದು 10 ವರ್ಷ ಕಳೆದರೂ ಅಧಿಸೂಚನೆ ಪ್ರಕಟವಾಗಿಲ್ಲ. ಡಬಲ್ ಇಂಜಿನ್ ಸರ್ಕಾರ ನೀರಿನ ವಿಷಯದಲ್ಲಿ ಅನ್ಯಾಯ ಮಾಡಿದೆ ಎಂದು ಬಿಂಬಿಸಲೆಂದೇ ವಿಜಯಪುರದಲ್ಲಿ ಡಿಸೆಂಬರ್ 30ಕ್ಕೆ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಮಹದಾಯಿ ಯೋಜನೆ ಕೂಡ ಜಾರಿ ಮಾಡಲು ಸಾಧ್ಯ ಆಗಿಲ್ಲ ಎಂಬುದನ್ನು ಬಿಂಬಿಸಲು ಜನವರಿ 2ರಂದು ಹುಬ್ಬಳ್ಳಿಯಲ್ಲಿ ಸಮಾವೇಶ ಏರ್ಪಡಿಸಲಾಗಿದೆ.
ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳ ಸಮಾವೇಶ:ಪರಿಶಿಷ್ಟ ಜಾತಿ, ಪಂಗಡಗಳನ್ನು ಒಂದೇ ವೇದಿಕೆಗೆ ಕರೆತರಲು ಉದ್ದೇಶಿಸಿರುವ ಕಾಂಗ್ರೆಸ್, ಎರಡೂ ಸಮುದಾಯದವರನ್ನು ಸೇರಿಸಿ ಜ.8ರಂದು ಚಿತ್ರದುರ್ಗದಲ್ಲಿ ಎಸ್ಸಿ/ಎಸ್ಟಿ ಐಕ್ಯತಾ ಸಮಾವೇಶ ನಡೆಸುತ್ತಿದೆ. ಈ ಎರಡೂ ಜಾತಿ/ಪಂಗಡಗಳನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂದು ಸಾರುವುದು ಕೈ ನಾಯಕರ ಉದ್ದೇಶ. ಹಾಗೆಯೇ, ಇತರೆ ಹಿಂದುಳಿದ ಜಾತಿಗಳನ್ನು ಗುರಿಮಾಡಿ ಒಬಿಸಿ ಸಮಾವೇಶವನ್ನೂ ನಡೆಸಲಿದೆ. ಆದರೆ, ಒಬಿಸಿ ಸಮಾವೇಶದ ದಿನಾಂಕ, ಸ್ಥಳ ಇನ್ನೂ ತೀರ್ವನವಾಗಿಲ್ಲ. ಈ ಎಲ್ಲ ಸಮಾವೇಶಗಳಲ್ಲಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಸಮನ್ವಯಕ್ಕೆ ಸಲಹೆ:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ಸಮನ್ವಯ ಮೂಡಬೇಕು, ಒಗ್ಗಟ್ಟಿನ ಸಂದೇಶ ರವಾನೆ ಆಗಬೇಕು ಎಂದು ಮತ್ತೊಮ್ಮೆ ಖರ್ಗೆ ಉಭಯ ನಾಯಕರಿಗೆ ಸಂದೇಶ ರವಾನೆ ಮಾಡಿದ್ದಾರೆ. ಎಲ್ಲ ಪ್ರಚಾರ ಕಾರ್ಯಕ್ರಮಗಳನ್ನ ಯಾವುದೇ ವೈಮನಸ್ಯವಿಲ್ಲದೆ ಸಮನ್ವಯದಿಂದ ನಡೆಸುವಂತೆ ಸಭೆಯಲ್ಲಿ ಖರ್ಗೆ ಸಲಹೆ ನೀಡಿದ್ದಾರೆನ್ನಲಾಗಿದೆ.
ಬಸ್ ಯಾತ್ರೆ:ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಬಸ್ ಯಾತ್ರೆ ಕೂಡ ನಡೆಯಲಿದ್ದು, 40 ದಿನಗಳಲ್ಲಿ ಎಲ್ಲ 224 ವಿಧಾನಸಭೆ ಕ್ಷೇತ್ರಗಳಿಗೆ ಈ ಯಾತ್ರೆ ಸಾಗಲಿದೆ.
ಚುನಾವಣಾ ಸಮಿತಿ ರಚನೆ:ರಾಜ್ಯ ಚುನಾವಣೆ ಸಮಿತಿ ರಚನೆಗೂ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಮಂಗಳವಾರದ ಒಳಗಾಗಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.
ಬಿಜೆಪಿಯವರು ಜಾತಿ ಸಮಾವೇಶ ಮಾಡಬಹುದೇ? ನಾವು ಮಾಡಿದರೆ ಜಾತಿ ರಾಜಕಾರಣ ಎನ್ನುತ್ತೀರಿ. ಜಾತಿ ಬೇರೆ ವರ್ಗ ಬೇರೆ. ನಾವು ವರ್ಗಗಳನ್ನು ಒಗ್ಗೂಡಿಸಲು ಸಭೆ ಮಾಡುತ್ತಿದ್ದೇವೆ. ಅದರಲ್ಲಿ ತಪ್ಪೇನಿದೆ?
|ಸಿದ್ದರಾಮಯ್ಯ, ಮಾಜಿ ಸಿಎಂ
ಸಭೆಯಲ್ಲಿದ್ದವರು:ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೆವಾಲಾ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ಎಂ.ಬಿ. ಪಾಟೀಲ್, ಬಿ.ಕೆ. ಹರಿಪ್ರಸಾದ್, ಈಶ್ವರ ಖಂಡ್ರೆ, ಧ್ರುವನಾರಾಯಣ, ಸಲೀಂ ಅಹಮದ್, ಸತೀಶ್ ಜಾರಕಿಹೊಳಿ.
ಖರ್ಗೆ ನೇಮಕದ ಬೂಸ್ಟರ್:ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಸೇರಿದ ಜನಸ್ತೋಮ ರಾಜ್ಯ ಕಾಂಗ್ರೆಸ್ ನಾಯಕರನ್ನು ದಿಗ್ಭಾ›ಂತರನ್ನಾಗಿ ಮಾಡಿದೆ. ದೆಹಲಿಗೆ ಬಂದಿದ್ದ ಡಿಕೆ ಶಿವಕುಮಾರ್, ಬಿಕೆ ಹರಿಪ್ರಸಾದ್ ಆದಿಯಾಗಿ ಎಲ್ಲರೂ ಖರ್ಗೆ ಅವರಿಗೆ ಸಿಕ್ಕ ಸ್ವಾಗತದ ಬಗ್ಗೆ ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸಿದ್ದಾರೆ. ‘ನಾನು ಈ ಪರಿಯಲ್ಲಿ ಜನ ಸೇರಿದ್ದನ್ನು ನೋಡಿರುವುದೇ ಮೊದಲ ಬಾರಿ’ ಎಂದ ಶಿವಕುಮಾರ್, ‘ಹಿಂದೆ ಸಂಜಯ್ ಗಾಂಧಿ ಜತೆ ಕೆಲಸ ಮಾಡಿದ್ದಾಗ ಈ ಪರಿ ಜನ ಸೇರಿದ್ದು ನೋಡಿದ್ದೆ. ಖರ್ಗೆ ನೋಡಲು ಜನಸಾಗರ ಸೇರಿದ್ದು ನೋಡಿ ಆಶ್ಚರ್ಯ ಆಯಿತು’ ಎಂದು ಹರಿಪ್ರಸಾದ್ ವಿಜಯವಾಣಿ ಜತೆ ಅನಿಸಿಕೆ ಹಂಚಿಕೊಂಡರು.
‘ಸತ್ತವಳು’ 6 ವರ್ಷಗಳ ಬಳಿಕ 2ನೇ ಗಂಡನೊಂದಿಗೆ ಪತ್ತೆ!; ಈಕೆಯ ಕೊಲೆ ಪ್ರಕರಣ ಭೇದಿಸಿದ್ದ ಪೊಲೀಸರಿಗೆ ಸಿಕ್ಕಿತ್ತು ಬಹುಮಾನ!

ಟ್ವಿಟರ್​ನಲ್ಲಿ ಇನ್ಮುಂದೆ ಧಾರಾಳವಾಗಿ ಬರೆಯಬಹುದು: ಆಗಲಿರುವ ಪ್ರಮುಖ ಬದಲಾವಣೆ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − five =
Remember me
