|ರಾಘವ ಶರ್ಮ ನಿಡ್ಲೆ, ಗಾಂಧಿನಗರ (ಗುಜರಾತ್)
ಶತ್ರು ರಾಷ್ಟ್ರಗಳನ್ನು ಮಣಿಸಬೇಕೆಂದರೆ ಮೊದಲು ಅವರ ಮನಸ್ಸಲ್ಲಿ ಗೊಂದಲ ಮೂಡಿಸಬೇಕು. ನಂತರ ವಿಶ್ವಾಸ ತಗ್ಗಿಸುವಂತೆ ಮಾಡಬೇಕು. ಎದುರಾಳಿಯನ್ನು ಕಟ್ಟಿಹಾಕುವುದು ಹೇಗೆ ಎಂಬ ರಣವ್ಯೂಹ ರಚಿಸಲು ಅವಕಾಶವೇ ನೀಡಬಾರದು… ಗುಜರಾತ್ ಚುನಾವಣೆ ಹಣಾಹಣಿಯನ್ನು ಭಾರತೀಯ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು ವಿಜಯವಾಣಿ ಜತೆ ಮಾತನಾಡುತ್ತ ವಿಶ್ಲೇಷಿಸಿದ್ದು ಹೀಗೆ. ಗುಜರಾತ್​ನಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ವಿಫಲವಾದಂತೆ ಕಾಣುತ್ತಿರುವ ಕಾಂಗ್ರೆಸ್ ಉದ್ದೇಶಿಸಿ ಅವರು ಈ ಮಾತನ್ನು ಹೇಳಿದರು.
2017ರ ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವದ ಕೊರತೆ ಮಧ್ಯೆಯೂ ಬಿಜೆಪಿ ಬೆವರಿಳಿಸಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಮೌನ ಪ್ರಚಾರ ತಂತ್ರಗಾರಿಕೆಯ ಮೊರೆ ಹೋಗಿದೆ. 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ತವರು ರಾಜ್ಯ ಗುಜರಾತನ್ನು ಮತ್ತೊಮ್ಮೆ ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಅನಿವಾರ್ಯದಿಂದಲೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಬೆವರು ಹರಿಸಿ ಪ್ರಚಾರ ನಡೆಸುತ್ತಿರುವಾಗ, ಕಾಂಗ್ರೆಸ್ ತನ್ನ ಪ್ರಮುಖ ದೃಷ್ಟಿಯನ್ನು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಕಡೆ ನೆಟ್ಟಿದೆ. ರಾಜಕೀಯ ನೈತಿಕ ಸ್ಥೈರ್ಯ ಹೆಚ್ಚಿಸಲು ರಾಷ್ಟ್ರೀಯ ನಾಯಕರ ಕೊರತೆ ಮಧ್ಯೆ ಸ್ಥಳೀಯ ಮುಖಂಡರು ತಮ್ಮದೇ ಸ್ವಂತ ವರ್ಚಸ್ಸಿನಲ್ಲಿ ಜನ-ಮನ ಸೆಳೆಯುತ್ತಾ ಮತ ಗಳಿಕೆಯ ಲೆಕ್ಕಾಚಾರ ಹಾಕುತ್ತಿದ್ದಾರೆ. ರಾಹುಲ್ ಗಾಂಧಿ ಸೌರಾಷ್ಟ್ರದಲ್ಲಿ ಒಂದೆರಡು ಕಡೆ ಪ್ರಚಾರ ಮಾಡಿ, ಸದ್ಯ ಮಧ್ಯಪ್ರದೇಶದಲ್ಲಿ ಜೋಡೋ ಯಾತ್ರೆಯಲ್ಲಿದ್ದಾರೆ.
ವಿಪರ್ಯಾಸ ಎಂದರೆ, ಗುಜರಾತ್ ಪ್ರಚಾರದಲ್ಲಿ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಬಗ್ಗೆ ಮಾತನಾಡುತ್ತಾ, ಗುಜರಾತ್​ನಲ್ಲಿ ಯಾತ್ರೆ ಕೈಗೊಳ್ಳಲು ಸಾಧ್ಯವಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ವಾಸ್ತವದಲ್ಲಿ, ಚುನಾವಣೆ ಸಂದರ್ಭದಲ್ಲಿ ಈ ಭಾಗದಲ್ಲಿ ಯಾತ್ರೆ ನಡೆಸಿದ್ದರೆ ಬಹುಶಃ ಕಾಂಗ್ರೆಸ್ ಗಳಿಸುವ ಮತ ಪ್ರಮಾಣ ಹೆಚ್ಚಿಸುತ್ತಿತ್ತು ಮತ್ತು ಸ್ಥಳೀಯವಾಗಿ ಪಕ್ಷ, ಕಾರ್ಯಕರ್ತರನ್ನು ಹುರಿದುಂಬಿಸುತ್ತಿತ್ತು. ಆದರೆ, ತಂತ್ರಗಾರಿಕೆ ರೂಪಿಸುವಲ್ಲಿ ಎಳಸುತನ ಪ್ರದರ್ಶಿಸಿರುವ ರಾಹುಲ್ ಮತ್ತು ಹಿಂಬಾಲಕರು, ಚುನಾವಣೆಯೇ ನಡೆಯದಿರುವ ಜಾಗದಲ್ಲಿ ಓಡಾಡುತ್ತಿದ್ದಾರೆ. ರಾಜಕೀಯ ಸಂಘಟನೆ ಬಲಗೊಳಿಸುವ, ಪಕ್ಷಕ್ಕೆ ಹೊಸ ಸ್ಪರ್ಶ ನೀಡಲು ಇಂಥಾ ಯಾತ್ರೆಗಳ ಅಗತ್ಯವಿದ್ದರೂ, ಗುಜರಾತ್ ಚುನಾವಣೆಯನ್ನು ಬಲಿಕೊಡಬೇಕಿತ್ತೇ? ನಾವು ದುರ್ಬಲಗೊಂಡಿರುವುದರಿಂದ ನಮ್ಮ ಸ್ಥಾನ ಕಸಿದುಕೊಳ್ಳಲು ಆಮ್ ಆದ್ಮಿ ಪಕ್ಷ ಗುಜರಾತ್​ಗೆ ಬಂದಿದೆ ಎಂದು ಮೆಹಸಾನ ಜಿಲ್ಲೆಯ ಬೇಚ್ರಾಜಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಬೇಸರ ವ್ಯಕ್ತಪಡಿಸಿದರು. ರಾಜ್ಯದ ಮತದಾರರಿಗೆ ರಾಹುಲ್ ಗಾಂಧಿ, ಗ್ಯಾಸ್ ಸಿಲಿಂಡರ್​ಗಳ ಬೆಲೆ ಕಡಿತ, 300 ಯೂನಿಟ್​ಗಳವರೆಗೆ ಉಚಿತ ವಿದ್ಯುತ್, 10 ಲಕ್ಷ ರೂ.ವರೆಗೆ ಉಚಿತ ಆರೋಗ್ಯ ಸೇವೆ, ರೈತರ ಸಾಲ ಮನ್ನಾ, 3000 ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಗಳು, ಹಾಲಿನ ಉತ್ಪನ್ನಗಳ ಮೇಲೆ ಸಬ್ಸಿಡಿ, ಸರ್ಕಾರಿ ಉದ್ಯೋಗಗಳು, ಯುವಕರಿಗೆ 30,000 ರೂ. ನಿರುದ್ಯೋಗ ಭತ್ಯೆ ಹೆಚ್ಚಳ ಮಾಡುವ ಭರವಸೆ ನೀಡಿದ್ದಾರೆ. ಆದರೆ, ಇವುಗಳನ್ನು ಪರಿಣಾಮಕಾರಿಯಾಗಿ ಮತದಾರನಿಗೆ ತಲುಪಿಸಲು ಅವರ ಅನುಪಸ್ಥಿತಿ ಪಕ್ಷವನ್ನು ಕಾಡುತ್ತಿದೆ.
54 ಸೀಟುಗಳಿರುವ ಸೌರಾಷ್ಟ್ರ ಮತ್ತು ಕಛ್ ಭಾಗಗಳಲ್ಲಿ ಕಳೆದ ಹಲವು ಚುನಾವಣೆಗಳಲ್ಲಿ ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಗಮನಾರ್ಹ ನಿರ್ವಹಣೆ ತೋರಿದೆ. ಆದರೆ, ಆಮ್ ಆದ್ಮಿ ಪಾರ್ಟಿ ಪ್ರವೇಶದಿಂದಾಗಿ ಕಾಂಗ್ರೆಸ್ ವೋಟುಗಳು ವಿಭಜನೆಗೊಳ್ಳುವ ಸಾಧ್ಯತೆಯಿದೆ. ವಾಸ್ತವದಲ್ಲಿ, ತಾನು ಅಧಿಕಾರಕ್ಕೇರಿಯೇ ಬಿಡುತ್ತೇನೆ ಎಂಬ ಅತಿ ಆತ್ಮವಿಶ್ವಾಸದಲ್ಲೂ ಆಪ್ ಇಲ್ಲ. ಸದ್ಯ ಅದು ಕಷ್ಟ ಎನ್ನುವುದೂ ಕೇಜ್ರಿವಾಲ್​ಗೆ ಗೊತ್ತಿದೆ. ರಾಷ್ಟ್ರಾದ್ಯಂತ ಕಾಂಗ್ರೆಸ್ ಸ್ಥಾನವನ್ನು ನಿಧಾನವಾಗಿ ತನ್ನದಾಗಿಸಿಕೊಳ್ಳಲು ಯತ್ನಿಸುತ್ತಿರುವ ಆಪ್, ಗುಜರಾತ್​ನಲ್ಲೂ ಆ ಕೆಲಸ ಮುಂದುವರಿಸಿದೆ. ದಿಲ್ಲಿ, ಪಂಜಾಬ್​ನಲ್ಲಿ ಅಧಿಕಾರ ಗೆದ್ದಿರುವುದರಿಂದ ಗುಜರಾತ್​ನಲ್ಲಿ ಶೇ.6ರಷ್ಟು ವೋಟ್ ಶೇರು (ಮತಪಾಲು) ಪಡೆಯುವುದು ಆಪ್ ಮುಖ್ಯ ಗುರಿ. ಇದು ಸಾಧ್ಯವಾದಲ್ಲಿ ಆಪ್​ಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ದೊರೆಯಲಿದೆ. 2024ರ ಲೋಕಸಭೆ ಮತ್ತು ಬರುವ ವಿಧಾನಸಭೆ ಚುನಾವಣೆಗಳ ದೃಷ್ಟಿಯಿಂದ ಇದು ಪಕ್ಷಕ್ಕೆ ವರದಾನ. ಏಕೆಂದರೆ, ಆಮ್ ಆದ್ಮಿ ಪಾರ್ಟಿ ಹೆಸರು ಇಂಗ್ಲಿಷ್ ಅಕ್ಷರದ ಅನಿಂದ ಪ್ರಾರಂಭಗೊಳ್ಳುತ್ತಿರುವುದರಿಂದ ಬ್ಯಾಲೆಟ್ ಪೇಪರ್​ನಲ್ಲೂ ಆಪ್ ಹೆಸರೇ ಮೊದಲು ದಾಖಲುಗೊಳ್ಳಲಿದೆ. ಈ ಕಾರಣಕ್ಕಾಗಿಯೇ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಗುಜರಾತ್ ಚುನಾವಣೆಯಲ್ಲಿ ಮೂರನೇ ವ್ಯಕ್ತಿಗೆ ಅವಕಾಶವೇ ಇಲ್ಲ. ಇಲ್ಲಿ ಏನಿದ್ದರೂ, ಬಿಜೆಪಿ-ಕಾಂಗ್ರೆಸ್ ಮಧ್ಯೆ ಫೈಟ್ ಎಂಬ ರಾಜಕೀಯ ನಿರೂಪಣೆ ತೇಲಿಬಿಡುತ್ತಿವೆ. ಆಪ್ ಕಟ್ಟಿಹಾಕಲು ಬಿಜೆಪಿಯೇನೋ ಶಕ್ತಿಮೀರಿ ಯತ್ನಿಸಿದೆ. ಆದರೆ, ಭವಿಷ್ಯದ ರಾಜಕೀಯ ಅಪಾಯದ ಅರಿವಿದ್ದರೂ ಕಾಂಗ್ರೆಸ್​ನ ರಾಷ್ಟ್ರೀಯ ನಾಯಕರು ಮಾತ್ರ ಗುಜರಾತ್​ನಲ್ಲಿ ಚುನಾವಣಾ ಗಂಭೀರತೆ ಪ್ರದರ್ಶಿಸದಿರುವುದು ಅಚ್ಚರಿ ಮೂಡಿಸಿದೆ.
ದುರ್ಬಲವೇನಲ್ಲ…: ಬಿಜೆಪಿ ಕಾರ್ಯಕರ್ತರ ನೆಟ್ವರ್ಕ್ ಬಲಿಷ್ಠವಾಗಿದ್ದರೂ, ಗುಜರಾತ್​ನಲ್ಲಿ ಕಾಂಗ್ರೆಸ್ ದುರ್ಬಲ ಪಕ್ಷವೇನಲ್ಲ ಎಂದು ವಿಜಯವಾಣಿ ಜತೆ ಆನಂದ್ ಜಿಲ್ಲೆಯಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಒಪ್ಪಿಕೊಳ್ಳುತ್ತಾರೆ. 2017ರಲ್ಲಿ ಆನಂದ್ ಜಿಲ್ಲೆಯ 7 ಸೀಟುಗಳಲ್ಲಿ ಕಾಂಗ್ರೆಸ್ 5 ಗೆದ್ದಿತ್ತು. ಹಿಂದೊಮ್ಮೆ ಆನಂದ್ ಮಾಜಿ ಸಿಎಂ ಮಾಧವಸಿನ್ಹ ಸೋಲಂಕಿ ಅವರ ಭದ್ರಕೋಟೆಯಾಗಿತ್ತು. ಈಗಲೂ ಸ್ಥಳೀಯ ಮುಖಂಡರನ್ನೇ ಅದು ನೆಚ್ಚಿಕೊಂಡಿದೆ. ನಾವು ಪೇಜ್ ಕಮಿಟಿ ಮೂಲಕ ಪ್ರತಿ ಕಾರ್ಯಕರ್ತನಿಗೆ 30 ಮತಗಳನ್ನು ಹಂಚುವುದು, ಚುನಾವಣೆ ಟ್ರೆಂಡ್ ಸೆಟ್ ಮಾಡಲು ಯೋಗಿ ಆದಿತ್ಯನಾಥ್, ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮ, ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ, ರಾಜ್ಯ ನಾಯಕ ಪುರುಷೋತ್ತಮ್ ರೂಪಾಲ…ಹೀಗೆ ಎಲ್ಲರನ್ನೂ ಕರೆಸಿ ಮ್ಯಾನೇಜ್ ಮಾಡುತ್ತಿದ್ದೇವೆ. ಅದೇ ರೀತಿ ವರ್ತಕರು, ಕಾರ್ವಿುಕರು, ವಕೀಲರು, ಕೃಷಿಕರು ಸೇರಿ ಬೇರೆ ಬೇರೆ ವರ್ಗದವರ ಜತೆ ನಿರಂತರ ಸಭೆ ನಡೆಸುತ್ತೇವೆ. ಕಾಂಗ್ರೆಸ್​ನಲ್ಲಿ ಈ ರೀತಿಯ ಚಟುವಟಿಕೆ ಕಾಣುವುದಿಲ್ಲ. ಹಾಗಿದ್ದರೂ ಅವರಿಗೆ ಸೈಲೆಂಟ್ ವೋಟರ್​ಗಳಿದ್ದಾರೆ. ಮುಸ್ಲಿಮರಲ್ಲಿ ಶೇ.95 ಮಂದಿ ಕಾಂಗ್ರೆಸ್​ಗೆ ವೋಟ್ ಹಾಕುತ್ತಾರೆ. ಈ ಬಾರಿ ಕೆಲವು ಕಡೆ ಆಮ್ ಆದ್ಮಿಗೆ ಹಾಕಬಹುದು ಎಂದವರು ವಿಶ್ಲೇಷಿಸುತ್ತಾರೆ. 2017ರಲ್ಲಿ ಬಿಜೆಪಿ 49.1% ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ 41.4%ನ್ನು ತನ್ನದಾಗಿಸಿಕೊಂಡಿತ್ತು. ಒಂದುವೇಳೆ ಬಿಜೆಪಿಯ ಮತ ಪ್ರಮಾಣ ಕಡಿಮೆಯಾದರೂ, ಸೀಟುಗಳು ಜಾಸ್ತಿಯಾಗಬಲ್ಲವು ಎಂದು ಅಂದಾಜಿಸಲಾಗುತ್ತಿದೆ.
ಗ್ರೌಂಡ್ ವರ್ಕ್ ಕೊರತೆ: ಯಾವುದೇ ರಾಜ್ಯ ಗೆಲ್ಲಬೇಕೆಂದರೂ 1 ವರ್ಷಕ್ಕೆ ಮುನ್ನವೇ ಗ್ರೌಂಡ್ ವರ್ಕ್ ಶುರು ಮಾಡಬೇಕು. ಈ ಕೆಲಸವನ್ನು ಆಮ್ ಆದ್ಮಿ ಮಾಡಿದೆ. ಆದರೆ, ರಾಹುಲ್ ಅಥವಾ ಪ್ರಿಯಾಂಕಾ ಗಾಂಧಿಗೆ ಇದರ ಅರಿವಿಲ್ಲವೋ ಅಥವಾ ನಾವು ಗುಜರಾತಿನಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಸುಮ್ಮನೆ ಕುಳಿತರೋ ಗೊತ್ತಿಲ್ಲ. ಕಳೆದ 3 ವರ್ಷಗಳಿಂದ ರಾಹುಲ್ ಗಾಂಧಿ ಗುಜರಾತ್ ಕಡೆ ತಲೆ ಹಾಕಿಯೂ ನೋಡದಿರುವುದು ಸ್ಥಳೀಯ ಘಟಕವನ್ನು ಹತಾಶೆಗೆ ತಳ್ಳಿದೆ. ಬಿಜೆಪಿ-ಆಪ್ ಪ್ರಚಾರದ ಅಬ್ಬರದ ನಡುವೆ ಕಾಂಗ್ರೆಸ್ ಕಳೆದುಹೋದ ಅನುಭವವಾಗುತ್ತಿದೆ. 2017ರಲ್ಲಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ರಾಹುಲ್ ಗುಜರಾತ್ ಪ್ರಚಾರದ ನೇತೃತ್ವ ವಹಿಸಿದ್ದರು. ಪ್ರಧಾನಿ ಮೋದಿ 32,201 ಕಿಮೀ ಪ್ರಯಾಣದ ಮೂಲಕ ಪ್ರಚಾರ ನಡೆಸಿದರೆ ರಾಹುಲ್ 24,099 ಕಿಮೀ ಪ್ರಯಾಣ-ಪ್ರಚಾರ ನಡೆಸಿದ್ದರು. ಕಳೆದ ಬಾರಿಗಿಂತ ಹೆಚ್ಚು ಉತ್ಸಾಹ, ಓಡಾಟ ನಡೆಸುತ್ತಿರುವ ಮೋದಿ, 1985ರಲ್ಲಿ ಕಾಂಗ್ರೆಸ್ ಮಾಧವಸಿಂಹ ಸೋಲಂಕಿ ನೇತೃತ್ವದಲ್ಲಿ 149 ಸೀಟು ಗೆದ್ದಿತ್ತು. ನಾವು ಈ ಬಾರಿ ಅದನ್ನು ದಾಟುವ ದಾಖಲೆ ಮಾಡಬೇಕು ಎಂಬ ಸಂದೇಶ ರವಾನಿಸಿದ್ದಾರೆ.
ಕೇಸರಿ ಪಡೆ ಆಟಕ್ಕೆ ನಿರುತ್ತರ:2015ರ ಪಂಚಾಯತ್ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ಕಾಂಗ್ರೆಸ್, 2017ರ ಚುನಾವಣೆಯಲ್ಲಿ ಹಾರ್ದಿಕ್ ಪಟೇಲ್ ನೇತೃತ್ವದ ಪಾಟಿದಾರ್ ಆಂದೋಲನದ ಲಾಭ ಪಡೆದಿತ್ತು. 2017ರ ಕಾಂಗ್ರೆಸ್ ನಿರ್ವಹಣೆಯಿಂದ ದಿಗ್ಭಾ›ಂತರಾಗಿದ್ದ ಬಿಜೆಪಿ ವರಿಷ್ಠರು, ಕಾಂಗ್ರೆಸ್ ದುರ್ಬಲಗೊಳಿಸಲು ಬೇಕಾದ ಎಲ್ಲವನ್ನೂ ಮಾಡಿದರು. ಎರಡು ಡಜನ್​ಗಿಂತಲೂ ಹೆಚ್ಚು ಕಾಂಗ್ರೆಸ್ ನಾಯಕರು ಮತ್ತು ಶಾಸಕರು ಈಗ ಬಿಜೆಪಿಯಲ್ಲಿದ್ದಾರೆ. ಬಿಜೆಪಿ ಶಾಸಕರ ಸಂಖ್ಯೆ 99ರಿಂದ 111ಕ್ಕೇರಿದೆ. ಚುನಾವಣೆಯ ಕೆಲ ತಿಂಗಳ ಹಿಂದೆ ಬುಡಕಟ್ಟು ಸಮಾಜದ ಮೂವರು ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಹಾರ್ದಿಕ್ ಪಟೇಲ್ ಬಿಜೆಪಿ ಸೇರಿದರೆ, ಅವರ ಒಡನಾಡಿಗಳಾದ, ನಿಖಿಲ್ ಸವಾನಿ, ಧಾರ್ವಿುಕ್ ಮಾಳವೀಯ ಮತ್ತು ಅಲ್ಪೇಶ್ ಕಥಿರಿಯಾರಂತಹ ಹಲವರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಗುಜರಾತ್ ಪ್ರಚಾರ ಕಣದಲ್ಲಿದ್ದರೂ, ರಾಜಸ್ತಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಜತೆಗಿನ ಕಿತ್ತಾಟವೇ ಹೆಚ್ಚು ಚರ್ಚೆಗೀಡಾಗಿದೆ. ಇವೆಲ್ಲವೂ ಪಕ್ಷವನ್ನು ಮತ್ತಷ್ಟು ದುರ್ಬಲಗೊಳಿಸಿದೆ.
ಜನಪ್ರಿಯ ನಾಯಕರ ಕೊರತೆ:ಬರೋಡದ ಚಹಾ ಅಂಗಡಿಯಲ್ಲಿ ಸಿಕ್ಕ ಹಿರಿ ವಯಸ್ಸಿನ ಬಿ.ಎಚ್. ಕಾಳೆ ಮತ್ತು ಭರ್ತರಾಮ್ ಮಾಸ್ಕೆ, ಚುನಾವಣೆ ಗೆಲ್ಲಬೇಕೆಂದರೆ ಜನಪ್ರಿಯ ನಾಯಕರು ಬೇಕು. ಬಿಜೆಪಿಗೆ ಮೋದಿ ಇದ್ದಾರೆ, ಕಾಂಗ್ರೆಸ್​ಗೆ ಯಾರಿದ್ದಾರೆ? ಹೋಗಲಿ, ಇಷ್ಟು ವರ್ಷಗಳಲ್ಲಿ ಒಬ್ಬ ನಾಯಕನನ್ನೂ ಯಾಕೆ ಬೆಳೆಸಲಿಲ್ಲ ಎಂದು ಪ್ರಶ್ನಿಸುತ್ತಾರೆ. ರಾಜ್ಯ ಮತ್ತು ರಾಷ್ಟ್ರ ಕಾಂಗ್ರೆಸ್​ನಲ್ಲಿ ಪ್ರಭಾವಿಯಾಗಿದ್ದ ಅಹ್ಮದ್ ಪಟೇಲ್ ಇಲ್ಲಿ ಯಾರನ್ನು ಬೆಳೆಯಲೂ ಬಿಡಲಿಲ್ಲ. ಈಗ ಅವರಿಲ್ಲ. ಆದರೆ, ಪಕ್ಷಕ್ಕೆ ಇದು ದೊಡ್ಡ ಹಾನಿ ಮಾಡಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಹೆಚ್ಚು ಮಹತ್ವ ಸಿಗುತ್ತದೆ ಎಂಬ ಭಯವನ್ನೂ ಹುಟ್ಟುಹಾಕಿದ್ದಾರೆ. ಹಾಗಾಗಿ, ಜನ ಬಿಜೆಪಿಯನ್ನೇ ಆಯ್ಕೆ ಮಾಡುತ್ತಾರೆ ಎನ್ನುವುದು ಕಾಳೆ ಮತ್ತು ಮಾಸ್ಕೆ ಅನಿಸಿಕೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಛಾವ್ಡಾ, ವಿಧಾನಸಭೆ ವಿಪಕ್ಷ ನಾಯಕ, ಅಮ್ರೇಲಿ ಜಿಲ್ಲೆಯ ಜನಪ್ರಿಯ ನಾಯಕ ಪರೇಶ್ ಧನಾನಿ…ಹೀಗೆ ಇವರೆಲ್ಲ ಕೆಲ ಭಾಗಕ್ಕಷ್ಟೇ ಸೀಮಿತರಾಗಿದ್ದಾರೆ. ದುರ್ಬಲ ಹೈಕಮಾಂಡಿನ ಜತೆಗೆ, ರಾಜ್ಯವ್ಯಾಪಿ ಸ್ವೀಕಾರಾರ್ಹ ಎನಿಸುವ ನಾಯಕನೂ ಇಲ್ಲದಿರುವುದು ಕಾಂಗ್ರೆಸ್ ಕಾರ್ಯಕರ್ತರ ಮುಂದೆ ಮತ್ತೊಂದು ಸೋಲಿನ ಆತಂಕ ತಂದಿಟ್ಟಿದೆ!
ರಿಪಬ್ಲಿಕ್ ಸ್ಟುಡಿಯೋದಲ್ಲಿ ‘ವಿಜಯಾನಂದ’ ಚಿತ್ರತಂಡ; ಡಿ. 9ರಂದು ಅದ್ಧೂರಿ ಬಿಡುಗಡೆ..

ಮೂರೂವರೆ ನಿಮಿಷಗಳಲ್ಲಿ ಪಾಸ್ತಾ ಆಗ್ತಿಲ್ಲ ಅಂತ ಕಂಪನಿ ವಿರುದ್ಧ ಸುಮಾರು 40 ಕೋಟಿ ರೂ. ಕೇಸ್ ಹಾಕಿದ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + three =
Remember me
