ಬೇರೆಬೇರೆ ದೇಶಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಕುಸಿತ ಆಗುತ್ತಿದ್ದರೆ, ಭಾರತವು ತನ್ನ ಸುಧಾರಣೆಗಳ ಮುಖಾಂತರ ಯಶಸ್ವಿಯಾಗಿ ಮುನ್ನಡೆದಿದೆ. ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕ ಸುಧಾರಣೆ ಮೂಲಕ ಭಾರತವು ಹಣಕಾಸು ಕ್ಷೇತ್ರದಲ್ಲಿ ಸದೃಢವಾಗಿದೆ. ದೇಶದ ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊಮ್ಮಿದೆ.
‘ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮುಂದಿಡಬೇಕಿದೆ’ ಎಂದು ಕಾಂಗ್ರೆಸ್ ಪಕ್ಷದ ಕರ್ನಾಟಕದ ಸಂಸದರೊಬ್ಬರು ದನಿ ಎತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್, ಹಾಗಾಗಿ ದೇಶದ ಅಧಿಕಾರ ನಡೆಸುವುದು ತನ್ನ ಆಜನ್ಮ ಸಿದ್ಧಹಕ್ಕು, ಎಂದೆಲ್ಲ ಭಾವಿಸಿರುವ ಕಾಂಗ್ರೆಸ್ ಹಾಗೂ ಅದರ ಮಾನಸಿಕತೆಯನ್ನು ಅರ್ಥಮಾಡಿಕೊಳ್ಳಬೇಕಿದೆ. ಈ ದೇಶಕ್ಕೆ ಸ್ವಾತಂತ್ರ್ಯಬಂದ ತಕ್ಷಣ ರಚನೆಯಾದ ಜವಾಹರಲಾಲ್ ನೆಹರು ನೇತೃತ್ವದ ಸರ್ಕಾರದಲ್ಲಿ, ಕಾಂಗ್ರೆಸ್ಸಿನ ಕಟ್ಟಾ ವಿರೋಧಿಗಳಾದ ಬಾಬಾಸಾಹೇಬ್ ಅಂಬೇಡ್ಕರ್, ಜನಸಂಘದ ಶ್ಯಾಂಪ್ರಸಾದ್ ಮುಖರ್ಜಿ ಸಹಿತ ಕಾಂಗ್ರೆಸ್ಸೇತರ ಹೋರಾಟಗಾರರೂ ಇದ್ದರು. ‘ಯಾಕೆ ಹೀಗೆ’ ಎಂದು ಕೇಳಿದಾಗ, ‘ಸ್ವಾತಂತ್ರ್ಯ ಬಂದಿದ್ದು ದೇಶಕ್ಕೆ ಹೊರತು ಕಾಂಗ್ರೆಸ್ಸಿಗಲ್ಲ’ ಎಂದು ಮಹಾತ್ಮ ಗಾಂಧಿ ಹೇಳಿದ್ದರಂತೆ ! ಈ ಕಾರಣದಿಂದಲೋ ಏನೋ, ಗಾಂಧೀಜಿ ಅವರು ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ವಿಸರ್ಜಿಸಿ ಎಂದು ಕರೆ ನೀಡಿದ್ದರು. ಹೀಗಿದ್ದರೂ ಕಾಂಗ್ರೆಸಿಗರು ಮಾತ್ರ ಅಧಿಕಾರದ ಹಕ್ಕಿನ ವಾರಸುದಾರರಂತೆ ಈಗಲೂ ಮಾತನಾಡುತ್ತಾರೆ. ಇಂಥದ್ದೊಂದು ಮಾನಸಿಕತೆ ಬಂದಿದ್ದು ಎಲ್ಲಿಂದ? ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಕಾಂಗ್ರೆಸ್ಸಿನ ಹುಟ್ಟು-ಬೆಳವಣಿಗೆ ಅರ್ಥ ಮಾಡಿಕೊಳ್ಳಬೇಕು.
ಕಾಂಗ್ರೆಸ್ ಆರಂಭಿಸಿದವರೂ ಒಬ್ಬ ಬ್ರಿಟಿಷರೇ ಆಗಿದ್ದರು. ಸ್ವಾತಂತ್ರ್ಯ ಚಳವಳಿ ಎನ್ನುವುದು ಕೆಲವು ನಾಯಕರ ನೇತೃತ್ವದಲ್ಲಿ ನಡೆಯುತ್ತಲೇ ಇತ್ತು. ಹೋರಾಟದ ಪ್ರಮುಖ ನಾಯಕರ ನಡುವೆ ಸಂಪರ್ಕಗಳು, ಸಂವಹನಗಳು ಇದ್ದವಾದರೂ ಒಟ್ಟಾರೆ ಹೋರಾಟ ವಿಕೇಂದ್ರೀಕೃತವಾಗಿತ್ತು. ಈ ಹೋರಾಟವನ್ನು ಗಾಂಧಿಯವರು ಒಂದು ಸಾಮೂಹಿಕ ಆಂದೋಲನವಾಗಿಸಿದರು. ಗಾಂಧೀಜಿ ಜತೆಗೆ ತೀವ್ರಗಾಮಿಗಳು, ಬಂಡಾಯಗಾರರು ಹೋರಾಟ ನಡೆಸುತ್ತಿದ್ದರು. ಈ ಎಲ್ಲ ಕಾರಣಗಳಿಂದ ಬ್ರಿಟಿಷರು ದೇಶವನ್ನು ಬಿಟ್ಟು ಹೋಗುವುದು ಅನಿವಾರ್ಯವಾಯಿತು.
ಇದೆಲ್ಲದರ ಸಾರ ಇಷ್ಟೆ- ಕಾಂಗ್ರೆಸ್ ಪಕ್ಷವು, ಭಾರತದ ಒಂದು ಸಾವಿರ ವರ್ಷದ ಸ್ವಾತಂತ್ರ್ಯ ಹೋರಾಟದ ಉತ್ತರಾಧಿಕಾರಿಯಲ್ಲ. ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿಯೇ ರಾಷ್ಟ್ರೀಯತೆ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಎಂದಿದೆ. ಆದರೆ ಅಲ್ಲಿನ ನಾಯಕರಿಗೆ ರಾಷ್ಟ್ರೀಯತೆಯ ವಿಚಾರ ಮೈಗೂಡಲಿಲ್ಲ. ನೆಹರು ಅವರು ಆಡಳಿತದಲ್ಲಿ ಪ್ರಮುಖವಾಗಿ ಅನುಸರಿಸಿದ್ದು ಆರು ಅಂಶಗಳು. 1. ಜಾತ್ಯತೀತತೆ, 2. ಸಮಾಜವಾದಿ, 3. ಯೋಜನೆ, 4. ಪತ್ರಿಕಾ ಸ್ವಾತಂತ್ರ್ಯ, 5. ಅಂತಾರಾಷ್ಟ್ರೀಯತೆ ಹಾಗೂ 6. ರಾಷ್ಟ್ರೀಯತೆ.
ಆದರೆ, ರಾಷ್ಟ್ರೀಯತೆಯನ್ನು ಪೂರ್ಣ ಪ್ರಮಾಣದಲ್ಲಿ ಪ್ರತಿಪಾದನೆ ಮಾಡಿಬಿಟ್ಟರೆ ಮುಸ್ಲಿಂರಿಗೆ ಬೇಸರವಾಗುತ್ತದೆ ಎಂಬ ಭಯ. ಇದೇ ಕಾರಣಕ್ಕೆ ರಾಷ್ಟ್ರೀಯತೆ ಜತೆ ರಾಜಿಯಾಗುತ್ತಿದ್ದರು. ಒಂದೆಡೆ ದೇಶದ ಅಖಂಡತೆ, ಸಾರ್ವಭೌಮತೆ ವಿಚಾರದಲ್ಲಿ ಮಾತನಾಡುತ್ತಿದ್ದ ನೆಹರು, ಅರುಣಾಚಲ ಪ್ರದೇಶದ ವಿಚಾರ ಬಂದ ಕೂಡಲೇ ತಣ್ಣಗಾಗುತ್ತಿದ್ದರು ‘ಒಂದು ಹುಲ್ಲುಕಡ್ಡಿಯೂ ಹುಟ್ಟದ ಆ ಪ್ರದೇಶದ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು?’ ಎಂದು ಕೇಳುತ್ತಿದ್ದರು. ಈ ಮಾತಿಗೆ ಪ್ರತಿಕ್ರಿಯಿಸಿದ್ದ ನಾನಾಜಿ ದೇಶಮುಖ್, ‘ನನ್ನ ಬೊಕ್ಕ ತಲೆಯಲ್ಲಿ ಒಂದು ಕೂದಲೂ ಇಲ್ಲ. ಇದನ್ನು ತೆಗೆದುಹಾಕಬೇಕೆ?’ ಎಂದು ಪ್ರಶ್ನಿಸಿದ್ದರು.
ನೆಹರು ಕಾಲದಲ್ಲಿ ಕಾಂಗ್ರೆಸ್ ಅನುಸರಿಸಿಕೊಂಡುಬಂದಿದ್ದು ‘ನಕಲಿ ಜಾತ್ಯತೀತವಾದ’ (ಸೂಡೋ ಸೆಕ್ಯುಲರಿಸಂ). ಆದರೆ ಆ ಸಂದರ್ಭದಲ್ಲೂ ಕಾಂಗ್ರೆಸ್ ವ್ಯಕ್ತಿತ್ವದಲ್ಲಿ ಹಿಂದೂ ಧರ್ಮದ ಕುರಿತು ದ್ವೇಷಭಾವನೆ ಬೆಳೆದಿರಲಿಲ್ಲ. ನೆಹರು ಸಮಯದಲ್ಲಷ್ಟೆ ಅಲ್ಲ, ರಾಜೀವ್ ಗಾಂಧಿ ಕಾಲದವರೆಗೂ ಪರೋಕ್ಷವಾಗಿಯಾದರೂ ಹಿಂದೂ ಧರ್ಮ ಹಾಗೂ ದೇಶದ ಸಮಗ್ರತೆ, ಅಖಂಡತೆ ಕುರಿತು ಮೃದುಭಾವನೆ ಹೊಂದಿತ್ತು. ಸೋನಿಯಾ ಗಾಂಧಿಯವರು ಭಾರತದ ರಾಜಕೀಯಕ್ಕೆ ಪ್ರವೇಶಿಸಿದ ನಂತರದಲ್ಲಿ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ‘ಹಿಂದೂ ವಿರೋಧಿ’ಯಾಗಿ ತನ್ನ ಪೊರೆಯನ್ನು ಕಳಚಿಕೊಂಡು ನಿಂತಿತು.
ಈಗ ಸಂಸದ ಡಿ.ಕೆ.ಸುರೇಶ್ ಅವರ ಪ್ರತ್ಯೇಕ ದೇಶದ ಕೂಗಿನ ಬಗ್ಗೆ ರ್ಚಚಿಸೋಣ ಕೇಂದ್ರ ಸರ್ಕಾರವು ತಮಗೆ ಅನುದಾನವನ್ನು ಸರಿಯಾಗಿ ಹಂಚಿಕೆ ಮಾಡದೇ ಹೋದರೆ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡಬೇಕಾಗುತ್ತದೆ ಎಂಬುದು ಅವರ ಆಕ್ರೋಶ. ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸಿದ ನಂತರ ಈ ಮಾತನ್ನು ಹೇಳಿದ್ದಾರೆ. ಹಾಗಾದರೆ ಹಣಕಾಸು ಹಂಚಿಕೆಯಲ್ಲಿ ಅವಮಾನವಾದ ಕೂಡಲೇ ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡುವುದು ಪರಿಹಾರವೇ?
‘ಕೇಂದ್ರ ಸರ್ಕಾರವು ರಾಜ್ಯಗಳಿಂದ ತೆರಿಗೆಯನ್ನು ಸಂಗ್ರಹಿಸುತ್ತದೆ, ಆದರೆ ಅದೇ ಪ್ರಮಾಣದಲ್ಲಿ ಹಂಚಿಕೆ ಮಾಡುವುದಿಲ್ಲ, ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಿ, ದಕ್ಷಿಣದ ರಾಜ್ಯಗಳನ್ನು ಕಡೆಗಣಿಸುತ್ತದೆ’ ಎಂಬುದು ಕಾಂಗ್ರೆಸ್ಸಿಗರ ವಾದ. ಈ ಹಣಕಾಸು ಹಂಚಿಕೆ ನಡೆಯುವುದು ಹಣಕಾಸು ಆಯೋಗದ ಶಿಫಾರಸಿನ ಆಧಾರದಲ್ಲಿ. ಹೀಗಿದ್ದರೂ ತಾರತಮ್ಯದ ಆರೋಪವನ್ನು ಕೇಂದ್ರ ಸರ್ಕಾರದ ಮೇಲೆ ಏಕೆ ಹೊರಿಸಲಾಗುತ್ತದೆ ಎನ್ನುವುದಕ್ಕೆ ಅವರಲ್ಲಿ ಉತ್ತರವಿಲ್ಲ.
ಹಣಕಾಸು ಆಯೋಗವು ಜನಸಂಖ್ಯೆಯ ಆಧಾರದಲ್ಲಿ ಹಣಕಾಸನ್ನು ಹಂಚಿಸುತ್ತದೆ, ಉತ್ತರ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣ ಕಾನೂನನ್ನು ಪಾಲಿಸಿಲ್ಲವಾದ್ಧರಿಂದ ಅವರಿಗೆ ಹೆಚ್ಚು ಅನುದಾನ ನೀಡಿದ್ದಾರೆ ಎಂಬ ಅವೈಜ್ಞಾನಿಕ ಹೇಳಿಕೆಯನ್ನೂ ಕೇಳುತ್ತಿದ್ದೇವೆ. ಹಣಕಾಸು ಆಯೋಗವು ಜನಸಂಖ್ಯೆ ಜತೆಗೆ ಭೂಭಾಗ, ಆಯಾ ರಾಜ್ಯಗಳ ಹಣಕಾಸು ಸ್ಥಿತಿಗತಿ, ಭವಿಷ್ಯದ ಬೆಳವಣಿಗೆ ಹಾಗೂ ಸಂವಿಧಾನದ ಆಶಯಗಳನ್ನು ಆಧರಿಸಿ ಹಣ ಹಂಚಿಕೆಗೆ ಸೂತ್ರ ನಿಗದಿಮಾಡಿರುತ್ತದೆ. ಜಿಎಸ್​ಟಿ ಜಾರಿ ನಂತರ ರಾಜ್ಯಗಳಿಗೆ ಅನುದಾನದಲ್ಲಿ ಮೋಸವಾಗಿದೆ ಎನ್ನುವುದು ಇನ್ನೊಂದು ವಾದ. ಜಿಎಸ್​ಟಿ ಜಾರಿಯಾಗಿದ್ದು ಬಹುಮತದಿಂದಲ್ಲ, ಸರ್ವಾನುಮತದಿಂದ. ಆಗ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರ ಪರಿಶ್ರಮದಿಂದಾಗಿ, ಎಲ್ಲ ರಾಜ್ಯಗಳೂ ಸರ್ವಾನುಮತದಿಂದ ಜಿಎಸ್​ಟಿ ಜಾರಿಗೊಳಿಸಿದ್ದವು. ಎನ್​ಡಿಎ ಆಡಳಿತವಿರುವ ರಾಜ್ಯಗಳಷ್ಟೆ ಅಲ್ಲದೆ, ಕರ್ನಾಟಕದಂಥ ಕಾಂಗ್ರೆಸ್ ಆಡಳಿತದ ರಾಜ್ಯಗಳೂ ಇದರಲ್ಲಿದ್ದವು. ಆಗೆಲ್ಲ ಒಪ್ಪಿದ ಪಕ್ಷ ಈಗ ರಾಜಕೀಯ ಕಾರಣಗಳಿಗಾಗಿ ಪ್ರತ್ಯೇಕತಾವಾದಕ್ಕೆ ಬೆಂಬಲ ನೀಡುತ್ತಿದೆ.
ಕರ್ನಾಟಕಕ್ಕೆ ಯಾರ ಅವಧಿಯಲ್ಲಿ ಎಷ್ಟು ಅನುದಾನ ಕೇಂದ್ರದಿಂದ ಬಂದಿದೆ ನೋಡಿ. ಕೇಂದ್ರ ಸರ್ಕಾರದ ಕಳೆದ 10 ವರ್ಷಗಳ ಬಜೆಟಿನ ಕೇಂದ್ರವಸ್ತುವೆ-ವಿಕಸಿತ ಭಾರತ. ಇದರಲ್ಲಿ ವಿಕಸಿತ ಕರ್ನಾಟಕವೂ ಸೇರಿದೆ. ಕರ್ನಾಟಕಕ್ಕೂ ಮೋದಿ ಕಳೆದ 10 ವರ್ಷಗಳಲ್ಲಿ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟ ಡಿ.ಕೆ.ಸುರೇಶ್ ಹಾಗೂ ಹೇಳಿಕೆಗೆ ಪರೋಕ್ಷವಾಗಿ ಬೆಂಬಲ ಸೂಚಿಸಿರುವ ಡಿ.ಕೆ. ಶಿವ ಕುಮಾರ್ ಅವರ ಗಮನಕ್ಕೆ ಒಂದಿಷ್ಟು ಅಂಕಿ-ಸಂಖ್ಯೆ. ಇದೆಲ್ಲ ಕರ್ನಾಟಕದ ಜನತೆಗೆ ಗೊತ್ತಿರುವ ವಿಷಯ. ಆದರೆ ಏನು ಮಾಡುವುದು? ಇದು ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲ!
ತೆರಿಗೆ ವಿತರಣೆ ಕುರಿತು ಹೇಳುವುದಾದರೆ, ಯುಪಿಎ ಅವಧಿಯ 2004-2014ನೇ ಸಾಲಿನಲ್ಲಿ ಕರ್ನಾಟಕಕ್ಕೆ ಬಂದಿರುವ ಪಾಲು 81,795 ಕೋಟಿ ರೂ. ಆದರೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 2014-2024ರ ಅವಧಿಯಲ್ಲಿ ಕರ್ನಾಟಕ ಪಡೆದಿರುವ ತೆರಿಗೆ ಪಾಲು 2,82,791 ಕೋಟಿ ರೂ. ಅಭಿವೃದ್ಧಿ ಅನುದಾನ ಯುಪಿಎ ಅವಧಿಯ ಹತ್ತು ವರ್ಷಗಳಲ್ಲಿ 60,779 ಕೋಟಿ ರೂ., ಎನ್​ಡಿಎ ಅವಧಿಯ ಕಳೆದ 10 ವರ್ಷದಲ್ಲಿ 2,08,882 ಕೋಟಿ ರೂ.ನಷ್ಟಿದೆ. ತಾರತಮ್ಯ ಮಾಡಿದ್ದು ಯಾರು ಸುರೇಶ್ ಅವರೇ?
ಸ್ವಾತಂತ್ರ್ಯ ಬಂದ 1947ರಿಂದ ಯುಪಿಎ ಸರ್ಕಾರದ ಕಟ್ಟಕಡೆಯ ಆಡಳಿತ ವರ್ಷವಾದ 2014ರವರೆಗೆ ಕರ್ನಾಟಕದಲ್ಲಿ ನಿರ್ವಣಗೊಂಡ ರಾಷ್ಟ್ರೀಯ ಹೆದ್ದಾರಿ 6750 ಕಿ.ಮೀ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 13,500 ಕಿ.ಮೀ. ಹೆದ್ದಾರಿ ನಿರ್ವಣಗೊಂಡಿದೆ. ರಾಜ್ಯದ ರೈಲ್ವೆ ಯೋಜನೆಗಳಿಗೆ 2009-2014ರ ಅವಧಿಯಲ್ಲಿ 835 ಕೋಟಿ ರೂ, ಬಿಡುಗಡೆಯಾಗಿದ್ದರೆ, 2014-2023ರ ನಡುವೆ 11,000 ಕೋಟಿ ರೂ. ಹರಿದು ಬಂದಿದೆ. (2023-24ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ರೈಲ್ವೆಗೆ 7,524 ಕೋಟಿ ರೂ. ಹಂಚಿಕೆ ) ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿದ ಅವಧಿಯಲ್ಲಿ ರೈಲ್ವೆ ವಿದ್ಯುದೀಕರಣವಾಗಿದ್ದು ಬರೀ 16 ಕಿಲೋಮೀಟರ್ ಮಾತ್ರ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇದರ ಪ್ರಮಾಣ 3,265 ಕಿಲೋಮೀಟರ್! ಮನೆ-ಮನೆಗೆ ನಲ್ಲಿ ನೀರು ಜೋಡಿಸುವ ಕೆಲಸ 2014ರವರೆಗೆ ಕರ್ನಾಟದಲ್ಲಿ ಆಗಿದ್ದು 24 ಲಕ್ಷ ಮನೆಗಳಿಗೆ ಮಾತ್ರ. ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಜಲ್​ಜೀವನ್ ಮಿಶನ್​ನಿಂದಾಗಿ 73.75 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ನೀಡಲಾಗಿದೆ.
ಬೆಂಗಳೂರು ಸಾರಿಗೆ ಸವಾಲನ್ನು ಕಡಿಮೆ ಮಾಡಿರುವ ಮೆಟ್ರೋ ವಿಸ್ತಾರಗೊಳ್ಳುತ್ತಿರುವುದು ಕೂಡ ಮೋದಿ ಕಾಲದಲ್ಲಿಯೇ. 2014ರವರೆಗೆ 7 ಕಿಲೋಮೀಟರ್ ಮಾತ್ರ ಮೆಟ್ರೋ ಸಂಪರ್ಕ ಇತ್ತು. ಈಗ ಅದು ಹತ್ತುಪಟ್ಟು, ಅಂದರೆ 73 ಕಿಲೋಮೀಟರ್​ಗೆ ವೃದ್ಧಿಸಿದೆ. ಮನಮೋಹನ್ ಸಿಂಗ್ ಅವರ ಅಧಿಕಾರಾವಧಿ ಮುಗಿಯುವ ವೇಳೆಗೆ ಕರ್ನಾಟಕದಲ್ಲಿದ್ದ ಏಪೋರ್ಟ್ ಸಂಖ್ಯೆ 7 ಮಾತ್ರ. ಈ ಹತ್ತು ವರ್ಷಗಳಲ್ಲಿ ಅದು 14ಕ್ಕೆ ಏರಿದೆ. ಕರ್ನಾಟಕದ ಸಾರಿಗೆ, ಮೂಲಸೌಕರ್ಯಕ್ಕೆ ಮಾತ್ರವಲ್ಲ ಇಲ್ಲಿನ ಶೈಕ್ಷಣಿಕ ಹಾಗೂ ಜನಜೀವನದ ಅಭಿವೃದ್ಧಿಗೂ ಮೋದಿ ಸರ್ಕಾರದ ಕೊಡುಗೆ ಅಪಾರವಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3000 ಕೋಟಿ ರೂ. ಅನುಮೋದನೆ ನೀಡಿದ್ದಾರೆ. ಕರ್ನಾಟಕಕ್ಕೆ ಮೊದಲ ಐಐಟಿ ಮಂಜೂರು ಮಾಡಿದ್ದಾರೆ. ಚಿಕ್ಕಬಳ್ಳಾಪುರ, ಹಾವೇರಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಅನುವು ಮಾಡಿಕೊಟ್ಟಿದ್ದಾರೆ. ಚಿತ್ರದುರ್ಗ ಸೀಮೆಯ ಬರಪೀಡಿತ ಜನರಿಗಾಗಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೊಷಿಸಿದ್ದಾರೆ. ಬೆಂಗಳೂರಿನ ಔಟರ್​ರಿಂಗ್ ರೋಡಿಗೆ 5,500 ಕೋಟಿಗೂ ಹೆಚ್ಚು ಹಣ ಒದಗಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ 7 ನಗರಗಳಿಗೆ 7,281 ಕೋಟಿ ರೂ. ಹರಿದು ಬಂದಿದೆ. ಕಿಸಾನ್ ಸಮ್ಮಾನ್ ಅಡಿಯಲ್ಲಿ ರಾಜ್ಯದ ರೈತರಿಗೆ ನೀಡಿರುವ 10,990 ಕೋಟಿ ರೂ. ರೈತರ ಮುಖದಲ್ಲಿ ನಗು ತಂದಿದೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ರಾಜ್ಯದ 62 ಲಕ್ಷಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದಾರೆ. ಪಿಎಂ ಗತಿಶಕ್ತಿ, ಸಾಗರಮಾಲಾ, ಪಿಎಂ ಆವಾಸ್, ಸಾಗರ್​ವಾಲಾ ಯೋಜನೆಯಡಿ ರಾಜ್ಯಕ್ಕೆ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ನೆರವು ಸಿಕ್ಕಿದೆ.
ಮೋದಿ ಅವರು ರಾಮಮಂದಿರ, ಹಿಂದುತ್ವ, ರಾಷ್ಟ್ರೀಯತೆ ಎಂಬ ಭಾವನಾತ್ಮಕ ಸಂಗತಿಗಳ ಮೇಲೆ ಮತಕೇಳುತ್ತಾರೆ. ಹಿಂದಿ ಭಾಷಿಕರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹಾಗಾಗಿ ಜನ ಅವರನ್ನು ಆಯ್ಕೆ ಮಾಡುತ್ತಾರೆ ಎಂದೇ ಈ ದೇಶದ ಒಂದು ವರ್ಗದ ಬುದ್ಧಿಜೀವಿಗಳು ಹೇಳುತ್ತ ಬಂದಿದ್ದಾರೆ. ಅದರೆ, ಮೋದಿಯವರನ್ನು ನಂಬಿರುವ ಜನ ಬುದ್ಧಿವಂತರು. ಕಳೆದ ದಶಕದಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸುತ್ತಲೇ ಇದ್ದಾರೆ. ಅಭಿವೃದ್ಧಿ ಅವರ ಕಣ್ಣಿಗೆ ಕಾಣುತ್ತಿದೆ ಹಾಗೂ ಅದು ಅವರ ಜೀವನವನ್ನು ಸರಳವಾಗಿಸಿದೆ!
ಕರ್ನಾಟಕ ರಾಜ್ಯವು ಏಕೀಕರಣವಾಗಿ ಐದು ದಶಕಗಳೇ ಕಳೆದರೂ ಕಲ್ಯಾಣ ಕರ್ನಾಟಕ ಭಾಗ (ಈ ಹಿಂದೆ ಹೈದರಾಬಾದ್-ಕರ್ನಾಟಕ) ಅಭಿವೃದ್ಧಿಯ ಅನೇಕ ಮಾನದಂಡಗಳಲ್ಲಿ ಹಿಂದುಳಿದಿತ್ತು. ಇದನ್ನು ಸರಿಪಡಿಸಲೆಂದೇ ಸಂವಿಧಾನದ ಅನುಚ್ಛೇದ 371 ಜೆ ಜಾರಿಗೆ ಹೋರಾಟ ನಡೆಸಿ ಅನುಷ್ಠಾನ ಮಾಡಲಾಗಿದೆ. ಅನುಚ್ಛೇದ 371 ಜೆ ಜಾರಿ ಮಾಡಿದ್ದು ತಾವೇ ಎಂದು ಸ್ವತಃ ಕಾಂಗ್ರೆಸಿಗರು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಈಗ ಕರ್ನಾಟಕದ ಯಾವುದೇ ಭಾಗದಲ್ಲಿ ಸರ್ಕಾರಿ ನೌಕರಿಗೆ ಅರ್ಜಿ ಆಹ್ವಾನಿಸಿದರೂ ಹೈದರಾಬಾದ್-ಕರ್ನಾಟಕ ಭಾಗದ ಜನರಿಗೆ ಮೀಸಲಾತಿ ನೀಡಲಾಗುತ್ತದೆ. ಬೆಂಗಳೂರಿನಿಂದಲೇ ಬಹಳಷ್ಟು ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತದೆ. ಬೆಂಗಳೂರಿನ ತೆರಿಗೆಯನ್ನು ಇಲ್ಲಿಯೇ ಖರ್ಚು ಮಾಡಬೇಕು, ದೂರದ ವಿಜಯಪುರಕ್ಕೆ ಕೊಡಕೂಡದು ಎಂದರೆ ಅದರಷ್ಟು ಅರ್ಥಹೀನ ಹೇಳಿಕೆ ಇನ್ನೊಂದು ಇರುವುದಿಲ್ಲ.
ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ಯಾವ ದೇಶ ನಂಬರ್​ 1? ಈ ಪಟ್ಟಿಯಲ್ಲಿ ಭಾರತಕ್ಕೆ ಸಿಕ್ಕ ಸ್ಥಾನ ನೋಡಿದ್ರೆ ಅಚ್ಚರಿಗೊಳ್ತೀರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 6 =
Remember me
