ಬೆಂಗಳೂರು:ಪಂಜಾಬ್ ಚುನಾವಣೆಗೆ ಮುನ್ನ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಅವರ ಆಪ್ತರ ಕಿವಿ ನೆಟ್ಟಗಾಗಿದೆ. ಪಂಜಾಬ್​ನಲ್ಲಿ ಸಿಎಂ ಅಭ್ಯರ್ಥಿ ಘೋಷಿಸಿ ಕಾಂಗ್ರೆಸ್ ಗಟ್ಟಿ ನಿಲುವು ಪ್ರದರ್ಶಿಸಿದೆ. ಇದರ ಬೆನ್ನಿಗೇ ರಾಜ್ಯ ಕಾಂಗ್ರೆಸ್​ನಿಂದ ಸಿಎಂ ಅಭ್ಯರ್ಥಿ ಘೋಷಣೆ ಮಾಡಬಹುದೇ? ಮಾಡಿದ್ದೇ ಆದಲ್ಲಿ ಯಾವೆಲ್ಲ ಹೆಸರು ಬರಬಹುದು? ರಾಜಕೀಯ ಪರಿಣಾಮ ಕುರಿತಂತೆ ಪಕ್ಷದ ಮುಖಂಡರು ಚರ್ಚೆ ನಡೆಸಿದ್ದಾರೆ. ಲಾಭ ಏನು, ನಷ್ಟ ಏನು, ಜಾತಿ ಸಮೀಕರಣ ಏನಾಗಬಹುದೆಂದು ವಿಚಾರ ವಿನಿಮಯ ಮಾಡಿದ್ದಾರೆ. ಮುಂದಿನ ವರ್ಷದ ಏಪ್ರಿಲ್-ಮೇನಲ್ಲಿ ಚುನಾವಣೆ ನಿಗದಿಯಾಗುವ ಸಾಧ್ಯತೆ ಇದ್ದು, ಸಿಎಂ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಹೆಸರು ಘೋಷಿಸಬೇಕೆಂದು ಅವರ ಆಪ್ತರು ವಾದಿಸುತ್ತಾರೆ. ಸಿಎಂ ಪಟ್ಟಕ್ಕೆ ಈಗ ಸಿದ್ದರಾಮಯ್ಯ ಮಾತ್ರ ಸೂಕ್ತ, ಅವರ ಕಾರಣಕ್ಕೆ ಕಾಂಗ್ರೆಸ್ ಜತೆಗೆ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯವಿದೆ. ಅವರನ್ನು ಕಡೆಗಣಿಸಿದರೆ ಪಕ್ಷಕ್ಕೆ ಖಂಡಿತಾ ನಷ್ಟ ಎಂದು ಅಭಿಪ್ರಾಯಪಡುತ್ತಾರೆ.
ಇನ್ನು ಡಿ.ಕೆ.ಶಿವಕುಮಾರ್ ಜತೆ ಗುರುತಿಸಿಕೊಂಡಿರುವವರು ಹೊಸತನಕ್ಕಾಗಿ, ಗಟ್ಟಿ ಮುಂದಾಳತ್ವಕ್ಕೆ ಅವರೇ ಸೂಕ್ತ ಎನ್ನುತ್ತಾರೆ. ಸಿದ್ದರಾಮಯ್ಯಗೆ ಈಗಾಗಲೆ ಅವಕಾಶ ಕೊಡಲಾಗಿದೆ. ಡಿಕೆಶಿ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದರೆ ಸಿದ್ದರಾಮಯ್ಯ ಸಹಕರಿಸುತ್ತಾರೆಂಬ ಆಶಾಭಾವನೆಯನ್ನೂ ವ್ಯಕ್ತಪಡಿಸುತ್ತಾರೆ. ಇವರಿಬ್ಬರ ಹೊರತಾಗಿ, ಮಲ್ಲಿಕಾರ್ಜುನ ಖರ್ಗೆ ಏಕೆ ಸಿಎಂ ಅಭ್ಯರ್ಥಿಯಾಗಬಾರದು ಎಂದು ವಾದ ಮಾಡುವವರೂ ಇದ್ದಾರೆ. ದಲಿತ ಸಮುದಾಯ ಕಾಂಗ್ರೆಸ್​ನಿಂದ ಹಂತಹಂತವಾಗಿ ದೂರಾಗಿದೆ. ಮತ್ತೆ ಒಟ್ಟಾಗಿ ಸೆಳೆಯಬೇಕೆಂದರೆ ದಲಿತ ಸಿಎಂ ಅಭ್ಯರ್ಥಿ ಘೋಷಣೆಯಾಗಬೇಕು, ಅದಕ್ಕೆ ಹಿರಿಯರಾದ ಖರ್ಗೆಯವರೇ ಸೂಕ್ತ, ಒಂದು ವೇಳೆ ಘೋಷಣೆಯಾದರೆ ಕಾಂಗ್ರೆಸ್​ನ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಈ ಮೂವರನ್ನು ಹೊರತುಪಡಿಸಿದರೆ ಜಿ.ಪರಮೇಶ್ವರ್ ಹೆಸರು ಆಗಾಗ್ಗೆ ಚರ್ಚೆಯಾಗುತ್ತದೆ, ಈಗಲೂ ಅವರ ಹೆಸರೂ ಚರ್ಚೆಯಲ್ಲಿದೆ. ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್ ಕುರಿತಂತೆಯೂ ಕೆಲವರಲ್ಲಿ ಸಕಾರಾತ್ಮಕ ಅಭಿಪ್ರಾಯವಿದೆ. ಆದರೆ ಚುನಾವಣೆಗೆ ಇನ್ನು ಒಂದು ವರ್ಷಕ್ಕೂ ಅಧಿಕ ಸಮಯವಿದ್ದು, ಎಚ್ಚರಿಕೆ ಹೆಜ್ಜೆ ಇಡುವುದು ಅಗತ್ಯವಾಗಿದೆ.
ಲಾಭ ನಷ್ಟದ ಲೆಕ್ಕಾಚಾರ:ಸದ್ಯಕ್ಕೆ ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋದರೆ ಒಳಿತಾಗುತ್ತದೆ ಎಂಬ ವಾದ ಪಕ್ಷದ ರಾಜ್ಯಘಟಕದಲ್ಲಿನ ಸಾಮಾನ್ಯ ನಾಯಕರಲ್ಲಿದೆ. ಒಂದು ವೇಳೆ ಮುಂಚಿತವಾಗಿ ಸಿದ್ದರಾಮಯ್ಯ ಹೆಸರು ಘೋಷಿಸಿದರೆ ಡಿ.ಕೆ.ಶಿವಕುಮಾರ್ ಯಾವ ರೀತಿ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಕೊಳ್ಳುತ್ತಾರೆ ಎಂಬುದನ್ನು ಊಹಿಸುವುದು ಕಷ್ಟ. ಹಾಗೆಯೇ, ಡಿ.ಕೆ.ಶಿವಕುಮಾರ್ ಹೆಸರು ಘೋಷಿಸಿದರೆ ಸಿದ್ದರಾಮಯ್ಯ ನಡೆ ನಿಗೂಢವಾಗಲಿದೆ. ಮಲ್ಲಿಕಾರ್ಜುನ ಖರ್ಗೆ ಪ್ರವೇಶವಾದರೆ ಇಬ್ಬರು ಸಹಕರಿಸಲೇಬೇಕಾಗುತ್ತದೆ, ಅದು ಹೆಚ್ಚು ಅನುಕೂಲಕರ ಎಂಬ ಅಭಿಪ್ರಾಯವಿದೆ.
ಬೊಮ್ಮಾಯಿ ಎದುರಾಳಿ ಜಟ್ಟಿ ಯಾರು?:ಕೇಂದ್ರ ಬಿಜೆಪಿಯು ಈಗಾಗಲೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂದು ಘೋಷಿಸಿದೆ. ಈ ಮೂಲಕ ತನ್ನ ವ್ಯೂಹಾತ್ಮಕ ತಂತ್ರ ಆರಂಭಿಸಿದೆ. ಪಕ್ಷದ ಆಂತರಿಕ ಮತ್ತು ಜಾತಿ ಸಮೀಕರಣದ ಲೆಕ್ಕದಲ್ಲಿ ಅದು ತನ್ನ ತೀರ್ಮಾನ ಪ್ರಕಟಿಸಿದೆ. ಇನ್ನು ಎದುರಾಳಿ ಕಾಂಗ್ರೆಸ್ ಈ ವಿಷಯದಲ್ಲಿ ಯಾವ ತೀರ್ಮಾನ ಮಾಡುತ್ತದೆಂಬ ಕುತೂಹಲವಿದೆ. ಸಿಎಂ ಅಭ್ಯರ್ಥಿ ಘೋಷಿಸುವುದರಿಂದ ಅಭ್ಯರ್ಥಿಯ ಜತೆಗಿನ ದೊಡ್ಡ ಸಮುದಾಯ ರಾಜ್ಯಾದ್ಯಂತ ಪಕ್ಷದ ಹಿಂದೆ ಬರುವ ಸಾಧ್ಯತೆ ಇರುತ್ತದೆ, ಜನರಿಗೂ ಸ್ಪಷ್ಟತೆ ಇರುತ್ತದೆ. ಇದು ಚುನಾವಣೆಯಲ್ಲಿ ಕೊಂಚ ಪರಿಣಾಮ ಬೀರುವ ವಿಷಯವೂ ಆಗಿರುತ್ತದೆ.
ಆ ಕಾಲೇಜಲ್ಲಿ ಹಿಜಾಬ್​ ತೊಡಲು ಈ ಹಿಂದೆ ಅವಕಾಶ ಇರಲಿಲ್ಲ; ಮಹತ್ವದ ದಾಖಲೆ ಬಹಿರಂಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 10 =
Remember me
