|ರಾಘವ ಶರ್ಮ ನಿಡ್ಲೆನವದೆಹಲಿ
ಉತ್ತರ ಪ್ರದೇಶ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ದಿನದಂದು ಮಹಿಳಾ ಪತ್ರಕರ್ತರೊಬ್ಬರು ‘ನಿಮ್ಮ ಪಕ್ಷದ ಸಿಎಂ ಅಭ್ಯರ್ಥಿ ಯಾರು’ ಎಂದು ಪ್ರಿಯಾಂಕಾ ಗಾಂಧಿಯವರಲ್ಲಿ ಕೇಳಿದರು. ‘ರಾಜ್ಯದಲ್ಲಿ ನಿಮಗೆ ನನ್ನ ಮುಖ ಬಿಟ್ಟು ಬೇರೆ ಯಾರದ್ದಾದರೂ ಮುಖ ಕಾಣುತ್ತಿದೆಯೇ’ ಎಂಬ ಮಾರ್ವಿುಕ ಉತ್ತರ ಕೊಟ್ಟರು ಪ್ರಿಯಾಂಕಾ. ಅಂದರೆ ಅದರರ್ಥ ಪ್ರಿಯಾಂಕಾ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ ಮತ್ತು ಅವರೇ ಸಿಎಂ ಅಭ್ಯರ್ಥಿ ಎಂದಾಗಿತ್ತು. ಆದರೆ, ಅದನ್ನು ನೇರವಾಗಿ ಹೇಳಲಿಲ್ಲ. ಮಾರನೇ ದಿನ ಎಲ್ಲ ಪತ್ರಿಕೆಗಳಲ್ಲೂ ‘ಪ್ರಿಯಾಂಕಾ ಸಿಎಂ ಅಭ್ಯರ್ಥಿ’ ಎಂದೇ ಸುದ್ದಿ ರಾರಾಜಿಸಿತು. ತಕ್ಷಣ ಸ್ಪಷ್ಟೀಕರಣ ಕೊಟ್ಟ ಪ್ರಿಯಾಂಕಾ, ‘ನೀವು ಪದೇಪದೆ ಇದೇ ಪ್ರಶ್ನೆ ಕೇಳುತ್ತೀರಿ. ನಾನು ಆ ಅರ್ಥದಲ್ಲಿ ಹೇಳಿರಲಿಲ್ಲ’ ಎಂದು ನುಣುಚಿಕೊಂಡರು.
ಇದು ಕಾಂಗ್ರೆಸ್​ನ ಇಂದಿನ ಪರಿಸ್ಥಿತಿ. ಪಕ್ಷ ಮುನ್ನಡೆಸುವವರಿಗೆ ತಾವು ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಚಿತವಾದಾಗ ನಾಯಕತ್ವದ ಖಚಿತತೆ ನೀಡುವುದೂ ಕಷ್ಟವಾಗಿಬಿಡುತ್ತದೆ. ರಾಹುಲ್ ಗಾಂಧಿ ವಿಷಯದಲ್ಲಿ ಆಗುತ್ತಿರುವುದೂ ಇದೇ. 2019ರ ಲೋಕಸಭೆ ಚುನಾವಣೆಯಲ್ಲೂ ಪ್ರಿಯಾಂಕಾ ವಾರಾಣಸಿ ಕ್ಷೇತ್ರದಲ್ಲೂ ಇದನ್ನೇ ಮಾಡಿದ್ದರು. ಪಕ್ಷದ ಮುಖಂಡರು, ಸ್ಥಳೀಯ ಕಾರ್ಯಕರ್ತರೆಲ್ಲರೂ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸುತ್ತಾರೆಂದು ನಂಬಿದ್ದರು. ಕೊನೆಗೆ, ಅವರು ‘ನಾನು ಇಲ್ಲಿಂದ ಸ್ಪರ್ಧಿಸಲಾರೆ’ ಎಂದುಬಿಟ್ಟರು. ಹಾಗೆ ನೋಡಿದರೆ, 2014ರಲ್ಲಿ ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್ ಅವರು ನರೇಂದ್ರ ಮೋದಿ ವಿರುದ್ಧ ವಾರಾಣಸಿಯಿಂದ ಕಣಕ್ಕಿಳಿದು 1 ಲಕ್ಷಕ್ಕಿಂತಲೂ ಹೆಚ್ಚು ಮತಗಳಿಸಿದ್ದರು. ಆದರೆ, ಪ್ರಿಯಾಂಕಾ ಈವರೆಗೆ ಇಂಥದ್ದೊಂದು ಸಾಹಸ ಮಾಡಿಲ್ಲ.
1985ರ ನಂತರ ಉತ್ತರ ಪ್ರದೇಶದಲ್ಲಿ ಕುಸಿಯುತ್ತಲೇ ಬಂದಿರುವ ಕಾಂಗ್ರೆಸ್ 2017ರ ಚುನಾವಣೆಯಲ್ಲಿ ಕಂಡಿದ್ದು ಐತಿಹಾಸಿಕ ದುರಂತ. ಹಿಂದೊಮ್ಮೆ ರಾಜ್ಯದಲ್ಲಿ 309 (1980) ಸೀಟು ಗೆದ್ದಿದ್ದ ಪಕ್ಷ ಕಳೆದ ಚುನಾವಣೆಯಲ್ಲಿ ಬರೀ 7 ಸೀಟುಗಳಿಗೆ ಕುಸಿದಿತ್ತು. ಸರಿ, ಇದರಿಂದ ಪಕ್ಷ ಪಾಠ ಕಲಿಯಿತೇ? ಕಳೆದೈದು ವರ್ಷದಲ್ಲಿ ಪಕ್ಷದ ಪುನರ್ ಸಂಘಟನೆ ಸಾಧ್ಯವಾಯಿತೇ? ಜನರನ್ನು ಸೆಳೆಯದ ರಾಷ್ಟ್ರೀಯ ನಾಯಕತ್ವ, ಹಿರಿಯರು-ಕಿರಿಯರ ನಡುವೆ ತಪ್ಪಿದ ತಾಳಮೇಳ, ಆಂತರಿಕ ಗುಂಪುಗಾರಿಕೆ ಮತ್ತು ಬೇರೆ ಪಕ್ಷಗಳೆಡೆ ಸಾಮೂಹಿಕ ವಲಸೆ…ಇವೆಲ್ಲ ಪಕ್ಷವನ್ನು ಪಾತಾಳಕ್ಕೆ ತಳ್ಳಿವೆ.
ಏಕೆ ಹೀಗಾಯ್ತು?:ಮಂಡಲ-ಕಮಂಡಲ ರಾಜಕಾರಣದ ಫಲಾನುಭವಿಗಳಾದ ಬಿಎಸ್​ಪಿ, ಸಮಾಜವಾದಿ ಪಕ್ಷ ಹಾಗೂ ಬಿಜೆಪಿ 90ರ ದಶಕದಿಂದ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ. ಈ ಮೂರು ಪಕ್ಷಗಳ ರಾಜಕೀಯ ದಾಂಗುಡಿ ಕಾಂಗ್ರೆಸ್​ನ್ನು ಜನ ತಿರಸ್ಕರಿಸುವಂತೆ ಮಾಡಿತು. ಮಂದಿರ ಚಳವಳಿ ಬಿಜೆಪಿಗೆ ಹೊಸ ಹುರುಪು ಕೊಟ್ಟರೆ, ಕರಸೇವಕರನ್ನು ಬಂಧಿಸಿ ‘ಹಿಂದು ಅಸ್ಮಿತೆಗೆ ಹಾನಿ’ ಮಾಡಿದ ಅಂದಿನ ಸಿಎಂ ಮುಲಾಯಂರನ್ನು ಮುಸ್ಲಿಮರು ಅಪ್ಪಿಕೊಳ್ಳಲು ಶುರುಮಾಡಿದರು. ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಮುಸ್ಲಿಮರು ಕೂಡ ನಿಧಾನವಾಗಿ ಸಮಾಜವಾದಿ ಕಡೆ ಶಿಫ್ಟ್ ಆಗಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಾಬರಿ ಮಸೀದಿಯ (ಮಂದಿರ) ಗೇಟ್​ಗಳನ್ನು ತೆರೆದು ಪೂಜೆಗೆ ಅನುವು ಮಾಡಿಕೊಟ್ಟರೂ, ಈ ವಿಷಯ ಬಿಜೆಪಿಯ ಹಿಂದುತ್ವ ರಾಜಕಾರಣದ ಗ್ರಾಫ್ ಏರಿಸಿತು. 1989ರಲ್ಲಿ 57 ವಿಧಾನಸಭೆ ಕ್ಷೇತ್ರ ಗೆದ್ದಿದ್ದ ಬಿಜೆಪಿ 1991ರಲ್ಲಿ 221 ಸೀಟುಗಳನ್ನು ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್ ಜತೆಗಿದ್ದ ಮೇಲ್ವರ್ಗದ ಮತಬ್ಯಾಂಕ್ ಸಾಮೂಹಿಕವಾಗಿ ಬಿಜೆಪಿಗೆ ಬದಲಾಯಿತು. 90ರ ದಶಕದಲ್ಲಿ ಬಿಜೆಪಿಯನ್ನು ನೆಚ್ಚಿಕೊಂಡ ಯಾದವೇತರ ಒಬಿಸಿ ಮತಗಳು, 2014ರ ಲೋಕಸಭೆ ಚುನಾವಣೆ ಬಳಿಕ ಮತ್ತೆ ಬಿಜೆಪಿ ಕಡೆ ವಾಲಿದವು. ಮೇಲ್ಜಾತಿ, ಯಾದವೇತರ ಒಬಿಸಿ, ಜಾಟ್​ಗಳು, ಜಾಟವೇತರ ಪರಿಶಿಷ್ಟರು ಕೇಸರಿಪಡೆಯನ್ನು ಈಗ ರಾಜಕೀಯವಾಗಿ ಪ್ರಬಲರಾಗಿಸಿದ್ದಾರೆ. 80ರ ದಶಕದ ಮಧ್ಯಾವಧಿವರೆಗೆ ಇದೇ ವೋಟ್​ಬ್ಯಾಂಕ್ ಕಾಂಗ್ರೆಸ್ ಜತೆಗಿತ್ತು. ಆದರೆ, ಬಿ.ಪಿ.ಮಂಡಲ್ ನೇತೃತ್ವದ ಮಂಡಲ ಆಯೋಗದ ವರದಿ ಬಂದ ನಂತರದಲ್ಲಿ ಮುಲಾಯಂ ಸಿಂಗ್ ಯಾದವ್​ರನ್ನು ಒಬಿಸಿಗಳು ದಂಡಿಯಾಗಿ ಬೆಂಬಲಿಸಲು ಶುರು ಮಾಡಿದರು. 1993ರ ಚುನಾವಣೆ ನಂತರದಿಂದ ರಾಜ್ಯದಲ್ಲಿ ಸಮಾಜವಾದಿ ಪಕ್ಷ ಬಲಿಷ್ಠವಾಗಿ ಹೊರಹೊಮ್ಮಿತು.
ಇಲ್ಲಿ ಮೊದಲಿನಿಂದಲೂ ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿಯಾಗಬಲ್ಲ ಪಕ್ಷವನ್ನೇ ಮುಸ್ಲಿಮರು ಬೆಂಬಲಿಸಿರುವುದನ್ನು ಕಾಣಬಹುದು. 1987ರಲ್ಲಿ ಮೀರತ್ ದಂಗೆಯನ್ನು ಕಾಂಗ್ರೆಸ್ ನಿರ್ವಹಿಸಿದ ರೀತಿಯಿಂದ ಸಿಟ್ಟಾಗಿದ್ದ ಈ ಮತಬ್ಯಾಂಕ್, ಮುಲಾಯಂರನ್ನು ನೆಚ್ಚಿಕೊಂಡಿತು. ಮಂದಿರ ಚಳವಳಿ ಕೂಡ ಮುಸ್ಲಿಮರನ್ನು ಸಮಾಜವಾದಿ ಕಡೆ ಪ್ರೇರೇಪಿಸಿತು. ಇದೇ ವೇಳೆ, ಕಾಂಶಿರಾಮ್ ಮತ್ತು ಮಾಯಾವತಿ ದಲಿತ ಅಸ್ಮಿತೆಯಾಗಿ ಹೊರಹೊಮ್ಮಿದ್ದರು. ಚುನಾವಣೆಗಳಲ್ಲೂ ಇದು ಪ್ರತಿಫಲನಗೊಂಡು ಕಾಂಗ್ರೆಸ್​ನ ಸಾಂಪ್ರದಾಯಿಕ ಪರಿಶಿಷ್ಟ ಜಾತಿ ಮತಗಳು ಬಹುಜನ ಸಮಾಜವಾದಿ ಪಾರ್ಟಿ ಕಡೆ ಬಿದ್ದವು. 2007ರ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರನ್ನು ಸೆಳೆದ ಮಾಯಾವತಿ, ತಮ್ಮ ರಾಜಕೀಯ ಒಡನಾಡಿ ಸತೀಶ್​ಚಂದ್ರ ಮಿಶ್ರಾ ಕಾರ್ಯತಂತ್ರದಿಂದಾಗಿ ಬ್ರಾಹ್ಮಣ ಮತಗಳನ್ನು ತೆಕ್ಕೆಗೆ ಹಾಕಿಕೊಂಡು ಅಧಿಕಾರದ ಗದ್ದುಗೆ ಏರಿದರು. 1991ರ ಚುನಾವಣೆ ನಂತರ ಯಾವ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಸೀಟುಗಳ ಸಂಖ್ಯೆ 50 ದಾಟಿಲ್ಲ. 91ರಲ್ಲಿ 46, 93ರಲ್ಲಿ 28, 96ರಲ್ಲಿ 33, 2002ರಲ್ಲಿ 25, 2007ರಲ್ಲಿ 22, 2012ರಲ್ಲಿ 28 ಮತ್ತು 2017ರಲ್ಲಿ ಒಂದಂಕಿಗೆ (7) ಬಂದು ನಿಂತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದಲ್ಲಿ ಸೋಲುವ ಮೂಲಕ ಈ ಗಾಂಧಿ ಭದ್ರಕೋಟೆಯೂ ಬಿಜೆಪಿ ಪಾಲಾಗಿತ್ತು. ಸೋನಿಯಾ ಗಾಂಧಿ ಅವರ ರಾಯ್ಬರೇಲಿಯೊಂದು ಉಳಿದುಕೊಂಡಿದೆ. ರಾಯ್ಬರೇಲಿ ಸದರ್ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಸದ್ಯ ಮಾಯಾವತಿ ಮತ್ತು ಕಾಂಗ್ರೆಸ್ ಸ್ಥಿತಿ-ಗತಿ ಹೆಚ್ಚುಕಡಿಮೆ ಒಂದೇ ರೀತಿ ಇದ್ದರೂ, ಜಾಟವ ಮತಬ್ಯಾಂಕ್ ಈಗಲೂ ಮಾಯಾವತಿ ಬಳಿ ಗಟ್ಟಿಯಾಗಿದೆ. 2011ರ ಜನಗಣತಿ ಪ್ರಕಾರ ರಾಜ್ಯದ ಪರಿಶಿಷ್ಟ ಜಾತಿ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಂದಿ ಜಾಟವರೇ ಇದ್ದಾರೆ. ಆದರೆ, ಕಾಂಗ್ರೆಸ್ ಬಳಿ ಪ್ರಬಲ ಎನಿಸುವ ಯಾವುದೇ ಮತಬ್ಯಾಂಕ್ ಇಲ್ಲ.
ವಲಸೆಯಿಂದ ಕಂಗೆಟ್ಟ ಕೈ:ಈ ವರ್ಷದ ಆರಂಭದಲ್ಲೇ ಸುಮಾರು 10 ಮಂದಿ ಪ್ರಮುಖ ನಾಯಕರು ರಾಜ್ಯ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ. ಮಾಜಿ ಸಿಎಂ ಕಮಲಾಪತಿ ತ್ರಿಪಾಠಿ ಮೊಮ್ಮಗ 37 ವರ್ಷದ ಲಲಿತೇಶ್ ತ್ರಿಪಾಠಿ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರಭಾವಿ ಯುವ ಮುಸ್ಲಿಂ ನಾಯಕ ಇಮ್ರಾನ್ ಮಸೂದ್​ರನ್ನು ಪಕ್ಷದ ರಾಜ್ಯ ಉಪಾಧ್ಯಕ್ಷ ಮತ್ತು ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಿಸಿದರೂ, ಈಗ ಸಮಾಜವಾದಿ ಪಕ್ಷ ಸೇರಿಕೊಂಡಿದ್ದಾರೆ. ಬರೇಲಿ ಮೇಯರ್ ಸುಪ್ರಿಯಾ ಅರೋನ್​ಗೆ ಬರೇಲಿ ಕಂಟೋನ್​ವೆುಂಟ್ ಕ್ಷೇತ್ರದಿಂದ ಟಿಕೆಟ್ ಸಿಕ್ಕರೂ, ತನ್ನ ಪತಿ ಪ್ರವೀಣ್ ಸಿಂಗ್ ಅರೋನ್ ಜತೆಗೆ ಸಮಾಜವಾದಿ ಪಕ್ಷ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ 32 ವರ್ಷಗಳಿಂದ ಕಾಂಗ್ರೆಸ್​ನಲ್ಲಿದ್ದ ಮತ್ತು ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಮಾಜಿ ಕೇಂದ್ರ ಸಚಿವ ಆರ್​ಪಿಎನ್ ಸಿಂಗ್ ಕೂಡ ಜ್ಯೋತಿರಾದಿತ್ಯಾ ಸಿಂದಿಯಾ, ಜಿತಿನ್ ಪ್ರಸಾದರಂತೆ ಕೇಸರಿ ಬಾವುಟ ಹಿಡಿದಿದ್ದಾರೆ. 2017ರಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿ ಕೇವಲ 144 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತೀರ್ಮಾನ ಅನೇಕ ಕಾಂಗ್ರೆಸ್ಸಿಗರನ್ನು ಹಂತಹಂತವಾಗಿ ಸಮಾಜವಾದಿ ಪಕ್ಷದ ಕಡೆ ಆಕರ್ಷಿಸಿತು.
ಪ್ರಿಯಾಂಕಾ ಗಾಂಧಿ 2019ರಲ್ಲಿ ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿಯಾದ ನಂತರ ಸಂಘಟನೆ ಬಲಗೊಳಿಸುವ ಯತ್ನ ಮಾಡಿದ್ದಾರೆ. 2020ರಲ್ಲಿ ರಾಜ್ಯದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಪ್ರಿಯಾಂಕಾ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ವಿವಿಧ ಮಹಿಳಾ ದೌರ್ಜನ್ಯ ಪ್ರಕರಣ ಸೇರಿದಂತೆ ಹಲವು ವಿಷಯಗಳಲ್ಲಿ ಸಿಎಂ ಯೋಗಿ ವಿರುದ್ಧ ಹೋರಾಟ ನಡೆಸಿದ್ದಾರೆ. ಯುವ ಜನಾಂಗ ಮತ್ತು ಮಹಿಳಾ ಕಲ್ಯಾಣ (ಲಡ್ಕೀ ಹೂ, ಲಡ್ ಸಕ್ತೀ ಹೂ ಅಭಿಯಾನ) ವಿಚಾರಗಳನ್ನು ಮುಂದಿಟ್ಟುಕೊಂಡೇ ಹಾಲಿ ಚುನಾವಣೆ ಎದುರಿಸುತ್ತಿರುವ ಪ್ರಿಯಾಂಕಾ, ಉನ್ನಾವ್ ಕ್ಷೇತ್ರದಲ್ಲಿ ಅತ್ಯಾಚಾರ ಸಂತ್ರಸ್ತೆ ತಾಯಿಗೆ ಟಿಕೆಟ್ ನೀಡುವ ಹೊಸ ಪ್ರಯೋಗ ಮಾಡಿದ್ದಾರೆ. ಫಲಿತಾಂಶ ಕಾದುನೋಡಬೇಕು.
ಗೋವಾ ಚುನಾವಣೆಗೆ ಪೊರಿಯೆಮ್ ಕ್ಷೇತ್ರದಿಂದ ಸ್ಪರ್ಧಿಸಬೇಕಿದ್ದ ಕಾಂಗ್ರೆಸ್​ನ ಹಿರಿಯ ನಾಯಕ ಪ್ರತಾಪ್​ಸಿಂಹ ರಾಣೆ (87 ವರ್ಷ) ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ವಯಸ್ಸಿನ ಕಾರಣದಿಂದಾಗಿ ಈ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.
ವಾಸ್ತವದಲ್ಲಿ, ರಾಣೆ ಅವರ ಸೊಸೆ ದೇವಿಯಾ ವಿಶ್ವಜಿತ್ ರಾಣೆ ಬಿಜೆಪಿ ಟಿಕೆಟ್​ನಿಂದ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಮಾವ ವರ್ಸಸ್ ಸೊಸೆ ನಡುವಿನ ರಾಜಕೀಯ ಸಮರ ಕಣವಾಗಿ ಮಾರ್ಪಟ್ಟಿತ್ತು. ಆದರೆ, ಕೊನೆಯ ಹಂತದಲ್ಲಿ ಸ್ಪರ್ಧಿಸದಿರಲು ಪ್ರತಾಪ್​ಸಿಂಹ ರಾಣೆ ನಿರ್ಧರಿಸಿದ್ದಾರೆ. ಅವರು11 ಬಾರಿ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, 45 ವರ್ಷದಿಂದ ಒಂದು ಚುನಾವಣೆಯಲ್ಲೂ ಸೋತಿಲ್ಲ. ರಾಣೆ ಪುತ್ರ ವಿಶ್ವಜಿತ್ ರಾಣೆ ಬಿಜೆಪಿ ಸರ್ಕಾರದಲ್ಲಿ ಸಚಿವರು. 2017ರ ವಿಧಾನಸಭೆ ಚುನಾವಣೆ ಬಳಿಕ ಅವರು ಬಿಜೆಪಿ ಸೇರ್ಪಡೆಯಾಗಿದ್ದರು.
ಉಪಾಧ್ಯಾಯ ಬಿಜೆಪಿಗೆ:ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ನಿಂದ ಉಚ್ಚಾಟನೆಗೊಂಡಿದ್ದ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕಿಶೋರ್ ಉಪಾಧ್ಯಾಯ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಾಜಿ ಶಾಸಕರಾದ ಅವರು 2014-17ರ ನಡುವೆ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
