ನಾಂದೇಡ್/ಪರ್ಭಣಿ:ಕಾಂಗ್ರೆಸ್ ಪಕ್ಷವನ್ನು ಬೇರು ಮತ್ತು ಕೊಂಬೆಗಳಿಲ್ಲದ ಬಳ್ಳಿಗೆ ಹೋಲಿಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ತನ್ನನ್ನು ಬೆಂಬಲಿಸುವ ವ್ಯಕ್ತಿಗಳನ್ನೂ ಈ ಬಳ್ಳಿ ಒಣಗಿಸಿಬಿಡುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ. ವಿರೋಧ ಪಕ್ಷದ ಮೈತ್ರಿ ಬಗ್ಗೆ ಎಚ್ಚರದಿಂದಿರಬೇಕು ಎಂದು ಜನರಿಗೆ ಅವರು ಕರೆ ನೀಡಿದ್ದಾರೆ. ಬಿಜೆಪಿಯು ವಿಕಸಿತ ಭಾರತ ಮತ್ತು ವಿಕಸಿತ ಮಹಾರಾಷ್ಟ್ರ ಸಾಕಾರಗೊಳಿಸಲು ಕೆಲಸ ಮಾಡುತ್ತಿದೆ ಎಂದು ಘೋಷಣೆ ಮಾಡಿದರು.
ಶನಿವಾರ ಮಹಾರಾಷ್ಟ್ರದ ನಾಂದೇಡ್ ಮತ್ತು ಪರ್ಭಣಿಯಲ್ಲಿ ಅವರು ರ‍್ಯಾಲಿ ನಡೆಸಿದರು. ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುವ ಮೊದಲೇ ಕಾಂಗ್ರೆಸ್ ತನ್ನ ಸೋಲನ್ನು ಒಪ್ಪಿಕೊಂಡಿದೆ. ರಾಹುಲ್ ಗಾಂಧಿ 2019ರಲ್ಲಿ ಅಮೇಠಿಯಿಂದ ಸೋತರು. ಕಾಂಗ್ರೆಸ್​ನ ರಾಜಕುಮಾರ ಈ ಬಾರಿ ವಯನಾಡಿನ ಸಂಸದೀಯ ಸ್ಥಾನವನ್ನೂ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.
2024ರ ಚುನಾವಣೆ ನಡೆಯುತ್ತಿರುವುದು ಕೇವಲ ಸರ್ಕಾರ ರಚಿಸಲು ಅಲ್ಲ. ಭಾರತವನ್ನು ಅಭಿವೃದ್ಧಿ ಮತ್ತು ಸ್ವಾವಲಂಬಿಯನ್ನಾಗಿ ಮಾಡಲು. ಕಾಂಗ್ರೆಸ್ ಬೇರು, ಕೊಂಬೆಗಳನ್ನು ಹೊಂದಿರದ ಬಳ್ಳಿಯಾಗಿದೆ. ಬೆಂಬಲ ನೀಡುವವರನ್ನೂ ಅದು ಒಣಗಿಸುತ್ತದೆ. ಕಾಂಗ್ರೆಸ್ ದೇಶವನ್ನೇ ವಿಭಜಿಸಿದೆ. 370ನೇ ವಿಧಿಯ ನೆಪದಲ್ಲಿ ಕಾಶ್ಮೀರದಲ್ಲಿ ಸಂವಿಧಾನವನ್ನು ಜಾರಿಗೆ ತರಲು ಅಂದು ಅವಕಾಶ ನೀಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ ವಿರುದ್ಧ ಟೀಕೆ ಮಾಡಿದ ಪ್ರಧಾನಿ, ಕಾಂಗ್ರೆಸ್ ಮತ್ತು ನಕಲಿ ಶಿವಸೇನೆ ಯಾಕೂಬ್ ಮೆಮನ್ ಸಮಾಧಿಯನ್ನು ಅಲಂಕರಿಸುವಲ್ಲಿ ನಿರತವಾಗಿದೆ. 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಮೆಮನ್​ನನ್ನು 2015ರಲ್ಲಿ ಗಲ್ಲಿಗೇರಿಸಲಾಗಿತ್ತು. ಪ್ರತಿಪಕ್ಷಗಳ ಮೈತ್ರಿಕೂಟದ ಬಗ್ಗೆ ಜಾಗರೂಕರಾಗಿರಿ ಎಂದು ಮೋದಿ ಜನರಿಗೆ ಮನವಿ ಮಾಡಿದರು. ನಮ್ಮ ಸರ್ಕಾರದ ಕೊನೆಯ ಅವಧಿಯಲ್ಲಿ ಜನರು ಚಂದ್ರಯಾನ ಮಿಷನ್​ನ ಯಶಸ್ಸನ್ನು ಕಂಡಿದ್ದಾರೆ. ಮುಂದಿನ ಅವಧಿಯಲ್ಲಿ 140 ಕೋಟಿ ಭಾರತೀಯರು ಗಗನಯಾನ ಯಶಸ್ಸಿಗೆ ಸಾಕ್ಷಿಯಾಗಲಿದ್ದಾರೆ. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಆತ್ಮನಿರ್ಭರ ಭಾರತ:ಕರೊನಾ ಲಸಿಕೆಯಿಂದ ಶಸ್ತ್ರಾಸ್ತ್ರಗಳವರೆಗೆ ಆತ್ಮನಿರ್ಭರ್ ಭಾರತ ಯಶಸ್ಸು ಕಾಣುತ್ತಿದೆ. ಜನರೂ ಈ ಬಗ್ಗೆ ಮಾತನಾಡುತ್ತಿದ್ದಾರೆ. 10 ವರ್ಷಗಳಲ್ಲಿ ದೇಶವು ಅಭಿವೃದ್ಧಿಯ ಸುದೀರ್ಘ ಪಯಣವನ್ನು ದಾಟಿದೆ. 2014ರಲ್ಲಿ ಮೊದಲ ಬಾರಿಗೆ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ದೇಶದಲ್ಲಿ ಭಯೋತ್ಪಾದನಾ ದಾಳಿ, ಸ್ಪೋಟಗಳ ಭಯ ಮತ್ತು ಸೈನಿಕರ ಸಾವಿನ ನೋವಿನ ಬಗ್ಗೆ ಚರ್ಚೆ ನಡೆಯುತ್ತಿತ್ತು. 2019ರಲ್ಲಿ ಸರ್ಜಿಕಲ್ ದಾಳಿಯ ಬಗ್ಗೆ ಚರ್ಚೆ ನಡೆದಿತ್ತು. ದೇಶದ ಸ್ಥಿತಿ ಹೇಗೆ ಬದಲಾವಣೆ ಆಗಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಪ್ರಧಾನಿ ಹೇಳಿದರು.
ರೈತರ ಸಮಸ್ಯೆಗೆ ಕಾಂಗ್ರೆಸ್ ಕಾರಣ:ಕೃಷಿ ಬಿಕ್ಕಟ್ಟು ಮತ್ತು ರೈತರ ಸಮಸ್ಯೆಗಳಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ದೋಷಪೂರಿತ ನೀತಿಗಳೇ ಕಾರಣ. ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಎನ್​ಡಿಎ ಸರ್ಕಾರ ಬದ್ಧವಾಗಿದೆ. ಕಳೆದ 10 ವರ್ಷಗಳಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದ ಸಮಸ್ಯೆಗಳನ್ನು ಸರಿಪಡಿಸಿದ್ದೇವೆ. ಈಗ ನಾವು ಇನ್ನೂ ಹೆಚ್ಚು ಕೆಲಸ ಮಾಡಬೇಕಾಗಿದೆ. ಕಾಂಗ್ರೆಸ್ ಒಂದು ಕುಟುಂಬದ ಮೇಲೆ ಆಧಾರವಾಗಿದೆ. ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟವು ಭ್ರಷ್ಟ ಆಚರಣೆಗಳನ್ನು ರಕ್ಷಿಸಲು ಒಗ್ಗೂಡಿರುವ ಸ್ವಾರ್ಥಿಗಳ ಗುಂಪು ಎಂದು ಬಣ್ಣಿಸಿದ ಪ್ರಧಾನಿ, ಈ ಮೈತ್ರಿಯನ್ನು ಮೊದಲ ಹಂತದಲ್ಲಿ ಮತದಾರರು ತಿರಸ್ಕರಿಸಿದ್ದಾರೆ ಎಂದರು.
ಬಡವರ ನೋವು ಅರ್ಥವಾಗುತ್ತದೆ:ನಾನು ಬಡತನದಲ್ಲಿ ಜೀವನ ನಡೆಸಿದ್ದೇನೆ. ಬಡವರ ನೋವುಗಳನ್ನು ಅರ್ಥಮಾಡಿಕೊಂಡಿದ್ದೇನೆ. ಯಾವುದೇ ಬಡವರು ನಾನು ಅನುಭವಿಸಿದ್ದನ್ನು ಅನುಭವಿಸಬಾರದು. ಕಾಂಗ್ರೆಸ್ ಅಭಿವೃದ್ಧಿ ಪಥದಲ್ಲಿ ತಡೆಗೋಡೆಯಾಗಿದೆ. ದೇಶದ ಪ್ರಗತಿಗೆ ಅದು ಕೆಲಸ ಮಾಡುತ್ತದೆ ಎಂದು ಅದನ್ನು ನಂಬಲು ಸಾಧ್ಯವಿಲ್ಲ ಎಂದರು.
ಸೋನಿಯಾ, ರಾಹುಲ್ ಟಾರ್ಗೆಟ್:ಕಾಂಗ್ರೆಸ್​ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಗುರಿಯಾಗಿಸಿಕೊಂಡು ಮಾತನಾಡಿದ ಮೋದಿ, ಹಲವಾರು ವರ್ಷಗಳಿಂದ ಲೋಕಸಭೆಯ ಸದಸ್ಯರಾಗಿರುವ ಕೆಲ ಪ್ರತಿಪಕ್ಷ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಲು ಆತ್ಮವಿಶ್ವಾಸದ ಕೊರತೆಯಿಂದಾಗಿ ಸಂಸತ್ತಿನ ಕೆಳಮನೆಯನ್ನು ತೊರೆದು ರಾಜ್ಯಸಭೆಯಲ್ಲಿ ಸ್ಥಾನ ಪಡೆದಿದ್ದಾರೆ ಎಂದರು.

ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ, ಕಾಂಗ್ರೆಸ್​ನ ಸಹೋದ್ಯೋಗಿಗಳು ವಯನಾಡಿನಲ್ಲಿ ಸಮಸ್ಯೆಯನ್ನು ನೋಡುತ್ತಿದ್ದಾರೆ. ಅವರು ಏಪ್ರಿಲ್ 26ರಂದು ಮತದಾನಕ್ಕಾಗಿ ಕಾಯುತ್ತಿದ್ದಾರೆ. ಅಮೇಠಿಯಂತೆ ಅವರು ವಯನಾಡನ್ನೂ ತೊರೆಯಬೇಕಾಗುತ್ತದೆ. ಮತ್ತೆ ಅವರ ಗ್ಯಾಂಗ್ ಸುರಕ್ಷಿತ ಸ್ಥಾನವನ್ನು ಹುಡುಕಲು ಯತ್ನಿಸುತ್ತದೆ. ಜನರು ಇಂತಹವರಿಗಾಗಿ ತಮ್ಮ ಮತವನ್ನು ವ್ಯರ್ಥ ಮಾಡುತ್ತಾರೆಯೇ? ಈ ಬಾರಿ ಜನರು ವಿಕಸಿತ ಭಾರತಕ್ಕೆ ಮತ ಹಾಕುತ್ತಾರೆ. ರೈತರು, ಬಡವರು ಮತ್ತು ಮಹಿಳೆಯರ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಅಡ್ಡಿಯಾಗಿದೆ ಎಂದು ಮೋದಿ ಹೇಳಿದರು.
ಲಖನೌ:ಬಂಗಾಳದ ಮುಶಿದಾಬಾದ್​ನಲ್ಲಿ ರಾಮ ನವಮಿ ಸಂದರ್ಭ ನಡೆದ ಹಿಂಸಾತ್ಮಕ ಘರ್ಷಣೆಗಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರಾಮ ನವವಮಿ ಮೆರವಣಿಗೆಗಳು ಶಾಂತಿಯುತವಾಗಿ ನಡೆದಿವೆ. ಆದರೆ, ಟಿಎಂಸಿ ಆಡಳಿತವಿರುವ ಬಂಗಾಳದಲ್ಲಿ ‘ಸನಾತನ’ ನಂಬಿಕೆಗೆ ನೋವುಂಟು ಮಾಡುವ ಉದ್ದೇಶದಿಂದ ಮೆರವಣಿಗೆಗಳ ಮೇಲೆ ಆಕ್ರಮಣ ಮಾಡಲಾಗಿದೆ ಎಂದು ಯೋಗಿ ಶುಕ್ರವಾರ ಹೇಳಿದ್ದಾರೆ. ಬಿಜೆಪಿಯೇ ಘರ್ಷಣೆಗಳನ್ನು ಪ್ರಚೋದಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿರುವ ಹಿನ್ನೆಲೆಯಲ್ಲಿ ಯೋಗಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ತುಂಬಾ ಸುಧಾರಿಸಿದೆ ಎಂದು ಹೇಳಿದರು. ಕಾನೂನಿನ ಆಡಳಿತವು ಉತ್ತಮ ಆಡಳಿತದ ಮೊದಲ ಅಂಶವಾಗಿರುತ್ತದೆ ಎನ್ನುವುದನ್ನು ಮರೆಯಲಾಗದು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ದೇಶದೊಳಗೆ ಭದ್ರತೆ ಸುಧಾರಿಸಿದೆ ಎಂದು ಹೇಳುವುದಕ್ಕೆ ತಮಗೆ ಯಾವುದೇ ಹಿಂಜರಿಕೆಯಿಲ್ಲ ಎಂದು ಸಿಎಂ ಹೇಳಿದರು.
ಉತ್ತರಪ್ರದೇಶ: ಎಕ್ಸಾಂ ಬರೆದ 188 ಕೈದಿಗಳು, ಶೇಕಡಾ 89 ರಷ್ಟು ಫಲಿತಾಂಶ ದಾಖಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
