| ರಾಘವ ಶರ್ಮ ನಿಡ್ಲೆ, ನವದೆಹಲಿ
ಪಂಚರಾಜ್ಯ ಚುನಾವಣೆಗಳಲ್ಲಿ ಸಂಸದರನ್ನು ವಿಧಾನಸಭೆ ಕಣಕ್ಕಿಳಿಸಿ ಯಶಸ್ಸು ಗಳಿಸಿದ ಬಿಜೆಪಿಯ ಮಂತ್ರವನ್ನೇ ಕರ್ನಾಟಕ ದಲ್ಲಿ ತಿರುಗುಮುರುಗಾಗಿ ಪ್ರಯೋಗಿಸಲು ಕಾಂಗ್ರೆಸ್​ನಲ್ಲಿ ಚಿಂತನೆ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಹೈಕಮಾಂಡ್ ಈ ಬಾರಿ ಕರ್ನಾಟಕದಿಂದ ಹೆಚ್ಚು ಸೀಟುಗಳನ್ನು ಗೆಲ್ಲಲೇಬೇಕೆಂಬ ಲೆಕ್ಕಾಚಾರದಲ್ಲಿದ್ದು, ಇದನ್ನು ಸಾಧಿಸಬೇಕೆಂದರೆ 8-9 ಲೋಕಸಭೆ ಕ್ಷೇತ್ರಗಳಲ್ಲಿ ಸಚಿವರಿಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯವನ್ನು ರಾಜ್ಯ ಘಟಕದೊಂದಿಗೆ ಹಂಚಿಕೊಂಡಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬರೀ 1 ಸ್ಥಾನ (ಬೆಂಗಳೂರು ಗ್ರಾಮಾಂತರ) ಗೆದ್ದು ತೀವ್ರ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್, ಈ ಬಾರಿ 15ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುವ ಉದ್ದೇಶ ಹೊಂದಿದೆ. ಆದರೆ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ಸೇರಿ ಮೂರು ರಾಜ್ಯಗಳಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆ ಗೆದ್ದಿರುವುದು ಕರ್ನಾಟಕದಲ್ಲಿ ಕಳೆಗುಂದಿದ್ದ ಬಿಜೆಪಿಯ ನೈತಿಕ ಸ್ಥೈರ್ಯ, ಹುಮ್ಮಸ್ಸನ್ನು ಹೆಚ್ಚಿಸಿದೆ.
ಮೇಲಾಗಿ, ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಲೋಕಸಭೆ ಚುನಾವಣೆ ‘ದ್ವಿಪಕ್ಷೀಯ ಕದನ’ವಾಗಿ ಮಾರ್ಪಟ್ಟಿದೆ. ಇದರಿಂದಾಗಿ, ಮಂತ್ರಿಸ್ಥಾನದಲ್ಲಿರುವ ‘ಬಲಶಾಲಿ’ಗಳಿಗೆ ಟಿಕೆಟ್ ನೀಡಿದರಷ್ಟೇ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಸಾಧ್ಯವಿದೆ ಎಂಬ ಪ್ರಾಥಮಿಕ ಹಂತದ ಚರ್ಚೆಗಳು ದಿಲ್ಲಿ ಹೈಕಮಾಂಡ್ ಅಂಗಳದಲ್ಲೂ ನಡೆದಿದೆ.
ಲೋಕಸಭೆ ಕ್ಷೇತ್ರಗಳ ಸದ್ಯದ ಪರಿಸ್ಥಿತಿಗಳ ಬಗ್ಗೆ ಪಕ್ಷ ಆಂತರಿಕ ಸಮೀಕ್ಷೆಗಳನ್ನು ನಡೆಸಿದ್ದು, ಹಲವು ಕ್ಷೇತ್ರಗಳಲ್ಲಿ ಸಚಿವರಿಗೆ ಟಿಕೆಟ್ ನೀಡಬೇಕೆಂಬ ವರದಿಗಳು ವರಿಷ್ಠರಿಗೆ ತಲುಪಿವೆ. ರಾಜ್ಯ ಕಾಂಗ್ರೆಸ್ ವ್ಯವಹಾರಗಳನ್ನು ನೋಡಿಕೊಳ್ಳುವ ದಿಲ್ಲಿ ನಾಯಕರೊಬ್ಬರು ಕೂಡ ಸಚಿವರ ಮನವೊಲಿಸಿ, ಸ್ಪರ್ಧೆಗೆ ಸಜ್ಜಾಗುವಂತೆ ಸೂಚಿಸಬೇಕೆಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​ಗೆ ತಿಳಿಸಿದ್ದಾಗಿ ಪಕ್ಷದ ದಿಲ್ಲಿ ಮೂಲಗಳು ಖಚಿತಪಡಿಸಿವೆ.
ಮಂತ್ರಿಸ್ಥಾನ ಬಿಟ್ಟು ಸಂಸದ ಚುನಾವಣೆಗೆ ಸ್ಪರ್ಧಿಸಲು ಸಚಿವರು ಒಪ್ಪಬಹುದೇ ಎಂಬ ಪ್ರಶ್ನೆಗೆ, ‘ಹೈಕಮಾಂಡ್ ಸೂಚಿಸಿದರೆ ಅವರು ಸ್ಪರ್ಧಿಸಲೇಬೇಕಾಗುತ್ತದೆ. ಒಂದು ವೇಳೆ ಚುನಾವಣೆ ಗೆದ್ದರೆ ಅವರಿಂದ ತೆರವಾಗುವ ಶಾಸಕ ಕ್ಷೇತ್ರದಲ್ಲಿ ಸಚಿವರು ಶಿಫಾರಸು ಮಾಡುವ ವ್ಯಕ್ತಿಗೆ ಟಿಕೆಟ್ ನೀಡಲಾಗುತ್ತದೆ’ ಎಂದು ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರು ವಿಜಯವಾಣಿ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
ಪುತ್ರರಿಗೆ ಬೇಡ ಅವಕಾಶಹಲವು ಸಚಿವರು ತಮ್ಮ ಮಕ್ಕಳಿಗೆ ಲೋಕಸಭೆ ಟಿಕೆಟ್ ನೀಡುವಂತೆ ದಿಲ್ಲಿ ನಾಯಕರ ಬೆನ್ನು ಬಿದ್ದಿದ್ದಾರೆ. ಆದರೆ, ಈ ನಾಯಕರಷ್ಟು ಅವರ ಕುಟುಂಬಸ್ಥರು ಜನಪ್ರಿಯರಾಗಿಲ್ಲ. ಹೀಗಾಗಿ, ಟಿಕೆಟ್ ನೀಡಿ ಕೈಸುಟ್ಟುಕೊಳ್ಳಬೇಕಾದೀತು ಎಂಬ ವರದಿಗಳಿವೆ. ಅದಕ್ಕಾಗಿ, ಮಕ್ಕಳನ್ನು ಪಕ್ಷದಲ್ಲಿ ಪ್ರೋತ್ಸಾಹಿಸಬೇಕೆಂದರೆ ನೀವು ಲೋಕಸಭೆ ಚುನಾವಣೆ ಸ್ಪರ್ಧಿಸಿ. ನಿಮ್ಮಿಂದ ತೆರವಾಗುವ ಶಾಸಕ ಕ್ಷೇತ್ರದಲ್ಲಿ ಮಕ್ಕಳು ಅಥವಾ ಕುಟುಂಬಸ್ಥರಿಗೆ ಟಿಕೆಟ್ ನೀಡಬಹುದು ಎಂಬ ಲೆಕ್ಕಾಚಾರವಿದೆ. ಉದಾಹರಣೆಗೆ ಹಳಿಯಾಳ ಶಾಸಕರಾಗಿರುವ ಆರ್.ವಿ. ದೇಶಪಾಂಡೆ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರೆ, ಹಳಿಯಾಳ ಕ್ಷೇತ್ರದ ಉಪಚುನಾವಣೆ ಟಿಕೆಟ್ ಅನ್ನು ಪುತ್ರ ಪ್ರಶಾಂತ್ ದೇಶಪಾಂಡೆಗೆ ನೀಡಬಹುದು ಎಂಬ ಮಾತುಗಳಿವೆ. ಅದೇ ರೀತಿ, ಎಚ್.ಸಿ. ಮಹದೇವಪ್ಪ ಚಾಮರಾಜನಗರ ಗೆದ್ದರೆ ಪುತ್ರ ಸುನೀಲ್ ಬೋಸ್​ಗೆ ಟಿ. ನರಸೀಪುರದ ಟಿಕೆಟ್, ಸತೀಶ್ ಜಾರಕಿಹೊಳಿ ಬೆಳಗಾವಿ ಗೆದ್ದರೆ ಮಗಳು ಪ್ರಿಯಾಂಕಾ ಜಾರಕಿಹೊಳಿಗೆ ಯಮಕನಮರಡಿ ಕ್ಷೇತ್ರದ ಟಿಕೆಟ್….. ಈ ರೀತಿಯ ಲೆಕ್ಕಚಾರಗಳ ಬಗ್ಗೆ ಗಂಭೀರ ಚರ್ಚೆಗಳಾಗಿವೆ.
ಮೈಸೂರಿನಿಂದ ಯತೀಂದ್ರ?ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಮೈಸೂರು ಕ್ಷೇತ್ರದ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯಗಳಿದ್ದರೂ, ಸಿದ್ದರಾಮಯ್ಯ ಇದಕ್ಕೆ ಒಪ್ಪಿಲ್ಲ ಎನ್ನಲಾಗಿದೆ. ಮಗನನ್ನು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭವಿಷ್ಯದ ಮಂತ್ರಿಯನ್ನಾಗಿ ನೋಡಲು ಬಯಸಿರುವ ಸಿದ್ದರಾಮಯ್ಯ, ಲೋಕಸಭೆ ಸ್ಪರ್ಧೆ ಬೇಡ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಆದರೆ, ದಿಲ್ಲಿ ನಾಯಕರ ಮಧ್ಯೆ ಯತೀಂದ್ರರಿಗೆ ಟಿಕೆಟ್ ನೀಡಬೇಕೆಂದು ಚರ್ಚೆಯಾಗಿದೆ. ತಮ್ಮ ವರ್ಚಸ್ಸು ಬಳಸಿಕೊಂಡು ಪುತ್ರನನ್ನು ಸಿದ್ದರಾಮಯ್ಯ ಗೆಲ್ಲಿಸಬಹುದು ಎಂಬುದು ಕೆಲ ವರಿಷ್ಠರ ಅಭಿಪ್ರಾಯ ಎಂದು ಹೇಳಲಾಗಿದೆ.
ಜನವರಿ ಅಂತ್ಯಕ್ಕೆ 180 ಕ್ಷೇತ್ರಕ್ಕೆ ಟಿಕೆಟ್ನೇರ ಹಣಾಹಣಿ ಇರುವ ಮತ್ತು ಇಂಡಿಯಾ ಮೈತ್ರಿಕೂಟ ಪಾಲುದಾರ ಪಕ್ಷಗಳ ಅಸ್ತಿತ್ವವಿಲ್ಲದ ದೇಶದ 180 ಕ್ಷೇತ್ರಗಳನ್ನು ಕಾಂಗ್ರೆಸ್ ಗುರುತಿಸಿದ್ದು, ಇಲ್ಲಿಗೆ ಜನವರಿ ಅಂತ್ಯದೊಳಗೆ ಟಿಕೆಟ್ ಅಂತಿಮಗೊಳಿಸಬೇಕು ಎಂದು ಕೇಂದ್ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರ್ಚಚಿಸಲಾಗಿದೆ. ಮೊದಲೇ ಟಿಕೆಟ್ ಘೊಷಿ ಸಿದರೆ, ಪ್ರಚಾರ ಸೇರಿದಂತೆ ಎದುರಾಳಿ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಸಮಯ ಲಭ್ಯವಾಗಲಿದೆ. ಹೀಗಾಗಿ, ಜನವರಿ ಅಂತ್ಯಕ್ಕೆ ಟಿಕೆಟ್ ಫೈನಲ್ ಮಾಡಬೇಕೆಂಬ ಸಲಹೆ ಸಭೆಯಲ್ಲಿ ಕೇಳಿಬಂದಿದೆ.
ನಿಮ್ಮ ಕಪಿ ಆಟಗಳನ್ನು ನಿಲ್ಲಿಸಿ! ಸಂಗೀತಾ ಪರ​ ಅಖಾಡಕ್ಕಿಳಿದ ಕುಟುಂಬ, ಖಡಕ್​ ಎಚ್ಚರಿಕೆ ಸಂದೇಶ ರವಾನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + two =
Remember me
