ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರ ಹೆಸರು ಕೇಳಿಬಂದಿದೆ. ದೆಹಲಿ ಗಲಭೆ ಕುರಿತು ಪೊಲೀಸರು ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ‘ಉಮರ್ ಖಾಲಿದ್, ಸಲ್ಮಾನ್ ಖುರ್ಷಿದ್, ನದೀಮ್ ಖಾನ್ ಎಲ್ಲರೂ ಪ್ರಚೋದನಾಕಾರಿ ಭಾಷಣಗಳನ್ನು ನೀಡಿದ್ದರು. ಇದರಿಂದ ಜನರು ಗಲಭೆ ನಡೆಸಲು ಪ್ರೇರೇಪಣೆಗೊಂಡರು’ ಎಂದು ಸಾಕ್ಷಿಯೊಬ್ಬರು ನೀಡಿರುವ ಹೇಳಿಕೆಯನ್ನು ಚಾರ್ಜ್ ಶೀಟ್​ನಲ್ಲಿ ದಾಖಲಿಸಲಾಗಿದೆ.
ಖುರ್ಷಿದ್ ಯಾವ ರೀತಿಯ ಭಾಷಣಗಳಿಂದ ಜನರನ್ನು ಹಿಂಸೆಗೆ ಪ್ರೇರೇಪಿಸಿದರು ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಪೊಲೀಸರು ನೀಡಿಲ್ಲ. ಆದರೆ ಗಲಭೆಗೆ ಸಂಚು ರೂಪಿಸಿದ ಪ್ರಮುಖ ಆರೋಪಿಗಳಲ್ಲಿ ಖುರ್ಷಿದ್ ಕೂಡ ಒಬ್ಬರು ಎನ್ನಲಾಗಿದೆ. ಜತೆಗೆ ಪ್ರಕರಣದ ಆರೋಪಿಯೊಬ್ಬರು ಕೂಡ ಗಲಭೆಯಲ್ಲಿ ಖುರ್ಷಿದ್ ಪಾತ್ರವಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ದೆಹಲಿ ಗಲಭೆ ಕುರಿತು ತಮ್ಮ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಲ್ಮಾನ್ ಖುರ್ಷಿದ್, ‘ನಾನು ಸಾಂವಿಧಾನಿಕ ಹಾಗೂ ನ್ಯಾಯಸಮ್ಮತವಾದ ಕಾರಣವನ್ನು ಬೆಂಬಲಿಸುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇನೆ. ವ್ಯಕ್ತಿಗಳು ವೈಯಕ್ತಿಕವಾಗಿ ನೀಡುವ ಹೇಳಿಕೆಗಳನ್ನು ಬೆಂಬಲಿಸಬಾರದು. ನನ್ನ ಭಾಷಣದಲ್ಲಿ ಪ್ರಚೋದನಾಕಾರಿ ಹೇಳಿಕೆ ಏನು ಎಂಬುದನ್ನು ತಿಳಿಯಲು ಬಯಸುತ್ತೇನೆ’ ಎಂದಿದ್ದಾರೆ. ದೆಹಲಿ ಗಲಭೆ ಕುರಿತ ಚಾರ್ಜ್​ಶೀಟ್​ನಲ್ಲಿರುವ ಕಾಂಗ್ರೆಸ್​ನ ಹಿರಿಯ ರಾಜಕಾರಣಿಗಳಲ್ಲಿ ಸಲ್ಮಾನ್ ಖುರ್ಷಿದ್ ಮೊದಲಿಗರು. ಇವರ ಹೊರತಾಗಿ ಸಿಪಿಎಂ ಮುಖಂಡ ಬೃಂದಾ ಕಾರಟ್, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಹೆಸರೂ ಪಟ್ಟಿಯಲ್ಲಿದೆ.
ಗಲಭೆ ತನಿಖೆಗೆ ನೆರವಾದ ತಂತ್ರಜ್ಞಾನ
ದೆಹಲಿ ಹಿಂಸಾಚಾರ ಕುರಿತು ಪೊಲೀಸರು ಕಳೆದ ವಾರ 17 ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ತನಿಖೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡಿದ್ದಾರೆ.ಹಿಂಸಾಚಾರದಲ್ಲಿ ಮೃತಪಟ್ಟವರ ಗುರುತು ಪತ್ತೆ ಮಾಡಲು ಮುಖಚಹರೆ ಪತ್ತೆ ಸಾಫ್ಟ್ವೇರ್ ಮೂಲಕ 2,655 ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಬ್ಯಾಂಕಿಂಗ್ ತಂತ್ರಜ್ಞಾನವನ್ನು ಬಳಸಿ ಆರೋಪಿಗಳ ಹಣದ ವಹಿವಾಟಿನ ವಿವರ ಕಲೆ ಹಾಕಲಾಗಿದೆ ಎಂದು ತನಿಖಾ ತಂಡದಲ್ಲಿದ್ದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಖಾಲಿದ್​ಗೆ ನ್ಯಾಯಾಂಗ ಬಂಧನ
ದೆಹಲಿ ಗಲಭೆಯ ಆರೋಪಿ, ಜೆಎನ್​ಯುುನ ಹಳೇ ವಿದ್ಯಾರ್ಥಿ ಉಮರ್ ಖಾಲಿದ್​ನನ್ನು ಅಕ್ಟೋಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೆಹಲಿ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟು ವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಕಳೆದ ಸೆ.13ರಂದು ಬಂಧಿಸಿದ್ದರು. ಉಮರ್​ನನ್ನು ದೆಹಲಿ ಕೋರ್ಟ್​ನ ಎದುರು ವಿಡಿಯೋ ಕಾನ್ಪರೆನ್ಸ್ ಮೂಲಕ ಗುರುವಾರ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಖಾಲಿದ್​ನನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ.
ದೆಹಲಿ ಹಿಂಸಾಚಾರದ ಹಿನ್ನೆಲೆ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆ ಫೆಬ್ರವರಿ 24ರಂದು ಹಿಂಸಾರೂಪಕ್ಕೆ ತಿರುಗಿತ್ತು. ಸುಮಾರು 72 ತಾಸುಗಳ ಕಾಲ ನಡೆದ ಈ ಗಲಭೆಯಲ್ಲಿ ಪೊಲೀಸರು ಸೇರಿ ಒಟ್ಟು 54 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದಾರು. ಜತೆಗೆ ನೂರಾರು ಮನೆಗಳು ಹಾಗೂ ಸಾವಿರಾರು ವಾಹನಗಳಿಗೆ ಬೆಂಕಿ ಹಾಕಲಾಗಿತ್ತು.
ಉಮರ್ ಬಿಡುಗಡೆಗೆ ಆಗ್ರಹ
ಆರೋಪಿ ಉಮರ್ ಖಾಲಿದ್​ನನ್ನು ಬಿಡುಗಡೆಗೊಳಿಸಿ ಎಂದು 200ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ವಾಂಸರು, ಶಿಕ್ಷಣ ತಜ್ಞರು , ಕಲಾವಿದರು ಸಹಿ ಸಂಗ್ರಹದ ಮೂಲಕ ಆಗ್ರಹಿಸಿದ್ದಾರೆ. ಖಾಲಿದ್ ವಿರುದ್ಧ ಯುಎಪಿಎ ಅಡಿಯಲ್ಲಿ ಪೊಲೀಸರು ತಪ್ಪಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತನಿಖೆಗೆ ತಂತ್ರಜ್ಞಾನ ಬಳಕೆ
# ಐಪಿಡಿಆರ್ ಅಧ್ಯಯನ:ಇಂಟರ್​ನೆಟ್ ಪ್ರೊಟೋ ಕಾಲ್ ಡೀಟೆಲ್ಸ್ ರೆಕಾರ್ಡ್ (ಐಪಿಡಿಆರ್) ಮೂಲಕ ಒಳ ಹಾಗೂ ಹೊರ ಕರೆಗಳ ಇಂಟರ್​ನೆಟ್ ಟ್ರಾಫಿಕ್ ಅಧ್ಯಯನ ಮಾಡಿದಾಗ ಆರೋಪಿಗಳ ಐಪಿ ವಿಳಾಸ ಹಾಗೂ ಇನ್ನಿತರ ಮಾಹಿತಿಗಳು ಲಭಿಸಿವೆ. ವಿಶೇಷವಾಗಿ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಫೋನ್ ಕರೆ ಹಾಗೂ ಮೆಸೇಜ್​ಗಳನ್ನು ಬಳಕೆ ಮಾಡದ ಆರೋಪಿಗಳ ಪತ್ತೆಗೆ ಇದು ಸಹಕಾರಿ.
# ಇ-ವಾಹನ್ ಅಪ್ಲಿಕೇಷನ್:ಗಲಭೆಕೋರರು ಇ-ವಾಹನ್ ಅಪ್ಲಿಕೇಷನ್ ಮೂಲಕ ವಾಹನ ಮಾಲೀಕರ ವಿವರಗಳನ್ನು ತಿಳಿದು ಅವುಗಳನ್ನು ಧ್ವಂಸಗೊಳಿಸುತ್ತಿದ್ದರು ಎನ್ನಲಾಗಿತ್ತು. ಹೀಗಾಗಿ ಗಲಭೆ ವೇಳೆ ಆ ಪ್ರದೇಶಗಳಲ್ಲಿ ಯಾರು ಆಪ್ ಮೂಲಕ ವಾಹನಗಳ ವಿವರಗಳನ್ನು ಹುಡುಕಿದ್ದರು ಎಂಬುದನ್ನು ಡೇಟಾಬೇಸ್ ಮೂಲಕ ಪತ್ತೆ ಮಾಡಲಾಗಿದೆ. ಯಾವುದೇ ವಾಹನಗಳ ವಿವರಗಳನ್ನು ಹುಡುಕಿದಾಗ ಯಾವ ನಂಬರ್​ನಿಂದ ಮಾಹಿತಿ ಕೋರಲಾಗಿದೆ ಎಂಬ ಡೇಟಾ ಸರ್ಕಾರದ ಬಳಿ ಇರುತ್ತದೆ.
# ಜಿಯೊಲೊಕೇಷನ್ ಅಧ್ಯಯನ:ಆರೋಪಿಗಳ ಮೊಬೈಲ್​ಗಳಲ್ಲಿರುವ ಗೂಗಲ್ ಮ್ಯಾಪ್​ನ ಡೇಟಾದ ಮೂಲಕ ಗಲಭೆ ನಡೆದ ಸ್ಥಳಗಳಲ್ಲಿ ಅವರ ಇದ್ದ ಬಗ್ಗೆ ಮಾಹಿತಿ ದೊರಕಿದೆ.
# ಮುಖಚಹರೆಗುರುತು ಪತ್ತೆ ವ್ಯವಸ್ಥೆ – ಗುರುತಿಸಲೂ ಆಗದ ಮಟ್ಟಿಗೆ ಸುಟ್ಟು ಕರಕಲಾಗಿದ್ದವರ ವಿವರಗಳನ್ನು ಈ ವ್ಯವಸ್ಥೆಯ ಮೂಲಕ ಪತ್ತೆಮಾಡಲಾಗಿದೆ.
# ಫಂಡ್ -ಪ್ಲೋ ಅಧ್ಯಯನ:ಯಾವ್ಯಾವ ಉದ್ದೇಶಗಳಿಗಾಗಿ ಯಾರ್ಯಾರ ಖಾತೆಗಳಿಂದ ಹಣ ವರ್ಗಾವಣೆಯಾಗಿದೆ ಎಂಬ ಬಗ್ಗೆ ಅಧ್ಯಯನ ನಡೆಸಿದಾಗ ಗಲಭೆಗೆ ಕುಮ್ಮಕ್ಕು ನೀಡಲು ಹಣ ಸಂದಾಯವಾಗಿರುವ ಮಾಹಿತಿಗಳು ಲಭಿಸಿವೆ.
# ಆಪ್​ಗಳ ಸಂದೇಶಗಳು:ವಾಟ್ಸ್​ಆಪ್, ಟೆಲಿಗ್ರಾಂ ಸೇರಿ ವಿವಿಧ ಆಪ್​ಗಳ ಮೂಲಕ ಕಳುಹಿಸಿದ್ದ ಸಂದೇಶಗಳು, ವಾಯ್್ಸ ನೋಟ್ಸ್​ಗಳ ಮೂಲಕ ಆರೋಪಿಗಳನ್ನು ಪತ್ತೆ ಮಾಡಲಾಗಿದೆ.
# ಡಂಪ್ ಡೇಟಾ ಅಧ್ಯಯನ:ಗಲಭೆ ನಡೆದ ಸ್ಥಳಗಳಲ್ಲಿ ಯಾರ್ಯಾರು ಇದ್ದರು ಎಂಬುದನ್ನು ಹಾಟ್​ಸ್ಪಾಟ್ ಲೊಕೇಷನ್​ಗಳ ಅಧ್ಯಯನ ಮೂಲಕ ಪತ್ತೆ ಮಾಡಲಾಗಿದೆ. ಆರೋಪಿಗಳು ಎಲ್ಲಿ ಸಂಚಾರ ನಡೆಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
