ಬೆಂಗಳೂರು/ನವದೆಹಲಿ:ಕಾವೇರಿ ನೀರು ಬಿಡುಗಡೆಗೆ ನಿರ್ದೇಶನ ಬಯಸಿ ತಮಿಳುನಾಡು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಪುರಸ್ಕರಿಸಿದ್ದರೆ, ಇದೇ ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಹೋರಾಟಕ್ಕೆ ಇಳಿದಿದೆ. ಕಾಂಗ್ರೆಸ್ ಸರ್ಕಾರಕ್ಕೆ ‘ಕಾವೇರಿ ಸಂಘರ್ಷ’ಕ್ಕೆ ಪರಿಹಾರ ಕಂಡುಕೊಳ್ಳುವ ಸವಾಲು ಎದುರಾಗಿದೆ.
ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲ. ಬೇಡಿಕೆಯಂತೆ ನೀರು ಬಿಡಲಾಗದು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ರಾಜ್ಯ ಅಧಿಕಾರಿಗಳು ಹೇಳಿದ ನಂತರ ಸಿಟ್ಟಿಗೆದ್ದ ನೆರೆಯ ತಮಿಳುನಾಡು ಸುಪ್ರೀಂ ಕದ ತಟ್ಟಿದೆ. ನ್ಯಾಯಾಧಿಕರಣದ ಆದೇಶದಂತೆ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಮನವಿ ಸಲ್ಲಿಸಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಆಗಸ್ಟ್ ತಿಂಗಳಲ್ಲಿ ಕರ್ನಾಟಕ ಹರಿಸಬೇಕಾದ ನೀರಿನ ಪ್ರಮಾಣದ ಬಗ್ಗೆ ತುರ್ತು ವಿಚಾರಣೆ ಕೈಗೆತ್ತಿಕೊಳ್ಳಲು ಪೀಠವೊಂದನ್ನು ರಚನೆ ಮಾಡಬೇಕು ಎಂದು ತಮಿಳುನಾಡು ಪರ ವಕೀಲ ಮುಕುಲ್ ರೋಹಟ್ಗಿ ಮನವಿ ಮಾಡಿಕೊಂಡರು. ಇದಕ್ಕೆ ಸಮ್ಮತಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಇಂದೇ ಹೊಸ ತ್ರಿಸದಸ್ಯ ನ್ಯಾಯಪೀಠ ರಚನೆ ಮಾಡುವುದಾಗಿ ಭರವಸೆ ನೀಡಿದರು.
2018ರ ಸುಪ್ರೀಂಕೋರ್ಟ್ ಅಂತಿಮ ತೀರ್ಪಿನ ಪ್ರಕಾರ ಸೆಪ್ಟೆಂಬರ್ ತಿಂಗಳಿಗೆ 36.76 ಟಿಎಂಸಿ ನಿಗದಿತ ಪ್ರಮಾಣದ ನೀರಿನ ಬಿಡುಗಡೆ ಖಚಿತಪಡಿಸಿಕೊಳ್ಳಲು ಕರ್ನಾಟಕಕ್ಕೆ ನಿರ್ದೇಶಿಸಬೇಕು. ಪ್ರಸಕ್ತ ನೀರಾವರಿ ವರ್ಷದ ಜೂನ್ 1ರಿಂದ ಜುಲೈ 31ರವರೆಗಿನ ಅವಧಿಯಲ್ಲಿದ್ದ 28.849 ಟಿಎಂಸಿ ನೀರಿನ ಕೊರತೆಯನ್ನು ಕರ್ನಾಟಕ ಸರಿದೂಗಿಸಬೇಕು ಎಂದೂ ತಮಿಳುನಾಡು ತನ್ನ ಅರ್ಜಿಯಲ್ಲಿ ಮನವಿ ಮಾಡಿದೆ.
ಸುಪ್ರಿಂ ಕೋರ್ಟ್ ತ್ರಿಸದಸ್ಯ ಪೀಠ ರಚನೆಗೆ ನಿರ್ಧರಿಸುವುದರೊಂದಿಗೆ ರಾಜ್ಯ ಮತ್ತೊಂದು ಸುತ್ತಿನ ಕಾನೂನು ಸಮರ ಎದುರಿಸುವುದು ಅನಿವಾರ್ಯವಾಗಿದೆ. ತಮಿಳುನಾಡಿನ ಅರ್ಜಿ ವಿರುದ್ಧ ರಾಜ್ಯ ಸೋಮವಾರವೇ ಮೇಲ್ಮನವಿ ಸಲ್ಲಿಸಲು ಶನಿವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿತ್ತಾದರೂ, ತ್ರಿಸದಸ್ಯ ಪೀಠ ರಚನೆಗೆ ಸಿಜೆಐ ಮುಂದಾದ ಕಾರಣ ರಾಜ್ಯ ಸರ್ಕಾರ ಸದ್ಯಕ್ಕೆ ಕಾದು ನೋಡುವ ನಿಲುವಿಗೆ ಮೊರೆ ಹೋಗಿದೆ.
ಸರ್ವಪಕ್ಷ ಸಭೆ ನಿರ್ಣಾಯಕ:ತಮಿಳುನಾಡು ತಂಟೆ ವಿಷಯದಲ್ಲಿ ರಾಜ್ಯದ ಮುಂದಿನ ನಡೆಯ ಬಗ್ಗೆ ಆ.23ರ ಸರ್ವಪಕ್ಷಗಳ ಸಭೆ ನಂತರ ತೀರ್ವನಿಸಲಾಗುವುದು ಎಂದು ಜಲಸಂಪನ್ಮೂಲ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು. ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಅಭಾವದ ಕಾರಣಕ್ಕೆ ರಾಜ್ಯದ ಕಾವೇರಿ ಕಣಿವೆ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಿದೆ. ರೈತರು ಸೇರಿ ರಾಜ್ಯದ ಹಿತ ಕಾಪಾಡುವುದು ನಮ್ಮ ನಿಲುವಾಗಿದೆ. ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ರಚನೆಗೆ ನಿರ್ಧರಿಸಿರುವ ಕಾರಣ ನಾವು ಮೇಲ್ಮನವಿ ಸಲ್ಲಿಸಿಲ್ಲ. ಆದರೆ ರಾಜ್ಯದ ವಾಸ್ತವಾಂಶವನ್ನು ನ್ಯಾಯಾಲಯದ ಮುಂದಿಡಲು ಸರ್ಕಾರ ಸನ್ನದ್ಧವಾಗಿದೆ ಎಂದು ತಿಳಿಸಿದರು. ಸರ್ವಪಕ್ಷಗಳ ಸಭೆಯು ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಸೂಚಿಸಿದರೆ ಅದನ್ನೂ ಪಾಲಿಸುವುದಕ್ಕೆ ಸರ್ಕಾರ ಸಿದ್ಧವಿದೆ. ರಾಜ್ಯ ಹಾಗೂ ರೈತರ ಹಿತ, ಗೌರವ ಕಾಪಾಡುವುದು ಸರ್ಕಾರ ಮಾತ್ರವಲ್ಲ ಎಲ್ಲ ರಾಜಕೀಯ ಪಕ್ಷಗಳ ಕರ್ತವ್ಯವೆಂದರು.
ಪ್ರಾಧಿಕಾರಕ್ಕೆ ಮೇಲ್ಮನವಿ:ಏತನ್ಮಧ್ಯೆ, 15 ದಿನಗಳಿಗೆ ಅನ್ವಯ ಆಗುವಂತೆ ದಿನಕ್ಕೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದ್ದ ಆದೇಶವನ್ನು ಮರುಪರಿಶೀಲನೆ ಮಾಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯ ಮರುಪರಿಶೀಲನಾ ಅರ್ಜಿಯೊಂದನ್ನು ಸಲ್ಲಿಸಿದೆ. ಕಾವೇರಿ ಪ್ರಾಧಿಕಾರ ಆಗಸ್ಟ್ 25 ಅಥವಾ 26ರಂದು ಸಭೆ ಕರೆಯುವ ಸಾಧ್ಯತೆ ಇದೆ.
ಬೆಂಗಳೂರು ಮಹಾನಗರಕ್ಕೆ 24 ಟಿಎಂಸಿ ಅಡಿ, ಮೈಸೂರು, ರಾಮನಗರ ಜಿಲ್ಲೆಗಳಿಗೆ 20 ಟಿಎಂಸಿ ಅಡಿ ಸೇರಿ ರಾಜ್ಯಕ್ಕೆ 124 ಟಿಎಂಸಿ ಅಡಿ ನೀರು ಅಗತ್ಯವಿದೆ. ಕೆಆರ್​ಎಸ್ 22 ಟಿಎಂಸಿ ಅಡಿ, ಕಬಿನಿ- 6.5, ಹಾರಂಗಿ-7 ಹಾಗೂ ಹೇಮಾವತಿ-20 ಟಿಎಂಸಿ ಅಡಿ ಸೇರಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಒಟ್ಟು 55 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ತಮಿಳುನಾಡು ನೀರಾವರಿ ಉದ್ದೇಶಕ್ಕಾಗಿಯೇ ಮೆಟ್ಟೂರು ಅಣೆಕಟ್ಟೆಯಿಂದ 63.62 ಟಿಎಂಸಿ ನೀರನ್ನು ಹರಿಸಿರುವುದು ಅಂಕಿಅಂಶಗಳಿಂದ ತಿಳಿದು ಬಂದಿದೆ. ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ಸೋಮವಾರ ಸಂಜೆಯ ತನಕ ಇದ್ದ ನೀರಿನ ಪ್ರಮಾಣವೇ 69.805 ಟಿಎಂಸಿಗಳು ಮಾತ್ರ. ಕಳೆದ ವರ್ಷ ಇದೇ ದಿನಕ್ಕೆ 102.632 ಟಿಎಂಸಿ ನೀರಿನ ಸಂಗ್ರಹಣೆ ಇತ್ತು.
ಕಳೆದ ವರ್ಷ ಅಧಿಕ ಜಲವರ್ಷವಾಗಿದ್ದರಿಂದ ಹೆಚ್ಚಿನ ನೀರನ್ನು ಹರಿಸಲಾಗಿದೆ. ಈ ವರ್ಷ 33.347 ಟಿಎಂಸಿ ನೀರಿನ ಹೊರ ಹರಿವು ಇದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 226.448 ಟಿಎಂಸಿ ನೀರು ಹರಿದು ಹೋಗಿತ್ತು. ಈ ವರ್ಷ ಕಾಲುವೆಗಳಿಗೆ 13.373 ಟಿಎಂಸಿ ನೀರು ಹರಿಸಲಾಗಿದೆ. ಕಳೆದ ವರ್ಷ 16.758 ಟಿಎಂಸಿ ನೀರು ಬಿಡಲಾಗಿತ್ತು.
ಕಾವೇರಿ ನ್ಯಾಯಾಧೀಕರಣದ ತೀರ್ಪಿನಂತೆ ಸಾಮಾನ್ಯ ವರ್ಷದಲ್ಲಿ ಆ.20ರ ತನಕ ಹರಿಸಬೇಕಾದ ನೀರಿನ ಪ್ರಮಾಣ ಬಿಳಿಗೊಂಡ್ಲು ಬಳಿಯಲ್ಲಿ 70.07 ಟಿಎಂಸಿ ದಾಖಲಾಗಬೇಕು. ಕಳೆದ ವರ್ಷ 284.862 ಟಿಎಂಸಿ ನೀರು ಹರಿದು ಹೋಗಿತ್ತು. ಈ ವರ್ಷ 24.056 ಟಿಎಂಸಿ ನೀರು ಹೋಗಿರುವುದು ದಾಖಲಾಗಿದೆ.
28ಕ್ಕೆ ಬಿಜೆಪಿ ಹೋರಾಟ:ತಮಿಳುನಾಡಿಗೆ ನೀರು ಹರಿಸಿದ್ದನ್ನು ವಿರೋಧಿಸಿ ಬಿಜೆಪಿ ಮಂಡ್ಯದಲ್ಲಿ ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದೆ. ಆ.28ರಂದು ದೊಡ್ಡಮಟ್ಟದಲ್ಲಿ ಹೋರಾಟಕ್ಕೆ ತೀರ್ವನಿಸಿದೆ.
ಕರ್ನಾಟಕದ ನೆಲ, ಜಲ, ಸಂಸ್ಕೃತಿ ವಿಚಾರ ಬಂದಾಗ ನಾವು ಒಂದಾಗಿ ನಿಲ್ಲುತ್ತೇವೆ. ಆದರೆ, ಕಾವೇರಿ ನದಿಯ ನೀರಿನ ಪ್ರಮಾಣ, ಮಳೆಯ ಪ್ರಮಾಣ, ನಮ್ಮ ಬೇಡಿಕೆ, ತಮಿಳುನಾಡಿನ ಬೇಡಿಕೆ ಮಾತ್ರವಲ್ಲದೆ ವಸ್ತುಸ್ತಿತಿಯನ್ನು ಪ್ರತಿಪಾದಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಒಂದೆಡೆ ನೀರು ಕೊಡುವ ಸರ್ಕಾರ ಇನ್ನೊಂದೆಡೆ ಪುನರ್ ಪರಿಶೀಲಿಸಲು ಕೋರುತ್ತಿದೆ.
| ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ
ಕಾವೇರಿ ನೀರಿನ ವಿಷಯದಲ್ಲಿ ಸರ್ಕಾರ ಇಬ್ಬಗೆ ನಿಲುವು ತಳೆದಿದೆ. 23ರ ಸರ್ವಪಕ್ಷ ಸಭೆಯನ್ನು ಬಿಜೆಪಿ ಬಹಿಷ್ಕರಿಸುವುದಿಲ್ಲ, ಸರ್ಕಾರದ ಧೋರಣೆ ವಿರೋಧಿಸುತ್ತೇವೆ. ಆ.28ರಂದು ತೀವ್ರತರದ ಹೋರಾಟ ಮಾಡುತ್ತೇವೆ.
| ಆರ್.ಅಶೋಕ್, ಮಾಜಿ ಸಚಿವ
ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 16 ಜಿಲ್ಲೆಗಳು ಬರ ಪರಿಸ್ಥಿತಿ ಎದುರಿಸುತ್ತಿವೆ ಮತ್ತು 85 ತಾಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿದೆ. ರೈತರು ಎದುರಿಸುತ್ತಿರುವ ಈ ಸವಾಲಿನ ಪರಿಸ್ಥಿತಿಗಳ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ನ್ಯಾಯಾಲಯದ ಅಭಿಪ್ರಾಯ ಕೇಳದೆ ಅಥವಾ ಸರ್ವಪಕ್ಷ ಸಭೆಯನ್ನೂ ನಡೆಸದೆ 10 ಟಿಎಂಸಿ ಕಾವೇರಿ ನೀರು ಬಿಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಕ್ರಮಕ್ಕೆ ಐಎನ್​ಡಿಐಎ ಮೈತ್ರಿಕೂಟದ ಪಾಲುದಾರ ಡಿಎಂಕೆಯ ಒತ್ತಡವೇ ಕಾರಣ.
| ರಾಜೀವ್ ಚಂದ್ರಶೇಖರ್, ಕೇಂದ್ರ ಸಚಿವ
ನಾಳೆ ಸರ್ವಪಕ್ಷ ಸಭೆ:ಕಾವೇರಿ ನದಿ ನೀರಿನ ವಿವಾದ ಕುರಿತಂತೆ ಸರ್ವಪಕ್ಷ ಮುಖಂಡರು, ಸಂಸದರ ಸಭೆ ಬುಧವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಸಚಿವರು, ಸಂಸದರು, ಅಧಿಕಾರಿಗಳು, ಸುಪ್ರೀಂಕೋರ್ಟ್​ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ವಕೀಲರ ತಂಡ ಹಾಗೂ ತಾಂತ್ರಿಕ ತಂಡದ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗಿದೆ.
ನೀರು ಬಿಟ್ಟಿದ್ದಕ್ಕೆ ಸಮಜಾಯಿಷಿ:ಆ.31ರ ತನಕ ಪ್ರತಿದಿನ 10 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ಆದೇಶವಿದೆ. ಇದೆಲ್ಲವೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಗೊತ್ತಿದ್ದರೂ ನೀರು ಬಿಡಬೇಡಿ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್-ಡಿಎಂಕೆ ಮೈತ್ರಿ ಕಾರಣಕ್ಕೆ ನೀರು ಬಿಡಲಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಆದರೆ, ಕಾವೇರಿ ನೀರು ಪ್ರಾಧಿಕಾರದ ಧೋರಣೆ ವಿರೋಧಿಸಿ ಸುಪ್ರೀಂ ಕೋರ್ಟ್​ಗೆ ತಮಿಳುನಾಡು ಸಲ್ಲಿಸಿರುವ ಅರ್ಜಿ ವಿರುದ್ಧ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿ ಸಿಲ್ಲ ಏಕೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಾಲೆಳೆದರು.
ವಿಪಕ್ಷಗಳ ನೀರಿನ ರಾಜಕಾರಣ:ತಮಿಳುನಾಡು 64 ಟಿಎಂಸಿ ಅಡಿ ನೀರು ಬಳಸಿಕೊಂಡಿದೆ. ಕುರುವೈ ಬೆಳೆ ನಾಲ್ಕು ಪಟ್ಟು ವಿಸ್ತರಣೆ ಮಾಡಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ. ತಮಿಳುನಾಡು ತನ್ನ ಹಕ್ಕಿನ ನೀರನ್ನು ಹೇಗಾದರೂ ಬಳಸಿಕೊಳ್ಳಲಿ. ಅದಕ್ಕೆ ನಾವೇಕೆ ಆಕ್ಷೇಪಿಸಬೇಕು ಎಂದು ಮರು ಪ್ರಶ್ನಿಸಿದರು. ನೀರಿನ ವಿಚಾರದಲ್ಲಿ ರಾಜಕಾರಣ ಮಾಡುವುದಕ್ಕಾಗಿ ಪ್ರತಿಪಕ್ಷಗಳು ಆರೋಪ, ಟೀಕೆಗೆ ಇಳಿದಿವೆ ಎಂದು ಶಿವಕುಮಾರ್ ಟೀಕಿಸಿದರು.
ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು, ಟ್ರೋಲಿಗರಿಗೆ ಕಂಡ ಚಾಯ್​ವಾಲಾ ಯಾರು?: ನಟ ಪ್ರಕಾಶ್​ ರಾಜ್​ ಮತ್ತೊಂದು ‘ಎಕ್ಸ್​’

ನಾಗರಹಾವಿನ ಮುಂದೆ ಕೇಕ್ ಇಟ್ಟು ‘ಹ್ಯಾಪಿ ಬರ್ತ್​ಡೇ’ ಎಂದು ಪಂಚಮಿ ಆಚರಿಸಿದ ಯುವಕರ ದಂಡು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 2 =
Remember me
