ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಸಂಕಲ್ಪದ ಭಾಗವಾಗಿ ಜನರಿಗೆ ಅನುಕೂಲ, ತ್ವರಿತ ನ್ಯಾಯದಾನದ ವ್ಯವಸ್ಥೆಗಾಗಿ ಹೈಕೋರ್ಟ್ ಕಾಯ್ದೆಗೆ ತಿದ್ದುಪಡಿ ತರಲು ಗಂಭೀರ ಚಿಂತನೆ ನಡೆದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಪ್ರಕಟಿಸಿದರು.
ಜನಕೇಂದ್ರಿತ ಹಲವು ಕಾನೂನುಗಳನ್ನು ಅಲ್ಪಾವಧಿಯಲ್ಲೇ ಜಾರಿಗೊಳಿಸಲಾಗಿದೆ. ಸಂವಿಧಾನದ ಆಶಯಗಳ ಪ್ರತಿಫಲ ಜನರಿಗೆ ದಕ್ಕುವಂತಾಗಬೇಕು ಎನ್ನುವುದು ರಾಜ್ಯ ಸರ್ಕಾರದ ಇಚ್ಛಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರತಿಪಾದಿಸಿದರು.
‘ವಿಜಯವಾಣಿ’ ಕಚೇರಿಯಲ್ಲಿ ಶುಕ್ರವಾರ ಸಂವಾದದಲ್ಲಿ ಪಾಲ್ಗೊಂಡ ಸಚಿವರು, ಕಾಂಗ್ರೆಸ್ ಸರ್ಕಾರದ ನಿಲುವು-ಒಲವು, ಹಿರಿಯ ಸಚಿವರಾಗಿ ತಾವು ಮಾಡುತ್ತಿರುವ ಕೆಲಸಗಳು, ಮುಂದಿನ ಉದ್ದೇಶಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡರು.
ಬಜೆಟ್ ಅಧಿವೇಶನದಲ್ಲಿ ಜನಪರ 11 ಕಾಯ್ದೆಗಳನ್ನು ಅಂಗೀಕರಿಸಲಾಗಿದೆ. ಈ ಪೈಕಿ 9 ಕಾಯ್ದೆಗಳಿಗೆ ಅಷ್ಟೇ ವೇಗದಲ್ಲಿ ರಾಜ್ಯ ಪಾಲರು ಅಂಕಿತ ಹಾಕಿರುವುದು ಸರ್ಕಾರದ ಹೆಚ್ಚುಗಾರಿಕೆ ಎಂದರು. ಸಂವಿಧಾನ ಅನುಷ್ಠಾನಕ್ಕೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 11 ಕಾಯ್ದೆಗಳು ಅಂಗೀಕಾರಕ್ಕೆ ಮುನ್ನ ಸಂಬಂಧಿತ ವಿಧೇಯಕಗಳನ್ನು ಒಂದು ವಾರ ಮುಂಚಿತವಾಗಿ ಶಾಸನಸಭೆ ಸದಸ್ಯರಿಗೆ ಒದಗಿಸಲಾಗಿತ್ತು. ಮಸೂದೆಗಳ ಅಧ್ಯಯನ ಮಾಡಿ, ಉದ್ದೇಶ ಅರ್ಥೈಸಿಕೊಂಡು ವಿಸõತ ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎನ್ನುವ ಉದ್ದೇಶದಿಂದ ಸರ್ಕಾರ ಈ ಕ್ರಮವಹಿಸಿತ್ತು. ಅದೇ ರೀತಿ ಸದನದಲ್ಲಿ ಚರ್ಚೆ, ವಿಮರ್ಶೆಗೆ ಒಳಪಟ್ಟು ಅನುಮೋದನೆ ಪಡೆದುಕೊಂಡಿದ್ದು, ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಗಮನಾರ್ಹ ಕಾನೂನುಗಳು:ನ್ಯಾಯದಾನ ವ್ಯವಸ್ಥೆಯಲ್ಲಿ ಜನಸಾಮಾನ್ಯರು ಅದರಲ್ಲೂ ಬಡವರಿಗೆ ವಿಶೇಷ ಗಮನಹರಿಸಿ ನಾಗರಿಕ ಪ್ರಕ್ರಿಯಾ ಸಂಹಿತೆಗೆ (ಸಿಪಿಸಿ) ತಿದ್ದುಪಡಿ ತರಲಾಗಿದೆ. ಅನಗತ್ಯವಾಗಿ ಪ್ರಕರಣಗಳ ಮುಂದೂಡಿಕೆ, ದೀರ್ಘಾವಧಿಗೆ ದಿನಾಂಕ ಪಡೆಯುವುದನ್ನು ತಪ್ಪಿಸಿ ಆರು ತಿಂಗಳ ಕಾಲಮಿತಿಯೊಳಗೆ ಪ್ರಕರಣ ಇತ್ಯರ್ಥಕ್ಕೆ ಈ ಕಾಯ್ದೆ ನೆರವಾಗಿದೆ.
ಕೋರ್ಟ್​ಗಳಲ್ಲಿ ಸರ್ಕಾರದ ಸೋಲಿನ ಪ್ರಮಾಣ ಕಳವಳಕಾರಿಯಾಗಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಶೇ.95, ಸಿವಿಲ್ ಪ್ರಕರಣಗಳಲ್ಲಿ ಶೇ.70ಕ್ಕೂ ಅಧಿಕ ಪ್ರಕರಣಗಳು ಸೋತಿದೆ. ವ್ಯಾಜ್ಯಗಳ ನಿರ್ವಹಣೆಯಲ್ಲಿರುವ ದೋಷ ಪತ್ತೆ ಹಚ್ಚಲಾಗಿದೆ. ಶಾಸನಾತ್ಮಕವಾಗಿ ಸ್ಪಷ್ಟ ನಿರ್ದೇಶನ ನೀಡುವುದು ವ್ಯಾಜ್ಯ ನಿರ್ವಹಣೆ ಕಾಯ್ದೆಯ ಉದ್ದೇಶ. ಕೋರ್ಟ್​ಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸುವ ವಕೀಲರು ಲಿಖಿತವಾಗಿ ಸಲ್ಲಿಸಲು ತಿಳಿಸಿದ್ದು. ಇದರಿಂದ ನ್ಯಾಯಾಧೀಶರು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೆ ಪರಿಣಾಮಕಾರಿ ನಿರ್ವಹಣೆ, ಶಿಸ್ತು ಅಳವಡಿಸಿಕೊಂಡು, ಸರ್ಕಾರ ಮತ್ತು ಜನಹಿತ ಕಾಯ್ದೆಯಾಗಿದೆ ಎಂದು ಪಾಟೀಲ ವಿಶ್ಲೇಷಿಸಿದರು.
ಪರಿಶಿಷ್ಟ ಜಾತಿ, ಪಂಗಡಗಳಿಗೆ ಮಂಜೂರಾದ ಜಮೀನು ಅಕ್ರಮ ಪರಭಾರೆ, ಕಬಳಿಕೆಯಾದ ಹಾಗೂ ಅಕ್ರಮವಾಗಿ ಪರಭಾರೆಯಾದ ಜಮೀನು ಮರುವಶಕ್ಕೆ ಅವಕಾಶ ಕಲ್ಪಿಸಲೆಂದು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮೂಲಕ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದೆ. ಶೋಷಿತರಿಗೆ ನೀಡಿದ ಜಮೀನು ಅವರ ಬಳಿಯೇ ಉಳಿಸಲು ಈ ಕಾಯ್ದೆ ತಿದ್ದುಪಡಿ ಬಗ್ಗೆ ಅನೇಕ ವರ್ಷಗಳಿಂದ ಚರ್ಚೆಯಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಸಾಕಾರಗೊಳಿಸುವ ಮೂಲಕ ದಲಿತರ ಪರ ಎಂಬುದನ್ನು ಸಾಬೀತುಪಡಿಸಿದೆ ಗಟ್ಟಿಸ್ವರದಲ್ಲಿ ಹೇಳಿದರು.
ಸಾಕ್ಷಿಗಳಿಗೆ ಪ್ರತ್ಯೇಕ ಮೊಗಸಾಲೆ:ನ್ಯಾಯಾಲಯಗಳಲ್ಲಿ ಮೂಲ ಸವಲತ್ತು ಸೃಜನೆ, ಇನ್ನಿತರ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರ ಕ್ರಮವಹಿಸುತ್ತದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಸಾಕ್ಷಿಗಳಿಗೆ ಬ್ರಿಟಿಷ್ ಕಾಲದ ಪದ್ಧತಿಯೇ ಮುಂದುವರಿದಿದ್ದು, ಈ ಪದ್ಧತಿ ಹೋಗಲಾಡಿಸಲು ಕ್ರಮವಹಿಸಲಾಗುತ್ತದೆ. ಕೋರ್ಟ್​ಗಳಲ್ಲಿ ಆರೋಪಿಗಳು ಮತ್ತು ಸಾಕ್ಷಿದಾರರು ಎಂಬ ವ್ಯತ್ಯಾಸವಿಲ್ಲದ ಸ್ಥಿತಿಯಿದೆ. ಯಾವುದೇ ಪ್ರಕರಣದಲ್ಲಿ ಸಾಕ್ಷಿದಾರರು ಮಹತ್ವದ ಪಾತ್ರವಹಿಸುತ್ತಾರೆ. ಕೋರ್ಟ್​ಗಳಲ್ಲಿ ಸಾಕ್ಷಿದಾರರು ಕುಳಿತುಕೊಳ್ಳಲು ಪ್ರತ್ಯೇಕ ಸುಸಜ್ಜಿತ ಮೊಗಸಾಲೆ ನಿರ್ವಿುಸುವ ಚಿಂತನೆಯಿದೆ.
ಅದೇ ರೀತಿ, ಕ್ಯಾಂಟೀನ್​ನಲ್ಲಿ ಕುಳಿತೋ ಅಥವಾ ಮರದ ಕೆಳಗೆ ನಿಂತೋ ಸಾಕ್ಷಿದಾರರ ಜತೆಗೆ ವಕೀಲರು ಮಾತುಕತೆ ನಡೆಸುವುದನ್ನೂ ತಪ್ಪಿಸಬೇಕಾಗಿದೆ. ವಕೀಲರಿಗೆ ಪ್ರತ್ಯೇಕ ಚೇಂಬರ್ ವ್ಯವಸ್ಥೆ ಮಾಡಿ, ಸಾಕ್ಷಿದಾರರೊಂದಿಗೆ ವಿಚಾರ ವಿನಿಮಯಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಎಚ್.ಕೆ. ಪಾಟೀಲ ಹೇಳಿದರು.
ಗಡಿ ಖಾತೆ ಸಚಿವ ಹುದ್ದೆ ಸೃಜಿಸುವ ವಿಶ್ವಾಸ:ಗಡಿ ಸಂರಕ್ಷಣಾ ಆಯೋಗ ಮರುರಚಿಸುವ ಚಿಂತನೆಯಿಲ್ಲ. ಆದರೆ, ಪ್ರತ್ಯೇಕವಾಗಿ ಗಡಿ ಖಾತೆ ಸಚಿವ ಹುದ್ದೆ ಸೃಜಿಸಬೇಕೆಂಬ ಬೇಡಿಕೆಗಳಿದ್ದು, ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಗಂಭೀರ ಚಿಂತನೆ ನಡೆಸಲಿದ್ದಾರೆ ಎನ್ನುವ ವಿಶ್ವಾಸವನ್ನು ಎಚ್.ಕೆ. ಪಾಟೀಲ ವ್ಯಕ್ತಪಡಿಸಿದರು. ಗಡಿ ವಿವಾದ ಮುಗಿದಿಲ್ಲ. ರಾಜಕೀಯ ಕಾರಣಗಳಿಗಾಗಿ ನೆರೆಯ ಮಹಾರಾಷ್ಟ್ರ ಆಗಾಗ್ಗೆ ಗಡಿ ವಿವಾದ ಕೆದಕಲು ಪ್ರಯತ್ನಿಸುತ್ತಿದೆ. ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ರಾಜ್ಯದ ನಿಲುವು ದೃಢವಾಗಿದೆ ಎಂದು ಎಚ್.ಕೆ. ಪಾಟೀಲ ಹೇಳಿದರು.
ಅಧಿವೇಶನ ಕಡ್ಡಾಯ ಪಾಲನೆಗೆ ಒತ್ತಡವೂ ಅಗತ್ಯ:ಅಧಿವೇಶನದ ಅವಧಿ, ಕಾರ್ಯ-ಕಲಾಪಗಳು ಮೊಟಕುಗೊಳ್ಳುತ್ತಿವೆ ಎಂಬ ಆಕ್ಷೇಪಣೆ ಇರುವುದು ನಿಜ, ವರ್ಷದಲ್ಲಿ ಕನಿಷ್ಠ 120 ದಿನ ಅಧಿವೇಶನ ನಡೆಯಬೇಕಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ 39-40 ದಿನಗಳಿಗಷ್ಟೇ ಅಧಿವೇಶನ ನಡೆಸಿದ ನಿದರ್ಶನವಿದೆ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ 100 ದಿನಗಳೊಳಗೆ 21 ದಿನ ವಿಧಾನಮಂಡಲ ಕಲಾಪ ನಡೆಸಿದೆ. ಸಿದ್ದರಾಮಯ್ಯ ಈ ಮೊದಲು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 60 ದಿನ ಅಧಿವೇಶನ ನಡೆಸಿದ್ದಿದೆ. ಅಧಿವೇಶನದ ಅವಧಿ ಕಡಿಮೆಯಾಗುವುದನ್ನು ತಪ್ಪಿಸಲು ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕೆಂಬ ಕಾಯ್ದೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಈ ಕಾಯ್ದೆ ಪಾಲನೆಯಾಗಿದೆ. ಈ ಕಾನೂನು ಪಾಲನೆ ಆಗದಿದ್ದರೆ ಯಾರಿಗೂ ಶಿಕ್ಷಿಸುವ ಅಧಿಕಾರವಂತೂ ಇಲ್ಲ. ಕಾಯ್ದೆ ರೂಪಿಸಿದವರೇ ಜಾರಿಗೊಳಿಸುತ್ತಿಲ್ಲ ಎಂಬ ಧ್ವನಿ ಎತ್ತಿ, ಪಾಲಿಸುವ ಮಾಡಲು ಒತ್ತಡತಂತ್ರ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಪಾಟೀಲ ಸಲಹೆ ನೀಡಿದರು.
ಜಿಎಸ್​ಟಿ ಮಂಡಳಿಗೆ ಸಲಹೆ:ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯು ಅಲ್ಲಗಳೆಯಲು ಸಾಧ್ಯವಿಲ್ಲದ ಪ್ರಮುಖ ಸಲಹೆಯೊಂದನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಎಚ್.ಕೆ. ಪಾಟೀಲ ಹೇಳಿದರು. ವ್ಯಾಪಾರಿಗಳು ನೀಡುವ ಹೇಳಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳಿಗೆ ಒಪ್ಪಿಸುವ ಅಂಶವು ಕಾಯ್ದೆಯಲ್ಲಿತ್ತು. ಪ್ರಸ್ತಾವಿತ ಅಂಶಕ್ಕೆ ರಾಜ್ಯ ಸರ್ಕಾರ ಬಲವಾದ ವಿರೋಧ ವ್ಯಕ್ತಪಡಿಸಿ, ವ್ಯಾಪಾರಿಗಳು ನೀಡಿದ ಹೇಳಿಕೆಯು ನಿಜವೆಂದು ಸಾಬೀತುಪಡಿಸುವ ಹೊಣೆಗಾರಿಕೆ ವ್ಯಾಪಾರಸ್ಥರದೇ ಆಗಿರಲಿ ಎಂಬ ಸಲಹೆ ಮಂಡಳಿ ಮುಂದಿಡಲಾಗಿದೆ ಎಂದರು.
ನ.1ರಿಂದ 400 ಗ್ರಾಮ ನ್ಯಾಯಾಲಯಗಳು:ಬಡವರ ಮನೆ ಬಾಗಿಲಿಗೆ ನ್ಯಾಯ ತಲುಪಿಸುವುದು, ವ್ಯಾಜ್ಯಮುಕ್ತ ಗ್ರಾಮಗಳ ಆಶಯ ಹೊಂದಿದ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಸರ್ಕಾರ ಬದ್ಧವೆಂದು ಪಾಟೀಲ ಹೇಳಿದರು. ಒಟ್ಟು ಒಂದು ಸಾವಿರ ಹಳ್ಳಿ ಕೋರ್ಟ್​ಗಳನ್ನು ತೆರೆಯಬೇಕೆಂದಿದೆ. ಈ ಪೈಕಿ ಮೊದಲ ಹಂತದಲ್ಲಿ 400 ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣವಾಗಿ ಸುವರ್ಣ ಮಹೋತ್ಸವ ವರ್ಷಕ್ಕೆ ಪದಾರ್ಪಣೆ ಮಾಡುವ ದಿನವನ್ನು ಸ್ಮರಣೀಯವಾಗಿಸುವ ಅಪೇಕ್ಷೆಯಿದೆ. ಮುಖ್ಯಮಂತ್ರಿ ಒಪ್ಪಿಗೆ ಪಡೆದು ನ.1ರಿಂದಲೇ ಗ್ರಾಮ ನ್ಯಾಯಾಲಯಗಳ ಕಾರ್ಯಾರಂಭಕ್ಕೆ ಉದ್ದೇಶಿಸಲಾಗಿದೆ ಎಂದರು.
ಒಬ್ಬ ಮಗನಿದ್ರೂ ಮತ್ತೆ ಗಂಡು ಮಗುವಾಗಿಲ್ಲ ಅಂತ ಮಕ್ಕಳ ಸಹಿತ ಬಾವಿಗೆ ಹಾರಿದ್ಲು; ಮೂವರು ಮಕ್ಕಳೂ ಸಾವು, ತಾಯಿ ಬಚಾವ್!

100 ಕೋಟಿ ರೂ. ಚೆಕ್​ ದೇಣಿಗೆಯಾಗಿ ಕೊಟ್ಟ ಭಕ್ತ; ಆಮೇಲಿನ ಸಂಗತಿ ಮೂಡಿಸಿತು ಅಚ್ಚರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − four =
Remember me
