ಕಿಯೆವ್/ಮಾಸ್ಕೊ/ನವದೆಹಲಿ:ಸಮರ ಪೀಡಿತ ಯೂಕ್ರೇನ್​ನ ಸುಮಿಯಲ್ಲಿ ಸಿಲುಕಿದ್ದ 694 ಭಾರತೀಯರನ್ನು ಗ್ರೀನ್ ಕಾರಿಡಾರ್ ಮೂಲಕ ಸುರಕ್ಷಿತವಾಗಿ ಅಲ್ಲಿಂದ ಸ್ಥಳಾಂತರಿಸಲಾಗಿದೆ. ಪೋಲ್ಟವಾಕ್ಕೆ ಅವರೆಲ್ಲರೂ ಬಸ್​ನಲ್ಲಿ ಕಳುಹಿಸಲಾಗಿದೆ. ಸೋಮವಾರ ರಾತ್ರಿ ಈ ಕಾರ್ಯಾಚರಣೆ ನಡೆದಿತ್ತು. ಭಾರತೀಯ ರಾಯಭಾರ ಕಚೇರಿ ಮತ್ತು ರೆಡ್ ಕ್ರಾಸ್ ಬೆಂಗಾವಲು ಪಡೆಯೊಂದಿಗೆ 12 ಬಸ್​ಗಳಲ್ಲಿ ಸ್ಥಳಾಂತರಿಸಲಾಗಿದೆ. ಬಾಂಗ್ಲಾದೇಶೀಯರು ಮತ್ತು ನೇಪಾಳಿಗಳನ್ನೂ ಕೂಡ ಸ್ಥಳಾಂತರಗೊಳಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್​ದೀಪ್ ಸಿಂಗ್ ಪುರಿ ಮಂಗಳವಾರ ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅವರ ಜತೆಗೆ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಈ ಕುರಿತು ಪ್ರತಿಕ್ರಿಯಿಸಿದ್ದು, ಸುಮಿಯಿಂದ ಎಲ್ಲ ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಯಶಸ್ವಿ ಆಗಿದ್ದೇವೆ. ಎಲ್ಲರೂ ಪೋಲ್ಟಾವಕ್ಕೆ ತೆರಳಿ ಅಲ್ಲಿಂದ ರೈಲಿನ ಮೂಲಕ ಪಶ್ಚಿಮ ಯೂಕ್ರೇನ್ ಹೋಗುತ್ತಾರೆ. ಬಳಿಕ ವಿಮಾನದ ಮೂಲಕ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಸುಮಿಯಿಂದ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅದಕ್ಕೆ ಬೇಕಾದ ಗ್ರೀನ್ ಕಾರಿಡಾರ್ ರಚನೆಯಾಗಿಲ್ಲ ಎಂದು ಭಾರತ ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಹೇಳಿತ್ತು.
ಸ್ಥಳಾಂತರ ವಿವರ ನೀಡಿದ ಸ್ಥಳೀಯರು:ಸುಮಿಯಿಂದ ಪೋಲ್ಟವಾಗೆ ವಿದೇಶೀಯರ ಸ್ಥಳಾಂತರಕ್ಕೆ ಗ್ರೀನ್ ಕಾರಿಡಾರ್ ರಚಿಸಲಾಗಿತ್ತು. ಇದರಲ್ಲಿ ಭಾರತ, ಚೀನಾ ಮತ್ತು ಇತರೆ ದೇಶಗಳ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ರಷ್ಯಾಕ್ಕೆ ತೆರಳಿ ಅಲ್ಲಿಂದ ಸ್ವದೇಶಕ್ಕೆ ತೆರಳುವಂತೆ ರಷ್ಯಾ ಅನೇಕ ವಿದ್ಯಾರ್ಥಿಗಳಿಗೆ ಮನವಿ ಮಾಡಿತ್ತು. ಕೆಲವರಷ್ಟೆ ರಷ್ಯಾಕ್ಕೆ ತೆರಳಿ ಅಲ್ಲಿಂದ ಸ್ವದೇಶಕ್ಕೆ ತೆರಳಲು ಸಿದ್ಧರಾದರು. ಉಳಿದವರೆಲ್ಲ ಪೋಲ್ಟವಾಗೆ ತೆರಳಿದರು ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾಗಿ ವರದಿಯಾಗಿದೆ.
75 ಭಾರತೀಯ ನಾವಿಕರ ಸ್ಥಳಾಂತರ:ಯೂಕ್ರೇನ್​ನ ವಾಣಿಜ್ಯ ಬಂದರು ಮೈಕೋಲೈವ್​ನಲ್ಲಿ ಸಿಲುಕಿದ್ದ ಭಾರತದ 75 ನಾವಿಕರನ್ನು ಸೋಮವಾರ ಸ್ಥಳಾಂತರಿಸಲಾಗಿದೆ. ಇದಲ್ಲದೆ 2 ಲೆಬನೀಸ್ ಮತ್ತು 3 ಸಿರಿಯನ್ ಸೇರಿ 57 ನಾವಿಕರ ಸ್ಥಳಾಂತರಕ್ಕೆ ಮಂಗಳವಾರ ಬಸ್ ವ್ಯವಸ್ಥೆ ಆಗಿದೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಎರಡು ವಿಮಾನಗಳಲ್ಲಿ 410 ಭಾರತೀಯರು ಸ್ವದೇಶಕ್ಕೆ ಬಂದಿದ್ದು, ಇದುವರೆಗೆ ಸುಮಾರು 18,000 ಭಾರತೀಯರನ್ನು ಯೂಕ್ರೇನ್​ನಿಂದ ಸ್ಥಳಾಂತರಿಸಿದಂತಾಗಿದೆ.
ಭಾರತದ ಮೇಲೆ ಅಮೆರಿಕ ನಿರ್ಬಂಧ?:ವಿಶ್ವಸಂಸ್ಥೆಯಲ್ಲಿ ಅಮೆರಿಕ ಪರವಾಗಿ ನಿರ್ಣಯ ತೆಗೆದುಕೊಳ್ಳದ ಭಾರತದ ವಿರುದ್ಧ ಅಮೆರಿಕ ಕಠಿಣ ನಿರ್ಬಂಧ ಹೇರುವ ಸಾಧ್ಯತೆ ಇದೆ. ರಷ್ಯಾದಿಂದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಒಪ್ಪಂದ ಮಾಡಿಕೊಂಡ ಕಾರಣ ಅದು ಅಮೆರಿಕದ ಹಿತಕ್ಕೆ ವಿರುದ್ಧವಾದುದು. ಅದೂ ಅಲ್ಲದೆ, ರಷ್ಯಾ ವಿರುದ್ಧ ಅಮೆರಿಕ ನಿರ್ಬಂಧ ಹೇರಿ ಒತ್ತಡ ಹೇರುವ ಸಂದರ್ಭದಲ್ಲೂ ಭಾರತ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸದೇ ಇರುವ ಕಾರಣ, ಅದರ ವಿರುದ್ಧ ಸಿಎಎಟಿಎಸ್​ಎ ಕಾನೂನು ಪ್ರಕಾರ ಕಠಿಣ ನಿರ್ಬಂಧ ಹೇರ ಬೇಕೆಂದು ರಿಪಬ್ಲಿಕನ್ ಸೆನೆಟರ್ ಟೆಡ್ ಕ್ರೂಝ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಿಇಆರ್​ಎನ್​ಯಿುಂದ ರಷ್ಯಾ ಔಟ್:ಅಂತಾರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾಲಯ ಯೂರೋಪಿಯನ್ ಆರ್ಗನೈಸೇಷನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ – ಸಿಇಆರ್​ಎನ್​ನ ಆಬ್ಸರ್ವರ್ ಸ್ಥಾನದಿಂದ ರಷ್ಯಾವನ್ನು ಅಮಾನತುಗೊಳಿಸಲಾಗಿದೆ. ಇದನ್ನು ಖಚಿತ ಪಡಿಸಿರುವ ಸಿಇಆರ್​ಎನ್, ತನ್ನ 23 ಸದಸ್ಯ ರಾಷ್ಟ್ರಗಳು (ಯೂರೋಪ್ ರಾಷ್ಟ್ರಗಳು ಮತ್ತು ಇಸ್ರೇಲ್) ಯೂಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸಿವೆ. ರಷ್ಯಾ, ಅಮೆರಿಕ, ಜಪಾನ್ ಮತ್ತು ಯೂರೋಪಿಯನ್ ಯೂನಿಯನ್​ನಂತೆ ಯೂಕ್ರೇನ್ ಕೂಡ 7 ಸಹ ಸದಸ್ಯ ರಾಷ್ಟ್ರಗಳಾಗಿದ್ದು, ಆಬ್ಸರ್ವರ್ ಸ್ಥಾನಮಾನ ಹೊಂದಿದೆ. ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತೆಂದು ಹೇಳಿದೆ.
ಬಂದೂಕು ಹಿಡಿದ ಭಾರತೀಯ:ಕಿಯೆವ್​ನ ರಕ್ಷಣೆಗಾಗಿ ಟೆರಿಟೋರಿಯಲ್ ಆರ್ವಿುಗೆ ಸೇರುವಂತೆ ವಿದೇಶೀಯರಿಗೂ ಯುಕ್ರೇನ್ ಸರ್ಕಾರ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿದ ಅನೇಕ ವಿದೇಶಿಯರ ಪೈಕಿ ಭಾರತದ ಒಬ್ಬ ಯುವಕ ಕೂಡ ಯೂಕ್ರೇನ್ ಸೇನೆ ಸೇರಿದ್ದಾನೆ. ತಮಿಳುನಾಡು ಮೂಲದ 21 ವರ್ಷದ ವಿದ್ಯಾರ್ಥಿ ಸೈನಿಕೇಶ್ ರವಿಚಂದ್ರನ್ ಎಂದು ಗುರುತಿಸಲಾಗಿದೆ. ಈತ ರ್ಖಾವ್​ನಲ್ಲಿ ನ್ಯಾಷನಲ್ ಏರೋಸ್ಪೇಸ್ ಯೂನಿವರ್ಸಿಟಿಯಲ್ಲಿ 2018ರಲ್ಲಿ ಕೋರ್ಸ್​ಗೆ ಸೇರಿದ್ದ. ಎತ್ತರದ ಕಾರಣಕ್ಕೆ ಈತ ಭಾರತೀಯ ಸೇನಾ ನೇಮಕ ಪ್ರಕ್ರಿಯೆಯಿಂದ ಹೊರಬಿದ್ದಿದ್ದ. ಗುಪ್ತಚರ ಮಾಹಿತಿ ಪ್ರಕಾರ, ಈತ ಜಾರ್ಜಿಯನ್ ನ್ಯಾಷನಲ್ ಲಿಗಿಯನ್ ಪ್ಯಾರಾಮಿಲಿಟರಿ ಯೂನಿಟ್​ನ ಭಾಗವಾಗಿದ್ದಾನೆ. 16,000 ನಾಗರಿಕರು ಈ ಸೇನಾ ಘಟಕದ ಭಾಗವಾಗಿದ್ದಾರೆ ಎಂದು ಯೂಕ್ರೇನ್ ಸರ್ಕಾರ ತಿಳಿಸಿದೆ.
ಕ್ಷಿಪಣಿ ದಾಳಿಗೆ 21 ಬಲಿ:ಯೂಕ್ರೇನ್​ನ ರಾಜಧಾನಿ ಕಿಯೆವ್​ನಿಂದ ಪೂರ್ವಕ್ಕೆ 350 ಕಿ.ಮೀ. ದೂರದ ಸುಮಿ ಪಟ್ಟಣದಲ್ಲಿ ವೈಮಾನಿಕ ದಾಳಿಗೆ 21 ಜನ ಸಾವನ್ನಪ್ಪಿದ್ದಾರೆ. ಈ ಪಟ್ಟಣ ರಷ್ಯಾ ಗಡಿಗೆ ಸಮೀಪದಲ್ಲಿದೆ. ಶುಮಿಯಲ್ಲಿ 500 ಕಿಲೋ ಬಾಂಬ್ ದಾಳಿ ನಡೆಸಿದ್ದರಿಂದ 2 ಮಕ್ಕಳು ಸೇರಿ 18 ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿರಾಶ್ರಿತರಾದ 20 ಲಕ್ಷ ಯೂಕ್ರೇನಿಯನ್ನರು:ರಷ್ಯಾದ ಆಕ್ರಮಣದಿಂದಾಗಿ ಯೂಕ್ರೇನ್​ನ 20 ಲಕ್ಷಕ್ಕೂ ಹೆಚ್ಚು ಜನರು ನೆರೆ ರಾಷ್ಟ್ರಗಳಲ್ಲಿ ನಿರಾಶ್ರಿತರಾಗಿ ಸೇರಿ ಕೊಳ್ಳುವಂತೆ ಆಗಿದೆ. ಪೋಲೆಂಡ್​ನಲ್ಲಿ 10 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
Z ಎಂಬ ಸಮರ ಸಂಕೇತ:Z ಎಂಬುದು ರಷ್ಯಾ ಆಕ್ರಮಣದ ಹೊಸ ಸಂಕೇತವಾಗಿ ಬಳಕೆಯಾಗತೊಡಗಿದೆ. ಈ ಸಂಕೇತ ಮೊದಲು ರಷ್ಯಾದ ಟ್ಯಾಂಕ್​ಗಳಲ್ಲಿ ಗೋಚರಿಸಿತ್ತು. ಇದಲ್ಲದೆ ಆಂಗ್ಲ ಭಾಷೆಯ ಒ, ಎಕ್ಸ್, ಎ ಮತ್ತು ವಿ ಅಕ್ಷರಗಳು ಸೇನಾ ಸಮರೋಪಕರಣಗಳ ಮೇಲೆ ರಾರಾಜಿಸುತ್ತಿವೆ.
ಅನಿಲ ಪೂರೈಕೆ ತಡೆ ಬೆದರಿಕೆ:ಯುರೋಪ್​ಗೆ ನಾರ್ಡ್ ಸ್ಟ್ರೀಮ್1 ಪೈಪ್​ಲೈನ್ ಮೂಲಕ ಪೂರೈಕೆ ಆಗುವ ನೈಸರ್ಗಿಕ ಅನಿಲವನ್ನು ತಡೆಯುವುದಾಗಿ ರಷ್ಯಾ ಬೆದರಿಕೆ ಹಾಕಿದೆ. ಯುರೋಪ್​ನ ಅನಿಲ ಮಾರುಕಟ್ಟೆಯಲ್ಲಿ ಇದು ಪರಿಣಾಮ ಬೀರಿದ್ದು, ಅನಿಲ ಬೆಲೆ ಶೇಕಡ 80 ಏರಿಕೆಯಾಗಿದೆ. ಯುರೋಪ್ ಮಾರುಕಟ್ಟೆ ನೈಸರ್ಗಿಕ ಅನಿಲಕ್ಕಾಗಿ ರಷ್ಯಾವನ್ನೇ ನೆಚ್ಚಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ನಾರ್ಡ್ ಸ್ಟ್ರೀಮ್2 ಯೋಜನೆಯಿಂದ ಜರ್ಮನಿ ಹಿಂದೆ ಸರಿಯುವುದಾಗಿ ಹೇಳಿತ್ತು.
11,000ಕ್ಕೂ ಹೆಚ್ಚು ರಷ್ಯನ್ನರ ಹತ್ಯೆ:ಯೂಕ್ರೇನ್ ಸೇನೆ ಹೇಳುವ ಪ್ರಕಾರ 12 ದಿನಗಳ ಸಂಘರ್ಷದಲ್ಲಿ 11,000ಕ್ಕೂ ಹೆಚ್ಚು ರಷ್ಯಾ ಯೋಧರನ್ನು ಹತ್ಯೆ ಮಾಡಲಾಗಿದೆ. ಆದರೆ, 500 ಯೋಧರು ಪ್ರಾಣ ಕಳೆದುಕೊಂಡಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಎರಡೂ ಕಡೆಯ ಪ್ರಾಣ ಹಾನಿ ಎಷ್ಟು ಎಂಬುದು ದೃಢಪಟ್ಟಿಲ್ಲ.
4,000 ರಷ್ಯಾ ಯೋಧರ ಸಾವು?:ಯೂಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ಸೇನೆಗೆ ತೀವ್ರ ಪ್ರತಿರೋಧ ಎದುರಾದ ಕಾರಣ ಪ್ರಾಣ ಹಾನಿ ಹೆಚ್ಚಾಗಿದೆ. ಒಂದು ಅಂದಾಜಿನ ಪ್ರಕಾರ, ಯೂಕ್ರೇನ್ ಜತೆಗಿನ ಸಮರದಲ್ಲಿ ರಷ್ಯಾ ತನ್ನ ಯೋಧರ ಪೈಕಿ 2000ದಿಂದ 4000ದಷ್ಟು ಯೋಧರನ್ನು ಕಳೆದುಕೊಂಡಿದೆ ಎಂದು ಅಮೆರಿಕದ ಪೆಂಟಗಾನ್ ಹೇಳಿದೆ.
ರಷ್ಯಾದ ತೈಲ ನಿಷೇಧಿಸಿದ ಅಮೆರಿಕ:ರಷ್ಯಾ ವಿರುದ್ಧ ಈಗಾಗಲೇ ಹಲವು ನಿರ್ಬಂಧಗಳನ್ನು ಹೇರಿರುವ ಅಮೆರಿಕ, ಈಗ ಅಲ್ಲಿಂದ ತೈಲ ಆಮದನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿದೆ. ರಷ್ಯಾ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಮನವಿ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ತೈಲ ಆಮದುನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿದೇಶಾಂಗಸ ಸಚಿವಾಲಯ ಮೂಲಗಳು ತಿಳಿಸಿವೆ. ರಷ್ಯಾದಿಂದ ಪ್ರತಿನಿತ್ಯ ಸರಾಸರಿ ಒಂದು ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಅಮೆರಿಕ ಖರೀದಿಸುತ್ತದೆ. ಅಮೆರಿಕದ ಒಟ್ಟು ತೈಲ ಆಮದಿನಲ್ಲಿ ರಷ್ಯಾದಿಂದ ಪೂರೈಕೆ ಆಗುವ ಪ್ರಮಾಣ ಶೇ. 8 ಮತ್ತು ಅಮೆರಿಕ ಖರೀದಿಸುವ ಕಚ್ಚಾ ತೈಲ ರಷ್ಯಾದ ಒಟ್ಟಾರೆ ತೈಲ ರಫ್ತಿನಲ್ಲಿ ಶೇ. 5ರಷ್ಟಾಗಿದೆ.
ಮಾತುಕತೆಗೆ ಸಿದ್ಧ ಎಂದ ಝೆಲೆನ್​ಸ್ಕಿ:ಒಂದೊಮ್ಮೆ ಜಗತ್ತು ಒಂದೆಡೆ ನಿಂತುಕೊಂಡರೆ ರಷ್ಯಾ ಎಂದೆಂದಿಗೂ ಕ್ರಿಮಿಯಾ ಮತ್ತು ಡಾನ್​ಬಾಸ್ ಅನ್ನು ಕಳೆದುಕೊಳ್ಳಬೇಕಾದೀತು. ಎಲ್ಲದಕ್ಕೂ ಮಿಗಿಲಾಗಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇದೆ. ಇದಕ್ಕಾಗಿಯೇ ನಾವು ಯೂಕ್ರೇನ್​ನಲ್ಲಿ ಹೋರಾಟ ನಡೆಸುತ್ತಿರುವುದು. ಜಗತ್ತು ಕೂಡ ಇದನ್ನು ರಕ್ಷಿಸಬೇಕು. ಕ್ರಿಮಿಯಾ ಮತ್ತು ಡಾನ್​ಬಾಸ್​ನ ಸ್ಟೇಟಸ್​ಗೆ ಸಂಬಂಧಿಸಿ ರಷ್ಯಾ ಜತೆಗೆ ಮಾತುಕತೆ ನಡೆಸುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹೇಳಿದರು.
ಪಾಶ್ಚಾತ್ಯ ರಾಷ್ಟ್ರಗಳ ಬಗ್ಗೆ ಅಸಮಾಧಾನ: ಯೂಕ್ರೇನ್​ನ ಪಟ್ಟಣಗಳನ್ನು ಬಾಂಬ್ ದಾಳಿಯಿಂದ ರಕ್ಷಿಸುವುದಕ್ಕೆ ನಿರ್ಣಯ ಕೈಗೊಳ್ಳದ ಪಾಶ್ಚಾತ್ಯ ರಾಷ್ಟ್ರಗಳ ವಿಳಂಬ ನೀತಿಯ ಬಗ್ಗೆ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮರ ಶುರುವಾಗಿ 13 ದಿನಗಳು ಕಳೆದಿವೆ. ಯೂಕ್ರೇನ್ ಪಟ್ಟಣಗಳನ್ನು ರಕ್ಷಿಸುವುದಕ್ಕೆ ಅಗತ್ಯವಾದ ನಿರ್ಣಯ ತೆಗೆದುಕೊಳ್ಳುವುದಕ್ಕೆ ಅನುಮೋದನೆ ನೀಡುವಲ್ಲಿ ಸಾಮರ್ಥ್ಯವಿದ್ದರೂ ಪಾಶ್ಚಾತ್ಯ ರಾಷ್ಟ್ರಗಳು ವಿಫಲವಾಗಿವೆ ಎಂದು ಝೆಲೆನ್​ಸ್ಕಿ ಟೀಕಿಸಿದ್ದಾರೆ.
ನಾಳೆ ಯೂಕ್ರೇನ್- ರಷ್ಯಾ ಮಾತುಕತೆ:ಟರ್ಕಿಯಲ್ಲಿ ಯೂಕ್ರೇನ್ ಮತ್ತು ರಷ್ಯಾದ ವಿದೇಶಾಂಗ ಸಚಿವರ ಮಟ್ಟದ ಸಭೆ ಮಾ.10ಕ್ಕೆ ನಡೆಯಲಿದೆ. ಇದು ನಾಲ್ಕನೇ ಸುತ್ತಿನ ಮಾತುಕತೆಯಾಗಿರಲಿದೆ. ಸೋಮವಾರ ನಡೆದ ಮೂರನೇ ಸುತ್ತಿನ ಮಾತುಕತೆಯಲ್ಲಿ ನಾಗರಿಕರ ಸುರಕ್ಷಿತ ಸ್ಥಳಾಂತರದ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಯಾವುದೇ ಗಟ್ಟಿ ಫಲಿತಾಂಶವಿಲ್ಲದೆ ಮಾತುಕತೆ ಕೊನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಯೂಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧ ಅಮೆರಿಕ, ಬ್ರಿಟನ್ ಮತ್ತು ಯುರೋಪ್ ಒಕ್ಕೂಟ ಈಗಾಗಲೇ ಆರ್ಥಿಕ ನಿರ್ಬಂಧ ವಿಧಿಸಿವೆ. ಈ ಕ್ರಮಗಳಲ್ಲಿ ರಫ್ತು ನಿರ್ಬಂಧ, ವ್ಯಾಪಾರ ನಿರ್ಬಂಧ, ಆಸ್ತಿ ಮುಟ್ಟುಗೋಲು ಮುಂತಾದವು ಸೇರಿವೆ. ಇದರಿಂದಾಗುವ ಪರಿಣಾಮ ಇತ್ಯಾದಿ ಕುರಿತು ಕಿರು ಅವಲೋಕನ ಇಲ್ಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
