ಮೇ 5ರಂದು ಬಿಡುಗಡೆಗೆ ಸಜ್ಜಾಗಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದ ಸುತ್ತ ರಾಜಕೀಯ ಸಮರ ಶುರುವಾಗಿದೆ. ಟ್ರೇಲರ್ ಬಿಡುಗಡೆಯೊಂದಿಗೆ ವಿವಾದ ಹುಟ್ಟುಹಾಕಿರುವ ಈ ಚಿತ್ರವನ್ನು ನಿಷೇಧಿಸುವಂತೆ ಕಾಂಗ್ರೆಸ್ ಹಾಗೂ ಅನೇಕ ರಾಜಕೀಯ ಸಂಘಟನೆಗಳು ಒತ್ತಾಯಿಸುತ್ತಿದ್ದರೆ, ಇದು ಲವ್ ಜಿಹಾದ್ ಕುರಿತ ನೈಜ ಘಟನೆ ಆಧಾರಿತ ಚಿತ್ರ ಎಂದು ಚಿತ್ರತಂಡ ಹೇಳಿದೆ.
‘ದಿ ಕೇರಳ ಸ್ಟೋರಿ’ ಚಿತ್ರದ ಟ್ರೇಲರ್ ಬಿಡುಗಡೆಯಾದ ತಕ್ಷಣವೇ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಈ ಚಲನಚಿತ್ರದ ಬಿಡುಗಡೆ ಮೇ 5ರಂದು ನಿಗದಿಯಾಗಿದೆ. ಚಿತ್ರದ ಟ್ರೇಲರನ್ನು ಏಪ್ರಿಲ್ 26ರಂದು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೇಲರ್ ಸುಳ್ಳುಗಳಿಂದ ತುಂಬಿದೆ ಮತ್ತು ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಚಿತ್ರಿಸಿರುವುದರಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಚಲನಚಿತ್ರದ ಪ್ರದರ್ಶನವನ್ನು ನಿಷೇಧಿಸಬೇಕು ಎಂಬುದು ಕಾಂಗ್ರೆಸ್ ಆಗ್ರಹ.
ಚಿತ್ರವು ಸುಳ್ಳಿನ ಕಂತೆಯಾಗಿದೆ. 32,000 ಮಹಿಳೆಯರನ್ನು ಮತಾಂತರಗೊಳಿಸಿ ಇಸ್ಲಾಮಿಕ್ ಸ್ಟೇಟ್ ಹಿಡಿತದಲ್ಲಿರುವ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಚಿತ್ರದ ಟ್ರೇಲರ್ ಸೂಚಿಸುತ್ತದೆ. ಇದು ರಾಜ್ಯ ಮತ್ತು ಸಮುದಾಯದ ಮಾನಹಾನಿ ಮಾಡುವ ಉದ್ದೇಶ ಹೊಂದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್) ಪರಿವಾರದ ಸಂಘಟನೆಗಳು ಇದರ ಹಿಂದೆ ಇವೆ ಎಂದು ಕಾಂಗ್ರೆಸ್ ನಾಯಕ ಮತ್ತು ಕೇರಳದ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಆರೋಪಿಸಿದ್ದಾರೆ. ಕೇರಳದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ಕೂಡ ಶುರುವಾಗಿವೆ. ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ರೀತಿಯಲ್ಲಿಯೇ ದುರುದ್ದೇಶಪೂರಿತ ವಿಚಾರವನ್ನು ಪ್ರತಿಪಾದಿಸುವ ತಾರತಮ್ಯವುಳ್ಳ ಹಾಗೂ ಹಾದಿತಪ್ಪಿಸುವ ಚಿತ್ರವಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಕೇರಳ ಯುವತಿ ಯರು ಐಸಿಸ್ ಸೇರಿದ ರಿಯಲ್ ಸ್ಟೋರಿಯನ್ನು ತೆರೆಯ ಮೇಲೆ ತಂದಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ಬಿಜೆಪಿ ಈ ವಿಷಯ ಮುಂದಿಟ್ಟುಕೊಂಡು ಲಾಭ ಪಡೆದುಕೊಳ್ಳಲು ಮುಂದಾಗಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿವೆ.
ಆಸ್ಮಾ, ಲಕ್ನೋ ಟೈಮ್ಸ್ ಮತ್ತು ದಿ ಲಾಸ್ಟ್ ಮಾಂಕ್​ನಂತಹ ಚಲನಚಿತ್ರಗಳ ಮೂಲಕ ಹೆಸರುವಾಸಿಯಾದ ಸುದೀಪ್ತೊ ಸೇನ್ ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ನಿರ್ವಪಕ ವಿಪುಲ್ ಅಮೃತ್ ಲಾಲ್ ಶಾ ಪ್ರಕಾರ, ಕೇರಳದಲ್ಲಿ ಅಂದಾಜು 32,000 ಮಹಿಳೆಯರು ಕಾಣೆಯಾಗುವುದರ ಹಿಂದಿನ ಘಟನೆಗಳನ್ನು ದಿ ಕೇರಳ ಸ್ಟೋರಿ ಬಹಿರಂಗಪಡಿಸುತ್ತದೆ. ಈ ಸಿನಿಮಾ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದ ಪೋಸ್ಟರ್​ನಲ್ಲಿ ಬುರ್ಖಾ ಧರಿಸಿದ ಮಹಿಳೆ ಇದ್ದು, ‘ಮರೆಮಾಡಿರುವ ಸತ್ಯವನ್ನು ಬಹಿರಂಗಪಡಿಸುವುದು’ ಎಂಬ ಅಡಿಬರಹವಿದೆ. ಅದಾ ಶರ್ಮಾ ನಾಯಕಿಯಾಗಿದ್ದು, ಮತಾಂತರಗೊಂಡ ಫಾತಿಮಾ ಬಾ ಪಾತ್ರದಲ್ಲಿ ನಟಿಸಿದ್ದಾರೆ. ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಅವರು ಇತರ ಮೂವರು ಮಹಿಳೆಯರ ಪಾತ್ರಗಳಲ್ಲಿ ನಟಿಸಿದ್ದಾರೆ.
ಲವ್ ಜಿಹಾದ್​ ಹಿಜಾಬ್ ಚರ್ಚೆ:ಮುಸ್ಲಿಂ ಪಾತ್ರಗಳು ಹಿಂದೂ ದೇವತೆಗಳ ವಿರುದ್ಧ ಮಾತನಾಡುವ ಸಂಭಾಷಣೆಗಳನ್ನು ಚಲನಚಿತ್ರ ಒಳಗೊಂಡಿದೆ. ಲವ್ ಜಿಹಾದ್ ಮತ್ತು ಹಿಜಾಬ್ ಚರ್ಚೆಯ ವಿಷಯಗಳೂ ಚಿತ್ರದಲ್ಲಿ ಗೋಚರಿಸುತ್ತವೆ. ಹಿಂದೂ ಮಹಿಳೆಯರನ್ನು ಗರ್ಭಧರಿಸುವ ಮೂಲಕ ಬಲೆಗೆ ಬೀಳಿಸಿಕೊಳ್ಳಿ ಎಂದು ಹೇಳುವುದನ್ನು ಚಲನಚಿತ್ರದ ಟ್ರೇಲರ್​ನಲ್ಲಿ ತೋರಿಸಲಾಗಿದೆ.
ಕೇರಳದ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ 32,000 ಮಹಿಳೆಯರ ಸುತ್ತ ಕಥೆ ಸುತ್ತುತ್ತದೆ. ಈ ಮಹಿಳೆಯರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಇರಾಕ್ ಮತ್ತು ಸಿರಿಯಾದ ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ) ಸೇರಿಕೊಳ್ಳುವ ಕಥಾ ಹಂದರ ಒಳಗೊಂಡಿದೆ.ಮಹಿಳೆಯರನ್ನು ಪ್ರೀತಿಯ ಹೆಸರಿನಲ್ಲಿ ಓಲೈಸಲು, ಅವರನ್ನು ಇಸ್ಲಾಂಗೆ ಮತಾಂತರಿಸಲು, ಐಸಿಸ್ ಮತ್ತು ಇತರ ಇಸ್ಲಾಮಿಕ್ ಯುದ್ಧ ವಲಯಗಳಿಗೆ ಕಳುಹಿಸಲು ಪುರುಷರು ಹೇಗೆ ಬ್ರೇನ್​ವಾಶ್ ಮಾಡಿದರು ಎಂಬುದನ್ನು ಚಿತ್ರಿಸಲಾಗಿದೆ. 2016 ಮತ್ತು 2018ರ ನಡುವೆ ಕೇರಳದ ನಾಲ್ವರು ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡು, ಐಸಿಎಸ್​ಗೆ ಸೇರಲು ಪತಿಯರೊಂದಿಗೆ ಅಫ್ಘಾನಿಸ್ತಾನಕ್ಕೆ ಪ್ರಯಾಣಿಸುವ ಘಟನೆಗಳನ್ನು ತೆರೆಯ ಮೇಲೆ ತರಲಾಗಿದೆ.
ಈ ಚಿತ್ರವು ಲವ್ ಜಿಹಾದ್ ಕಥೆಯಾಗಿದ್ದರಿಂದ ವಿವಾದಕ್ಕೆ ಒಳಗಾಗಿದೆ. ಹಲವು ರಾಜ್ಯಗಳು ಲವ್-ಜಿಹಾದ್ ವಿರೋಧಿ ಕಾಯ್ದೆ ತರಲು ಚಿಂತನೆ ನಡೆಸಿವೆ. ಕೇರಳ ಮತ್ತು ದೇಶದ ಇತರ ಭಾಗಗಳಲ್ಲಿ ಲವ್ ಜಿಹಾದ್ ಬಗ್ಗೆ ಅನೇಕ ದೂರುಗಳಿವೆ. ಅಮಾಯಕ ಹಿಂದೂ ಹುಡುಗಿಯರನ್ನು ಮತಾಂತರಗೊಳಿಸಿ ಇಸ್ಲಾಮಿಕ್ ಮೂಲಭೂತವಾದವನ್ನು ಹರಡಲು ಬಳಸಲಾಗುತ್ತಿದೆ. ಬಿಬಿಸಿಯು ಸಾಕ್ಷ್ಯಚಿತ್ರ ತೋರಿಸಿ, ಗುಜ ರಾತ್ ಕುರಿತಂತೆ ಸುಳ್ಳು ಹರಡಿದಾಗ, ದೇಶದ ಪ್ರಧಾನಿಯನ್ನು ದೂಷಿಸಿದಾಗ ಇವರು ಏನನ್ನೂ ಮಾತನಾಡುವುದಿಲ್ಲ. ಆದರೆ, ಕೇರಳದ ಕಥೆಗಾಗಿ ಬಿರುಗಾಳಿಯನ್ನೇ ಸೃಷ್ಟಿಸುತ್ತಾರೆ.
|ಎನ್. ರಾಮಚಂದರ್ ರಾವ್ಬಿಜೆಪಿ ನಾಯಕ
ನಾವು ಸಿನಿಮಾದಲ್ಲಿ ಯಾವುದನ್ನೂ ಸುಳ್ಳು ಹೇಳಿಲ್ಲ. ಎಲ್ಲದಕ್ಕೂ ನಮ್ಮ ಹತ್ತಿರ ಸಾಕ್ಷಿ ಇವೆ. ಇದು ಸತ್ಯದ ದರ್ಶನವಾಗಿದ್ದರಿಂದ ಸರ್ಕಾರ ನಿಷೇಧಿಸುವ ಯೋಚನೆ ಮಾಡಲಾರದು.
|ವಿಪುಲ್ ಶಾನಿರ್ಮಾಪಕ
ಕೇರಳವನ್ನು ಧಾರ್ವಿುಕ ಉಗ್ರವಾದದ ಕೇಂದ್ರಬಿಂದು ಎಂದು ಬಿಂಬಿಸಲು ಯತ್ನಿಸುತ್ತಿರುವ ಸಂಘ ಪರಿವಾರದ ಉದ್ದೇಶವನ್ನೇ ಈ ಸಿನಿಮಾ ಹೊಂದಿದೆ. ತನಿಖಾ ಸಂಸ್ಥೆಗಳು, ನ್ಯಾಯಾಲಯಗಳು, ಕೇಂದ್ರ ಗೃಹ ಸಚಿವಾಲಯಗಳೇ ತಿರಸ್ಕರಿಸಿರುವ ಲವ್ ಜಿಹಾದ್ ವಿಚಾರವನ್ನಿಟ್ಟುಕೊಂಡು ಈ ಸಿನಿಮಾ ಮೂಲಕ ಸುಳ್ಳು ಕಥೆ ಕಟ್ಟಲಾಗುತ್ತಿದೆ. ಕೇರಳದಲ್ಲಿ 32,000 ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡು ಐಸಿಸ್ ಸೇರಿದ್ದಾರೆ ಎಂಬ ದೊಡ್ಡ ಸುಳ್ಳನ್ನು ಚಿತ್ರದ ಟ್ರೇಲರ್​ನಲ್ಲಿ ನಾವು ನೋಡಿದ್ದೇವೆ. ಕೇರಳದ ಚುನಾವಣಾ ರಾಜಕೀಯದಲ್ಲಿ ಲಾಭ ಪಡೆಯಲು ಸಂಘ ಪರಿವಾರ ನಡೆಸುತ್ತಿರುವ ವಿವಿಧ ಪ್ರಯತ್ನಗಳ ಹಿನ್ನೆಲೆಯಲ್ಲಿ ಇದನ್ನು ನೋಡಬೇಕಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 1 =
Remember me
