ತಿರುವನಂತಪುರ:ಸಾಮಾಜಿಕ ಜಾಲತಾಣ ಅಥವಾ ಸೈಬರ್ ಮೂಲಕ ಅವಹೇಳನ, ಅವಮಾನ ಅಥವಾ ಬೆದರಿಕೆ ಹಾಕುವುದು ಇನ್ನು ಕೇರಳದಲ್ಲಿ ಶಿಕ್ಷಾರ್ಹ ಅಪರಾಧ. ತಪ್ಪಿತಸ್ಥರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು -ಠಿ; 10 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಇರುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅಂಕಿತ ಹಾಕಿದ್ದಾರೆ. ಎಲ್​ಡಿಎಫ್ ಸರ್ಕಾರದ ಈ ವಿವಾದಾತ್ಮಕ ತಿದ್ದುಪಡಿಗೆ ವಿರೋಧ ಪಕ್ಷಗಳು ಮತ್ತು ಕಾನೂನು ತಜ್ಞರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಈ ಸುಗ್ರೀವಾಜ್ಞೆ ಮೂಲಕ 2011ರ ಕೇರಳ ಪೊಲೀಸ್ ಕಾಯ್ದೆಗೆ 118(ಎ) ಸೆಕ್ಷನ್​ಗೆ ತಿದ್ದುಪಡಿ ತರಲಾಗಿದೆ. ಇದರ ಅನ್ವಯ ಯಾವುದೇ ಮಾಧ್ಯಮದ ಮೂಲಕ ಅಭಿವ್ಯಕ್ತಿಸುವ ಅಥವಾ ರವಾನೆ ಮಾಡುವ ಮಾಹಿತಿ ಇನ್ನೊಬ್ಬರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಗೆ ಧಕ್ಕೆ ತರುವಂತಿದ್ದರೆ ಅಥವಾ ಬೆದರಿಕೆ ಒಡ್ಡುವಂತಿದ್ದರೆ ಅದು ಅಪರಾಧವಾಗುತ್ತದೆ. ಈ ಕಾನೂನಿನ ಅಡಿ ನೀಡುವ ದೂರಿನ ಅನ್ವಯ ಅಥವಾ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬಹುದಾಗಿದೆ. ರಾಜ್ಯಪಾಲರ ಅಂಕಿತ ಪಡೆದಿದ್ದರೂ ಆರು ತಿಂಗಳ ಒಳಗೆ ಈ ತಿದ್ದುಪಡಿಗೆ ವಿಧಾನಮಂಡಲದ ಅಧಿವೇಶನದಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ.
ಈ ವಿವಾದಾತ್ಮಕ ಸುಗ್ರೀವಾಜ್ಞೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟ ಕಳೆದ ತಿಂಗಳು ಅನುಮೋದನೆ ನೀಡಿತ್ತು. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುವ ದ್ವೇಷ ಪ್ರಚೋದಿಸುವ ಪೋಸ್ಟ್​ಗಳ ವಿರುದ್ಧ ಕ್ರಮ ಅಗತ್ಯವೆಂಬ ಕೇರಳ ಹೈಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಸರ್ಕಾರ ಈ ಸುಗ್ರೀವಾಜ್ಞೆಯನ್ನು ರೂಪಿಸಿದೆ. ರಾಜ್ಯ ಪೊಲೀಸ್ ಕಾಯ್ದೆಯ 118(ಡಿ) ಮತ್ತು ಕೇಂದ್ರದ ಐಟಿ ಕಾಯ್ದೆಯ 66(ಎ) ಸೆಕ್ಷನ್​ಗಳನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರ ಜಾಗಕ್ಕೆ ಬೇರೆ ಕಾನೂನು ರೂಪಿತವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಘಟಿಸುವ ಅಪರಾಧ ವಿಶೇಷವಾಗಿ ಮಕ್ಕಳು, ಮಹಿಳೆಯರು, ತೃತೀಯ ಲಿಂಗಿಗಳ ವಿರುದ್ಧ ನಡೆಯುವ ದೌರ್ಜನ್ಯ ಕುರಿತು ಪೊಲೀಸರು ಪರಿಣಾಮಕಾರಿಯಾಗಿ ಕ್ರಮ ಜರುಗಿಸಲು ಆಗುತ್ತಿಲ್ಲ. ಆದ್ದರಿಂದ ಈ 118(ಎ) ಸೆಕ್ಷನ್​ಗೆ ತಿದ್ದುಪಡಿ ತರಲಾಗಿದೆ ಎಂದು ಸರ್ಕಾರ ಸುಗ್ರೀವಾಜ್ಞೆಯನ್ನು ಸಮರ್ಥಿಸಿಕೊಂಡಿದೆ.
ಪ್ರಕರಣ ದಾಖಲಿಸಲು ಮಾರ್ಗಸೂಚಿ
ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದರ ಜತೆಗೆ ನಾಗರಿಕರ ಘನತೆಯನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಇನ್ನೊಬ್ಬರ ಖಾಸಗಿ ವಿಷಯದಲ್ಲಿ ಮೂಗು ತೂರಿಸುವುದೇ ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ. ಈ ಮಧ್ಯೆ, ಹೊಸ ತಿದ್ದುಪಡಿಯಡಿಯಲ್ಲಿ ಪ್ರಕರಣ ದಾಖಲಿಸುವಾಗ ಎಸ್​ಒಪಿ ಅನುಸರಿಸಲಾಗುವುದು. ಇದರಿಂದ ಕಾನೂನು ದುರುಪಯೋಗವಾಗುವುದನ್ನು ತಡೆಯಬಹುದಾಗಿದೆ ಎಂದು ಕೇರಳ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ ಹೇಳಿದ್ದಾರೆ.
ಮುಖ್ಯಮಂತ್ರಿ ವಿಜಯನ್ ಸ್ಪಷ್ಟನೆ
ಪೊಲೀಸ್ ಕಾಯ್ದೆಯ ತಿದ್ದುಪಡಿಯು ವಾಕ್ ಸ್ವಾತಂತ್ರ್ಯವನ್ನು ಮೊಟಕು ಮಾಡುವುದಿಲ್ಲ ಮತ್ತು ಇದು ಮಾಧ್ಯಮಗಳಿಗೆ ತಡೆ ಒಡ್ಡುವುದಿಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ಸ್ಪಷ್ಟನೆ ನೀಡಿದ್ದಾರೆ. ಈ ಸುಗ್ರೀವಾಜ್ಞೆಯು ನಾಗರಿಕರ ಅದರಲ್ಲೂ ಮಹಿಳೆಯರ ಸ್ವಾತಂತ್ರ್ಯ ಮತ್ತು ಘನತೆಯನ್ನು ಎತ್ತಿಹಿಡಿಯಲು ರೂಪಿಸಿದ್ದಾಗಿದೆ. ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವ ಮಾಧ್ಯಮ ಅಥವಾ ಟೀಕಾಕಾರನ್ನು ಹತ್ತಿಕ್ಕುವ ಉದ್ದೇಶ ಹೊಂದಿಲ್ಲ. ವೈಯಕ್ತಿಕ ಇಷ್ಟಾನಿಷ್ಟ, ರಾಜಕೀಯ ಅಥವಾ ರಾಜಕೀಯೇತರ ಒಲವು-ನಿಲುವು, ಕೌಟಿಂಬಿಕ ವಿಷಯಗಳು ಪತ್ರಿಕೋದ್ಯಮದ ವ್ಯಾಪ್ತಿಗೂ ಮೀರಿದ್ದಾಗಿದೆ. ಸಾಮಾಜಿಕ ಜಾಲತಾಣಗಳು ವಿಶೇಷವಾಗಿ ಆನ್​ಲೈನ್ ಚಾನಲ್​ಗಳ ವಿರುದ್ಧ ಅವಹೇಳನ, ಮಾನಹಾನಿಯ ಮಾಡಿದ ಬಗ್ಗೆ ಪದೇ ಪದೆ ದೂರುಗಳು ಬರುತ್ತಿದ್ದ ಕಾರಣ ಈ ತಿದ್ದುಪಡಿ ಮಾಡಬೇಕಾಯಿತು ಎಂದು ಸರ್ಕಾರದ ಕ್ರಮವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ದಮನಕಾರಿ ಕಾನೂನುಇದು ಸರ್ವಾಧಿಕಾರಿ ಧೋರಣೆಯ ಸುಗ್ರೀವಾಜ್ಞೆ ಎಂದು ಕೇರಳದ ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಮಾಧ್ಯಮದ ಮೇಲೆ ಬಲಪ್ರಯೋಗ ಮಾಡಲಾಗುತ್ತಿದೆ ಎಂದು ಆರೋಪಿಸಿವೆ. ಇದು ಸರ್ಕಾರದ ದಮನಕಾರಿ ನೀತಿಗೆ ಒದಗಿರುವ ಸಾಧನ ಎಂದು ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಟೀಕಿಸಿದ್ದಾರೆ. 118(ಎ) ಸೆಕ್ಷನ್ ಮೂಲಕ ನಾಗರಿಕರ ಹಕ್ಕು ರಕ್ಷಣೆ ಆಗುತ್ತದೆ ಎಂದು ಸರ್ಕಾರ ಭಾವಿಸಿದೆ. ಆದರೆ, ಈ ಕಾನೂನು ಸರ್ಕಾರ, ವ್ಯವಸ್ಥೆ ಅಥವಾ ಪ್ರಭಾವಿಗಳನ್ನು ಟೀಕಿಸುವವರ ವಿರುದ್ಧ ಝುಳಪಿಸುವ ಸಾಧನವಾಗಿ ದುರುಪಯೋಗವಾಗುತ್ತದೆ. ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗುವೆ ಎಂದು ವಕೀಲ ಅನೂಪ್ ಕುಮಾರನ್ ಹೇಳಿದ್ದಾರೆ. 2015ರಲ್ಲಿ ಇದೇ ಕಾಯ್ದೆಯ 118(ಡಿ) ಸೆಕ್ಷನ್ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಹೋರಾಡಿ ಅನೂಪ್ ಜಯಗಳಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
