ನವದೆಹಲಿ:ದೇಶದಲ್ಲಿ ಪ್ರತಿದಿನ ವರದಿಯಾಗುತ್ತಿರುವ ಕರೊನಾ ಪ್ರಕರಣದ ಸಂಖ್ಯೆ 6 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಶನಿವಾರ 18,575 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣ 1,01,88,392ಕ್ಕೆ ಏರಿಕೆಯಾಗಿದೆೆ. ಕಳೆದ ಜುಲೈ 1ರಂದು 18,653 ಪ್ರಕರಣ ವರದಿಯಾಗಿದ್ದವು. ದೆಹಲಿಯಲ್ಲಿ ಶನಿವಾರ 655 ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ನಾಲ್ಕು ತಿಂಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ. ಮೃತರ ಸಂಖ್ಯೆ ಗಣನೀಯ ಇಳಿಕೆ ಕಂಡಿದ್ದು, 280 ಹೊಸ ಸಾವುಗಳೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 1.47 ಲಕ್ಷಕ್ಕೆ ಏರಿಕೆಯಾಗಿದೆ. ಜತೆಗೆ ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2.77 ಲಕ್ಷಕ್ಕೆ ಇಳಿಕೆಯಾಗಿದ್ದು, ಇದು 170 ದಿನಗಳ ನಂತರದ ಕನಿಷ್ಠ ಪ್ರಮಾಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈವರೆಗೆ 97.60 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ.  ಆಕ್ಸ್​ಫರ್ಡ್ ವಿವಿ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಲಸಿಕೆ ರೂಪಾಂತರಿ ಕರೊನಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿರಬಹುದು ಎಂದು ಬ್ರಿಟನ್​ನ ವರದಿಯೊಂದು ತಿಳಿಸಿದೆ. ಯುರೋಪ್​ನ ಹಲವು ರಾಷ್ಟ್ರಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಭಾನುವಾರದಿಂದ ಪ್ರಾರಂಭವಾಗಿದೆ.
ವಿಶ್ವಾದ್ಯಂತ 8 ಕೋಟಿ ಪ್ರಕರಣ:ಜಾಗತಿಕವಾಗಿ ಕರೊನಾ ಆರ್ಭಟ ಮುಂದುವರಿದಿದ್ದು, ವಿಶ್ವಾದ್ಯಂತ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 8 ಕೋಟಿ ಗಡಿ ದಾಟಿದೆ. ಶನಿವಾರ 4.51 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, 7 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಸಂಖ್ಯೆ 17.64 ಲಕ್ಷಕ್ಕೆ ಏರಿಕೆಯಾಗಿದೆ. 5.69 ಕೋಟಿ ಸೋಂಕಿತರು ಗುಣಮುಖರಾಗಿದ್ದು, 2.20 ಕೋಟಿ ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 1.05 ಲಕ್ಷ ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ವಿಶ್ವದ ಹಲವು ರಾಷ್ಟ್ರಗಳಿಗೆ ಹಬ್ಬಿದೆ ರೂಪಾಂತರಿ ವೈರಸ್ಸಂಚಾರ ನಿರ್ಬಂಧ, ಕ್ವಾರಂಟೈನ್ ಸೇರಿದಂತೆ ಹಲವು ನಿರ್ಬಂಧಗಳ ಘೋಷಣೆಯ ಹೊರತಾಗಿಯೂ ಬ್ರಿಟನ್​ನಲ್ಲಿ ಪತ್ತೆಯಾದ ರೂಪಾಂತರಿ ಕರೊನಾ ವೈರಸ್ ಐರೋಪ್ಯ ದೇಶಗಳು ಸೇರಿ ವಿಶ್ವಾದ್ಯಂತ ಹಬ್ಬಿದೆ ಎನ್ನಲಾಗಿದೆ. ಕೆನಡಾ, ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್, ಡೆನ್ಮಾರ್ಕ್, ಸ್ಪೇನ್, ಸ್ವೀಡನ್, ನೆದರ್ಲೆಂಡ್, ಜರ್ಮನಿ, ಇಟಲಿ ಮತ್ತು ಲೆಬನಾನ್ ಸೇರಿ ಹತ್ತಾರು ದೇಶಗಳಲ್ಲಿ ರೂಪಾಂತರಿ ಸೋಂಕು ಪ್ರಕರಣಗಳು ವರದಿಯಾಗಿವೆ. ಅಮೆರಿಕದಲ್ಲಿ ರೂಪಾಂತರಿ ವೈರಸ್​ನ ಒಂದು ಪ್ರಕರಣವೂ ಈವರೆಗೆ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಲಸಿಕೆ ಉತ್ಪಾದನೆಯಲ್ಲಿ ಭಾರತ ಮಹತ್ವದ ಪಾತ್ರಹಲವು ರಾಷ್ಟ್ರಗಳಲ್ಲಿ ಈಗಾಗಲೇ ಲಸಿಕೆಗಳ ತುರ್ತು ಬಳಕೆ ಪ್ರಾರಂಭವಾಗಿದ್ದು, ಮುಂದಿನ ವರ್ಷ ಬೃಹತ್ ವ್ಯಾಕ್ಸಿನೇಷನ್ ಪ್ರಕ್ರಿಯೆಗಳೂ ನಡೆಯಲಿವೆ. ಹೀಗಾಗಿ ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆ ಉತ್ಪಾದಕತೆ ಸಾಮರ್ಥ್ಯ ಹೊಂದಿರುವ ಭಾರತದೆಡೆಗೆ ವಿಶ್ವದ ಕಣ್ಣು ನೆಟ್ಟಿದೆ. ಜಗತ್ತಿನ ಒಟ್ಟು ಲಸಿಕೆ ಉತ್ಪಾದನೆಯಲ್ಲಿ ಶೇಕಡ 60ರಷ್ಟು ಪಾಲನ್ನು ಭಾರತವೊಂದೇ ಹೊಂದಿರುವುದು ಇದಕ್ಕೆ ಕಾರಣ. ಆಸ್ಟ್ರಾಜೆನೆಕಾ ಸಂಸ್ಥೆ ಪುಣೆಯ ಸೆರಂ ಇನ್​ಸ್ಟಿಟ್ಯೂಟ್ ಜತೆ ಒಪ್ಪಂದ ಮಾಡಿಕೊಂಡಿದೆ. ಹೈದರಾಬಾದ್​ನ ಭಾರತ್ ಬಯೋಟೆಕ್, ಬಯೋಲಾಜಿಕಲ್ ಇ ಲಿಮಿಟೆಡ್ ಮತ್ತು ಅರಬಿಂದೋ ಫಾರ್ವ ಲಸಿಕೆ ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ. ಡಾ.ರೆಡ್ಡಿ ಮತ್ತು ಹೆಟೆರೊ ಸಂಸ್ಥೆಗಳು ಲಸಿಕೆ ಉತ್ಪಾದನೆಗಾಗಿ ವಿವಿಧ ಫಾರ್ವಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಹೀಗಾಗಿ ಹೈದರಾಬಾದ್ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆಯ ಪ್ರಮುಖ ತಾಣವಾಗಿ ಮಾರ್ಪಾಡಾಗುತ್ತಿದೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಕೂಡ ಬೃಹತ್ ಪ್ರಮಾಣದಲ್ಲಿ ಲಸಿಕೆ ಸಂಗ್ರಹಿಸಿ ಸರಬರಾಜು ಮಾಡಲು ಕೋಲ್ಡ್ ಸ್ಟೋರೇಜ್ ಸೌಲಭ್ಯ ನಿರ್ವಿುಸಲಾಗಿದೆ.
ಕರೊನಾ ಬಿಕ್ಕಟ್ಟು ಕೊನೆಯ ಸಾಂಕ್ರಾಮಿಕ ರೋಗವಲ್ಲ. ಭವಿಷ್ಯದಲ್ಲಿ ಎದುರಾಗ ಬಹುದಾದ ಇಂಥ ಸವಾಲುಗಳನ್ನು ಎದುರಿಸಲು ನಾವು ಮುಂಜಾಗ್ರತಾ ಕ್ರಮ ವಹಿಸಿಲ್ಲ. ಕರೊನಾದಿಂದ ನಾವು ಪಾಠ ಕಲಿಯಬೇಕು. ಜಗತ್ತು ಭೀತಿ ಮತ್ತು ನಿರ್ಲಕ್ಷ್ಯದ ಚಕ್ರದಲ್ಲಿ ಕಾರ್ಯನಿರ್ವಹಿಸುವುದನ್ನು ತಪ್ಪಿಸಬೇಕು. ಮುಂದಿನ ಸವಾಲನ್ನು ತಡೆಯಲು ನಾವು ಸಕಲ ರೀತಿಯಲ್ಲೂ ಸಜ್ಜಾಗಬೇಕು| ಟೆಡ್ರೊಸ್ ಅಧಾನಮ್ ಘಬ್ರೆಯೆಸಸ್ಡಬ್ಲ್ಯುಎಚ್​ಒ ಮಹಾನಿರ್ದೇಶಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 10 =
Remember me
