ನವದೆಹಲಿ:ದೇಶದಲ್ಲಿ ಕಳೆದೊಂದು ತಿಂಗಳಿನಿಂದ ತೀವ್ರ ಸ್ವರೂಪಕ್ಕೆ ತಿರುಗಿರುವ ಕರೊನಾ ಮಹಾಮಾರಿ ದಿನೇ ದಿನೆ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಶನಿವಾರ ಒಂದೇ ದಿನ 20,134 ಹೊಸ ಪ್ರಕರಣಗಳು ವರದಿಯಾಗಿದ್ದು, ಇವು ಈವರೆಗೆ ಪ್ರತಿದಿನ ವರದಿಯಾದ ಅತೀ ಗರಿಷ್ಠ ಪ್ರಕರಣಗಳಾಗಿವೆ.
ಜೂನ್ 10 ರಿಂದ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದದಿಯಾಗುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ 15 ಸಾವಿರಕ್ಕೂ ಹೆಚ್ಚು ಕೇಸ್​ಗಳು ಬೆಳಕಿಗೆ ಬಂದಿವೆ. ಜೂ.1 ರಿಂದ ಈವರೆಗೆ ಬರೋಬ್ಬರಿ 3.38 ಲಕ್ಷ ಹೊಸ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ಒಂದು ತಿಂಗಳ ಅಂತರದಲ್ಲಿ ಸೋಂಕಿತರ ಪ್ರಮಾಣ 5 ಲಕ್ಷಕ್ಕಿಂತ ಅಧಿಕವಾಗಿದೆ. ಮಹಾರಾಷ್ಟ್ರವೊಂದರಲ್ಲೇ 6 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಸೋಂಕಿತರ ಸಂಖ್ಯೆ 1.59 ಲಕ್ಷಕ್ಕೇರಿದೆ. ಜತೆಗೆ ದೇಶದಲ್ಲಿ ಕರೊನಾಗೆ ಬಲಿಯಾಗುವವರ ಪ್ರಮಾಣವೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಶನಿವಾರ 414 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 16 ಸಾವಿರದ ಗಡಿ ದಾಟಿದೆ. ಕಳೆದ ಕೆಲ ದಿನಗಳಿಂದ ಪ್ರತಿದಿನ 400ಕ್ಕೂ ಅಧಿಕ ಮಂದಿ ಅಸುನೀಗುತ್ತಿದ್ದಾರೆ. ಜಾಗತಿಕವಾಗಿ ಕರೊನಾ ಅಟ್ಟಹಾಸಕ್ಕೆ ನಲುಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಮೃತರ ಸಂಖ್ಯೆಯಲ್ಲಿ 8ನೇ ಸ್ಥಾನದಲ್ಲಿದೆ.
ಜಾಗತಿಕವಾಗಿಯೂ ಕರೊನಾ ಪ್ರಕರಣಗಳು ವೇಗವಾಗಿ ಏರಿಕೆಯಾಗುತ್ತಿವೆ. ಶನಿವಾರ 1.76 ಲಕ್ಷ ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇವು ಈವರೆಗೆ ವಿಶ್ವಾದ್ಯಂತ ಒಂದೇ ದಿನದಲ್ಲಿ ದಾಖಲಾದ ಅತೀ ಹೆಚ್ಚು ಪ್ರಕರಣಗಳಾಗಿವೆ. ಅಮೆರಿಕದಲ್ಲಿ 43 ಸಾವಿರ, ಬ್ರೆಜಿಲ್​ನಲ್ಲಿ 35 ಸಾವಿರ ಹೊಸ ಪ್ರಕರಣಗಳು ವರದಿಯಾಗಿವೆ. ಅಮೆರಿಕದಲ್ಲಿ ಈವರೆಗೆ 25 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದು, ಬ್ರೆಜಿಲ್​ನಲ್ಲಿ 13 ಲಕ್ಷ ಪ್ರಕರಣಗಳು ವರದಿಯಾಗಿವೆ.
ಸಕ್ರಿಯ-ಗುಣಮುಖರ ಮಧ್ಯೆ 1 ಲಕ್ಷ ಅಂತರ:ದೇಶದಲ್ಲಿರುವ ಸಕ್ರಿಯ ಪ್ರಕರಣಗಳು ಹಾಗೂ ಗುಣಮುಖರ ಸಂಖ್ಯೆಯ ನಡುವಿನ ಅಂತರ ಈಗ 1 ಲಕ್ಷಕ್ಕೂ ಅಧಿಕವಾಗಿದೆ. ಸದ್ಯ 2.03 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಗುಣಮುಖರ ಸಂಖ್ಯೆ 3.11 ಲಕ್ಷಕ್ಕೆ ಏರಿಕೆಯಾಗಿದೆ. ಗುಣಮುಖರ ಪ್ರಮಾಣ ಶೇ. 50 ಕ್ಕಿಂತ ಅಧಿಕವಾಗಿರುವ ಹಿನ್ನೆಲೆ ಹೊಸದಾಗಿ ಹಚ್ಚು ಸೋಂಕು ಪ್ರಕರಣಗಳು ವರದಿಯಾದರೂ ಸಕ್ರಿಯ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಲಾಕ್​ಡೌನ್ ಮುಂದುವರಿಕೆ:ಕರೊನಾ ಪಸರಿಸುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಲಾಕ್​ಡೌನ್ ಮುಂದುವರೆಯಲಿದೆ. ಜೂ.30 ರಂದು ಲಾಕ್​ಡೌನ್ ಮುಕ್ತಾಯಗೊಳಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಕರೊನಾ ಹೆಚ್ಚುತ್ತಿರುವ ಹಿನ್ನೆಲೆ ಜಾಗರೂಕವಾಗಿ ಹಂತ ಹಂತವಾಗಿ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದರ ಜತೆಗೆ ಮುಂಬೈನಲ್ಲಿ ಕರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸರು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ದಿನಸಿ ಖರೀದಿ, ಸಲೂನ್ ಹಾಗೂ ಇನ್ನಿತರ ಚಟುವಟಿಕೆಗಳಿಗೆ ತೆರಳುವವರು ತಮ್ಮ ಮನೆಯಿಂದ 2 ಕಿ.ಮೀ ಅಂತರದ ಒಳಗೆ ಮಾತ್ರ ಪ್ರಯಾಣಿಸಬೇಕು ಎಂದು ತಿಳಿಸಿದ್ದಾರೆ.
8 ರಾಜ್ಯಗಳಲ್ಲಿ ಶೇ. 85 ಸಕ್ರಿಯ ಪ್ರಕರಣ:ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಸೇರಿ ಒಟ್ಟು 8 ರಾಜ್ಯಗಳಲ್ಲಿ ದೇಶದ ಶೇ. 85.5 ಸಕ್ರಿಯ ಪ್ರಕರಣಗಳಿವೆ. ಜತೆಗೆ ಈ ರಾಜ್ಯಗಳಲ್ಲೇ ಶೇ. 87 ಸಾವುಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರ, ದಹೆಲಿ, ತಮಿಳು ನಾಡು, ಗುಜರಾತ್, ತೆಲಂಗಾಣ, ಉತ್ತರಪ್ರದೇಶ, ಆಂಧ್ರಪ್ರದೇಶ ಹಾಗೂ ಪಶ್ಚಮ ಬಂಗಾಳದಲ್ಲಿ ಸದ್ಯ ಶೇ. 85 ಸಕ್ರಿಯ ಪ್ರಕರಣಗಳಿವೆ. ಕೆಲಸಕ್ಕೆ ಮರಳುತ್ತಿರುವ ವಲಸಿಗ ಕಾರ್ವಿುಕರು
ಕರೊನಾ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಳೆದುಕೊಂಡು ತಮ್ಮ ಊರುಗಳಿಗೆ ಹಿಂದಿರು ಗಿದ್ದ ವಲಸಿಗ ಕಾರ್ವಿುಕರು ಮರಳಿ ಕೆಲಸ ಅರಸಿ ತೆರಳುತ್ತಿದ್ದಾರೆ. ವಿವಿಧ ರಾಜ್ಯಗಳಿಂದ ಉತ್ತರಪ್ರದೇಶಕ್ಕೆ ಹಿಂದಿರುಗಿದ್ದ ಸುಮಾರು 30 ಲಕ್ಷಕ್ಕೂ ಅಧಿಕ ವಲಸಿಗರು ಜೀವನೋಪಾಯಕ್ಕಾಗಿ ಮತ್ತೆ ಊರು ಬಿಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರ, ಗುಜರಾತ್ ಸೇರಿ ದೇಶದ ವಿವಿಧ ರಾಜ್ಯಗಳಿಗೆ ಉತ್ತರಪ್ರದೇಶದಿಂದ ಸಂಪರ್ಕ ಕಲ್ಪಿಸುವ ಗೋರಖ್​ಪುರ್ ರೈಲ್ವೆ ನಿಲ್ದಾಣದಿಂದ ಸಾವಿರಾರು ಕಾರ್ವಿುಕರು ಪ್ರಯಾಣಿಸುತ್ತಿದ್ದಾರೆ. ಕೆಲವರು ಈ ಹಿಂದಿನ ಉದ್ಯೋಗಗಳಿಗೆ ಮರಳುತ್ತಿದ್ದು, ಇನ್ನೂ ಕೆಲಸವರು ಹೊಸ ಉದ್ಯೋಗಗಳನ್ನು ಹುಡುಕಿಕೊಂಡು ಮನೆ ಬಿಟ್ಟಿದ್ದಾರೆ.
ಟ್ರಂಪ್​ಗಿಲ್ಲ ಜನರ ಕಾಳಜಿ!ಜೂ. 20ರಂದು ತಲ್ಸಾದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್​ಗಾಗಿ ಆಯೋಜಿಸಲಾಗಿದ್ದ ರ್ಯಾಲಿಯೊಂದರಲ್ಲಿ ಜನರಿಗೆ ದೈಹಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸೂಚನೆ ನೀಡಲು ಹಾಕಿದ್ದ ಸ್ಟಿಕರ್​ಗಳನ್ನು ಕಾರ್ಯಕ್ರಮ ಆಯೋಜಕರೇ ತೆಗೆಸಿಹಾಕಿದ್ದರು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. 19 ಸಾವಿರ ಆಸನ ವ್ಯವಸ್ಥೆ ಇದ್ದ ಅರೆನಾದಲ್ಲಿ ದೈಹಿಕ ಅಂತರ ಕಾಪಾಡುವ ಸಂದೇಶವಿರುವ 12 ಸಾವಿರ ಸ್ಟಿಕರ್​ಗಳನ್ನು ಅಂಟಿಸಿದ್ದರು. ಆದರೆ ಇದರಿಂದ ಟ್ರಂಪ್ ಕಾರ್ಯಕ್ರಮಕ್ಕೆ ಜನರ ಕೊರತೆಯಾಗುತ್ತದೆ ಎಂದು ಕಾರ್ಯಕ್ರಮ ಆಯೋಜಕರು ಸ್ಟಿಕ್ಕರ್​ಗಳನ್ನೆಲ್ಲ ತೆಗೆಸಿಹಾಕಿ ಗುಂಪು ಗುಂಪಾಗಿ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಿದ್ದರು ಎಂದು ತಿಳಿದುಬಂದಿದೆ.
79.96 ಲಕ್ಷ ಮಾದರಿಗಳ ಪರೀಕ್ಷೆ:ದೇಶದಲ್ಲಿ ಕಳೆದ 24 ತಾಸಿನಲ್ಲಿ 2.20 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ ಒಟ್ಟು 79.96 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಸರ್ಕಾರದ 741 ಲ್ಯಾಬ್​ಗಳು ಸೇರಿ ದೇಶದಲ್ಲಿ ಸದ್ಯ 1,026 ಲ್ಯಾಬ್​ಗಳು ಕರೊನಾ ಪರೀಕ್ಷೆ ನಡೆಸುತ್ತಿವೆ. 1.039 ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
