ನವದೆಹಲಿ:ಕರೊನಾ ಪ್ರಸರಣ ಪ್ರಮಾಣ ಭಾರತದಲ್ಲಿ ಇಳಿಮುಖವಾಗುತ್ತಿದ್ದರೂ, ಸೋಂಕಿತರ ಸಂಖ್ಯೆ ಬುಧವಾರ 80 ಲಕ್ಷ ದಾಟಿದೆ. ಅಕ್ಟೋಬರ್ 10ರಂದು 70 ಲಕ್ಷ ದಾಟಿದ್ದ ಸೋಂಕಿತರ ಸಂಖ್ಯೆ18 ದಿನಗಳಲ್ಲಿ 10 ಲಕ್ಷ ಏರಿಕೆಯಾಗಿದೆ. ಈ ಹಿಂದೆ 13 ದಿನಗಳಲ್ಲಿ 10 ಲಕ್ಷ ಪ್ರಕರಣ ಪತ್ತೆಯಾಗಿತ್ತು. ಸೆಪ್ಟೆಂಬರ್ 4ರಿಂದ 15ರವರೆಗೆ ಕೇವಲ 11ದಿನಗಳಲ್ಲಿ 10 ಲಕ್ಷ ಪ್ರಕರಣ ವರದಿಯಾಗಿತ್ತು.
ದೇಶದಲ್ಲಿ ಮಂಗಳವಾರ 44 ಸಾವಿರ ಹೊಸ ಪ್ರಕರಣ ಬೆಳಕಿಗೆ ಬಂದಿದೆ. 508 ಜನರು ಮೃತರಾಗಿದ್ದು, ಮೃತರ ಸಂಖ್ಯೆ 1.2 ಲಕ್ಷ ದಾಟಿದೆ. 72.6 ಲಕ್ಷದಷ್ಟು ಜನರು ಈಗಾಗಲೇ ಗುಣಮುಖರಾಗಿದ್ದು, 6.10 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯಿವೆ. ಚೇತರಿಕೆ ಪ್ರಮಾಣ ಶೇ. 91ಕ್ಕೆ ಏರಿಕೆಯಾಗಿದೆ. ಒಂದೇ ದಿನ 10.7 ಲಕ್ಷ ಜನರಿಗೆ ಕರೊನಾ ಪರೀಕ್ಷೆ ಮಾಡಲಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ. 4.1 ವರದಿಯಾಗಿದೆ. ಕೇರಳ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಯಲ್ಲಿ ಹೆಚ್ಚು ಸೋಂಕಿತರ ಸಂಖ್ಯೆ ವರದಿಯಾಗುತ್ತಿದೆ. ಹೊಸ ಪ್ರಕರಣಗಳಲ್ಲಿ ಶೇ. 53 ಪಾಲನ್ನು ಈ ಐದು ರಾಜ್ಯಗಳು ಹೊಂದಿವೆ. ಜಾಗತಿಕವಾಗಿ ಸೋಂಕಿನಿಂದಾಗಿ 10 ಲಕ್ಷಕ್ಕೆ 148 ಜನರು ಸಾವನ್ನಪು್ಪತ್ತಿದ್ದಾರೆ. ಆದರೆ ಭಾರತದಲ್ಲಿ ಆ ಸಂಖ್ಯೆ 87ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಯುರೋಪಿನ ಹಲವು ದೇಶಗಳಲ್ಲಿ ಕರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್​ಡೌನ್ ಚಿಂತನೆ ನಡೆಸಲಾಗುತ್ತಿದೆ. ಜರ್ಮನ್ ಮತ್ತು ಫ್ರಾನ್ಸ್​ನಲ್ಲಿ ಲಾಕ್​ಡೌನ್ ಜಾರಿ ಮಾಡುವುದಾಗಿ ಸರ್ಕಾರ ತಿಳಿಸಿದೆ. ಈಗಾಗಲೇ ಕೆಲ ರಾಷ್ಟ್ರಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ.
ಕರೊನಾ ಸೋಂಕಿನಿಂದ ಮಿದುಳಿಗೆ ಸಮಸ್ಯೆ ಉಂಟಾಗುತ್ತದೆ ಎಂದು ಅಮೆರಿಕದ ವಿಜ್ಞಾನಿಗಳು ತಿಳಿಸಿದ್ದಾರೆ. ಅಧ್ಯಯನದ ಭಾಗವಾಗಿ ಸಾವಿರಾರು ಸೋಂಕಿತರ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ಮೂರನೇ ಒಂದು ಸೋಂಕಿತರಲ್ಲಿ ಮಿದುಳಿನ ಮುಂಭಾಗದ ಹಾಲೆಯಲ್ಲಿ ಅಸಹಜತೆ ಕಂಡುಬಂದಿದೆ. ಇದರಿಂದಾಗಿ ಸೋಂಕಿತರಿಗೆ ಹೆಚ್ಚಿನ ನಿದ್ರೆ, ನಿದ್ರೆಯಿಂದ ಏಳಲಾಗದಿರುವುದು, ಗೊಂದಲ, ಮಾತಿನ ಸಮಸ್ಯೆ ಸೇರಿ ಅನೇಕ ತೊಂದರೆ ಉಂಟಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಕುರಿತಾಗಿ ಯುರೋಪಿಯನ್ ಜರ್ನಲ್ ಆಫ್ ಎಪಿಲೆಪ್ಸಿಯಲ್ಲಿ ಲೇಖನ ಪ್ರಕಟವಾಗಿದೆ.
ಕರೊನಾ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಹೇರಲಾಗಿರುವ ನಿರ್ಬಂಧವನ್ನು ನವೆಂಬರ್ 30ರವರಗೆ ವಿಸ್ತರಿಸಿರುವುದಾಗಿ ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಸಂಚರಿಸುವ ವಿಮಾನಗಳು, ಸರಕು ಸಾಗಣೆ ವಿಮಾನಗಳು ಮತ್ತು ವಿಶೇಷ ಏರ್ ಬಬಲ್​ನಲ್ಲಿ ಸಂಚರಿಸುವ ವಿಮಾನಗಳಿಗೆ ಈ ನಿರ್ಬಂಧವಿರುವುದಿಲ್ಲ.
ಹೆಚ್ಚು ನೈರ್ಮಲ್ಯ ಕಾಪಾಡಿಕೊಳ್ಳದ, ಕಡಿಮೆ ನೀರಿನ ಸರಬರಾಜು ಹೊಂದಿರುವ ರಾಷ್ಟ್ರಗಳಲ್ಲಿ ಕರೊನಾ ಸೋಂಕಿನಿಂದಾಗಿ ಮೃತರಾಗಿರುವವರ ಸಂಖ್ಯೆ ಕಡಿಮೆಯಿದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಭಾರತದ ನ್ಯಾಷನಲ್ ಸೆಂಟರ್ ಫಾರ್ ಸೆಲ್ ಸೈನ್ಸಸ್ (ಎನ್​ಸಿಸಿಎಸ್) ಮತ್ತು ಚೆನ್ನೈನ ಗಣಿತ ಸಂಸ್ಥೆಯ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. 106 ದೇಶಗಳಲ್ಲಿನ ಕರೊನಾ ಮರಣ ಪ್ರಮಾಣವನ್ನು ಅಧ್ಯಯನ ನಡೆಸಲಾಗಿದೆ. ಅದರ ಪ್ರಕಾರ ಹೆಚ್ಚು ನೈರ್ಮಲ್ಯ ಕಾಪಾಡಿಕೊಳ್ಳದ ರಾಷ್ಟ್ರಗಳಲ್ಲಿ ಮರಣ ಪ್ರಮಾಣ ಕಡಿಮೆಯಿದೆ. ಹಾಗೆಯೇ ಹೆಚ್ಚು ಜಿಡಿಪಿ ಹೊಂದಿರುವ ರಾಷ್ಟ್ರಗಳಲ್ಲಿ ಮರಣ ಪ್ರಮಾಣ ಹೆಚ್ಚಾಗಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.
ಕರೊನಾ ಔಷಧವನ್ನು 2020ರ ಡಿಸೆಂಬರ್ ವೇಳೆಗೆ ನಿರೀಕ್ಷಿಸಬಹುದು ಎಂದು ಪುಣೆಯ ಸೆರಂ ಇನ್​ಸ್ಟಿಟ್ಯೂಟ್​ನ ನಿರ್ದೇಶಕ ಆದರ್ ಪೂನಾವಾಲಾ ತಿಳಿಸಿದ್ದಾರೆ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಕರೊನಾ ಔಷಧವನ್ನು ಸೆರಂ ಇನ್​ಸ್ಟಿಟ್ಯೂಟ್ ತಯಾರಿಸುತ್ತದೆ. ಈಗಾಗಲೇ ಔಷಧ ಮೊದಲ ಎರಡು ಹಂತದ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು, ಬ್ರಿಟನ್​ನಲ್ಲಿ ಮೂರನೇ ಹಂತದ ಪ್ರಯೋಗ ನಡೆಸಲಾಗುತ್ತಿದೆ. ಅಲ್ಲಿನ ಪ್ರಯೋಗದ ವರದಿ ಮತ್ತು ಭಾರತೀಯ ಔಷಧ ನಿಯಂತ್ರಣ ಮಂಡಳಿ ಅನುಮತಿ ಬಳಿಕ ಔಷಧ ಬಿಡುಗಡೆ ಆಗಲಿದೆ. ಡಿಸೆಂಬರ್​ನಲ್ಲಿ ಔಷಧ ಸಿದ್ಧವಾದರೆ ಜನವರಿಯಲ್ಲಿ ಭಾರತೀಯ ಮಾರುಕಟ್ಟೆಗೆ ಬರಬಹುದು. 2021ರ ಮೂರನೇ ತ್ರೖೆಮಾಸಿಕದೊಳಗೆ ಒಂದು ಕೋಟಿ ಡೋಸೇಜ್ ಔಷಧ ಬಿಡುಗಡೆ ಮಾಡುವ ಗುರಿಯಿದೆ ಎಂದು ಅವರು ಹೇಳಿದ್ದಾರೆ.
ಕರೊನಾ ಸೋಂಕು ಮೊದಲು ಪತ್ತೆಯಾಗಿದ್ದ ಚೀನಾದಲ್ಲಿ ಮಂಗಳವಾರ 42 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಾಶ್ಗಾರ್​ನಲ್ಲಿ 22 ಪ್ರಕರಣಗಳು ದೃಢವಾಗಿವೆ. ಇಲ್ಲಿನ ಕಾರ್ಖಾನೆಯೊಂದರಲ್ಲಿ ಸೋಂಕು ಹಬ್ಬಿದ ಹಿನ್ನೆಲೆಯಲ್ಲಿ ಪೂರ್ತಿ ನಗರವನ್ನೇ ಪರೀಕ್ಷೆಗೆ ಒಳಪಡಿಸಲಾಗಿದೆ. 47.4 ಲಕ್ಷ ಜನರಲ್ಲಿ ಸೋಮವಾರ 183 ಜನರಿಗೆ ಸೋಂಕು ದೃಢವಾಗಿದ್ದು, ಮಂಗಳವಾರ 22 ಜನರಿಗೆ ದೃಢವಾಗಿದೆ. ಇದರಲ್ಲಿ ಬಹುತೇಕರಿಗೆ ರೋಗಲಕ್ಷಣಗಳಿಲ್ಲ. ದೇಶದಲ್ಲಿ ಪ್ರಸ್ತುತ 298 ಸಕ್ರಿಯ ಪ್ರಕರಣಗಳಿದ್ದರೆ, 580 ರೋಗಲಕ್ಷಣ ರಹಿತ ಪ್ರಕರಣಗಳು ನಿಗಾದಲ್ಲಿವೆ ಎಂದು ತಿಳಿಸಲಾಗಿದೆ.
2021ರ ಆರಂಭದಲ್ಲೇ ರಾಜ್ಯಕ್ಕೆ ಸಿಗಲಿದೆ ಕೋವಿಡ್ ಲಸಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
