
ನವದೆಹಲಿ: ದೇಶದಲ್ಲಿ 3.29 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಒಟ್ಟು ಸಂಖ್ಯೆ 2.29 ಕೋಟಿ ದಾಟಿದೆ. 3,876 ಮಂದಿ ಮೃತರಾಗಿ ಸಾವಿನ ಸಂಖ್ಯೆ 2,49,992ಕ್ಕೆ ಏರಿದೆ. ಹಲವು ದಿನಗಳ ಕಾಲ ಸತತವಾಗಿ ನಾಲ್ಕು ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈಗ ನಿತ್ಯದ ಪ್ರಕರಣದಲ್ಲಿ ಸುಮಾರು ಒಂದು ಲಕ್ಷದಷ್ಟು ಇಳಿಕೆ ಕಂಡಿರುವುದು ತುಸು ನೆಮ್ಮದಿ ತಂದಿದೆ. ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು 51.38 ಲಕ್ಷ ಸೋಂಕಿತರಿದ್ದಾರೆ. ಆದರೆ ಮುಂಬೈಯಲ್ಲಿ ನಿತ್ಯದ ಸಂಖ್ಯೆಯಲ್ಲಿ ಭಾರಿ ಕುಸಿತ ದಾಖಲಾಗಿದೆ. ಮುಂಬೈನಲ್ಲಿ ಈಗ 1,794 ಕೋವಿಡ್-19 ಕೇಸ್ ಪತ್ತೆಯಾಗಿದ್ದು ಎರಡು ತಿಂಗಳಲ್ಲಿ ಅತಿ ಕಡಿಮೆ ದೈನಿಕ ಸಂಖ್ಯೆಯಾಗಿದೆ. ಕರ್ನಾಟಕ, ಕೇರಳ, ಉತ್ತರ ಪ್ರದೇಶ, ತಮಿಳುನಾಡು ಮತ್ತು ದೆಹಲಿ ಹೆಚ್ಚು ಸೋಂಕಿತರಿರುವ ಇತರ ರಾಜ್ಯಗಳು.
ಹೆಚ್ಚು ಚೇತರಿಕೆ: ಸೋಂಕಿತರ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 30,016 ಕೇಸ್​ಗಳು ಕಡಿಮೆಯಾಗಿದ್ದು 61 ದಿನಗಳಲ್ಲಿ ಇದೇ ಮೊದಲ ಬಾರಿಗೆ ಈ ಇಳಿಕೆ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಹೊಸ ಕೇಸ್​ಗಳಿಗಿಂತ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ.
ಮಹಾರಾಷ್ಟ್ರದಲ್ಲಿ ನಿತ್ಯದ ಕೇಸ್ ಕುಸಿತ: ಎರಡನೇ ಅಲೆಯ ವೇಳೆ ಮಾರ್ಚ್ 31ರ ನಂತರ ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ನಿತ್ಯದ ಕರೊನಾ ಪ್ರಕರಣಗಳ ಸಂಖ್ಯೆ 40,000ಕ್ಕಿಂತ ಕಡಿಮೆಯಾಗಿದೆ. ಸೋಮವಾರ 37,236 ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 51,38,973ಕ್ಕೆ ಏರಿದೆ. 76,398 ಜನರುಬಲಿಯಾಗಿದ್ದಾರೆ. ಮಹಾರಾಷ್ಟ್ರ 6 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು 36,000 ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಹೆಚ್ಚುವರಿಯಾಗಿ ಪಡೆದಿದೆ.
ತಂತ್ರಜ್ಞರಿಗೆ ಮೋದಿ ಸೆಲ್ಯೂಟ್: ರಾಷ್ಟ್ರೀಯ ತಂತ್ರಜ್ಞಾನ ದಿನವಾದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ದೇಶದ ತಂತ್ರಜ್ಞರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿಯೊಂದು ಸವಾಲಿನ ಸನ್ನಿವೇಶದಲ್ಲಿ ದೇಶದ ವಿಜ್ಞಾನಿಗಳು ಮತ್ತು ಸಂಶೋಧಕರು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದ ಅವರು, ಕೋವಿಡ್ ದಾಳಿಯ ವಿರುದ್ಧ ಶ್ರಮವರಿಯದೆ ದುಡಿದಿದ್ದಾರೆ ಎಂದು ಶ್ಲಾಘಿಸಿದರು. 1988ರಲ್ಲಿ ರಾಜಸ್ಥಾನದ ಪೋಖರಣ್​ನಲ್ಲಿ ಭೂಗತ ಪರಮಾಣು ಪರೀಕ್ಷೆ ನಡೆಸಿದ್ದರ ಸ್ಮರಣೆಗಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.
ನದಿಗೆ ಶವ ಎಸೆಯುವ ಆಂಬುಲೆನ್ಸ್​ಗಳು!: ಬಿಹಾರದ ಬಕ್ಸಾರ್ ಜಿಲ್ಲೆಯ ಗಂಗಾ ನದಿಯಲ್ಲಿ ತೇಲಿ ಬಂದ 71 ಶವಗಳನ್ನು ಇದುವರೆಗೆ ಮೇಲೆತ್ತಲಾಗಿದೆ. ಇದಲ್ಲದೆ, ಬಕ್ಸಾರ್​ನಿಂದ 55 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಕೂಡ ಗಂಗಾ ನದಿಯಲ್ಲಿ ಮಂಗಳವಾರ ಶವಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆಂಬುಲೆನ್ಸ್ ಚಾಲಕರು ಸೇತುವೆಯ ಕೆಳಗೆ ಶವಗಳನ್ನು ಎಸೆಯುತ್ತಿರುವ ವಿಡಿಯೊ ದೃಶ್ಯಾವಳಿ ವೈರಲ್ ಆಗಿದ್ದು, ಜನರಲ್ಲಿ ಆಘಾತ ಮೂಡಿಸಿದೆ. ಕೋವಿಡ್​ಗೆ ಬಲಿಯಾದವರು ಹಾಗೂ ಅವರ ಕುಟುಂಬ ಸದಸ್ಯರತ್ತ ತೋರುತ್ತಿರುವ ಈ ಅಮಾನವೀಯ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಿಹಾರ ಮತ್ತು ಉತ್ತರ ಪ್ರದೇಶ ಗಡಿಯಲ್ಲಿರುವ ಸೇತುವೆ ಕೆಳಗೆ ಶವಗಳನ್ನು ಎಸೆದಿರುವ ಈ ಪ್ರಕರಣ ಕರೊನಾ ಮಹಾಮಾರಿಯ ನಡುವೆ ಒಂದು ಮಾನವ ದುರಂತವಾಗಿದೆ. ಕೋವಿಡ್-19 ಸಾಂಕ್ರಾಮಿಕತೆ ಉತ್ತರ ಭಾರತದ ಗ್ರಾಮೀಣ ಭಾಗಗಳಲ್ಲಿ ಬಹು ವೇಗವಾಗಿ ಹಬ್ಬುತ್ತಿದೆ. ನೀರು ಕಲುಷಿತವಾಗಿ ಸೋಂಕು ಇನ್ನಷ್ಟು ಹರಡುವ ಇನ್ನೊಂದು ಅಪಾಯ ಎದುರಾಗಿದೆ.
ಸೆರಂ ಮನವಿ ತಿರಸ್ಕಾರ: ಬ್ರಿಟನ್​ಗೆ 50 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ರಫ್ತು ಮಾಡಲು ಅನುಮತಿ ನೀಡಬೇಕೆಂಬ ಭಾರತ ಸೆರಂ ಸಂಸ್ಥೆಯ ಮನವಿಯನ್ನು ಭಾರತ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದೆ. ದೇಶದಲ್ಲಿ ಸೋಂಕು ಉಲ್ಬಣಿಸುತ್ತಿದ್ದು ಲಸಿಕೆ ಅಭಾವವೂ ತಲೆದೋರಿದೆ. ಹೀಗಾಗಿ ಸೆರಂ ಕೋರಿಕೆ ತಿರಸ್ಕಾರಗೊಂಡಿದೆ.
ಗೋವಾ ಆಸ್ಪತ್ರೆಯಲ್ಲಿ 26 ಸೋಂಕಿತರ ಸಾವು: ವೈದ್ಯಕೀಯ ಆಮ್ಲಜನಕ ಅಭಾವದಿಂದ ಕರೊನಾ ರೋಗಿ ಗಳು ಮೃತಪಡುತ್ತಿರುವ ಪ್ರಕರಣಗಳು ದೇಶದ ಹಲವು ಭಾಗಗಳಲ್ಲಿ ಮುಂದುವರಿದಿದೆ. ಗೋವಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ವೈದ್ಯಕೀಯ ಆಮ್ಲಜನಕದ ಕೊರತೆಯಿಂದ 20 ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಂಗಳವಾರ ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೈ ಕೋರ್ಟ್ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ. ಮುಂಜಾನೆ 2ರಿಂದ 6 ಗಂಟೆ ನಡುವೆ ಈ ಸಾವುಗಳು ಸಂಭವಿಸಿವೆ ಎಂದು ರಾಣೆ ಹೇಳಿದ್ದಾರೆ. ಆಮ್ಲಜನಕದ ಕೊರತೆ ಸಾವಿಗೆ ಕಾರಣವಾಗಿರಬಹುದೆಂಬ ಶಂಕೆಯಿದೆ ಎಂದು ಜಿಎಂಸಿಎಚ್​ಗೆ ಭೇಟಿ ನೀಡಿದ್ದ ಗೋವಾ ಸಿಎಂ ಪ್ರಮೋದ್ ಸಾವಂತ್ ಅಭಿಪ್ರಾಯ ಪಟ್ಟಿದ್ದಾರೆ. ಏತನ್ಮಧ್ಯೆ, ದಕ್ಷಿಣ ಗೋವಾ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಆಮ್ಲಜನಕ ಟ್ಯಾಂಕರ್​ನಲ್ಲಿ ಸೋರಿಕೆ ಕಂಡು ಬಂದು ಗಾಬರಿ ಸೃಷ್ಟಿಯಾಗಿತ್ತು. ಪ್ರದೇಶದಲ್ಲಿ ಬಿಳಿ ಹೊಗೆ ಆವರಿಸಿದ್ದು ವಿಡಿಯೊ ದೃಶ್ಯಗಳಲ್ಲಿ ದಾಖಲಾಗಿದೆ. ಆಂಧ್ರ ಪ್ರದೇಶದ ತಿರುಪತಿಯ ರುಯಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ 11 ಕರೊನಾ ರೋಗಿಗಳು ಮೃತಪಟ್ಟಿದ್ದಾರೆ.
10 ದಿನ ತೆಲಂಗಾಣ ಲಾಕ್: ಸೋಂಕು ನಿಯಂತ್ರಿಸಲು ತೆಲಂಗಾಣ ರಾಜ್ಯದಾದ್ಯಂತ ಬುಧವಾರದಿಂದ ಹತ್ತು ದಿನ ಲಾಕ್​ಡೌನ್ ಘೋಷಿಸಲಾಗಿದೆ. ಉತ್ತರಾಖಂಡದಲ್ಲಿ ಮೇ 18ರ ವರೆಗೆ ಕರೊನಾ ಕರ್ಫ್ಯೂ ಹೇರಲಾಗಿದೆ. ಕೇರಳದಲ್ಲಿ ಮೇ 16, ಕರ್ನಾಟಕ ಹಾಗೂ ತಮಿಳು ನಾಡಿನಲ್ಲಿ ಮೇ 24ರ ವರೆಗೆ ಲಾಕ್​ಡೌನ್ ಜಾರಿಯಲ್ಲಿದೆ.
ಒಂದೇ ಬಾರಿಗೆ 6 ಡೋಸ್ ಲಸಿಕೆ!: ಇಟಲಿಯ ಟುಸ್ಕನಿ ಎಂಬಲ್ಲಿ ಆಸ್ಪತ್ರೆಯೊಂದರಲ್ಲಿ ಸಿಬ್ಬಂದಿಯ ಕಣ್ಪಪ್ಪಿನಿಂದ 23 ವರ್ಷದ ಮಹಿಳೆಗೆ ಒಂದೇ ಬಾರಿಗೆ ಆರು ಡೋಸ್ ಫೈಜರ್ ಬಯೋಎನ್​ಟೆಕ್ ಲಸಿಕೆ ಹಾಕಲಾಗಿದೆ. ಆದರೆ ಅದೃಷ್ಟವಶಾತ್, ಯಾವುದೇ ಅಡ್ಡ ಪರಿಣಾಮ ಕಾಣಿಸದಿದ್ದರಿಂದ ಮಹಿಳೆಯನ್ನು ಮನೆಗೆ ಕಳಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಉಚಿತ ಚಿಕಿತ್ಸೆ: ಕರೊನಾ ಬಳಿಕ ಕಾಣಿಸಿಕೊಳ್ಳುವ ಕಪು್ಪ ಶಿಲೀಂಧ್ರ ಸೋಂಕು ಎಂದು ಕರೆಯಲಾಗುವ ಮ್ಯುಕೊರ್​ವೆುೖಕೊಸಿಸ್​ನಿಂದ ಬಳಲುವವರಿಗೆ ಉಚಿತವಾಗಿ ಚಿಕಿತ್ಸೆ ಒದಗಿಸುವುದಾಗಿ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಪ್ರಕಟಿಸಿದ್ದಾರೆ. ಅದರ ಔಷಧ ಅಂಫೋಟೆರಿಸಿನ್ ಬಿ ಬೆಲೆಯನ್ನು ನಿಗದಿ ಪಡಿಸಲಾಗುವುದೆಂದೂ ಟೋಪೆ ಮಂಗಳವಾರ ಹೇಳಿದ್ದಾರೆ. ಅಂಫೋಟೆರಿಸಿನ್​ನ ಒಂದು ವಯಲ್ ಬೆಲೆ 5,000ದಿಂದ 8,000 ರೂಪಾಯಿ ಆಗುತ್ತದೆ. ಈ ಔಷಧವನ್ನು 4ರಿಂದ 8 ವಾರ ಸೇವಿಸಬೇಕಾಗುತ್ತದೆ.

ವ್ಯಾಕ್ಸಿನ್ ಇಡೀ ದೇಶಕ್ಕೆ ಸೇರಿದ್ದು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಮಂಗಳವಾರ ಪತ್ರವೊಂದನ್ನು ಬರೆದಿದ್ದು ಕರೊನಾ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಋಣಾತ್ಮಕ ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್​ನ ಹಲವು ಟೀಕೆಗಳಿಗೆ ಕಟು ಪ್ರತ್ಯುತ್ತರ ನೀಡಿರುವ ನಡ್ಡಾ, ‘ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆ ಇಡೀ ಭಾರತಕ್ಕೆ ಸೇರಿದ್ದಾಗಿದೆ’ ಎಂದಿದ್ದಾರೆ. ಕೋವಿಡ್-ವಿರೋಧಿ ಹೋರಾಟವನ್ನು ದುರ್ಬಲಗೊಳಿಸದಂತೆ ಕೋರಿದ್ದಾರೆ.
ಗುಜರಾತ್​ನಲ್ಲಿ ಬ್ಲಾ್ಯಕ್ ಫಂಗಸ್ ಕಾಟ: ಕರೊನಾ ನಂತರ ಅಥವಾ ಕರೊನಾ ಜೊತೆಯೇ ಇರುವ ಶಿಲೀಂಧ್ರ ಸೋಂಕಾದ ಮ್ಯುಕೊರ್​ವೆುೖಕೊಸಿಸ್ ಪ್ರಕರಣ ಗುಜರಾತ್​ನಲ್ಲಿ ಕಳವಳಕಾರಿ ಪ್ರಮಾಣದಲ್ಲಿ ಪತ್ತೆಯಾಗುತ್ತಿವೆ. ಇದು ಈಗಾಗಲೇ ಕೋವಿಡ್-19 ಚಿಕಿತ್ಸೆಗೆ ಔಷಧ ಹಾಗೂ ವೈದ್ಯರ ಅಲಭ್ಯತೆಯಿಂದ ಪರದಾಡುತ್ತಿರುವ ರೋಗಿಗಳ ಸಂಕಷ್ಟವನ್ನು ದುಪ್ಪಟ್ಟುಗೊಳಿಸಿದೆ. ಕರೊನಾ ಪ್ರಕರಣಗಳಲ್ಲಿ ಅತೀವ ಏರಿಕೆ, ಸ್ಟಿರಾಯಿಡ್, ಬಿಐಪಿಎಪಿ ಬಳಕೆ ಮತ್ತು ಆಮ್ಲಜನಕದ ಅಧಿಕ ಹರಿವಿನ ಕಾರಣ ಮ್ಯುಕೊರ್​ವೆುೖಕೊಸಿಸ್ ಕೇಸ್​ಗಳು ಹೆಚ್ಚಾಗುತ್ತಿವೆ ಎಂದು ನಂಬಲಾಗಿದೆ. ಅಹಮದಾಬಾದ್, ರಾಜ್​ಕೋಟ್, ವಡೋದರ, ಸೂರತ್ ಮತ್ತು ಜಾಮ್ಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ 400ಕ್ಕೂ ಅಧಿಕ ಜನರು ಮ್ಯುಕೊರ್​ವೆುೖಕೊಸಿಸ್​ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೇಲುವ ಆಂಬುಲೆನ್ಸ್: ಜಮ್ಮು- ಕಾಶ್ಮೀರದಲ್ಲಿ ಕರೊನಾ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ತೇಲುವ ಆಂಬುಲೆನ್ಸ್ ಜನರಿಗೆ ಸೇವೆ ಸಲ್ಲಿಸುತ್ತಿದೆ. ಶ್ರೀನಗರದ ನಿವಾಸಿ ತಾರಿಕ್ ಅಹಮದ್ ಪತ್ಲೂ ಇದರ ರೂವಾರಿ. ಬೋಟ್​ನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಲಾಗಿದೆ. ಇದರಲ್ಲಿ ಪಿಪಿಇ ಕಿಟ್, ಸ್ಟ್ರೆಚರ್ ಮತ್ತು ಗಾಲಿಕುರ್ಚಿ ಇನ್ನಿತರ ವ್ಯವಸ್ಥೆ ಇದೆ.
ಅತ್ಯಧಿಕ ಲಸಿಕೆ ಹಾಕಿದ ದೇಶದಲ್ಲೇ ಉಲ್ಬಣ: ದೇಶದ ಜನಸಂಖ್ಯೆಯ ಬಹುತೇಕ ಜನರಿಗೆ ಕರೊನಾ ಲಸಿಕೆ ಹಾಕಿದ ಜಗತ್ತಿನ ಮೊದಲ ದೇಶವೆಂಬ ಹೆಗ್ಗಳಿಕೆಯ ಸಿಷಲ್ಸ್​ನಲ್ಲಿ ಕೋವಿಡ್-19 ಸೋಂಕು ದುಪ್ಪಟ್ಟು ಗೊಳ್ಳುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಇದು ಲಸಿಕೆಯ ವೈಫಲ್ಯವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ, ವ್ಯಾಪಕ ಅಧ್ಯಯನ ನಡೆಸದೆ ಹಾಗೆಂದು ನಿರ್ಧರಿಸಲಾಗದು ಎಂದು ಡಬ್ಲ್ಯುಎಚ್​ಒ ಹೇಳಿದೆ. ಪರಿಸ್ಥಿತಿಯ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಹೇಳಿದೆ.
ಅಮೆರಿಕದಲ್ಲಿ ಮಕ್ಕಳಿಗೂ ಲಸಿಕೆ: 12ರಿಂದ 15 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಫೈಜರ್ ಲಸಿಕೆ ನೀಡಲು ಅಮೆರಿಕದ ಔಷಧ ನಿಯಂತ್ರಕರು ಅನುಮೋದನೆ ಕೊಟ್ಟಿದ್ದಾರೆ.
ಸೋಂಕಿತರ ಮಾಹಿತಿಗೆ ಬಹುಮಾನ ಘೋಷಣೆ!: ಕೋವಿಡ್ ಪಾಸಿಟಿವ್ ರೋಗಿಗಳ ಬಗ್ಗೆ ಮಾಹಿತಿ ಒದಗಿಸುವವರಿಗೆ ಬಹುಮಾನ ಕೊಡುವುದಾಗಿ ಮಧ್ಯ ಪ್ರದೇಶ ಸರ್ಕಾರ ಘೋಷಿಸಿದೆ. ನಗರ ಮತ್ತು ಪಟ್ಟಣಗಳ ನಂತರ ಕರೊನಾ ಹೆಮ್ಮಾರಿ ಇದೀಗ ಗ್ರಾಮೀಣ ಭಾಗಗಳಿಗೂ ದಾಂಗುಡಿಯಿಟ್ಟಿದ್ದು ಜನರಲ್ಲಿ ಜಾಗೃತಿ ಮೂಡಿಸುವುದು ಅಧಿಕಾರಿಗಳಿಗೆ ಕಷ್ಟದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ, ಮಧ್ಯ ಪ್ರದೇಶ ಸರ್ಕಾರ ಬಹುಮಾನ ಯೋಜನೆ ರೂಪಿಸಿದೆ.
ಡಬ್ಲ್ಯುಎಚ್​ಒ ಎಚ್ಚರಿಕೆ
ಪ್ಯಾರಾಸೈಟಿಕ್ (ಪರಾವಲಂಬಿ) ಸೋಂಕುಗಳ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಐವರ್​ವೆುಕ್ಟಿನ್ ಔಷಧವನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ಬಳಸದಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಮಂಗಳವಾರ ಎಚ್ಚರಿಕೆ ನೀಡಿದೆ. ಇದು ಎರಡು ತಿಂಗಳಲ್ಲಿ ಈ ರೀತಿಯ ಎರಡನೇ ಎಚ್ಚರಿಕೆಯಾಗಿದೆ. ಭಾರತದಲ್ಲಿ ಐವರ್​ವೆುಕ್ಟಿನ್​ನ ವ್ಯಾಪಕ ಬಳಕೆಯಿದೆ. ಯಾವುದೇ ಹೊಸ ವ್ಯಾಧಿಗೆ ಔಷಧ ಬಳಸುವಾಗ ಸುರಕ್ಷತೆ ಮತ್ತು ದಕ್ಷತೆ ತುಂಬಾ ಮಹತ್ವದ್ದಾಗುತ್ತದೆ. ಕ್ಲಿನಿಕಲ್ ಟ್ರಯಲ್​ಗಳ ಹೊರತಾಗಿ ಬೇರೆ ಸಂದರ್ಭಗಳಲ್ಲಿ ಐವರ್​ವೆುಕ್ಟಿನ್ ಬಳಸದಂತೆ ಡಬ್ಲ್ಯುಎಚ್​ಒ ಶಿಫಾರಸು ಮಾಡುತ್ತದೆ ಎಂದು ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಟ್ವೀಟ್ ಮಾಡಿದ್ದಾರೆ.ಸತತ ಎರಡನೇ ವರ್ಷವೂ ಪ್ರವಾಸೋದ್ಯಮ ಕ್ಷೇತ್ರವನ್ನು ಕರೊನಾ ಕಂಗೆಡಿಸುವುದು ಖಚಿತವಾಗಿದೆ. ಮುಂಗಡವಾಗಿ ಕಾದಿರಿಸಿದ ಎಲ್ಲ ಟಿಕೆಟ್​ಗಳು ಹಾಗೂ ಕೊಠಡಿಗಳನ್ನು ಪ್ರವಾಸಿಗಳು ರದ್ದು ಮಾಡುತ್ತಿರುವುದರಿಂದ ಪ್ರವಾಸೋದ್ಯಮಕ್ಕೆ ಅಪಾಯ ಎದುರಾಗಿದೆ.
ಅಸ್ಟ್ರಾಜೆನಿಕಾ ಪರಿಣಾಮಕಾರಿ: ಆಕ್ಸ್​ಫರ್ಡ್-ಅಸ್ಟ್ರಾಜೆನಿಕಾದ ಲಸಿಕೆಯ (ಭಾರತದಲ್ಲಿ ಕೋವಿಶೀಲ್ಡ್) ಒಂದು ಡೋಸ್​ನಿಂದ ಕೋವಿಡ್-19 ರೋಗಿಗಳಲ್ಲಿ ಸಾವು ಸಂಭವಿಸುವ ಸಾಧ್ಯತೆ ಶೇಕಡ 80 ತಗ್ಗುತ್ತದೆ ಎಂದು ‘ಪಬ್ಲಿಕ್ ಹೆಲ್ತ್ ಇಂಗ್ಲೆಂಡ್’ ಅಭಿಪ್ರಾಯ ಪಟ್ಟಿದೆ. ಫೈಜರ್-ಬಯೋಎನ್​ಟೆಕ್​ನ ಲಸಿಕೆಯ ಮೊದಲ ಡೋಸ್ ಬಳಸಿದವರಲ್ಲಿ ಸಾವಿನ ಸಂಭಾವ್ಯತೆ ಶೇ. 80 ರಷ್ಟು ಹಾಗೂ ಎರಡು ಡೋಸ್ ಪಡೆದ ನಂತರ ಶೇ. 97 ಕಡಿಮೆಯಾಗುತ್ತದೆ ಎಂದೂ ಹೊಸ ಅಧ್ಯಯನ ವರದಿ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
