ನವದೆಹಲಿ: ಕರೊನಾ ವೈರಸ್​ನ ಕಬಂಧಬಾಹು ದೇಶಾದ್ಯಂತ ವ್ಯಾಪಿಸಿರುವ ನಡುವೆಯೇ ದೆಹಲಿಯ ಹಜರತ್ ನಿಜಾಮುದ್ದಿನ್ ದರ್ಗಾ ಪಕ್ಕದ ತಬ್ಲಿಘಿ ಜಮಾತ್​ನ ಪ್ರವಚನ ಸಭೆಯೇ ಕರೊನಾ ವೈರಸ್ ಹರಡುವಿಕೆಯ ಅತಿ ದೊಡ್ಡ ಕೇಂದ್ರಬಿಂದುವಾಗಿದೆ. ಈ ಸಭೆಯಲ್ಲಿ ಕರ್ನಾಟಕದ ಸುಮಾರು 300ಕ್ಕೂ ಅಧಿಕ ಜನರು ಭಾಗಿಯಾಗಿದ್ದು, ಇದೇ ಸಭೆಯಲ್ಲಿದ್ದ ಹಲವು ವಿದೇಶಿಯರು ಕರ್ನಾಟಕಕ್ಕೆ ಬಂದಿರುವುದು ರಾಜ್ಯದಲ್ಲಿ ಆತಂಕ ಹೆಚ್ಚಿಸಿದೆ. ಈ ಪ್ರವಚನದಲ್ಲಿ ಪಾಲ್ಗೊಂಡಿದ್ದ 9 ಮಂದಿ ಕರೊನಾದಿಂದ ಮೃತಪಟ್ಟಿರುವುದು ಭೀತಿ ಸೃಷ್ಟಿಸಿದೆ.
ತಬ್ಲಿಘಿ ಜಮಾತ್ ಸಂಘಟನೆಯ ಮುಖ್ಯ ಕಾರ್ಯಾಲಯ ಹಜರತ್ ನಿಜಾಮುದ್ದಿನ್ ಬಳಿಯ ಬಂಗ್ಲೇವಾಲಿ ಮಸ್ಜೀದ್​ನಲ್ಲಿದೆ. ಕರೊನಾ ವೈರಸ್ ಭಾರತದಲ್ಲಿ ಹಬ್ಬುತ್ತಿರುವ ಬಗ್ಗೆ ಮಾಹಿತಿಯಿದ್ದರೂ ಇಲ್ಲಿ ಧಾರ್ವಿುಕ ಸಭೆ ನಡೆಸಿದ್ದೇಕೆ ಎಂಬ ಪ್ರಶ್ನೆಗಳೆದ್ದಿವೆ.
ಆರು ಮಹಡಿಯ ಈ ಕಟ್ಟಡದ ಜಮಾತ್ ಕೇಂದ್ರ ಕಾರ್ಯಾಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಸಭೆ ಮುಗಿದ ಬಳಿಕವೂ ಜನರ ಉಳಿಯುವಿಕೆಗೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ಎರಡೂವರೆ ಸಾವಿರ ಮಂದಿ ಸಭೆಯಲ್ಲಿ ಪಾಲ್ಗೊಂಡ ಪರಿಣಾಮ ಕರೊನಾ ಯಾರ ಮೂಲಕ ಯಾರ್ಯಾರಿಗೆ ಹಬ್ಬಿದೆ ಎಂಬುದನ್ನು ಪತ್ತೆಹಚ್ಚುವುದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ. ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಸಭೆಗಳನ್ನು ನಡೆಸಬಾರದು ಎಂಬ ಸೂಚನೆ ಉಲ್ಲಂಘಿಸಿ ಸಭೆ ನಡೆಸಿದ ಆರೋಪದ ಮೇಲೆ ನಿಜಾಮುದ್ದಿನ್​ನ ಮೌಲಾನಾ ಸಾದ್ ಮತ್ತು ತಬ್ಲಿಘಿ ಜಮಾತ್​ನ ಪ್ರಮುಖ ಸದಸ್ಯರ ವಿರುದ್ಧ ದೆಹಲಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.
2500ಕ್ಕೂ ಹೆಚ್ಚು ಜನರು: ಮಾರ್ಚ್ 7ರಿಂದ ಆರಂಭಗೊಂಡು ಹಲವು ದಿನಗಳ ಕಾಲ ಬಂಗ್ಲೇವಾಲಿ ಮಸ್ಜೀದ್ ಬಳಿಯ ಮರ್ಕಜ್​ನಲ್ಲಿ ಧಾರ್ವಿುಕ ಪ್ರವಚನ ನಡೆದಿತ್ತು. ಇದರಲ್ಲಿ ಇಂಡೋನೇಷ್ಯಾ, ಮಲೇಷ್ಯಾ, ಬಾಂಗ್ಲಾದೇಶ, ಪಾಕಿಸ್ತಾನ ಅಲ್ಲದೆ ದೇಶದ ವಿವಿಧ ರಾಜ್ಯಗಳ 2500ಕ್ಕೂ ಹೆಚ್ಚು ಮುಸ್ಲಿಮರು ಪಾಲ್ಗೊಂಡಿದ್ದರು. ವಿದೇಶದಿಂದ ಬಂದಿದ್ದ ಪ್ರವಚನಕಾರರ ಮೂಲಕ ಕರೊನಾ ಹರಡಿರುವ ಸಾಧ್ಯತೆ ಇದೆ ಎಂದು ದೆಹಲಿ ಸರ್ಕಾರದ ಮೂಲಗಳು ಅಭಿಪ್ರಾಯಪಟ್ಟಿವೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಜಮ್ಮು- ಕಾಶ್ಮೀರ, ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳ ಮಂದಿ ಈ ಸಭೆಯಲ್ಲಿ ಪಾಲ್ಗೊಂಡಿದ್ದರಿಂದ ಅವರೆಲ್ಲರನ್ನೂ ಕಡ್ಡಾಯವಾಗಿ ಪ್ರತ್ಯೇಕ ಕ್ವಾರಂಟೈನ್ ಘಟಕಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ. ತೆಲಂಗಾಣದಲ್ಲಿ ಸೋಮವಾರ ಕರೊನಾದಿಂದ ಮೃತಪಟ್ಟ 6 ಮಂದಿ ದೆಹಲಿ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಸಭೆಯಲ್ಲಿ ಪಾಲ್ಗೊಂಡವರೆಲ್ಲರೂ ಮಾರ್ಚ್ 21ರ ವೇಳೆಗೆ ತಮ್ಮ ರಾಜ್ಯಗಳಿಗೆ ಮರಳಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. 22ರಂದು ಜನತಾ ಕರ್ಫ್ಯೂ ಘೋಷಣೆಯಾಯ್ತು. ಹೀಗಾಗಿ, ಪ್ರವಾಸಿಗರು ಇಲ್ಲೇ ಉಳಿದುಕೊಂಡರು ಎಂದು ಮರ್ಕಜ್ ಹೇಳಿಕೆ ಬಿಡುಗಡೆ ಮಾಡಿದೆ. ಅವರೆಲ್ಲರೂ ನಿಜಾಮುದ್ದೀನ್​ನ ಬಂಗ್ಲೇವಾಲಿ ಮಸೀದಿ, ಮರ್ಕಜ್ ಸೇರಿ ಅಕ್ಕಪಕ್ಕದಲ್ಲಿದ್ದ ಅತಿಥಿ ಗೃಹಗಳಲ್ಲೇ ಈವರೆಗೆ ಉಳಿದುಕೊಂಡಿದ್ದರು. ಕೆಲವರ ದೇಹದ ಉಷ್ಣಾಂಶ ಹೆಚ್ಚಾಗುತ್ತಾ ಹೋಯಿತು. ಕೆಮ್ಮು ಶುರುವಾಗಿತ್ತು. ಆದರೆ ಯಾರೂ ಕರೊನಾ ವೈರಸ್ ತಮ್ಮನ್ನು ಬಾಧಿಸಿದೆ ಎಂದು ಭಾವಿಸಿರಲಿಲ್ಲ ಎಂದು ಮರ್ಕಜ್​ಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
9 ಸಾವಿಗೆ ಜಮಾತ್ ಲಿಂಕ್:ತೆಲಂಗಾಣ, ಕರ್ನಾಟಕದ ತುಮಕೂರು, ಮುಂಬೈ, ಆಂಧ್ರಪ್ರದೇಶ, ಶ್ರೀನಗರ ಸೇರಿ ವಿವಿಧ ಪ್ರದೇಶಗಳಲ್ಲಿ ಸಾವಿಗೀಡಾದ ಒಂಭತ್ತು ಮಂದಿ ತಬ್ಲಿಘಿ ಜಮಾತ್ ಪ್ರವಚನ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿದೇಶದಿಂದ ಬಂದಿದ್ದ ಪ್ರವಚನಕಾರರಿಗೆ ಕರೊನಾ ಸೋಂಕುಗಳಿದ್ದವು. ಅವರು ಸಭೆಯಲ್ಲಿ ಭಾರತೀಯ ಮುಸ್ಲಿಮರೊಂದಿಗೆ ಬೆರೆತ ಪರಿಣಾಮ ಅವರಿಗೂ ಕರೊನಾ ಹಬ್ಬಿರಬಹುದು ಎಂದು ಅಂದಾಜಿಸಲಾಗಿದೆ. ಏತನ್ಮಧ್ಯೆ, 1548 ಮಂದಿಯನ್ನು ಮರ್ಕಜ್​ನಿಂದ ಹೊರ ಕರೆ ತರಲಾಗಿದ್ದು, ಇವರಲ್ಲಿ 441 ಮಂದಿಯಲ್ಲಿ ಕರೊನಾ ವೈರಸ್​ಗಳಿರುವ ಲಕ್ಷಣಗಳು ಕಂಡುಬಂದಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಉಳಿದ 1107 (ಸೋಂಕಿನ ಲಕ್ಷಣಗಳಿಲ್ಲದ) ಜನರನ್ನು ರಾಜಧಾನಿಯ ವಿವಿಧ ಕ್ವಾರಂಟೈನ್ ಘಟಕಗಳಿಗೆ ವರ್ಗಾಯಿಸಲಾಗಿದೆ.
ಮಾಹಿತಿ ಇರಲಿಲ್ಲವೇ?: ಪ್ರವಚನ ಸಭೆ ಮಾರ್ಚ್ ಮಧ್ಯಭಾಗದಲ್ಲಿ ನಡೆದಿದ್ದರೂ, 2000 ಮಂದಿ ಇದೇ ಸ್ಥಳದಲ್ಲಿ ಉಳಿದುಕೊಂಡಿದ್ದರ ಬಗ್ಗೆ ದೆಹಲಿ ಸರ್ಕಾರ, ಪೊಲೀಸರು ಮತ್ತು ಕೇಂದ್ರ ಗೃಹ ಇಲಾಖೆಗೆ ಪೂರ್ವ ಮಾಹಿತಿ ಇರಲಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ. ದೆಹಲಿ ಪೊಲೀಸರು ಈ 2000 ಮಂದಿಯನ್ನು ಮರ್ಕಜ್​ನಿಂದ ಹೊರ ತರುವ ಕಾರ್ಯಾಚರಣೆ ಶುರು ಮಾಡಿದ್ದು ಸೋಮವಾರ.
ಕೇಂದ್ರದ ಮಾಹಿತಿ: ಮಾರ್ಚ್ 21ರ ತನಕ ಮರ್ಕಜ್​ನಲ್ಲಿ 1746 ಮಂದಿ ವಾಸ್ತವ್ಯ ಹೂಡಿದ್ದರು. ಅವರಲ್ಲಿ 216 ಮಂದಿ ವಿದೇಶಿಯರು ಮತ್ತು 1530 ಮಂದಿ ಭಾರತೀಯರು ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಅಲ್ಲದೆ, ದೇಶದ ವಿವಿಧ ಭಾಗಗಳಲ್ಲಿ ಸುಮಾರು 824 ವಿದೇಶಿಯರು ತಬ್ಲಿಘಿ ಜಮಾತ್​ನ ಧಾರ್ವಿುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ಬಗ್ಗೆ ವಿವಿಧ ರಾಜ್ಯಗಳ ಪೊಲೀಸ್ ವಿಭಾಗಕ್ಕೆ ಮಾಹಿತಿ ನೀಡಿ, ಅವರನ್ನು ಪರೀಕ್ಷೆಗೊಳಪಡಿಸಬೇಕು ಎಂದು ತಿಳಿಸಲಾಗಿತ್ತು. ಇದುವರೆಗೆ ಇದಕ್ಕೆ ಸಂಬಂಧಿಸಿದ ವಿವಿಧ ರಾಜ್ಯಗಳಲ್ಲಿರುವ 2137 ಮಂದಿಯನ್ನು ಗುರುತಿಸಿ ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿರಿಸಲಾಗಿದೆ.
6 ಶಂಕಿತರು: ದೆಹಲಿಯಲ್ಲಿ ನಡೆದ ಪಬ್ಲಿಕ್ ಜಮಾತ್​ನಲ್ಲಿ ಭಾಗವಹಿಸಿದ್ದ ನೆಲಮಂಗಲ ತಾಲೂಕಿನ ದಾಬಸ್​ಪೇಟೆಯ ಲಕ್ಕೂರು ಗ್ರಾಮದ ಆರು ಶಂಕಿತರನ್ನು ನೆಲಮಂಗಲ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ನಲ್ಲಿ ಇಡಲಾಗಿದೆ. ಅವರ ಕುಟುಂಬಗಳ ಒಟ್ಟು 21 ಮಂದಿಯನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆಕ್ರೋಶ
ನಿಜಾಮುದ್ದಿನ್ ಪ್ರದೇಶಕ್ಕೆ ಸೇರಿದ ವ್ಯಕ್ತಿಯೊಬ್ಬನಿಗೂ ಕರೊನಾ ಖಚಿತವಾಗಿದೆ. ಸ್ಥಳೀಯರಲ್ಲಿ ಭಯ ಹೆಚ್ಚಿದೆ. ಯಾರೂ ಹೆದರಬೇಡಿ ಎಂದು ನಾವು ವಿನಂತಿಸಿಕೊಂಡಿದ್ದೇವೆ. ವಿದೇಶ ಹಾಗೂ ವಿವಿಧ ರಾಜ್ಯಗಳ ಜನರಿಲ್ಲಿ ಸೇರುತ್ತಾರೆ ಎಂಬ ಮಾಹಿತಿ ಪೊಲೀಸರಿಗೆ ಇರಲಿಲ್ಲವೇ? ಈ ಧಾರ್ವಿುಕ ಸಭೆಗೆ ಸರ್ಕಾರ ತಡೆ ಹಿಡಿಯಬೇಕಿತ್ತು ಎಂದು ರೆಸಿಡೆಂಟ್ಸ್ ವೆಲ್ಪೇರ್ ಅಸೋಸಿಯೇಷನ್ ಸದಸ್ಯರು ಹೇಳಿದ್ದಾರೆ.
ರಾಘವ ಶರ್ಮ ನಿಡ್ಲೆ
ನಿಜಾಮುದ್ದೀನ್​ ಪ್ರಾರ್ಥನಾ ಮಂದಿರದಿಂದ ಬಿಜ್ನೋರ್​ ಮಸೀದಿಗೆ ಹೋಗಿ ಅಡಗಿದ್ದ 8 ವಿದೇಶಿಗರ ಪತ್ತೆ; ಮೌಲ್ವಿ ಸೇರಿ ಐವರ ವಿರುದ್ಧ ಕೇಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + ten =
Remember me
