ಬೀಜಿಂಗ್:ಮೂರು ವರ್ಷಗಳ ಹಿಂದೆ ಮೊದಲ ಬಾರಿಗೆ ಕರೊನಾ ಸೋಂಕು ಕಾಣಿಸಿಕೊಂಡು ತತ್ತರಿಸಿದ್ದ ಚೀನಾದಲ್ಲಿ ಮತ್ತೀಗ ಅದೇ ಪರಿಸ್ಥಿತಿ ಉಂಟಾಗಿದೆ. ಈ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಕೆಲ ತಿಂಗಳಲ್ಲಿ ಕೋವಿಡ್ ಕಾರಣದಿಂದಾಗುವ ಸಾವಿನ ಸಂಖ್ಯೆ 10 ಲಕ್ಷಕ್ಕೂ ಹೆಚ್ಚಾಗಲಿದೆ ಎಂದು ಹಲವು ಅಧ್ಯಯನ ವರದಿಗಳು ತಿಳಿಸಿವೆ.
ಸೋಂಕಿನ ನಿಯಂತ್ರಣಕ್ಕೆ ದೇಶಾದ್ಯಂತ ಕಠಿಣ ಕೋವಿಡ್ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿತ್ತು. ಆದರೆ, ಇತ್ತೀಚೆಗೆ ಶೂನ್ಯ-ಕೋವಿಡ್ ನೀತಿಯನ್ನು ಸಡಿಲಿಸಲಾಗಿದೆ. ಪರಿಣಾಮ ಕೋವಿಡ್ ಇನ್ನಿಲ್ಲದ ವೇಗದಲ್ಲಿ ವ್ಯಾಪಿಸುತ್ತಿದೆ.
2023ರಲ್ಲಿ ದೇಶದಲ್ಲಿ 10 ಲಕ್ಷದಷ್ಟು ಜನರು ಕೋವಿಡ್​ಗೆ ಬಲಿಯಾಗುವ ಅಪಾಯವಿದೆ ಎಂದು ಹಾಂಕಾಂಗ್ ವಿವಿಯ ಅಧ್ಯಯನ ಎಚ್ಚರಿಸಿದ ಕೆಲವೇ ದಿನಗಳಲ್ಲಿ ಅದಕ್ಕೆ ಪೂರಕವಾಗಿ ಅಮೆರಿಕದ ಹೆಲ್ತ್ ಮ್ಯಾಟ್ರಿಕ್ಸ್ ಆಂಡ್ ಇವ್ಯಾಲುಯೇಶನ್ ಸಂಸ್ಥೆ (ಐಎಚ್​ಎಂಇ) ತನ್ನದೇ ಆದ ಮಾದರಿಯಲ್ಲಿ ಲೆಕ್ಕ ಹಾಕಿ ಕಳವಳಕಾರಿ ಅಂದಾಜು ಪ್ರಕಟಿಸಿದೆ. ಏಪ್ರಿಲ್ 1ರ ಹೊತ್ತಿಗೆ ಚೀನಾದಲ್ಲಿ ಸೋಂಕು ಉತ್ತುಂಗಕ್ಕೆ ತಲುಪಿ 3.22 ಲಕ್ಷ ಜನರು ಮೃತಪಡುವ ಸಾಧ್ಯತೆಯಿದೆ ಎಂದು ಐಎಚ್​ಎಂಇ ಹೇಳಿದೆ. ಆ ವೇಳೆಗೆ ಚೀನಾದ 3ನೇ ಒಂದರಷ್ಟು ಜನಸಂಖ್ಯೆ ಸೋಂಕಿಗೆ ಒಳಗಾಗಲಿದೆ ಎಂದು ಸಂಸ್ಥೆ ನಿರ್ದೇಶಕ ಕ್ರಿಸ್ಟೋಫರ್ ಮರ್ರೆ ಹೇಳಿದ್ದಾರೆ. ಡಿಸೆಂಬರ್ ಎರಡನೇ ವಾರದಲ್ಲಿ ನಿಯಂತ್ರಣ ಕ್ರಮಗಳನ್ನು ಸಡಿಲಿಸಿದ ನಂತರದ ಕೋವಿಡ್ ಸಾವಿನ ಸಂಖ್ಯೆಗಳನ್ನು ಚೀನಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್​ಎಚ್​ಎ) ಇನ್ನೂ ಪ್ರಕಟಿಸಿಲ್ಲ. ಡಿ.3ರಂದು ಕೊನೆಯ ಬಾರಿಗೆ ಅಧಿಕೃತವಾಗಿ ಸಾವಿನ ಮಾಹಿತಿ ಪ್ರಕಟಿಸಲಾಗಿತ್ತು.
5,235 ಸಾವು:ಚೀನಾದಲ್ಲಿ ಸಾಂಕ್ರಾಮಿಕತೆ ಸ್ಪೋಟಗೊಂಡಾಗಿನಿಂದ ಇದುವರೆಗೆ 5,235 ಜನರು ಬಲಿಯಾಗಿದ್ದಾರೆ ಎನ್ನುವುದು ಸರ್ಕಾರದ ಹೇಳಿಕೆಯಾಗಿದೆ. ಜನರ ಭಾರಿ ಪ್ರತಿಭಟನೆಗಳಿಗೆ ಮಣಿದು ಸರ್ಕಾರ ಈ ತಿಂಗಳು ಜಗತ್ತಿನ ಅತ್ಯಂತ ಕಟ್ಟುನಿಟ್ಟಿನ ಝೀರೋ-ಕೋವಿಡ್ ನೀತಿಗೆ ತಿಲಾಂಜಲಿ ನೀಡಿದ ನಂತರ ಸೋಂಕು ಉಲ್ಬಣಿಸುತ್ತಿದೆ. 140 ಕೋಟಿ ಜನಸಂಖ್ಯೆಯ ದೇಶದಲ್ಲಿ ಮುಂದಿನ ತಿಂಗಳ ಚಾಂದ್ರಮಾನ ಹೊಸ ವರ್ಷದ ರಜೆಗಳ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಳವಾಗಬಹುದು ಎಂಬ ಭಯ ಕಾಡತೊಡಗಿದೆ.
‘ಚೀನಾ ಇಷ್ಟು ದೀರ್ಘ ಕಾಲ ಝೀರೋ-ಕೋವಿಡ್ ನೀತಿಗೆ ಅಂಟಿಕೊಂಡಿರುತ್ತದೆಂದು ಯಾರೂ ಯೋಚಿಸಿರಲಿಲ್ಲ’ ಎಂದು ಮರ್ರೆ ಹೇಳಿದ್ದಾರೆ. ಝೀರೋ-ಕೋವಿಡ್ ನೀತಿಯು ಆರಂಭದ ವೈರಸ್ ಪ್ರಭೇದಗಳನ್ನು ತಡೆಯುವಲ್ಲಿ ಪರಿಣಾಮಕಾರಿ ಆಗಿದ್ದಿರಬಹುದು. ಆದರೆ, ಒಮಿಕ್ರಾನ್ ತಳಿಯ ಪ್ರಸರಣ ತಡೆಯುವುದು ಕಷ್ಟವಾಯಿತು ಎಂದು ಮರ್ರೆ ಅಭಿಪ್ರಾಯಪಟ್ಟರು.
ಶೇ. 60 ಮಂದಿಗೆ ಸೋಂಕು:ಚೀನಾದಲ್ಲಿ ಕೋವಿಡ್ ಸೋಂಕು ತ್ವರಿತವಾಗಿ ಹಬ್ಬುತ್ತಿದ್ದು ಜನವರಿ ಹೊತ್ತಿಗೆ ದೇಶದ ಶೇ.70ರಷ್ಟು ಜನರು ಸೋಂಕಿತರಾಗಬಹುದೆಂದು ಕೆಲವು ತಜ್ಞರ ನಿರೀಕ್ಷೆಯಾಗಿದೆ.
ಹಾಂಕಾಂಗ್ ಸಂಸ್ಥೆ ಲೆಕ್ಕಾಚಾರ:ಚೀನಾದಲ್ಲಿ ಝೀರೋ-ಕೋವಿಡ್ ನಿಯಮಾವಳಿಗಳನ್ನು ತ್ವರಿತವಾಗಿ ಸಡಿಲಿಸುತ್ತಿರುವುದರಿಂದ ಸಾಂಕ್ರಾಮಿಕತೆಗೆ ಕನಿಷ್ಠ 10 ಲಕ್ಷ ಜನರು ಬಲಿಯಾಗುವ ಸಾಧ್ಯತೆಯಿದೆ ಎಂದು ಹಾಂಕಾಂಗ್ ಸಂಶೋಧಕರ ಅಧ್ಯಯನವೊಂದು ಕೆಲವು ದಿನಗಳ ಹಿಂದೆಯಷ್ಟೇ ಎಚ್ಚರಿಸಿತ್ತು. ದೇಶಾದ್ಯಂತ ಸೋಂಕಿನ ದರ ಸ್ಪೋಟಕ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ವೈರಸ್​ನ ಹೊಸ ಪ್ರಭೇದ ಸೃಷ್ಟಿಯಾಗುವ ಅಪಾಯವೂ ಇದೆ ಎಂದು ಸಂಶೋಧಕರು ಹೇಳಿದ್ದಾರೆ.
ಸಾಮೂಹಿಕ ವ್ಯಾಕ್ಸಿನೇಶನ್ ಬೂಸ್ಟರ್ ಆಂದೋಲನ ನಡೆಯದಿರುವುದರಿಂದ ಹಾಗೂ ಇತರ ಕಠಿಣ ನಿಯಮಗಳನ್ನೂ ಕೈಬಿಟ್ಟು ಆರ್ಥಿಕ ಚಟುವಟಿಕೆಗಳನ್ನು ಮುಕ್ತಗೊಳಿಸಿರುವುದರಿಂದ ರಾಷ್ಟ್ರವ್ಯಾಪಿಯಾಗಿ ತಲಾ ಹತ್ತು ಲಕ್ಷ ಜನರಲ್ಲಿ ಅಂದಾಜು 684 ಮಂದಿ ಸಾಯಬಹುದು ಎಂದು ಬುಧವಾರ ಬಿಡುಗಡೆಯಾಗಿರುವ ಸಂಶೋಧನಾ ವರದಿ ಅಂದಾಜು ಮಾಡಿತ್ತು. ಹಾಂಕಾಂಗ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಮಾಜಿ ಡೀನ್ ಗೇಬ್ರಿಯೆಲ್ ಲ್ಯುಂಗ್ ಇತರ ಇಬ್ಬರು ಸಹೋದ್ಯೋಗಿಗಳೊಂದಿಗೆ ಸಂಶೋಧನಾ ವರದಿ ಸಿದ್ಧಪಡಿಸಿದ್ದರು. ಚೀನಾದ ಜನಸಂಖ್ಯೆ 141 ಕೋಟಿ ಆಗಿದ್ದು ಅದರ ಆಧಾರದಲ್ಲಿ 9,64,400 ಜನರು ಬಲಿಯಾಗುವ ಸಂಭವವಿದೆ ಎಂದು ಲೆಕ್ಕ ಹಾಕಲಾಗಿದೆ.
ಅಸ್ವಸ್ಥ ಕಾರ್ವಿುಕರು:ಒಂದೆಡೆ ಸಾವುಗಳ ಸಂಖ್ಯೆ ಹೆಚ್ಚುತ್ತಿರುವಾಗ ಇನ್ನೊಂದೆಡೆ, ಆಂಬುಲೆನ್ಸ್​ಗಳ ಚಾಲಕರು ಮತ್ತು ಸ್ಮಶಾನಗಳ ಸಿಬ್ಬಂದಿ ಅನಾರೋಗ್ಯಪೀಡಿತರಾಗುತ್ತಿರು ವುದು ಶವಗಳ ನಿರ್ವಹಣೆ ಕಾರ್ಯಕ್ಕೆ ತಲೆನೋವಾಗಿ ಪರಿಣಮಿಸಿದೆ. ಶನಿವಾರ ಅಂತ್ಯಕ್ರಿಯೆಗಾಗಿ ನೂರಾರು ಕರೆಗಳು ಬಂದಿದ್ದು ಅದನ್ನು ನಿಭಾಯಿಸುವುದು ಸವಾಲಾಗಿತ್ತು ಎಂದು ಸಿಬ್ಬಂದಿ ಹೇಳಿಕೊಂಡಿರುವುದು ವರದಿಯಾಗಿದೆ.
ನೇಚರ್ ಮೆಡಿಸಿನ್ ವರದಿ:ಷಾಂಘೈಯ ಫುದಾನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಶೋಧಕರು ನಡೆಸಿದ ಅಧ್ಯಯನ ವರದಿಯ ಕಳವಳಕಾರಿ ಫಲಿತಾಂಶವನ್ನು ನೇಚರ್ ಪತ್ರಿಕೆ 2022 ಜುಲೈನಲ್ಲಿ ಪ್ರಕಟಿಸಿತ್ತು. ನಿಯಂತ್ರಣ ಕ್ರಮಗಳ ಗೈರಿನಲ್ಲಿ ಒಮಿಕ್ರಾನ್ ಅಲೆಯ ಅಬ್ಬರಕ್ಕೆ ಆರು ತಿಂಗಳಲ್ಲಿ 1.55 ದಶಲಕ್ಷ ಜನರು ಸಾಯ ಬಹುದು ಎಂದು ವರದಿ ಅಂದಾಜು ಮಾಡಿತ್ತು.
ರಾಜರಾಣಿಗೆ ಸೋಂಕು:ಥಾಯ್ಲೆಂಡ್ ರಾಜ ಮಹಾ ವಜಿರಲೊಂಗ್ ಕಾರ್ನ್ (70) ಮತ್ತು ರಾಣಿ ಸುಥಿದಾ (44) ಕೋವಿಡ್ ಪಾಸಿ ಟಿವ್ ಆಗಿದ್ದಾರೆ. ಇಬ್ಬರಲ್ಲೂ ಸೋಂಕಿನ ಸೌಮ್ಯ ಲಕ್ಷಣವಿದೆ ಎಂದು ಅರಮನೆ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಲು ಸಾಲು ಶವಗಳು:ಪೂರ್ವ ಬೀಜಿಂಗ್​ನ ಸ್ಮಶಾನವೊಂದರ ಹೊರಗಡೆ ಕೊರೆಯುವ ಚಳಿಯ ನಡುವೆ ರಕ್ಷಣಾ ಉಡುಗೆಗಳನ್ನು ತೊಟ್ಟಿದ್ದ ಸ್ಮಶಾನ ಕಾರ್ವಿುಕರು ವಾಹನದಿಂದ ಒಂದೊಂದೇ ಶವಗಳನ್ನು ತೆಗೆಯುತ್ತಿದ್ದ ದೃಶ್ಯ ಕಂಡುಬಂದಿದೆ. ಇದು ರಾಜಧಾನಿಸಹಿತ ದೇಶದಾದ್ಯಂತ ಸೋಂಕಿನ ವ್ಯಾಪಕತೆಗೆ ಹಿಡಿದ ಕನ್ನಡಿಯಾಗಿದೆ.
ಬೆಂಗಳೂರು:ಚೀನಾದಲ್ಲಿ ಕೋವಿಡ್ ಮತ್ತೆ ಆತಂಕ ಸೃಷ್ಟಿಸಿದೆಯಾದರೂ, ಭಾರತಕ್ಕೆ ಅಂತಹ ಭೀತಿ ಇಲ್ಲ ಎಂದು ವೈದ್ಯಕೀಯ ಕ್ಷೇತ್ರದ ತಜ್ಞರು ಅಭಯ ನೀಡಿದ್ದಾರೆ. ಭಾರತದಲ್ಲಿ ಕೋವಿಡ್ ಸೋಂಕನ್ನು ಸಮರ್ಥವಾಗಿ ನಿಭಾಯಿಸಲಾಗಿದ್ದು, ಈಗಾಗಲೇ ಶೇ.90 ಮಂದಿ ಎರಡು ಸುತ್ತಿನ ಲಸಿಕೆ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಕೋವಿಡ್ ತೀವ್ರಗೊಳ್ಳುವ ಯಾವುದೇ ಸೂಚನೆಗಳು ಕಂಡುಬಂದಿಲ್ಲ. ಹೀಗಾಗಿ ಜನರು ನಿರಾತಂಕವಾಗಿ ಜೀವನ ನಡೆಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಇನ್ನೂ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡುತ್ತಿದ್ದು, ಮೂರನೇ ಡೋಸ್ ಲಸಿಕೆ ಪಡೆಯದವರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ದೇಶದಲ್ಲಿ ಸದ್ಯ ಕೋವಿಡ್​ನ ಆತಂಕವಿಲ್ಲ. ಚೀನಾದಲ್ಲಿ ಶೇ.50 ಜನರು ಕೋವಿಡ್ ಲಸಿಕೆ ಪಡೆದುಕೊಂಡಿಲ್ಲ. ಹೀಗಾಗಿ ಅಲ್ಲಿ ಸೋಂಕು ಹೆಚ್ಚಳವಾಗಿದೆ. ಆದರೆ, ಭಾರತದಲ್ಲಿ ಶೇ.90ರಷ್ಟು ಜನರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ.
|ಡಾ. ವಿ.ರವಿರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ
ಹೊಸ ತಳಿ ಪತ್ತೆ ಆಗಿಲ್ಲ:ಕೋವಿಡ್ ಸೋಂಕು ಲಕ್ಷಣ ಹೊಂದಿರುವವರ ಮಾದರಿಗಳ ನಿರಂತರ ತಪಾಸಣೆ ನಡೆಯುತ್ತಿದ್ದು, ಒಮಿಕ್ರಾನ್ ತಳಿಯ ನಂತರ ಕೋವಿಡ್​ಗೆ ಸಂಬಂಧಿಸಿದಂತೆ ಯಾವುದೇ ಹೊಸ ತಳಿ ಪತ್ತೆಯಾಗಿಲ್ಲ. ಅಲ್ಲದೆ, ದೇಶದಲ್ಲಿ ಕೋವಿಡ್ ಬಹುತೇಕ ಕ್ಷೀಣಿಸಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಇದರ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಕಾಲಕಾಲಕ್ಕೆ ಪ್ರಕರಣಗಳ ಕುರಿತು ಪರಿಶೀಲನೆ ಹಾಗೂ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುತ್ತಿವೆ. ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಹೊಂದಿರುವವರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ.
ಭಿಕ್ಷೆ ಬೇಡುತ್ತಿದ್ದ ಹತ್ತು ವರ್ಷದ ಬಾಲಕ ಈಗ ಕೋಟ್ಯಧಿಪತಿ!; ಆಗಿದ್ದು ಹೇಗೆ?

ಸಾಲ ತೀರಿಸಿಲ್ಲ ಅಂತ ಆಟೋಚಾಲಕನ ಪತ್ನಿ ಮೇಲೆ ಅತ್ಯಾಚಾರ; ದೇವಸ್ಥಾನಕ್ಕೆ ಕರೆದೊಯ್ದು ಹಣೆಗೆ ಸಿಂಧೂರ ಹಚ್ಚಿ ಹೆಂಡ್ತಿ ಎಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
