ಬೆಂಗಳೂರು: ಈಗ ಎಲ್ಲರ ಬಾಯಲ್ಲೂ ಇರುವ ಶಬ್ದವೆಂದರೆ ಅದು ಕರೊನಾ. ಈ ಸೋಂಕು ಎಲ್ಲರಲ್ಲಿಯೂ ಭೀತಿಯ ಸುರಿಮಳೆಯನ್ನೇ ಹರಿಸಿಬಿಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಒಂದೆಡೆಯಾದರೆ, ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ. ಅದೇ ಇನ್ನೊಂದೆಡೆ ಸಮಾಧಾನಕರ ಸಂಗತಿ ಎಂದರೆ, ಗುಣಮುಖರಾಗಿ ಬಿಡುಗಡೆಯಾಗುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.
ಕರ್ನಾಟಕದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ 15 ಜಿಲ್ಲೆಗಳಲ್ಲಿ ಯಾವುದೇ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ ಎನ್ನುವುದು ಕೂಡ ತುಂಬಾ ಸಂತೋಷದ ಸಂಗತಿ.
ಹಾಗಿದ್ದರೆ ನಿಮ್ಮ ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ? ಸೋಂಕು ಮುಕ್ತ ಜಿಲ್ಲೆಗಳಲ್ಲಿ ನಿಮ್ಮದೂ ಇದೆಯೆ? ಇಲ್ಲವೆಂದಾದರೆ ಎಷ್ಟು ಮಂದಿಗೆ ಇಂದಿನವರೆಗೆ ಸೋಂಕು ತಗುಲಿದೆ? ಇದರಲ್ಲಿ ಬಿಡುಗಡೆಯಾದವರು ಎಷ್ಟು ಮಂದಿ? ನಮ್ಮ ಜಿಲ್ಲೆಯಲ್ಲಿಯೂ ಜನರು ಮೃತಪಟ್ಟಿದ್ದಾರೆಯೆ? ಇತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬೇಕಲ್ಲವೆ?ಹಾಗಿದ್ದರೆ ಇಲ್ಲಿ ನಿಮಗಾಗಿ ನಿಮ್ಮ ಜಿಲ್ಲೆಯ ಬಗ್ಗೆ ಮಾಹಿತಿ ನೀಡಲಾಗಿದೆ.
ಸೋಂಕು ಮುಕ್ತ ಜಿಲ್ಲೆಗಳಿವುಮೊದಲು ಯಾವ ಜಿಲ್ಲೆಗಳು ಇವತ್ತಿನವರೆಗೆ ಸೋಂಕುಮುಕ್ತವಾಗಿದೆ ಎಂಬುದನ್ನು ತಿಳಿಯೋಣ. ಕರ್ನಾಟಕದ 11 ಜಿಲ್ಲೆಗಳು ಇಂದಿನವರೆಗೆ ಸಿಕ್ಕಿರುವ ಅಂಕಿ-ಅಂಶಗಳ ಪ್ರಕಾರ ಸೋಂಕುಮುಕ್ತವಾಗಿವೆ. ಅವುಗಳೆಂದರೆ:ರಾಯಚೂರು, ಯಾದಗಿರಿ, ಕೊಪ್ಪಳ, ಹಾವೇರಿ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನರ, ರಾಮನಗರ, ಹಾಸನ ಮತ್ತು ಕೋಲಾರ.
ದಾವಣಗೆರೆಯಲ್ಲಿ ಮೂರು ಮತ್ತು ಕೊಡಗಿನಲ್ಲಿ ಒಂದು ಸೋಂಕು ಪ್ರಕರಣ ಇದುವರೆಗೆ ಪತ್ತೆಯಾಗಿತ್ತು. ಆದರೆ ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿರುವ ಹಿನ್ನೆಲೆಯಲ್ಲಿ ಸದ್ಯ ದಾವಣಗೆರೆ ಮತ್ತು ಕೊಡಗು ಕೂಡ ಸೋಂಕುಮುಕ್ತ ಜಿಲ್ಲೆಗಳ ಸಾಲಿಗೆ ಸೇರಿದೆ.
ಅದೇ ರೀತಿ, ತುಮಕೂರು ಮತ್ತು ಗದಗದಲ್ಲಿ ತಲಾ ಒಂದು ಸೋಂಕು ಪ್ರಕರಣ ಪತ್ತೆಯಾಗಿತ್ತು. ಆದರೆ ಈ ಇಬ್ಬರೂ ಮೃತಪಟ್ಟಿದ್ದು, ಸದ್ಯದವರೆಗೆ ಉಳಿದ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ.
ಉಳಿದಂತೆ ಎಲ್ಲಾ ಜಿಲ್ಲೆಗಳ ಒಟ್ಟಾರೆ ಚಿತ್ರಣ ಹೇಳುವುದಾದರೆ ರಾಜ್ಯದಲ್ಲಿ ಇದುವರೆಗೆ ಒಟ್ಟು 258 ಕರೊನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, 65 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. 184 ಮಂದಿ ವಿವಿಧೆಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಹಾಮಾರಿ ಈಗಾಗಲೇ 9 ಮಂದಿಯನ್ನು ಬಲಿ ಪಡೆದಿದೆ.
ಉಳಿದ ಜಿಲ್ಲೆಗಳ ಪರಿಸ್ಥಿತಿ ಹೀಗಿದೆ ನೋಡಿ
ಬೆಂಗಳೂರು ನಗರ: ರಾಜಧಾನಿ ಬೆಂಗಳೂರು ಕರೊನಾ ಸೋಂಕಿತರ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದೆ. ಬೆಂಗಳೂರು ನಗರದಲ್ಲಿ ಇಲ್ಲಿಯವರೆಗೆ 80 ಮಂದಿಗೆ ಸೋಂಕು ತಗುಲಿದ್ದು, ಅವರ ಪೈಕಿ 31 ಮಂದಿ ಆಸ್ಪತ್ರೆಯಿಂದ ಡಿಸ್‌ಜಾರ್ಚ್‌ ಆಗಿದ್ದಾರೆ. 47 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಬೆಂಗಳೂರು ನಗರದಲ್ಲಿ ಇಬ್ಬರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ
ಮೈಸೂರು: ಮೈಸೂರು ಕರೊನಾ ಸೋಂಕಿನಲ್ಲಿ 2ನೇ ಸ್ಥಾನದಲ್ಲಿ ನಿಂತಿದೆ. ಇಲ್ಲಿಯವರೆಗೆ ಮೈಸೂರಿನಲ್ಲಿ 48 ಮಂದಿಗೆ ಸೋಂಕು ತಗುಲಿದ್ದು, 10 ಮಂದಿ ಬಿಡುಗಡೆ ಹೊಂದಿದ್ದಾರೆ. 38 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ.
ಬೆಳಗಾವಿ: ಬೆಳಗಾವಿಯಲ್ಲಿ ಸೋಂಕಿತರ ಪ್ರಮಾಣ 18 ಇದ್ದು, ಸದ್ಯ ಇದು ಕರ್ನಾಟಕದಲ್ಲಿ ಅತಿ ಹೆಚ್ಚು ಸೋಂಕು ಹೊಂದಿರುವ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದೆ. ಇದುವರೆಗೆ ಒಬ್ಬರೂ ಆಸ್ಪತ್ರೆಯಿಂದ ಬಿಡುಗಡೆ ಹೊಂದಿಲ್ಲದ ಕಾರಣ, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ.
ಕಲಬುರಗಿ: ಕರೊನಾ ಸೋಂಕಿನಿಂದ ದೇಶದ ಮೊದಲ ಬಲಿ ಪಡೆದ ಊರು ಎಂದು ಎನಿಸಿಕೊಂಡಿರುವ ಕಲಬುರಗಿಯಲ್ಲಿ ಸದ್ಯದವರೆಗೆ 16 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಮಹಾಮಾರಿ ಕರೊನಾ ಮೂರು ಜೀವವನ್ನು ಪಡೆದಿದೆ.
ಬೀದರ್‌: ಬೀದರ್‌ನಲ್ಲಿ 13 ಸೋಂಕು ಪ್ರಕರಣ ಪತ್ತೆಯಾಗಿದ್ದು, ಎಲ್ಲರೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಯಾರೊಬ್ಬರೂ ಆಸ್ಪತ್ರೆಯಿಂದ ಬಿಡುಗಡೆಯಾಗಿಲ್ಲ, ಇಲ್ಲಿ ಯಾವುದೇ ಸಾವು ಸಂಭವಿಸಿಲ್ಲ.
ದಕ್ಷಿಣ ಕನ್ನಡ: 12 ಸೋಂಕಿತರನ್ನು ಒಳಗೊಂಡಿರುವ ದಕ್ಷಿಣ ಕನ್ನಡದಲ್ಲಿ ಸದ್ಯ 8 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಇಲ್ಲಿ ಯಾರನ್ನೂ ಬಲಿ ಪಡೆದಿಲ್ಲ.
ಬಾಗಲಕೋಟೆ: ಬಾಗಲಕೋಟೆಯಲ್ಲಿ 12 ಮಂದಿ ಸೋಂಕಿತರು ಇದುವರೆಗೆ ಪತ್ತೆಯಾಗಿದ್ದು, ಆ ಪೈಕಿ 11 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಒಬ್ಬರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದರೆ, ಸದ್ಯದ ಮಟ್ಟಿಗೆ ಬಾಗಲಕೋಟೆ ಸೋಂಕುಮುಕ್ತ ಪ್ರದೇಶಗಳ ಪಟ್ಟಿಗೆ ಸೇರಲಿದೆ.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ 9 ಕರೊನಾ ಸೋಂಕು ಪ್ರಕರಣ ಪತ್ತೆಯಾಗಿದ್ದು ಆರು ಮಂದಿ ಬಿಡುಗಡೆ ಹೊಂದಿದ್ದು, ಮೂವರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾ ಸೋಂಕಿನಿಂದ ಯಾರೂ ಮೃತಪಟ್ಟಿಲ್ಲ.
ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ, ಇಬ್ಬರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಸದ್ಯ ಏಳು ಮಂದಿ ವಿವಿಧೆಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಕರೊನಾ ಸೋಂಕು ಯಾರನ್ನೂ ಬಲಿ ಪಡೆದಿಲ್ಲ.
ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಎಂಟು ಕರೊನಾ ಪ್ರಕರಣ ಪತ್ತೆಯಾಗಿದ್ದೂ ಈ ಎಂಟೂ ಮಂದಿ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಯಾರೊಬ್ಬರೂ ಆಸ್ಪತ್ರೆಯಿಂದ ಬಿಡುಗಡೆಯಾಗಿಲ್ಲ. ಕರೊನಾ ಸೋಂಕಿನಿಂದ ಮಂಡ್ಯ ಜಿಲ್ಲೆಯಲ್ಲಿ ಇದುವರೆಗೆ ಯಾರೂ ಮೃತಪಟ್ಟಿಲ್ಲ.
ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಆರು ಕರೊನಾ ಪ್ರಕರಣ ಪತ್ತೆಯಾಗಿದ್ದೂ ಈ ಆರೂ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಯಾರೊಬ್ಬರೂ ಆಸ್ಪತ್ರೆಯಿಂದ ಬಿಡುಗಡೆಯಾಗಿಲ್ಲ. ಕರೊನಾ ಸೋಂಕಿನಿಂದ ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ ಯಾರೂ ಮೃತಪಟ್ಟಿಲ್ಲ.
ಧಾರವಾಡ:ಧಾರವಾಡ ಜಿಲ್ಲೆಯಲ್ಲಿ ಆರು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರು ಮಾತ್ರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮಿಕ್ಕ 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಸೋಂಕಿಗೆ ಇಲ್ಲಿ ಯಾರೂ ಬಲಿಯಾಗಿಲ್ಲ.
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಒಟ್ಟು 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಬ್ಬರು ಮೃತಪಟ್ಟಿದ್ದು, ಉಳಿದ ಆರು ಮಂದಿ ಚಿಕತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಯಾರೊಬ್ಬರೂ ಆಸ್ಪತ್ರೆಯಿಂದ ಬಿಡುಗಡೆಯಾಗಿಲ್ಲ.
ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಐದು ಕರೊನಾ ಸೋಂಕು ಪತ್ತೆಯಾಗಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಆಸ್ಪತ್ರೆಯಿಂದ ಇಲ್ಲಿ ಯಾರೂ ಬಿಡುಗಡೆಯಾಗಿಲ್ಲ. ಕರೊನಾ ಮಾರಿ ಇಲ್ಲಿ ಯಾರನ್ನೂ ಬಲಿ ಪಡೆದಿಲ್ಲ.
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮೂರು ಸೋಂಕು ಪ್ರಕರಣ ಪತ್ತೆಯಾಗಿದ್ದು ಒಬ್ಬರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಇಲ್ಲಿ ಕರೊನಾ ಯಾರನ್ನೂ ಬಲಿ ಪಡೆದಿಲ್ಲ.

ಬಳಸಿ ಬಿಸಾಡಿದ ಮಾಸ್ಕ್ ಗಳನ್ನೇ ಆಯ್ದು ತೊಳೆದು ಇಸ್ತ್ರಿ ಮಾಡಿ ಮಾರುತ್ತಿದ್ದ ಖದೀಮರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + four =
Remember me
