ನವದೆಹಲಿ:ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕರೊನಾ ವೈರಸ್​ನ ಹೊಸ ರೂಪಾಂತರಿಯನ್ನು ಬಿ.1.1.529 ಎಂದು ಹೆಸರಿಸಲಾಗಿದೆ. ಇದು ಬಹಳ ಅಪರೂಪದ ಹಲವು ರೂಪಾಂತರಿಗಳ ಗುಚ್ಛವಾಗಿದ್ದು ಹೆಚ್ಚು ವೇಗವಾಗಿ ಹರಡಬಲ್ಲದು. ಹೊಸ ಪ್ರಭೇದವು ಹೊಸ ರೂಪಾಂತರಿಗಳ ಗುಂಪನ್ನು ಹೊಂದಿದೆ ಎಂದು ದಕ್ಷಿಣ ಆಫ್ರಿಕಾದ ಜೆನೊಮಿಕ್ ನಿಗಾ ಜಾಲದ ಟ್ಯೂಲಿಯೋ ಡೆ ಒಲಿವೆರಾ ಹೇಳಿದ್ದಾರೆ. ಇದು, ದೇಶದಲ್ಲಿ ಹೊಸ ಪ್ರಭೇದ ಹರಡುತ್ತಿರುವುದನ್ನು ಪತ್ತೆ ಮಾಡಿದ ಜಾಲವಾಗಿದೆ.
ಕರೊನಾ ವೈರಸ್​ನ ಹೊಸ ಪ್ರಭೇದದ ಮೇಲೆ ನಿಗಾ ಇಟ್ಟಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ), ಇದರ ಬಗ್ಗೆ ರ್ಚಚಿಸಲು ವಿಶೇಷ ಸಭೆ ಆಯೋಜಿಸಿದೆ. ಇದು ‘ಅಸಕ್ತಿದಾಯಕ ಪ್ರಭೇದ’ವೋ (ವೇರಿಯಂಟ್ ಆಫ್ ಇಂಟರೆಸ್ಟ್- ವಿಒಐ) ಅಥವಾ ‘ಕಳವಳಕಾರಿ ಪ್ರಭೇದ’ವೋ (ವೇರಿಯಂಟ್ ಆಫ್ ಕನ್ಸರ್ನ್-ವಿಒಸಿ) ಎನ್ನುವುದನ್ನು ಸಭೆ ವಿಶೇಷವಾಗಿ ರ್ಚಚಿಸಲಿದೆ.
32 ರೂಪಾಂತರಿಗಳು:ಬಿ.1.1.529 ಪ್ರಭೇದದಲ್ಲಿ, ವೈರಸ್​ನ ಭಾಗವಾದ ಸ್ಪೈಕ್ ಪ್ರೊಟೀನ್​ನಲ್ಲಿ 32 ರೂಪಾಂತರಿಗಳು ಇವೆ ಎಂದು ಹೇಳಲಾಗಿದೆ. ಕೋವಿಡ್ ವಿರುದ್ಧ ರೋಗನಿರೋಧಕತೆಶಕ್ತಿ (ಇಮ್ಯುನಿಟಿ) ಸೃಷ್ಟಿಸಲು ಬಹುತೇಕ ವ್ಯಾಕ್ಸಿನ್​ಗಳು ಸ್ಪೈಕ್ ಪ್ರೊಟೀನ್ ಬಳಸುತ್ತವೆ. ಸ್ಪೈಕ್ ಪ್ರೊಟೀನ್​ನಲ್ಲಾಗುವ ರೂಪಾಂತರಗಳು ಕೋಶದ ಸೋಂಕು ಹಾಗೂ ಹರಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಲ್ಲದು. ಅಲ್ಲದೆ ರೋಗನಿರೋಧಕ ಕೋಶಗಳು ವೈರಾಣು ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಕುಂದಿಸಬಹುದಾಗಿದೆ.
ವಿದ್ಯಾರ್ಥಿಗಳ ಸಭೆಗಳಿಂದ ಹರಡಿತೇ?:ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ಮತ್ತು ಅದರ ಸುತ್ತಮುತ್ತಲಿನ ಥವಾನೆ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಬಿ.1.1.529 ಪ್ರಭೇದ ಮೊದಲಿಗೆ ಪತ್ತೆಯಾಯಿತು. ಗೌಟೆಂಗ್ ಪ್ರದೇಶದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಸಭೆಗಳಿಂದಾಗಿ ಈ ಪ್ರಭೇದ ವ್ಯಾಪಕವಾಗಿ ಹರಡಿದೆ ಎಂದು ನಂಬಲಾಗಿದೆ. ಸೋಂಕು ಪ್ರಕರಣಗಳಲ್ಲಿ ಏರಿಕೆ ಕಂಡುಬಂದಾಗ ವಿಜ್ಞಾನಿಗಳು ಜಿನೋಮ್ ಸೀಕ್ವೆನ್ಸಿಂಗ್ ನಡೆಸಿದ್ದರು. ಆಗ ಹೊಸ ರೂಪಾಂತರಿ ಪತ್ತೆಯಾಗಿದೆ.
ಹೊಸ ಪ್ರಭೇದದಿಂದ ‘ಗಂಭೀರ ಕಳವಳ’ ಉಂಟಾಗಿದ್ದು ಸೋಂಕಿನ ಅತಿಯಾದ ಏರಿಕೆಗೆ ಅದುವೇ ಕಾರಣ ಎಂದು ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಾಹ್ಲಾ ಹೇಳಿದ್ದಾರೆ. ಬೋಟ್ಸ್​ವಾನಾ ಮತ್ತು ಹಾಂಗ್​ಕಾಂಗ್​ನಲ್ಲೂ ಹೊಸ ಪ್ರಭೇದ ಪತ್ತೆಯಾಗಿದೆ. ಅವರೆಲ್ಲ ದಕ್ಷಿಣ ಆಫ್ರಿಕಾದಿಂದ ಅಲ್ಲಿಗೆ ತೆರಳಿದವರಾಗಿದ್ದಾರೆ. ಹೊಸ ಪ್ರಭೇದವು ಹಿಂದಿನ ರೂಪಾಂತರಿಗಳಿಗಿಂತ ಹೆಚ್ಚು ಅಪಾಯಕಾರಿಯೇ ಮತ್ತು ಹೆಚ್ಚು ಪ್ರಮಾಣದಲ್ಲಿ ಹರಡುತ್ತದೆಯೇ ಎನ್ನುವುದನ್ನು ತಿಳಿಯಲು ವಿಜ್ಞಾನಿಗಳು ಇನ್ನೂ ಸಂಶೋಧನೆ ನಡೆಸುತ್ತಿದ್ದಾರೆ.
ಹಠಾತ್ ಏರಿಕೆ:ದಕ್ಷಿಣ ಆಫ್ರಿಕಾದಲ್ಲಿ ಕೆಲ ವಾರಗಳ ಹಿಂದಿನ ವರೆಗೆ ಕೇವಲ 200 ಇರುತ್ತಿದ್ದ ದೈನಿಕ ಸೋಂಕು ಪ್ರಕರಣಗಳು ಹಠಾತ್ತನೆ ಹೆಚ್ಚಾಗುತ್ತಿದೆ. ಬುಧವಾರ 1,200ಕ್ಕೂ ಅಧಿಕ ಹಾಗೂ ಗುರುವಾರ 2,465 ಕೇಸ್​ಗಳು ಪತ್ತೆಯಾಗಿವೆ.
ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ:ಆತಂಕ ಸೃಷ್ಟಿಸಿರುವ ಕರೊನಾ ವೈರಸ್​ನ ಹೊಸ ಪ್ರಭೇದ ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ. ಆದರೂ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿರುವುದರಿಂದ ದಕ್ಷಿಣ ಆಫ್ರಿಕಾ ಮತ್ತು ಆಫ್ರಿಕಾದ ಇತರ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಲು ಕ್ರಮಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗುರುವಾರ ಸುತ್ತೋಲೆ ಹೊರಡಿಸಿದ್ದಾರೆ. ಹೊಸ ಪ್ರಭೇದವು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಿದೆ ಎಂದು ಭೂಷಣ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ, ಬೋಟ್ಸ್​ವಾನಾ ಮತ್ತು ಸಿಂಗಾಪುರಗಳಿಂದ ಭಾರತಕ್ಕೆ ಬರುವ ವಿಮಾನ ಪ್ರಯಾಣಿಕರನ್ನು ಕಟ್ಟುನಿಟ್ಟಿನ ಸ್ಕ್ರೀನಿಂಗ್​ಗೆ ಒಳಪಡಿಸಲಾಗುತ್ತಿದೆ.
ವಿಮಾನ ಸಂಚಾರ ಶುರು:ಭಾರತಕ್ಕೆ ಬರುವ, ದೇಶದಿಂದ ಹೊರಹೋಗುವ ನಿಗದಿತ (ಷೆಡ್ಯೂಲ್ಡ್) ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಡಿ.15ರಂದು ಪುನರಾರಂಭ ವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಪುರಾವೆಯಿಲ್ಲ:ಹೊಸ ಪ್ರಭೇದವು ಕರೊನಾದ ಹೆಚ್ಚು ತೀವ್ರ ಹಾಗೂ ಅಸಹಜ ಕಾಯಿಲೆಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಯಾವುದೇ ಸುಳಿವುಗಳು ಇನ್ನೂ ಲಭ್ಯವಾಗಿಲ್ಲ ಎಂದು ದಕ್ಷಿಣ ಆಫ್ರಿಕಾದ ತಜ್ಞರು ಹೇಳಿದ್ದಾರೆ. ಇತರ ರೂಪಾಂತರಿ ಗಳಿಂದ ಸೋಂಕಿತರಾದವರಲ್ಲಿ ರೋಗ ಲಕ್ಷಣ ಕಂಡುಬಂದಿರಲಿಲ್ಲ ಎನ್ನುವುದನ್ನೂ ಅವರು ಗಮನಿಸಿದ್ದಾರೆ.
ಪ್ರಯಾಣ ನಿರ್ಬಂಧ:ಆಫ್ರಿಕಾ ಖಂಡದ ಆರು ದೇಶಗಳಿಂದ ಬರುವ ವಿಮಾನಗಳ ಮೇಲೆ ಬ್ರಿಟನ್, ಜರ್ಮನಿ ಮತ್ತು ಇಟಲಿ ತಾತ್ಕಾಲಿಕ ನಿಷೇಧ ವಿಧಿಸಿವೆ. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದರೆ ಗಡಿ ನಿಯಮಗಳನ್ನು ಬಿಗಿಗೊಳಿಸಲಾಗುವುದೆಂದು ಆಸ್ಟ್ರೇಲಿಯಾ ಹೇಳಿದೆ. ದಕ್ಷಿಣ ಆಫ್ರಿಕಾ ವಿಮಾನಗಳನ್ನು ನಿರ್ಬಂಧಿಸಲು ಐರೋಪ್ಯ ಒಕ್ಕೂಟ ಕೂಡ ಚಿಂತನೆ ನಡೆಸಿದೆ.
ಜರ್ಮನಿಯಲ್ಲಿ ದಾಖಲೆಯ ಕೇಸ್:ಕರೊನಾ ಸೋಂಕಿನಿಂದ ತತ್ತರಿಸುತ್ತಿರುವ ಜರ್ಮನಿಯಲ್ಲಿ ಶುಕ್ರವಾರ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ದಾಖಲೆಯ 76,414 ದೈನಿಕ ಕೇಸ್​ಗಳು ದೃಢಪಟ್ಟಿವೆ. ಸಾಂಕ್ರಾಮಿಕತೆ ಸ್ಪೋಟಗೊಂಡಾಗಿನಿಂದ ಜರ್ಮನಿಯಲ್ಲಿ ಇದು ಅತಿ ಹೆಚ್ಚಿನ ದೈನಿಕ ಪ್ರಕರಣವಾಗಿದೆ ಎಂದು ರಾಬರ್ಟ್ ಕೊಚ್ ಸಂಸ್ಥೆ ಹೇಳಿದೆ.
ಅಧಿಕ ಏಡ್ಸ್ ಪೀಡಿತರ ದೇಶ:ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ಪ್ರಭೇದದ ಮೂಲದ ಬಗ್ಗೆ ಇನ್ನೂ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಚಿಕಿತ್ಸೆ ಪಡೆಯದ ಒಬ್ಬ ಎಚ್​ಐವಿ/ಏಡ್ಸ್ ರೋಗಿಯಿಂದ ಈ ವೈರಸ್ ಹುಟ್ಟಿಕೊಂಡಿರಬಹುದು ಎಂದು ಲಂಡನ್​ನ ಯುಸಿಎಲ್ ಜೆನೆಟಿಕ್ಸ್ ಇನ್​ಸ್ಟಿಟ್ಯೂಟ್​ನ ಒಬ್ಬ ವಿಜ್ಞಾನಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಜಗತ್ತಿನಲ್ಲೇ ಅತ್ಯಧಿಕ 82 ಲಕ್ಷ ಎಚ್​ಐವಿ ಪೀಡಿತರಿದ್ದಾರೆ. 2020ರಲ್ಲಿ ದಕ್ಷಿಣ ಆಫ್ರಿಕಾದಲ್ಲೇ ಪತ್ತೆಯಾದ ಬೀಟಾ ಪ್ರಭೇದ ಕೂಡ ಎಚ್​ಐವಿ-ಸೋಂಕಿತ ವ್ಯಕ್ತಿಯಿಂದ ಬಂದಿರಬಹುದು ಎಂಬ ಅನುಮಾನವಿದೆ.
ಮತ್ತೆ ಶುರುವಾಯಿತಾ ಕರೊನಾತಂಕ?: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ, 402 ಮಂದಿಯಲ್ಲಿ ಸೋಂಕು
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine − 5 =
Remember me
