|ರಮೇಶ ದೊಡ್ಡಪುರ ಬೆಂಗಳೂರು
ದೇಶದ ಮಹಾನಗರಗಳಲ್ಲಿ ಜನರನ್ನು ಹೈರಾಣಾಗಿಸಿರುವ ಕರೊನಾ ಎರಡನೇ ಅಲೆ ಸದ್ಯದಲ್ಲೇ ಗ್ರಾಮೀಣ ಭಾಗದಲ್ಲಿ ಕಾಳ್ಗಿಚ್ಚಿನಂತೆ ಹರಡಲಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಸದ್ಯ ಕೆಲ ಗ್ರಾಮಗಳಲ್ಲಿ ದೊಡ್ಡ ಪ್ರಮಾಣದ ಪ್ರಕರಣಗಳು ವರದಿಯಾಗುತ್ತಿದ್ದು, ಉಳಿದೆಡೆ ಜನಜೀವನ ಸಾಮಾನ್ಯವಾಗಿದೆ. ಸೋಂಕು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡದಿರುವುದು, ನಗರ ಪ್ರದೇಶಗಳಿಂದ ವಲಸೆ ಹೋದವರು ಸೇರಿ ಅನೇಕ ಕಾರಣಗಳಿಂದ 2-3 ವಾರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಊಹಿಸಲಾಗದಷ್ಟು ಸೋಂಕು ಏರುವ ಅಪಾಯವಿದೆ ಎಂದು ಕೇಂದ್ರ ಹೇಳಿದೆ.
ಉತ್ತರ ಪ್ರದೇಶ, ರಾಜಸ್ಥಾನಗಳ ಗ್ರಾಮೀಣ ಭಾಗದಲ್ಲಿ ತಲೆದೋರಿರುವ ವ್ಯಾಕುಲದ ಸ್ಥಿತಿ ಕರ್ನಾಟಕದಲ್ಲೂ ಎದುರಾಗುವ ಆತಂಕವಿದೆ. ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆ ಹೊಂದಿರುವ ನಗರ ಪ್ರದೇಶಗಳಲ್ಲೇ ಪರಿಸ್ಥಿತಿ ಕೈಮೀರಿದೆ. ಹೀಗಿರುವಾಗ ಕನಿಷ್ಠ ಮಟ್ಟದ ವೈದ್ಯಕೀಯ ವ್ಯವಸ್ಥೆ ಹೊಂದಿರುವ ಗ್ರಾಮೀಣ ಪ್ರದೇಶದಲ್ಲಿ ಸೋಂಕನ್ನು ಎದುರಿಸುವ ಸವಾಲು ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಎಚ್ಚರಿಕೆ ರವಾನಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕರೊನಾ ಲಸಿಕೆ, ಚಿಕಿತ್ಸೆ ಕುರಿತ ಅನೇಕ ಸುಳ್ಳು ಸುದ್ದಿಗಳು, ಜನರ ಉಡಾಫೆ ವರ್ತನೆ ಕುರಿತೂ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಸೋಂಕನ್ನು ಎದುರಿಸುವಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ನಾಯಕತ್ವ ವಹಿಸಿಕೊಳ್ಳಬೇಕು. ಕರೊನಾ ಹರಡುವ ಬಗೆ ಹಾಗೂ ತಡೆಗಟ್ಟುವಿಕೆ ಕುರಿತು ವೈದ್ಯರು, ಪಂಚಾಯಿತಿ ಸದಸ್ಯರು, ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರನ್ನು ವ್ಯಾಪಕವಾಗಿ ಬಳಕೆ ಮಾಡಿಕೊಂಡು ಅರಿವು ಮೂಡಿಸಬೇಕು. ಅವರಿಗೆಲ್ಲ ಆಕ್ಸಿಮೀಟರ್, ಎನ್-95 ಮಾಸ್ಕ್, ಇನ್​ಫ್ರಾರೆಡ್ ಥರ್ಮಲ್ ಸ್ಕಾ್ಯನರ್​ಗಳು, ಸ್ಯಾನಿಟೈಸರ್​ಗಳನ್ನು ಒದಗಿಸಬೇಕು. ಗ್ರಾಮೀಣ ಜನರಿಗೆ ಲಭ್ಯವಿರುವ ಆಸ್ಪತ್ರೆ, ವೈದ್ಯರು, ಪರೀಕ್ಷೆ-ಲಸಿಕಾ ಕೇಂದ್ರಗಳು,ಹಾಸಿಗೆ ಲಭ್ಯತೆಯನ್ನು ಕ್ಷಣಕ್ಷಣದಲ್ಲಿ ಐಟಿ ಮೂಲಸೌಕರ್ಯ ಬಳಕೆ ಮಾಡಿಕೊಂಡು ಅಪ್​ಡೇಟ್ ಮಾಡಬೇಕು ಎಂದು ತಿಳಿಸಿದೆ.
ಜಿಲ್ಲೆಯೊಂದಿಗೆ ಸಂಪರ್ಕಿಸಿ: ಗ್ರಾಮೀಣಡಿಪ್ರದೇಶಗಳಲ್ಲಿ ಗಂಭೀರ ಪ್ರಕರಣಗಳು ವರದಿಯಾದ ಕೂಡಲೇ ತುರ್ತು ಚಿಕಿತ್ಸೆ ಒದಗಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ ವೈದ್ಯಕೀಯ ವ್ಯವಸ್ಥೆಗಳನ್ನು ಸಜ್ಜುಗೊಳಿಸಬೇಕು. ಆಂಬುಲೆನ್ಸ್, ಅತ್ಯಾಧುನಿಕ ಪರೀಕ್ಷಾ ಮತ್ತು ಚಿಕಿತ್ಸಾ ಕೇಂದ್ರಗಳು ಹಾಗೂ ಮಲ್ಟಿ ಸ್ಪೆಷಾಲಿಟಿ ವೈದ್ಯಕೀಯ ಕೇಂದ್ರಗಳನ್ನು ಅತಿ ಕಡಿಮೆ ಸಮಯದಲ್ಲಿ ಒದಗಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದೆ.
ಸಮನ್ವಯದ ಮಂತ್ರ: ಕರೊನಾ ಎದುರಿಸಲು ಈಗಾಗಲೇ ನಗರ ಪ್ರದೇಶದ ಐದಾರು ವಿಭಾಗಗಳಲ್ಲೇ ಸಮನ್ವಯ ಇಲ್ಲದೆ ಸಮಸ್ಯೆಯಾಗಿದೆ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಆರೋಗ್ಯ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಶಿಕ್ಷಣ ಇಲಾಖೆಗಳು ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಪರಸ್ಪರ ಸಮನ್ವಯದೊಂದಿಗೆ ಕೆಲಸ ಮಾಡಬೇಕು ಎಂದು ತಿಳಿಸಿದೆ.
ನಗರದಿಂದ ಬಂದವರಿಗೆ ಕ್ವಾರಂಟೈನ್: ಗುಣಲಕ್ಷಣಗಳಿಲ್ಲದ ಕರೊನಾ ಸೋಂಕಿತರ ಸಂಖ್ಯೆಯೇ ಹೆಚ್ಚಾಗಿದ್ದು, ಅವರಿಗೆ ಆಸ್ಪತ್ರೆ ಹಾಸಿಗೆಗಳನ್ನು ಒದಗಿಸಲು ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅನೇಕ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಮಾಡಿದೆ. ಸಾಧ್ಯವಿರುವೆಡೆ ಮನೆಗಳನ್ನೆ ಹೋಮ್ ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಬೇಕು. ನಗರ ಸೇರಿ ವಿವಿಧೆಡೆಯಿಂದ ಹಳ್ಳಿಗಳಿಗೆ ಮರಳಿರುವ ಕಾರ್ವಿುಕರಿಗೆ ಅಗತ್ಯವಿದ್ದಲ್ಲಿ ಕ್ವಾರಂಟೈನ್ ಅಥವಾ ಐಸೋಲೇಷನ್ ಕೇಂದ್ರಗಳನ್ನು ತೆರೆಯಬೇಕು. ಆರೋಗ್ಯ ಇಲಾಖೆಯನ್ನು ಸಂರ್ಪಸಿ, ಹೆಚ್ಚಿನ ಜನರಿಗೆ ಲಸಿಕೆ ಒದಗಿಸಲು ಶಿಬಿರಗಳನ್ನು ಗ್ರಾಮ ಪಂಚಾಯಿತಿಗಳೇ ಏರ್ಪಡಿಸಬೇಕು ಎಂದು ಸೂಚನೆ ನೀಡಲಾಗಿದೆ.
ಸೋಂಕು ಪ್ರಸರಣ ಉತ್ತರ ಕನ್ನಡ ಶರವೇಗ!: ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯ ದಲ್ಲೇ ಅತಿ ವೇಗವಾಗಿ ಸೋಂಕು ಹರಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ಹೇಳಿದ್ದು, ಮೇ 5ರಿಂದ 11ರವರೆಗೆ ಜಿಲ್ಲೆಯ ಪಾಸಿಟಿವಿಸಿ ಪ್ರಮಾಣ ಶೇ.46.6ಕ್ಕೆ ಏರಿಕೆಯಾಗಿದೆ. ಪ್ರತಿದಿನ 1700 ಟೆಸ್ಟ್ ನಡೆಸಲಾಗುತ್ತಿದ್ದು, 800ರಿಂದ 900 ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ.
((ಕೋಟ್))
ಮುಂದಿನ 2-3 ವಾರದಲ್ಲಿ ಬೆಂಗಳೂರಿನಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಬರಲಿದೆ. ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಲಿದೆ. ಮುಂದಿನ ಸ್ಥಿತಿಯನ್ನು ಎದುರಿಸಲು ಸಜ್ಜಾಗುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗ್ರಾಮೀಣ ಪ್ರದೇಶದಲ್ಲೂ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಬೇಕಾಗಬಹುದು. ತಾಲ್ಲೂಕು ಆಸ್ಪತ್ರೆಗಳಲ್ಲಿ ಸರಾಸರಿ 6 ವೆಂಟಿಲೇಟರ್ ಸಿದ್ಧಪಡಿಸಿಕೊಳ್ಳಲು ತಿಳಿಸಲಾಗಿದೆ.
| ಡಾ. ಕೆ. ಸುಧಾಕರ್ ಆರೋಗ್ಯ ಸಚಿವ
475 ಕೋಟಿ ರೂ. ಮುಂಗಡ ಬಿಡುಗಡೆ
ಗ್ರಾಮೀಣ ಪ್ರದೇಶದಲ್ಲಿ ಕರೊನಾ ಸೋಂಕು ಹೆಚ್ಚಳವಾಗುವ ಮುನ್ಸೂಚನೆಯನ್ನು ತಜ್ಞರ ತಂಡ ಕೇಂದ್ರ ಸರ್ಕಾರಕ್ಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಆಡಳಿತ ಗಳಿಗೆ ಹಣಕಾಸಿನ ಮುಗ್ಗಟ್ಟು ಎದುರಾ ಗುವ ಸಾಧ್ಯತೆ ಇದೆ. 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಗ್ರಾಮೀಣ ಪ್ರದೇಶದ ಮೂರು ಹಂತದ ಆಡಳಿತಗಳಿಗೆ (ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ) ಸಮಗ್ರ ಅನುದಾನದ ಮೊದಲ ಕಂತನ್ನು 2021ರ ಜೂನ್​ನಲ್ಲಿ ಬಿಡುಗಡೆ ಮಾಡಬೇಕಿತ್ತು. ಆದರೆ ಕರೊನಾ ಸೋಂಕನ್ನು ಎದುರಿಸುವ ಸಲುವಾಗಿ ಈ ಹಣವನ್ನು ಮುಂಗಡವಾಗಿ ಮೇ 8ರಂದೇ ಬಿಡುಗಡೆ ಮಾಡಲಾಗಿದೆ. ದೇಶದ 25 ರಾಜ್ಯಗಳಿಗೆ ಒಟ್ಟು 8,923.8 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ 475.4 ಕೋಟಿ ರೂ. ಈಗಾಗಲೆ ನೀಡಲಾಗಿದೆ. ಜತೆಗೆ, ಈ ಹಣವನ್ನು ಬಳಕೆ ಮಾಡಲು, ಕೆಲವು ಲೆಕ್ಕಪತ್ರ ಖಾತೆಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಪ್ರದರ್ಶಿಸಬೇಕು ಎಂಬ ನಿಯಮವನ್ನು ಮೊದಲ ಕಂತಿಗೆ ವಿನಾಯಿತಿ ನೀಡಲಾಗಿದೆ. ಕರೊನಾ ಸೋಂಕನ್ನು ಎದುರಿಸಲು ಈ ಹಣವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ.
*********************************
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 5 =
Remember me
