ನವದೆಹಲಿ:ಭಾರತದಲ್ಲಿ ಇದೀಗ 11 ಲಕ್ಷಕ್ಕೂ ಹೆಚ್ಚು ಜನರು ಕರೊನಾ ವೈರಾಣು ಸೋಂಕಿಗೆ ತುತ್ತಾಗಿದ್ದಾರೆ. ಪ್ರತಿದಿನವೂ ದಾಖಲೆ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಿದ್ದರೂ ಕೇಂದ್ರ ಸರ್ಕಾರ ಮಾತ್ರ ಸೋಂಕು ಸಾಮುದಾಯಿಕವಾಗಿ ಹಬ್ಬುತ್ತಿಲ್ಲ ಎಂದೇ ಹೇಳುತ್ತಿದೆ. ಸೋಂಕು ಸಾಮುದಾಯಕವಾಗಿ ಹಬ್ಬುತ್ತಿದೆ ಎಂಬುದನ್ನು ಸತ್ಯವನ್ನು ಒಪ್ಪಿಕೊಂಡರೆ ಪಿಡುಗನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಆರೋಪಕ್ಕೆ ತುತ್ತಾಗುವ ಭೀತಿ ಬಹುಶಃ ಸರ್ಕಾರವನ್ನು ಕಾಡುತ್ತಿರಬಹುದು ಎಂದು ವೈರಾಣುಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಲಕ್ಷದ್ವೀಪವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರೊನಾ ವೈರಾಣು ಸೋಂಕು ಹಬ್ಬಿದೆ. ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪ ಸಮೂಹದಲ್ಲಿ ಕೂಡ ದೇಶದ ಅತಿ ಕನಿಷ್ಠ ಎಂದರೆ 150 ಸೋಂಕಿತರು ಇದ್ದಾರೆ. ಹೀಗಿದ್ದರೂ ಸರ್ಕಾರ ಮಾತ್ರ ಕರೊನಾ ವೈರಾಣು ಸೋಂಕು ಸಾಮುದಾಯಿಕವಾಗಿ ಹಬ್ಬುತ್ತಿಲ್ಲ ಎಂದೇ ಪ್ರತಿಪಾದಿಸುತ್ತಿದೆ. ಆದರೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ವೈರಾಣುಶಾಸ್ತ್ರಜ್ಞರ ವಾದವಾಗಿದೆ.
ಸಾಮುದಾಯಿಕ ಹರಡುವಿಕೆ ಎಂದರೆ, ಸೋಂಕು ಮನುಷ್ಯನ ಸಮುದಾಯದೆಲ್ಲೆಡೆ ಹಬ್ಬಿದೆ ಎಂದೇ ಅರ್ಥ. ಅಂದರೆ ಸೋಂಕು ಯಾರಿಂದ ಯಾರಿಗೆಲ್ಲ ಹರಡುತ್ತಿದೆ ಎಂಬುದರ ಮೂಲವನ್ನು ಪತ್ತೆ ಮಾಡುವುದು ಕಷ್ಟವಾದರೂ ಅಸಾಧ್ಯವೇನಲ್ಲ. ಪಿಡುಗನ್ನು ತಡೆಗಟ್ಟುವಲ್ಲಿ ಸೋಂಕಿನ ಸರಪಳಿಯ ಮೂಲವನ್ನು ಪತ್ತೆ ಮಾಡುವುದು ಮುಖ್ಯವಾಗುತ್ತದೆ. ಸದ್ಯಕ್ಕೆ ಇದೇ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದೆ. ಸಂಪರ್ಕದ ಪತ್ತೆ, ಗುರುತಿಸುವಿಕೆ, ಪರೀಕ್ಷೆ ಮತ್ತು ಶಂಕಿತ ಸೋಂಕಿತರನ್ನು ಪ್ರತ್ಯೇಕವಾಗಿರಿಸುವುದು ಸೋಂಕಿನ ಸರಪಳಿಯನ್ನು ಪತ್ತೆ ಮಾಡುವ ಕ್ರಮವಾಗಿದೆ.
ಇದನ್ನೂ ಓದಿ:ಈ ಮಹಿಳೆ ಬರೋಬ್ಬರಿ 130 ದಿನ ಕರೊನಾ ವಿರುದ್ಧ ಹೋರಾಡಿದರು…; ಕೋಮಾಕ್ಕೆ ಜಾರಿ ಬದುಕಿ ಬಂದರು
ಆರಂಭಿಕ ಹಂತದಲ್ಲಿ ವಿದೇಶದಿಂದ ಬಂದವರು ಈ ಸೋಂಕನ್ನು ದೇಶದೊಳಗೆ ತಂದರು. ಹಾಗಾಗಿ ಪ್ರತಿಯೊಬ್ಬ ಸೋಂಕಿತರ ಪ್ರವಾಸದ ಹಿನ್ನೆಲೆ ಅಥವಾ ಅವರ ಸಂಪರ್ಕದ ಕುರಿತು ವೈದ್ಯರು ಕೇಳುತ್ತಿದ್ದರು. ಅಂದಿನ ಸಂದರ್ಭದಲ್ಲಿ ಸೋಂಕಿತರಿಗೆ ಯಾರಾದರೂ ವಿದೇಶ ಬಂದವರು ಇಲ್ಲವೇ ಅವರ ಪ್ರಾಥಮಿಕ ಅಥವಾ ದ್ವಿತೀಯ ಹಂತದ ಸಂಪರ್ಕಕ್ಕೆ ಬಂದವರಿಂದ ಸೋಂಕು ಹರಡಿದೆ ಎಂದು ಸುಲಭವಾಗಿ ನಿರ್ಣಯಿಸಲಾಗುತ್ತಿತ್ತು. ಆಗಲೂ ಕೂಡ ಸರ್ಕಾರ ಸೋಂಕು ಸಾಮುದಾಯಿಕವಾಗಿ ಹರಡುತ್ತಿಲ್ಲ ಎಂದೇ ಹೇಳುತ್ತಿತ್ತು. ತನ್ಮೂಲಕ ಸೋಂಕು ಹೆಚ್ಚಿನ ಜನರಿಗೆ ಹಬ್ಬಿಲ್ಲ ಎಂದು ದೇಶದ ಜನತೆಯನ್ನು ಸಮಾಧಾನಪಡಿಸಿ, ಆತಂಕಮುಕ್ತರಾಗಿ ಉಳಿಯುವಂತೆ ಮಾಡಲು ಯತ್ನಿಸುತ್ತಿತ್ತು.
ಆದರೆ ಈಗ ದೇಶದಲ್ಲಿ 11 ಲಕ್ಷ ಜನರಿಗೆ ಸೋಂಕು ತಗುಲಿದೆ. ಈಗಲೂ ಸೋಂಕು ಸಾಮುದಾಯಿಕವಾಗಿ ಹಬ್ಬಿಲ್ಲ ಎಂದು ಹೇಳುವುದು ಹಾಸ್ಯಾಸ್ಪದ ಎನಿಸುತ್ತದೆ. ಕಳೆದ ವಾರ ಆರೋಗ್ಯ ಸಚಿವಾಲಯವೇ ದೇಶದ ಶೇ.80 ಸೋಂಕಿತರು 49 ಜಿಲ್ಲೆಗಳಲ್ಲೇ ಇದ್ದಾರೆ ಎಂದು ಹೇಳಿತ್ತು. ಇದನ್ನು ಗಮನಿಸಿದಾಗ ಸೋಂಕು ಸಾಮುದಾಯಿಕವಾಗಿ ಹಬ್ಬುತ್ತಿಲ್ಲ ಎಂಬ ಸರ್ಕಾರದ ವಾದವೇ ನಿರರ್ಥಕವೆನಿಸುತ್ತದೆ ಎಂದು ವೈರಾಣುಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.ದೇಶದಲ್ಲಿ ಯಾವುದೇ ಜನಪ್ರಿಯ ವೈರಾಣುಶಾಸ್ತ್ರಜ್ಞರನ್ನು ಮಾತನಾಡಿಸಿ. ಸೋಂಕು ಸಾಮುದಾಯಿಕವಾಗಿ ಹಬ್ಬುತ್ತಿಲ್ಲ ಎಂಬ ಸರ್ಕಾರದ ವಾದವನ್ನು ತಳ್ಳಿ ಹಾಕುತ್ತಾರೆ. ಈ ಹಿಂದೆಯೂ ಅದನ್ನು ನಂಬಲಾಗುತ್ತಿರಲಿಲ್ಲ… ಈಗಲೂ ಅದನ್ನು ನಂಬಲಾಗುವುದಿಲ್ಲ ಎಂದು ಹೇಳುವುದಾಗಿ ಪುಣೆಯ ಭಾರತೀಯ ವಿಜ್ಞಾನ ಸಂಸ್ಥೆಯ ಶಿಕ್ಷಣ ಮತ್ತು ಸಂಶೋಧನಾ ವಿಭಾಗದ (ಐಐಎಸ್​ಇಆರ್​) ಪ್ರೊಫೆಸರ್​ ವಿನೀತಾ ಬಲ್​ ಹೇಳುತ್ತಾರೆ.
ನಮ್ಮ ತಂಡ ಕಚ್ಚಾ ಮಾಹಿತಿಯನ್ನು ವಿಶ್ಲೇಷಿಸುತ್ತಿದೆ. ಹಾಗೂ ಸೋಂಕು ಸಾಮುದಾಯಿಕವಾಗಿ ಹಬ್ಬುತ್ತಿದೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಇದೀಗ ಸೋಂಕು ಪತ್ತೆಯಾಗುತ್ತಿರುವ ನೂರಾರು ಪ್ರಕರಣಗಳಲ್ಲಿ ಅವುಗಳ ಮೂಲವೇ ಗೊತ್ತಾಗದಂತಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಹೇಳುವುದಾದರೆ ಕರೊನಾ ವೈರಾಣು ಸೋಂಕು ಸಾಮುದಾಯಿಕವಾಗಿ ಹಬ್ಬುತ್ತಿದೆ ಎಂದೇ ಹೇಳಬಹುದಾಗಿದೆ ಎಂದು ರಾಜ್ಯ ಸರ್ಕಾರವೊಂದಕ್ಕೆ ಕರೋನಾ ಪಿಡುಗು ತಡೆಗಟ್ಟುವ ಬಗ್ಗೆ ಸಲಹೆ ನೀಡುತ್ತಿರುವ ತಜ್ಞರೊಬ್ಬರು ತಿಳಿಸುತ್ತಾರೆ.
ಇದನ್ನೂ ಓದಿ:ಕರೊನಾ ನಿಯಂತ್ರಣಕ್ಕೆ ಟಾಸ್ಕ್‌ಫೋರ್ಸ್ ಚುರುಕು
ಪರಿಸ್ಥಿತಿ ಕೆಟ್ಟದಾಗಿಲ್ಲ:ಇಂಥ ವಿಷಯಗಳಲ್ಲಿ ಪ್ರಾಮಾಣಿಕತೆಯಿಂದ ವರ್ತಿಸುವುದು ತುಂಬಾ ಮುಖ್ಯವಾಗುತ್ತದೆ. ನಮ್ಮ ದೇಶದಲ್ಲಿ ಇದುವರೆಗೆ 11 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದಾರೆ ಎಂದರೆ ಅದರಲ್ಲಿ ಯಾರದ್ದೇ ತಪ್ಪಿಲ್ಲ. ದೇಶದ ವಿಸ್ತೀರ್ಣತೆ ಹಾಗೂ ಜನಸಂಖ್ಯೆಯನ್ನು ಗಮನಿಸಿದಾಗ ಈ ವಿಷಯದಲ್ಲಿ ದೇಶ ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದೆ ಎಂದು ಹೇಳುವಂತೆಯೂ ಇಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯೇ (ಐಸಿಎಂಆರ್​) ಗಂಭೀರವಾದ ಉಸಿರಾಟದ ಸಮಸ್ಯೆ ಇರುವವರ ಬಗ್ಗೆ ಸಮೀಕ್ಷೆ ನಡೆಸಿತ್ತು. ಅದರ ಪ್ರಕಾರ ಸಮೀಕ್ಷೆಗೆ ಒಳಪಟ್ಟ ಶೇ.40 ಜನರಿಗೆ ತಮಗೆ ಕರೋನಾ ಸೋಂಕು ಎಲ್ಲಿಂದ ಅಥವಾ ಯಾರಿಂದ ಹಬ್ಬಿತು ಎಂಬ ಸಂಗತಿಯೇ ಗೊತ್ತಿರಲಿಲ್ಲ. ಇದು ಸಾಮುದಾಯಿಕ ಹರುಡುವಿಕೆ ಅಲ್ಲದೆ ಮತ್ತೇನು ಎಂದು ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಸಂಶೋಧನೆಗಳಿಗೆ ಆರ್ಥಿಕ ನೆರವು ಒದಗಿಸುವ ವೆಲ್​ಕಂ ಟ್ರಸ್ಟ್​-ಎಬಿಟಿ ಅಲೈಯನ್ಸ್​ನ ಕಾರ್ಯಕಾರಿ ಮುಖ್ಯಸ್ಥ ಹಾಗೂ ವೈರಾಣುಶಾಸ್ತ್ರಜ್ಞ ಶಹೀದ್​ ಜಮೀಲ್​ ಪ್ರಶ್ನಿಸುತ್ತಾರೆ.
ಹಿಂದೇಟು ಏಕೆ?:ಕರೊನಾ ವೈರಾಣು ಸೋಂಕು ಸಾಮುದಾಯಿಕವಾಗಿ ಹರಡುತ್ತಿದೆ ಎಂಬ ಸಂಗತಿಯನ್ನು ಒಪ್ಪಿಕೊಂಡರೆ ಕಂಟೇನ್ಮೆಂಟ್​ ವಲಯಗಳು, ಕೆಂಪು ಅಥವಾ ಹಸಿರು ವಲಯಗಳು ಎಂಬ ಪದಗಳು ಹಾಗೂ ವ್ಯವಸ್ಥೆಯೇ ನಿರರ್ಥಕವೆನಿಸಿಕೊಂಡು ಬಿಡುತ್ತವೆ. ಸಾಮುದಾಯಿಕವಾಗಿ ಹಬ್ಬುತ್ತಿರುವಾದ ಇದೆಲ್ಲವನ್ನೂ ಪಾಲಿಸುವುದು ಅಗತ್ಯವೇ ಎಂದು ಜನರು ಪ್ರಶ್ನಿಸಲು ಆರಂಭಿಸುತ್ತಾರೆ. ಇಂತಹ ಮುಜುಗರದಿಂದ ಪಾರಾಗಲು ಸರ್ಕಾರ ಕೊರೊನಾ ವೈರಾಣು ಸೋಂಕು ಸಾಮುದಾಯಿಕವಾಗಿ ಹಬ್ಬುತ್ತಿದೆ ಎಂಬ ಸಂಗತಿಯನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ವೆಲ್ಲೋರ್​ನ ಸಿಎಂಸಿಯ ಮಾಜಿ ಪ್ರಾಂಶುಪಾಲ ಜಯಪ್ರಕಾಶ್​ ಮುಲಿಯಿಲ್​ ಅಭಿಪ್ರಾಯಪಡುತ್ತಾರೆ.
ಇವರ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ಸಾಮುದಾಯಿಕವಾಗಿ ಹಬ್ಬಿದೆಯಾ ಅಥವಾ ಇಲ್ಲವೇ ಎಂಬ ವಾದವೇ ನಿರರ್ಥವಾಗಿದೆ. ಸಾಮುದಾಯಿಕ ಹರಡುವಿಕೆ ಎಂಬ ಪದಕ್ಕೆ ಸಾಂಕ್ರಾಮಿಕ ರೋಗಗಳ ಪದಕೋಶದಲ್ಲಿ ನಿಖರವಾದ ವ್ಯಾಖ್ಯಾನವೇ ಇಲ್ಲ. ಸರಳವಾಗಿ ಹೇಳುವುದಾದರೆ, ಸೋಂಕು ನಮ್ಮ ರಾಷ್ಟ್ರದಲ್ಲಿ ಅಥವಾ ನಮ್ಮ ಸಮುದಾಯದಲ್ಲಿ ಬಲವಾಗಿ ಬೇರೂರಿದೆಯೇ ಎಂಬುದಷ್ಟೇ ಮುಖ್ಯವಾಗುತ್ತದೆ. ಉಳಿದಿದ್ದೆಲ್ಲವೂ ಅಸಂಬದ್ಧ ಎನಿಸಿಕೊಳ್ಳುತ್ತವೆ ಎಂದು ಹೇಳುತ್ತಾರೆ.
ಒಂದು ರೂಪಾಯಿ ಅವ್ಯವಹಾರ ಸಾಬೀತು ಪಡಿಸಿದ್ರೆ ರಾಜೀನಾಮೆ; ಶ್ರೀರಾಮುಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 5 =
Remember me
