ನವದೆಹಲಿ/ಬೆಂಗಳೂರು:ಕೋವಿಡ್ ಸಾಂಕ್ರಾಮಿಕತೆಯ ಮೂರನೇ ಅಲೆ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆದಿರುವ ಸಂದರ್ಭದಲ್ಲೇ ಕರೊನಾ ವೈರಸ್​ನ ಮಾರಕ ಡೆಲ್ಟಾ ಪ್ರಭೇದದ ಉಪ-ಪ್ರಭೇದ ಎವೈ 4.2ರ 17 ಪ್ರಕರಣಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ಸಹಿತ ಐದು ರಾಜ್ಯಗಳಲ್ಲಿ ಪತ್ತೆಯಾಗಿರುವುದು ಕಳವಳ ಹುಟ್ಟಿಸಿದೆ. ಚೀನಾ, ರಷ್ಯಾ, ಬೆಲ್ಜಿಯಂ, ನ್ಯೂಜಿಲ್ಯಾಂಡ್ ಮೊದಲಾದ ಐರೋಪ್ಯ ದೇಶಗಳಲ್ಲಿ ಸೋಂಕು ಹಾಗೂ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಕೂಡ ಮಾರಕ ವ್ಯಾಧಿಯ ಇನ್ನೊಂದು ಅಲೆ ಕಾಡಲಿದೆಯೇ ಎಂಬ ಭಯಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಹೆಚ್ಚಳ:ಕರ್ನಾಟಕದಲ್ಲಿ ಗುರುವಾರ 1.13 ಲಕ್ಷ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆ ಹೆಚ್ಚಳದೊಂದಿಗೆ ಸೋಂಕು ಹಾಗೂ ಸಾವಿನ ಪ್ರಕರಣಗಳ ಸಂಖ್ಯೆಯೂ ಕೊಂಚ ಏರಿಕೆಯಾಗಿವೆ. 478 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 17 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 29.87 ಲಕ್ಷ ಮೀರಿದ್ದು, ಮೃತರ ಸಂಖ್ಯೆ 38,054ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 334 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 29.40 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8,557 ತಲುಪಿದೆ.
ನಗರದಲ್ಲಿ ಹೆಚ್ಚಿದ ಸೋಂಕು:ಬೆಂಗಳೂರು ನಗರದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, 235 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 7 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎರಡಂಕಿ ಹಾಗೂ 11 ಜಿಲ್ಲೆಗಳಲ್ಲಿ ಒಂದಂಕಿ ತಲುಪಿದೆ. ಉಳಿದ 11 ಜಿಲ್ಲೆಗಳಲ್ಲಿ ಯಾವುದೇ ಸೋಂಕು ಪ್ರಕರಣಗಳು ವರದಿಯಾಗಿಲ್ಲ. ಗದಗ ಜಿಲ್ಲೆ ಮಾತ್ರ ಯಾವುದೇ ಸಕ್ರಿಯ ಪ್ರಕರಣಗಳಿಲ್ಲದೆ ಸಂಪೂರ್ಣ ಸೋಂಕು ಮುಕ್ತ ಜಿಲ್ಲೆಯಾಗಿದೆ. ಸೋಂಕಿತರಲ್ಲಿ ಬೆಂಗಳೂರು ನಗರದಲ್ಲಿ 7 ಮಂದಿ, ದಕ್ಷಿಣ ಕನ್ನಡದಲ್ಲಿ 4 ಮಂದಿ, ಕೋಲಾರ ಮತ್ತು ಮೈಸೂರಿನಲ್ಲಿ ತಲಾ ಇಬ್ಬರು, ಹಾಸನ ಮತ್ತು ರಾಮನಗರದಲ್ಲಿ ತಲಾ ಒಬ್ಬರು ಸೇರಿ 17 ಮಂದಿ ಸಾವನ್ನಪ್ಪಿದ್ದು, 24 ಜಿಲ್ಲೆಗಳಲ್ಲಿ ಕೋವಿಡ್ ನಿಂದ ಯಾವುದೇ ಸಾವು ಸಂಭವಿಸಿಲ್ಲ ಎನ್ನುವುದಷ್ಟೇ ಸಮಾಧಾನದ ಸಂಗತಿ.
ರಾಜ್ಯದಲ್ಲಿ ಡೆಲ್ಟಾ ವೆರಿಯಂಟಲ್ ಎವೈ-4.2 ನಂತಹ 20 ಸಬ್​ಲಿನೀಯಸ್ ಇವೆ. ಅದರಲ್ಲಿ ಇದು ಕೂಡ ಒಂದು. ಇದನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಈಗಾಗಲೇ ವರದಿ ದೊರೆತಿದ್ದು, ದೇಶದಲ್ಲಿ 17 ಹಾಗೂ ರಾಜ್ಯದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ರೋಗಿಗಳಿಗೂ ಗಂಭೀರವಾದ ರೋಗ ಲಕ್ಷಣಗಳಿಲ್ಲ. ಈ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯವರು ಗಮನಿಸುತ್ತಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ.
|ಡಾ.ಕೆ.ಸುಧಾಕರ್ಆರೋಗ್ಯ ಸಚಿವ
ನಿರ್ಬಂಧ ಮುಂದುವರಿಕೆ:ಸೋಂಕಿಗೆ ಕಡಿವಾಣ ಹಾಕಲು ದೇಶವ್ಯಾಪಿ ಕಂಟೇನ್​ವೆುಂಟ್ ನಿಯಮಗಳನ್ನು ನ.30ರ ವರೆಗೆ ಮುಂದುವರಿಸಿ ಕೇಂದ್ರ ಗೃಹ ಸಚಿವಾಲಯ ಗುರುವಾರ ಆದೇಶ ಹೊರಡಿಸಿದೆ. ಸೋಂಕು ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಹರಡುತ್ತಿರುವುದರಿಂದ ಹಾಗೂ ಕೋವಿಡ್ ವ್ಯಾಧಿ ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿ ಮುಂದುವರಿದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾರ್ಗಸೂಚಿಯಲ್ಲಿ ಗೃಹ ಸಚಿವಾಲಯ ತಿಳಿಸಿದೆ. ಪ್ರಸ್ತುತ ಜಾರಿಯಲ್ಲಿರುವ ನಿಯಂತ್ರಣ ಕ್ರಮಗಳು ಹಾಗೂ ಶಿಷ್ಟಾಚಾರಗಳು ನವೆಂಬರ್ 30ರ ವರೆಗೆ ಮುಂದುವರಿಯಲಿವೆ ಎಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ತಿಳಿಸಿದ್ದಾರೆ.
16,156 ಕೇಸ್:ಭಾರತದಲ್ಲಿ ಗುರುವಾರ ಬೆಳಗ್ಗೆ ಅಂತ್ಯ ವಾದ 24 ಗಂಟೆ ಅವಧಿಯಲ್ಲಿ ಕರೊನಾದ 16,156 ಹೊಸ ಪ್ರಕರಣ ದೃಢಪಟ್ಟಿವೆ. ಈ ಅವಧಿಯಲ್ಲಿ 733 ಜನರು ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ 1,60,989 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದು 243 ದಿನಗಳಲ್ಲಿ ಕನಿಷ್ಠ ಸಕ್ರಿಯ ಕೇಸ್ ಆಗಿದೆ. ಸೋಂಕಿತರ ಒಟ್ಟು ಸಂಖ್ಯೆ 3,42,31,809ಕ್ಕೆ ಏರಿದೆ. ಮರಣ ಸಂಖ್ಯೆ 4,56,386ಕ್ಕೆ ತಲುಪಿದೆ.
ಮಾಸ್ಕೋ ಲಾಕ್:ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಗುರುವಾರದಿಂದ 11 ದಿನಗಳ ಕಠಿಣ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಲಸಿಕೆ ಅಭಿಯಾನವನ್ನು ಸ್ಥಗಿತ ಗೊಳಿಸಿದ ನಂತರ ಹೊಸ ಕೇಸ್, ಸಾವಿನ ಸಂಖ್ಯೆ ಏರುತ್ತಿರುವುದರಿಂದ ಶಾಲೆ, ಅಂಗಡಿ ಮತ್ತು ಹೋಟೆಲ್​ಗಳನ್ನು ಮುಚ್ಚಲಾಗಿದೆ. ಮನರಂಜನೆ ಕೇಂದ್ರಗಳ ಸಹಿತ ಅಗತ್ಯವಲ್ಲದ ಸೇವೆಗಳು ನ.7ರ ವರೆಗೆ ಮುಚ್ಚಿರುತ್ತವೆ.
ವ್ಯಾಕ್ಸಿನ್​ಗೆ ಸಾಲ ಕೋರಿಕೆ:ವಿವಿಧ ಕರೊನಾ-ತಡೆ ಲಸಿಕೆಯ 66.7 ಕೋಟಿ ಡೋಸ್ ಖರೀದಿಸಲು ಸಾಲ ಮಂಜೂರು ಮಾಡುವಂತೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಮತ್ತು ಏಷ್ಯನ್ ಇನ್​ಫ್ರ್ರಾಸ್ಟ್ರಕ್ಚರ್ ಇನ್​ವೆಸ್ಟ್ ಮೆಂಟ್ ಬ್ಯಾಂಕ್​ಗೆ (ಎಐಐಬಿ) ಭಾರತ ಅರ್ಜಿ ಸಲ್ಲಿಸಿದೆ. ಅಮೆರಿಕ ಮತ್ತು ಜಪಾನ್ ಹೆಚ್ಚು ಷೇರುಗಳನ್ನು ಹೊಂದಿರುವ ಮನಿಲಾ ಮೂಲದ ಎಡಿಬಿ ಹಾಗೂ ಚೀನಾ ಮತ್ತು ಭಾರತ ಹೆಚ್ಚಿನ ಪಾಲುದಾರಿಕೆ ಹೊಂದಿರುವ ಬೀಜಿಂಗ್ ಮೂಲದ ಎಐಐಬಿ, ಭಾರತದ ಸಾಲದ ಅರ್ಜಿಗಳನ್ನು ಪರಿಶೀಲಿಸುತ್ತಿವೆ.
ಸಿಂಗಾಪುರದಲ್ಲಿ ಏರಿಕೆ:ಸಿಂಗಾಪುರದಲ್ಲಿ ಕರೊನಾ ಹಾವಳಿ ಹೆಚ್ಚಾಗುತ್ತಿದ್ದು ದೈನಿಕ ಪ್ರಕರಣಗಳ ಸಂಖ್ಯೆ 5,000 ಮೀರುತ್ತಿದೆ. ಇದೇ ಮೊದಲ ಬಾರಿಗೆ ಅಸಹಜವೆನ್ನುವಂತೆ ಕೆಲವೇ ಗಂಟೆಗಳಲ್ಲಿ 5,324 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ವಿದ್ಯಮಾನಕ್ಕೆ ಕಾರಣವೇನಿರಬಹುದೆಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಮತ್ತೆ ಏರಿಕೆಯಾಗುತ್ತಿರುವುದರಿಂದ ವಿದೇಶಿ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿರುವ ಆರೋಗ್ಯ ಇಲಾಖೆ ವಿದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಹಾಗೂ ಲಸಿಕೆ ಪಡೆದಿರುವ ಪ್ರಮಾಣಪತ್ರ ಹೊಂದಿರಬೇಕು ಎಂದು ಸೂಚಿಸಿದೆ. ಇಂಗ್ಲೆಂಡ್, ಯುರೋಪ್, ಮಧ್ಯಪ್ರಾಚ್ಯ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸವಾನಾ, ಚೀನಾ, ಮಾರಿಷಸ್, ನ್ಯೂಜಿಲೇಂಡ್, ಜಿಂಬಾಬ್ವೆ ದೇಶಗಳಿಂದ ಬರುವವರು ಸೋಂಕಿತರಾಗಿಲ್ಲ ಎನ್ನುವುದರ ಬಗ್ಗೆ ಆರ್​ಟಿಪಿಸಿಆರ್ ಪರೀಕ್ಷಾ ವರದಿ ಹೊಂದಿರಬೇಕು. ಆ ವರದಿಯು ಪ್ರಯಾಣದ ಮೊದಲಿನ 72 ಗಂಟೆಗಳ ಅವಧಿಯದ್ದಾಗಿರಬೇಕು. ಸೋಂಕು ಹೆಚ್ಚುತ್ತಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಬ್ರಿಟನ್, ಚೀನಾ ಮತ್ತು ರಷ್ಯಾದಲ್ಲಿ ಪತ್ತೆಯಾಗಿದ್ದ ಎವೈ 4.2 ರೂಪಾಂತರಿ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಅದುವೇ ಭಾರತದಲ್ಲಿ ಮೂರನೇ ಅಲೆಯ ಭೀತಿಯ ಸೂಚನೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. 2021ರ ಮೇ-ಸೆಪ್ಟೆಂಬರ್ ನಡುವೆ ಸಂಗ್ರಹಿಸಲಾದ ಸ್ಯಾಂಪಲ್​ಗಳಲ್ಲಿ ಡೆಲ್ಟಾ ರೂಪಾಂತರಿಯ ಉಪ-ಪ್ರಭೇದ ಇರುವುದು ಪತ್ತೆಯಾಗಿದೆ. ಅದೇ ವೇಳೆ ಭಾರತ ಒಟ್ಟು 19,446 ಸೀಕ್ವೆನ್ಸ್​ಗಳನ್ನು ಜಿಐಎಸ್​ಎಐಡಿಗೆ ಸಲ್ಲಿಸಿತ್ತು.
ಆಂಧ್ರ ಪ್ರದೇಶ (7), ಕೇರಳ (4), ಕರ್ನಾಟಕ ಮತ್ತು ತೆಲಂಗಾಣದಲ್ಲಿ ತಲಾ ಎರಡು, ಜಮ್ಮು ಮತ್ತು ಕಾಶ್ಮೀರ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಂದು ಎವೈ.4.2 ಕೇಸ್​ಗಳು ದೃಢಪಟ್ಟಿವೆ. ಈ ರೂಪಾಂತರಿ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕರ್ನಾಟಕದ ಆರೋಗ್ಯ ನಿರ್ದೇಶನಾಲಯ ಎಚ್ಚರಿಕೆಯನ್ನೂ ನೀಡಿದೆ. ಕೋವಿಡ್​ನ ಮೂರನೇ ಅಲೆಯ ಭೀತಿ ನಡುವೆ ಹಬ್ಬದ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಘೋಷಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ‘ಕೋವಿಡ್-19 ವೈರಸ್​ನ ಹೊಸ ರೂಪಾಂತರಿ ಬಗ್ಗೆ ಒಂದು ತಂಡ ತನಿಖೆ ನಡೆಸುತ್ತಿದೆ. ಭಾರತೀಯ ಔಷಧ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್​ಸಿಡಿಸಿ) ತಂಡಗಳು ಅಧ್ಯಯನ ನಡೆಸಿ ವಿವಿಧ ಪ್ರಭೇದಗಳ ವಿಶ್ಲೇಷಣೆ ನಡೆಸಲಿವೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಹೇಳಿದ್ದಾರೆ.
ಶಾರುಖ್ ಪುತ್ರ ಆರ್ಯನ್​ ಖಾನ್​ಗೆ ಜಾಮೀನು ಸಿಗಲು ಕಾರಣವೇನು ಗೊತ್ತೇ?; ಇಲ್ಲಿದೆ ಮಾಹಿತಿ..

‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

ಅವನನ್ನು ಲವ್​ ಮಾಡ್ಬೇಡ ಅಂದ್ರೂ ಕೇಳದ ಮಗಳನ್ನು ಕೊಲೆ ಮಾಡಿದ ಅಪ್ಪ; ವೇಲ್​​ನಿಂದ ಕತ್ತು ಸುತ್ತಿ ಸಾಯಿಸಿದ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
