ನವದೆಹಲಿ:ಆಸ್ಟ್ರಾಜೆನೆಕಾ ಹಾಗೂ ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ತಯಾರಿಸುತ್ತಿರುವ ಕರೊನಾ ಲಸಿಕೆ ‘ಕೋವಿಶೀಲ್ಡ್’ 2021ರ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಲಭ್ಯವಾಗಲಿದೆ. ಈ ಲಸಿಕೆಯ ಬೆಲೆ ಭಾರತದ ಮಾರುಕಟ್ಟೆಯಲ್ಲಿ 2 ಡೋಸ್​ಗೆ ಗರಿಷ್ಠ 1 ಸಾವಿರ ರೂ. ನಿಗದಿಯಾಗುವ ಸಾಧ್ಯತೆ ಇದೆ ಎಂದು ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್​ಐಐ)ದ ಸಿಇಒ ಆದರ್ ಪೂನಾವಾಲಾ ಹೇಳಿದ್ದಾರೆ. ಲಸಿಕೆಯ ಉತ್ಪಾದನೆಗಾಗಿ ಆಕ್ಸ್​ಫರ್ಡ್​ನೊಂದಿಗೆ ಭಾರತದ ಸಂಸ್ಥೆಯಾದ ಸೆರಂ ಒಪ್ಪಂದ ಮಾಡಿಕೊಂಡಿದೆ.
ಲಸಿಕೆಯ ಬಗ್ಗೆ ಮಾಹಿತಿ ನೀಡಿರುವ ಆದರ್ ಪೂನಾವಾಲಾ, ಎಲ್ಲವೂ ಯೋಜನೆ ಪ್ರಕಾರ ನಡೆದರೆ 2021ರ ಫೆಬ್ರವರಿ, ಮಾರ್ಚ್ ವೇಳೆಗೆ ಲಸಿಕೆ ಸಿದ್ಧವಾಗಿ ಮಾರುಕಟ್ಟೆಗೆ ಬರಲಿದೆ. ಲಸಿಕೆಯ ಒಂದು ಡೋಸ್ ಬೆಲೆ 5 ರಿಂದ 6 ಡಾಲರ್​ಗಳಷ್ಟಿದ್ದು, ಭಾರತದಲ್ಲಿ ಇದು ಎರಡು ಡೋಸ್​ಗೆ ಗರಿಷ್ಠ 1 ಸಾವಿರ ರೂ. ಬೆಲೆ ಹೊಂದುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಬಹುಶಃ ಭಾರತದ ಪ್ರತಿಯೊಬ್ಬರಿಗೂ ಲಸಿಕೆ ತಲುಪಲು 2024ರವರೆಗೆ ಸಮಯ ಹಿಡಿಯಬಹುದು. ಲಸಿಕೆಯ ಬಜೆಟ್, ಉತ್ಪಾದನೆ, ಲಾಜಿಸ್ಟಿಕ್, ಸರಬರಾಜು ಸೇರಿ ಹಲವು ಕಾರಣಗಳಿಂದ ಎಲ್ಲರಿಗೂ ಲಸಿಕೆ ಲಭ್ಯವಾಗುವುದಕ್ಕೆ ಸಮಯಹಿಡಿಯಲಿದೆ. ಹೆಚ್ಚಿನ ಪ್ರಮಾಣದಲ್ಲಿ ಆರ್ಡರ್ ನೀಡುವ ಮೂಲಕ ಕೇಂದ್ರ ಸರ್ಕಾರ ಲಸಿಕೆಯನ್ನು ಇನ್ನೂ ಕಡಿಮೆ ಬೆಲೆಗೆ ಪಡೆಯಬಹುದು. ಜನಸಾಮಾನ್ಯರಿಗೆ ಲಸಿಕೆ ಕೈಗೆಟುಕುವಂತೆ ಮಾಡಲು ನಾವು ಅದರ ಬೆಲೆಯನ್ನು ಇನ್ನೂ ತಗ್ಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೂನಾವಾಲಾ ಹೇಳಿದ್ದಾರೆ.
ಇಡೀ ಗ್ರಾಮಕ್ಕೆ ಕರೊನಾ!
ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯ ಥೋರಂಗ್ ಗ್ರಾಮದ ಎಲ್ಲ ನಿವಾಸಿಗಳಿಗೂ ಕರೊನಾ ಸೋಂಕು ತಗುಲಿದೆ. ಮನಾಲಿ-ಲೇಹ್ ಹೆದ್ದಾರಿಯಲ್ಲಿರುವ ಥೋರಂಗ್ ಗ್ರಾಮವು ಕೇವಲ 42 ನಿವಾಸಿಗಳನ್ನು ಹೊಂದಿದೆ. ಕೆಲ ದಿನಗಳ ಹಿಂದೆ ಗ್ರಾಮದ ಎಲ್ಲರನ್ನೂ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, 42ರಲ್ಲಿ 41 ಮಂದಿಯ ವರದಿ ಪಾಸಿಟಿವ್ ಬಂದಿದೆ.
ಕೋವಿಶೀಲ್ಡ್ ಉತ್ತಮ ಫಲಿತಾಂಶ
ಎಸ್​ಐಐ ಹಾಗೂ ಐಸಿಎಂಆರ್ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಳನ್ನು ನಡೆಸುತ್ತಿವೆ. ಇದಕ್ಕಾಗಿ 1,600 ಸ್ವಯಂಸೇವಕರ ದಾಖಲಾತಿ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಈವರೆಗಿನ ಪ್ರಯೋಗಗಳ ಫಲಿತಾಂಶಗಳ ಪ್ರಕಾರ ಕೋವಿಶೀಲ್ಡ್ ವಯಸ್ಸಾದವರಲ್ಲೂ ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ದೀರ್ಘಕಾಲೀನ ರೋಗನಿರೋಧಕ ಶಕ್ತಿ ಮತ್ತು ಪ್ರತಿಕಾಯಗಳನ್ನು ಉಂಟುಮಾಡಿದೆ ಎಂದು ಪೂನಾವಾಲ್ಲಾ ಹೇಳಿದ್ದಾರೆ.
ರಾಜ್ಯಗಳಿಗೆ ಕೇಂದ್ರದ ತಂಡ ರವಾನೆ
ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಮಣಿಪುರಕ್ಕೆ ಕರೊನಾ ಪರಿಸ್ಥಿತಿ ನಿರ್ವಹಣೆ ಮೇಲ್ವಿಚಾರಣೆಗಾಗಿ ಉನ್ನತ ಮಟ್ಟದ ತಂಡಗಳನ್ನು ರವಾನಿಸಿರುವ ಕೇಂದ್ರ ಸರ್ಕಾರ ಶೀಘ್ರದಲ್ಲೇ ಇನ್ನೂ ಕೆಲ ರಾಜ್ಯಗಳಿಗೆ ತಜ್ಞರ ತಂಡಗಳನ್ನು ರವಾನಿಸಲು ನಿರ್ಧರಿಸಿದೆ. ಕಳೆದ 24 ತಾಸಿನಲ್ಲಿ ದೆಹಲಿ, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ಅತಿ ಹೆಚ್ಚು ಹೊಸ ಪ್ರಕರಣಗಳನ್ನು ವರದಿ ಮಾಡಿವೆ. ಈ ರಾಜ್ಯಗಳಲ್ಲಿ ಪರೀಕ್ಷಾ ಪ್ರಮಾಣ ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವ ಕ್ರಮಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ಕರೊನಾ ಮತ್ತೆ ಉಲ್ಬಣಗೊಳ್ಳುವ ಸಂಭವವಿರುವ ಕೆಲ ರಾಜ್ಯಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಲಹೆ ನೀಡುವ ಸಲುವಾಗಿ ಕೇಂದ್ರದ ತಂಡಗಳನ್ನು ರವಾನಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಲಸಿಕೆ ವಿತರಣೆಗೆ ಸಿದ್ಧತೆ
ಕರೊನಾ ಲಸಿಕೆ ಸಿದ್ಧ ವಾಗುತ್ತಲೇ ಅದನ್ನು ಭಾರತದ ಮೂಲೆ ಮೂಲೆಗಳಿಗೆ ತಲುಪಿಸುವ ಸಲುವಾಗಿ ಭಾರತದ ವಾಯುಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣದ ನಿರ್ವಾಹಕರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಟ್ಟು ಸಾಗಿಸಬೇಕಾದ ಸವಾಲು ಅವರ ಮುಂದಿದ್ದು, ಇದಕ್ಕಾಗಿ ದೆಹಲಿ, ಹೈದರಾಬಾದ್ ಸೇರಿ ಹಲವು ನಿಲ್ದಾಣಗಳಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಲಸಿಕೆಯನ್ನು ಸಾಗಿಸುವ ವಾಹನಗಳ ತ್ವರಿತ ಕಾರ್ಯಾಚರಣೆಗಳಿಗಾಗಿ ಟರ್ವಿುನಲ್​ನಲ್ಲಿ ಪ್ರತ್ಯೇಕ ಗೇಟ್​ನ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − three =
Remember me
