ಕರೊನಾ ವೈರಸ್ ಗ್ಲಾಸ್, ಸ್ಮಾರ್ಟ್​ಫೋನ್​ಗಳಂತಹ ವಸ್ತುಗಳ ಮೇಲೆ 28 ದಿನ ಜೀವಂತವಿರುತ್ತದೆ ಎಂದು ಆಸ್ಟ್ರೇಲಿಯಾದ ವಿಜ್ಞಾನಿಗಳು ತಿಳಿಸಿದ್ದಾರೆ. ತಾಪಮಾನ ಕಡಿಮೆಯಾದಂತೆ ಸೋಂಕಿನ ಜೀವಿತಾವಧಿ ಹೆಚ್ಚಳವಾಗುತ್ತದೆ ಎಂದು ತಿಳಿಸಲಾಗಿದೆ.
ಆಸ್ಟ್ರೇಲಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿಪೇರ್ಡ್ನೆಸ್​ನ ವಿಜ್ಞಾನಿಗಳು ಈ ಅಧ್ಯಯನ ಮಾಡಿದ್ದಾರೆ. ಗ್ಲಾಸ್, ಮೊಬೈಲ್ ಸ್ಕ್ರೀನ್, ಹಿಡಿಕೆಗಳಂತಹ ವಸ್ತುಗಳ ಮೇಲೆ ಸೋಂಕು 28 ದಿನಗಳ ಕಾಲ ಜೀವಿಸಬಲ್ಲದು. 20 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಪ್ರದೇಶದಲ್ಲಿ ವೈರಸ್ ಜೀವಿತಾವಧಿ ಇಷ್ಟಿದ್ದರೆ, ತಾಪಮಾನ ಕಡಿಮೆಯಾದಂತೆ ಜೀವಿತಾವಧಿ ಹೆಚ್ಚಳವಾಗುತ್ತದೆ. ಬೇಸಿಗೆಯಲ್ಲಿ ಸೋಂಕಿನ ನಿಯಂತ್ರಣ ಸಾಧ್ಯವಾಗಲಿಲ್ಲವೆಂದರೆ ಚಳಿಗಾಲದಲ್ಲಿ ದೊಡ್ಡ ಸಮಸ್ಯೆಗೆ ನಾವು ತೆರೆದುಕೊಳ್ಳಬೇಕಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ಸೋಂಕಿನ ಜೀವಿತಾವಧಿ 5ರಿಂದ 7 ಪಟ್ಟು ಹೆಚ್ಚಳವಾಗುತ್ತದೆ ಎನ್ನಲಾಗಿದೆ.
ಗುಣಮುಖ ಪ್ರಮಾಣ ಶೇ. 86.4ಕ್ಕೆ ಏರಿಕೆ: ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಸೋಂಕಿತರ ಸಂಖ್ಯೆಗಿಂತ ಗುಣಮುಖರ ಸಂಖ್ಯೆ ಹೆಚ್ಚಾಗಿದ್ದು, ಚೇತರಿಕೆ ಪ್ರಮಾಣ ಶೇ. 86.4ಕ್ಕೆ ಏರಿಕೆಯಾಗಿದೆ. ಭಾನುವಾರ 71,500 ಜನರು ಚೇತರಿಸಿಕೊಂಡಿದ್ದು, ಒಟ್ಟೂ ಸಂಖ್ಯೆ 61.5 ಲಕ್ಷ ತಲುಪಿದೆ. ಭಾನುವಾರ 66,700 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 71.2 ಲಕ್ಷ ದಾಟಿದೆ. ಮೃತರ ಸಂಖ್ಯೆ 1.09 ಲಕ್ಷಕ್ಕೂ ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8.6 ಲಕ್ಷಕ್ಕೆ ಇಳಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟಾರೆ ಪ್ರಕರಣಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳು ಶೇ. 60 ಪಾಲು ಹೊಂದಿವೆ. ಮೃತರಲ್ಲಿ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಉತ್ತರಪ್ರದೇಶ ರಾಜ್ಯಗಳು ಶೇ. 64 ಪಾಲು ಹೊಂದಿವೆ.
18 ಸಾವಿರ ಟನ್ ತ್ಯಾಜ್ಯ!:ಕರೊನಾ ಕಾರಣದಿಂದಾಗಿ ದೇಶದಲ್ಲಿ ನಾಲ್ಕು ತಿಂಗಳಲ್ಲಿ 18,006 ಟನ್ ಬಯೋಮೆಡಿಕಲ್ ತ್ಯಾಜ್ಯ ಸಂಗ್ರಹವಾಗಿರುವುದಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 3,587 ಟನ್ ತ್ಯಾಜ್ಯ ಸಂಗ್ರಹವಾಗಿದೆ. ತಮಿಳುನಾಡಿನಲ್ಲಿ 1,737 ಟನ್, ಗುಜರಾತ್​ನಲ್ಲಿ 1,638 ಟನ್, ಕೇರಳದಲ್ಲಿ 1,516 ಟನ್, ಉತ್ತರ ಪ್ರದೇಶದಲ್ಲಿ 1,432 ಟನ್, ದೆಹಲಿಯಲ್ಲಿ 1,400 ಟನ್ ಮತ್ತು ಕರ್ನಾಟಕದಲ್ಲಿ 1,380 ಟನ್ ತ್ಯಾಜ್ಯ ಸಂಗ್ರಹವಾಗಿದೆ. ಸೆಪ್ಟೆಂಬರ್ ಒಂದೇ ತಿಂಗಳಲ್ಲಿ 5,500 ಟನ್ ತ್ಯಾಜ್ಯ ಸಂಗ್ರಹವಾಗಿದೆ. ಈ ಎಲ್ಲ ತ್ಯಾಜ್ಯವನ್ನು 198 ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಕೇಂದ್ರಗಳಲ್ಲಿ ಸಂಗ್ರಹಿಸಿ ಸಂಸ್ಕರಿಸುತ್ತಿರುವುದಾಗಿ ತಿಳಿಸಲಾಗಿದೆ.
ಚೀನಾದಲ್ಲಿ ಪೂರ್ತಿ ನಗರಕ್ಕೆ ಕರೊನಾ ಪರೀಕ್ಷೆ:ಚೀನಾದ ಕಿಂಗ್ಡಾವೊದಾ ನಗರದಲ್ಲಿ ಹೊಸದಾಗಿ ಕರೊನಾ ಸೋಂಕು ಪತ್ತೆಯಾಗಿದ್ದು, ಭಾನುವಾರ ಆರು ಜನರು ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿನ ನಿಯಂತ್ರಣಕ್ಕೆ ಪಣ ತೊಟ್ಟಿರುವ ಸರ್ಕಾರ, ಐದು ದಿನಗಳಲ್ಲಿ ನಗರದ ಪ್ರತಿ ನಾಗರಿಕನಿಗೂ ಕರೊನಾ ಪರೀಕ್ಷೆ ಮಾಡುವುದಾಗಿ ತಿಳಿಸಿದೆ. ಈ ನಗರದಲ್ಲಿ 90 ಲಕ್ಷ ಜನರು ವಾಸವಿದ್ದಾರೆ. ಅದರಲ್ಲಿ ವೈದ್ಯಕೀಯ ವಲಯ ಸೇರಿ ಮುಖ್ಯಭೂಮಿಕೆಯಲ್ಲಿ ಕೆಲಸ ಮಾಡುವ 1. 4 ಲಕ್ಷ ಜನರ ಪರೀಕ್ಷೆಯನ್ನು ಈಗಾಗಲೇ ಮಾಡಲಾಗಿದೆ.
ಸಿಂಪಡಿಸುವ ಔಷಧವೇ ಹೆಚ್ಚು ಸೂಕ್ತ:ಕರೊನಾ ಸೋಂಕಿಗೆ ಚುಚ್ಚುಮದ್ದು ರೂಪದಲ್ಲಿ ನೀಡುವ ಔಷಧಕ್ಕಿಂತ ಮೂಗಿಗೆ ಸಿಂಪಡಿಸುವ ಔಷಧ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸೋಂಕು ಮೂಗು, ಬಾಯಿ ಮೂಲಕ ದೇಹದೊಳಗೆ ಸೇರುತ್ತದೆ. ಸೋಂಕಿನ ಪ್ರವೇಶದ್ವಾರದಲ್ಲೇ ಔಷಧ ನೀಡಿದರೆ ಅದು ಪರಿಣಾಮಕಾರಿಯಾಗಬಲ್ಲದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಮೆರಿಕ, ಹಾಂಕಾಂಗ್​ನಲ್ಲಿ ಮೂಗು ಮತ್ತು ಬಾಯಿಗೆ ಸಿಂಪಡಿಸುವ ಔಷಧ ಸಿದ್ಧಪಡಿಸಲಾಗುತ್ತಿದೆ.
ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಳ: ಲಾಕ್​ಡೌನ್ ಸಮಯದಲ್ಲಿ ಮಕ್ಕಳ ಮೇಲೆ ದೌರ್ಜನ್ಯ, ಹೆಚ್ಚಾಗಿದೆ ಎನ್ನಲಾಗಿದೆ. ಲಾಕ್​ಡೌನ್ ಸಮಯದಲ್ಲಿ ಮಕ್ಕಳನ್ನು ಬಲವಂತವಾಗಿ ಕೆಲಸಕ್ಕೆ ಕಳುಹಿಸುವುದು, ಬಲವಂತದ ಮದುವೆ ಹೆಚ್ಚಿದೆ. ವೇಶ್ಯಾವಾಟಿಕೆ, ಭಿಕ್ಷಾಟನೆಗೂ ಹೆಚ್ಚೆಚ್ಚು ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − twenty =
Remember me
