ನವದೆಹಲಿ:ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಸಾಂಕ್ರಾಮಿಕತೆ (ಪಾಂಡೆಮಿಕ್) ಭಾರತದಲ್ಲಿ ಮಾರ್ಚ್ 11ರಂದು ಅಂತ್ಯವಾಗಿ ಸ್ಥಳೀಯ ವ್ಯಾಧಿ (ಎಂಡೆಮಿಕ್) ಆಗಿ ಮಾರ್ಪಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸೋಂಕುರೋಗಗಳ ವಿಭಾಗದ ಮುಖ್ಯಸ್ಥ ಸಮೀರನ್ ಪಾಂಡಾ ಹೇಳಿದ್ದಾರೆ. ನಾವು ಜಾಗೃತೆ ವಹಿಸಿದರೆ ಹಾಗೂ ಕರೊನಾ ವೈರಸ್​ನ ಬೇರೆ ಯಾವುದೇ ರೂಪಾಂತರಿ ಸೃಷ್ಟಿಯಾಗದಿದ್ದರೆ ಮಾರ್ಚ್ 11ರೊಳಗೆ ಕೋವಿಡ್ ಅಂತ್ಯಗೊಳ್ಳುತ್ತದೆ. ಡೆಲ್ಟಾ ಪ್ರಭೇದದ ಸ್ಥಾನವನ್ನು ಒಮಿಕ್ರಾನ್ ಆವರಿಸಿದರೆ ಆಗ ಎಂಡೆಮಿಕ್ ಆಗುತ್ತದೆ ಎಂದು ಪಾಂಡಾ ಅಭಿಪ್ರಾಯ ಪಟ್ಟಿದ್ದಾರೆ.
‘ಮಾರ್ಚ್ 11ರಿಂದ ಸೋಂಕಿನಲ್ಲಿ ಸ್ವಲ್ಪ ವಿರಾಮ ಕಾಣುತ್ತೇವೆ. ದೆಹಲಿ ಮತ್ತು ಮುಂಬೈನ ಕೋವಿಡ್ ಪ್ರಕರಣಗಳ ಉತ್ತುಂಗ ತಲುಪಿವೆಯೇ ಮತ್ತು ಅತಿ ಕೆಟ್ಟ ಸನ್ನಿವೇಶ ಮುಗಿಯಿತೇ ಎನ್ನುವುದನ್ನು ತಿಳಿಯಲು ಎನ್ನೂ ಎರಡು ವಾರ ಕಾಯಬೇಕಾಗುತ್ತದೆ’ ಎಂದಿದ್ದಾರೆ. ದೆಹಲಿ ಮತ್ತು ಮುಂಬೈಯಲ್ಲಿ ಒಮಿಕ್ರಾನ್ ಮತ್ತು ಡೆಲ್ಟಾ ಅನುಪಾತ 80:20 ಆಗಿದೆ ಎಂದರು.ಈ ನಡುವೆ, ಕೋವಿಡ್ ಅಲೆ ಜನವರಿ 23ರಂದು ಉತ್ತುಂಗಕ್ಕೆ ತಲು ಪುವ ಸಂಭವವಿದ್ದು ದೈನಿಕ ಕೇಸ್ 4 ಲಕ್ಷಕ್ಕಿಂತ ಕಡಿಮೆ ಇರಲಿದೆ ಎಂದು ಐಐಟಿ ಕಾನ್ಪುರದ ವಿಜ್ಞಾನಿ ಮಣೀಂದ್ರ ಅಗರ್​ವಾಲ್ ಹೇಳಿದ್ದಾರೆ.
ಭಾರತದಲ್ಲಿ ದೈನಿಕ ಕೇಸ್ ಏರಿಕೆ:ಭಾರತದಲ್ಲಿ ಒಂದೆರಡು ದಿನಗಳಿಂದ ಇಳಿಮುಖವಾಗಿದ್ದ ಕರೊನಾ ಸೋಂಕಿನ ಪ್ರಕರಣಗಳು ಬುಧವಾರ ಮತ್ತೆ ಏರುಗತಿಯಲ್ಲಿ ಸಾಗಿದೆ. 2,82,970 ಹೊಸ ಕೇಸ್ ದೃಢಪಟ್ಟಿವೆ. 441 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18,31,000ಕ್ಕೆ ಏರಿದೆ. ಬಲಿಯಾದವರ ಒಟ್ಟು ಸಂಖ್ಯೆ 4,87,202ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಒಮಿಕ್ರಾನ್ ರೂಪಾಂತರಿಯ ಸಂಖ್ಯೆ 8,961ಕ್ಕೆ ಏರಿದೆ.
ಒಮಿಕ್ರಾನ್​ನಿಂದ ಸಾವು, ಡಬ್ಲ್ಯುಎಚ್​ಒ:ಒಮಿಕ್ರಾನ್ ಒಂದು ಸೌಮ್ಯ ಸ್ವರೂಪದ ಸೋಂಕು ಎನ್ನುವುದನ್ನು ಮತ್ತೊಮ್ಮೆ ತಳ್ಳಿ ಹಾಕಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಮಹಾ ಕಾರ್ಯದರ್ಶಿ ಟೆಡ್ರೋಸ್ ಅಧಾನಂ ಘೇಬ್ರಿಯೆಸಸ್, ಈ ಪ್ರಭೇದದ ಕಾರಣ ವಿಶ್ವದೆಲ್ಲೆಡೆ ಆಸ್ಪತ್ರೆಗೆ ದಾಖಲಾಗುವ ಹಾಗೂ ಮರಣದ ಪ್ರಮಾಣ ಹೆಚ್ಚುತ್ತಿದೆ ಎಂದಿದ್ದಾರೆ.
ಶ್ವಾಸಕೋಶ ಸಮಸ್ಯೆ ಕಡಿಮೆ:ಹೊಸದಾಗಿ ದೃಢಪಡುತ್ತಿರುವ ಕೋವಿಡ್ ಪ್ರಕರಣ ಗಳಲ್ಲಿ ಶ್ವಾಸಕೋಶದ ಒಳಗೊಳ್ಳುವಿಕೆ ತುಂಬಾ ಕಡಿಮೆಯಿದೆ ಎಂದು ತಜ್ಞರು ಹೇಳಿದ್ದಾರೆ. ಕರೊನಾ ಮಹಾಮಾರಿಯ ಎರಡನೇ ಹಾಗೂ ಮೂರನೇ ಅಲೆ ನಡುವೆ ರೋಗದ ಸ್ವರೂಪದಲ್ಲಿ ಬದಲಾವಣೆ ಕಂಡುಬಂದಿದೆ ಎಂದು ರೇಡಿಯಾಲಜಿಸ್ಟ್ ಅಮಿತ್ ಗುಪ್ತಾ ಹೇಳಿದ್ದಾರೆ.
6 ತಿಂಗಳಲ್ಲಿ ಇಮ್ಯುನಿಟಿ ನಾಶ:ಶೇಕಡ 30ರಷ್ಟು ಜನರು, ವ್ಯಾಕ್ಸಿನ್​ಪ್ರೇರಿತ ರೋಗ ನಿರೋಧಕ ಶಕ್ತಿಯನ್ನು ಲಸಿಕೆ ಪಡೆದ ಆರು ತಿಂಗಳಲ್ಲಿ ಕಳೆದುಕೊಳ್ಳುತ್ತಾರೆ ಎಂದು ಏಷ್ಯನ್ ಹೆಲ್ತ್​ಕೇರ್ ಫೌಂಡೇಶನ್ ಸಹೋಗದಲ್ಲಿ ಎಐಜಿ ಹಾಸ್ಪಿಟಲ್ಸ್ ನಡೆದ ಅಧ್ಯಯನದಿಂದ ತಿಳಿದು ಬಂದಿದೆ. ಈ ಅಧ್ಯಯನದ ಫಲಿತಾಂಶ ಇತರ ಜಾಗತಿಕ ಮಟ್ಟದ ಫಲಿತಾಂಶಕ್ಕೆ ಸರಿಸಮವಾಗಿದೆ ಎಂದು ಆಸ್ಪತ್ರೆ ಬುಧವಾರ ಹೇಳಿದೆ.
ವಿಮಾನ ನಿರ್ಬಂಧ ಫೆ. 28ರ ವರೆಗೆ ವಿಸ್ತರಣೆ:ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಕೇಂದ್ರ ಸರ್ಕಾರ ಫೆಬ್ರವರಿ 28ರ ವರೆಗೆ ವಿಸ್ತರಿಸಿದೆ. 2020ರ ಮಾರ್ಚ್ 23ರಿಂದ ಈ ನಿರ್ಬಂಧ ಜಾರಿಯಲ್ಲಿದೆ. ಆದರೆ ಭಾರತ ಮತ್ತು ಸುಮಾರು 40 ದೇಶಗಳ ನಡುವೆ ಏರ್ ಬಬಲ್ ನಿಯಮದಡಿ ವಿಶೇಷ ವಿಮಾನಗಳ ಸಂಚಾರ ನಡೆಯುತ್ತಿದೆ. ಸಂಚಾರ ನಿರ್ಬಂಧ ವಿಸ್ತರಿಸಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಬುಧವಾರ ಆದೇಶ ಹೊರಡಿಸಿದೆ.
ಐಸಿಯು, ಆಕ್ಸಿಜನ್ ಬೆಡ್ ಬಳಕೆ ಏರಿಕೆ:ಕೇರಳದಲ್ಲಿ ಕರೊನಾ ರೋಗಿಗಳಿಂದ ಐಸಿಯು ಬೆಡ್ ಹಾಗೂ ಆಕ್ಸಿಜನ್ ಬೆಡ್ ಬಳಕೆಯಲ್ಲಿ ಒಂದೇ ದಿನ ದಲ್ಲಿ ಶೇಕಡ 20ರಷ್ಟು ಏರಿಕೆ ಕಂಡು ಬಂದಿದೆ. ರಾಜ್ಯದಲ್ಲಿ ಸೋಂಕಿನ ಕೇಸ್​ಗಳ ಹೆಚ್ಚಳದೊಂದಿಗೆ ತುರ್ತು ನಿಗಾ ಘಟಕ ಹಾಗೂ ಆಮ್ಲಜನಕ ಅವಶ್ಯಕತೆ ಗಣನೀಯವಾಗಿ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಒಮಿಶ್ಯೂರ್’ ಕಿಟ್ ಪರೀಕ್ಷೆ ಆರಂಭ:ಒಮಿಕ್ರಾನ್ ರೂಪಾಂತರಿಯನ್ನು ಪತ್ತೆ ಹಚ್ಚುವ ‘ಒಮಿಶ್ಯೂರ್’ ಕಿಟ್​ಗಳ ಪರೀಕ್ಷೆಯನ್ನು ಒಡಿಶಾದಲ್ಲಿ ಆರಂಭಿಸಲಾಗಿದೆ. ರಾಜ್ಯ ಸರ್ಕಾರ 30,000 ಒಮಿಶ್ಯೂರ್ ಆರ್​ಟಿ-ಪಿಸಿಆರ್ ಟೆಸ್ಟ್ ಕಿಟ್​ಗಳನ್ನು ಪಡೆದಿದೆ ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಬಿಜಯ್ ಮಹಾಪಾತ್ರ ತಿಳಿಸಿದ್ದಾರೆ.
ರಾಜ್ಯಗಳಿಗೆ ಸುಪ್ರೀಂ ತರಾಟೆ:ಕರೊನಾದಿಂದ ಮೃತ ಪಟ್ಟವರ ಕುಟುಂಬಕ್ಕೆ ಪರಿಹಾರ ವಿತರಣೆ ಯಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಈ ಸಂಬಂಧ ಆಂಧ್ರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ. ನ್ಯಾಯಾಂಗ ನಿಂದನೆ ಕೇಸ್ ಆರಂಭಿ ಸಬಾರದೇಕೆ ಎನ್ನುವುದಕ್ಕೆ ಸಮಜಾಯಿಷಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಕೋರ್ಟ್ ಸೂಚಿಸಿದೆ.
ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 − 17 =
Remember me
