ನವದೆಹಲಿ:ಕರೊನಾ ಸೋಂಕಿನಿಂದ ತೀವ್ರವಾಗಿ ಬಾಧಿತವಾಗಿರುವ ಚೀನಾದ ವುಹಾನ್​ನಿಂದ ಇನ್ನೂ 76 ಭಾರತೀಯರು ಹಾಗೂ 36 ವಿದೇಶಿ ಪ್ರಜೆಗಳನ್ನು ಗುರುವಾರ ಬೆಳಗ್ಗೆ ಭಾರತಕ್ಕೆ ಕರೆತರಲಾಗಿದೆ. ಅವರನ್ನು ರಾಷ್ಟ್ರ ರಾಜಧಾನಿಯಲ್ಲಿರುವ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಭಾರತ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಜಪಾನ್ ಜಲಸೀಮೆಯಲ್ಲಿ ಲಂಗರು ಹಾಕಿದ್ದ ಹಡಗಿನಲ್ಲಿದ್ದ 119 ಭಾರತೀಯರೂ ಗುರುವಾರ ಸ್ವದೇಶಕ್ಕೆ ಆಗಮಿಸಿದರು.
ಭಾರತೀಯ ವಾಯು ಪಡೆಯ (ಐಎಎಫ್) ಸಿ-17 ಗ್ಲೋಬ್​ವಾಸ್ಟರ್ 3 ಸಾರಿಗೆ ವಿಮಾನದಲ್ಲಿ ಕರೆತರಲಾದವರಲ್ಲಿ 76 ಭಾರತೀಯರಲ್ಲದೆ ಬಾಂಗ್ಲಾದೇಶದ 23, ಮ್ಯಾನ್ಮಾರ್, ಮಾಲ್ದೀವ್ಸ್​ನ ತಲಾ ಇಬ್ಬರು ಹಾಗೂ ದಕ್ಷಿಣ ಆಫ್ರಿಕಾ, ಅಮೆರಿಕ ಮತ್ತು ಮಡಗಾಸ್ಕರ್​ನ ತಲಾ ಒಬ್ಬರು ಇದ್ದಾರೆ. ಚೀನಾದ ಕರೊನಾ ಸಂತ್ರಸ್ತರಿಗಾಗಿ 15 ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತ ಸೇನಾ ವಿಮಾನ ಬುಧವಾರ ವುಹಾನ್​ಗೆ ತೆರಳಿತ್ತು. ಅದು ಮರಳುವಾಗ ಭಾರತೀಯರು ಹಾಗೂ ಇತರರನ್ನು ಕರೆತಂದಿದೆ. ಇದಕ್ಕೂ ಮುನ್ನ ಈ ತಿಂಗಳ ಆರಂಭದಲ್ಲಿ ಎರಡು ಏರ್ ಇಂಡಿಯಾ ವಿಮಾನಗಳ ಮೂಲಕ ಸುಮಾರು 650 ಭಾರತೀಯರನ್ನು ವುಹಾನ್​ನಿಂದ ಕರೆ ತರಲಾಗಿತ್ತು. ದೆಹಲಿ ಹಾಗೂ ಮನೆಸಾರ್​ನಲ್ಲಿರುವ ನಿಗಾ ಘಟಕದಲ್ಲಿರುವ ಜನರಿಗೆ ತಜ್ಞ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತಿತರರು ಇದ್ದು ದಿನಪೂರ್ತಿ ಎಲ್ಲ ಸೌಲಭ್ಯ ಒದಗಿಸುತ್ತಿದ್ದಾರೆ.
ಇರಾನ್​ನಲ್ಲಿ 22 ಸಾವು
ಇರಾನ್​ನಲ್ಲಿ ಕರೊನಾ ವೈರಸ್​ನಿಂದ 22 ಜನರು ಮೃತಪಟ್ಟಿದ್ದಾರೆ. 141 ಪ್ರಕರಣಗಳು ದೃಢಪಟ್ಟಿವೆ. ಇರಾನ್​ನ 31 ಪ್ರಾಂತ್ಯಗಳಿದ್ದು 20ರಲ್ಲಿ ಸೋಂಕಿರುವುದು ದೃಢಪಟ್ಟಿದೆ.
ಹಡಗಿನಲ್ಲಿದ್ದ ಭಾರತೀಯರ ರಕ್ಷಣೆ
ಕರೊನಾ ಸೋಂಕಿನ ಕಾರಣ ಪ್ರಯಾಣಿಕರ ತಪಾಸಣೆಗಾಗಿ ಜಪಾನ್​ನ ಸಾಗರದಲ್ಲಿ ತಡೆಹಿಡಿಯಲಾಗಿದ್ದ ನೌಕೆಯಲ್ಲಿದ್ದ 119 ಭಾರತೀಯರನ್ನು ಏರ್ ಇಂಡಿಯಾದ ವಿಶೇಷ ವಿಮಾನ ಗುರುವಾರ ದೆಹಲಿಗೆ ಕರೆತಂದಿತು. ಅವರೊಂದಿಗೆ ಶ್ರೀಲಂಕಾ, ನೇಪಾಳ, ಪೆರು ಮತ್ತು ದಕ್ಷಿಣ ಆಫ್ರಿಕಾದ ಐವರನ್ನು ಕೂಡ ಕರೆತರಲಾಗಿದೆ. ಒಟ್ಟು 124 ಜನರನ್ನು ಟೋಕಿಯೊದಿಂದ ಕರೆ ತರಲಾಯಿತು. ಭಾರತೀಯರನ್ನು ತೆರವುಗೊಳಿಸಲು ಅನುಕೂಲ ಕಲ್ಪಿಸಿದ್ದಕ್ಕಾಗಿ ಜಪಾನ್​ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೃತಜ್ಞತೆ ಸಲ್ಲಿಸಿದ್ದಾರೆ. 132 ಸಿಬ್ಬಂದಿ ಹಾಗೂ ಆರು ಪ್ರಯಾಣಿಕರ ಸಹಿತ 138 ಭಾರತೀಯರು ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿದ್ದರು. ಐಷಾರಾಮಿ ಪ್ರಯಾಣಿಕ ನೌಕೆಯಲ್ಲಿ ಒಟ್ಟು 3,711 ಜನರಿದ್ದರು. ನೌಕೆಯಲ್ಲಿ ಪ್ರಯಾಣಿಸಿ ಮೊದಲೇ ಇಳಿದಿದ್ದ ಒಬ್ಬ ಪ್ರಯಾಣಿಕ ಕರೊನಾ ವೈರಸ್ ಸೋಂಕಿತ ಎನ್ನುವುದು ಗೊತ್ತಾದ ತಕ್ಷಣವೇ ಫೆಬ್ರವರಿ 5ರಿಂದ ಅದನ್ನು ತಡೆಹಿಡಿಯಲಾಗಿತ್ತು. 16 ಭಾರತೀಯರಲ್ಲಿ ವೈರಸ್ ಇರುವುದು ದೃಢಪಟ್ಟಿದ್ದು, ಅವರು ಚಿಕಿತ್ಸೆಗಾಗಿ ಜಪಾನ್​ನಲ್ಲೇ ಉಳಿಯಲಿದ್ದಾರೆ. ವೈರಸ್ ಮೂಲವಾದ ಚೀನಾದ ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್ ಸಹಿತ ಚೀನಾವೊಂದರಲ್ಲೇ 2,600ಕ್ಕೂ ಹೆಚ್ಚು ಜನರು ಬಲಿಯಾಗಿದ್ದು ಜಗತ್ತಿನಾದ್ಯಂತ ಸುಮಾರು 80,000ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
ಪಾಕ್​ನಲ್ಲೂ ಸೋಂಕು ಪತ್ತೆ
ಇರಾನ್​ನಿಂದ ಪಾಕಿಸ್ತಾನಕ್ಕೆ ಮರಳಿದ್ದ ಇಬ್ಬರಲ್ಲಿ ಕರೊನಾ ವೈರಸ್ ಪತ್ತೆಯಾಗಿರುವುದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದೆ. ಪಾಕ್​ನ ಅತಿ ದೊಡ್ಡ ನಗರವಾದ ಕರಾಚಿಯಲ್ಲಿ ಪ್ರಕರಣಗಳು ದೃಢಪಟ್ಟಿದ್ದು ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚಲಾಗಿದೆ. ಸಿಂಧ್​ನಲ್ಲಿ ಫೆಬ್ರವರಿ 27 ಮತ್ತು 28ರಂದು ಹಾಗೂ ಬಲೂಚಿಸ್ಥಾನದಲ್ಲಿ ಶಾಲಾ ಕಾಲೇಜ್​ಗಳಿಗೆ ಮಾರ್ಚ್ 15ರ ವರೆಗೆ ರಜೆ ಘೋಷಿಸಲಾಗಿದೆ. ಇರಾನ್​ನೊಂದಿಗಿನ ಗಡಿಯನ್ನು ಪಾಕ್ ಮುಚ್ಚಿದೆ. ಈ ಮಧ್ಯೆ, ಸೋಂಕು ಹರಡುವುದನ್ನು ತಡೆಯಲು ಮನ್ನೆಚ್ಚರಿಕೆ ಕ್ರಮದ ಅಗತ್ಯ ಭಾಗವಾದ ಮುಖಗಸುಗಳ ತೀವ್ರ ಕೊರತೆಯನ್ನು ಚೀನಾ ಎದುರಿಸುತ್ತಿದೆ. ದೇಶದಲ್ಲಿ ರೋಗ ಹರಡುವ ಸಾಧ್ಯತೆ ಇಲ್ಲದಿರುವುದರಿಂದ ಜನರು ಗಾಬರಿಪಡಬೇಕಿಲ್ಲ ಎಂದು ಚೀನಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ನಿಷೇಧಕ್ಕೆ ಕಾನೂನು
ವನ್ಯಪ್ರಾಣಿಗಳ ವ್ಯಾಪಾರದ ಪರಿಣಾಮವಾಗಿ ಕರೊನಾ ವೈರಸ್ ಕಾಣಿಸಿಕೊಂಡಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿರುವುದರಿಂದ ನಾಯಿ ಮತ್ತು ಬೆಕ್ಕಿನ ಮಾಂಸ ಸೇವನೆ ನಿಷೇಧಿಸುವ ಕಾನೂನು ರೂಪಿಸಲು ಚೀನಾದ ಶೆನ್​ಜೆನ್ ಪ್ರಾಂತ್ಯ ಚಿಂತಿಸುತ್ತಿದೆ. ದೇಶದ ದಕ್ಷಿಣ ಭಾಗದ ಶೆನ್​ಜೆನ್ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕೇಂದ್ರವಾಗಿದೆ.
ಕಾರವಾರದ ಅಭಿಷೇಕ ವಾಪಸ್
ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಸಿಕ್ಕಿ ಹಾಕಿಕೊಂಡು ಕಾರವಾರ ಮೂಲದ ಯುವಕ ಅಭಿಷೇಕ ಮಗರ್ ಬುಧವಾರ ಸ್ವದೇಶಕ್ಕೆ ಮರಳಿದ್ದಾರೆ. ಭಾರತ ಕಳಿಸಿದ್ದ ವಿಶೇಷ ವಿಮಾನದಲ್ಲಿ ಅವರು ಗುರುವಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ನವದೆಹಲಿ ತಲುಪಿದ್ದಾರೆ. ನಂತರ ಅವರನ್ನು ಹರಿಯಾಣದ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:15 − 1 =
Remember me
