ನವದೆಹಲಿ:ಭಾರತದಲ್ಲಿ ಕರೊನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ 74ಕ್ಕೆ ಏರಿದೆ. ಜಗತ್ತಿನಾದ್ಯಂತ 4500ಕ್ಕೂ ಹೆಚ್ಚು ಜನ ಮೃತಪಟ್ಟು 1,26,000ಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಕಳೆದೆರಡು ವಾರಗಳಲ್ಲಿ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಎಲ್ಲ ದೇಶಗಳ ವೀಸಾಗಳನ್ನು ಭಾರತ ಸರ್ಕಾರ ಏ.15ರವರೆಗೆ ಅಮಾನತು ಮಾಡಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಕೇರಳ (17) ಪ್ರಥಮ ಸ್ಥಾನದಲ್ಲಿದೆ. ಹರಿಯಾಣ-14, ಉತ್ತರ ಪ್ರದೇಶ-11, ಮಹಾರಾಷ್ಟ್ರ-11, ದೆಹಲಿ-6, ಕರ್ನಾಟಕ-5, ಲಡಾಖ್-3, ಜಮ್ಮು ಮತ್ತು ಕಾಶ್ಮೀರ-1, ತಮಿಳುನಾಡು-1, ರಾಜಸ್ಥಾನ-3 ಮತ್ತು ಪಂಜಾಬ್​ನಲ್ಲಿ ಒಂದು ಪ್ರಕರಣ ದೃಢಪಟ್ಟಿವೆ. ಭಾರತದ ಸೋಂಕಿತರ ಪೈಕಿ 17 ಮಂದಿ ವಿದೇಶಿಯರು.
ಸೋಂಕು ಪ್ರಮಾಣ ಹೆಚ್ಚಿರುವ ದೇಶಗಳಾದ ಚೀನಾ, ಇಟಲಿ, ಇರಾನ್, ಕೊರಿಯಾ, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿ ಸಹಿತ 19 ದೇಶಗಳಿಂದ ಭಾರತಕ್ಕೆ ಬರುವ ಭಾರತೀಯರ ಸಹಿತ ಎಲ್ಲ ಪ್ರಯಾಣಿಕರು ಕನಿಷ್ಠ 14 ದಿನ ವಿಶೇಷ ನಿಗಾ ಚಿಕಿತ್ಸೆಗೆ (ಕ್ವಾರಂಟೈನ್) ಒಳಪಡಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ಮಾರಕ ವ್ಯಾಧಿಯ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಸಂಸತ್​ಗೆ ಜನರ ಭೇಟಿಗಾಗಿ ನೀಡುವ ಪಾಸ್​ಗಳನ್ನು ಗುರುವಾರ ರದ್ದುಪಡಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಲೋಕಸಭೆ ಕಲಾಪವನ್ನು ಮುಂದೂಡಲಾಗುವುದೇ ಎಂಬ ಪ್ರಶ್ನೆಗೆ ಸ್ಪೀಕರ್ ಓಂ ಬಿರ್ಲಾ ‘ಇಲ್ಲ’ ಎಂದಿದ್ದಾರೆ. ಆದರೆ, ಸಂಸದೀಯ ವ್ಯವಹಾರಗಳ ಸಚಿವ ಪ್ರಲಾದ್ ಜೋಷಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳವಳದ ವಿಚಾರ:ಕರೊನಾ ಸೋಂಕು ಹಬ್ಬುತ್ತಿರುವುದು ‘ಕಳವಳಕಾರಿ ಸಂಗತಿ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ ಸಂಸತ್ತಿನಲ್ಲಿ ಹೇಳಿದರು. ‘ಅಸಾಮಾನ್ಯ ಪರಿಸ್ಥಿತಿಗೆ ಅಸಾಮಾನ್ಯ ಪ್ರತಿಕ್ರಿಯೆಯ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು. ಮಹಾರಾಷ್ಟ್ರ ಮತ್ತು ಜಮ್ಮು-ಕಾಶ್ಮೀರದ 1,100 ಯಾತ್ರಿಕರು ಹಾಗೂ 300 ವಿದ್ಯಾರ್ಥಿಗಳ ಸಹಿತ ಸುಮಾರು 6,000 ಭಾರತೀಯರು ಇರಾನ್​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ವಿಶೇಷವಾಗಿ ಕ್ವಾಮ್ಲ್ಲಿ ಸಿಲುಕಿರುವ ಯಾತ್ರಿಗಳನ್ನು ವಾಪಸ್ ಕರೆತರುವುದು ಮೊದಲ ಆದ್ಯತೆಯಾಗಿದೆ ಎಂದರು. ಮಂಗಳವಾರ ಇರಾನ್​ನಿಂದ 58 ಭಾರತೀಯರನ್ನು ಕರೆತರಲಾಗಿದೆ. ಇರಾನ್ ವ್ಯವಸ್ಥೆಯ ಕಾರಣದಿಂದ ಭಾರತೀಯರನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ತಿಳಿಸಿದರು.
ಪ್ರಯಾಣಿಕರ ಸಂಖ್ಯೆ ಇಳಿಮುಖ:ದೇಶದ ವಿಮಾನ ನಿಲ್ದಾಣಗಳಿಗಳಿಗೆ ಪ್ರತಿದಿನ ಬಂದಿಳಿಯುವ ಪ್ರಯಾಣಿಕರ ಸಂಖ್ಯೆ ಕರೊನಾ ಹಿನ್ನೆಲೆಯಲ್ಲಿ 70,000 ದಿಂದ 62,000ಕ್ಕೆ ಕುಸಿದಿದೆಯೆಂದು ಕೇಂದ್ರ ಸಚಿವ ಹರ್​ದೀಪ್ ಪುರಿ ಗುರುವಾರ ಲೋಕಸಭೆಗೆ ತಿಳಿಸಿದರು. ಪ್ರವಾಸದ ಮೇಲೆ ಬುಧವಾರ ಇನ್ನಷ್ಟು ನಿರ್ಬಂಧ ಹೇರಿರುವುದರಿಂದ ಈ ಸಂಖ್ಯೆ 40,000ಕ್ಕೆ ಕುಸಿಯ ಬಹುದು ಎಂದರು.
ಹೈಕೋರ್ಟ್ ಖಡಕ್ ಆದೇಶ:ಕರೊನಾ ವೈರಸ್ ಸೋಂಕಿನ ಕಾರಣದಿಂದ ಇರಾನ್​ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಸಂರ್ಪಸುವಂತೆ ದೆಹಲಿ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ನಿರ್ದೇಶನ ಪಾಲಿಸದಿದ್ದರೆ ಕೋರ್ಟ್ ಸಹಿಸುವುದಿಲ್ಲ ಎಂದು ನ್ಯಾಯಮೂರ್ತಿ ನವೀನ್ ಚಾವ್ಲಾ ಕೇಂದ್ರಕ್ಕೆ ಎಚ್ಚರಿಸಿದರು. ಈ ಬಗ್ಗೆ ಮಾರ್ಚ್ 17ರಂದು ವರದಿ ಸಲ್ಲಿಸುವಂತೆಯೂ ಸೂಚಿಸಿದರು.
ಮುಚ್ಚಿದ ಶಿಕ್ಷಣ ಸಂಸ್ಥೆಗಳು:ಕರೊನಾ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದೆಹಲಿಯಲ್ಲಿ ಪ್ರಾಥಮಿಕ ಶಾಲೆಗಳನ್ನು ಮಾ.31ರವರೆಗೆ ಮುಚ್ಚಲಾಗಿದೆ. ಕಾಶ್ಮೀರ ಮತ್ತು ಲಡಾಕ್​ನಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ರಜೆ ನೀಡಲಾಗಿದೆ. ಭಾರತೀಯ ಆಡಳಿತ ಸಂಸ್ಥೆ (ಐಐಎಂ) ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಮುಂದೂಡಿದೆ.
ಪಾಕ್​ನಲ್ಲಿ 20 ಸೋಂಕಿತರು:ಗಿಲ್ಗಿಟ್ ಬಾಲ್ಟಿಸ್ತಾನ್​ನಲ್ಲಿ 14 ವರ್ಷದ ಬಾಲಕನಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿರುವುದರಿಂದ ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ 20ಕ್ಕೇರಿದೆ. ಬಾಲಕ ಫೆ.25ರಂದು ತನ್ನ ತಾಯಿಯೊಂದಿಗೆ ಇರಾನ್​ನಿಂದ ಮರಳಿದ್ದ.
ಚೀನಾದಲ್ಲಿ ನಿಯಂತ್ರಣಕ್ಕೆ:ಕರೊನಾ ಸೋಂಕು ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಸೋಂಕಿನ ಹೊಸ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ. ಸೋಂಕು, ಸಾವಿನ ಸಂಖ್ಯೆ ಹುಬೇ ರಾಜಧಾನಿ ವುಹಾನ್​ನಲ್ಲೇ ಹೆಚ್ಚಾಗಿತ್ತು. ಹುಬೇ ಪ್ರಾಂತ್ಯದಲ್ಲಿ ಗುರುವಾರ 8 ಪ್ರಕರಣ ಮಾತ್ರವೇ ಪತ್ತೆಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಯಾವಾಗಲೂ ಮುಖಗವಸಿನ ಅಗತ್ಯವಿರುವುದಿಲ್ಲ. ಗುಂಪುಗಳಿಂದ ದೂರವಿದ್ದರೆ ಇದರ ಅಗತ್ಯವೇ ಬೀಳುವುದಿಲ್ಲ. ಜನರು ಗಾಬರಿಪಡುವ ಅಗತ್ಯವಿಲ್ಲ.
| ಲವ್ ಅಗರ್​ವಾಲ್ ಜಂಟಿ ಕಾರ್ಯದರ್ಶಿ, ಆರೋಗ್ಯ ಸಚಿವಾಲಯ
ದೇಗುಲಗಳೂ ಬಂದ್
ಬೆಂಗಳೂರು: ರಾಜ್ಯದಲ್ಲಿ ಕರೊನಾ ವೈರಸ್ ಸೋಂಕಿತರ ಪತ್ತೆಯಿಂದಾಗಿ ಎಲ್ಲೆಡೆ ಭಯದ ವಾತಾವರಣ ಸೃಷ್ಟಿಯಾಗಿದ್ದು, ವ್ಯಾಪಾರ, ಉದ್ದಿಮೆಗಳಷ್ಟೇ ಅಲ್ಲದೆ ದೇವಾಲಯಗಳೂ ಇದರ ಪರಿಣಾಮ ಎದುರಿಸುವಂತಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ, ಮಲೆಮಹದೇಶ್ವರ ಸೇರಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶೀತ ಸಂಬಂಧಿ ಸಮಸ್ಯೆ ಇರುವವರು ದೇವಾಲಯಕ್ಕೆ ಬರಬೇಡಿ ಎಂದು ಹೇಳಿದೆ.
ಶಬರಿಮಲೆಗೆ ಭಕ್ತರಿಗೆ ಪ್ರವೇಶವಿಲ್ಲ
ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಾಸಿಕ ಪೂಜಾ ಮಹೋತ್ಸವಕ್ಕಾಗಿ ಮಾ.13ರಂದು ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಆದರೆ, ಕರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಮಾಸಿಕ ಪೂಜೆಗಾಗಿ ಭಕ್ತರು ಭೇಟಿ ನೀಡುವುದು ಬೇಡ, ಮುಂದೆ ಭೇಟಿ ನೀಡಬಹುದು ಎಂದು ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್. ವಾಸು ಮನವಿ ಮಾಡಿದ್ದಾರೆ. ಮಾಸಿಕ ಪೂಜೆ ಸಂದರ್ಭ ನೈಮಿತ್ತಿಕ ಕಾರ್ಯಕ್ರಮಗಳು ಮಾತ್ರ ನಡೆಯಲಿವೆ, ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಸಾರಿಗೆ ಉದ್ಯಮಕ್ಕೂ ಸಂಕಷ್ಟ
ಬೆಂಗಳೂರು: ರಾಜ್ಯದಲ್ಲಿ ಕರೊನಾ ವೈರಸ್ ಭೀತಿಯಿಂದಾಗಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಹಾಗೂ ವಿಮಾನಗಳು ಪ್ರಯಾಣಿಕರ ಕೊರತೆ ಎದುರಿಸುತ್ತಿರುವ ಬೆನ್ನಲ್ಲೇ ಪ್ರವಾಸೋದ್ಯಮ ವಾಹನ ಹಾಗೂ ಖಾಸಗಿ ಬಸ್, ಟ್ರಾವೆಲ್ಸ್​ಗೂ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿ ಸ್ಥಳಗಳು, ಧಾರ್ವಿುಕ, ಸಾಂಸ್ಕೃತಿಕ ತಾಣಗಳಿಗೆ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಇಳಿಮುಖವಾಗಿದ್ದು, ಟ್ರಾವೆಲ್ಸ್​ನಲ್ಲಿ ಕಾಪೋರೇಟ್ ಬುಕಿಂಗ್​ಗಳೂ ಕ್ಷೀಣಿಸಿವೆ. ಏರ್​ಪೋರ್ಟ್ ಟ್ಯಾಕ್ಸಿಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ. ಒಟ್ಟಾರೆ ಸಾರಿಗೆ ಉದ್ಯಮ ಭಾರಿ ನಷ್ಟಕ್ಕೆ ತುತ್ತಾಗಿದೆ.
ಕೊಡಗಿನ ವ್ಯಕ್ತಿಗೆ ಸೋಂಕು ಶಂಕೆ
ಮಡಿಕೇರಿ: ದುಬೈಯಿಂದ ಗುರುವಾರ ಬೆಳಗ್ಗೆ 10.30 ರಲ್ಲಿ ಬಂದ ಕೊಡಗು ಮೂಲದ 30 ವರ್ಷದ ವ್ಯಕ್ತಿಗೆ ಕರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುಬೈಯಲ್ಲಿ ಉದ್ಯೋಗದಲ್ಲಿದ್ದ ಇವರು, ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ಮಡಿಕೇರಿಗೆ ಬಸ್​ನಲ್ಲಿ ಆಗಮಿಸುವಾಗ ಜ್ವರ, ಗಂಟಲು ಕೆರೆತ, ನೆಗಡಿ, ಜ್ವರ ಕಾಣಿಸಿಕೊಂಡಿತ್ತು. ಮನೆಗೆ ತೆರಳದೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ತಪಾಸಣೆಗೆ ಒಳಗಾಗಿದ್ದು, ಕರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರ ರಕ್ತ ಮಾದರಿಯನ್ನು ಮೈಸೂರಿನ ಲ್ಯಾಬ್​ಗೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ಸೋಂಕು ಖಚಿತವಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಕರೊನಾ ಕುರುಹು ಕಂಡುಬಂದಿರಲಿಲ್ಲ ಎನ್ನಲಾಗಿದೆ.
VIDEO: ಕರೋನಾ ವೈರಸ್ ಸೋಂಕಿಗೆ ಔಷಧ ಅಭಿವೃದ್ಧಿಪಡಿಸಲು ಬರೋಬ್ಬರಿ ಎರಡು ವರ್ಷ ಬೇಕಾದೀತು ಎಂದ ಆರೋಗ್ಯ ಸಚಿವಾಲಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
