ನವದೆಹಲಿ:ತುಮಕೂರು ಮೂಲದ ಮಧು ಹೇಮೇಗೌಡರಿಗೆ ಸಾವು-ನೋವಿನ ದೃಶ್ಯ ಸಹಜ ಎನಿಸಿಬಿಟ್ಟಿದೆ. ಕರೊನಾ ಪೀಡಿತರು ಕಣ್ಣೆದುರಲ್ಲೇ ಮೃತಪಡುತ್ತಿರುವುದು ಒಂದೆಡೆಯಾದರೆ ತಮ್ಮವರನ್ನು ಕಳೆದುಕೊಂಡವರ ನೋವಿನ ಆಕ್ರಂದನ ನೋಡಿ ಕಣ್ಣೀರೇ ಬತ್ತಿಹೋಗಿದೆ. ಮನೆಯಲ್ಲೇ ಉಳಿದು ಜೀವ ಉಳಿಸಿಕೊಳ್ಳಿ ಎಂದು ಭಾರತೀಯರಿಗೆ ಕಿವಿಮಾತು ಹೇಳುವ ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ವಿಜಯವಾಣಿಯೊಂದಿಗೆ ಮಾತನಾಡಿದ್ದಾರೆ.
# ಇಟಲಿ ಪರಿಸ್ಥಿತಿ ಹೇಗಿದೆ?
ಇಟಲಿಯಲ್ಲಿ ಕರೊನಾವೈರಸ್​ಗೆ ಮೃತಪಟ್ಟವರ ಸಂಖ್ಯೆ 8,000 ದಾಟಿದೆ. ಸೋಂಕಿತರ ಸಂಖ್ಯೆ 75,000 ಮೀರಿದೆ. ಕರೊನಾ ಕುರಿತ ಆತಂಕ ಹೆಚ್ಚಾಗುತ್ತಿದ್ದಂತೆ ಭಾರತಕ್ಕೆ ಬಂದುಬಿಡು ಎಂದು ಕುಟುಂಬಸ್ಥರ ಒತ್ತಾಯ ಹೆಚ್ಚಾಗಿದೆ. ಆದರೆ, ನರ್ಸ್ ಆಗಿ ಇಂಥಾ ಸಂಕಟದ ಸಮಯದಲ್ಲಿ ಊರಿಗೆ ಹೇಗೆ ಹೋಗಲಿ? ಚಿಕಿತ್ಸೆ ನೀಡುವ ವೇಳೆ ಪತಿಗೆ ಎಲ್ಲಿ ಸೋಂಕು ತಗುಲೀತೋ ಎಂಬ ಭಯದಿಂದಿರುವ ಪತ್ನಿ ಸಂಜನಾಗೆ ಮಾನಸಿಕ ಧೈರ್ಯ ತುಂಬುತ್ತಾ ಕರ್ತವ್ಯ ಮುಂದುವರಿಸಿದ್ದೇನೆ. ಚೀನಾದಿಂದ ಇಟಲಿಗೆ ಬಂದಿದ್ದ ಪ್ರವಾಸಿಗರಿಂದಲೂ ವೈರಸ್ ಹಬ್ಬಿತು. 130 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಇದೇ ರೀತಿ ಕರೊನಾ ಹಬ್ಬಿದರೆ ಆ ಸ್ಥಿತಿ ಊಹಿಸಲಸಾಧ್ಯ. ಸರ್ಕಾರ ಹೇಳುವಷ್ಟು ದಿನ ಭಾರತೀಯರು ದೇಶದ ಹಿತಕ್ಕಾಗಿ ಮನೆಯಲ್ಲೇ ಕುಳಿತುಕೊಳ್ಳಬೇಕು.
# ವಾತಾವರಣದ ಉಷ್ಣಾಂಶದ ಏರಿಳಿತ ಕರೊನಾ ಹರಡುವಿಕೆ ಮೇಲೆ ಪರಿಣಾಮ ಬೀರುವುದೇ?
ಇಲ್ಲ ಅನಿಸುತ್ತದೆ. ಇಟಲಿಗೆ ವೈರಸ್ ಹರಡಿದ್ದ ವೇಳೆ ತೀವ್ರ ಚಳಿಯಿತ್ತು. ಆದರೆ ಈಗ ಹಗಲು 20ರಿಂದ 25 ಡಿಗ್ರಿ ಉಷ್ಣಾಂಶವಿದ್ದರೂ ಕರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ.
# ಕರೊನಾ ಈ ಪರಿ ಇಟಲಿಯನ್ನು ಕಾಡಿದ್ದೇಕೆ?
ಚೀನಾದಲ್ಲಿ ಕರೊನಾ ಹರಡಿದ್ದ ಸುದ್ದಿ ಗೊತ್ತಾದ ಮೇಲೂ ಇಟಲಿಯ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ (ಕರೊನಾ ಕಂಡುಬಂದ ಪ್ರದೇಶ) ಲಾಕ್​ಡೌನ್ ಹೇರಲಾಗಿತ್ತು. ಉಳಿದ ಸ್ಥಳಗಳಲ್ಲಿ ಎಲ್ಲವೂ ಸಹಜವಾಗಿದ್ದವು. ನೈಟ್ ಲೈಫ್ ಪಾರ್ಟಿಗಳು ನಡೆಯುತ್ತಲೇ ಇದ್ದವು. ಅಲ್ಲಿ ಮೋಜು ಮಸ್ತಿ ಮಾಡಿದವರು ಮನೆಗೆ ಬಂದು ವೃದ್ಧರಿಗೆ ಕರೊನಾ ವೈರಸ್ ಹರಡಿಸಿದರು. ಆರಂಭದ 10-12 ದಿನ ಕರೊನಾದ ಯಾವುದೇ ಲಕ್ಷಣಗಳು ಇಲ್ಲದಿದ್ದುದರಿಂದ ಜನ ತಾವು ಆರೋಗ್ಯವಾಗಿದ್ದೇವೆಂದು ಭ್ರಮಿಸಿ ಊರೆಲ್ಲಾ ಮಹಾಮಾರಿಯನ್ನು ಹಬ್ಬಿಸುತ್ತಾ ಹೋದರು. ಮನೆಯಿಂದ ಹೊರಬರಬೇಡಿ ಎಂಬ ಕಾನೂನಿದ್ದರೂ ಜಾಗಿಂಗ್, ದೈಹಿಕ ಚಟುವಟಿಕೆ ನೆಪದಲ್ಲಿ ಹೊರಬರುತ್ತಿದ್ದರು. ಈಗ ಮಿಲಿಟರಿ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಪರಿಸ್ಥಿತಿ ಮಾತ್ರ ಕೈ ಮೀರಿ ಹೋಗಿದೆ.
# ನಿತ್ಯದ ಆಹಾರ ಸಾಮಗ್ರಿ ಖರೀದಿಗೆ ವ್ಯವಸ್ಥೆ ಏನಿದೆ?
ಸರ್ಕಾರ ನೀಡುವ ಆಟೋ ಡಿಕ್ಲರೇಷನ್ ಫಾಮರ್್​ನಲ್ಲಿ ಜನರು ತಾವು ಹೊರ ಹೋಗಲು ಸೂಕ್ತ ಕಾರಣ, ಮನೆ ವಿಳಾಸ ನಮೂದಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಅದನ್ನು ದೃಢೀಕರಿಸಿಕೊಳ್ಳಬೇಕು. ಇದರಿಂದ ಮನೆಯಿಂದ ಒಬ್ಬ ವ್ಯಕ್ತಿ ಹೊರ ಹೋಗಿ ತನಗೆ ಬೇಕಿದ್ದ ಸಾಮಗ್ರಿ ತರಬಹುದಾಗಿದೆ. ತಪ್ಪಿದಲ್ಲಿ 500 ಯೂರೋ ದಂಡ, 3 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ.
# ಸೋಂಕು ಮಕ್ಕಳನ್ನು ಬಾಧಿಸಿದೆಯೇ? ಸೋಂಕಿತ ಭಾರತೀಯರು ಅಲ್ಲಿದ್ದಾರಾ?
ನಾನಿರುವ ಆಸ್ಪತ್ರೆಯಲ್ಲಂತೂ ಮಕ್ಕಳ ಒಂದು ಕೇಸೂ ಬಂದಿಲ್ಲ. ಆದರೆ ಮಕ್ಕಳಿಂದಲೂ ವೈರಾಣು ಹರಡಬಲ್ಲದು. ಕರೊನಾ ಕಾಟ ಶುರುವಾದ ಬಳಿಕ ಭಾರತಕ್ಕೆ ವಿದೇಶಗಳಿಂದ ಸಾವಿರಾರು ಮಂದಿ ಬಂದಿರುವುದರಿಂದ ಅವರೆಲ್ಲರೂ ಸ್ವಯಂ ನಿರ್ಬಂಧ ಹೇರಿಕೊಂಡಿದ್ದರೆ ಭಯಪಡಬೇಕಿಲ್ಲ.
ಮೃತದೇಹ ನೋಡಲು ಯಾರಿಗೂ ಅವಕಾಶವಿಲ್ಲ!
ಮೃತದೇಹದಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆಯಿದ್ದರೂ ವ್ಯಕ್ತಿ ಧರಿಸಿದ್ದ ಬಟ್ಟೆಗಳಲ್ಲಿ ಸೋಂಕುಗಳಿರುತ್ತವೆ. ಹೀಗಾಗಿ ಇಟಲಿಯಲ್ಲಿ ವ್ಯಕ್ತಿ ಸತ್ತ ಕೂಡಲೇ ಶವವನ್ನು ಗೌನ್​ನಿಂದ ಸೀಲ್ ಮಾಡಲಾಗುತ್ತದೆ. ಶವವನ್ನು ಯಾವುದೇ ಕಾರಣಕ್ಕೂ ಕುಟುಂಬಸ್ಥರಿಗೆ ಹಸ್ತಾಂತರಿಸುವಂತಿಲ್ಲ. ಶವಾಗಾರದಲ್ಲೂ ಮೃತಪಟ್ಟವರ ಆಪ್ತರನ್ನು ಹತ್ತಿರ ಸೇರಿಸುತ್ತಿಲ್ಲ. ಕೊನೇ ಬಾರಿಯಾದರೂ ನನ್ನವರನ್ನು ನೋಡಬೇಕು ಎಂದು ಪತಿ/ಪತ್ನಿ, ಮಕ್ಕಳು ಗೋಗರೆಯುವಾಗಲೂ ಶವಾಗಾರ ನಿರ್ವಾಹಕರೂ ಅಸಹಾಯಕರಾಗಿ ಕಣ್ಣೀರಿಡುತ್ತಿದ್ದಾರಂತೆ. ಸಾಮಾನ್ಯವಾಗಿ ಅಂತಿಮಯಾತ್ರೆಯಲ್ಲಿ ಕುಟುಂಬಸ್ಥರು ಕೊಟ್ಟ ಬಟ್ಟೆಯನ್ನೇ ಮೃತರಿಗೆ ತೊಡಿಸಲಾಗುತ್ತದೆ. ಆದರೆ, ಕರೊನಾ ಆ ಅವಕಾಶವನ್ನೂ ಕಿತ್ತುಕೊಂಡಿದೆ. ಸೋಂಕಿತನಿಗೆ ನೆಮ್ಮದಿಯ ಸಾವೂ ಇಲ್ಲ.
ಯಾರಿವರು?
2007ರಲ್ಲಿ ಬೆಂಗಳೂರಿನ ಸರ್ಕಾರಿ ನರ್ಸಿಂಗ್ ಕಾಲೇಜ್​ನಲ್ಲಿ ಪದವಿ ಶಿಕ್ಷಣ ಪಡೆದ ಮಧು ಹೇಮೇಗೌಡ, ಕ್ಲಿನಿಕಲ್ ರಿಸರ್ಚ್ ಅಂಡ್ ರೆಗ್ಯುಲೇಟೆಡ್ ಅಫೇರ್ಸ್ ವಿಷಯದಲ್ಲಿ ಎಂಎಸ್ಸಿ ವ್ಯಾಸಂಗ ಮುಗಿಸಿ ದಯಾನಂದ ಸಾಗರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ನಂತರ ಇಟಲಿಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನರ್ಸಿಂಗ್ ವಿಭಾಗಕ್ಕೆ ನೇಮಕಗೊಂಡು, ಕಳೆದ ಫೆಬ್ರವರಿಯಿಂದ ರಿವೋಲಿ ಪಬ್ಲಿಕ್ ಹಾಸ್ಪಿಟಲ್​ನಲ್ಲಿ ಕೆಲಸದಲ್ಲಿದ್ದಾರೆ. ಸದ್ಯ ಸೋಂಕು ಪೀಡಿತರಿಗೆ ರಿವೋಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ಥಕ ಸೇವೆ ಒದಗಿಸುತ್ತಿದ್ದಾರೆ. ಈ ಆಸ್ಪತ್ರೆಗೆ ಇಟಲಿಯ ಮಿಲಾನ್ ನಿಂದ 140 ಕಿಮೀ ದೂರಲ್ಲಿದೆ. ಸದ್ಯ ಕರೊನಾ ಸೋಂಕಿತರೇ ತುಂಬಿಕೊಂಡಿರುವ ಈ ಆಸ್ಪತ್ರೆಯಲ್ಲಿ ದಿನಕ್ಕೆ ನಾಲ್ಕೈದು ಮಂದಿ ವೈರಸ್​ಗೆ ಬಲಿಯಾಗುತ್ತಿದ್ದಾರೆ.
| ರಾಘವ ಶರ್ಮ ನಿಡ್ಲೆ
ಧೂಮಪಾನ ಮಾಡುವವರಿಗೆ ಕರೊನಾ ವೈರಸ್​ ತುಂಬಾ ಪರಿಣಾಮ ಬೀರಲಿದೆಯೇ? ಸಂಶೋಧನೆ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
