ಇಂದು ಇಡೀ ಜಗತ್ತೇ ಕರೊನಾ ಹಿಡಿತದಲ್ಲಿದೆ ಎಂದರೆ ತಪ್ಪಾಗಲಾರದು. ಪ್ರಪಂಚದಾದ್ಯಂತ ವ್ಯಾಪಿಸಿರುವ ವೈರಸ್, ನೂರಾರು ದೇಶಗಳನ್ನು ಕಂಗೆಡಿಸಿದೆ. ಕೆಲ ಮುಂದುವರಿದ ದೇಶಗಳಲ್ಲೇ ಸೋಂಕಿತರು ಹಾಗೂ ಸಾವಿನ ಪ್ರಮಾಣ ನೋಡಿದರೆ ಯಾರಿಗಾದರೂ ಆತಂಕವಾಗುತ್ತದೆ. ಅಮೆರಿಕ, ಬ್ರಿಟನ್​ನಂಥ ದೇಶಗಳೇ ವೈರಸ್ ಎದುರು ಮಂಡಿಯೂರಿವೆ. ಕೆಲ ದೇಶಗಳು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ತರಲು ಯಶಸ್ವಿಯಾಗಿವೆ. ಪ್ರಮುಖ ರಾಷ್ಟ್ರಗಳಲ್ಲಿ ಕರೊನಾ ಸೃಷ್ಟಿಸಿದ ಆತಂಕ, ಅನಾಹುತ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ…
ಜಾನ್ ಹಾಪ್ಕಿನ್ಸ್ ಯೂನಿವರ್ಸಿಟಿ ಮಾಹಿತಿ ಕೇಂದ್ರದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಅಮೆರಿಕದಲ್ಲಿ 2000ಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ನ್ಯೂಯಾರ್ಕ್ ವಿಶ್ವದಲ್ಲೇ ಅತಿ ಹೆಚ್ಚು ಕರೊನಾ ಕೇಸುಗಳನ್ನು ಹೊಂದಿದ ನಗರಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಅಮೆರಿಕದಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಿರುವ ಪ್ರಮಾಣ ನೋಡಿದರೆ ದೇಶದ ಪಾಲಿಗೆ ಇದು ಅತ್ಯಂತ ಕರಾಳ ವಾರವಾಗಿ ಮಾರ್ಪಾಡಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರೆ, ಈ ಸನ್ನಿವೇಶ 9/11ರ ಭಯೋತ್ಪಾದಕ ದಾಳಿ ಮತ್ತು ಪರ್ಲ್ ಹಾರ್ಬರ್ ದುರಂತವನ್ನು ನೆನಪಿಸುತ್ತಿದೆ ಎಂದು ಅಮೆರಿಕದ ಪ್ರಸಿದ್ಧ ವೈದ್ಯ ಜೆರೋಮ್ ಆಡಮ್್ಸ ಆತಂಕ ಹೊರಹಾಕಿದ್ದಾರೆ. ಕರೊನಾ ಪರಿಣಾಮ ದೊಡ್ಡಣ್ಣ ಅಮೆರಿಕದ ಆರ್ಥಿಕತೆ ಹೀನಾಯ ಸ್ಥಿತಿಗೆ ತಲುಪಲಿದ್ದು, ಲಕ್ಷಾಂತರ ಮಂದಿ ನೌಕರಿ ಕಳೆದುಕೊಳ್ಳಲಿದ್ದಾರೆ. ನ್ಯೂಯಾರ್ಕ್ ನಲ್ಲಿ ಕರೊನಾ ಕೇಸುಗಳು ಹೆಚ್ಚಾಗಿ ಆಸ್ಪತ್ರೆಗಳು ಕೂಡ ರೋಗಿಗಳಿಂದ ಭರ್ತಿಯಾಗಿವೆ.
ಸದ್ಯ ಸುಮಾರು 70 ಸಾವಿರಕ್ಕಿಂತಲೂ ಹೆಚ್ಚು ಇರಾನಿಯನ್ನರಿಗೆ ಕರೊನಾ ಸೋಂಕು ತಗುಲಿದ್ದು, 4 ಸಾವಿರಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ದಯನೀಯ ಸ್ಥಿತಿ ಹಾಗೂ ಕಂಗೆಟ್ಟಿರುವ ಆರ್ಥಿಕತೆಯಿಂದಾಗಿಯೇ ಜನರ ಸಾವು ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಫೆಬ್ರವರಿ ಮಧ್ಯಭಾಗದಿಂದ ವೈರಸ್ ಹರಡುವಿಕೆ ಖಚಿತಪಟ್ಟಿದ್ದರೂ, ಸರ್ಕಾರ ತಡವಾಗಿ ಎಚ್ಚೆತ್ತುಕೊಂಡಿದ್ದರಿಂದಲೇ ದೇಶಕ್ಕೆ ಇಂಥ ಪರಿಸ್ಥಿತಿ ಬಂದಿದೆ ಎಂದು ಹೇಳಲಾಗುತ್ತಿದೆ. ಇರಾನ್​ನಲ್ಲಿ ಸೋಂಕು ತಗುಲಿದ್ದ ಸುಮಾರು 250 ಭಾರತೀಯರನ್ನು ವಿಶೇಷ ವಿಮಾನದ ಮೂಲಕ ಭಾರತ ಸರ್ಕಾರ ಲಾಕ್​ಡೌನ್ ಘೊಷಣೆ ವೇಳೆ ಕರೆಸಿಕೊಂಡು, ಅವರೆಲ್ಲರನ್ನೂ ಚಿಕಿತ್ಸೆಗೊಳಪಡಿಸಿದೆ. ಚೀನಾಕ್ಕೆ ತೆರಳಿದ್ದ ಇರಾನ್​ನ ಕೋಮ್ ಎಂಬ ಪ್ರದೇಶದ ವ್ಯಾಪಾರಿಯೊಬ್ಬನಿಂದ ಕರೊನಾ ಹರಡುವಿಕೆ ಶುರುವಾಯಿತು ಎನ್ನಲಾಗಿದ್ದು, ಮಧ್ಯಪ್ರಾಚ್ಯದ ಸುಮಾರು 10 ದೇಶಗಳು ತಮ್ಮ ದೇಶದಲ್ಲಿ ಸೋಂಕಿನ ಮೂಲ ಇರಾನ್ ಎಂದು ಹೇಳುತ್ತಿವೆ. ಮಧ್ಯಪ್ರಾಚ್ಯದಲ್ಲಿ ಅತಿ ಹೆಚ್ಚು ಸೋಂಕಿತರು ಇರಾನ್​ನಲ್ಲಿದ್ದು, ದೇಶದ ಪ್ರಮುಖ ಅಧಿಕಾರಿಗಳು ಕೂಡ ವೈರಸ್​ಗೆ ಬಲಿಯಾಗಿದ್ದಾರೆ.
ಜನವರಿ ಅಂತ್ಯ ವೇಳೆಗೆ ಇಟಲಿಯ ರೋಮ್ಲ್ಲಿದ್ದ ಚೀನಾದ ಪ್ರವಾಸಿಗರಿಗೆ ಕರೊನಾ ಸೋಂಕಿರುವುದು ದೃಢವಾಗುತ್ತಿದ್ದಂತೆಯೇ ಇಟಲಿಯಲ್ಲಿ ಕರೊನಾ ಹರಡುವಿಕೆ ಆತಂಕ ಸೃಷ್ಟಿಸಿತ್ತು. ಇದಾದ ವಾರದೊಳಗೆ ಚೀನಾದ ವುಹಾನ್​ನಲ್ಲಿದ್ದ ಇಟಲಿ ಪ್ರಜೆಯೊಬ್ಬ ಸ್ವದೇಶಕ್ಕೆ ಮರಳಿದ್ದ ಮತ್ತು ಆತನಲ್ಲೂ ಕರೊನಾ ಪತ್ತೆಯಾಗಿತ್ತು. ಮಾರ್ಚ್ ಮೊದಲ ವಾರದಲ್ಲಿ ದೇಶಾದ್ಯಂತ ಕರೊನಾ ಸೋಂಕು ಹರಡಿತು. ಚೀನಾಕ್ಕಿಂತಲೂ ವೇಗದಲ್ಲಿ ಕರೊನಾ ಹರಡಿದ್ದರಿಂದಾಗಿ, ವಿಶ್ವದಲ್ಲೇ ಅತಿ ಹೆಚ್ಚು ಕರೊನಾ ಸೋಂಕಿತರ ಸಾವಿಗೆ ಇಟಲಿ ಸಾಕ್ಷಿಯಾಯಿತು. ದಿನಕ್ಕೆ ಸಾವಿರದಷ್ಟು ಮಂದಿ ದೇಶದಲ್ಲಿ ಸಾವಿಗೀಡಾಗುತ್ತಿದ್ದು, ದೇಶದೆಲ್ಲೆಡೆ ಸ್ಮಶಾನ ಮೌನ ಆವರಿಸಿದೆ. ಮಾ. 11ರ ವೇಳೆಗೆ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಎಲ್ಲಾ ಚಟುವಟಿಕೆಗಳನ್ನು ರದ್ದುಗೊಳಿಸಲಾಯಿತು. ಈಗಲೂ ದೇಶ ಲಾಕ್​ಡೌನ್ ಸ್ಥಿತಿಯಲ್ಲಿದೆ. ಏಪ್ರಿಲ್ 10ರವರೆಗೆ ಇಟಲಿಯಲ್ಲಿ 9,06,900 ಮಂದಿಗೆ ಕರೊನಾ ಪರೀಕ್ಷೆ ನಡೆಸಲಾಗಿದ್ದು, ಒಂದೂವರೆ ಲಕ್ಷ ಕೇಸುಗಳು ಖಚಿತವಾಗಿವೆ. ಉತ್ತರ ಇಟಲಿಯ ಲೊಂಬಾರ್ಡಿ ಮತ್ತು ವೆನೆಟೊ ನಗರಗಳಲ್ಲಿ ಅತಿ ಹೆಚ್ಚು ಸೋಂಕಿತರಿದ್ದಾರೆ.
ಕರೊನಾ ವೈರಸ್​ನ ಮೂಲ ಚೀನಾ. ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್ ನಗರದ ಕಡಲತೀರದಲ್ಲಿರುವ ಮಾಂಸ ಮಾರುಕಟ್ಟೆಯಲ್ಲಿ ಹುಟ್ಟಿಕೊಂಡ ವೈರಸ್, ಪ್ರಪಂಚಕ್ಕೆ ಮಹಾಮಾರಿಯಾಗಿ ಹಬ್ಬಿತು. ಡಿಸೆಂಬರ್ ತಿಂಗಳಲ್ಲಿ ನ್ಯುಮೋನಿಯಾಕ್ಕೆ ಸ್ಥಳೀಯ ಜನ ಬಲಿಯಾಗುತ್ತಿರುವುದನ್ನು ಗಮನಿಸಿದಾಗಲೂ, ಇದು ಕರೊನಾ ವೈರಸ್ ಎಂಬುದು ಚೀನಾಕ್ಕೆ ಗೊತ್ತಾಗಲಿಲ್ಲವೋ ಅಥವಾ ಸತ್ಯವನ್ನು ಜಗತ್ತಿನಿಂದ ಮುಚ್ಚಿಡಲಾಯಿತೋ ಎಂಬುದು ನಿಗೂಢ. ಆದರೆ, ಇದೊಂದು ಮಾರಣಾಂತಿಕ ವೈರಸ್ ಎಂದು ಬಹಿರಂಗಪಡಿಸುವ ವೇಳೆ ಅದು ಏನು ಮಾಡಬೇಕೋ ಎಲ್ಲವನ್ನೂ ಮಾಡಿತ್ತು. ಜನವರಿ 8ರಂದು ನ್ಯುಮೋನಿಯಾದಿಂದ ಸಾವಿಗೀಡಾಗುತ್ತಿರುವುದಕ್ಕೆ ಮೂಲ ಕಾರಣ ಕರೊನಾ ವೈರಸ್ ಎಂದು ಬೀಜಿಂಗ್​ನಿಂದ ತೆರಳಿದ್ದ ತಜ್ಞ ವೈದ್ಯರ ತಂಡ ದೃಢಪಡಿಸಿತು. ಹುಬೀ ಪ್ರಾಂತ್ಯದ ಎಲ್ಲಾ ನಗರಗಳನ್ನು ದಿಗ್ಬಂಧನದಲ್ಲಿರಿಸಲು ಜ.29ರಂದು ತೀರ್ವನಿಸಲಾಯಿತು. ಆದರೆ, ಅದಾಗಲೇ ವುಹಾನ್ ಮತ್ತು ಅಕ್ಕಪಕ್ಕದ ನಗರಗಳ ಬಹುಪಾಲು ಮಂದಿಗೆ ಸೋಂಕು ತಗುಲಿತ್ತು. ಅವರನ್ನು ಸಂರ್ಪಸಿದವರಿಗೆಲ್ಲಾ ಸೋಂಕು ಹರಡಿತು. ಸಾವಿರಾರು ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರದ ದೃಶ್ಯಗಳು ಜಗತ್ತಿನ ಕೋಟ್ಯಂತರ ಮಂದಿಯ ಮಾನಸಿಕ ಸ್ವಾಸ್ಥ್ಯ ಕೆಡಿಸಿದೆ/ಕೆಡಿಸುತ್ತಿದೆ. ಚೀನಾ ಹಿಂದಿನ ಸ್ಥಿತಿಗೆ ಮರಳುತ್ತಿದೆ ಎಂದು ಅಧ್ಯಕ್ಷ ಕ್ಸಿ ಜಿನ್​ಪಿಂಗ್ ವಾದಿಸಿದರೂ, ಅನೇಕ ರಾಷ್ಟ್ರಗಳು ಚೀನಾವನ್ನು ಅನುಮಾನದಿಂದಲೇ ನೋಡುತ್ತಿವೆ. ವೈರಸ್ ಬಗ್ಗೆ ಬಹಿರಂಗ ಚರ್ಚೆಗೆ ಕಡಿವಾಣ ಹಾಕಿದ ಅಲ್ಲಿನ ಕಮ್ಯುನಿಸ್ಟ್ ಸರ್ಕಾರ, ಮಾಧ್ಯಮಗಳನ್ನೂ ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದೆ.
ಜ.27ರಂದು ಮ್ಯೂನಿಕ್ ನಗರದಲ್ಲಿ ಮೊದಲ ಕೇಸು ಪತ್ತೆ. ಸ್ಟಾಕ್ ಡಾರ್ಫ್ ನಗರದಲ್ಲಿರುವ ಕಾರಿನ ಸಲಕರಣೆಗಳ ಉತ್ಪಾದನಾ ಸಂಸ್ಥೆಯೊಂದರಿಂದ ಜರ್ಮನಿಯಲ್ಲಿ ವೈರಸ್ ಹರಡುವಿಕೆ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಚೀನಾದ ಮಹಿಳೆಯೊಬ್ಬರಿಂದ ಸಂಸ್ಥೆಯ ಇನ್ನಿತರರಿಗೆ ವೈರಸ್ ಹಬ್ಬಿತು. ರಾಬರ್ಟ್ ಕೋಚ್ ಇನ್​ಸ್ಟಿಟ್ಯೂಟ್ ಪ್ರಕಾರ ಕರೊನಾ ಕೇಸುಗಳ ಪರೀಕ್ಷೆಗಳನ್ನು ತ್ವರಿತಗೊಳಿಸಿರುವ ಜರ್ಮನಿ ಈವರೆಗೆ 13 ಲಕ್ಷ ಮಂದಿಗೆ ಟೆಸ್ಟ್​ಗಳನ್ನು ನಡೆಸಿದೆ. ಇಟಲಿಗಿಂತ ಹೆಚ್ಚು ಜನಸಂಖ್ಯೆಯಿರುವ ಜರ್ಮನಿಯಲ್ಲಿ ಇಟಲಿಗಿಂತ ಮೊದಲೇ ಕರೊನಾ ಕೇಸುಗಳು ಕಂಡುಬಂದರೂ, ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ವೈರಸ್​ನ ವಿಪರೀತ ಹಬ್ಬುವಿಕೆಯನ್ನು ನಿಯಂತ್ರಿಸಲಾಗಿದೆ. ನೆರೆಹೊರೆ ದೇಶಗಳಿಗೆ ಹೋಲಿಸಿದರೆ ಕರೊನಾಕ್ಕೆ ಬಲಿಯಾದವರ ಜರ್ಮನ್ನರ ಸಂಖ್ಯೆ 2700 ಮಾತ್ರ.
ಟರ್ಕಿಯಲ್ಲಿ ಮೊದಲ ಕರೊನಾ ಪ್ರಕರಣ ಮಾ. 11ರಂದು ಬೆಳಕಿಗೆ ಬಂದಿತ್ತು. ಯುರೋಪ್ ಪ್ರವಾಸ ಮುಗಿಸಿ ವಾಪಸಾಗಿದ್ದ ವ್ಯಕ್ತಿಯಲ್ಲಿ ವೈರಸ್ ದೃಢಪಟ್ಟಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಲ್ಲಿನ ಸರ್ಕಾರ ಶಾಲೆ-ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು. ಇನ್ನೂ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಮಾ. 17ರಂದು ಕರೊನಾದಿಂದ ಮೊದಲ ಸಾವು ಸಂಭವಿಸಿತ್ತು. ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಮಾ. 23ರ ವೇಳೆಗೆ ಇಡೀ ದೇಶಕ್ಕೆ ವೈರಸ್ ವ್ಯಾಪಿಸಿತ್ತು. ಶನಿವಾರದ ವೇಳೆಗೆ ದೇಶಾದ್ಯಂತ ಸುಮಾರು 50 ಸಾವಿರ ಪ್ರಕರಣ ಪತ್ತೆಯಾಗಿದೆ. ಇಲ್ಲಿ ವೈರಸ್ ಹಾವಳಿ ಹೆಚ್ಚುತ್ತಲೇ ಇದ್ದು, ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಸಾರ್ವಜನಿಕ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಣೆ ಸಹಿತ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆದೇಶ ಮಾಡಲಾಗಿದೆ. ಆದರೆ ಸಾವಿನ ಸಂಖ್ಯೆ ಒಂದು ಸಾವಿರ ದಾಟಿರುವುದು ಇಲ್ಲಿನ ಭೀಕರತೆಗೆ ಸಾಕ್ಷಿಯಾಗಿದೆ.
ಫೆಬ್ರವರಿ ಮೊದಲ ವಾರದಲ್ಲೇ ಬೆಲ್ಜಿಯಂನಲ್ಲಿ ಮೊದಲ ಕರೊನಾ ಪ್ರಕರಣ ಪತ್ತೆಯಾಗಿತ್ತು. ಚೀನಾದ ವುಹಾನ್​ಗೆ ತೆರಳಿದ್ದ ಉದ್ಯಮಿಗಳ ತಂಡದ ಸದಸ್ಯರಿಗೆ ವೈರಸ್ ದೃಢಪಟ್ಟಿತ್ತು. ಇಲ್ಲಿ ಮಾರ್ಚ್​ನಲ್ಲಿ ಸಾಮಾನ್ಯವಾಗಿ ಶಾಲೆ-ಕಾಲೇಜುಗಳು ಆರಂಭವಾಗುತ್ತದೆ. ಹೀಗಾಗಿ ಮಾರ್ಚ್ ಆರಂಭದ ವೇಳೆಗೆ ಉತ್ತರ ಇಟಲಿಯಿಂದ ಸಾವಿರಾರು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಬೆಲ್ಜಿಯಮ್ ವಿವಿಧ ಪ್ರದೇಶಗಳಿಗೆ ಆಗಮಿಸಿದರು. ಹೀಗಾಗಿ ಇಲ್ಲಿ ಕರೊನಾ ವೈರಸ್ ಸಾಮುದಾಯಿಕವಾಗಿ ಹರಡಲು ಆರಂಭವಾಯಿತು. ಏಪ್ರಿಲ್ ವೇಳೆಗೆ ಇಡೀ ದೇಶಾದ್ಯಂತ ವೈರಸ್ ತ್ವರಿತ ಗತಿಯಲ್ಲಿ ವ್ಯಾಪಿಸಿತು. ಪ್ರಸ್ತುತ ಬಹುತೇಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಐಸಿಯು, ಔಷಧಗಳ ಕೊರತೆ ಎದುರಾಗಿದೆ. ಕರೊನಾ ಪರೀಕ್ಷೆಯ ಸೌಲಭ್ಯವೂ ಸಾಕಷ್ಟು ಪ್ರಮಾಣದಲ್ಲಿಲ್ಲ. ಹಾಗಾಗಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ. ಜತೆಗೆ ಸಾವಿನ ಸಂಖ್ಯೆ ಇಲ್ಲಿ 3500 ಸನಿಹಕ್ಕೆ ತೆರಳುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ.
ಇಲ್ಲಿ ಮೊದಲ ಕೇಸು ಪತ್ತೆಯಾಗಿದ್ದು ಜ. 24ರಂದು. ಚೀನಾದಿಂದ ಬಂದಿದ್ದ ಐವರಲ್ಲಿ ಮೊದಲಿಗೆ ಸೋಂಕು ಕಂಡುಬಂದಿತ್ತು. ಚೀನಾದ ಪ್ರವಾಸಿಗ ಫೆ.14ರಂದು ಮೃತಪಡುವ ಮೂಲಕ ಫ್ರಾನ್ಸ್​ನಲ್ಲಿ ಕರೊನಾಕ್ಕೆ ಮೊದಲ ಬಲಿಯಾಯಿತು. ಭಾರತದಲ್ಲಿ ತಬ್ಲಿಘಿ ಜಮಾತ್ ಸಭೆ ಹೇಗೆ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಿಸಿತೋ, ಹಾಗೆಯೇ ಫ್ರಾನ್ಸ್ ನಲ್ಲಿ ಫೆ.17ರಿಂದ 24ರ ತನಕ ಮುಲ್ ಹೌಸ್ ಎಂಬಲ್ಲಿ ಏರ್ಪಡಿಸಲಾಗಿದ್ದ ಕ್ರಿಶ್ಚಿಯನ್ ಓಪನ್ ಡೋರ್ ಚರ್ಚ್ ಸಭೆಯಿಂದಾಗಿ ವೈರಸ್ ಹರಡುವಿಕೆ ದುಪ್ಪಟ್ಟುಗೊಂಡಿತು ಎನ್ನಲಾಗಿದೆ. ಈ ಸಭೆಯಲ್ಲಿ ಸುಮಾರು 2500 ಮಂದಿ ಪಾಲ್ಗೊಂಡಿದ್ದರು. ಅರ್ಧಕ್ಕರ್ಧ ಮಂದಿಯಲ್ಲಿ ಸೋಂಕಿರುವುದು ಖಚಿತವಾಯಿತು. ಅವರ ಸಂಪರ್ಕದಲ್ಲಿದ್ದವರಿಗೂ ಸೋಂಕು ತಗುಲಿರುವ ಸಾಧ್ಯತೆಗಳಿವೆ. ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಮಾ.12ರಿಂದ ಘೊಷಿಸಿರುವ ಲಾಕ್​ಡೌನ್, ಏಪ್ರಿಲ್ 15ರ ನಂತರವೂ ವಿಸ್ತರಣೆಯಾಗಲಿದೆ.
ಕೆನರಿ ಐಲ್ಯಾಂಡ್​ನಲ್ಲಿ ಜರ್ಮನಿಯ ಪ್ರವಾಸಿಗನೊಬ್ಬನಿಗೆ ಜ.31ರಂದು ಕರೊನಾ ಸೋಂಕು ದೃಢವಾಗುವುದರೊಂದಿಗೆ ಸ್ಪೇನ್ ತನ್ನ ಕರೊನಾ ಖಾತೆ ತೆರೆಯಿತು. ಸ್ಪೇನ್​ನ ಟೆನೆರಿಫ್​ಗೆ ಪ್ರವಾಸ ಬಂದಿದ್ದ ಇಟಲಿ ಲೊಂಬಾರ್ಡಿಯ ವೈದ್ಯರೊಬ್ಬರಲ್ಲಿ ಕರೊನಾ ಸೋಂಕು ಪತ್ತೆಯಾದ ಬಳಿಕ ದೇಶದಲ್ಲಿ ಕರೊನಾ ಹರಡುವಿಕೆಯ ಮೂಲ ಇಟಲಿ ಎಂದು ಭಾವಿಸಲಾಗಿದೆ. ಇದಕ್ಕೆ ಪೂರಕವಾಗಿ, ಇಟಲಿಯಿಂದ ವಾಪಸಾಗಿದ್ದ ಅನೇಕರಲ್ಲಿ ಸೋಂಕು ಕಂಡುಬಂತು. ಮಾರ್ಚ್ 20ರ ವೇಳೆಗೆ ಚೀನಾಕ್ಕಿಂತಲೂ ಹೆಚ್ಚು ಸಾವಿನ ಪ್ರಕರಣಗಳು ದೇಶದಲ್ಲಿ ದಾಖಲಾದವು. ಕರೊನಾದಿಂದ ಮೃತಪಟ್ಟ ಅತಿ ಹೆಚ್ಚು ಕೇಸುಗಳಿರುವ ದೇಶಗಳಲ್ಲಿ ಸ್ಪೇನ್ ಮೂರನೇ ಸ್ಥಾನದಲ್ಲಿದೆ. ಸಕಾಲದಲ್ಲಿ ಪರೀಕ್ಷೆ ನಡೆಸದೆ ಹಾಗೂ ತಮ್ಮ ಸೋಂಕುಗಳ ಬಗ್ಗೆ ಮಾಹಿತಿ ನೀಡದ್ದರ ಪರಿಣಾಮವೇ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದೂ ವಿಮಶಿಸಲಾಗುತ್ತಿದೆ.
ಫೆಬ್ರವರಿಯಲ್ಲಿ ಪಾಕಿಸ್ತಾನದಲ್ಲಿ ಮೊದಲ ಕರೊನಾ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಒಂದೂವರೆ ತಿಂಗಳಲ್ಲಿ ಸುಮಾರು 5 ಸಾವಿರ ಜನರು ಸೋಂಕಿತರಾಗಿದ್ದಾರೆ. ಚೀನಾದಿಂದ ಇಲ್ಲಿಗೆ ವೈರಸ್ ಹರಡಿದೆ ಎಂದು ಹೇಳಲಾಗುತ್ತಿದೆ. ಸೂಕ್ತ ವೈದ್ಯಕೀಯ ಸೌಲಭ್ಯ, ಪರೀಕ್ಷಾ ಕಿಟ್​ಗಳ ಕೊರತೆ ಹಿನ್ನೆಲೆಯಲ್ಲಿ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಆಪ್ತ ರಾಷ್ಟ್ರ ಚೀನಾ ಹಲವು ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಇವು ಕಳಪೆಯಾಗಿವೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಚೀನಾ ಒಳಉಡುಪುಗಳಿಂದ ಮಾಡಿದ ಮಾಸ್ಕ್​ಗಳನ್ನು ಪಾಕಿಸ್ತಾನಕ್ಕೆ ಕಳಿಸಿಕೊಟ್ಟಿತ್ತು. ಇಮ್ರಾನ್ ಖಾನ್ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ವೈದ್ಯರಿಗೆ ಸುರಕ್ಷತಾ ಉಪಕರಣಗಳನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿಲ್ಲ. ಇದರ ವಿರುದ್ಧ ವೈದ್ಯರು ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಇಲ್ಲಿನ ಟಿಲ್​ಬರ್ಗ್ ಪ್ರದೇಶದಲ್ಲಿ ಫೆ. 27ರಂದು ಮೊದಲ ಕರೊನಾ ಪ್ರಕರಣ ಬೆಳಕಿಗೆ ಬಂತು. ಇಟಲಿಯಿಂದ ಬಂದಿದ್ದ ಓರ್ವ ಪ್ರವಾಸಿಗನಲ್ಲಿ ಸೋಂಕು ದೃಢಪಟ್ಟಿತ್ತು. ಈತ ಮಾ. 6ರಂದು ಮೃತಪಟ್ಟಿದ್ದ. ಇದಾದ ಸುಮಾರು ಒಂದೇ ತಿಂಗಳಲ್ಲಿ ನೆದರ್ಲೆಂಡ್​ನ ವೈರಸ್ ಸೋಂಕಿತರ ಸಂಖ್ಯೆ 23 ಸಾವಿರಕ್ಕೆ ಏರಿಕೆಯಾಯಿತು. ವೈರಸ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿಲ್ಲ. ಅಂತಾರಾಷ್ಟ್ರೀಯ ವಿಮಾನ ಸಂಚಾರ ಮೇಲೆ ಯಾವುದೇ ನಿರ್ಬಂಧ ಹೇರಲಿಲ್ಲ. ಹೀಗಾಗಿ ಹತ್ತಾರು ಸಾವಿರ ಪ್ರಯಾಣಿಕರು ವಿವಿಧ ದೇಶಗಳಿಂದ ಇಲ್ಲಿಗೆ ಬರುತ್ತಿದ್ದರು. ಪ್ರಮುಖವಾಗಿ ಇಟಲಿ ಹಾಗೂ ಚೀನಾದಿಂದ ಬಂದ ಪ್ರಯಾಣಿಕರಲ್ಲಿ ಸೋಂಕು ಇತ್ತು. ಇದು ತ್ವರಿತಗತಿಯಲ್ಲಿ ಇಡೀ ದೇಶವನ್ನು ವ್ಯಾಪಿಸಿತು. ಮಾ. 12ರಂದು ದೇಶಾದ್ಯಂತ ಲಾಕ್​ಡೌನ್ ಘೋಷಣೆ ಮಾಡಲಾಯಿತು. ಆತಂಕಿತರಾದ ಜನರು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಮುಗಿಬಿದ್ದರು. ಔಷಧ, ಆಹಾರ ಮಾತ್ರವಲ್ಲ ಟಾಯ್ಲೆಟ್ ಪೇಪರ್​ಗೂ ಕೊರತೆ ಉಂಟಾಗಿ ಇಡೀ ದೇಶಾದ್ಯಂತ ಹಾಹಾಕಾರ ಎದ್ದಿತ್ತು. ಈಗ ಪರಿಸ್ಥಿತಿ ತುಸು ನಿಯಂತ್ರಣದಲ್ಲಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಇಲ್ಲಿನ ಆರ್ಥಿಕತೆ ಶೇ. 1.2 ಕುಸಿಯಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಇಟಲಿಯ ಮಿಲಾನ್ ನಗರಕ್ಕೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬನಲ್ಲಿ ಫೆಬ್ರವರಿ 25ರಂದು ಕರೊನಾ ವೈರಸ್ ದೃಢಪಟ್ಟಿತ್ತು. ಇಟಲಿಯ ಸಂಪರ್ಕದಿಂದಾಗಿ ಸ್ವಿಜರ್ಲೆಂಡ್​ನ ಗಡಿ ಭಾಗಗಳಿಗೆ ವೈರಸ್ ವ್ಯಾಪಿಸಿತು. ಫೆ. 28ರಂದು ಅಲ್ಲಿನ ಸರ್ಕಾರ ಹಲವು ಕ್ರಮಗಳನ್ನು ಘೋಷಣೆ ಮಾಡಿತು. ಆದರೆ ಅಷ್ಟರಲ್ಲಿ ದೇಶದ ಬಹುತೇಕ ಪ್ರದೇಶಕ್ಕೆ ವೈರಸ್ ಹರಡಿತ್ತು. ಜಾಗತಿಕ ಪ್ರವಾಸಿ ತಾಣವಾಗಿರುವ ಸ್ವಿಜರ್ಲೆಂಡ್​ಗೆ ಕರೊನಾ ಹಾವಳಿಯಿಂದ ಭಾರಿ ಹೊಡೆತ ಬಿದ್ದಿದೆ. ಇಲ್ಲಿನ ಬಹುತೇಕ ಪ್ರದೇಶ ವೈರಸ್ ಪೀಡಿತವಾಗಿದೆ. ಜತೆಗೆ ಇಡೀ ವಿಶ್ವಕ್ಕೇ ವೈರಸ್ ವ್ಯಾಪಿಸಿರುವ ಕಾರಣ ಪ್ರವಾಸೋದ್ಯಮ ಸಂಪೂರ್ಣ ಬಂದ್ ಆಗಿದೆ. ದೇಶದ ಆರ್ಥಿಕತೆಯೂ ನೆಲಕಚ್ಚಿದೆ. ಕರೊನಾ ವಿರುದ್ಧ ಹೋರಾಡಲು ಅಲ್ಲಿನ ಸರ್ಕಾರ 3 ಲಕ್ಷ ಕೋಟಿ ರೂಪಾಯಿ (40 ಬಿಲಿಯನ್ ಸ್ವಿಸ್ ಫ್ರಾಂಕ್) ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಕಠಿಣ ನಿರ್ಬಂಧ ಕ್ರಮಗಳನ್ನು ವಿಧಿಸಲಾಗಿಲ್ಲ. ಕಟ್ಟಡ ನಿರ್ಮಾಣ ಸಹಿತ ಹಲವು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. 5 ಜನರಿಗಿಂತ ಹೆಚ್ಚು ಸೇರದಂತೆ ಆದೇಶ ಹೊರಡಿಸಲಾಗಿದೆ.
ಟೊರಾಂಟೊದ ವ್ಯಕ್ತಿಯೊಬ್ಬ ಚೀನಾದ ವುಹಾನ್ ಪ್ರವಾಸ ಮುಗಿಸಿ ವಾಪಸಾದ ಕೆಲ ದಿನಗಳ ಬಳಿಕ ಈತನಿಗೆ ಕರೊನಾ ದೃಢಪಟ್ಟಿತ್ತು. ಜ. 17ರಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ಒಂಟಾರಿಯೊ, ಕ್ಯುಬೆಕ್ ಸಹಿತ ಪ್ರಮುಖ ಪ್ರದೇಶಗಳಲ್ಲಿ ವೈರಸ್ ಕಾಣಿಸಿಕೊಂಡಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಮಾರ್ಚ್ ಮಧ್ಯದ ವೇಳೆಗೆ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು. ಇಲ್ಲಿ ಕ್ವಾರಂಟೈನ್ ಕಾಯ್ದೆ ಜಾರಿಗೆ ತರಲಾಗಿದ್ದು, ವಿದೇಶದಿಂದ ಬಂದ ಎಲ್ಲರೂ ಕಡ್ಡಾಯವಾಗಿ ಕ್ವಾರಂಟೈನ್​ಗೆ ಒಳಗಾಗಬೇಕಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪತ್ನಿಗೆ ಮಾ. 12ರಂದು ಕರೊನಾ ದೃಢಪಟ್ಟಿತ್ತು. ಈಗ ಅವರು ಚೇತರಿಸಿಕೊಂಡಿದ್ದಾರೆ. ಸರ್ಕಾರದ ಹಲವು ಪ್ರಮುಖ ಸಚಿವರು, ಅಧಿಕಾರಿಗಳಿಗೂ ಈ ವೈರಸ್ ಕಾಣಿಸಿಕೊಂಡಿದೆ. ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲ್ಲಿನ ಫೆಡರಲ್ ಬ್ಯಾಂಕ್ ಬಡ್ಡಿದರದಲ್ಲಿ 150 ಮೂಲಾಂಶ ಇಳಿಕೆ ಮಾಡಿದೆ. ಸರ್ಕಾರ ಕೂಡ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಜಪಾನ್​ನಲ್ಲಿ ತಡೆಹಿಡಿಯಲ್ಪಟ್ಟಿದ್ದ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿದ್ದ ಮಹಿಳೆಯೊಬ್ಬರು ಕ್ವಾರಂಟೈನ್ ಮುಗಿಸಿ ಮರಳಿದ ಬಳಿಕ ಇಸ್ರೇಲ್​ನಲ್ಲಿ ಮೊದಲ ಪ್ರಕರಣ ವರದಿಯಾಗಿತ್ತು. ನಂತರ ದಿನೇದಿನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಮಾರ್ಚ್ 1ರಿಂದ ಸರ್ಕಾರ ಹಲವು ನಿರ್ಬಂಧಗಳನ್ನು ಘೋಷಿಸಿದ್ದು, ಕರೊನಾವನ್ನು ತಹಬದಿಗೆ ತರಲು ತೀವ್ರ ಪ್ರಯತ್ನ ನಡೆಸುತ್ತಿದೆ. ಮಾರ್ಚ್ 19ರಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದು, ನಿರ್ಬಂಧಗಳನ್ನು ಉಲ್ಲಂಘಿಸುವವರಿಗೆ ಭಾರಿ ಪ್ರಮಾಣದ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅವರ ಸಂಪುಟದ ಆರೋಗ್ಯ ಸಚಿವ ಯಾಕೊವ್ ಲಿಟ್ಜಮ್ಯಾನ್ ಹಾಗೂ ಅವರ ಪತ್ನಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಅವರು ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಜನವರಿ 20ರಂದು ಮೊದಲ ಪ್ರಕರಣ ವರದಿಯಾಗಿತ್ತು. ಅಲ್ಲಿನ ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮಗಳು ಹಾಗೂ ವೈದ್ಯಕೀಯ ವ್ಯವಸ್ಥೆಯಿಂದಾಗಿ ಕರೊನಾ ಆರಂಭವಾದ 10 ರಿಂದ 15 ದಿನಗಳಲ್ಲೇ ಅದರ ತೀವ್ರತೆಯನ್ನು ಕಡಿಮೆ ಮಾಡಲಾಗಿದೆ. ಪ್ರತಿದಿನದ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ. ಮಾರ್ಚ್ 7ರಿಂದ ಈಚೆಗೆ ಹೊಸ ಪ್ರಕರಣಗಳ ಸಂಖ್ಯೆ ಕ್ಷೀಣಿಸಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆ ಕಂಡಿದೆ. ಹೆಚ್ಚು ಗುಂಪು ಸೇರಿದ್ದ ಜನರನ್ನು ಸ್ಕ್ರೀನಿಂಗ್ ಮತ್ತು ವೈದ್ಯಕೀಯ ತಪಾಸಣೆಗೆ ಒಳಪಡಿಸುವುದರ ಜತೆಗೆ ಅವರ ಜತೆ ಸಂಪರ್ಕಕ್ಕೆ ಬಂದ ಎಲ್ಲರನ್ನೂ ತ್ವರಿತವಾಗಿ ಹುಡುಕಿ ಕ್ವಾರಂಟೈನ್​ಗೆ ಒಳಪಡಿಸುವ ಮೂಲಕ ದ.ಕೊರಿಯಾ ವಿಶ್ವದಲ್ಲೇ ಅತ್ಯಂತ ವೇಗವಾಗಿ ಕರೊನಾ ವೈರಸ್ ಪಸರಿಸುವಿಕೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಸದ್ಯ ವಿದೇಶಗಳಿಂದ ದ.ಕೊರಿಯಾಗೆ ತೆರಳುವ ಎಲ್ಲರಿಗೂ ನಿರ್ಬಂಧ ವಿಧಿಸಲಾಗಿದೆ.
ಇಂಡೋನೇಷ್ಯಾದಲ್ಲಿ ಮಾರ್ಚ್ ಬಳಿಕ ಮೊದಲ ಸೋಂಕು ಪ್ರಕರಣ ವರದಿಯಾಗಿದ್ದರೂ ಈಗಾಗಲೇ 327 ಜನರು ಸಾವನ್ನಪ್ಪಿದ್ದಾರೆ. ಆಗ್ನೇಯ ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ಸೋಂಕಿತರ ಪ್ರಮಾಣದಲ್ಲಿ ಇಂಡೋನೇಷ್ಯಾ ಪ್ರಥಮ ಸ್ಥಾನದಲ್ಲಿದೆ. ಇಲ್ಲಿನ ಕರೊನಾ ಸೋಂಕಿತರ ಶೇಕಡಾವಾರು ಸಾವಿನ ಪ್ರಮಾಣ ವಿಶ್ವದಲ್ಲೇ ಹೆಚ್ಚಿದ್ದು, ಸೋಂಕಿತರಲ್ಲಿ ಶೇ.10 ಜನರು ಈಗಾಗಲೇ ಸಾವನ್ನಪ್ಪಿದ್ದಾರೆ. ಸೋಂಕಿತರ ವೈದ್ಯಕೀಯ ಪರೀಕ್ಷೆ ಹಾಗೂ ತಪಾಸಣೆ ಕ್ರಮಗಳಲ್ಲಿನ ಕೊರತೆ ಮರಣ ಪ್ರಮಾಣ ಹೆಚ್ಚಾಗಲು ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಈವರೆಗೆ ಕೇವಲ 286 ಜನರು ಗುಣಮುಖರಾಗಿದ್ದಾರೆ.
ರಷ್ಯಾದಲ್ಲಿ ಕರೊನಾ ವೈರಸ್ ತೀವ್ರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜನವರಿ ಅಂತ್ಯದ ವೇಳೆಗೆ ಮೊದಲ ಪ್ರಕರಣ ಬೆಳಕಿಗೆ ಬರುತ್ತಲೇ ಎಚ್ಚೆತ್ತ ರಷ್ಯಾ ಸರ್ಕಾರ ಚೀನಾದಿಂದ ಬರುವ ಪ್ರಯಾಣಿಕರನ್ನು ನಿರ್ಬಂಧಿಸಿ, ಗಡಿಗಳನ್ನು ಬಂದ್ ಮಾಡಿತ್ತು. ಆದರೆ ಮಾರ್ಚ್ 2ರ ವೇಳೆಗೆ ಕರೊನಾ ವೈರಸ್ ಇಟಲಿಯಿಂದ ಮತ್ತೆ ಹರಡಿದೆ ಎಂಬುದು ತಿಳಿದುಬಂದ ಮೇಲೆ ಶಾಲೆ-ಕಾಲೇಜು, ಸಾರ್ವಜನಿಕ ಕಾರ್ಯಕ್ರಮಗಳು, ಚಿತ್ರ ಮಂದಿರಗಳೆಲ್ಲವನ್ನು ಮುಚ್ಚಿ ಲಾಕ್​ಡೌನ್ ಘೋಷಿಸಲಾಯಿತು. ಆದರೂ ಸದ್ದಿಲ್ಲದಂತೆ ವೈರಸ್ ಹರಡುತ್ತಿದೆ. ಈವರೆಗೆ 13 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪಾಸಿಟಿವ್ ತೋರಿಸಿದ್ದು, 100ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸೋಂಕಿತರು ಮತ್ತು ಹೊಸ ಸಾವುಗಳ ಸರಾಸರಿ ಸಂಖ್ಯೆಯಲ್ಲಿ ಈವರೆಗೆ ಯಾವುದೇ ಇಳಿಕೆ ಕಂಡು ಬರುತ್ತಿಲ್ಲ. ರಷ್ಯಾದಲ್ಲಿ ಈವರೆಗೆ ಸುಮಾರು 18 ಲಕ್ಷ ಜನರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಪಪುವಾ ನ್ಯೂಗಿನಿ, ದಕ್ಷಿಣ ಸುಡಾನ್, ಗಾಂಬಿಯಾ ಹಾಗೂ ಕೆಲ ಸಣ್ಣ ದ್ವೀಪಗಳಲ್ಲಿ ಕರೊನಾ ಪ್ರಕರಣ ಬೆರಳೆಣಿಕೆಯ ಪ್ರಮಾಣದಲ್ಲಿದೆ.
ಸೂಕ್ತ ವಾಹನ ವ್ಯವಸ್ಥೆಯಿಲ್ಲದೇ ಮಗು ಸಾವು: ಆಂಬುಲೆನ್ಸ್​ ನೀಡಲು ನಿರಾಕರಣೆ, ಕಣ್ಣೀರಿಡುತ್ತಾ ಮೃತದೇಹ ಹೊತ್ತು ನಡೆದ ತಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + four =
Remember me
