ಬೆಂಗಳೂರು/ನವದೆಹಲಿ:ದೇಶದಲ್ಲಿ ಕರೊನಾ ಹೆಚ್ಚಿರುವ ಏಳು ರಾಜ್ಯಗಳಲ್ಲಿ ಮುಂದಿನ ಆರು ತಿಂಗಳಿನಲ್ಲಿ ಸೋಂಕನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬೇಕು ಎಂಬುದು ಸೇರಿ 12 ಸಲಹೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.
ಕರೊನಾ ಹೆಚ್ಚಿರುವ ಕರ್ನಾಟಕ, ಪಂಜಾಬ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ನವದೆಹಲಿ ರಾಜ್ಯಗಳ ಮುಖ್ಯಮಂತ್ರಿ ಅವರೊಂದಿಗೆ ಮೋದಿ ವಿಡಿಯೋ ಸಂವಾದ ನಡೆಸಿದರು. ಕರೊನಾ ನಿಯಂತ್ರಣಕ್ಕೆ ಏನೇನು ಬಿಗಿ ಕ್ರಮ ಕೈಗೊಳ್ಳಬೇಕು, ಆರ್ಥಿಕ ಚಟುವಟಿಕೆಗಳನ್ನು ಬಿಗಿ ಕ್ರಮ ಹಾಗೂ ಆಸ್ಪತ್ರೆಗಳ ಖಾತ್ರಿ ಮಾಡಿಕೊಂಡು ಹಂತಹಂತವಾಗಿ ಆರಂಭಿಸಬೇಕು ಎಂದು ಸೂಚನೆ ನೀಡಿದರು.
ಕರ್ನಾಟಕಕ್ಕೆ ಮೂರು ಸಲಹೆ: ಕರ್ನಾಟಕದಲ್ಲಿ ಕರೊನಾ ಸೋಂಕು ಹೆಚ್ಚಿರುವ 9 ಜಿಲ್ಲೆಗಳಿಗೆ ವಿಶೇಷ ಯೋಜನೆ ರೂಪಿಸಿ, ದಕ್ಷ ಹಾಗೂ ಪರಿಣಾಮಕಾರಿ ನಿರ್ವಹಣೆಗಾಗಿ ಪ್ರತಿ ಜಿಲ್ಲೆಗೆ ವಿಶೇಷ ಕಾರ್ಯಪಡೆ ರಚಿಸಬೇಕು ಎಂದು ಪ್ರಧಾನಿ ಸೂಚನೆ ನೀಡಿದರು. ಕರೊನಾ ನಿಯಂತ್ರಣಕ್ಕಾಗಿ ಎಸ್​ಡಿಆರ್​ಎಫ್ ನಿಧಿಯಲ್ಲಿ ಶೇ.50 ಅನುದಾನ ಬಳಕೆಗೆ ಪ್ರಧಾನಿ ಅನುಮತಿ ನೀಡಿದರು. ಸೋಂಕಿನ ನಿಖರ ಫಲಿತಾಂಶಕ್ಕಾಗಿ ಆರ್​ಟಿಪಿಸಿಆರ್ ಟೆಸ್ಟ್​ಗಳನ್ನು 3 ಪಟ್ಟು ಹೆಚ್ಚಿಸಲು ಸೂಚನೆ ನೀಡಿದರು ಎಂದು ಸಭೆಯ ನಂತರ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದರು. ಸಿಎಂ ಯಡಿಯೂರಪ್ಪ ಅವರು ರಾಜ್ಯದ ವಸ್ತುಸ್ಥಿತಿ ಮಾಹಿತಿ ನೀಡಿದ್ದು, ಅನ್​ಲಾಕ್ ಬಳಿಕ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಸಾವಿನ ಪ್ರಮಾಣ (ಶೇ.1.54) ಕಡಿಮೆಯಿದೆ. ಲ್ಯಾಬ್​ಗಳು, ಪರೀಕ್ಷೆ ಪ್ರಮಾಣವನ್ನು ವಿವರಿಸಿದಾಗ ಪಿಎಂ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಸುಧಾಕರ್ ಹೇಳಿದರು. ಸಾವಿನ ಪ್ರಮಾಣ ತಗ್ಗಿಸಿದ್ದರೂ ಸೋಂಕಿನ ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿವೆ. ಹೆಚ್ಚಿರುವ ಕಡೆಗೆ ಜನರ ಸಹಾಭಾಗಿತ್ವ, ಜಾಗೃತಿ ಮೂಡಿಸಿ, ವಿಶೇಷ ಕಾಳಜಿವಹಿಸಲು ಪಿಎಂ ಸೂಚಿಸಿದ್ದಾರೆ ಎಂದರು. ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿಕುಮಾರ್ ಚೌಬೆ, ಕರ್ನಾಟಕದ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಮುಖ್ಯ ಕಾರ್ಯದರ್ಶಿ ಟಿ.ಎ.ವಿಜಯಭಾಸ್ಕರ್ ಇತರರಿದ್ದರು.
ಪ್ರಧಾನಿ ಸಲಹೆಗಳು
1. 6 ತಿಂಗಳ ಅವಧಿಯಲ್ಲಿ ಸಮರೋಪಾದಿಯಲ್ಲಿ ಕರೊನಾ ನಿಯಂತ್ರಣ ಸಾಧಿಸುವುದು.
2. ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೂ ಕರೊನಾ ಲಕ್ಷಣ ಇದ್ದರೆ ಪುನಃ ಆರ್​ಟಿಪಿಸಿಆರ್ ಮಾಡುವುದು.
3. ಕರೊನಾದಿಂದ ರಕ್ಷಿಸಿಕೊಳ್ಳಲು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು.
4. ಕರೊನಾ ಬಗ್ಗೆ ಅರಿವು ಮೂಡಿಸಲು ಜನಾಂದೋಲನ ರೂಪಿಸುವುದು.
5. ಕರೊನಾ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು.
6. ನಿರ್ಬಂಧಿತ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವುದು.
7. ಜೀವ ಹಾಗೂ ಜೀವನವನ್ನು ಉಳಿಸುವ ನಿಟ್ಟಿನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಸೂಕ್ತ ಪರೀಕ್ಷಾ ಮತ್ತು ಆಸ್ಪತ್ರೆ ಸೌಕರ್ಯಗಳನ್ನು ಖಾತ್ರಿಪಡಿಸಿಕೊಂಡು ಹಂತ ಹಂತವಾಗಿ ಆರಂಭಿಸುವುದು.
8. ಮನೆ ಆರೈಕೆಯಲ್ಲಿರುವ ಸೋಂಕಿತರ ನಿರಂತರ ಮೇಲ್ವಿಚಾರಣೆಯನ್ನು ಕಡ್ಡಾಯವಾಗಿ ಕೈಗೊಳ್ಳುವುದು.
9. ಪ್ರತಿ ಜೀವವನ್ನು ಉಳಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ಕರೊನಾ ಹರಡುವಿಕೆ ನಿಯಂತ್ರಿಸುವುದನ್ನು ಪ್ರಮುಖವಾಗಿಸಿಕೊಳ್ಳುವುದು.
10. ಆರ್​ಟಿಪಿಸಿಆರ್ ಪರೀಕ್ಷೆ ಹೆಚ್ಚಿಸುವುದು ಅತಿ ಮುಖ್ಯ. ಮೈಕ್ರೋ ಕಂಟೈನ್​ವೆುಂಟ್ ಜೋನ್​ಗಳನ್ನು ರೂಪಿಸಬೇಕು.
11. ಕರ್ನಾಟಕದಲ್ಲಿ ಹೆಚ್ಚಿನ ಪರೀಕ್ಷೆ ಆಗುತ್ತಿವೆ. ವೈಜ್ಞಾನಿಕ ಪರೀಕ್ಷೆ ಮತ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್​ನಿಂದ ಮರಣ ಹೊಂದಿರುವವರ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಗಮನ ಹರಿಸಬೇಕು.
12. ಸರ್ವೆಕ್ಷಣಾ ಕ್ರಮಗಳು, ಆರ್​ಟಿಪಿಸಿಆರ್ ಪರೀಕ್ಷೆಗಳು ಮೂರು ಪಟ್ಟು ಹೆಚ್ಚಿಸುವುದು.
ಮೈಕ್ರೋ ಕಂಟೇನ್ಮೆಂಟ್ ವಲಯದ ಮೇಲೆ ನಿಗಾ
ಕರೊನಾ ಸೋಂಕನ್ನು ನಿಯಂತ್ರಿಸಲು ಮೈಕ್ರೋ ಕಂಟೇನ್ಮೆಂಟ್ ವಲಯಗಳ ಮೇಲೆ ಗಮನ ಹರಿಸಲು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಈವರೆಗೆ ಕಂಟೇನ್ಮೆಂಟ್ ವಲಯದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಆದರೆ ಇನ್ನು ಮುಂದೆ ಮೈಕ್ರೋ ಕಂಟೇನ್ಮೆಂಟ್ ವಲಯದ ಬಗ್ಗೆ ಗಮನ ಹರಿಸಬೇಕಿದೆ. ದೇಶದಲ್ಲಿ 700ಕ್ಕೂ ಹೆಚ್ಚು ಜಿಲ್ಲೆಗಳಿವೆ. ಆದರೆ 7 ರಾಜ್ಯಗಳ 60 ಜಿಲ್ಲೆಗಳಲ್ಲಿ ಕರೊನಾ ಹೆಚ್ಚಳವಾಗುತ್ತಿದೆ. ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಜಿಲ್ಲಾ ಮಟ್ಟದಲ್ಲಿ ಜನರೊಂದಿಗೆ 7 ದಿನಗಳ ವರ್ಚುವಲ್ ಕಾನ್ಪರೆನ್ಸ್ ನಡೆಸಬೇಕು. ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಪರಿಶೀಲನೆ ಕೈಗೊಳ್ಳಬೇಕು. ಕೋವಿಡ್-19 ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರಗಳು ಹೆಚ್ಚಿನ ಹಣವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.
ತಗ್ಗಿದ ಸಾವಿನ ಪ್ರಮಾಣ
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಕೋವಿಡ್-19 ಸಾವಿನ ಪ್ರಮಾಣ ಕೊಂಚ ತಗ್ಗಿದ್ದು, ಈ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಬುಧವಾರ ಅತಿ ಕಡಿಮೆ ಅಂದರೆ 38 ಸಾವು ಪ್ರಕರಣ ವರದಿಯಾಗಿದೆ. ಈವರೆಗೂ 8,266 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 6,997 ಸೋಂಕು ಪ್ರಕರಣ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5.40 ಲಕ್ಷಕ್ಕೆ ಏರಿಕೆಯಾಗಿದೆ. 5,460 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 4.37 ಲಕ್ಷ ತಲುಪಿದೆ. 94,652 ಮಂದಿ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 816 ಸೋಂಕಿತರು ಗಂಭೀರ ಸಮಸ್ಯೆಯಿಂದ ತುರ್ತು ನಿಗಾ ಘಟಕದಲ್ಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
