ಚೀನಾವನ್ನು ತೀವ್ರವಾಗಿಬಾಧಿಸುತ್ತಿರುವ ಕರೋನಾ ಸಮಸ್ಯೆ ದೇಶದ ವ್ಯಾಪಾರೋದ್ಯಮದ ಮೇಲೆ ತೀವ್ರ ಪರಿಣಾಮ ಬೀರತೊಡಗಿದೆ. ಭಾರತದಿಂದ ಚೀನಾಕ್ಕೆ ರಫ್ತು ಪ್ರಮಾಣ ತೀರಾ ಕಡಿಮೆಯಿದ್ದರೂ ಕೆಲವೊಂದು ಕೃಷಿ ಉತ್ಪನ್ನಗಳಿಗೆ ಚೀನಾ ಪ್ರಮುಖ ಮಾರುಕಟ್ಟೆಯಾಗಿದೆ. ಆದರೆ ಚೀನಾ ವಸ್ತುಗಳಿಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿರುವುದರಿಂದ ಇಲ್ಲಿನ ಸಾಕಷ್ಟು ವ್ಯಾಪಾರಿಗಳು ಚೈನಾ ಉತ್ಪನ್ನಗಳ ಮೇಲೆ ಅವಲಂಭಿತರಾಗಿದ್ದು, ಇದೀಗ ಕರೊನಾ ಸಮಸ್ಯೆಯಿಂದ ಕೆಲವೊಂದು ವಸ್ತುಗಳ ಆಮದು-ರಫ್ತಿನಲ್ಲಿ ಏರುಪೇರಾಗತೊಡಗಿದೆ.
ದ್ರಾಕ್ಷಿ ಬೆಳೆಗಾರರಿಗೆ ಸಂಕಷ್ಟ:ಕರ್ನಾಟಕದ ಕ್ಯಾಲಿಫೋರ್ನಿಯಾ ಎಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಯಿಂದ ದೇಶ ಅಲ್ಲದೆ ವಿದೇಶಗಳಿಗೆ ರಫ್ತು ಆಗುತ್ತಿದ್ದ ಒಣದ್ರಾಕ್ಷಿ ಮೇಲೆ ಕರೊನಾ ಕರಿನೆರಳು ಬಿದ್ದಿದೆ. ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿ ವಿವಿಧ ರಾಜ್ಯಗಳ ಮೂಲಕ ಚೀನಾಕ್ಕೆ ವಾರ್ಷಿಕ 700 ಟನ್ ವಿಜಯಪುರದ ಒಣ ದ್ರಾಕ್ಷಿ ರಫ್ತು ಆಗುತ್ತದೆ. ಇದೀಗ ಕರೊನಾ ಭೀತಿಯಿಂದಾಗಿ ಒಣದ್ರಾಕ್ಷಿ ದರದ ಮೇಲೆ ದುಷ್ಪರಿಣಾಮ ಉಂಟಾಗಿದ್ದು, ಪ್ರತಿ ಕೆಜಿ ಒಣದ್ರಾಕ್ಷಿಗೆ 120-140 ರೂ. ಬೆಲೆ ಇದ್ದು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಪ್ರತಿ ಕೆಜಿ ಒಣ ದ್ರಾಕ್ಷಿಗೆ ಕನಿಷ್ಠ 250 ರೂ.ನಿಂದ 300 ರೂ.ವರೆಗೆ ದರ ಸಿಗಬೇಕು ಎಂದು ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ ವಿಜಯವಾಣಿ ಗೆ ಮಾಹಿತಿ ನೀಡಿದ್ದಾರೆ.
ಕೂದಲು ರಫ್ತಿಗಿಲ್ಲ ಅಡ್ಡಿ:ಕೊಪ್ಪಳದಿಂದ ಚೀನಾಕ್ಕೆ ಕೂದಲು ರಫ್ತಾಗುತ್ತಿದ್ದು, ಈ ವಹಿವಾಟಿಗೆ ಕರೊನಾ ವೈರಸ್ ತೊಂದರೆ ಕೊಟ್ಟಿಲ್ಲ. ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಕೇಶೋದ್ಯಮ ಇದ್ದು, ಸಂಸ್ಕರಿತ ಕಚ್ಚಾ ಕೂದಲು ವಾರ್ಷಿಕವಾಗಿ 200 ಟನ್​ನಷ್ಟು ಕೋಲ್ಕತ್ತಾದಿಂದ ಹಡಗಿನ ಮೂಲಕ ಚೀನಾಕ್ಕೆ ರಫ್ತಾಗುತ್ತಿದೆ. ವಿಗ್ ತಯಾರಿಕೆ, ವಿವಿಧ ಕೇಶ ವಿನ್ಯಾಸಕ್ಕಾಗಿ ಈ ಕೂದಲು ಬಳಕೆಯಾಗುತ್ತಿದೆ. ಸಂಸ್ಕರಿತ ಕಚ್ಚಾ ಕೂದಲು ಗೂಡ್ಸ್ ಹಡಗಿನಲ್ಲಿ ಸಾಗಣೆ ಆಗುವುದರಿಂದ ವ್ಯಾಪಾರದ ಮೇಲೆ ಪರಿಣಾಮ ಬೀರಿಲ್ಲ ಎಂದು ಕೇಶೋದ್ಯಮಿ ಶ್ರೀನಿವಾಸ ಗುಪ್ತಾ ತಿಳಿಸಿದ್ದಾರೆ.
ರೇಷ್ಮೆಗೆ ಹೊಡೆತದ ಆತಂಕ:ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ತಿಮ್ಮಸಂದ್ರ ಮತ್ತು ಬೈಯಪ್ಪನಹಳ್ಳಿಗೆ ಚೀನಾದಿಂದ ರೇಷ್ಮೆ ಆಮದಾಗುತ್ತಿದ್ದು, ಕರೊನಾ ಆತಂಕ ಎದುರಾಗಿದೆ. ಈಚೆಗೆ ಶೇ.30 ಪೂರೈಕೆ ಕಡಿಮೆಯಾಗಿದೆ. ಪ್ರಸ್ತುತ ಡೀಲರ್, ಹ್ಯಾಂಡ್​ಲೂಮ್್ಸ ಮಾಲೀಕರು ಈಗಾಗಲೇ ದಾಸ್ತಾನು ಇರುವುದರ ಜತೆಗೆ ದೇಶೀಯ ರೇಷ್ಮೆ ಬಳಕೆಗೆ ಒತ್ತು ಕೊಡುತ್ತಿದ್ದಾರೆ. ಇಲ್ಲಿ ಬೇಡಿಕೆಗೆ ಅನುಗುಣವಾಗಿ ಉತ್ಪನ್ನ ಸಿಗುತ್ತಿದೆ. ಮುಂಬರುವ ದಿನಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ರೇಷ್ಮೆ ಉಪನಿರ್ದೇಶಕ ಭೈರಾರೆಡ್ಡಿ.
ಗುಲಾಬಿಗೂ ಕರೊನಾ ಸೋಂಕು!:ವಿಶೇಷ ದಿನಗಳ ಸಂಭ್ರಮಾಚರಣೆ ಸಂದರ್ಭ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳೆಯುವ ಗುಲಾಬಿ ಹೂವಿಗೆ ಹೆಚ್ಚಿನ ಬೇಡಿಕೆ ಇದೆ. ಕ್ರಿಸ್​ವುಸ್, ಹೊಸ ವರ್ಷ, ಪ್ರೇಮಿಗಳ ದಿನಾಚರಣೆಗೆ ಮಲೇಷಿಯಾ, ಶ್ರೀಲಂಕಾ, ಚೀನಾ, ನೇಪಾಳ, ಸಿಂಗಾಪುರ, ಜಪಾನ್ ಸೇರಿ ಹಲವು ದೇಶಗಳಿಗೆ ಇಲ್ಲಿನ ಗುಲಾಬಿ ಪೂರೈಕೆಯಾಗುತ್ತದೆ. ಈ ಬಾರಿ ಕೊರೊನಾದಿಂದ ತತ್ತರಿಸಿರುವ ಚೀನಾಗೆ ಗುಲಾಬಿ ರವಾನೆಯಾಗುತ್ತಿಲ್ಲ.
ಬಿಡಿಭಾಗ ಆಮದು ಇಳಿಕೆ:ಚೀನಾದಿಂದ ಬರುವ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ವಸ್ತು, ಮಕ್ಕಳ ಆಟಿಕೆ ವಸ್ತು, ಕಚೇರಿ ಫೈಲ್ಸ್ ಬಿಡಿಭಾಗ ಆಮದಿನಲ್ಲಿ ಇಳಿಕೆಯಾಗಿದೆ. ರಾಜ್ಯದ ಬಹುತೇಕ ದೊಡ್ಡ ವ್ಯಾಪಾರಿಗಳು ಚೀನಾದಲ್ಲಿ ಸಿದ್ಧಗೊಳ್ಳುವ ಉತ್ಪನ್ನಗಳನ್ನು ಹೋಲ್​ಸೇಲ್ ದರದಲ್ಲಿ ತಂದು ಇಲ್ಲಿ ಬಿಡಿ ವ್ಯಾಪಾರಸ್ಥರಿಗೆ ಮಾರುತ್ತ್ತಾರೆ. ಇವರು ಚೀನಾಕ್ಕೆ ತೆರಳುವುದು ಸದ್ಯಕ್ಕೆ ನಿಂತಿದ್ದು, ಸಿದ್ಧ ಉತ್ಪನ್ನ ಆಮದು ಕಡಿಮೆಯಾಗಿದೆ. ಸ್ಥಳೀಯವಾಗಿ ಉತ್ಪಾದನೆ ಆಗುತ್ತಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಈಗ ಕೊಂಚ ಬೇಡಿಕೆ ಹೆಚ್ಚಿದೆ.
ಗಾಗಲ್ಸ್ ದರ ಹೆಚ್ಚಳ:ಚೀನಾದಿಂದ ರಾಜ್ಯಕ್ಕೆ ಆಗುತ್ತಿದ್ದ ಉತ್ಪನ್ನಗಳ ಆಮದು ಸ್ಥಗಿತದಿಂದ ಗಾಗಲ್ಸ್ ವ್ಯಾಪಾರಕ್ಕೆ ಹೊಡೆತ ಬೀಳಲಿದೆ. ಬೇಸಿಗೆ ಸಮೀಪಿಸುತ್ತಿದ್ದು, ಜನರು ಬಿಸಿಲು ಹಾಗೂ ಧೂಳಿನಿಂದ ತಮ್ಮ ಕಣ್ಣು ರಕ್ಷಿಸಿಕೊಳ್ಳಲು ಗಾಗಲ್ಸ್​ಅನ್ನು ಹೆಚ್ಚು ಬಳಸುತ್ತಾರೆ. ಆದರೀಗ ಗಾಗಲ್ಸ್ ಪೂರೈಕೆ ಇಲ್ಲದ ಕಾರಣ ಬೇಡಿಕೆಯೊಂದಿಗೆ ಬೆಲೆಯೂ ಹೆಚ್ಚಲಿದೆ ಎಂದು ಬೆಂಗಳೂರಿನ ಬಳೆಪೇಟೆ ಗಾಗಲ್ಸ್ ಮಳಿಗೆಯ ಚಂದುಲಾಲ್ ಹೇಳಿದ್ದಾರೆ.
ಚಿಲ್ಲಿ ಕಣ್ಣೀರು!
ಉತ್ತರ ಕರ್ನಾಟಕ ಸೇರಿ ಬಳ್ಳಾರಿ ಜಿಲ್ಲೆಯಲ್ಲಿ ಯಥೇಚ್ಛವಾಗಿ ಬೆಳೆಯುವ ಚಿಲ್ಲಿಯನ್ನು ಬ್ಯಾಡಗಿ ಮಾರುಕಟ್ಟೆ ಮೂಲಕ ಚೀನಾಕ್ಕೆ ರಫ್ತು ಮಾಡಲಾಗುತ್ತಿತ್ತು. ಕರೊನಾ ವೈರಸ್ ಬಾಧೆಯಿಂದಾಗಿ ರಫ್ತು ಸ್ಥಗಿತಗೊಂಡು, ಇಲ್ಲಿನ ಮಾರುಕಟ್ಟೆಯಲ್ಲಿ ಕೆಂಪು ಮೆಣಸಿಕಾಯಿ ದರದಲ್ಲಿ ಏರುಪೇರಾಗಿದೆ. 20 ದಿನಗಳ ಹಿಂದೆ ಕ್ವಿಂಟಾಲ್ ಕೆಂಪು ಮೆಣಸಿನಕಾಯಿಗೆ 17ರಿಂದ 20 ಸಾವಿರ ರೂ. ಬೆಲೆಯಿತ್ತು. ಈಗ 10ರಿಂದ 12ಸಾವಿರ ರೂ.ಗೆ ಕುಸಿದಿದೆ. ಬಳ್ಳಾರಿ ತಾಲೂಕಿನಲ್ಲಿ 70 ಸಾವಿರ ಎಕರೆ, ಕಂಪ್ಲಿ ತಾಲೂಕಿನಲ್ಲಿ 6250 ಎಕರೆ ಪ್ರದೇಶದಲ್ಲಿ ಈ ಬಾರಿ ಡಬ್ಬಿ ಬ್ಯಾಡಗಿ, ಸಿಜೆಂಟಾ 341, 5,531, 355, 4,884 ತಳಿಯ ಮೆಣಸಿನಕಾಯಿ ಬೆಳೆಯಲಾಗಿದೆ. ದರ ಕುಸಿತ ಕಾರಣ ಮಾರಬೇಕಿದ್ದ ಬೆಳೆಯನ್ನು ಹೊಲದಲ್ಲಿ ಒಣಗಿಸಿಕೊಂಡು ಕುಳಿತಿದ್ದಾರೆ ರೈತರು.
ಆಟೋಮೊಬೈಲ್ ಬಿಡಿಭಾಗ ರಫ್ತು ಕುಂಠಿತ
ಮಲೆನಾಡಿನ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆಟೊಮೊಬೈಲ್ ಬಿಡಿ ಭಾಗಗಳನ್ನು ತಯಾರಿಸುವ ಹಲವು ಪ್ರಖ್ಯಾತ ಫ್ಯಾಕ್ಟರಿಗಳು ಶಿವಮೊಗ್ಗದಲ್ಲಿವೆ. ಇಲ್ಲಿ ತಯಾರಾಗುವ ಆಟೊಮೊಬೈಲ್ ಬಿಡಿಭಾಗಗಳ ಶೇ.10-15 ಉತ್ಪನ್ನಗಳು ಚೀನಾಕ್ಕೆ ರಫ್ತು ಆಗುತ್ತಿದ್ದವು. ತಿಂಗಳಿಂದೀಚೆಗೆ ಅಲ್ಲಿಂದ ಬೇಡಿಕೆಯೇ ಬಾರದ ಕಾರಣ ಕಾರ್ಖಾನೆಗಳು ಸಂಕಷ್ಟಕ್ಕೆ ಸಿಲುಕಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + seven =
Remember me
