ವಿಶ್ವದಾದ್ಯಂತ ಕರೊನಾ ವೈರಸ್ ಆತಂಕ ಹೆಚ್ಚುತ್ತಲೇ ಇದೆ. ಬಹುತೇಕ ದೇಶಗಳು ಲಾಕ್​ಡೌನ್ ಘೋಷಣೆ ಮಾಡಿ, ಅವಶ್ಯಕ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿವೆ. ನೂರಾರು ಕೋಟಿ ಜನರು ದಿಗ್ಬಂಧನಕ್ಕೆ ಒಳಗಾಗಿದ್ದಾರೆ. ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ, ಕರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆ ಬಳಿಕ ಸೋಂಕಿತರ ಸಂಖ್ಯೆಯಲ್ಲಿ ತ್ವರಿತವಾಗಿ ಏರಿಕೆ ಕಂಡುಬರುತ್ತಿದೆ. ಆದರೂ ಇಟಲಿ, ಅಮೆರಿಕ, ಫ್ರಾನ್ಸ್ ಇನ್ನಿತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿರುವುದು ಸಮಾಧಾನಕರ. ದೇಶಾದ್ಯಂತ ಪರಿಸ್ಥಿತಿ ಹೇಗಿದೆ ಎಂಬ ಸಂಕ್ಷಿಪ್ತ ಚಿತ್ರಣ ಇಲ್ಲಿದೆ…
ಸಿಎಂ ಅಮರಿಂದರ್ ಸಿಂಗ್ ಕೈಗೊಂಡಿರುವ ಹಲವು ಮುನ್ನೆಚ್ಚರಿಕೆ ಕ್ರಮದಿಂದಾಗಿ ಪಂಜಾಬ್​ನಲ್ಲಿ ಕರೊನಾ ತೀವ್ರ ಸ್ವರೂಪ ಪಡೆದುಕೊಂಡಿಲ್ಲ. ದೇಶದಲ್ಲಿ ಲಾಕ್​ಡೌನ್ ವಿಧಿಸುವ ಮುನ್ನವೇ ಪಂಜಾಬ್​ನಲ್ಲಿ ಹಲವು ಪ್ರದೇಶದಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಸಾವಿರಾರು ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ತಬ್ಲಿಘಿ ಪ್ರಕರಣದ ಬಿಸಿ ಪಂಜಾಬ್​ಗೂ ತಟ್ಟಿದ್ದು, ಪ್ರತಿದಿನ ಹತ್ತಾರು ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕರೊನಾ ಎರಡನೇ ಹಂತಕ್ಕೆ ತಲುಪುತ್ತಿದ್ದು, ಇದನ್ನು ಎದುರಿಸಲು ರಾಜ್ಯ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸಿಎಂ ಅಮರಿಂದರ್ ಸಿಂಗ್ ಹೇಳಿದ್ದಾರೆ.
184 ಕರೊನಾ ಕೇಸುಗಳಲ್ಲಿ 158 ಕೇಸುಗಳು ಕಾಶ್ಮೀರದಲ್ಲಿ ಕಂಡುಬಂದಿವೆ. ಸುಮಾರು 700-800 ಮಂದಿ ತಮ್ಮ ಪ್ರವಾಸದ ಹಿನ್ನೆಲೆ ಬಚ್ಚಿಟ್ಟಿದ್ದರಿಂದ ಅಧಿಕಾರಿಗಳು ವಿವಿಧ ಮೂಲದಿಂದ ಮಾಹಿತಿ ಕಲೆ ಹಾಕಿ ಅವರೆಲ್ಲರನ್ನೂ ದಿಗ್ಬಂಧನದಲ್ಲಿರಿಸಿದ್ದಾರೆ. ಶಂಕಿತ ಸುಮಾರು 650 ಮಂದಿಯನ್ನು ಕರೊನಾ ಪರೀಕ್ಷೆಗೊಳಪಡಿಸಲಾಗಿದ್ದು, ಬಹುಪಾಲು ಮಂದಿಗೆ ಸೋಂಕು ತಗುಲಿರುವ ಅನುಮಾನಗಳಿವೆ. ತಬ್ಲಿಘಿ ಜಮಾತ್ ಸಭೆಯಿಂದಲೇ ಹೆಚ್ಚು ಸೋಂಕು ಹರಡಿದ್ದು, ಮುಂದಿನ ದಿನಗಳಲ್ಲಿ ಸಂಖ್ಯೆ ಹೆಚ್ಚಾಗಬಹುದು. ಕಣಿವೆಯ ಜನರಿಗೆ ಲಾಕ್​ಡೌನ್ ವಿಶೇಷವೆನಿಸಿಲ್ಲ. ಕಳೆದ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರ ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದರಿಂದಾಗಿ ಇತ್ತೀಚಿನವರೆಗೆ ಇಡೀ ರಾಜ್ಯ ಲಾಕ್​ಡೌನ್ ಸ್ಥಿತಿಯಲ್ಲೇ ಇತ್ತು!
ಪ. ಬಂಗಾಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ. ಆದರೆ ಇತರ ರಾಜ್ಯಗಳಿಗೆ ಹೋಲಿಸಿದರೆ ಸೋಂಕಿತರ ಸಂಖ್ಯೆ ತುಸು ನಿಯಂತ್ರಣದಲ್ಲಿದೆ. ಸಿಎಂ ಮಮತಾ ಬ್ಯಾನರ್ಜಿ ಸ್ವತಃ ಮಾರುಕಟ್ಟೆಗೆ ತೆರಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾಗೃತಿ ಮೂಡಿಸುತ್ತಿದ್ದಾರೆ.
ಹರಿಯಾಣದಲ್ಲಿ ಮೊದಲ ಕರೊನಾ ಪ್ರಕರಣ ಪತ್ತೆಯಾಗಿದ್ದು ಮಾ. 17ರಂದು. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ 29 ವರ್ಷದ ಯುವತಿ ಮಲೇಷ್ಯಾ ಮತ್ತು ಇಂಡೋನೇಷ್ಯಾ ಪ್ರವಾಸ ಮಾಡಿ ಬಂದ ಬಳಿಕ ಆಕೆಯಲ್ಲಿ ಕರೊನಾ ಸೋಂಕು ಕಂಡುಬಂದಿತ್ತು. ಬಹುರಾಷ್ಟ್ರೀಯ ಕಂಪನಿಗಳ ಮಹಾನಗರಿ ಗುರುಗ್ರಾಮವೇ ಅತಿ ಹೆಚ್ಚು ಕರೊನಾ ಸೋಂಕಿತರಿಗೆ ಸಾಕ್ಷಿಯಾಗಿದೆ. ಮೊದಲ ರೋಗಿ ಕೂಡ ಗುರುಗ್ರಾಮಕ್ಕೆ ಸೇರಿದವರು. ಸದ್ಯ 170ಕ್ಕಿಂತಲೂ ಕರೊನಾ ಸೋಂಕಿತ ಕೇಸುಗಳು ಹರಿಯಾಣದಲ್ಲಿ ಪತ್ತೆಯಾಗಿದ್ದು, 30ಕ್ಕಿಂತ ಹೆಚ್ಚು ಸೋಂಕಿತರು ಗುರುಗ್ರಾಮದಲ್ಲೇ ಇದ್ದಾರೆ. ದೆಹಲಿಗೆ ಅಂಟಿಕೊಂಡಿರುವ ಈ ಮಹಾನಗರಿಯಿಂದ ನಿಜಾಮುದ್ದಿನ್​ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಸಮಾವೇಶಕ್ಕೂ ಜನರು ಬಂದಿದ್ದರು. ಕರೊನಾ ಸೋಂಕಿತರ ರಕ್ಷಣೆ, ಸುರಕ್ಷತೆ ಹಾಗೂ ಪರೀಕ್ಷೆಗಳನ್ನು ನಡೆಸುತ್ತಿರುವ ಸಿಬ್ಬಂದಿಗೆ ದುಪ್ಪಟ್ಟು ವೇತನ ನೀಡುವುದಾಗಿ ಸಿಎಂ ಮನೋಹರ ಲಾಲ್ ಖಟ್ಟರ್ ಘೊಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಕ್ಷೇತ್ರ ವಾರಾಣಸಿ ಸೇರಿ, 15 ಜಿಲ್ಲೆಗಳಲ್ಲಿ ಕರೊನಾ ಹಾಟ್​ಸ್ಪಾಟ್ ಪ್ರದೇಶಗಳನ್ನು ಸೀಲ್ ಮಾಡಲಾಗಿದೆ. ಕಾನೂನು ಉಲ್ಲಂಘನೆ ವಿರುದ್ಧ ಯೋಗಿ ಆದಿತ್ಯನಾಥ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಿದೆ. ದೆಹಲಿಯ ತಬ್ಲಿಘಿ ಜಮಾತ್ ಸಭೆ ರಾಜ್ಯದ ಮೇಲೆ ಹೆಚ್ಚು ಪರಿಣಾಮ ಬೀರಿದ್ದು, ಸಭೆಯಲ್ಲಿ ಪಾಲ್ಗೊಂಡವರು, ಅವರ ಜತೆ ಸಂಪರ್ಕದಲ್ಲಿದ್ದವರನ್ನು ಹುಡುಕಿ ದಿಗ್ಬಂಧನದಲ್ಲಿರಿಸಲಾಗಿದೆ. ಲಾಕ್​ಡೌನ್ ಘೊಷಣೆ ಬೆನ್ನಲ್ಲೇ ದೆಹಲಿಯಲ್ಲಿದ್ದ ರಾಜ್ಯದ ಸಾವಿರಾರು ಅಸಂಘಟಿತ ಕಾರ್ವಿುಕರು ಉತ್ತರ ಪ್ರದೇಶಕ್ಕೆ ವಲಸೆ ಹೋದ ಪರಿಣಾಮ ಸೋಂಕು ಹರಡುವಿಕೆ ಮೂರನೇ ಹಂತಕ್ಕೆ ತಲುಪುವ ಆತಂಕ ಕಾಡಿದೆ. ಈ ಕಾರ್ವಿುಕರನ್ನೂ ಕ್ವಾರಂಟೈನ್ ಮಾಡಿರುವುದರಿಂದ ಸೋಂಕು ಪಸರಿಸುವಿಕೆ ನಿಯಂತ್ರಣಕ್ಕೆ ಬರುವ ಆಶಾವಾದವೂ ಇದೆ.
ಕರೊನಾ ವೈರಸ್ ಹರಡುವಿಕೆ ದೇಶದಲ್ಲಿ ತಕ್ಕಮಟ್ಟಿಗೆ ಹತೋಟಿಯಲ್ಲಿದೆಯೇನೋ ಎಂದು ಜನ ಅಂದುಕೊಳ್ಳುತ್ತಿದ್ದಾಗ ದೆಹಲಿಯ ನಿಜಾಮುದ್ದೀನ್​ನ ತಬ್ಲಿಘಿ ಜಮಾತ್ ಸಭೆಯು ವೈರಸ್ ಹರಡುವಿಕೆಯನ್ನು ದುಪ್ಪಟ್ಟುಗೊಳಿಸಿಬಿಟ್ಟಿತು. ಜಮಾತ್ ಮರ್ಕಜ್​ಗೆ ಬಂದಿದ್ದ ವಿದೇಶಿ ಧರ್ಮ ಪ್ರಚಾರಕರಿಂದ ಹರಡಿದ ಸೋಂಕು, ವಿವಿಧ ರಾಜ್ಯಗಳ ಜನರಿಗೆ ತಗುಲಿಬಿಟ್ಟಿದೆ. ಈ ಸಭೆ ತಡೆಯುವಲ್ಲಿ ಕೇಜ್ರಿವಾಲ್ ಸರ್ಕಾರ ಮತ್ತು ಕೇಂದ್ರ ವಿಫಲವಾಗಿದ್ದೇಕೆ ಎಂಬ ಪ್ರಶ್ನೆಗಳು ಕಾಡತೊಡಗಿವೆ. ದೆಹಲಿ ಸೇರಿ ಎಲ್ಲಾ ಸರ್ಕಾರಗಳು ತಬ್ಲಿಘಿಗಳು ಮತ್ತು ಅವರ ಸಂಪರ್ಕಕ್ಕೆ ಬಂದ ಸುಮಾರು 25000ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನಲ್ಲಿರಿಸಿವೆ. ದೆಹಲಿಯ 21 ಪ್ರದೇಶಗಳೀಗ ಕರೊನಾ ಹಾಟ್​ಸ್ಪಾಟ್ ಗಳಾಗಿದ್ದು, ಎಲ್ಲವನ್ನೂ ಸೀಲ್ ಮಾಡಲಾಗಿದೆ.
ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 200 ದಾಟಿದ್ದು, ರಾಜ್ಯ ಸರ್ಕಾರ ಪರಿಸ್ಥಿತಿ ನಿಯಂತ್ರಿಸಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅತಿ ಹೆಚ್ಚು ಸೋಂಕು ಪ್ರಕರಣ ದಾಖಲಾಗಿರುವ ಬೆಂಗಳೂರು ನಗರ ಸಹಿತ ಹಲವು ಪ್ರದೇಶಗಳಲ್ಲಿ ನಿರ್ಬಂಧವನ್ನು ಇನ್ನಷ್ಟು ಕಠಿಣಗೊಳಿಸಲಾಗುತ್ತದೆ. ಸಾಮುದಾಯಿಕವಾಗಿ ಈ ಸೋಂಕು ಹರಡದಂತೆ ಸರ್ಕಾರ ಸಕಲ ಯತ್ನಗಳನ್ನು ನಡೆಸುತ್ತಿದೆ. ರಾಜ್ಯದಲ್ಲಿ ಈವರೆಗೆ 7,613 ಮಂದಿಯ ಸ್ವಾ್ಯಬ್ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದ್ದು, 207 ಮಂದಿಯಲ್ಲಿ ಸೋಂಕು ದೃಡಪಟ್ಟಿದೆ. ಇವರಲ್ಲಿ 6 ಮಂದಿ ಕೇರಳ ಮೂಲದವರಾಗಿದ್ದಾರೆ. ಸೋಂಕಿತರ ಪ್ರಥಮ ಸಂಪರ್ಕಕ್ಕೆ ಬಂದ 1804 ಮಂದಿ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ 5533 ಮಂದಿಯಲ್ಲಿ ಕೆಲವರನ್ನು ಮನೆಯಲ್ಲಿ ಮತ್ತೆ ಕೆಲವರನ್ನು ಆಸ್ಪತ್ರೆಗಳಲ್ಲಿ ಕ್ವಾರೆಂಟೈನ್ ಮಾಡಲಾಗಿದೆ.
ಅಸ್ಸಾಂ ಸೇರಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ಕರೊನಾ ವೈರಸ್ ವಿಪರೀತವಾಗಿ ಹಬ್ಬಿಲ್ಲ. ಆದರೆ, ಇಲ್ಲಿಗೂ ತಬ್ಲಿಘಿ ಜಮಾತ್​ನ ವೈರಸ್ ಬಿಸಿ ತಟ್ಟಿದೆ. ಸದ್ಯಕ್ಕಿರುವ 34 ಸೋಂಕಿತರಲ್ಲಿ 28 ಮಂದಿ ಜಮಾತ್ ಸಭೆಗೆ ಹಾಜರಾಗಿದ್ದರು. ಏಪ್ರಿಲ್ 10ರಂದು ಫೈಜುಲ್ ಹಕ್ ಬರ್ಭಯಾನ್ ಎಂಬ 65ರ ವೃದ್ಧ ಸೋಂಕಿಗೆ ಮೊದಲ ಬಲಿಯಾಗಿದ್ದಾರೆ. ಗಡಿ ಭದ್ರತಾ ಪಡೆಯ ಮಾಜಿ ಸಿಬ್ಬಂದಿಯಾಗಿದ್ದ ಅವರು, ಈಚೆಗೆ ಸೌದಿ ಅರೇಬಿಯಾಕ್ಕೆ ಹೋಗಿ ಬಂದಿದ್ದರು. ಕಳೆದ ತಿಂಗಳು ನಿಜಾಮುದ್ದಿನ್ ಮರ್ಕಜ್ ಸಭೆಯಲ್ಲೂ ಭಾಗಿಯಾಗಿದ್ದರು. ಫೈಜುಲ್ ನೆಲೆಸಿದ್ದ ಹಳ್ಳಿಯಲ್ಲಿ ಅವರ ಸಂಪರ್ಕಕ್ಕೆ ಬಂದ 12 ಮಂದಿಯನ್ನೂ ದಿಗ್ಬಂಧನದಲ್ಲಿಡಲಾಗಿದೆ. ಉಳಿದಂತೆ ಮಣಿಪುರ (2), ಮಿಜೋರಾಂ, ತ್ರಿಪುರ, ಅರುಣಾಚಲ ಪ್ರದೇಶದಲ್ಲಿ ತಲಾ ಒಂದೊಂದು ಕರೊನಾ ಪ್ರಕರಣ ಪತ್ತೆಯಾಗಿವೆ.
ಮಾರ್ಚ್ 19ರಂದು ರಾಜ್​ಕೋಟ್​ನಲ್ಲಿ ಮೊದಲ ಕರೊನಾ ವೈರಸ್ ಕೇಸು ಪತ್ತೆ. ಸೌದಿ ಅರೇಬಿಯಾದಿಂದ ಬಂದಿದ್ದ ವ್ಯಕ್ತಿಗೆ ಸೋಂಕು ದೃಢವಾಗಿತ್ತು. ಮಾ. 22ರಂದು 69ರ ವೃದ್ಧ ಸೋಂಕಿಗೆ ಮೊದಲ ಬಲಿ. ರಾಜಧಾನಿ ಗಾಂಧಿನಗರಕ್ಕೆ ಅಂಟಿಕೊಂಡಿರುವ ಅಹಮದಾಬಾದ್​ನಲ್ಲಿ ಅತಿ ಹೆಚ್ಚು (153) ಕೇಸುಗಳು ದಾಖಲಾಗಿವೆ. ಶುಕ್ರವಾರ 12 ಗಂಟೆಯ ಅವಧಿಯಲ್ಲೇ 46 ಕೇಸುಗಳು ಕಂಡುಬಂದಿದ್ದು, ಸೋಂಕಿತರ ಒಟ್ಟು ಸಂಖ್ಯೆ 300 ದಾಟಿದೆ. ದಿನಕ್ಕೆ ಸಾವಿರದಷ್ಟು ಕರೊನಾ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದ್ದು, 12352 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. ಸದ್ಯ 6738 ಮಂದಿ ಕರೊನಾ ಪರೀಕ್ಷೆಗೊಳಪಟ್ಟಿದ್ದು, 6154 ಮಂದಿಗೆ ಸೋಂಕಿಲ್ಲ ಎಂಬುದು ದೃಢಪಟ್ಟಿದೆ.
ಆಂಧ್ರಪ್ರದೇಶದಲ್ಲಿ ಕರೊನಾ ಮಹಾಮಾರಿಗೆ ಈವರೆಗೆ ನಾಲ್ವರು ಬಲಿಯಾಗಿದ್ದು, 360 ಜನರಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ 10 ಜನರು ಗುಣಮುಖರಾಗಿದ್ದು, ಹೊಸ ಪ್ರಕರಣಗಳ ಏರಿಕೆ ವೇಗ ಕೊಂಚ ನಿಧಾನಗತಿಯಲ್ಲಿದೆ. ನೆಲ್ಲೂರಿನಲ್ಲಿ ಅತೀ ಹೆಚ್ಚು ಅಂದರೆ 32 ಸೋಂಕು ಪ್ರಕರಣಗಳು ವರದಿಯಾಗಿದ್ದು, ನಂತರದ ಸ್ಥಾನಗಳಲ್ಲಿ ಗುಂಟೂರು, ಕೃಷ್ಣ, ಕಡಪ ಮುಂತಾದ ಜಿಲ್ಲೆಗಳಿವೆ.
ದೇಶದಲ್ಲಿ ಮೊದಲ ಕರೊನಾ ಸೋಂಕು ಪ್ರಕರಣ ವರದಿಯಾಗಿದ್ದ ಕೇರಳದಲ್ಲಿ ತೀವ್ರತೆ ತುಸು ಇಳಿಕೆಯಾಗುತ್ತಿದೆ. ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಇತ್ತೀಚೆಗೆ ಯಾವುದೇ ಹೊಸ ಸಾವುಗಳು ಸಂಭವಿಸಿಲ್ಲ. ಜತೆಗೆ ಗುಣಮುಖರಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈವರೆಗೆ 124 ಜನರು ಗುಣಮುಖರಾಗಿದ್ದು, ಇದರಲ್ಲಿ 93 ಹಾಗೂ 88 ವರ್ಷದ ವೃದ್ಧರೂ ಸೇರಿದ್ದಾರೆ. ಕೇರಳದಲ್ಲಿ ಸೋಂಕಿತರು ಗುಣಮುಖರಾಗುತ್ತಿರುವ ಪ್ರಮಾಣ ಶೇ. 84ರಷ್ಟಿದ್ದು, ಇದು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಬಹುಪಾಲು ಹೆಚ್ಚಿದೆ. ಕಾಸರಗೋಡು, ಮಲಪು್ಪರಂ ಮತ್ತು ಕಣ್ಣೂರಿನಲ್ಲಿ ಕೆಲ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೇರಳದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣವಾಗಿಲ್ಲ.
ಏಪ್ರಿಲ್ 10ರಂದೇ ಅತಿ ಹೆಚ್ಚು (80) ಮಂದಿಗೆ ಸೋಂಕಿರುವುದು ದೃಢವಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳು ಕರೊನಾ ನಿಯಂತ್ರಣಕ್ಕೆ ಬಿಲ್ವಾರಾ ಮಾದರಿ ಅನುಸರಿಸಬೇಕು ಎಂದು ಸಿಎಂ ಅಶೋಕ್ ಗೆಹ್ಲೋಟ್ ಆದೇಶಿಸಿದ್ದಾರೆ. ಬಿಲ್ವಾರಾ ನಗರದಲ್ಲಿ 27 ಕರೊನಾ ಕೇಸುಗಳು ಪತ್ತೆಯಾಗಿ, 25 ಮಂದಿ ಗುಣಮುಖರಾಗಿದ್ದಾರೆ. ಲಾಕ್​ಡೌನ್ ಘೊಷಣೆಗೆ ಮುನ್ನವೇ ಜಿಲ್ಲೆಯ ಗಡಿಗಳನ್ನು ಸೀಲ್ ಮಾಡಿದ್ದ ಜಿಲ್ಲಾಧಿಕಾರಿ ರಾಜೇಂದ್ರ ಭಟ್, ವೈರಸ್ ಶಂಕಿತರೆಲ್ಲರನ್ನೂ ಕ್ವಾರಂಟೈನ್​ನಲ್ಲಿ ಇರಿಸಿದ್ದರು. ಮನೆ ಮನೆಗೆ ಹೋಗಿ ಸ್ಕ್ರೀನಿಂಗ್ ಪರೀಕ್ಷೆಗಳನ್ನು ಕೈಗೊಂಡಿದ್ದರು. ಆರಂಭದಲ್ಲಿ ಕರೊನಾ ಹಾಟ್​ಸ್ಪಾಟ್ ಆಗಿದ್ದ ಬಿಲ್ವಾರದಲ್ಲಿ, ಕಳೆದ 10 ದಿನಗಳಲ್ಲಿ ಒಂದೇ ಒಂದು ಕೇಸು ಪತ್ತೆಯಾಗಿಲ್ಲ.
ವೈರಸ್ ಸೋಂಕಿತರ ಸಂಖ್ಯೆ ಗಣನೀಯ ಹೆಚ್ಚಳದ ಮಧ್ಯೆ ಸರಾಸರಿ 75 ಸಾವಿರ ಮಂದಿಗೆ 1 ವೆಂಟಿಲೇಟರ್ ಮತ್ತು 47 ಸಾವಿರ ಮಂದಿಗೆ ಐಸಿಯು ಬೆಡ್ ವ್ಯವಸ್ಥೆ ಮಾತ್ರ ಇರುವುದು ಆತಂಕಕಾರಿ ಸಂಗತಿ. ಇಂದೋರ್​ನಲ್ಲಿ ಅತಿ ಹೆಚ್ಚು (98) ಸೋಂಕಿತರಿದ್ದಾರೆ. ಬಹುಪಾಲು ಮಂದಿ ತಬ್ಲಿಘಿ ಜಮಾತ್ ಪರಿಣಾಮ ಸೋಂಕು ತಗುಲಿಸಿಕೊಂಡಿದ್ದು, ಅವರ ಸಂಪರ್ಕದಿಂದಾಗಿ 20 ಜಿಲ್ಲೆಗಳು ವೈರಸ್ ಭೀತಿ ಎದುರಿಸುತ್ತಿವೆ. 7.5 ಕೋಟಿ ಜನಸಂಖ್ಯೆಯಿರುವ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 9492 ಐಸೊಲೇಷನ್ ವಾರ್ಡ್ ಗಳಿದ್ದು, 30 ಸಾವಿರದಷ್ಟು ಬೆಡ್​ಗಳಿವೆ. ವೈರಸ್ ಹರಡುವಿಕೆ ಸಂದರ್ಭದಲ್ಲೇ ಸರ್ಕಾರ ರಚನೆ ಮಾಡಿ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬಂದ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯದ ಉದ್ದಗಲ ಬಲ್ಲವರಾಗಿದ್ದರೂ, ಕಲ್ಪನೆಗೂ ಮೀರಿ ವೈರಸ್ ಹಬ್ಬಿರುವುದು ಸಹಜವಾಗಿಯೇ ಸರ್ಕಾರವನ್ನು ಚಿಂತೆಗೀಡು ಮಾಡಿದೆ. ರಾಜಧಾನಿ ಭೋಪಾಲ್​ನಲ್ಲಿ 50 ಆರೋಗ್ಯ ಸಿಬ್ಬಂದಿ ಮತ್ತು 12 ಪೊಲೀಸ್ ಸಿಬ್ಬಂದಿ ಕರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಬಿಹಾರದಲ್ಲಿ ಸಿವಾನ್ ಜಿಲ್ಲೆಯಲ್ಲಿ ಅತ್ಯಧಿಕ ಕರೊನಾ ಸೋಂಕಿತರಿದ್ದು, ಈ ಪ್ರದೇಶವನ್ನು ಬಿಹಾರದ ವುಹಾನ್ ಎಂದೇ ಕರೆಯಲಾಗುತ್ತಿದೆ. ಮೊದಲು ಈ ಪ್ರದೇಶದಲ್ಲಿ ಕಂಡುಬಂದ ವೈರಸ್ ಬಳಿಕ ಇತರ ಪ್ರದೇಶಗಳಿಗೆ ವ್ಯಾಪಿಸಿದೆ. ಇಲ್ಲಿನ 22 ಸೋಂಕಿತರು ಒಂದೇ ಕುಟುಂಬದವರು. ಸಂಕಷ್ಟದಲ್ಲಿದ್ದವರಿಗೆ ನೆರವಾಗಲು ರಾಜ್ಯ ಸರ್ಕಾರ ಕರೊನಾ ಸಹಾಯ ಎಂಬ ಆಪನ್ನೂ ಬಿಡುಗಡೆ ಮಾಡಿದೆ. ಒಟ್ಟೂ 11 ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ.
ಮಹಾರಾಷ್ಟ್ರ ಬಳಿಕ ಅತಿ ಹೆಚ್ಚು ಕರೊನಾ ಸೋಂಕಿತರು ತಮಿಳುನಾಡಿನಲ್ಲಿದ್ದು, ಸೋಂಕಿತರ ಸಂಖ್ಯೆ ಸಾವಿರದ ಗಡಿ ಸಮೀಪಿಸುತ್ತಿದೆ. ಈವರೆಗೆ 9 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರಲ್ಲಿ ಬಹುತೇಕ ಪ್ರಕರಣಗಳು ದೆಹಲಿಯ ಮುಜಾಹಿದ್ದೀನ್​ನಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದ ಜತೆ ನೇರ ಸಂಪರ್ಕ ಹೊಂದಿವೆ. ತಮಿಳುನಾಡು ಸರ್ಕಾರ ತಬ್ಲಿಘಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಮಾರು 1,480 ಜನರನ್ನು ಈವರೆಗೆ ಪತ್ತೆ ಮಾಡಿ ಪರೀಕ್ಷೆ ನಡೆಸಿದ್ದು, ಇದರಲ್ಲಿ 763 ಜನರಿಗೆ ಕರೊನಾ ಸೋಂಕು ಪಾಸಿಟಿವ್ ತೋರಿಸಿದೆ. ಇದಲ್ಲಿ 554 ಜನರು ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ನೇರವಾಗಿ ಭಾಗಿಯಾದವರಾಗಿದ್ದು, ಮಿಕ್ಕ 188 ಜನರಿಗೆ ಇವರ ಜತೆ ಸಂಪರ್ಕ ಹೊಂದಿದ್ದರಿಂದ ಸೋಂಕು ತಗುಲಿದೆ. ಈವರೆಗೆ 44 ಜನರು ಗುಣಮುಖರಾಗಿದ್ದಾರೆ.
ಕೇಂದ್ರ ಸರ್ಕಾರದ ಲಾಕ್​ಡೌನ್ ಮುಂದುವರಿಕೆ ಘೊಷಣೆಗೆ ಕಾಯದೆ ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರ ಏಪ್ರಿಲ್ 30ರ ತನಕ ಲಾಕ್ ಡೌನ್ ವಿಸ್ತರಿಸಿದೆ. ಆರಂಭಿಕ ಹಂತದಿಂದಲೂ ಕರೊನಾ ನಿಯಂತ್ರಣಕ್ಕೆ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಬಿಜೆಡಿ ಸರ್ಕಾರ ಇತರೆ ರಾಜ್ಯಗಳಿಗೆ ಮಾದರಿ. ಲಾಕ್​ಡೌನ್​ಗೆ ಮುನ್ನವೇ ಸಹಾಯವಾಣಿ ಆರಂಭಿಸಿದ್ದ ರಾಜ್ಯ ಸರ್ಕಾರ, ಮಾರ್ಚ್ 3ರಂದೇ ್ಚಡಜಿಛ19.ಟಛಜಿಠಜಚ.ಜಟಡ.ಜ್ಞಿ ವೆಬ್​ಸೈಟ್ ಆರಂಭಿಸುವ ಮೂಲಕ ಈ ವಿಷಯದಲ್ಲೂ ಕೇಂದ್ರಕ್ಕಿಂತ ಒಂದು ಹೆಜ್ಜೆ ಮುಂದಿತ್ತು. ಬೇರೆ ರಾಜ್ಯದಲ್ಲಿ ಸಿಲುಕಿ, ವೈರಸ್ ಸೋಂಕಿಗೆ ತುತ್ತಾಗಿರುವ ರಾಜ್ಯದ ಜನರ ಎಲ್ಲಾ ಖರ್ಚುವೆಚ್ಚಗಳನ್ನು ಸರ್ಕಾರವೇ ನೋಡಿಕೊಳ್ಳುತ್ತಿದೆ.
ತೆಲಂಗಾಣದಲ್ಲಿ ಸೋಂಕು ಪಸರಿಸುವಲ್ಲಿ ತಬ್ಲಿಘಿ ಜಮಾತ್ ಪಾತ್ರವಿದ್ದು, ಒಟ್ಟು ಪ್ರಕರಣಗಳಲ್ಲಿ 388 ಪ್ರಕರಣಗಳು ತಬ್ಲಿಘಿ ನಂಟು ಹೊಂದಿವೆ. ಕಳೆದ 24 ತಾಸಿನಲ್ಲಿ 655 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 18 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ 45 ಜನರು ಗುಣಮುಖರಾಗಿದ್ದು, ಸದ್ಯ ರಾಜ್ಯದಲ್ಲಿ 414 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕು ಪ್ರಕರಣಗಳು ಹೆಚ್ಚಿರುವ ಪ್ರದೇಶಗಳನ್ನು ಕಂಟೈನ್​ವೆುಂಟ್ ಝೋನ್ ಎಂದು ಗುರುತಿಸಲಾಗಿದ್ದು, ಅಲ್ಲಿ ಜನರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ದೇಶದಲ್ಲಿ ಅತೀ ಹೆಚ್ಚು ಸೋಂಕಿತರು ಮಹಾರಾಷ್ಟ್ರ ರಾಜ್ಯದಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದೆ. ಮಾರ್ಚ್ 9 ರಂದು ಮೊದಲ ಪ್ರಕರಣ ಬೆಳಕಿಗೆ ಬಂದ ನಂತರ ಒಂದು ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. ಜತೆಗೆ ಸಾವನ್ನಪ್ಪಿದವರ ಸಂಖ್ಯೆ 100 ಗಡಿ ದಾಟುತ್ತಿರುವುದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ಮೂರನೇ ಎರಡರಷ್ಟು ಪ್ರಕರಣಗಳು ಮುಂಬೈ ನಗರದಲ್ಲೇ ಬೆಳಕಿಗೆ ಬಂದಿವೆ. ದೇಶದ ಪ್ರಮುಖ 10 ಕರೊನಾ ಹಾಟ್​ಸ್ಪಾಟ್​ಗಳ ಪಟ್ಟಿಯಲ್ಲಿ ಮಹಾರಾಷ್ಟ್ರದ ಮುಂಬೈ ಮತ್ತು ಪುಣೆ ನಗರಗಳಿವೆ. ಏಪ್ರಿಲ್ 4ರ ಬಳಿಕ ಪ್ರತಿ ದಿನ ಕನಿಷ್ಠ 100 ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಗುಣಮುಖರಾಗುತ್ತಿರುವ ಸಂಖ್ಯೆಯೂ ಕಡಿಮೆ ಇದ್ದು, ಈವರೆಗೆ ಶೇ 5.5 ರಷ್ಟು ಜನರು ಗುಣಮುಖರಾಗಿದ್ದಾರೆ. ದಿನೇದಿನೆ ಕರೊನಾ ತನ್ನ ವ್ಯಾಪ್ತಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಲವು ನಿರ್ಬಂಧಗಳನ್ನು ವಿಧಿಸಲಾಗಿದ್ದು, ಸೋಂಕು ಪಸರಿಸುವುದನ್ನು ತಡೆಯಲು ಉದ್ಧವ್ ಠಾಕ್ರೆ ಸರ್ಕಾರ ಹರಸಾಹಸಪಡುತ್ತಿದೆ. ಹಲವೆಡೆ ಸಂಪೂರ್ಣ ನಿಷೇಧಾಜ್ಞೆ ಘೋಷಿಸಲಾಗಿದೆ. ಏಷ್ಯಾದ ಅತೀ ದೊಡ್ಡ ಕೊಳೆಗೇರಿಯಾದ ಮುಂಬೈನ ಧಾರಾವಿಯಲ್ಲೂ ಕರೊನಾ ಸೋಂಕು ಪ್ರಕರಣ ವರದಿಯಾಗಿದೆ.
¬ರಾತ್ರಿ 8 ಗಂಟೆವರೆಗಿನ ಅಂಕಿಅಂಶ ಕೊಡಲಾಗಿದೆ.

ವೈದ್ಯರ ನೆರವಿಗೆ ಧಾವಿಸಿರುವ ಡಿಆರ್‌ಡಿಒ: ಸೋಂಕು ತಗುಲದಂತೆ ಉಪಕರಣ ಶೋಧನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 15 =
Remember me
