ನವದೆಹಲಿ:ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ವೇಳೆಗೆ ಕರೊನಾ ಔಷಧ ಮಾರುಕಟ್ಟೆಗೆ ಬರಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪುನರುಚ್ಚರಿಸಿದೆ. ವೈಜ್ಞಾನಿಕವಾಗಿ ಎಲ್ಲ ಹಂತಗಳನ್ನು ಕ್ರಮಬದ್ಧವಾಗಿ ನಿರ್ವಹಿಸುವ ಮೂಲಕವೇ ಔಷಧವನ್ನು ಬಿಡುಗಡೆ ಮಾಡುವುದಾಗಿ ತಿಳಿಸಲಾಗಿದೆ.
ಔಷಧವನ್ನು ಆದಷ್ಟು ಬೇಗ ಜನರಿಗೆ ತಲುಪಿಸುವ ಅವಶ್ಯಕತೆಯಿದೆ. ಹಾಗಾಗಿ ಒಂದೇ ಒಂದು ದಿನವನ್ನು ಹಾಳು ಮಾಡದಂತೆ ಕೆಲಸ ಮಾಡುತ್ತಿದ್ದೇವೆ. ಆಗಸ್ಟ್ 2ನೇ ವಾರದೊಳಗೆ ಔಷಧವನ್ನು ಮಾರುಕಟ್ಟೆಗೆ ಬಿಡುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಐಸಿಎಂಆರ್​ನ ನಿರ್ದೇಶಕ ಪೊ›. ಬಲರಾಂ ಭಾರ್ಗವ್ ತಿಳಿಸಿದ್ದಾರೆ. ಔಷಧವನ್ನು ಮಾರುಕಟ್ಟೆಗೆ ಬಿಡುವ ಅವಸರದಲ್ಲಿ ಐಸಿಎಂಆರ್ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದ ಹಲವರಿಗೆ ಈ ಮೂಲಕ ಅವರು ಉತ್ತರ ನೀಡಿದ್ದಾರೆ.
30 ಸಾವಿರ ಮಂದಿ ಮೇಲೆ ಪ್ರಯೋಗ:ಈ ನಡುವೆ ಅಮೆರಿಕದ ಮಾಡರ್ನ್ ಇಂಕ್ ಸಂಸ್ಥೆಯ ಔಷಧವು ಮನುಷ್ಯರ ಮೇಲಿನ ಪ್ರಯೋಗ ಸುರಕ್ಷಿತವೆಂದು ಸಾಬೀತಾಗಿದ್ದು ಇದೀಗ ಕೊನೆ ಹಂತದ ಪ್ರಯೋಗಕ್ಕೆ ಸಿದ್ಧವಾಗಿದೆ. ಮಾಡರ್ನ್ ಆರ್​ಎನ್​ಎ ಔಷಧದ ಕೊನೆಯ ಹಂತ ಪ್ರಯೋಗ ಜುಲೈ 27ರಿಂದ 30 ಸಾವಿರ ಸ್ವಯಂ ಸೇವಕರ ಮೇಲೆ ನಡೆಯಲಿದೆ.ಕೋವಿಡ್-19ನ ಜೆನೆಟಿಕ್ ಕೋಡಿಂಗ್​ನ್ನು ಇಟ್ಟುಕೊಂಡೇ ಈ ಔಷಧವನ್ನು ತಯಾರಿಸಲಾಗಿದೆ ಎನ್ನಲಾಗಿದೆ. ವಿಶ್ವದಾದ್ಯಂತ ನೂರಾರು ಔಷಧಗಳು ಮಾನವ ಪ್ರಯೋಗ ನಡೆಸುತ್ತಿದ್ದು ಅದರಲ್ಲಿ ಬ್ರಿಟನ್​ನ ಆಕ್ಸ್​ವರ್ಡ್ ವಿಶ್ವವಿದ್ಯಾಲಯ ಔಷಧ ಮತ್ತು ಅಮೆರಿಕದ ಮಾಡರ್ನ್ ತಯಾರಿಸಿರುವ ಔಷಧವು ಉತ್ತಮ ಹಂತದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ತಿಳಿಸಿದೆ.
ಬಿಸಿಜಿ ಔಷಧ ಪ್ರಯೋಗಕ್ಕೆ ಚೆನ್ನೈ ಸಮ್ಮತಿ
ಕರೊನಾ ಸೋಂಕಿನ ಚಿಕಿತ್ಸೆಗೆಂದು ತಯಾರಿಸಲಾಗಿರುವ ಬಾಕಿಲಸ್ ಕಾಲ್ಮೆಟ್ ಗುರಿನ್ (ಬಿಸಿಜಿ) ಔಷಧವನ್ನು ಚೆನ್ನೈನಲ್ಲಿ ಪ್ರಯೋಗಕ್ಕೆ ಒಳಪಡಿಸಲು ತಮಿಳುನಾಡು ಸರ್ಕಾರ ಸಮ್ಮತಿ ಸೂಚಿಸಿದೆ. ಚೆನ್ನೈನ ಚೆಟ್​ಪೇಟೆಯಲ್ಲಿರುವ ನ್ಯಾಷನಲ್ ಇನ್​ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ಯೂಬರ್​ಕುಲೋಸಿಸ್ (ಕ್ಷಯರೋಗ)ದಲ್ಲಿ ಹಿರಿಯ ವ್ಯಕ್ತಿ ಗಳ ಮೇಲೆ ಬಿಸಿಜಿ ಔಷಧ ಪ್ರಯೋಗಿಸಲು ಐಸಿಎಂಆರ್ ಸಮ್ಮತಿ ಸೂಚಿಸಿದೆ ಎಂದು ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್ ತಿಳಿಸಿದ್ದಾರೆ.
9.59 ಲಕ್ಷ ದಾಟಿದ ಸೋಂಕು
ಭಾರತದಲ್ಲಿ ಕರೊನಾ ಸೋಂಕು 9.59 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿದೆ. ಮೃತರ ಸಂಖ್ಯೆ 25 ಸಾವಿರದ ಸನಿಹಕ್ಕೆ ತಲುಪಿದೆ. 35.50 ಲಕ್ಷ ಸೋಂಕಿತರೊಂದಿಗೆ ಅಮೆರಿಕ ಮೊದಲನೇ ಸ್ಥಾನದಲ್ಲಿದ್ದರೆ, 19 ಲಕ್ಷ ಸೋಂಕಿತರೊಂದಿಗೆ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಸಾವಿನ ಸಂಖ್ಯೆಯಲ್ಲಿ 1.39 ಲಕ್ಷ ಮೃತರೊಂದಿಗೆ ಅಮೆರಿಕ ಮೊದಲನೇ ಸ್ಥಾನದಲ್ಲಿದೆ. ಭಾರತ ಎಂಟನೇ ಸ್ಥಾನದಲ್ಲಿ ಮುಂದುವರೆದಿದೆ. ವಿಶ್ವದ ಒಟ್ಟಾರೆ ಸೋಂಕಿತರ ಸಂಖ್ಯೆ 1.35 ಕೋಟಿಗೂ ಹೆಚ್ಚಾಗಿದ್ದು ಮೃತರ ಸಂಖ್ಯೆ 5.82 ಲಕ್ಷಕ್ಕೂ ಅಧಿಕವಾಗಿದೆ. ಭಾರತದಲ್ಲಿ ಸೋಂಕಿತರ ಜತೆಯಲ್ಲಿ ಗುಣಮುಖರ ಸಂಖ್ಯೆಯೂ ಏರಿಕೆಯಾಗಿದ್ದು ಗುಣಮುಖ ಪ್ರಮಾಣ ಶೇ. 63.24ಕ್ಕೆ ಏರಿಕೆಯಾಗಿದೆ. 5.94 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದು ಪ್ರಸ್ತುತ ಕೇವಲ 3.22 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಚೀನಾದಿಂದ ಅಮೆರಿಕಕ್ಕೆ ಪ್ಲೇಗ್ ರೋಗ
ಚೀನಾದಲ್ಲಿ ಕಾಣಿಸಿಕೊಂಡ ಕರೊನಾ ಸೋಂಕು ವಿಶ್ವವ್ಯಾಪಿಯಾಗಿ ಕಾಡುತ್ತಿರುವ ಬೆನ್ನಲ್ಲೇ ಅದೇ ದೇಶದಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಕಾಯಿಲೆ ಪ್ಲೇಗ್ ಅಮೆರಿಕಕ್ಕೂ ಕಾಲಿಟ್ಟಿದೆ. ಅಮೆರಿಕದ ಮೊರಿಸನ್ ನಗರದಲ್ಲಿರುವ ಅಳಿಲೊಂದರಲ್ಲಿ ಪ್ಲೇಗ್ ರೋಗ ಹರಡಿಸುವ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಈ ರೋಗ ಮನುಷ್ಯರಿಗೂ ಹರಡಬಲ್ಲದ್ದಾಗಿದೆ ಎಂದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಒಂದೇ ದಿನ 29 ಸಾವಿರ ಪ್ರಕರಣ
ದೇಶದಲ್ಲಿ ಕರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು ಏಕದಿನ ಏರಿಕೆಯಲ್ಲಿ ಪ್ರತಿದಿನ ದಾಖಲೆ ನಿರ್ಮಾಣ ವಾಗುತ್ತಿದೆ. ಮಂಗಳವಾರ 29,429 ಪ್ರಕರಣಗಳು ಪತ್ತೆಯಾಗಿವೆ. ಪಟ್ಟಿಯ ಮೊದಲನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 2.67 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. 1.47 ಲಕ್ಷ ಪ್ರಕರಣದೊಂದಿಗೆ ತಮಿಳುನಾಡು 2ನೇ ಸ್ಥಾನ ಮತ್ತು 1.15 ಲಕ್ಷ ಪ್ರಕರಣದೊಂದಿಗೆ ದೆಹಲಿ 3ನೇ ಸ್ಥಾನದಲ್ಲಿ ಕಾಣಿಸಿ ಕೊಂಡಿದೆ. ದೇಶಾದ್ಯಂತ ಮಂಗಳವಾರ 588 ಜನರು ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 24 ಸಾವಿರ ದಾಟಿದೆ.
ನ್ಯುಮೋನಿಯಾ ಲಸಿಕೆಗೆ ಅನುಮತಿ
ನ್ಯುಮೋನಿಯಾಕ್ಕೆ (ಪುಪು್ಪಸ ಜ್ವರ) ಸಂಪೂರ್ಣವಾಗಿ ದೇಶೀಯ ವಾಗಿ ಅಭಿವೃಧಿಪಡಿಸಿರುವ ಪ್ರಥಮ ಲಸಿಕೆಗೆ ಭಾರತೀಯ ಔಷಧಿಗಳ ಮಹಾನಿರ್ದೇಶನಾಲಯದ (ಡಿಸಿಜಿಐ) ಅನುಮೋದನೆ ದೊರಕಿದೆ. ಲಸಿಕೆಯ ಕ್ಲಿನಿಕಲ್ ಪರೀಕ್ಷೆ ಕುರಿತ 1ರಿಂದ 3ನೇ ಹಂತದವರೆಗಿನ ದತ್ತಾಂಶಗಳನ್ನು ಡಿಸಿಜಿಐ ಪರಿಶೀಲಿಸಿದ ನಂತರ ಅದಕ್ಕೆ ಹಸಿರು ನಿಶಾನೆ ತೋರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಮಕ್ಕಳಲ್ಲಿ ತಲೆದೋರುವ ನ್ಯುಮೋನಿಯಾ ಜ್ವರಕ್ಕೆ ಈ ಲಸಿಕೆಯನ್ನು ಬಳಸಲಾಗುವುದೆಂದು ಸಚಿವಾಲಯ ತಿಳಿಸಿದೆ.
ಬಿಜೆಪಿ ನಾಯಕರ ಬೆಂಬಿಡದ ಕರೊನಾ; ಬಿಹಾರ ರಾಜ್ಯಾಧ್ಯಕ್ಷನಿಗೂ ಸೋಂಕು, ಆರೋಗ್ಯದಲ್ಲಿ ಏರುಪೇರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
