ನವದೆಹಲಿ:ದೆಹಲಿಯ ಹಜರತ್ ನಿಜಾಮುದ್ದೀನ್​ನ ತಬ್ಲಿಘಿ ಜಮಾತ್ ಸಭೆಯಿಂದಾಗಿ ರಾಜಧಾನಿ ದೆಹಲಿಯಲ್ಲಿ ಕರೊನಾ ವೈರಸ್ ಹರಡುವಿಕೆ ದುಪ್ಪಟ್ಟಾಗಿ ಸಾರ್ವಜನಿಕರ ಆತಂಕ ದಿನದಿಂದ ಹೆಚ್ಚುತ್ತಲೇ ಇದೆ. ರಾಜಧಾನಿಯಲ್ಲಿ ಈವರೆಗೆ 1150 ಸೋಂಕಿತರು ಪತ್ತೆಯಾಗಿದ್ದು, ಅಂದಾಜು 750 ಮಂದಿಗೆ ಜಮಾತ್ ಸದಸ್ಯರ ಸಂಪರ್ಕದಿಂದಲೇ ಬಂದಿದೆ. ಅಂದರೆ ಶೇ.67-70ರಷ್ಟು ಮಂದಿಗೆ ಈ ಸಭೆಯಲ್ಲಿ ಪಾಲ್ಗೊಂಡವರಿಂದ ನೇರ/ಪರೋಕ್ಷವಾಗಿ ಸೋಂಕು ತಗುಲಿದೆ ಎಂದಾಯಿತು. ದೆಹಲಿಗೆ ಸೀಮಿತವಾಗಿ ನೋಡುವುದಾದರೆ, ಲಾಕ್​ಡೌನ್ ವಿಸ್ತರಣೆ ಇಲ್ಲಿ ಅನಿವಾರ್ಯ.
ಗಲ್ಲಿ, ಓಣಿಗಳು, ನೂರಾರು ಕೊಳಗೇರಿಗಳಿಂದ ತುಂಬಿಕೊಂಡಿರುವ ದೆಹಲಿಯಲ್ಲಿ ವೈರಸ್ ವಿಪರೀತ ವೇಗದಲ್ಲಿ ಹರಡಬಹುದು. ಹೀಗಾಗಿ, ತಮ್ಮ ನಿರ್ಧಾರವನ್ನು ಸಿಎಂ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ. ಅದಕ್ಕೂ ಮುನ್ನ, ಸುಮಾರು 25 ಹಾಟ್​ಸ್ಪಾಟ್​ಗಳನ್ನು ಗುರುತಿಸಿ ಅಲ್ಲಿ ಸಂಪೂರ್ಣ ಸೀಲ್ ಡೌನ್ ಜಾರಿ ಮಾಡಿದ್ದಾರೆ. ದೆಹಲಿಗೆ ಅಂಟಿಕೊಂಡಿರುವ ವಾಣಿಜ್ಯ ನಗರಗಳಾದ ಹರ್ಯಾಣದ ಗುರುಗ್ರಾಮ ಮತ್ತು ಉತ್ತರ ಪ್ರದೇಶದ ನೋಯ್ಡಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕರೊನಾ ಪೀಡಿತರಿರುವುದರಿಂದ ಲಾಕ್ ಡೌನ್ ಮತ್ತಷ್ಟು ಕಠಿಣಗೊಳಿಸಬೇಕಾದ ಸ್ಥಿತಿಯಿದೆ. ಅದೇನೆ ಇರಲಿ, ಕೇಜ್ರಿವಾಲ್ ಸರ್ಕಾರವಂತೂ ವೈರಸ್ ನಿಯಂತ್ರಣಕ್ಕೆ ಪೂರ್ಣ ಶ್ರಮ ಹಾಕಿದೆ. ಕೇಂದ್ರಕ್ಕೆ ಪೂರ್ಣ ಸಹಕಾರ ನೀಡುತ್ತಿದೆ. ಉಳಿದವರಿಗಿಂತ ಒಂದು ಹೆಜ್ಜೆ ಮುಂದಿಟ್ಟ ಕೇಜ್ರಿವಾಲ್, ರಾಜಕೀಯ ಮರೆತು ಪ್ರಧಾನಿ ಮೋದಿ ಕಾರ್ಯಗಳನ್ನೂ ಶ್ಲಾಘಿಸಿದ್ದಾರೆ. ಕಾಣದ ರಾಕ್ಷಸ ವೈರಸ್ ರಾಜಕೀಯ ವೈರಿಗಳನ್ನೂ ಒಂದು ಮಾಡಿದೆ!
ಕಂಪನದ ಭಯ
ಕರೊನಾ ಭಯದಿಂದ ಈಗಾಗಲೇ ಕಂಗೆಟ್ಟಿರುವ ಮದ್ಯೆ ಭಾನುವಾರ ಮತ್ತು ಸೋಮವಾರದಂದು ದೆಹಲಿಯಲ್ಲಿ ಭೂ ಕಂಪನವಾಗಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಸೋಮವಾರಕ್ಕೆ (2.7 ತೀವ್ರತೆ)ಹೋಲಿಸಿದರೆ ಭಾನುವಾರದ (3.5 ತೀವ್ರತೆ) ಕಂಪನಕ್ಕೆ ಅನೇಕರು ಮನೆಯಿಂದ ಹೊರ ಓಡಿ ಬಂದಿದ್ದರು ಮತ್ತು ಭೂಮಿಯಾಳದಿಂದ ಕೇಳಿ ಬಂದ ಶಬ್ದಕ್ಕೆ ಮಲಗಿದ್ದವರು ಎದ್ದೋಡಿದ್ದರು. ದೆಹಲಿಯಲ್ಲಿ ಭೂ ಕಂಪನ ಸಾಮಾನ್ಯ. ಆದರೆ, ಕರೊನಾ ನಡುವೆ ಸತತ ಎರಡು ದಿನ ಕಂಪನವಾಗಿದ್ದು, ಜನರ ನಿದ್ದೆಗೆಡಿಸಿರುವುದು ಸುಳ್ಳಲ್ಲ.
ಮನೆ ಬಾಗಿಲಿಗೆ ಅಗತ್ಯ ಸಾಮಗ್ರಿ
ಹಾಟ್​ಸ್ಪಾಟ್ ಪ್ರದೇಶಗಳ ಜನರು ಮನೆಯಿಂದ ಹೊರಬರುವಂತಿಲ್ಲ. ನಿತ್ಯದ ಸಾಮಗ್ರಿಗಳಿಗೆ ಆನ್​ಲೈನ್ ಮೂಲಕ ಆರ್ಡರ್ ಮಾಡಬಹುದು. ಸಹಾಯವಾಣಿಗೆ ಕರೆ ಮಾಡಿ, ತಮಗೆ ಬೇಕಾದ ಸಾಮಗ್ರಿ ಬಗ್ಗೆ ತಿಳಿಸಿದಲ್ಲಿ ಸರ್ಕಾರದ ಸ್ವಯಂ ಸೇವಕರು ಮನೆ ಬಾಗಿಲಿಗೆ ತರಕಾರಿ ಅಥವಾ ಅಗತ್ಯ ಸಾಮಗ್ರಿ ಪೂರೈಸುತ್ತಾರೆ.
ದಿಲ್ಶದ್ ಗಾರ್ಡನ್ ಮಾದರಿ
ಆರಂಭದಲ್ಲಿ ಕರೊನಾ ಹಾಟ್​ಸ್ಪಾಟ್ ಆಗಿದ್ದ ಈಶಾನ್ಯ ದೆಹಲಿಯ ದಿಲ್ಶದ್ ಗಾರ್ಡನ್ ಪ್ರದೇಶವೀಗ ಸಂಪೂರ್ಣ ಕರೊನಾ ವೈರಸ್ ಮುಕ್ತ ಪ್ರದೇಶವಾಗಿ ಬದಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಿರುವ ಮಧ್ಯೆ ದೆಹಲಿ ನಿವಾಸಿಗರಿಗೆ ಇದು ಸಿಹಿ ಸುದ್ದಿ. ಸೌದಿ ಅರೇಬಿಯಾದಿಂದ ವಾಪಸಾಗಿದ್ದ ಮಹಿಳೆಯೊಬ್ಬರು ಮೌಜ್​ಪುರ್ ಮೊಹಲ್ಲಾದ ಕ್ಲಿನಿಕ್​ನಲ್ಲಿ ಜ್ವರ, ಕೆಮ್ಮು ಎಂದು ಪರೀಕ್ಷೆಗೊಳಪಟ್ಟಿದ್ದರು. ವಿಪರ್ಯಾಸ ಎಂದರೆ, ಅವರನ್ನು ಪರೀಕ್ಷೆಗೊಳಪಡಿಸಿದ ವೈದ್ಯರು ಹಾಗೂ ಆಕೆಯನ್ನು ಸಂರ್ಪಸಿದ್ದ ಎಂಟೂ ಮಂದಿಯಲ್ಲಿ ಸೋಂಕು ದೃಢವಾಗಿತ್ತು. ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮಾರ್ಚ್ ಅಂತ್ಯಕ್ಕೆ ಇಡೀ ಪ್ರದೇಶವನ್ನು ಆಪರೇಷನ್ ಶೀಲ್ಡ್ ಹೆಸರಲ್ಲಿ ಸೀಲ್ ಡೌನ್ ಮಾಡಲಾಯಿತು. 123 ವೈದ್ಯಕೀಯ ಸಿಬ್ಬಂದಿ ತಂಡ ರಚನೆ ಮಾಡಿದ ಸರ್ಕಾರ ಮನೆ ಮನೆಗೆ ಹೋಗಿ ಪರೀಕ್ಷೆಗಳನ್ನು ನಡೆಸಿತು ಮತ್ತು ಶಂಕಿತರೆಲ್ಲರನ್ನು ಕ್ವಾರಂಟೈನ್​ಗೆ ಒಳಪಡಿಸಲಾಯಿತು. ಜಿಲ್ಲಾಧಿಕಾರಿ ಯಾರೊಬ್ಬರೂ ಮನೆಯಿಂದ ಹೊರಬರುವಂತಿಲ್ಲ ಎಂದು ಕಟ್ಟಪ್ಪಣೆ ಹೊರಡಿಸಿದರು ಮತ್ತು ಜನರೂ ಶಿಸ್ತಿನಿಂದ ಪಾಲಿಸಿದರು. ಇದರ ಪರಿಣಾಮವೇನೋ ಎಂಬಂತೆ, ಈಗ ದಿಲ್ಶದ್ ಗಾರ್ಡನ್ ಪ್ರದೇಶ ಕರೊನಾ ಮುಕ್ತವಾಗಿದ್ದು, ದೆಹಲಿಯ ಇತರ ಭಾಗಗಳಿಗೆ ಮಾದರಿ ಎಂದು ಸರ್ಕಾರ ಗುರುತಿಸಿದೆ.
ವೈದ್ಯರಿಂದ ಆನ್​ಲೈನ್ ಕನ್ಸಲ್ಟೇಷನ್
ಕರೊನಾ ಲಾಕ್​ಡೌನ್​ನಿಂದಾಗಿ ದೆಹಲಿಯ ಅನೇಕ ಕಡೆ ಖಾಸಗಿ ಕ್ಲಿನಿಕ್​ಗಳು ಬಂದ್ ಆಗಿರುವುದೂ ಜನರನ್ನು ತೊಂದರೆಗೀಡು ಮಾಡಿದೆ. ಸೋಂಕಿತರು ಬಂದು ಎಲ್ಲಿ ತಮಗೆ ಸೋಂಕು ತಗುಲುವುದೋ ಎಂಬ ಭಯದಿಂದ ಬಹುತೇಕ ವೈದ್ಯರು ಕ್ಲಿನಿಕ್ ಮುಚ್ಚಿದ್ದಾರೆ, ಮತ್ತೆ ಕೆಲವರು ಎಮರ್ಜೆನ್ಸಿ ಇದ್ದರೆ ಮಾತ್ರ ಬರುವುದಾಗಿ ರೋಗಿಗಳಿಗೆ ತಿಳಿಸಿದ್ದಾರೆ. ಕೆಲವು ವೈದ್ಯರು ಕರೊನಾ ಹೊರತುಪಡಿಸಿ ಬೇರೆ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ವಾಟ್ಸ್ ಆಪ್ ವಿಡಿಯೋ ಕಾಲಿಂಗ್ ಮೂಲಕ ಮಾತನಾಡಬಹುದು ಎಂಬ ಆಯ್ಕೆ ಕೊಟ್ಟಿದ್ದು, ವಾಟ್ಸ್​ಆಪ್​ನಲ್ಲೇ ರೋಗ ಲಕ್ಷಣ ತಿಳಿದು ಮದ್ದಿನ ಚೀಟಿಗಳನ್ನು ಬರೆದು ಕೊಡುತ್ತಿದ್ದಾರೆ.
ದಿನದ 24 ತಾಸು ಭೋಜನ ಸೇವೆ
ಕೋವಿಡ್-19ನಿಂದಾಗಿ ನಿತ್ಯದ ಆಹಾರಕ್ಕೂ ಪರದಾಡುತ್ತಿರುವ ಬಡ ಜನರಿಗಾಗಿ ದೆಹಲಿಯ ರೈಸಿನಾ ರಸ್ತೆಯಲ್ಲಿರುವ ಕಚೇರಿ ಮುಂಭಾಗ ರಾಷ್ಟ್ರೀಯ ಯುವ ಕಾಂಗ್ರೆಸ್ 24 ಗಂಟೆ ಆಹಾರ ಸೇವೆ ಒದಗಿಸುತ್ತಿದೆ. ಮಾರ್ಚ್ 28ರಿಂದ ಕೇಂದ್ರ ಕಚೇರಿಯಲ್ಲಿ ಸಮುದಾಯ ಭೋಜನ ಶಾಲೆ ತೆರೆದಿರುವ ಯೂತ್ ಕಾಂಗ್ರೆಸ್, ನಿತ್ಯವೂ ಸಾವಿರಾರು ಮಂದಿಗೆ ಆಹಾರ ತಯಾರಿಸಿ ನೀಡುತ್ತಿದೆ. ಕರೊನಾದಿಂದಾಗಿ ರಕ್ತದಾನ ಪ್ರಮಾಣ ಗಣನೀಯವಾಗಿ ಕುಗ್ಗಿದೆ. ಸಮುದಾಯ ಭೋಜನ ಶಾಲೆ ಕಾರ್ಯದ ಮಧ್ಯೆ ನಮ್ಮ ಕಾರ್ಯಕರ್ತರು ಅಲ್ಲಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ಆರೋಗ್ಯ ಕೇಂದ್ರಗಳಿಗೆ ರಕ್ತ ಪೂರೈಕೆ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕುಷ್ಠರೋಗಿಗಳ ಕಾಲನಿಯಲ್ಲಿರುವ ಕರ್ನಾಟಕ ಮೂಲದ ಕುಷ್ಠರೋಗಿಗಳಿಗೂ ಮೊನ್ನೆ ಆಹಾರ ಸಾಮಗ್ರಿ ಪೂರೈಕೆ ಮಾಡಿದ್ದೇವೆ ಎಂದು ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ವಿಜಯವಾಣಿಗೆ ತಿಳಿಸಿದ್ದಾರೆ.
ದೆಹಲಿ ಜನಸಂಖ್ಯೆ ಸುಮಾರು 2 ಕೋಟಿ
| ರಾಘವ ಶರ್ಮ ನಿಡ್ಲೆ
VIDEO| ನಾಯಿಯ ಮುಂದೆ ಸತ್ತಂತೆ ನಟಿಸಿ ಎಸ್ಕೇಪ್​ ಆದ ಬಾತುಕೋಳಿ: ಈ ವೈರಲ್​ ವಿಡಿಯೋ ಮಿಸ್​ ಮಾಡ್ಕೋಬೇಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
