ನವದೆಹಲಿ:ದೇಶದಲ್ಲಿ ಮತ್ತೆ 15 ಜನರಲ್ಲಿ ಮಾರಕ ಕರೊನಾ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 129ಕ್ಕೆ ಏರಿಕೆಯಾಗಿದೆ. ಉತ್ತರಾಖಾಂಡದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ ಮತ್ತೆ 5 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲೇ ಅತೀ ಹೆಚ್ಚು ಪ್ರಕರಣಗಳು ಅಂದರೆ 39 ಪ್ರಕರಣ ಮಹಾರಾಷ್ಟ್ರದಲ್ಲಿ ವರದಿಯಾಗಿವೆ. ಮುಂದಿನ 15-20 ದಿನಗಳು ನಮಗೆ ಮಹತ್ವದ್ದಾಗಿರುತ್ತದೆ. ಜನರು ಯಾವುದೇ ಕಾರಣಕ್ಕೂ ಮಸೀದಿ, ಮಂದಿರ, ಚರ್ಚ್​ಗಲ್ಲಿ ಗುಂಪು ಸೇರುವುದರಿಂದ ದೂರ ಇರಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರಿಗೂ ಸೋಂಕು ತಗುಲಿದ್ದು, ಅವರ ಜತೆ ಇದ್ದ ಇನ್ನೂ 30 ವೈದ್ಯರನ್ನು ವೈದ್ಯಕೀಯ ನಿಗಾ ಘಟಕದಲ್ಲಿಡಲಾಗಿದೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಸಂಪೂರ್ಣ ಸ್ತಬ್ಧವಾಗಿದ್ದು, ಬಹುತೇಕ ಎಲ್ಲ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಿವೆ. ಇದರ ಜತೆಗೆ ಹಲವು ರಾಜ್ಯಗಳು ಮಾಲ್​ಗಳು, ಶಾಲೆ-ಕಾಲೇಜುಗಳನ್ನು ಬಂದ್ ಮಾಡಿವೆ. ಹೀಗಾಗಿ ಎಲ್ಲ ಪ್ರಮುಖ ನಗರಗಳನ್ನು ಜನ ಸಂಚಾರ ಕಡಿಮೆಯಾಗಿದ್ದು, ರಸ್ತೆಗಿಳಿಯುವ ವಾಹನಗಳ ಸಂಖ್ಯೆಯಲ್ಲೂ ಗಣನೀಯ ಇಳಿಕೆಯಾಗಿದೆ.
7 ಸಾವಿರ ಗಡಿ ಸಮೀಪಿಸಿದ ಮೃತರ ಸಂಖ್ಯೆ:ವಿಶ್ವದ 158 ರಾಷ್ಟ್ರಗಳಿಗೆ ವ್ಯಾಪಿಸಿರುವ ಕರೊನಾ ವೈರಸ್​ನಿಂದಾಗಿ ಮೃತಪಟ್ಟವರ ಸಂಖ್ಯೆ 7 ಸಾವಿರದ ಗಡಿ ಸಮೀಪಿಸಿದೆ. ಕಳೆದ 24 ಗಂಟೆಯಲ್ಲಿ 180 ಜನರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 6,685ಕ್ಕೆ ಏರಿಕೆಯಾಗಿದೆ. ಜತೆಗೆ 5,001 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಬರೋಬ್ಬರಿ 1,74,561ಕ್ಕೆ ಏರಿಕೆಯಾಗಿದೆ. ಇರಾನ್​ನಲ್ಲಿ 129 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 853ಕ್ಕೆ ಏರಿಕೆಯಾಗಿದೆ. ಹೊಸದಾಗಿ 1,053 ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 14,991ಕ್ಕೆ ಏರಿದೆ. ಚೀನಾದಲ್ಲಿ ಕರೊನಾ ಆರ್ಭಟ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಸೋಮವಾರ ಒಟ್ಟು 14 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಒಟ್ಟು ಸಂಖ್ಯೆ 3,213ಕ್ಕೆ ಏರಿದೆ. ಜತೆಗೆ ಹೊಸದಾಗಿ 36 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 80,880ಕ್ಕೆ ಏರಿದೆ. ಚೀನಾದ 13 ಪ್ರಾಂತ್ಯಗಳಲ್ಲಿ ಕರೊನಾ ವೈರಸ್ ತಗುಲಿರುವ ಒಂದು ಪ್ರಕರಣಗಳೂ ಕೂಡ ಕಳೆದ 24 ಗಂಟೆಗಳಿಂದ ಬೆಳಕಿಗೆ ಬಂದಿಲ್ಲ.
ಅಮೆರಿಕದಲ್ಲಿ ಕರೊನಾ ನಿಧಾನವಾಗಿ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆ ಟ್ರಂಪ್ ತಮ್ಮ ಒಡೆತನದ ರೆಸಾರ್ಟ್ ವೊಂದನ್ನು ಬಂದ್ ಮಾಡಿದ್ದಾರೆ. ಕಳೆದ ವಾರ ಅಮೆರಿಕಕ್ಕೆ ಭೇಟಿ ನೀಡಿದ್ದ ಬ್ರೆಜಿಲ್​ನ ನಿಯೋಗದ ಜತೆ ಟ್ರಂಪ್ ಇದೇ ರೆಸಾರ್ಟ್​ನಲ್ಲಿ ಸಭೆ ನಡೆಸಿದ್ದರು. ಬಳಿಕ ಸಭೆಯಲ್ಲಿದ್ದ ಮೂವರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆ ಟ್ರಂಪ್ ಕೂಡ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ. ಶ್ರೀಲಂಕಾದಲ್ಲಿ ಕರೊನಾ ವೈರಸ್​ನ ಲಕ್ಷಣ ಬೆಳಕಿಗೆ ಬಂದಿದ್ದರೂ ಅದರ ಮಾಹಿತಿ ಮುಚ್ಚಿಟ್ಟವರಿಗೆ 6 ತಿಂಗಳ ಜೈಲು ಶಿಕ್ಷೆ ನೀಡಲು ನಿರ್ಧರಿಸಲಾಗಿದೆ. ವಿದೇಶಗಳಿಂದ ಬಂದು ವೈದ್ಯಕೀಯ ನಿಗಾ ಘಟಕಕ್ಕೆ ತೆರಳದೆ ಜನರ ಮಧ್ಯೆ ವಾಸಿಸುವವರಿಗೂ ಜೈಲು ಶಿಕ್ಷೆ ನೀಡಲಾಗುತ್ತದೆ.
ಕರೊನಾ ಕುರಿತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಕೈಗಳನ್ನು ಪದೇ ಪದೆ ಸ್ವಚ್ಛಗೊಳಿಸಿಕೊಳ್ಳಿ. ಕಣ್ಣು ಮತ್ತು ಮುಖವನ್ನು ಮುಟ್ಟಿಕೊಳ್ಳಬೇಡಿ ಎಂದು ಮೋದಿ ತಿಳಿಸಿದ್ದಾರೆ. ಈಗಾಗಲೇ ಸೋಕು ತಗುಲಿದವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಶಂಕಿತರನ್ನು ನಿಗಾದಲ್ಲಿಡಲಾಗಿದೆ. ವದಂತಿಗಳು ಈ ಸಮಯದಲ್ಲಿ ಬಹಳ ಬೇಗನೆ ಹರಡುತ್ತಿವೆ. ಹೀಗಾಗಿ ವದಂತಿಗಳಿಂದ ಎಲ್ಲರೂ ದೂರವಿರಿ. ವೈದ್ಯರನ್ನು ಭೇಟಿಯಾಗಿ ಅವರು ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಎಂದು ಮೋದಿ ಕೇಳಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ ಮತ್ತೆ 41 ಜನರಲ್ಲಿ ಕರೊನಾ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 183ಕ್ಕೆ ಏರಿಕೆಯಾಗಿದೆ. ಬಹುತೇಕ ಪ್ರಕರಣಗಳು ದಕ್ಷಿಣ ಸಿಂಧ್ ಪ್ರಾಂತ್ಯದಿಂದಲೇ ವರದಿಯಾಗಿದ್ದು, ಇವರೆಲ್ಲ ಇರಾನ್​ನಿಂದ ಮರಳಿದ್ದಾರೆ ಎನ್ನಲಾಗಿದೆ. ಈವರೆಗೆ ಇಬ್ಬರು ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಉಳಿದವರ ಮೇಲೆ ವೈದ್ಯಕೀಯ ನಿಗಾ ವಹಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 1 =
Remember me
