ನವದೆಹಲಿ:ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಮಿಶ್ರಣ ಪ್ರಯೋಗಕ್ಕೆ ಉತ್ತಮ ಫಲಿತಾಂಶ ಸಿಕ್ಕಿದೆ. ಭಾರತೀಯ ವೈದ್ಯಕೀಯ ವಿಜ್ಞಾನ ಮಂಡಳಿ (ಐಸಿಎಂಆರ್) ಮತ್ತು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್​ಐವಿ) ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಮಿಶ್ರ ಲಸಿಕೆ ಪಡೆದವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಕಂಡುಬಂದಿದೆ.
18 ಜನರ ಮೇಲೆ ಈ ಅಧ್ಯಯನ ನಡೆಸಲಾಗಿದ್ದು, ಅದರ ಫಲಿತಾಂಶವನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ. ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿನ ಸುರಕ್ಷತೆ ಮತ್ತು ರೋಗನಿರೋಧಕತೆಯ ಪ್ರಮಾಣವನ್ನು ಲಸಿಕೆ ಮಿಶ್ರಣ ಪಡೆದವರಲ್ಲಿ ತುಲನೆ ಮಾಡಲಾಗಿದೆ. ಅಡೆನೊವೈರಸ್ ವೆಕ್ಟರ್ ಲಸಿಕೆಯಾದ ಕೋವಿಶೀಲ್ಡ್ ನೀಡಿಕೆ ನಂತರ, ಇಡೀ ನಿಷ್ಕ್ರಿಯ ವೈರಸ್ ಆಧರಿತ ವ್ಯಾಕ್ಸಿನ್ ಆದ ಕೊವ್ಯಾಕ್ಸಿನ್ ನೀಡಿಕೆ ಸುರಕ್ಷಿತ ಮಾತ್ರವಲ್ಲದೆ ಉತ್ತಮ ರೋಗನಿರೋಧಕತೆಯನ್ನೂ ಹೆಚ್ಚಿಸುತ್ತದೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ. ಉಭಯ ಲಸಿಕೆಗಳ ಮಿಶ್ರಣದಿಂದ ಕೋವಿಡ್-19 ವಿರುದ್ಧದ ಸಂಭಾವ್ಯ ರೋಗನಿರೋಧಕತೆ ಶಕ್ತಿ ಹೆಚ್ಚುತ್ತದೆ ಎನ್ನುವುದು ಹಿರಿಯ ವೈರಾಣು ತಜ್ಞ ಚಂದ್ರಕಾಂತ್ ಲಹಾರಿಯಾ ಸಹಿತ ಹಲವು ವಿಜ್ಞಾನಿಗಳ ಅಭಿಮತವಾಗಿದೆ. ಕೇಂದ್ರೀಯ ಔಷಧಗಳ ಮಾನಕ ನಿಯಂತ್ರಣ ಸಂಸ್ಥೆಯ (ಸಿಡಿಎಸ್​ಸಿಒ) ತಜ್ಞರ ಸಮಿತಿ, ಜುಲೈನಲ್ಲಿ ವ್ಯಾಕ್ಸಿನ್ ಡೋಸ್​ಗಳ ಮಿಶ್ರಣಕ್ಕೆ ಶಿಫಾರಸು ಮಾಡಿತ್ತು.
ಅಮೆರಿಕದಲ್ಲಿ ಹೆಚ್ಚಳವೇಕೆ?: ಅಮೆರಿಕದ ಅರ್ಧದಷ್ಟು ಜನಸಂಖ್ಯೆಗೆ ಕರೊನಾ ಲಸಿಕೆ ಹಾಕಲಾಗಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೂ ದೇಶದಲ್ಲಿ ಸೋಂಕು ಅನಿಯಂತ್ರಿತವಾಗಿ ಹೆಚ್ಚುತ್ತಿರುವುದು ಯಾಕೆ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಶೇಕಡ 50ರಷ್ಟು ನಿವಾಸಿಗಳು ಎರಡೂ ಡೋಸ್ ಲಸಿಕೆ ಪಡೆದಿದ್ದು ಶೇ. 70ರಷ್ಟು ವಯಸ್ಕರು ಕನಿಷ್ಠ ಒಂದು ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಕೋವಿಡ್ ಸೋಂಕಿತರಿರುವ ಅಮೆರಿಕದಲ್ಲಿ ಶನಿವಾರವಷ್ಟೇ ದೈನಿಕ ಸರಾಸರಿ ಪ್ರಕರಣ ಮತ್ತೆ ಒಂದು ಲಕ್ಷ ದಾಟಿದ್ದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಕಳೆದ ಚಳಿಗಾಲದಲ್ಲಿ ಡೆಲ್ಟಾ ಹಾವಳಿಯಿಂದ ಹಾಗೂ ದಕ್ಷಿಣ ಭಾಗದಲ್ಲಿ ಲಸಿಕೆ ಪ್ರಮಾಣ ಕಡಿಮೆಯಾದ್ದರಿಂದ ಸೋಂಕು ಅಬ್ಬರಿಸಿತ್ತು. ಅಮೆರಿಕದ ಹೆಚ್ಚಿನ ಜನರು ಚುಚ್ಚುಮದ್ದು ಹಾಕಿಸಿಕೊಳ್ಳದಿದ್ದರೆ ಸೋಂಕು ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಇನ್ನಷ್ಟು ಏರಬಹುದು ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಅಮೆರಿಕದ 16.5 ಕೋಟಿ ಪ್ರಜೆಗಳು ಮಾಡರ್ನಾ ಅಥವಾ ಫೈಜರ್ ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ. ಇಲ್ಲವೇ ಒಂದೇ ಡೋಸ್ ಸಾಕಾಗುವ ಜಾನ್ಸನ್ ಆಂಡ್ ಜಾನ್ಸನ್ ಲಸಿಕೆ ಪಡೆದಿದ್ದಾರೆ.
ಭಾರತದಲ್ಲಿ 39 ಸಾವಿರ ಹೊಸ ಕೇಸ್
ಭಾನುವಾರ ದೇಶದಲ್ಲಿ ಕರೊನಾ ಸೋಂಕಿನ 39,070 ಹೊಸ ಪ್ರಕರಣಗಳು ದೃಢಪಟ್ಟಿವೆ. 491 ಜನರು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 3.19 ಕೋಟಿ ಆಗಿದೆ. ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 4,28,319ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಶನಿವಾರ ಮತ್ತು ಭಾನುವಾರದ ನಡುವೆ ಒಟ್ಟು 17,22,221 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೆ ಒಟ್ಟು 48 ಕೋಟಿ ಪರೀಕ್ಷೆ ನಡೆಸಿದಂತಾಗಿದೆ.
52.37 ಕೋಟಿ ಡೋಸ್ ಲಸಿಕೆ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಇದುವರೆಗೆ 52.37 ಕೋಟಿ ಡೋಸ್​ಗೂ ಅಧಿಕ ಲಸಿಕೆ ಸರಬರಾಜು ಮಾಡಿದೆ. ಇನ್ನೂ 8,99,260 ಡೋಸ್ ಕಳಿಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ರಾಜ್ಯಗಳು ಹಾಗೂ ಖಾಸಗಿ ಆಸ್ಪತ್ರೆಗಳ ಬಳಿ 2.42 ಕೋಟಿ ಡೋಸ್ ಲಸಿಕೆ ಬಳಕೆಯಾಗದೆ ಉಳಿದಿದೆ ಎಂದು ವಿವರಿಸಿದೆ.
ಸರ್ಕಾರಿ ಶಾಲೆಗಳ ದಾಖಲಾತಿ ಏರಿಕೆ
ಕರೊನಾ ಸಾಂಕ್ರಾಮಿಕತೆ ಯಿಂದ ಆರ್ಥಿಕವಾಗಿ ಕಂಗೆಟ್ಟಿರುವ ಜನರು ಇದೀಗ ಶಿಕ್ಷಣಕ್ಕಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿರುವ ಪ್ರವೃತ್ತಿ ದೇಶದಲ್ಲಿ ಹೆಚ್ಚಾಗುತ್ತಿದೆ. ದೇಶದ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ಸರ್ಕಾರಿ ಐಸಿಎಸ್​ಇ ಮತ್ತು ಸಿಬಿಎಸ್​ಇ ಶಾಲೆಗಳಿಗೆ ದಾಖಲಾತಿಗಾಗಿ ಹೆಚ್ಚಿನ ಅರ್ಜಿಗಳು ಬರುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಲಾಕ್​ಡೌನ್ ಮುಂತಾದ ಕರೊನಾ ನಿಯಂತ್ರಣ ಕ್ರಮಗಳಿಂದ ಆದಾಯ ಕುಸಿತ, ಉದ್ಯೋಗ ನಷ್ಟ ಮುಂತಾದ ಬೆಳವಣಿಗೆಗಳಿಂದಾಗಿ ದುಬಾರಿ ಶುಲ್ಕದ ಹೊರೆಯಿಂದ ತಪ್ಪಿಸಿಕೊಳ್ಳಲು ಪಾಲಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಶುಲ್ಕ ಕಟ್ಟದಿದ್ದರೆ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿಗಳಿಗೆ ಅವಕಾಶ ನೀಡದಿರು ವುದು ಕೂಡ ಮಕ್ಕಳನ್ನು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುವ ಸನ್ನಿವೇಶ ಸೃಷ್ಟಿಸಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಈ ವರ್ಷ 10 ಹೊಸ ಸಿಬಿಎಸ್​ಇ ಶಾಲೆಗಳನ್ನು, ಒಂದು ಐಸಿಎಸ್​ಇ ಶಾಲೆ ಆರಂಭಿಸಿದ್ದು ಪ್ರವೇಶಕ್ಕೆ ಅರ್ಜಿಗಳ ಮಹಾಪೂರವೇ ಹರಿದು ಬಂದಿದೆ.
ಅಮೆರಿಕದ ಯುವಜನರಲ್ಲಿ ಹೆಚ್ಚಿದ ಸೋಂಕು
ಯುವಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕರೊನಾ ಸೋಂಕಿಗೆ ಒಳಗಾಗಿ ಮೃತಪಡುತ್ತಿರುವುದು ಆಸ್ಟ್ರೇಲಿಯಾದ ಇತ್ತೀಚಿನ ವಿದ್ಯಮಾನಗಳಿಂದ ದೃಢಪಟ್ಟಿದೆ. ನ್ಯೂ ಸೌತ್ ವೇಲ್ಸ್​ನಲ್ಲಿ ಡೆಲ್ಟಾ ಪ್ರಭೇದದ ಹಾವಳಿ ಹೆಚ್ಚಾಗಿದ್ದು ಯುವಕ- ಯುವತಿಯರೂ ದೊಡ್ಡ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬೇರೆ ದೇಶಗಳಲ್ಲಿ ಕೂಡ ಇದೇ ಪ್ರವೃತ್ತಿ ಕಂಡು ಬಂದಿದೆ ಎಂದು ಆಸ್ಟ್ರೇಲಿಯಾದ ತಜ್ಞರು ಹೇಳಿದ್ದಾರೆ. ನ್ಯೂ ಸೌತ್ ವೇಲ್ಸ್​ನಲ್ಲಿ ಜೂನ್ 13ರಿಂದ ಜುಲೈ 17ರ ನಡುವಿನ ಅವಧಿಯಲ್ಲಿ ಕರೊನಾ ಸೋಂಕಿಗೆ ತುತ್ತಾದವರಲ್ಲಿ 30ರಿಂದ 49 ವಯೋಗುಂಪಿನ ಹೆಚ್ಚಿನವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 30ರಿಂದ 40 ವಯೋಮಿತಿ ಒಳಗಿನ 45 ಜನರು ಆಸ್ಪತ್ರೆಗೆ ದಾಖಲಾಗುವಷ್ಟು ಗಂಭೀರವಾದ ಸಮಸ್ಯೆ ಎದುರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
